ಉತ್ತೇಜನ ಅಥವಾ ಪ್ರೋತ್ಸಾಹ ಆಧುನಿಕ ಜೀವನದ ಅಡಿಗಲ್ಲು


‘ನಾವು ಏನು ಮಾಡಬೇಕು ಎಂಬ ವಿಚಾರವನ್ನು ಎಂದೂ ಅರ್ಥಶಾಸ್ತ್ರ ಹೇಳುವುದಿಲ್ಲ. ಅದು ನಾವು ಏನು ಮಾಡುತ್ತೇವೆ ಎಂಬುದನ್ನು ವಿಶ್ಲೇಷಿಸಿ ನಮ್ಮ ನಿರ್ಧಾರಗಳ ಪರಿಣಾಮವನ್ನು ಅರಿಯಲು ಪ್ರಯತ್ನಿಸುತ್ತದೆ’ಎನ್ನುತ್ತಾರೆ ವಿ.ಕೆ. ತಾಳಿತ್ತಾಯ. ಅವರು ‘ಅರ್ಥಶಾಸ್ತ್ರದ ಪರಿಕಲ್ಪನೆಗಳು’ ಕೃತಿಗೆ ಬರೆದ ಪ್ರಸ್ತಾವನೆ ಇಲ್ಲಿದೆ.

ನಿರಂತರ ಅಭಾವವಾಗಿರುವ ಸಂಪನ್ಮೂಲಗಳನ್ನು ನಮ್ಮ ಅಪರಿಮಿತ ಬೇಡಿಕೆಗಳ ಪೂರೈಕೆಗೆ ಹೇಗೆ ಬಳಸುತ್ತೇವೆ? ಎಂಬುದರ ಅಧ್ಯಯನವೇ ಅರ್ಥಶಾಸ್ತ್ರದ ಮೂಲತತ್ವ, ಒಂದು ಕಾಲ್ಪನಿಕ ಸನ್ನಿವೇಶವನ್ನು ಯೋಚಿಸಿ. ನಿಮ್ಮ ಕನಸಲ್ಲಿ ಕಾಣಿಸಿಕೊಂಡ ಜಿನ್ನಿ ನಿಮಗೊಂದು ದೀಪವನ್ನು ಕೊಡುತ್ತಾನೆ - ಹೌದು, ಅಲ್ಲಾವುದ್ದೀನನ ದೀಪ. ಅದನ್ನು ನಿಮ್ಮ ಬೆರಳಿನಿಂದ ಉಜ್ಜಿದರೆ ನಿಮಗೆ ಏನು ಬೇಕೋ ಅದು ನೀವು ಅಪೇಕ್ಷಿಸಿದಂತೆ ನಿಮ್ಮ ಕೈಸೇರುತ್ತದೆ. ಆಹಾರ ಸಾಮಗ್ರಿಗಳಿರಲಿ, ಉಡುಗೆ ತೊಡುಗೆಗಳಿರಲಿ, ಮನರಂಜನೆಗೆ ಬೇಕಾದ ಸಿನೆಮಾ, ಇನ್ನಿತರ ಯಾವುದೇ ಬೇಡಿಕೆಗಳಿರಲಿ, ಅಮಿತವಾಗಿ ದೊರಕುತ್ತವೆ. ಇಂತಹ ದೀಪ ಪ್ರತಿಯೊಬ್ಬರಲ್ಲೂ ಇದ್ದರೆ ಎಲ್ಲರಿಗೂ ಏನು ಬೇಕೋ ಅವೆಲ್ಲವೂ ಸಲೀಸಾಗಿ ದೊರಕುತ್ತವೆ. ಮಾಲುಗಳಿಗೆ ನೀವು ಹೋಗುವ ಅವಶ್ಯಕತೆಯಿಲ್ಲ. ಬೆಲೆ ಬಗ್ಗೆ ಚೌಕಾಶಿ ಮಾಡಬೇಕಾಗಿಲ್ಲ. ಎಲ್ಲಕ್ಕೂ ಮಿಗಿಲಾಗಿ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಹಣದ ಚೀಲವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವ ಅವಶ್ಯಕತೆಯೇ ಇಲ್ಲ. ಈ ಸನ್ನಿವೇಶದಲ್ಲಿ ನಾವು 'ಹಣ' ಎಂದು ಯಾವುದನ್ನು ಕರೆಯುತ್ತೇವೋ ಅದರ ಉಪಯೋಗವಾದರೂ ಏನಿರಬಹುದು? ಇಲ್ಲಿ ಹಣದ ಉಪಯೋಗವಿಲ್ಲ; ಸಾಮಗ್ರಿಗಳನ್ನು ಮತ್ತು ಸೇವೆಗಳನ್ನು ಪಡೆಯಲು ಬೆಲೆ ಕೊಡುವ ಅವಶ್ಯವಿಲ್ಲ. ಇಲ್ಲಿ ವ್ಯಾಪಾರ ಎಂಬುದೇ ಇಲ್ಲ. ಎಲ್ಲವೂ ಯಾವುದೋ ಪ್ರಕ್ರಿಯೆಯಿಂದಾಗಿ ನಮ್ಮ ಮನೆಯ ಪಕ್ಕದ ಎಟಿಎಂನಂತಹ ಒಂದು ಸಲಕರಣೆಯ ಮೂಲಕ ನಮಗೆ ದೊರಕುತ್ತದೆ. ಇಲ್ಲಿ ಅರ್ಥಶಾಸ್ತ್ರವಿರಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ಬೇಡಿಕೆಗಳಿಗೆ ಮಿತಿಯಿರದಿದ್ದರೂ ಅವುಗಳ ಪೂರೈಕೆ ಮಿತಿಯಿಲ್ಲದೇ ಜರುಗುತ್ತದೆ. ಬೇಡಿಕೆಗಳಿಗೆ ಸಮನಾಗಿ ಎಲ್ಲವೂ ಪೂರೈಕೆಯಾಗುತ್ತವೆ. ಇದು ಅರ್ಥಶಾಸ್ತ್ರವಿಲ್ಲದ ಸ್ಥಿತಿ. ಕೇವಲ ಕಾಲ್ಪನಿಕ ಅಷ್ಟೇ. ವಾಸ್ತವದಲ್ಲಿ ಹೀಗಿರಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮೊಡನೆ ಅಲ್ಲಾವುದ್ದೀನನ ದೀಪವಿಲ್ಲ.

