‘ಶ್ರೀರಾಮಾಯಣ ದರ್ಶನಂ : ಪಾತ್ರಗಳ ಕಥಾವಳಿ’  ರೂಪಾಂತರ ಸಾಹಿತ್ಯದ ಗಟ್ಟಿ ಕೊಡುಗೆ 


ನಿರ್ಲಕ್ಷಿತ ಪಾತ್ರಗಳಿಗೆ ಮಾನವೀಯ ಘನತೆ ತಂದುಕೊಟ್ಟ ಕುವೆಂಪು ಅವರ ‘ ಶ್ರೀರಾಮಾಯಣ ದರ್ಶನಂ’ ಕೃತಿಯು ಪ್ರಾಚೀನ ಕೃತಿಯೊಂದರ ರೂಪಾಂತರದ ನಿರಂತರ ಪ್ರಕ್ರಿಯೆಯ ಭಾಗವೇ ಆಗಿದೆ. ಅದರ ಮುಂದುವರಿಕೆಯ ಸಣ್ಣ ಕೊಡುಗೆಯಾಗಿ ಡಾ. ಜಿ. ಕೃಷ್ಣಪ್ಪ ಅವರ ‘ಶ್ರೀರಾಮಾಯಣ ದರ್ಶನಂ: ಪಾತ್ರಗಳ ಕಥಾವಳಿ’ ಕೃತಿಯ ತನ್ನ ವಿಶೇಷತೆ ಕಾಯ್ದುಕೊಳ್ಳುತ್ತದೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ಹತ್ತು ಹಲವು ವಿಭಿನ್ನ ದೃಷ್ಟಿಕೋನಗಳೊಂದಿಗೆ ತಮ್ಮ ವಿಶೇಷತೆಯನ್ನು ಕಾಯ್ದುಕೊಂಡಿರುವ ‘ರಾಮಾಯಣ’ ಕೃತಿಗಳು ಬಹುಮುಖೀಯ ಮಾತ್ರವಲ್ಲ; ಸಂಖ್ಯೆಗಳಲ್ಲೂ ಅನೇಕ. ಕುವೆಂಪು ಅವರ ಅಸಾಧಾರಣ ಪ್ರತಿಭೆಯ ಪ್ರತೀಕವಾಗಿ ಮೂಡಿ ಬಂದ ‘ಶ್ರೀ ರಾಮಾಯಣ ದರ್ಶನಂ’ ಕೃತಿಯೂ ಸಹ, ವಸ್ತುವನ್ನು ವಿಭಿನ್ನ ನೆಲೆಯಲ್ಲಿ ಗುರುತಿಸಿ, ಅಭಿವ್ಯಕ್ತಿಯ ತೀಕ್ಷ್ಣತೆಯಿಂದ, ಕನ್ನಡ ಸಾಹಿತ್ಯದಲ್ಲಿ ಕಂಗೊಳಿಸುತ್ತಿದೆ. ಸಾಂಪ್ರದಾಯಿಕ ಕಥೆಯ ವಸ್ತುವಿಗೆ ಜೀವನ ಮೌಲ್ಯದ ಕಸುವು ಹೆಚ್ಚಿಸಿದ, ನಿರ್ಲಕ್ಷಿತ ಪಾತ್ರಗಳಿಗೆ ಮಾನವೀಯ ಸ್ಪರ್ಶ ನೀಡಿದ, ಕಾಲ-ದೇಶ ಮೀರಿದ ಮಾನವೀಯ ಕೌಶಲದೊಂದಿಗೆ ಕಥಾ ರಚನೆಗೊಂದು ಶಾಶ್ವತ ಸೌಂದರ್ಯದ ಗಂಭೀರತೆ ತಂದುಕೊಟ್ಟ...ಹೀಗೆ ‘ಶ್ರೀರಾಮಾಯಣ ದರ್ಶನಂ’ ಅಸಂಖ್ಯ ವಿಶೇಷತೆಗಳ ಹಾಗೂ ಪ್ರಭಾವಳಿಗಳ ವ್ಯಾಪ್ತಿಗೆ ಸೆಳೆಯುವ ಅಗಾಧ ಶಕ್ತಿಯ ಸಂಕ್ಷಿಪ್ತ ಹಾಗೂ ಸೂಕ್ಷ್ಮ ರೂಪವಾಗಿ ‘ಶ್ರೀ ರಾಮಾಯಣ ದರ್ಶನಂ: ಪಾತ್ರಗಳ ಕಥಾವಳಿ’ ಕೃತಿ ರೂಪು ತಳೆದಿದೆ.

