ಉತ್ತಮ ಸಾಹಿತ್ಯ ಪೋಷಣೆ: ಪ್ರಕಾಶನ-ಸಂಪಾದನೆಯ ಹೊಣೆಗೆ ಮಾದರಿ ‘ನಾನು ಮೆಚ್ಚಿದ ನನ್ನ ಕಥೆ’ 


‘ನಾನು ಮೆಚ್ಚಿದ ನನ್ನ ಕಥೆ’ ಒಂದೇ ಶೀರ್ಷಿಕೆಯಡಿ ರಾಜ್ಯದ ವಿವಿಧೆಡೆಯಿಂದ ಆಹ್ವಾನಿತ 150 ಲೇಖಕರ 150 ಕಥೆಗಳನ್ನು ಪ್ರಕಟಿಸುವ ಪ್ರಕಾಶಕರ ಹಾಗೂ ಸಂಪಾದಕರ ಮನೋಸ್ಥೈರ್ಯವು ಸಾಹಿತ್ಯ ಹಾಗೂ ಸಂಶೋಧನಾತ್ಮಕ ಅಧ್ಯಯನಕ್ಕೆ ಉತ್ತಮ ಕೊಡುಗೆಯಾಗಿ ಪರಿವರ್ತನೆಗೊಂಡ ಪರಿಯ ಸೌಂದರ್ಯವನ್ನು ಇಲ್ಲಿ ಕಾಣಬಹುದು. ಕಥೆಗಾರರೇ ಮೆಚ್ಚಿದ ಈ ಕಥೆಗಳ ವಿಮರ್ಶೆಗಾಗಿ ಓದುಗರ ಕೈಗೆ ನೀಡುವ ವಿನೂತನ ಪ್ರಯೋಗಶೀಲತೆಯು ಪ್ರಕಾಶನ ಹಾಗೂ ಸಂಪಾದನಾ ವಲಯದ ಕ್ರಿಯಾಶೀಲ ಹಾಗೂ ಆರೋಗ್ಯಕರ ಬೆಳವಣಿಗೆಯೂ ಆಗಿದೆ ಎಂದು ಪತ್ರಕರ್ತ ವೆಂಕಟೇಶ ಮಾನು ಅಭಿಪ್ರಾಯಪಟ್ಟಿದ್ದಾರೆ.

‘ನಾನು ಮೆಚ್ಚಿದ ನನ್ನ ಕಥೆ’ ಎಂಬುದು ಬೆಂಗಳೂರಿನ ನಿವೇದಿತ ಪ್ರಕಾಶನವು ನಿವೇದಿತ ಸಾಹಿತ್ಯ ಮಾಲಿಕೆಯಡಿ ಪ್ರಕಟವಾದ ಸರಣಿ ರೂಪದ 4 ಕಥಾ ಸಂಕಲನಗಳು. ಲೇಖಕರಾದ ಸ. ರಘುನಾಥ ಹಾಗೂ ಆರ್. ವಿಜಯರಾಘವನ್ ಸಂಪಾದಿಸಿದ್ದು, ಪ್ರತಿ ಕಥಾ ಸಂಕಲನದ ಪೈಕಿ ಸಂಪುಟ-1 ಕೃತಿಯು 41 ಕಥೆಗಳನ್ನು ಹೊರತು ಪಡಿಸಿದರೆ ಉಳಿದ ಮೂರು ಸಂಕಲನಗಳು ಹೆಚ್ಚು-ಕಡಿಮೆ ಸರಾಸರಿ 34-39 ಕಥೆಗಳನ್ನು ಒಳಗೊಂಡಿವೆ. ರಾಜ್ಯದ ವಿವಿಧೆಡೆಯಿಂದ ತರಿಸಿಕೊಂಡ ಕಥೆಗಳ ಸಂಕಲನವಾದರೂ ‘ನಾನು ಮೆಚ್ಚಿದ ನನ್ನ ಕಥೆ’ ಸರಣಿ ಸಂಪುಟಗಳ ಈ ಕೃತಿಗಳು ತಮ್ಮ ವಿಶಿಷ್ಟ- ಉದ್ದೇಶಿತ ಗುರಿಯೊಂದಿಗೆ ವಿಭಿನ್ನವಾಗಿವೆ.

