ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

Date: 27-10-2020

Location: ಬೆಂಗಳೂರು


ಸಂತೋಷ ಅನಂತಪುರ ಅವರು ಬರೆಯುತ್ತಿರುವ ಲೇಖನ ಸರಣಿ ‘ಅನಂತ ಯಾನ’. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಆತ್ಮವಿಶ್ವಾಸ ಕಳೆದುಕೊಳ್ಳದಿರಿ ಎನ್ನುವ ಅನಂತಪುರ ಅವರು, ‘ಏನೇ ಬರಲಿ, ಎಷ್ಟೇ ಇರಲಿ ಮನಸ್ಸಿನ ತೀರದಲ್ಲಿ ಕುಳಿತು ಮಳೆಬಿಲ್ಲ ಕಾಣುವ ಹಂಬಲವನ್ನು ಹಸಿರಾಗಿಟ್ಟುಕೊಳ್ಳಬೇಕು’ ಎಂಬುದನ್ನು ಸರಳವಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ.

 

ಕಾರಣವಿಲ್ಲದೆ ಮೂಡುವ ಸಂತಸದ ಹಿಂದೆ ನಾವರಿಯದ ಅದಮ್ಯ ಶಕ್ತಿಯ ಕೈಚಳಕವಿರುವುದು ಗಮನಕ್ಕೆ ಬಂದೇ ಇರುವುದಿಲ್ಲ. ಹಾಗಂತ ಅದನ್ನರಸುವ ಗೋಜಿಗೂ ಹೋಗುವುದಿಲ್ಲ. ಆದರೆ ಖುಷಿಯನ್ನು ಮಾತ್ರ ಅನುಭವಿಸುತ್ತಿರುತ್ತೇವೆ. ಇನ್ನೊಂದೆಡೆ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ತುತ್ತಾಗಿ ನಮ್ಮೊಳಗಿನ ಖುಷಿಯು ಸುಟ್ಟು ಹೋಗುವಾಗಲೆಲ್ಲಾ ಇನ್ನೊಬ್ಬರಿಗಾಗಿ ಅನ್ಯಥಾ ಸುಡುವುದರಲ್ಲಿ ಅರ್ಥವಿಲ್ಲ ಎಂಬ ಸತ್ಯವೂ ಬೋಧವಾಗುತ್ತದೆ. ಬದುಕಲ್ಲಿ ಕಂಡು ಬರುವ ಎರಡು ಸ್ಥಿತಿಗಳಿವು.

ಹಾವ-ಭಾವಗಳು, ಚಹರೆಯ ನಿಶಾನಿಗಳು, ವೇಷ-ಭೂಷಣಗಳು ಸುಖಾಸುಮ್ಮನೆ ಬದಲಾಗಲಾಗುವುದಿಲ್ಲ. ಅದಕ್ಕೂ ಕಾರಣಗಳಿರುತ್ತವೆ. ಆದರೆ ಕಾರಣವಿಲ್ಲದೆ ಕ್ರಿಯೆಗಳು ಘಟಿಸುವುದು ಬದುಕಲ್ಲಿ ಮಾತ್ರ! ಆಂತರ್ಯದಲ್ಲಿ ಬದಲಾವಣೆ ಆಗುತ್ತಿದ್ದಂತೆಯೇ ಬಾಹ್ಯವೂ ಬದಲಾಗುತ್ತಾ ಹೋಗುತ್ತಿರುತ್ತದೆ. ಇದು ನಾವಿರುವ ವಾತಾವರಣದ ಪ್ರಭಾವ ಮತ್ತು ಪರಿಸರಕ್ಕೆ ಸ್ಪಂದಿಸುವ ರೀತಿಯೂ ಹೌದು. ಸೂಕ್ಷ್ಮ ಹಾಗೂ ಸ್ವತಂತ್ರ ವ್ಯಕ್ತಿತ್ವದ ಮನಸ್ಸುಗಳಲ್ಲಿ ಗೊಂದಲವು ಈ ರೀತಿ ಗೂಡು ಕಟ್ಟಿಕೊಂಡು ಕುಂತು ಬಿಟ್ಟಿರುತ್ತವೆ.