ನಮ್ಮ ಈ ಪ್ರಪಂಚದಲ್ಲಿ ಸಂಪನ್ಮೂಲಗಳು ಮಿತವಾಗಿವೆ. ಸಂಪನ್ಮೂಲಗಳ ಕೊರತೆಯಿಂದ ನಮ್ಮ ಬೇಡಿಕೆಗಳ ಪೂರೈಕೆಯೂ ಮಿತವಾಗಿರುತ್ತದೆ. ಆದರೆ ನಮ್ಮ ಬೇಡಿಕೆಗಳು ಅಮಿತವಾಗಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ಬೇಡಿಕೆಗಳಲ್ಲಿ ಎಷ್ಟು ಬೇಡಿಕೆಗಳನ್ನು ಎಷ್ಟರ ಮಟ್ಟಿಗೆ ಮತ್ತು ಹೇಗೆ ಪೂರೈಸಬಹುದು ಎಂಬುದನ್ನು ನಿರ್ಧರಿಸುವ ವಿಧಾನ ಇರಲೇ ಬೇಕು. ಅಂತೆಯೇ ನಮ್ಮಲ್ಲಿರುವ ಮಿತ ಸಂಪನ್ಮೂಲಗಳನ್ನು ಹಲವು ಬೇಡಿಕೆಗಳನ್ನು ಪೂರೈಕೆಗೆ ಹೇಗೆ ಹಂಚಿಕೆ ಮಾಡುತ್ತೇವೆ, ಯಾವ ಬೇಡಿಕೆಗೆ ಆದ್ಯತೆ ಕೊಡಬೇಕು, ಯಾವುದನ್ನು ಇನ್ನೊಂದು ದಿನಕ್ಕೆ ಕಾದಿರಿಸಬೇಕು ಮತ್ತು ಯಾವುದನ್ನು ಕೈಬಿಡಬೇಕು? ಇವೆಲ್ಲ ಮಿತವಾದ ಸಂಪನ್ಮೂಲಗಳನ್ನು ನಮ್ಮ ಬೇಡಿಕೆಗಳ ಪೂರೈಕೆಗೆ ಬಳಸುವ ಪ್ರಕ್ರಿಯೆ, ಆ ಪ್ರಕ್ರಿಯೆ ನಮ್ಮ ಬೇಡಿಕೆಗಳು ಮತ್ತು ಅವುಗಳ ಪೂರೈಕೆ - ಇವುಗಳೊಡನೆ ಸಂಧಾನ ನಡೆಸಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎಲ್ಲಾ ಬೇಡಿಕೆಗಳನ್ನು ಪೂರೈಸದಿದ್ದರೂ ಸಮಾಜದ ಹೆಚ್ಚಿನ ಜನ ಹೆಚ್ಚಿನ ಮಟ್ಟಿಗೆ ಸಮತೋಲನದಲ್ಲಿ ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಮಾಡುವ ವಿಧಾನ. ಸಂಪನ್ಮೂಲದ ಅಭಾವ ಮತ್ತು ಬೇಡಿಕೆಯೊಳಗೆ ಸಮತೋಲನ ತರುವುದು, ನಮಗೆ ಆ ವಸ್ತು ಅಥವಾ ಸೇವೆಯ ಅವಶ್ಯಕತೆ, ಅವಶ್ಯಕತೆಯ ಮಟ್ಟ ಒಂದೆಡೆ ಮತ್ತು ಅದನ್ನು ಪೂರೈಸಲು ನಾವು ಯಾವ ಬೆಲೆ ಕೊಡಲು ತಯಾರಿದ್ದೇವೆ ಎನ್ನುವುದು ಇನ್ನೊಂದೆಡೆ. ಇವುಗಳ ತುಲನೆಯಿಂದ ಬೆಲೆ ಮತ್ತು ಬೇಡಿಕೆಯ ವಸ್ತು ಅಥವಾ ಸೇವೆ ದೊರಕುವ ಮಟ್ಟ ಅಮಿತ ಬೇಡಿಕೆಗಳ ಪೂರೈಕೆಯನ್ನು ಮಿತಿಯಲ್ಲಿರಿಸುತ್ತದೆ. ಹಾಗೆಯೇ ಬೇಡಿಕೆ ಮತ್ತು ವಸ್ತು ಅಥವಾ ಸೇವೆ ದೊರಕುವ ಮಟ್ಟ ಬೆಲೆಯನ್ನು ನಿರ್ಧರಿಸುತ್ತದೆ. ಬೆಲೆ ಅವಶ್ಯಕತೆ ಹೆಚ್ಚು ಯಾರಿಗಿದೆಯೋ ಅವರಿಗೆ ಆ ವಸ್ತು ಅಥವಾ ಸೇವೆ ದೊರಕುವಂತೆ ಮಾಡುತ್ತದೆ. ಅವಶ್ಯಕತೆ ಯಾರಿಗೆ ಹೆಚ್ಚಿದೆಯೋ ಅವರು ಹೆಚ್ಚಿನ ಬೆಲೆ ಕೊಡಲು ತಯಾರಾಗಿರುತ್ತಾರೆ. ಈ ಪ್ರಕ್ರಿಯೆ ನಡೆಯುವ ವ್ಯವಸ್ಥೆಯನ್ನು ಮಾರುಕಟ್ಟೆ ಎನ್ನುತ್ತೇವೆ. ಸಂಕ್ಷಿಪ್ತವಾಗಿ, ಮಾರುಕಟ್ಟೆ ಸಮಾಜದ ಸಂಪನ್ಮೂಲಗಳನ್ನು ಬೇಡಿಕೆಗಳ ಪೂರೈಕೆಗೆ ವ್ಯವಸ್ಥಿತವಾಗಿ ಹಂಚುವ ಮತ್ತು ಆ ಮೂಲಕ ಅವುಗಳ ಮಿತಿಯೊಳಗೆ ಅತ್ಯಂತ ಹೆಚ್ಚು ಜನರಿಗೆ ಅತ್ಯಂತ ಹೆಚ್ಚು ಸಮಾಧಾನ ದೊರಕಿಸುವ ಪ್ರಕ್ರಿಯೆ. ಇದು ಅರ್ಥಶಾಸ್ತ್ರದ ಆಧಾರ ಸ್ತಂಭ.

