ಟ್ರಯಲ್ ರೂಮಿನೊಳಗೆ...

Date: 08-12-2023

Location: ಬೆಂಗಳೂರು


''ಏನೇ ಇರಲಿ ಟ್ರಯಲ್ ರೂಂ ಎನ್ನುವ ಮಾಯಾ ಕೋಣೆ ಒಂದು ಅಪಾರ ಕೌತುಕ ಮತ್ತು ಕುತೂಹಲದ ಕೇಂದ್ರ ಬಿಂದುವಂತೂ ಹೌದು. ನಮ್ಮ ದೈನಂದಿನ ಬದುಕಿಗೆ ತನ್ನದೇ ಆದ ಬದಲಾವಣೆಯ ಕೊಡುಗೆ ನೀಡಿರುವ ಈ ಟ್ರಯಲ್ ರೂಮ್ಗಳು ನಮ್ಮ ಕವಿಮನಸುಗಳನ್ನು ಕಾಡಲಿಲ್ಲವಾ ಎಂದು ನೋಡುವಾಗ ಎರೆಡು ಕವಿತೆಗಳು ಕಣ್ಣಿಗೆ ಬಿದ್ದವು,'' ಎನ್ನುತ್ತಾರೆ ಲೇಖಕಿ ಆಶಾ ಜಗದೀಶ್. ಅವರು ತಮ್ಮ ‘ಚಿತ್ತ ಪೃಥವಿಯಲ್ಲಿ’ ಹೊಸ ಅಂಕಣಕ್ಕೆ ಬರೆದ ‘ಟ್ರಯಲ್ ರೂಮಿನೊಳಗೆ...’ ಲೇಖನ ನಿಮ್ಮ ಓದಿಗಾಗಿ.

ಟ್ರಯಲ್ ರೂಮಿನೊಳಗೆ...

ಬಹುಶಃ ನಮ್ಮ ಜನರೇಶನ್ ಗೆ ಈ ಟ್ರಯಲ್ ರೂಂ ಎನ್ನುವುದೊಂದು ಅದ್ಭುತವೇ ಸರಿ. ನಾವೆಲ್ಲ ಚಿಕ್ಕವರಿದ್ದಾಗ ಅಂಗಡಿಗೆ ಹೋಗಿ, ಅಂಗಡಿಯವನ ಬಳಿ ನನಗೊಂದು ಡ್ರೆಸ್ ಬೇಕು ಅಂತ ಕೇಳಿ, ಫ್ರಾಕೋ ಮಿಡಿಯೋ ಅಂತ ತಿಳಿಸಿ ಕಣ್ಣರಳಿಸಿಕೊಂಡು ನಿಲ್ಲುತ್ತಿದ್ದೆವು. ಬಟ್ಟೆ ತೋರಿಸುವ ಆ ಅವ ನಮ್ಮನ್ನು ಕಣ್ಣಲ್ಲೇ ಅಡಿಯಿಂದ ಮುಡಿವರೆಗೂ ಅಳತೆ ಮಾಡಿ ಬಟ್ಟೆ ತೆಗೆದು ತೋರಿಸುತ್ತಿದ್ದ. ಅಪ್ಪ ಅಮ್ಮ ಅವನ್ನು ನಮ್ಮ ಹಿಂಭಾಗದಿಂದ ಬೆನ್ನಿನ ಮೇಲೆ ಹಿಡಿದು ಸೈಜ್ ಸರಿ ಹೋಗುತ್ತದೆ ಎಂದುಕೊಂಡು ಇದಿರಲಿ ಅದಿರಲಿ ಎನ್ನುತ್ತಾ ನಮಗೆ ಇಷ್ಟವಿರುವುದು ಸಿಗದೆ, ಇಷ್ಟವಿರದಿದ್ದನ್ನು ಬಿಟ್ಟು ಬರದೆ ಯಾವುದೋ ಒಂದು ಅಂತ ತಂದಾದ ಮೇಲೂ ತಕರಾರುಗಳು ಉಳಿದೇ ಇರುತ್ತಿದ್ದವು. ಚಿಕ್ಕದಾದರೆ ಮರಳಿ ಅಂಗಡಿಗೆ ಹೋಗಿ ಬದಲಿಸಿಕೊಂಡು, ದೊಡ್ಡದಾರೆ ಎರೆಡು ದಿನ ಹೆಚ್ಚೇ ಬಾಳಿಕೆ ಬರುತ್ತದೆಂದು ಎತ್ತಿಟ್ಟುಕೊಂಡು ಹೊಸ ಬಟ್ಟೆ ಕೊಳ್ಳುವ ಮತ್ತು ಕೊಂಡದ್ದರ ಸಾರ್ಥಕತೆಯನ್ನು ಅನುಭವಿಸುತ್ತಿದ್ದೆವು.