ನಾವು ಬದಲಾಗಲು ಕಾರಣಗಳು ಹಲವಾರು. ವಿಶ್ವಾಸ ಘಾತುಕತನ, ಸ್ವಾರ್ಥ, ಕುಟಿಲತೆ… ಹೀಗೆ ಪಟ್ಟಿ ಅಸಂಖ್ಯ. ಹೀಗಿದ್ದಾಗ ಆಡಿಕೊಳ್ಳುವವರಿಗೆ ನಾವೊಂದು ವಸ್ತುವಾಗಿ ಬಿಡುವುದಲ್ಲದೆ ಹೀಗಿದ್ದವನು/ಳು ಹೀಗ್ಯಾಕಾದ/ಳು ಎಂಬ ಮೂರು ಗೆರೆಯು ಅನಾಮತ್ತಾಗಿ ನೋಡುವವರ ಹಣೆಯ ಮೇಲೆ ಮೂಡಿ ಬಿಡುತ್ತದೆ. ಒಳಗಿನ ಮೌನ ಪ್ರತಿಭಟನೆಯು ಬಾಹ್ಯಾಲಂಕಾರದಲ್ಲೂ ತೋರಿ ಬರುವುದೇ ಇಂತಹ ಸಂದರ್ಭದಲ್ಲಿ. ಪರಿಣಾಮ ನೋವುಗಳು ಕಾಠಿಣ್ಯತೆಯನ್ನು ನೀಡುತ್ತವೆ. ಇವೆಲ್ಲವೂ ಪರಿಸ್ಥಿತಿಯೊಡ್ಡುವ ಪರಿಣಾಮಗಳೇ ಹೊರತು ಅರಸಿ-ಬಯಸಿ-ಆರಿಸಿ ಪಡೆದಂತವುಗಳಲ್ಲ. ಗಾಳಿ ಬೀಸದೆ ಗರಿಹುಲ್ಲೂ ಅಲುಗಾಡುವುದಿಲ್ಲವಲ್ಲ!

***************

ಬದುಕು ಕೊಡುತ್ತಿರುವ ಮತ್ತಷ್ಟು ಕಠಿಣ ಸವಾಲುಗಳನ್ನು ಮತ್ತದು ಹೊತ್ತು ತರುವ ಹಲವು ಕೌತುಕಗಳನ್ನು ಜೊತೆ ಜೊತೆಯಲ್ಲಿ ಎದುರಿಸಿ ನೋಡುತ್ತಿರುವಾಗ ವಾಸ್ತವವು ಬಹು ಕಠೋರವಾಗಿ ಕಂಡು ಬಿಡುವುದುಂಟು. ಕಳೆದೇ ಹೋಯಿತೇನೋ ಎಂದೆನಿಸಿಯೂ ಬಿಡುತ್ತದೆ. ಹಾಗಂತ ಹತಾಶರಾಗಬೇಕಿಲ್ಲ.ಕಸಿದುಕೊಳ್ಳುವ ಬದುಕಿಗೆ ಮೊಗೆ ಮೊಗೆದು ಕೊಡಲೂ ಗೊತ್ತು. ಎಷ್ಟೇ ಒಲ್ಲೆನೆಂದರೂ ಚೂರಾದ್ರೂ ಪ್ರೀತಿ ಆಳದಲ್ಲಿದ್ದೇ ಇರುತ್ತದಲ್ಲ ಹಾಗೆ. ಕಾಯಬೇಕು ಆ ದಿವ್ಯ ಕ್ಷಣಕ್ಕೆ.

ನಾವು ಏನನ್ನು ಯೋಚಿಸುತ್ತೇವೆಯೋ ಅದರ ಪ್ರತಿಫಲನವೇ ಬದುಕು. ಜೀವನ ಕಷ್ಟವೋ, ಸುಲಭವೋ ಆಗಿರುವುದಿಲ್ಲ. ಸರಳತೆ ಹಾಗೂ ಕ್ಲಿಷ್ಟತೆಗಳೆರಡೂ ಮೂಡುವುದು ಮನದಲ್ಲಿಯೇ. ಸರಳವಾದ ಬದುಕನ್ನು ಕ್ಲಿಷ್ಟವಾಗಿಸುತ್ತೇವೆ. ಕ್ಲಿಷ್ಟವಾಗಿಸಿದಷ್ಟೂ ಸಂಭ್ರಮಿಸುತ್ತಿರುತ್ತೇವೆ. ಮಣಭಾರವನ್ನು ಸುಖಾಸುಮ್ಮನೆ ಹೊತ್ತುಕೊಳ್ಳುವುದು ಅಂದರೆ ಹೀಗೇನೇ ಇರಬೇಕು? ಬಾಳಿಗೊಂದು ರೂಪ ಮತ್ತು ನೆಲೆಯನ್ನು ಕಲ್ಪಿಸಿಕೊಡುವುದು ಆಯ್ಕೆ. ಆಯ್ಕೆಯ ಸ್ವಾತಂತ್ರ್ಯವೂ ನಮ್ಮದೇ. ಅಂತಹ ಸ್ವಾತಂತ್ರ್ಯವು ಬದುಕಲ್ಲಿ ಕೊರಗುಗಳಿಲ್ಲದೆ ಬಾಳುವಂತೆ ನಮ್ಮನ್ನು ಮುನ್ನಡೆಸಬೇಕು.