ನಾವು ಏನು ಮಾಡಬೇಕು ಎಂಬ ವಿಚಾರವನ್ನು ಎಂದೂ ಅರ್ಥಶಾಸ್ತ್ರ ಹೇಳುವುದಿಲ್ಲ. ಅದು ನಾವು ಏನು ಮಾಡುತ್ತೇವೆ ಎಂಬುದನ್ನು ವಿಶ್ಲೇಷಿಸಿ ನಮ್ಮ ನಿರ್ಧಾರಗಳ ಪರಿಣಾಮವನ್ನು ಅರಿಯಲು ಪ್ರಯತ್ನಿಸುತ್ತದೆ. ವೈಯಕ್ತಿಕ ನಿರ್ಧಾರಗಳಿರಬಹುದು, ಅಥವಾ ಒಂದು ಸಮೂಹದ, ಸಂಸ್ಥೆಯ ನಿರ್ಧಾರವಿರಬಹುದು; ಅಥವಾ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ನಿರ್ಧಾರವೇ ಇರಬಹುದು. ಅವುಗಳ ಇತಿಮಿತಿಗಳ ಪರಿಧಿಯಲ್ಲಿ ಅರ್ಥಶಾಸ್ತ್ರ ವಿಶ್ಲೇಷಿಸುತ್ತದೆ.