ಆದರೀಗ ಹಾಗಲ್ಲ. ಯಾವುದೇ ಅಂಗಡಿಗೆ ಹೋಗಲಿ ಮೊದಲು ಟ್ರಯಲ್ ರೂಂ ಹುಡುಕುತ್ತೇವೆ. ಇನ್ನು ಸೈಜ಼್ ಗಳಂತೂ ಪ್ರತಿ ಬಟ್ಟೆಯ ಮೇಲೂ ನಮೂದಿಸಲ್ಪಟ್ಟಿರುತ್ತದೆ. ಆದರೂ ನಾವು ಟ್ರಯಲ್ ನೋಡಿಯೇ ಬಟ್ಟೆ ಕೊಳ್ಳುವುದು. ಟ್ರಯಲ್ ನೋಡುವುದಕ್ಕೆ ದುಡ್ಡು ಕೊಡಬೇಕಿಲ್ಲವಲ್ಲ. ಟ್ರಯಲ್ ರೂಂ ಗಳು ಬಂದಾದ ಮೇಲೆ ಬಟ್ಟೆ ಕೊಳ್ಳುವುದು ಸುಲಭ ಎನ್ನುವುದಕ್ಕಿಂತಲೂ ಆಸಕ್ತಿದಾಯಕವಾಗಿಬಿಟ್ಟಿದೆ. ಅಷ್ಟೇ ಕಷ್ಟವೂ ಇದೆ ಅಂತಲೂ ಹೇಳಬಹುದು. ಕಾರಣ ಆಯ್ಕೆಗಳು ಜಾಸ್ತಿ ಇದ್ದಾಗ ಆಗುವ ಗೊಂದಲ ಮತ್ತು ತೊಂದರೆಗಳೂ ಭಿನ್ನವೇ. ಇನ್ನು ಸೋಶಿಯಲ್ ಮೀಡಿಯಾ ಕ್ರೇಜ಼್ ಇರುವ ಕೆಲವರಂತೂ ಸುಮ್ಮ ಸುಮ್ಮನೇ ಅಂಗಡಿಗೆ ಹೋಗಿ ಎಪ್ಪತ್ತಾರು ಬಟ್ಟೆಗಳನ್ನು ಟ್ರೈ ಮಾಡಿ ಟ್ರಯಲ್ ರೂಮಿನಲ್ಲಿಯೇ ಎಲ್ಲ ಬಟ್ಟೆಗಳಲ್ಲಿ ಫೋಟೋಗಳನ್ನು ತೆಗೆದುಕೊಂಡು ಯಾವುದನ್ನೂ ಕೊಳ್ಳದೆ ಬಂದು ಆ ಫೋಟೋಗಳನ್ನೆಲ್ಲ ಏಫ್ಬಿ, ಇನ್ಸ್ಟಾಗೆ ಅಪ್ಲೋಡಿಸಿ ಅದರಲ್ಲೇ ಖುಷಿಪಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಆ ಮನಸ್ಥಿತಿಯಲ್ಲೂ ಪೊಳ್ಳುತನದ ಜೊತೆಗೆ ಅಭಾವ ವೈರಾಗ್ಯವೊಂದು ನಾನಿದ್ದೇನೆ ಎನ್ನುತ್ತದೆ.