  1. ಜಿಲ್ಲಾವಾರು ಕಥೆಗಾರರ ಕಥೆಗಳನ್ನು ಪ್ರಕಟಿಸಿ, ಪ್ರಾದೇಶಿಕವಾಗಿ ಸಾಹಿತ್ಯಕ ಸಾಮಿಪ್ಯ ಹಾಗೂ ವೈರುಧ್ಯಗಳನ್ನು ಕಂಡುಕೊಳ್ಳುವ ಮಿತಿಯನ್ನು ರಾಜ್ಯ ವ್ಯಾಪಿಯಾಗಿ ವಿಸ್ತರಿಸಿದ್ದರ ಪರಿಣಾಮ ಈ ಕೃತಿಯ ಅಧ್ಯಯನದ ಮೌಲ್ಯ ಹೆಚ್ಚಿದೆ.

  1. ಕಥೆಗಾರರಾಗಿ ತಾವೇ ಮೆಚ್ಚಿದ ತಮ್ಮ ಕಥೆಯನ್ನು ಈ ಸಂಪುಟಕ್ಕೆ ಕಳುಹಿಸಿದ್ದು. ಏಕೆ ತಮಗೆ ಈ ಕಥೆ ಇಷ್ಟ ಎಂಬ ಬಗ್ಗೆಯೂ ಕಥೆಗಾರರಿಂದ ಅಭಿಪ್ರಾಯ ಪಡೆದು, ಪರಿಶೀಲಿಸಿದ್ದು. ಈ ಕಾರಣಕ್ಕಾಗಿಯೇ, ಸರಣಿ ಸಂಪುಟಗಳಿಗೆ ‘ನಾನು ಮೆಚ್ಚಿದ ನನ್ನ ಕಥೆ’ ಎಂಬ ಮುಖಪುಟದ ಮುಖ್ಯ ಶೀರ್ಷಿಕೆಯು, ಓದುಗರ ವಿಮರ್ಶೆಯ ನೋಟವನ್ನು ತೀಕ್ಷ್ಣಗೊಳಿಸುತ್ತದೆ.

  1. ಉತ್ತರ ಕರ್ನಾಟಕದಲ್ಲಿ ಕಥಾ ಸಾಹಿತ್ಯದ ಸೃಷ್ಟಿ ದಕ್ಷಿಣಕ್ಕಿಂತ ಹುಲುಸಾಗಿದೆ. ಹೊಸಬರ ಸಂಖ್ಯೆ ಗಣನೀಯವಾಗಿದೆ. ಜಾಗತೀಕರಣದ ವಿವೇಚನೆ ದಕ್ಷಿಣದಲ್ಲಿ ಜಾಸ್ತಿ. ಕರಾವಳಿ ಭಾಗದ ಕಥೆಗಳು ಬದುಕನ್ನು ಹಾಗೂ ಪಲ್ಲಟಗಳನ್ನು ಕುರಿತು ಚಿಂತಿಸಿವೆ ಎಂಬುದು ಸಂಪಾದಕರ ಅಭಿಪ್ರಾಯ. ಕಥೆಯ ವಸ್ತು ವೈವಿಧ್ಯತೆ, ಭಾಷೆ, ಸಂಸ್ಕೃತಿ ಚಿಂತನೆಯ ( ಆಧುನಿಕ ಹಾಗೂ ಆಧುನಿಕ ಪೂರ್ವ ಕಾಲದ ಪರಂಪರೆ -ಸಂಸ್ಕಾರದ ಕಥೆಗಳು, ಪ್ರತಿರೋಧ ಒಡ್ಡುವ ಕಥೆಗಳು, ಸ್ತ್ರೀ ಸಂವೇದನೆಯ ಕಥೆಗಳು, ಜಾನಪದ-ಗ್ರಾಂಥಿಕ ಭಾಷೆಗಳ ಸಮನ್ವಯದ ನಿರೂಪಣಾ ಶೈಲಿ ಇತ್ಯಾದಿ) ಮೂಲಕ ಅಧ್ಯಯನಕ್ಕೆ ವಿನೂತನ ದೃಷ್ಟಿಕೋನವನ್ನು ಹಾಗೂ ಕನ್ನಡ ಕಥೆಗಳ ವಿಕಾಸದ ಪರಿಯನ್ನು ಗುರುತಿಸಲು ಸಾಧ್ಯವಾಗಿದೆ.