ಇಲ್ಲಿ ನಾವು ಅರ್ಥಶಾಸ್ತ್ರದ ಕೆಲವು ಮುಖ್ಯ ಪರಿಕಲ್ಪನೆಗಳಿಗೆ ಸೀಮಿತವಾಗಿ ಚರ್ಚಿಸೋಣ. ಈ ಪರಿಕಲ್ಪನೆಗಳು ನಮ್ಮ ನಿತ್ಯ ಜೀವನದಲ್ಲಿ ನಾವು ಅನುಭವಿಸುವ, ಎದುರಿಸುವ ಅಥವಾ ಇತರರು ಅನುಭವಿಸುವ ಸಮಸ್ಯೆಗಳ, ಉತ್ತರಗಳನ್ನು ಹುಡುಕುವ ಪ್ರಶ್ನೆಗಳ ಕುರಿತಾಗಿರುತ್ತದೆ. ಅರ್ಥಶಾಸ್ತ್ರದ ಅರಿವಿಲ್ಲದವರಿಗೂ ಈ ಪರಿಕಲ್ಪನೆಗಳ ತಿಳುವಳಿಕೆ ಆಸಕ್ತಿದಾಯಕವಾಗಿರುತ್ತದೆ. ನಿತ್ಯ ಜೀವನದಲ್ಲಿ, ಯಾವ ವಸ್ತುವನ್ನು ಎಷ್ಟು ಬೆಲೆಗೆ ಖರೀದಿಸಬಹುದು? ಯಾವುದರಿಂದ ನಮಗೆ ಹೆಚ್ಚು ಪ್ರಯೋಜನವಾಗಬಹುದು? ಎಲ್ಲೋ ಹೋಗಬೇಕಾಗಿ ಬಂದಾಗ ಆಟೊ ರಿಕ್ಷಾದಲ್ಲಿ ಹೋದರೆ ಸಾಕೋ ಅಥವಾ ಓಲಾ ಟ್ಯಾಕ್ಸಿಯಲ್ಲಿ ಹೋಗುವುದು ಉಚಿತವೋ? ನಮಗೆ ಬೇಕಾಗಿರುವ ವಸ್ತು ಕೃಷ್ಣರಾಜ ಮಾರ್ಕೆಟ್‌ನಲ್ಲಿ ಅಗ್ಗದಲ್ಲಿ ಸಿಗಬಹುದೋ ಅಥವಾ ಶ್ರೀರಾಂಪುರದ ಮಾರ್ಕೆಟ್ ಉಚಿತವೇ? ಇಂಥ ಹತ್ತು ಹಲವು ಪ್ರಶ್ನೆಗಳು ನಮ್ಮೊಳಗೆ ಅಡಗಿಕೊಂಡಿರುವ ಅರ್ಥಶಾಸ್ತ್ರಜ್ಞ ಕೇಳುವಂಥವು. ನಮ್ಮ ದಿನದ ಪ್ರತಿಯೊಂದು ನಿರ್ಧಾರದಲ್ಲೂ ನಮಗೆ