ಇನ್ನೊಬ್ಬರ ಸಂತಸದ ಮೇಲೆ ಹಕ್ಕನ್ನು ಸ್ಥಾಪಿಸುವ ಬದಲು ಬಂಧವನ್ನು ಬೆಳೆಸುವುದರತ್ತ ಗಮನ ಕೊಟ್ಟರೆ ಬಹಳಷ್ಟು ಸಮಸ್ಯೆಗಳು ಹುಟ್ಟುವುದೂ ಇಲ್ಲ ಜೊತೆಗೆ ಬಂಧಗಳು ಕಮರುವುದೂ ಇಲ್ಲ. ಆದರೇನು ಮಾಡೋಣ, ಹಕ್ಕು ಸ್ಥಾಪಿಸುವ ಹುಚ್ಚು ಬಿಡಬೇಕಲ್ಲ. ಬದುಕಿನ ಏಳಿಗೆಗೆ ಕೆಲವೊಂದು ಹುಚ್ಚಿರಬೇಕು ನಿಜ. ಆದರೆ ಅದೇ ಹುಚ್ಚು ಹೆಚ್ಚಾದರೆ ಹೊರಟು ಬಂದತ್ತ ತಿರುಗಿ ನಡೆಯಬೇಕಾಗುತ್ತದೆ.

ಖುಷಿಯಾಗಿದ್ದಾಗ ಬದುಕು ಉತ್ತಮವಾಗಿರುತ್ತದೆ. ನಮ್ಮಿಂದ ಇತರರು ಖುಷಿಯಾಗಿ ಆನಂದದಿಂದ ಇರುತ್ತಾರೆ. ನೋಡಿ, ಆಗ ಬದುಕು ಅದರ ಅತ್ಯುತ್ತಮ ಸ್ಥಿತಿಯಲ್ಲಿರುತ್ತದೆ. ಪೊರೆಯನ್ನು ಕಳಚಿಕೊಳ್ಳುತ್ತಲೇ ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಬೇಕು. ವಿಶೇಷವಾಗಿ ಯಾವುದು ಬೇಕು ಮತ್ತು ಬೇಡ ಎಂಬೆರಡು ಆಯ್ಕೆಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು. ಒಳಗಿನ ನೋವು, ಬೇಗುದಿಗಳನ್ನು ಅರಿತು ಜೊತೆಯಲ್ಲಿ ನಡೆಯುವ ಸಹೃದಯರು ಬಾಳಲ್ಲಿರಬೇಕು. ಅಂತಹ ಬಂಧ ಐಸ್ ಕ್ಯೂಬ್ ನಂತೆ; ಅದನ್ನು ಒಡೆಯಿರಿ, ಪುಡಿಮಾಡಿರಿ, ಹಿಂಡಿರಿ, ತುಂಡುಮಾಡಿ ಇಲ್ಲ ಅರೆಯಿರಿ... ಆದರೂ ಬದುಕನ್ನದು ಚಿಲ್ ಆಗಿಸುತ್ತಲೇ ಇರುತ್ತದೆ.

