ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ?


ಸುಬ್ಣಣ್ಣನವರ ಮೊದಲ ಧ್ವನಿ ಸುರಳಿ `ನಿತ್ಯೋತ್ಸವ' 1978ರಲ್ಲಿ ಹೊರ ಬಂದಿತು.ಬಾನುಲಿಯಲ್ಲಿ ಈ ವೇಳೆಗಾಗಲೇ ಮಲೆನಾಡಿನ ಗಡಿ ದಾಟಿದ್ದ ಸುಬ್ಬಣ್ಣ ದನಿ ,ಈ ಧ್ವನಿಸುರಳಿಯಿಂದಾಗಿ ಕರ್ನಾಟಕದಾದ್ಯಂತ ಮನೆಮನೆಯಲ್ಲೂ ಅನುರಣಿಸಿತು. ಸುಬ್ಬಣ್ಣನವರು ಚಲನಚಿತ್ರ ಪ್ರಪಂಚಕ್ಕೆ ಪ್ರವೇಶಿಸಿದ್ದು ಕಂಬಾರರ `ಕರಿಮಾಯಿ' ಚಿತ್ರದ ಮೂಲಕ. ಆದರೆ ಆ ಚಿತ್ರ ತೆರೆ ಕಾಣಲಿಲ್ಲ ಎನ್ನುತ್ತಾರೆ ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ರಂಗನಾಥ ರಾವ್ . ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆಯ ಸಂದರ್ಭದಲ್ಲಿ ನೆನಪಿನ ಬುತ್ತಿಯನ್ನ ತೆರೆದಿರಿಸಿರುವ ಲೇಖನ ನಿಮ್ಮ ಓದಿಗಾಗಿ...

ಮಾಗಿಯ ಚಳಿಯಂತೆ, ಅಕಾಲಿಕ ಚಳಿಗಾಳಿಯಲ್ಲಿ ಮುದುಡಿದ ಮೈಮನಸ್ಸುಗಳನ್ನು ಕೈಯ್ಯಲ್ಲಿ ಹಿಡಿದುಕೊಂಡೇ ಬೆಳಗಿನ ಪತ್ರಿಕೆಯನ್ನು ತೆರೆದಾಗ ಮೊದಲ ಪುಟದಲ್ಲೇ ಮುಖಕ್ಕೆ ರಾಚಿದ ಸುದ್ದಿ, "ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ".ಮನಸ್ಸು ಮತ್ತಷ್ಟು ಮುದುಡಿಹೋಯಿತು.ಅವರು ನನಗಿಂತ ವಯಸ್ಸಿನಲ್ಲಿ ಮೂರು ವರ್ಷ ಹಿರಿಯರು.ಆದರೆ ಕಲೆಯಲ್ಲಿ ದೊಡ್ಡವರು. ಪ್ರಕೃತಿಸಹಜವೋ ಎಂಬಂತೆ ಕಿರಿಯರನ್ನು ಹಿಂದೆಬಿಟ್ಟು ಸುಬ್ಬಣ್ಣ ಇಹಲೋಕ ತ್ಯಜಿಸಿದ್ದಾರೆ. ಆದರೆ ನಾದ ಲೋಕದಲ್ಲಿ ಅವರು ಅಮರರು. ಮುದುಡಿದ ಮನಸ್ಸು ವಾಸ್ತವಕ್ಕೆ ಚೇತರಿಸಿಕೊಂಡಂತೆ ನೆನಪಿನ ಓವರಿಗೆ ಸರಿಯಿತು.