ಏನೇ ಇರಲಿ ಟ್ರಯಲ್ ರೂಂ ಎನ್ನುವ ಮಾಯಾ ಕೋಣೆ ಒಂದು ಅಪಾರ ಕೌತುಕ ಮತ್ತು ಕುತೂಹಲದ ಕೇಂದ್ರ ಬಿಂದುವಂತೂ ಹೌದು. ನಮ್ಮ ದೈನಂದಿನ ಬದುಕಿಗೆ ತನ್ನದೇ ಆದ ಬದಲಾವಣೆಯ ಕೊಡುಗೆ ನೀಡಿರುವ ಈ ಟ್ರಯಲ್ ರೂಮ್ಗಳು ನಮ್ಮ ಕವಿಮನಸುಗಳನ್ನು ಕಾಡಲಿಲ್ಲವಾ ಎಂದು ನೋಡುವಾಗ ಎರೆಡು ಕವಿತೆಗಳು ಕಣ್ಣಿಗೆ ಬಿದ್ದವು. ವಿಭಿನ್ನ ನೆಲೆಯಲ್ಲಿ ಹುಟ್ಟಿ ಬಂದಿರುವ ಈ ಎರೆಡು ಕವಿತೆಗಳು ನಮ್ಮನ್ನು ಕಾಡುವ ರೀತಿಯೂ ಭಿನ್ನವೇ ಮತ್ತು ನಮ್ಮಲ್ಲಿ ಹುಟ್ಟಿಸುವ ಪ್ರಶ್ನೆಗಳೂ ಭಿನ್ನವೇ. ಮೊದಲಿಗೆ ಭುವನಾರ 'ಟ್ರಯಲ್ ರೂಮಿನ ಅಪ್ಸರೆಯರು' ಕವಿತೆಯನ್ನು ನೋಡೋಣ...

'ಮನೆಯ ಕನ್ನಡಿಯಲ್ಲಿ
ಎಂದೂ ಅನಾವರಣಗೊಳ್ಳದ ಸುಂದರತೆ
ಯಾವ ಮಾಡೆಲ್ಲಿಗೂ ಕಡಿಮೆಯಿಲ್ಲ ನಾನು
ಟ್ರಯಲ್ ರೂಮಿನ ರಾರಾಜಿತ ಸತ್ಯ
ಸೀಮೆಯೊಳಗೇ
ನಾವೆಲ್ಲ ಟ್ರಯಲ್ ರೂಮಿನ ಅಪ್ಸರೆಯರು'
(ಟ್ರಯಲ್ ರೂಮಿನ ಅಪ್ಸರೆಯರು,
ಭುವನಾ ಹಿರೇಮಠ್)

ಎನ್ನುವ ಈ ಕವಿತೆ ಆಧುನಿಕತೆ ಮತ್ತು ಅತ್ಯಾಧುನಿಕತೆಯ ಮೋಹ ಬಂಧನವಾಗಿ ಸುತ್ತಿಕೊಳ್ಳುವಷ್ಟೇ ವೇಗದಲ್ಲಿ ಅದರ ನಿರರ್ಥಕತೆ ನೆರಳಿನಂತೆ ಹಿಂದೆ ಹಿಂದೆ ಹಿಂದಯೇ ಹಿಂಬಾಲಿಸುತ್ತಾ ಬಂದಿರುವುದನ್ನು ನಿರ್ಲಕ್ಷಿಸುವುದು ಸಾಧ್ಯವೇ ಆಗುವುದಿಲ್ಲ ಎಂಬುದನ್ನು ಒಂದು ಸಣ್ಣ ವಿಷಾದದ ಎಳೆಯೊಟ್ಟಿಗೇ ಹೇಳುತ್ತದೆ. ಆದರೆ ನಾವು ಸಣ್ಣ ಮೋಹಕ್ಕೂ ಪರವಶರಾಗಲು ತಯಾರಾಗಿ ನಿಂತಿದ್ದೇವೆ. ಯಾರೋ ಅಪರಿಚಿತನೊಬ್ಬ "ಬ್ಯೂಟಿಫುಲ್" ಎನ್ನುವ ಸಣ್ಣ ಮಾತನ್ನು ಮೆಲ್ಲಗೆ ಉಸುರಿ ಕಾಣೆಯಾದರೂ ಸಾಕು ನಮಗೆ ಸೋಲಲಿಕ್ಕೆ.

ಆದರೆ ನಿತ್ಯ ಟ್ರಯಲ್ ರೂಮಿನ ಸಂಗದಲ್ಲಿರುವ ಸೇಲ್ಸ್ ಗರ್ಲ್ ದು ಮಾತ್ರ ಅದೆಂತಹ ವೈರಾಗ್ಯ?! ಸೌಂದರ್ಯದ ವ್ಯಾಖ್ಯಾನದಂತಿರುವ ಅವಳ ನೀಳಬೆರಳುಗಳಿಗೆ ಹೊಗಳಿಕೆ ವರ್ಜ್ಯವೇ?! ಸೌಂದರ್ಯ ಲೋಕವೂ ಕಾರ್ಪೊರೇಟಿನ ಜೀತಕ್ಕಿದೆಯೇ?! ಬಗೆಹರಿಯದ ಅವೆಷ್ಟೋ ಪ್ರಶ್ನೆಗಳನ್ನ ಈ ಕವಿತೆ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ ಅನಿಸುತ್ತದೆ. ಲೌಕಿಕದಿಂದ ಅಲೌಕಿಕತೆಗೆ ಜಿಗಿಯುವ ಕವಿತೆಯನ್ನು ಅರ್ಥಕ್ಕೆ ಸಿಲುಕಿಸುವುದೂ ಸಾಹಸವೇ..