ವಸ್ತು-ಪಾತ್ರ-ನಿರೂಪಣಾ ಶೈಲಿ-ಸನ್ನಿವೇಶಗಳ ಕೌಶಲಭರಿತ ಹೆಣಿಗೆ ...ಹೀಗೆ ಯಾವ ಅಂಶ ಎತ್ತಿಕೊಂಡರೂ ಅದು ಸತ್ವಭರಿತ, ಅರ್ಥಗರ್ಭಿತ, ಪರಿಣಾಮಕಾರಿ, ಜೀವನ ಸಂದೇಶದ ಸೊಗಸು. ಹೀಗಾಗಿ, ಖ್ಯಾತ ಲೇಖಕ ಹಾಗೂ ಜೀವಮಾನದುದ್ದಕ್ಕೂ ಬೇಂದ್ರೆ ಸಾಹಿತ್ಯವನ್ನೇ ಉಸಿರಾಡಿದ, ‘ಬೇಂದ್ರೆ ಕೃಷ್ಣಪ್ಪ’ ಎಂದೇ ಖ್ಯಾತಿಯ ಡಾ. ಜಿ. ಕೃಷ್ಣಪ್ಪ ಅವರು, 9 ನಿರ್ಲಕ್ಷಿತ ಪಾತ್ರಗಳ ವ್ಯಕ್ತಿತ್ವದ ಸೌಂದರ್ಯ ಪಲ್ಲವಿಸಿ, ಪರಿಮಳ ಸೂಸುವಂತೆ ಮಾಡಿದ ಕೃತಿ- ‘ಶ್ರೀ ರಾಮಾಯಣ ದರ್ಶನಂ: ಪಾತ್ರಗಳ ಕಥಾವಳಿ’.

ಕೃತಿಯ ಕೆಲ ಪ್ರಮುಖ ಅಂಶಗಳನ್ನು ಹೀಗೆ ಗುರುತಿಸಿ, ವಿಶ್ಲೇಷಿಸಬಹುದು.

 1. ವಿವಿಧ ರಾಮಾಯಣದಲ್ಲಿ ನಿರ್ಲಕ್ಷಿತ ಪಾತ್ರಗಳನ್ನು ಕುವೆಂಪು ಗುರುತಿಸಿ, ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಅವುಗಳಿಗೆ ನ್ಯಾಯ ನೀಡಿದ್ದು, ಜಿ. ಕೃಷ್ಣಪ್ಪನವರ ಸರಳ ಬರಹದ ಕಳಕಳಿಯು, ಆ ನ್ಯಾಯದ ಪ್ರಸಾರ ವ್ಯಾಪ್ತಿಯನ್ನು ಆಳ-ಅಗಲಕ್ಕೂ ವಿಸ್ತರಿಸಲು ಯತ್ನಿಸಿದ್ದು.

 2. ಕವಿ (ಕುವೆಂಪು) ಮೂಲವನ್ನು ಪೂರ್ಣವಾಗಿ ಅನುಕರಿಸಿ ಕಥೆಯ ವೇಗಕ್ಕೆ ಅನುಗುಣವಾಗಿ ಬದಲು ಮಾಡಿಕೊಂಡಂತೆ ‘ಶ್ರೀ ರಾಮಾಯಣ ದರ್ಶನಂ’ನಲ್ಲಿಯ ಪಾತ್ರಗಳನ್ನು ಜಿ.ಕೃಷ್ಣಪ್ಪ ಅವರು ಕಥೆಯಾಗಿಸಿದ್ದು.