ಯಾವುದು ಲಾಭದಾಯಕ? ಯಾವುದು ಅಹಿತಕರ? ಯಾವುದರಿಂದ ಹೆಚ್ಚಿನ ನೆಮ್ಮದಿ ದೊರಕಬಹುದು? ಯಾವುದರಿಂದ ನಮಗೆ ಕಿರಿಕಿರಿ ಹೆಚ್ಚಾಗಬಹುದು? ಇಂಥ ಆಲೋಚನೆಗಳ ಹಿನ್ನೆಲೆಯಲ್ಲಿ ತರ್ಕಗಳು ನಮಗರಿವಿಲ್ಲದಂತೆ ತಲೆದೋರುತ್ತವೆ. ಅರ್ಥಶಾಸ್ತ್ರದ ಕೆಲವು ಪರಿಕಲ್ಪನೆಗಳು ನಮ್ಮ ನಿತ್ಯ ಜೀವನದ ಈ ನೂರಾರು ನಿರ್ಧಾರಗಳ ಹಿನ್ನೆಲೆಯಲ್ಲಿ ನಮ್ಮ ಯೋಚನೆಗಳ ಮೇಲೆ ಒಂದಿಷ್ಟು ಬೆಳಕು ಚೆಲ್ಲುತ್ತವೆ.

ಅರ್ಥಶಾಸ್ತ್ರವನ್ನು ಸರಳವಾಗಿ ವಿವರಿಸುತ್ತಾ ಸ್ಪಿವೆನ್ ಲೆವಿಟ್ ಮತ್ತು ಸ್ಟೆಫೆನ್ ಡಬ್ಬರ್ ಎಂಬ ಅರ್ಥಶಾಸ್ತ್ರಜ್ಞರು ತಮ್ಮ 'ಸ್ವೀಕನಾಮಿಕ್ಸ್' (Freakonomics) ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ:

ಅರ್ಥಶಾಸ್ತ್ರದ ಸರಳ ತಿಳುವಳಿಕೆ ನೀತಿ, ವ್ಯಕ್ತಿ ಮತ್ತು ಸಮಾಜ ಹೇಗೆ ವರ್ತಿಸಬೇಕು ಎಂಬುದರ ಕುರಿತು. ಅರ್ಥಶಾಸ್ತ್ರ ಸಮಾಜ ನಿಜವಾಗಿಯೂ ಹೇಗೆ ವರ್ತಿಸುತ್ತದೆ ಎಂಬುದರ ಕುರಿತು; ಸಮಾಜ ಹೇಗೆ ವರ್ತಿಸಬೇಕು ಎಂಬುದರ ಕುರಿತಲ್ಲ. ಮುಖ್ಯವಾಗಿ ಅರ್ಥಶಾಸ್ತ್ರ ಒಂದು ಮಾಪನ ಶಾಸ್ತ್ರ ಆಗಿರುತ್ತದೆ.