ಶಿವಮೊಗ್ಗ ಸುಬ್ಬಣ್ಣ ನನಗೆ ಪರಿಚಯವಾದದ್ದು ಕವಿಮಿತ್ರರಾದ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಮುಖೇನ. ಲಕ್ಷ್ಮೀನಾರಾಯಣ ಭಟ್ಟರಿಗೂ ಅವರಿಗೂ ಗಳಸ್ಯಕಂಠಸ್ಯ.`ನೀನು ಶಿವಮೊಗ್ಗೆಯಲ್ಲೇ ಇದ್ದರೆ ನೋಟರಿಯಾಗೇ ಕೊಳೆಯಬೇಕಾಗುತ್ತೆ.ನಿನ್ನ ಗಾಯನಪ್ರಯಿಭೆ ವನಸುಮವಷ್ಟೆ ಆಗುತ್ತೆ, ಬೆಂಗಳೂರಿಗೆ ಹೊರಟು ಬಾ'ಎಂದು ಸುಬ್ಬಣ್ಣನನ್ನು ಬೆಂಗಳೂರಿಗೆ ಎಳೆದು ತಂದು ಅವರ ಗಾಯನ ಪ್ರತಿಭೆಯನ್ನು ವಿಸ್ತೃತ ಪ್ರಪೊಂಚಕ್ಕೆ ಪರಿಚಯಿಸಿದವರು ಭಟ್ಟರು. ಬೆಂಗಳೂರಿಗೆ ಬಂದ ಮೇಲೆ ಶಿವಮೊಗ್ಗ ಸುಬ್ಬಣ್ಣ ಹಿಂದಿರುಗಿ ನೋಡಿದ್ದೇ ಇಲ್ಲ. 1979ನೆಯ ಇಸವಿಯಲ್ಲಿ ಒಂದು ದಿವಸ.ನಾನು ಆಗ `ಪ್ರಜಾವಾಣಿ'ಯಲ್ಲಿ ಸುದ್ದಿಮೇಜಿನಲ್ಲಿ ರಾತ್ರಿ ಪಾಳಿಯಲ್ಲಿದ್ದೆ.ರಾತ್ರ‍್ರಿ ಸುಮಾರು ಹತ್ತೂವರೆ ಸಮಯ. ಏನಾದರೂ ವಿಶೇಷ ಸುದ್ದಿ ಇದ್ದಾಗ ಟೆಲಿಪ್ರಿಂಟರ್ ವಿಚಿತ್ರವಾಗಿ ಧ್ವನಿಗೈಯ್ಯುತ್ತಾ ನಮ್ಮನ್ನು ಎಚ್ಚರಿಸುತ್ತಿತ್ತು.ಅವತ್ತು ಆ ಸಮಯದಲ್ಲಿ ಟೆಲಿಪ್ರಿಂಟರ್ ವಿಚಿತ್ರವಾಗಿ ಧ್ವನಿಗೈದಾಗ ನಾನು ಟೆಲೆಪ್ರಿಂಟರಿನತ್ತ ಧಾವಿಸಿದೆ.ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗಳ ಘೋಷಣೆಯಾಗಿತ್ತು.ಶಿವಮೊಗ್ಗ ಸುಬ್ಬಣ್ಣನವರಿಗೆ,ಚಂದ್ರಶೇಖರ ಕಂಬಾರರ `ಕಾಡು ಕುದುರೆ' ಚಿತ್ರದ `ಕಾಡು ಕುದುರ ಊರಿಗೆ ಬಂದಿತ್ತಾ" ಹಾಡಿನ ಗಾಯನಕ್ಕಾಗಿ ಶ್ರೇಷ್ಠ ಗಾಯಕನ ಪ್ರಶಸ್ತಿ ಲಭಿಸಿತ್ತು. ತಕ್ಷಣವೇ ಮೈಸೂರು ಮುದ್ರಣ ಸಿದ್ಧಪಡಿಸುತ್ತಿದ್ದ ಮುಖ್ಯ ಉಪ ಸಂಪಾದಕರಿಗೆ ತಿಳಿಸಿ ಸುದ್ದಿಯನ್ನು ಮೈಸೂರು ಮುದ್ರಣಕ್ಕೆ ಸಂಕ್ಷಿಪ್ತವಾಗಿ ಬರೆದು ಕಳುಹಿಸಿಕೊಟ್ಟೆ.ಗಂಟೆ ಹನ್ನೊಂದರ ಸಮೀಪ ನನಗೆ ಆಗಲೇ ಸುಬ್ಬಣ್ಣನಿಗೆ ಈ ಸುದ್ದಿ ತಿಳಿಸಿ ಅಭಿನಂದಿಸುವ ಉಮೇದು ಉಂಟಾಯಿತು.ಫೋನ್ ಮಾಡಿದೆ. ಆ ಕಡೆಯಿಂದ ಯಾರೂ ಫೋನ್ ಎತ್ತುತ್ತಿರಲಿಲ್ಲ.ಗಾಢ ನಿದ್ರೆಯಲ್ಲಿರ ಬಹುದೆ ಎಂದು ಎರಡು ಮೂರು ಸಲ,ಪ್ರಯತ್ನಿಸಿದೆ. ನಿರುತ್ತರ. ಕೊನೆಗೆ ಲಕ್ಷ್ಮೀ ನಾರಾಯಣ ಭಟ್ಟರಿಗೆ ಫೋನ್ ಮಾಡಿ, ಗೆಳೆಯನಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವ ಸುದ್ದಿ ತಿಳಿಸಿದೆ. ಅರೆನಿದ್ರೆಯಲ್ಲಿದ್ದ ಭಟ್ಟರಿಗೆ ಹಠಾತ್ ಜ್ಞಾನೋದಯವಾದಂತೆ ಎಚ್ಚರವಾಗಿ ಸುದ್ದಿ ತಿಳಿದು ಹಿರಿಹಿರಿ ಹಿಗ್ಗಿದರು.ಸುಬ್ಬಣ್ಣ ಶಿವಮೊಗ್ಗೆ ಸಮೀಪದ ತಮ್ಮ ಊರಿಗೆ ಹೋಗಿದ್ದರು.ಭಟ್ಟರು ಆ ಸರಿರಾತ್ರಿಯಲ್ಲೇ ಫೋನ್ ಮಾಡಿ ಸುಬ್ಬಣ್ಣನಿಗೆ ಸುದ್ದಿ ತಿಳಿಸಿ ಅಭಿನಂದಿಸಿದರು.. ಬೆಳಿಗ್ಗೆಯೇ ಬೆಂಗಳೂರಿಗೆ ಬಾ ಪತ್ರಿಕೆಯವರೆಲ್ಲ ನಿನ್ನ ಸಂದರ್ಶನಕ್ಕಾಗಿ ಕಾದಿರುತ್ತಾರೆ. ಈ ಸುದ್ದಿಯನ್ನು ಮೊದಲು ತಿಳಿಸಿದವರು ರಂಗನಾಥ ರಾವ್, ಅವರು ನಿನಗೆ ಫೋನ್ ಮಾಡಿದ್ದರಂತೆ" ಎಂದೆಲ್ಲ ಹೇಳಿದ್ದರು.