***************

ಹೂವ ಹಾಸಿದ ದಾರಿಯಲ್ಲಿ ನಡೆಯುವ ಸುಖದ ಹಿಂದಿರುವ ಯಾತನೆ, ಶ್ರಮ ಹೇಳತೀರದ್ದು. ಹಾಗಿದ್ದುಕೊಂಡು ಬೆಳೆದು ಬಂದಾಗ ಪಡಕೊಂಡ ಸಂಪತ್ತು ಪ್ರತಿಷ್ಠೆಯನ್ನು ತೋರಿಸುವಂತದ್ದಾಗಬಾರದು. ಬಂದ ದಾರಿಯನ್ನೊಮ್ಮೆ ತಿರುಗಿನೋಡಿ, ಸಂಪತ್ತಿನ ಜೊತೆಗೆ ಗಣರೂಪದಿ ಜೊತೆಯಲ್ಲಿರುವ ಗುಣಗಳು ಗೋಚರಿಸುತ್ತವೆ. ಅವುಗಳನ್ನು ಬಳಸಿಕೊಳ್ಳಬೇಕು. ಅಪರೂಪಕ್ಕೆನ್ನುವಂತೆ ಹಣ-ಗುಣಗಳೆರಡನ್ನೂ ಹೊಂದಿದ ವಿಶಿಷ್ಟಾತ್ಮಗಳು ನಮ್ಮ ನಡುವೆಯೇ ಇರುತ್ತವೆ. ಆದರೆ ತಮ್ಮನ್ನವು ಬೆಳಕಿಗೆ ಒಡ್ಡಿಕೊಳ್ಳುವುದಿಲ್ಲವಷ್ಟೆ.

ಇತರರು ಪಟ್ಟ ಮತ್ತು ಪಡುವ ಕಷ್ಟವನ್ನು ನಾವು ಪಟ್ಟಿರುವುದಿಲ್ಲ. ಆದರೂ ಕಿವುಚಿಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಗಾಂಧಾರಿಯಂತೆ ಹೊಟ್ಟೆ ಹಿಚುಕುವುದನ್ನು ಬಿಟ್ಟರೆ ದೃಷ್ಟಿ ಹಾಯಿಸಬೇಕಾದತ್ತ ಹಾಯಿಸಲು ಸಾಧ್ಯ. ಪ್ರಜ್ವಲ ಬೆಳಕು ಕತ್ತಲೆಯನ್ನೇ ಕರುಣಿಸುವುದು ಎನ್ನುವುದಕ್ಕೆ ವೇದವ್ಯಾಸರನ್ನು ನೋಡಿ ಬೆಚ್ಚಿ ಕಣ್ಣುಮುಚ್ಚಿಕೊಂಡ ಅಂಬಿಕೆಯ ದೃಷ್ಟಾಂತವನ್ನು ದೃತರಾಷ್ಟ್ರನಲ್ಲಿ ಕಾಣಬಹುದು. ಪ್ರಜ್ವಲ ಬೆಳಕಿಗೆ ಕಣ್ಣೊಡ್ಡಲು ಹೃದಯ ಮನಸ್ಸುಗಳೆರಡನ್ನೂ ತೆರೆದಿಡುವ ಶಕ್ತಿಯಿರಬೇಕು.

***

ಇಂದು ಹೀಗೆ ಇದ್ದೇವೆ ಎಂದ ಮಾತ್ರಕ್ಕೆ ಸವೆದ ಬದುಕನ್ನು, ಹೆಗಲು ಕೊಟ್ಟವರನ್ನು, ತಿದ್ದಿ ತೀಡಿದವರನ್ನು ಮರೆಯುವುದೆಂದರೆ! ಏರಿದ ಏಣಿಯನ್ನು ಜಾಡಿಸಿ ಒಗೆಯುವ ಅದೆಷ್ಟೋ ಮಂದಿ ಸೆರಗಲ್ಲಿ ಕಟ್ಟಿಕೊಂಡ ಕೆಂಡದಂತೆ ಜೊತೆಯಲ್ಲೇ ಇರುತ್ತಾರೆ. ಹಾಗಿದ್ದೂ ಅತಂತ್ರ ಸ್ಥಿತಿಯೊಳಗೆ ನಿತ್ಯವೂ ಹೆಜ್ಜೆ ಹಾಕುತ್ತಿರುತ್ತೇವೆ. ಪರಸ್ಪರರ ಬೆನ್ನನ್ನು ತುರಿಸಿಕೊಂಡು ಬೇಳೆ ಬೇಯಿಸಿಕೊಳ್ಳುವ,ತಮ್ಮ ಕೋಠಿಯೊಳಗೆ ಇದ್ದ ಮಾತ್ರಕ್ಕೆ ಜೈ ಎನ್ನುವ,ಇಲ್ಲದವರನ್ನು ಹಳಿದು ತಾವೇ ಶ್ರೇಷ್ಟರೆನಿಸಿಕೊಳ್ಳುವವರ ದಂಡು ದೊಡ್ಡದೇ ಇದೆ.