 3. ಪಾತ್ರಗಳು ಕವಿಯ (ಕುವೆಂಪು) ವಿಶಿಷ್ಟ ಪ್ರತಿಭೆಯಲ್ಲಿ ಅದ್ವಿತೀಯವಾಗಿ ಮರುಹುಟ್ಟು ಪಡೆದಿವೆ ಎಂದು ಎನ್ನುವ ಜಿ.ಕೃಷ್ಣಪ್ಪ, ಆ ಮೂಲ ಪ್ರತಿಭೆಯ ಔನ್ನತ್ಯವನ್ನು ಕಥೆಗಳ ಮೂಲಕ ದರ್ಶಿಸಿ, ಅವುಗಳಿಗೆ ಸಾಹಿತ್ಯಕವಾಗಿ ಮಾತ್ರವಲ್ಲ; ಜೀವನ ಮೌಲ್ಯಗಳ ಸ್ಪರ್ಶ ನೀಡಿ, ಮನುಕುಲದ ಸಾಂಸ್ಕೃತಿಕ ಔನ್ನತ್ಯವನ್ನು ಸಂಭ್ರಮಿಸುವಂತೆ ಮಾಡಿದ್ದು.

 4. ಎಲ್ಲರಿಗೂ ‘ಶ್ರೀ ರಾಮಾಯಣ ದರ್ಶನಂ’ ಓದಲಾಗದು. ಓದಿದರೂ, ಅಲ್ಲಿಯ ಅಸಂಖ್ಯ ವಸ್ತು ವಿಶೇಷತೆಗಳು, ಪಾತ್ರಗಳು, ಸನ್ನಿವೇಶಗಳು ಹೀಗೆ ಎಲ್ಲವನ್ನೂ ಓದಿನ ಜೊತೆ ಜೊತೆಗೆ ಗ್ರಹಿಸಲಾಗದು. ಇಂತಹ ಸಂಕೀರ್ಣ ಸ್ಥಿತಿಯಿಂದ ಹೊರತಾಗುವ ಈ ಕೃತಿಯು, ತಮ್ಮದೇ ಮಿತಿಯಲ್ಲಿ ಘನವಾದದ್ದನ್ನು ಸಾಧಿಸಿದ ಸಣ್ಣ ಸಣ್ಣ 9 ಪಾತ್ರಗಳ ಹಿರಿಮೆಯನ್ನು ಕಟ್ಟಿಕೊಡುವುದು

 5. ಪಾತ್ರಗಳ ಮನೋಜಗತ್ತನ್ನು ಸರಳ ಭಾಷೆಯಲ್ಲಿ ವಿವರಿಸುವ ಕೃತಿಯು, ಮನೋವೈಜ್ಞಾನಿಕ ಅಧ್ಯಯನಕ್ಕೂ ಹಾಗೂ ಅಧ್ಯಾತ್ಮಿಕ ಸಾಧನೆಗೂ ಒಳನೋಟಗಳನ್ನು ನೀಡುತ್ತದೆ.

 6. ನಿರ್ಲಕ್ಷಿತ 9 ಪಾತ್ರಗಳೆಡೆ ಕುವೆಂಪುವಿನ ಮಾನವೀಯ ದೃಷ್ಟಿಕೋನ ಹಾಗೂ ಸಾಹಿತ್ಯಕವಾಗಿ ತೀಕ್ಷ್ಣ ಗ್ರಹಿಕೆಯ ಅನಾವರಣವಾಗಿ ಜಿ. ಕೃಷ್ಣಪ್ಪನವರ ಈ ಬರಹ.