ಸುಬ್ಬಣ್ಣ ಮರುದಿನ ಬೆಂಗಳೂರಿಗೆ ಬಂದವರೇ ಸಂಜೆ ಭಟ್ಟರ ಜೊತೆ ಕೋಟೆಯಲ್ಲಿನ ನನ್ನ ಮನೆಗೆ ಬಂದರು.`ನೀವು ನನಗೆ ಫೋನ್ ಮಾಡಿದ್ದರಂತೆ" ಎಂದು ಸಂತಸಪಟ್ಟರು. ನಾನು ವೈಕುಂಠರಾಜು ಅವರಿಗೆ ಹೇಳಿ ಸಾಪ್ತಾಹಿಕ ಪುರವಣಿಗೆ ಪ್ರಶಸ್ತಿ ವಿಜೇತ ಸುಬ್ಭಣ್ಣನವರನ್ನು ಅಭಿನಂದಿಸಿ ಸಂದರ್ಶನ ಮಾಡಿದೆ.

ಸುಬ್ಬಣ್ಣ ಹತ್ತಿರ ಹತ್ತಿರ ಆರು ಅಡಿಯ ಆಜಾನುಬಾಹು.ನೋಡಿದರೆ ಯರೋ ಅಥ್ಲೀಟೋ ಅಥವಾ ಸಿಕ್ಸರ್ ಬಾರಿಸೋ ದಾಂಡಿಗನೋ ಅನ್ನಿಸೋ ಗುಮಾನಿಯ ವ್ಯಕ್ತಿತ್ವ.. ಆದರೆ ಮಾತನಾಡಿಸಿದರೆ ಮಾಧುರ್ಯವೇ ಮೈವೆತ್ತಿ ಬಂದಂಥ ದನಿ-`ಈತ ನಮ್ಮ ಶಿವಮೊಗ್ಗ ಸುಬ್ಬಣ್ಣ'.