ಇವರೆಲ್ಲರೂ ತಾವು ಬಂದ ಹಾದಿಯನ್ನು ಮತ್ತು ತಮ್ಮೊಳಗನ್ನು ನೋಡಿ ಅವಲೋಕಿಸಿಕೊಳ್ಳಬೇಕಾದ ಅಗತ್ಯವಿದೆ. ಕಟ್ಟಿದ ಲೋಕಗಳ ವಾರಸ್ದಾರರಾಗಬಯಸುವ ಈ ಮಂದಿ ಎಂತೆಂತಹ ಪ್ರಭಾವಳಿಗಳನ್ನು ಬಳಸಿ ಹೇಗೆಲ್ಲಾ ಬೆಳೆದು ನಿಂತರು ಎನ್ನುವುದನ್ನು ಆಗಾಗ ಕಂಡುಕೊಳ್ಳುತ್ತಲೇ ಇರಬೇಕು. ಪ್ರತಿಯೊಬ್ಬರೂ ಬೆಳೆದು ಬಂದ ಬಗೆ ಎಂತಹದ್ದು? ಹೇಗೆ? ಎನ್ನುವುದರ ಅರಿವು ಎಲ್ಲರಿಗೂ ಚೆನ್ನಾಗಿಯೇ ತಿಳಿದಿರುತ್ತದೆ. ಬೆರಳೆಣಿಕೆಯ ಮಂದಿ ಮಾತ್ರ ಸ್ವಯಂ ಶಕ್ತಿಯಿಂದಬೆಳೆದು ನಿಂತಿರುತ್ತಾರೆ. ಆದರವರು ಕೋಠಿ-ಕೋಟೆ-ಕೊತ್ತಳೆಗಳನ್ನು ಕಟ್ಟಲೋ ಅಥವಾ ಕಟ್ಟಿರುವವುಗಳ ವಾರಸ್ದಾರರಾಗಲೋ ಬಯಸುವುದಿಲ್ಲ. ಅವರೆಲ್ಲಿದ್ದರೂ, ಹೇಗಿದ್ದರೂ ಬೆಳೆದು ಬೆಳಗುವ ಸ್ವಯಂಭು ಪ್ರತಿಭೆ.

ಒಂದು ಮಟ್ಟಕ್ಕೇರಿದ ಮೇಲೆ ಏನನ್ನಾದರೂ ಮಾಡಬಲ್ಲೆನೆಂಬ ಹುಂಬತನವು ತಿರುಗು ಬಾಣವಾಗಲು ಹೆಚ್ಚಿನ ಹೊತ್ತೇನೂ ಬೇಕಿಲ್ಲ. ಕಣ್ಣೆದುರೇ ಹಲವು ದೃಷ್ಟಾಂತಗಳನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಆದರೂ ಅರ್ಥ ಮಾಡಿಕೊಳ್ಳುವುದಿಲ್ಲ. ಇದರ ಮಧ್ಯೆ ಅರಿತರಿತು ಇರಿಯುವವರಿಗೇನೂ ಕಮ್ಮಿಯಿಲ್ಲ. ಹಾಗೆ ಇರಿದು ಕೊಟ್ಟ ನೋವಿಗೆ ಪ್ರತಿಯಾಗಿ ನೋವನ್ನು ಕೊಡುವ ಪ್ರಸಂಗವಂತೂ ಯಾರಿಗೂ ಬರಲೇಬಾರದು. ಬೇನೆಗಳ ಕನವರಿಕೆಗಳೂ ಇರಬಾರದು. ನಮ್ಮದಲ್ಲದ ನಾಳೆಗಳ ಬಗ್ಗೆ ಹೆಚ್ಚು ಯೋಚಿಸಲೂಬಾರದು.