 7. ಕೃತಿಯಲ್ಲಿ ಪ್ರಸ್ತಾಪಿತ ಬಹುತೇಕ ಕಥೆಗಳು ಸ್ತ್ರೀ ಕೇಂದ್ರಿತವೇ. ಆತ್ಮಶಕ್ತಿ ಹಾಗೂ ಅಧ್ಯಾತ್ಮಿಕತೆಯ ವಿಕಾಸಕ್ಕೆ ಪೂರಕ. ಈ ಕೇಂದ್ರದೆಡೆಗೆ ಓದುಗರನ್ನು ಸೆಳೆಯುವ ಉದ್ದೇಶವು ಕೃತಿಯ ಆರೋಗ್ಯಕಾರಿ ಅಂಶ.

 8. ಕಾಲದೊಂದಿಗೆ ಉರುಳಿ, ರೂಪಾಂತರ ಹೊಂದುತ್ತಲೇ ಮೂಲ ಸೃಜನಶೀಲತೆಯನ್ನು ಉಳಿಸಿಕೊಳ್ಳುವಲ್ಲಿ ಶ್ರೀ ರಾಮಾಯಣ ದರ್ಶನಂ: ಪಾತ್ರಗಳ ಕಥಾವಳಿ’ ಅಂತಹ ಕೃತಿಗಳು ಸಾಹಿತ್ಯದ ಸಾರ್ವಕಾಲಿಕ ಮೌಲ್ಯದ ನಿರಂತರ ಕೊಡುಗೆಯಾಗುವ ಪರಿ ವಿಶಿಷ್ಟ.

 9. ಪ್ರತಿ ಪಾತ್ರದ ವ್ಯಕ್ತಿಗತ ಚರಿತ್ರೆಯಾಗದೇ, ಇಡೀ ಜೀವನದ ರಹಸ್ಯಗಳನ್ನು ಬಿಡಿಬಿಡಿಯಾಗಿ ಚಿತ್ರಿಸುವ ಒಂದೊಂದು ವಿಶೇಷತೆಯಾಗಿ ಗಮನ ಸೆಳೆಯುತ್ತದೆ- ಈ ಕೃತಿ.

 10. ಕವಿ ಕುವೆಂಪು ಅವರ ಕಾಲ್ಪನಿಕ ಸೌಂದರ್ಯದಲ್ಲಿ ವರ್ಣಿತ ಪಾತ್ರಗಳ ಪರಿಚಯಕ್ಕೆ ಒಂದಿಷ್ಟೂ ಕುಂದಾಗದಂತೆ ಅಷ್ಟೇ ಪರಿಣಾಮಕಾರಿಯಾಗಿ ಸರಳ ಭಾಷೆಯಲ್ಲಿ ಮೂಡಿಸಿದ್ದು, ಜಿ.,ಕೃಷ್ಣಪ್ಪನವರ ಅಧ್ಯಯನದ ಆಳ, ಅನುಭವದ ಗಟ್ಟಿತನ, ಈ ಕೃತಿ ಯಾರಿಗಾಗಿ ಮತ್ತು ಏತಕ್ಕಾಗಿ ಎಂಬುದರ ಸ್ಪಷ್ಟತೆಗೆ ಕನ್ನಡಿ ಹಿಡಿಯುತ್ತದೆ.

 11. ಪ್ರಾತಗಳ ಪ್ರತ್ಯೇಕ ಗುರುತಿಸುವಿಕೆ ಹಾಗೂ ವಿಶ್ಲೇಷಣೆಯೊಂದಿಗೆ ರಾಮಾಯಣದಂತಹ ಮಹಾಕಾವ್ಯದ ಸಮಗ್ರತೆಯನ್ನು ‘ಹನಿಯಲ್ಲಿ ಶರಧಿಯ ಗುಣಲಕ್ಷಣಗಳು’ ತೋರುವಂತೆ ಹಾಗೂ ಮಹಾಕಾವ್ಯದ ಗಂಭೀರ ಓದಿಗೆ ಪ್ರೇರಣೆಯಂತಿದೆ-ಈ ಕೃತಿ.