ಮಲೆನಾಡಿನ ಗುಣವೇ ಅಂಥಾದ್ದು: ಮೇಲೆ ನೋಡೆ ಕಣ್ಣ ತಣಿಪ ರುದ್ರ ರಮಣೀಯ ಗಿರಿಶಿಖಿರ ಸಸ್ಯಶ್ಯಾಮಲೆ,ಒಳಗೆ ಹೃದಯ ತಣಿಸುವ ಕವಿಕೋಗಿಲೆಗಳ ಪುಣ್ಯಧಾಮ. ಇಲ್ಲಿ ಹುಟ್ಟಿದ್ದು ಸುಬ್ಬಣ್ಣ. ಹುಟ್ಟಿದ್ದು 1938ರ ಡಿಸೆಂಬರ್ 14ರಂದು ಶಿವಮೊಗ್ಗೆ ಜಿಲ್ಲೆಯ ನಗರ ಎಂಬ ಹಳ್ಳಿಯಲ್ಲಿ.ತಂದೆ ಎಸ್.ಗಣೇಶ ರಾವ್,ತಾಯಿ ರಂಗನಾಯಕಮ್ಮ. ಸುಬ್ಬಣ್ಣ ಶಿಶುವಾಗಿದ್ದಾಗಲೇ ಸಂಗೀತ ಕಲಿತರು ಎನ್ನುವಂಥ ವಾತಾವರಣ ತಾಯಿಯ ತೌರು ಮನೆಯಲ್ಲಿ. ಕೊಲ್ಲೂರು ಮೂಕಾಂಬಿಕೆ ಸೇವೆಗೆ ಹೋಗುವ ಚಂಬೆ ವೈದ್ಯನಾಥ ಭಾಗವತರ್ ಮೊದಲಾದ ಘನ ವಿದ್ವಾಂಸರುಗಳಿಗೆಲ್ಲ ತಂಗುದಾಣವಾಗಿದ್ದ ಈ ಮನೆಯಲ್ಲಿ ಸದಾ ಸಂಗೀತ ಲಹರಿ. ಈ ಲಹರಿಯ ಜೋಗುಳದಲ್ಲಿ ಬೆಳೆದವರು ಸುಬ್ಬಣ್ಣ.ತಾತ ಶಾಮಣ್ಣನವರಿಂದಲೇ ಸುಬ್ಬಣ್ಣನವರಿಗೆ ಸಂಗೀತದಲ್ಲಿ ದೀಕ್ಷೆ.

ಸಂಗೀತ ಸುಬ್ಬಣ್ಣನವರ ಒಡನಾಡಿಯಾಗಿತ್ತು. ಬಾಲ್ಯ,ಯೌವ್ವನ,ಓದು,ವಿದ್ಯಾಭ್ಯಾಸ ಗಳ ಮಧ್ಯೆಯೂ ಸಂಗೀತದ ಸಾಹಚರ್ಯ.ಸುಬ್ಬಣ್ಣ ಇಂಟರೆವರೆಗೆ ಓದಿದ್ದು ಶಿವಮೊಗ್ಗೆಯಲ್ಲಿ. ಮುಂದೆ ಹೆಚ್ಚಿನ ಓದಿಗಾಗಿ ಮೈಸೂರಿಗೆ ವಲಸೆ.