************

ವಿಪರೀತ ಕೌತುಕಗಳು ತಂದೊಡ್ಡಲಿರುವ ಬೇನೆಯ ಗೊಡವೆಯೇ ಇಲ್ಲದೆ, ಇನ್ನೊಬ್ಬರ ಬದುಕನ್ನು ಪದೇ ಪದೇ ಕೆಣಕಿ, ಇಣುಕಿ ನೋಡುವ ಚಾಳಿಯಾದರೂ ಯಾಕೆ? ಇಷ್ಟಕ್ಕೂ ಇನ್ನೊಬ್ಬರಿಗೆ ಬುದ್ದಿ ಹೇಳುವ ವಿಶಾಲ ಮನಸ್ಸು ತನ್ನೊಳಗೂ ಆಗಾಗ ಇಣುಕು ಹಾಕುವುದಿಲ್ಲವೇಕೆ? ಬದುಕು ಕೊಟ್ಟ ನೋವಿಗೆ ಬದಲಾಗುವುದಕ್ಕಿಂತಲೂ ಹೆಚ್ಚಾಗಿ ನಮ್ಮವರೇ ಕೊಟ್ಟ ನೋವಿಗೆ ಬದಲಾಗುವವರೇ ಅಧಿಕ. ಹತ್ತಿರದವರೇ ಅರ್ಥ ಮಾಡಿಕೊಳ್ಳದಿದ್ದಾಗ ಬೆಳಕಲ್ಲೂ ಕತ್ತಲೆಯನ್ನು ಹೊದ್ದುಕೊಂಡ ಅನುಭವ. ಉಸಿರಿರುವವರೆಗಾದರೂ ಉಸಿರಾಡಬೇಕಲ್ಲ…ಹಾಗಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳದೆ ಪರಿಸರ, ಪರಿಸ್ಥಿತಿಗೆ ಒಗ್ಗಿಸಿಕೊಳ್ಳದೆ ಬೇರೆ ಹಾದಿಯಿಲ್ಲ.

ಎಲ್ಲರೂ ನನ್ನವರೇ ಎಂದು ನೋಡಿಕೊಂಡಷ್ಟೂ ಸಿಕ್ಕಿದ್ದಾದರೂ ಏನೆನ್ನುವ ಪ್ರಶ್ನೆ ಮೂಡಿ ಕಾಡುವುದು ಸಹಜ. ನಿಸ್ವಾರ್ಥದಿಂದ ಮಾಡಿದ್ದೆಲ್ಲವೂ ನೋವನ್ನೇ ಕೊಡುವುದಿದ್ದರೆ ಸ್ವಾರ್ಥಿಯಾಗಿರುವುದು ಲೇಸೇ? ಮತ್ತೆ ಮತ್ತೆ ಮಿಡಿದು ತುಡಿಯುವುದರಲ್ಲಿ ಅರ್ಥವಿದೆಯೇ? ಸಹಜವಾಗಿ ಹೊಮ್ಮುವ ಅನುಕಂಪ, ಪ್ರೀತಿ ಸಹಾಯಗಳಿಗೆಲ್ಲಾ ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ ಬದುಕುವುದು ಬಲುಕಷ್ಟ. ಅಂತಹ ಮನಸ್ಸುಗಳ ಬಾಳಿನುದ್ದಕ್ಕೂ ಲೋಪ, ಶಾಪ, ವಿಲಾಪ, ಪ್ರಲಾಪಗಳ ಆಲಾಪಗಳು ಗುನುಗುನಿಸುತ್ತಿರುತ್ತವೆ.

ಬದುಕಲ್ಲಿ ಪ್ರಶ್ನೆಗಳೇ ಹೆಚ್ಚೆಚ್ಚು ಮುತ್ತಿಕೊಂಡಿರುವ ಸ್ಥಿತಿಯೊಳಗೆ ಬಹಳಷ್ಟು ಬಾರಿ ಉತ್ತರಕ್ಕಾಗಿ ತಡಕಾಡಿದರೂ ಉತ್ತರ ಮಾತ್ರ ಸಿಗದೆ ಪ್ರಶ್ನೆಗಳೇ ಉತ್ತರಗಳಾಗಿ ಬಿಡುವುದುಂಟು. ಏನೇ ಬರಲಿ, ಎಷ್ಟೇ ಇರಲಿ ಮನಸ್ಸಿನ ತೀರದಲ್ಲಿ ಕುಳಿತು ಮಳೆಬಿಲ್ಲ ಕಾಣುವ ಹಂಬಲವನ್ನು ಹಸಿರಾಗಿಟ್ಟುಕೊಳ್ಳಬೇಕು.

(ಕಲಾಕೃತಿ: ರವಿ ಎಸ್. ಕೋಟಗದ್ದೆ)

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...