ಮಾನವತ್ವದ ದರ್ಶನ: ಮಂಥರೆ, ಶಬರಿ, ವಾಲಿ, ಮಾರೀಚ, ಮಂಡೋದರಿ, ಮಹಾಪಾರ್ಶ್ವ, ಅತಿಕಾಯ, ಊರ್ಮಿಳೆ, ಅನಲೆ ಇಂತಹ ಪಾತ್ರಗಳು, ಮಹಾಕಾವ್ಯದ ಸುದೀರ್ಘ ಪಥದಲ್ಲಿ ಒಂದು ಸಣ್ಣ ಪ್ರದೇಶದಲ್ಲಿ ಘಟಿಸುವ ಆಕಸ್ಮಿಕಗಳಂತೆ. ಆದರೆ, ಅವು ಮಾನವತೆಯ ದರ್ಶನ ನೀಡುತ್ತವೆ ಎಂಬುದು ಈ ಎಲ್ಲ ಬರಹಗಳ ಅಂತರಂಗ. ಪ್ರತಿ ಪಾತ್ರವೂ ಮನೋವೈಜ್ಞಾನಿಕ ವಿಶ್ಲೇಷಣೆಗೆ ಸೂಕ್ತ ಸಾಮಗ್ರಿ ಪೂರೈಸುವಷ್ಟು ಸಶಕ್ತವಾಗಿವೆ. ಮನಸ್ಸಿನ ಸೂಕ್ಷ್ಮ ಎಳೆಯಿಂದಲೇ ಕಥೆಗಳನ್ನು ನೇಯ್ದಿದ್ದರ ಕೌಶಲವು ಪ್ರತಿ ಶಬ್ದ- ವಾಕ್ಯಗಳಲ್ಲೂ ಕಾಣಬಹುದು. ಉದಾ: ಮನ್ಮಥನ ಬಂಧನದಲ್ಲಿದ್ದ ರಾವಣೇಶ್ವರನು ಮನ್ಮಥನ ಶತ್ರುವಾದ ಶಿವನಿಗೆ ಕೈಮುಗಿದನು. ಈ ವಾಕ್ಯದ ಸೌಂದರ್ಯ ಇರುವುದು; ರಾವಣನ ಕಾಮುಕತನ ಹಾಗೂ ದೈವವಾದ ಶಿವನಿಗೆ ಕೈ ಮುಗಿಯುವ ದೃಢಭಕ್ತಿ-ಎರಡೂ ಏಕಕಾಲಕ್ಕೆ ಅನುಭವ ನೀಡುವುದು.

ಕುವೆಂಪು ಬರಹ ಸೌಂದರ್ಯವು, ಡಾ. ಜಿ. ಕೃಷ್ಣಪ್ಪನವರ ಈ ಕೃತಿಯಲ್ಲಿ ಕನ್ನಡದ ನಿರಾಡಂಬರವಾಗಿ ಕಂಗೊಳಿಸುವುದು. ದೊಡ್ಡವರೂ ಓದಿ ಮಕ್ಕಳಿಗೂ ತಿಳಿಸುವಷ್ಟು, ರಾಮಾಯಣ ಪಾತ್ರಗಳ ಸುಂದರ ಚಿತ್ರಣಗಳಿವೆ. ರಾಮನ ಜೊತೆ ಲಕ್ಷ್ಮಣ ಕಾಡಿಗೆ ಹೊರಟು ನಿಂತಾಗ ಊರ್ಮಿಳೆಯ ತಳಮಳದ ಪ್ರಸಂಗಗಳು ಪ್ರತಿ ಅಧ್ಯಾಯದಲ್ಲೂ ಇದ್ದು, ಚಿಂತನೆಯನ್ನು ಪ್ರೇರೇಪಿಸುತ್ತವೆ.