  1. ಜಾಗತೀಕರಣದಂತಹ ಬಿರುಗಾಳಿ ಮಧ್ಯೆಯೂ ವಾದ-ಸಿದ್ಧಾಂತಗಳ ಗೊಡವೆಗಳಿಗೆ ಕಟ್ಟು ಬೀಳದೇ ಸ್ವತಂತ್ರ ಮನೋಭಾವದ ಆಭಿವ್ಯಕ್ತಿಯ ಕಥೆಗಳ ಮೂಲಕ ಸಮಾನತೆಯ ಜೀವ ಪರ ನೆಲೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹವಣಿಸುವ ಕಥೆಗಾರರ ಹಂಬಲ, ಸಾಹಿತ್ಯ ಸೃಷ್ಟಿಯ ಉದ್ದೇಶವನ್ನು ವಿವಿಧ ಆಯಾಮಗಳಿಂದ ವಿಶ್ಲೇಷಿಸಬಹುದು.

  1. ಇತಿಹಾಸದ ವೈಚಾರಿಕತೆ, ಸಾಮಾಜಿಕ ಮೌಲ್ಯಗಳನ್ನು ಬದಲಾಗುವ ವರ್ತಮಾನದೊಂದಿಗೆೆ ಸಮೀಕರಿಸುವ ಸಂಘರ್ಷ, ಕುತೂಹಲ, ತರ್ಕ, ಸಂಶಯ ಎಲ್ಲವೂ ಇಲ್ಲಿಯ ಕಥೆಗಳ ಜೀವಾಳ. ಆದ್ದರಿಂದ, ಓದುಗರ ವಿಮರ್ಶೆ-ವಿಶ್ಲೇಷಣೆಗೆ ಸವಾಲೊಡ್ಡುತ್ತವೆ.

  1. ಸುಮಾರು 150 ಕಥೆಗಾರರ 150 ಕಥೆಗಳನ್ನು ಏಕಕಾಲಕ್ಕೆ ಪ್ರಕಾಶಿಸುವ ಮನಸ್ಥೈರ್ಯವನ್ನು ಕನ್ನಡ ಕಥೆಗಳ ಸಂಗ್ರಹಕ್ಕಾಗಿ ಬಳಸಿಕೊಂಡ ಪ್ರಕಾಶಕರ-ಸಂಪಾದಕರ ಕನ್ನಡ ಸಾಹಿತ್ಯ ಕಳಕಳಿಗೆ ಹಿಡಿದ ಕನ್ನಡಿ.

ಕೇವಲ ಕಥೆಗಳ ಸಂಗ್ರಹಿತ ಸಂಪುಟಗಳ ಸರಣಿ ಮಾತ್ರವಲ್ಲ; ಈ ಮೇಲಿನ ಎಲ್ಲ ಆಯಾಮಗಳ ಅಧ್ಯಯನಕ್ಕೆ ಸೂಕ್ತ ಚಿಂತನಾ ಪ್ರೇರಣೆಗಳಿವು. ನವೋದಯ, ಆಧುನಿಕ ಕಥೆಗಳು ತಮ್ಮದೇ ದೃಷ್ಟಿಕೋನದೊಂದಿಗೆ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಪರಿಯನ್ನು, ಅವುಗಳ ಅನಿವಾರ್ಯತೆ ಹಾಗೂ ಅಗತ್ಯತೆಯನ್ನು ಸಮರ್ಥಿಸಿಕೊಳ್ಳುತ್ತವೆ. ಜೊತೆಗೆ ವಿಮರ್ಶಿಸುತ್ತವೆ; ಹೀಗಾಗಿ, ಕಥೆಗಾರರೇ ಮೆಚ್ಚಿಕೊಂಡ ಕಥೆಗಳನ್ನು ಸಂಗ್ರಹಿಸುವ ಮೂಲಕ ಅವರ ದೃಷ್ಟಿಕೋನವನ್ನು ಓದುಗರ ಮುಂದಿಡುವ ಸಂಪಾದಕರ ಪ್ರಯತ್ನವು ವಿನೂತನ; ಇದು ಸರಣಿ ರೂಪದ ಈ ಪುಸ್ತಕಗಳ ವೈಶಿಷ್ಟ್ಯವೂ ಹೌದು. ಉತ್ತಮ ಗುಣಮಟ್ಟದ ಸಾಹಿತ್ಯ ಪೋಷಣೆ-ಬೆಳವಣಿಗೆಯಲ್ಲಿ ಪ್ರಕಾಶಕರ ಹಾಗೂ ಸಂಪಾದಕರ ಹೊಣೆಗಾರಿಕೆಯನ್ನು ಎಚ್ಚರಿಸುವ ಮಾದರಿಯೂ ಆಗಿದೆ.

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...