ಹೀಗೆ ಟ್ರಯಲ್ ರೂಮಿನಲ್ಲಿ ಹೆಣ್ಣಿನ ದನಿ ದಾಖಲಿತವಾದದ್ದು ಒಂದು ಬಗೆಯ ಅನುಭೂತಿಯದ್ದಾದರೆ ಇತ್ತೀಚೆಗೆ ಓದಿದ ಸದಾಶಿವ ಸೊರಟೂರರ ಟ್ರಯಲ್ ರೂಮಿನ ಪದ್ಯ ಗಂಡೊಬ್ಬ ಟ್ರಯಲ್ ರೂಮಿನಲ್ಲಿ ಅನುಭವಿಸಿದ ಅನುಭೂತಿಯ ರೀತಿಯಿಂದ ಮುಖ್ಯವಾಗುತ್ತದೆ.

ಇಲ್ಲಿ ಕವಿ ಟ್ರಯಲ್ ರೂಮನ್ನು ಹೊಕ್ಕಾಗ ಹೊಸ ಮತ್ತು ಹಳೆಯ ಬಟ್ಟೆಯ ತುಲನೆಯಲ್ಲಿ ತೊಡಗುತ್ತಾರೆ. ಹಳೆಯದನ್ನು ತೊರೆಯುವ ಮನಸಿಲ್ಲ, ಹೊಸದನ್ನು ಅಪ್ಪಲು ಹಿಂಜರಿಕೆ. ಹಳೆಯ ಬಟ್ಟೆಯಲ್ಲಿ ನೆನಪುಗಳಿವೆ ಆದರೆ ಹೊಸ ಬಟ್ಟೆಯಲ್ಲಿ ಕನಸುಗಳಿವೆ. ಯಾರೋ ಬೇಡವೆಂದು ಬಿಟ್ಟು ಹೋದ ಅಂಗಿ ತನಗೆ ಬೇಕಾದದ್ದು ಹೇಗೆ?! One's meat is another one's poison ಎನ್ನುವ ಹಾಗೆ. ಎಲ್ಲವೂ ನಮ್ಮ ನಮ್ಮ ಅಭಿರುಚಿಗಳ ವ್ಯವಹಾರ. ಆದರೆ ಬಿಕರಿಯಾಗುವ ಬಟ್ಟೆಗಳ ಅದೃಷ್ಟದ ಮುಂದೆ ವರ್ಷಗಟ್ಟಲೇ ಕಾದು ಕೊನೆಗೂ ಡೆಡ್ ಸ್ಟಾಕ್ ಗೆ ಬೀಳುವ ಬಟ್ಟೆಗಳ ಭವಿಷ್ಯವೇನು?!

'ಹಳೇದು ಬಿಚ್ಚಿ
ಹೊಸದು ತೊಡುವ ಈ ಅರೆಕ್ಷಣದ
ಮಾಯಾಕದ ಹೊತ್ತಿನಲ್ಲಿ
ಕನ್ನಡಿಯಲ್ಲಿ ಕಾಣುವ ನನ್ನ ಬೆತ್ತಲೆಯೇ
ನನ್ನನ್ನು ಅಣಕಿಸುತ್ತದೆ..'
(ಸದಾಶಿವ ಸೊರಟೂರು)

ಇದು ಅಂತಿಮ ಸತ್ಯ. ಬೆತ್ತಲೆಯಷ್ಟು ಸತ್ಯವಾದದ್ದು ಏನಿದೆ... ನಮ್ಮೆಲ್ಲ ಡೋಂಗಿತನ, ಆಷಾಡಭೂತಿತನ ಪೊರೆ ಕಳಚಿ ನಿಲ್ಲುತ್ತವೆ. ಟ್ರಯಲ್ ರೂಮಿನ ಮೂರು ಬದಿಯ ನಿಲುವುಗನ್ನಡಿಗಳು ಹಂಸಕ್ಷೀರ ನ್ಯಾಯದಂತೆ ನಮ್ಮ ಇಂಚಿಂಚಿಂಚನ್ನೂ ನಮಗೇ ಬಗೆದೋರುತ್ತವೆ. ಆಗ ಅರಿವಾಗುವುದು ನಮ್ಮ ದೇಹ ನಮಗೇ ಎಷ್ಟು ಅಪರಿಚಿತ! ಇನ್ನು ನಾವೆಂದರೆ ನಮ್ಮ ದೇಹ ಎಂದು ಹೇಳುವುದಾದರೂ ಹೇಗೆ ಹೇಳಿ... ಮುಂದುವರೆದು,