ಸುಬಣ್ಣ ತಾತರನ ಬಳಿ `ಸಾಪಾ' ಕಲಿತರಾದರೂ ಅವರ ಬುದ್ಧಿಭಾವ ಒಲಿದದ್ದು ಸುಗಮ ಸಂಗೀತಕ್ಕೆ.ಹರೆಯದ ವಯಸ್ಸಿನಲ್ಲಿ ಹಿಂದಿ ಚಿತ್ರ ರಂಗದ ಪ್ರಮುಖ ಗಾಯಕರಾದ ಮುಖೇಶ್. ಮನ್ನಾಡೆ,ಮಹಮದ್ ರಫೀ ಇವರುಗಳ ಗಾನ ಮಾಧುರ್ಯಕ್ಕೆ ಮಾರು ಹೋದದ್ದು ಹೆಚ್ಚೇನಲ್ಲ. ಯುವಕ ಸುಬ್ಬಣ್ಣ ಹಿಂದಿ ಚಿತ್ರಗೀತೆಗಳಿಗೆ ಮಾರು ಹೋದರೂ ಕನ್ನಡದ `ಮೋಹನ ಮುರಳಿ'ಯನ್ನು ಮರೆಯಲಿಲ್ಲ. ಮೈಸೂರಿನ ಅಶೋಕ್ ಕುಮಾರ್ ಸ್ಮಾರಕ ಸಂಗೀತ ಸ್ಪರ್ಧೆಯಲ್ಲಿ ಅವರು ಹಾಡಿದ್ದು
ಗೋಪಾಲಕೃಷ್ಣ ಅಡಿಗರ`ಯಾವ ಮೋಹನ ಮುರಳಿ ಕರೆಯಿತು...'.ಸುಬ್ಬಣ್ಣ ಸಿರಿ ಕಂಠದ ಈ ಕಾವ್ಯ ಗಾಯನಕ್ಕೆ ಬೆಳ್ಳಿ ಕಪ್ಪು ಬಹುಮಾನ.ಬೆಳ್ಳ ಕಪ್ಪನ್ನು ಎದೆಗೆ ಅಪ್ಪಿಕೊಂಡೇ ಗೆಳೆಯ ಲಕ್ಷ್ಮೀನಾರಾಯಣ ಭಟ್ಟನ ಮನೆಗೆ ಸುಬ್ಬಣ್ಣನ ಮ್ಯಾರಥಾನ್ ಓಟ. ಓಟ.ಬೆಳಿ ಗೆದ್ದೆ ಗೆಳೆಯನಿಗೆ ಲಕ್ಷ್ಮೀನಾರಾಯಣ ಭಟ್ಟರು, ಬೆಳ್ಳಿ ಲೋಟದ ತುಂಬ ಹಾಲು ಕೊಟ್ಟು 'ಇನ್ನು ಮೇಲೆ ಕನ್ನಡದ ಗೀತೆಗಳನ್ನೇ ಹಾಡು' ಎಂದು ಕನ್ನಡದ ದೀಕ್ಷೆ ಕೊಟ್ಟರು.

ಕುವೆಂಪು,ಬೇಂದ್ರೆ,ಪುತಿನ ಈ ಕವಿತ್ರ‍್ಯರಲ್ಲದೆ,ಕೆ.ಎಸ್.ನ,ಶಿವರುದ್ರಪ್ಪ,ನಿಸಾರ್ ಅಹ್ಮದ್, ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವೆಂಕಟೇಶ ಮೂರ್ತಿ ಮೊದಲಾದವರ ಭಾವಗೀತೆಗಳಿಗೆ ದನಿಯಾದರು.ಭಾವಗೀತೆಗಳು ಸುಬ್ಬಣ್ಣನವರ ಸಿರಿ ಕಂಠದಲ್ಲಿ ಗೀತೆಗಳು ಹೊನಲಾಗಿ ಹರಿದವು. ಎಚ್.ಆರ್.ಲೀಲಾವತಿಯವರ ಪ್ರೇರಣೆಯಿಂದಾಗಿ ಮುವತ್ತು ವರ್ಷಗಳಷ್ಟು ಹಿಂದೆಯೇ ಬಾನುಲಿಯಲ್ಲಿ ಸುಬ್ಬಣ್ಣನ ಗಾನಲಹರಿ ಅಲೆಲಲೆಯಾಗಿ ಹರಿಯಿತು.ಆದರೇನು, ಹಾಡಿನ ಪಾಡು ಬದುಕಿಗೆ ಸುಗಮ ಪಾಡಾಗುವುದು ಕಷ್ಟವೇ.ಕವಿ ಹಾಡಿದಂತೆ `ಗಾಯಕನ ಕಾಡುವುದು ಕಡುಬಡತನ/ತುಟಿಯ ಮೇಲೆ ಭಾಗ್ಯನಿಧಿ ನಾರಾಯಣನ ನಾಮ,ಸ್ಮರಣೆ' ತುಟಿಯ ಮೇಲಿನ ಭಾಗ್ಯ ನಿಧಿ ಸುಬ್ಬಣ್ಣನ ಬದುಕಿನ ಪಾಡಾಗದೆ ಓದಿದ ಲಾ ನೆರವಿಗೆ ಬಂತು.