ಸಾಹಿತಿ ಟಿ.ಎನ್. ವಾಸುದೇವ ಮೂರ್ತಿ ಅವರು ಕೃತಿಗೆ ಮುನ್ನುಡಿ ಬರೆದು ‘ಎಲ್ಲ ಮಹತ್ವದ ಪ್ರಾಚೀನ ಪಠ್ಯಗಳು ಕಾಲ ಸರಿದಂತೆ ಸೂತಕಗೊಳ್ಳುತ್ತವೆ.ಮತ್ಯಾವುದೋ ಉದ್ದೇಶ, ಹಿತಾಸಕ್ತಿಗಳಿಗೆ ಎರವಾಗುತ್ತಾ ಹೋಗುತ್ತವೆ. ಅಂತಹ ಪಠ್ಯಗಳನ್ನು ವಿಸರ್ಜಿಸಲಾಗದು. ಅದು ಪ್ರತಿ ಯುಗಧರ್ಮದಲ್ಲೂ ತತ್ಕಾಲಿನ ಮೌಲ್ಯಗಳಿಗೆ ಅನುಗುಣವಾಗಿ ಹೊಸ ಅವತಾರ ಪಡೆಯುತ್ತಿರುತ್ತದೆ. ‘ಶ್ರೀ ರಾಮಾಯಣ ದರ್ಶನಂ’ ನಮ್ಮ ಯುಗಕ್ಕೆ ಪ್ರಾಪ್ತಿಯಾದ ಭಾಗ್ಯ. ಕೆಲವು ಮಹತ್ವದ ಪಾತ್ರಗಳು ತಿಳಿಗನ್ನಡ ರೂಪದಲ್ಲಿ ಸಿಗುತ್ತಿರುವುದು ಓದುಗರ ಸೌಭಾಗ್ಯ’ ಎಂದು ಅಭಿಪ್ರಾಯಪಟ್ಟಿದ್ದು, ‘ಶ್ರೀರಾಮಾಯಣ ದರ್ಶನಂ: ಪಾತ್ರಗಳ ಕಥಾವಳಿ’ ಕೃತಿಯು ರೂಪಾಂತರ ಸಾಹಿತ್ಯವೊಂದರ ಗಟ್ಟಿ ಕೊಡುಗೆಯನ್ನುಗುರುತಿಸಿದ್ದಾರೆ.

(ಪುಟ: 120, ಬೆಲೆ: 120 ರೂ. ವಂಶಿ ಪ್ರಕಾಶನ, ಬೆಂಗಳೂರು, 2021)

MORE FEATURES

ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗು...

19-01-2022 ಬೆಂಗಳೂರು

ಮಾಧ್ಯಮ ರಂಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ರೂಪಿಸುವ ಪತ್ರಿಕೋದ್ಯಮ ಶಿಕ್ಷಣದ ಪಠ್ಯಕ್ರಮ, ಕಲಿಸುವ ವಿಧಾನದಲ್ಲೂ...

ಶಿಕ್ಷಣ ಕ್ಷೇತ್ರದ ಧನಾತ್ಮಕ ಅನುಭವಗ...

19-01-2022 ಬೆಂಗಳೂರು

ಲೇಖಕರ ಶಿಕ್ಷಣ ಕ್ಷೇತ್ರದ ಅನುಭವಗಳು ಶಾಲಾಹಂತದಿಂದ ಆಡಳಿತ ಹಂತದವರೆಗಿನ ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ಶಾಲಾ ವಾತಾವ...

ಸಾಮಾನ್ಯ ಹೆಣ್ಣಿನ ಅಸಾಮಾನ್ಯ ಕಥನ ‘...

18-01-2022 ಬೆಂಗಳೂರು

ಮೀನಾಕ್ಷಮ್ಮನವರ ಈ ಆತ್ಮಕಥೆ 'ಹರಿವನದಿ' ನಮ್ಮ ನಾಡಿನ ಹೆಸರಾಂತ ನದಿಗಳಂತೆ ಜನಮನದಲ್ಲಿ ನೆಲೆನಿಂತ ಯಾವ ಪ್ರಸಿದ್...