'ಹೊಸದು ಸುಲಭಕ್ಕೆ ಹೊಂದುವುದಿಲ್ಲ
ಹಳೆಯದು
ಅಷ್ಟೆ ಸುಲಭಕ್ಕೆ ನಮ್ಮನ್ನು
ತೊರೆಯುವುದಿಲ್ಲ..‌'
(ಸದಾಶಿವ ಸೊರಟೂರು)

ಎನ್ನುತ್ತದೆ ಕವಿತೆ. ಹೊಸದು ಒಂದು ಬಗೆಯ ಕಷ್ಟವಾದರೆ, ಹೊಂದಿಕೊಂಡಾದ ಮೇಲೆ ಹಳೆಯದೇ ಸಲೀಸು ಎನಿಸುವುದು ನಮ್ಮ ಮನಸಿನ ರೀತಿ. ಕಳೆದುಕೊಂಡಾದ ಮೇಲೆ ಮತ್ತೆ ಮತ್ತೆ ಕಳೆದದ್ದನ್ನೇ ಹಂಬಲಿಸುವುದೂ ಸಹ... ಆದರೆ ಉಪಾಯವಿಲ್ಲ, ಹೊಸದಕ್ಕೆ ಹೊಂದದೆ ವಿಧಿಯಿಲ್ಲ ಎನಿಸಿದಾಗ ಮನಸು ಹೊಂದಿಕೊಳ್ಳಲು ಸಿದ್ಧವಾಗುತ್ತದೆ. ಮತ್ತದಕ್ಕೆ ನಮ್ಮತನವನ್ನು ಹಚ್ಚುತ್ತಾ, ಉಣಿಸುತ್ತಾ, ಬಳಿಯುತ್ತಾ ನಮ್ಮದೇ ಆಗಿಸಿಕೊಳ್ಳತೊಡಗುವ ಮನಸಿನ ರೀತಿಗೆ ಬೆರಗೆನಿಸುತ್ತದೆ. ಪರಿಪೂರ್ಣ ಎನ್ನುವ ವಸ್ತುಗಳಿಗಿಂತ ಅಪೂರ್ಣ ವಸ್ತುಗಳೇ ಮನಸಿಗೆ ಹಿಡಿಸುವುದೂ ಒಂದು ವೈಕಲ್ಯತೆಯಾ?! ಅಥವಾ ಬದುಕಿನ ರೀತಿಯಾ?! ಟ್ರಯಲ್ ರೂಮಿನೊಳಗೆ ಹೊಕ್ಕ ಕವಿ ವೇದಾಂತಿಯಾಗುತ್ತಾ ಸಾಗುವುದು ಮತ್ತು ಜಿಜ್ಞಾಸೆಯೊಂದು ಉಳಿದು ಕಾಡುವುದು ಕಾಕತಾಳೀಯವೇನಲ್ಲ. ಕವಿ ದಾರ್ಶನಿಕನೂ ಆಗಬಹುದು ಇತಿಹಾಸ ತಜ್ಞನೂ ಆಗಬಹುದು, ಸಂದರ್ಭ ಬಯಸಿದಂತೆ ಏನಾದರೂ ಆಗಬಹುದು. ಆದರೆ ಕವಿತೆಯ ಕೊನೆಯ ಈ ಸಾಲುಗಳಿಗೆ ಮಾತ್ರ ಉತ್ತರ ಕಂಡುಕೊಳ್ಳುವುದು ಕಡು ಕಷ್ಟವೇ...

ಹೇಳಿ ಬದುಕೆಂದರೆ
ಕಳಚಿ ತೊಡುವುದೊ?
ತೊಟ್ಟು ಕಳಚುವುದೊ?
ಅಥವಾ ಎರಡರ ಮಧ್ಯೆ
ಇಷ್ಟೆಷ್ಟೆ ಬೆತ್ತಲಾಗುವುದೊ..!?
(ಸದಾಶಿವ ಸೊರಟೂರು, )

-ಆಶಾ ಜಗದೀಶ್

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...