ಈ ಮಧ್ಯೆ ಪ್ರೀತಿಸಿದ ಶಾಂತಾ ಅವರೊಂದಿಗೆ ದಾಂಪತ್ಯ ಗೀತೆಗೆ ದನಿ ಗೂಡಿಸಿದರು. ಮಗಳು ಬಾಗೇಶ್ರೀ. ಬಾಗೇಶ್ರೀ ಸುಬ್ಬಣ್ಣನವರಿಗೆ ಬಹಳ ಪ್ರಿಯವಾದ ರಾಗ.ತಮಗೆ ಪ್ರಿಯವಾದರಾಗಕ್ಕೆ ಎಂಥ ಗೌರವ ನೋಡಿ.ಬಾಗೇಶ್ರೀ ಪತ್ರಕರ್ತೆಯಾಗಿ ಹೆಸರು ಗಳಿಸಿದವರು. ಪ್ರಸ್ತುತ `ದಿ ಹಿಂದೂ' ಪತ್ರಿಕೆಯ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರು. ಮಗ ಶ್ರೀರಂಗ ಖ್ಯಾತ ನ್ಯಾಯ ವಾದಿ.

ಸುಬ್ಣಣ್ಣನವರ ಮೊದಲ ಧ್ವನಿ ಸುರಳಿ `ನಿತ್ಯೋತ್ಸವ' 1978ರಲ್ಲಿ ಹೊರ ಬಂದಿತು.ಬಾನುಲಿಯಲ್ಲಿ ಈ ವೇಳೆಗಾಗಲೇ ಮಲೆನಾಡಿನ ಗಡಿ ದಾಟಿದ್ದ ಸುಬ್ಬಣ್ಣ ದನಿ ,ಈ ಧ್ವನಿಸುರಳಿಯಿಂದಾಗಿ ಕರ್ನಾಟಕದಾದ್ಯಂತ ಮನೆಮನೆಯಲ್ಲೂ ಅನುರಣಿಸಿತು. ಸುಬ್ಬಣ್ಣನವರು ಚಲನಚಿತ್ರ ಪ್ರಪಂಚಕ್ಕೆ ಪ್ರವೇಶಿಸಿದ್ದು ಕಂಬಾರರ `ಕರಿಮಾಯಿ' ಚಿತ್ರದ ಮೂಲಕ. ಆದರೆ ಆ ಚಿತ್ರ ತೆರೆ ಕಾಣಲಿಲ್ಲ. `ಕರಿ ಮಾಯಿ' ಧ್ವನಿ ಮುದ್ರಿಕೆ ಮೇಲೆ `ಹಾಡಿದವರು ಜಿ.ಸುಬ್ರಹ್ಮಣ್ಯಂ' ಎಂದು ಮುದ್ರಿಸಲಾಗಿತ್ತು. ಇದನ್ನು ಆಲಿಸಿದವರೆಲ್ಲ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದೇ ಭಾವಿಸಿದರು. ಸಿಲೋನ್ ರೇಡಿಯೋ ಸಹ `ಕರಿಮಾಯಿಯ' ಹಾಡನ್ನು ಹಾಡಿರುವವರು ಎಸ್.ಪಿ.ಬಾಲಸುಬ್ರಹ್ಮಮಣ್ಯಂ ಎಂದೇ ಬಿತ್ತರಿಸಿಬಿಟ್ಟಿತು. ಈ ಗೊಂದಲವನ್ನು ತಪ್ಪಿಸಲು ಕಂಬಾರರು `ಕಾಡು ಕುದುರೆ'ಯಲ್ಲಿ ಹಾಡಿಸಿದಾಗ ಶಿವಮೊಗ್ಗ ಸುಬ್ಬಣ್ಣ ಎಂದು ನಾಮಕರಣ ಮಾಡಿದರು.ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಹಿನ್ನೆಲೆ ಗಾಯಕ ಎಂಬ ಕೀರ್ತಿಯ ಸವಾರಿಮಾಡುತ್ತಲೇ ಸುಬ್ಬಣ್ಣ ಬೆಂಗಳೂರಿಗೆ ಬಂದರು.ವಕೀಲಿ ವೃತ್ತಿಯ ಜೊತೆಗೆ ಸಾರೋಧ್ಧಾರವಾಗಿ ಗಾನ ಸುಧೇ ಹರಿಸಿದರು.ಸುಬ್ಬಣ್ಣ,ಕನ್ನಡದಲ್ಲಿ ಸುಗಮ ಸಂಗೀತದ ಪರಂಪರೆ ಹುಟ್ಟುಹಾಕಿದ ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ ಈ ಸಾಲಿನ ಗಾಯಕರು. ಕೇಳಿದರೆ ಸುಬ್ಬಣ್ಣ ಬಾಯಲ್ಲಿ ಕೇಳಬೇಕು ಎನ್ನುವ ಖ್ಯಾತಿಯ-`ಬಾರಿಸು ಕನ್ನಡ ಡಂಡಿಮವ;',`ಆನಂದಮಯ ಜಗದೀ ಹೃದಯ', `ಬಾಗಿಲೊಳು ಕೈಮುಗಿದಿ ಬಾ ಯಾತ್ರಿಕನೆ' ಗೀತೆಗಳ ಗಾಯನದಿಂದ ಸುಬ್ಬಣ್ಣ ಬಾಯಿಂದ ಇವನ್ನು ಕೇಳಬೇಕು ಎನ್ನುವಂಥ ಛಾಪು ಮೂಡಿಸಿದರು. ಶಿಶುನಾಳ ಷರೀಫರ `ಬಿದ್ದೀಯಬ್ಬೆ ಮುದುಕಿ'`ಗುಡುಗುಡಿಯ ಸೇದಿ ನೋಡು',`ಅಳಬೇಡ ತಂಗೀ', ಕೆ.ಎಸ್.ನ. ಅವರ `ಪಯಣಿಸುವ ವೇಳೆಯಲ್ಲಿ',`ನಾನಾಗುವ ಆಸೆ',`ಏಕೆ ಕಾಡುತಿದೆ',`ಯಾವ ಹಾಡನು ಹಾಡಲಿ' ಇವೆಲ್ಲ ಸುಬ್ಬಣ್ಣ ಮಂದರಸ್ತಾಯಿಯ ಮಧುರ ಗಂಭೀರ ದನಿಯ ವಿಶಿಷ್ಟ ಛಾಪಿನ ಗೀತೆಗಳು.ಇಂದಿಗೂ ನಮ್ಮ ಶ್ರವಣೇಂದಿಯಗಳಲ್ಲಿ ಅನುರಣಿಸುವ ಗೀತೆಗಳು..

ಶಿವಮೊಗ್ಗ ಸುಬ್ಬಣ್ಣ ಬಗ್ಗೆ ಇಂಥ ಬರೆಯ ಬೇಕಾದ ಮಾತುಗಳು ಬೇಕಾದಷ್ಟಿವೆ. ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ..ಎನ್ನಲುಂಟೆ? ಕನ್ನಡ ಸುಗಮ ಸಂಗೀತದಲ್ಲಿ ಅವರ ದನಿ ಚಿರಸ್ಥಾಯಿ.

ಜಿ.ಎನ್. ರಂಗನಾಥರಾವ್ ಅವರ ಲೇಖಕ ಪರಿಚಯ..

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...