"ಉತ್ತೇಜನ ಅಥವಾ ಪ್ರೋತ್ಸಾಹ ಆಧುನಿಕ ಜೀವನದ ಅಡಿಗಲ್ಲು. ಸಾಂಪ್ರದಾಯಿಕ ವಿವೇಚನೆ ಕೆಲವೊಮ್ಮೆ ತಪ್ಪು ಗ್ರಹಿಕೆಗೆ ಆಸ್ಪದ ನೀಡುತ್ತದೆ. ನಾವು ಕಾಣುವ ಹಠಾತ್ ಪರಿಣಾಮಕ್ಕೆ ಕಾರಣ ಅತೀ ದೂರದ ಎಂದೋ ನಡೆದುಹೋದ ಮತ್ತು ಸೂಕ್ಷ್ಮವಾದ ಕಾರಣಗಳಿರುತ್ತವೆ. ಪ್ರಚೋದನೆಯ ಹಿಂದೆ ವರ್ಷಗಳ ಪ್ರಯತ್ನ ಮತ್ತು ಸಾಧನೆ ಇರುತ್ತದೆ.” "ಹಲವು ಕ್ಷೇತ್ರಗಳ ಪರಿಣತರು (ಉದಾಹರಣೆಗೆ, ಅಪರಾಧ ಶಾಸ್ತ್ರ"

(criminology), ರಿಯಲ್ ಎಸ್ಟೇಟ್, ಇತ್ಯಾದಿ) ತಮ್ಮಲ್ಲಿರುವ ವಿಶೇಷ ಮಾಹಿತಿಯನ್ನು ತಮ್ಮ ಹಿತಸಾಧನೆಗೆ ಉಪಯೋಗಿಸುತ್ತಾರೆ. ಇವೆಲ್ಲಾ ನಮ್ಮ ಪ್ರಪಂಚವನ್ನು ಸಂಕೀರ್ಣವಾಗಿಸುತ್ತದೆ. ಯಾವುದನ್ನು ಮತ್ತು ಹೇಗೆ ಮಾಪನ ಮಾಡಬೇಕು ಎಂಬುದನ್ನು ತಿಳಿದುಕೊಂಡರೆ ಈ ಸಂಕೀರ್ಣ ಪ್ರಪಂಚದ ಅರಿವು ಸರಳವಾಗುತ್ತದೆ."

ಆಲೆಡ್ ಮಾರ್ಷಲ್ ಎಂಬ ಕೇಂಬ್ರಿಜ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಅರ್ಥಶಾಸ್ತ್ರದ ಕುರಿತು ಹೀಗೆ ಹೇಳುತ್ತಾನೆ:

ಅದು ಸತ್ಯವನ್ನೊಳಗೊಂಡಿಲ್ಲ; ಬದಲಾಗಿ ಸತ್ಯವನ್ನು ಪತ್ತೆಹಚ್ಚಲು ಉಪಯೋಗಿಸಬಲ್ಲ ಸಾಧನ ಅಥವಾ ಉಪಕರಣ. ಅದು ಎಂದಿಗೂ ಒಂದು ಪರಿಪೂರ್ಣ ಸಾಧನವಾಗಲಾರದು; ಆದರೆ ನಿರಂತರ ಸುಧಾರಣೆಯಾಗುತ್ತಿರುವ, ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಸಾಧನವಾಗಿರುತ್ತದೆ.

ಮಾರ್ಷಲ್‌ನ ವಿದ್ಯಾರ್ಥಿಯಾಗಿದ್ದ ಮತ್ತು ಅದ್ವಿತೀಯ ಅರ್ಥಶಾಸ್ತ್ರಜ್ಞನೂ ಆಗಿದ್ದ ಜಾನ್ ಮೆನರ್ಡ್ ಕೀನ್ಸ್ ಅರ್ಥಶಾಸ್ತ್ರ ಆಧುನಿಕ ಪ್ರಪಂಚವನ್ನು ವಿಶ್ಲೇಷಿಸಲು ಉಪಯೋಗಿಸಬಲ್ಲ ನಮ್ಮ ಬುದ್ಧಿಶಕ್ತಿಯ ಸಲಕರಣೆ ಎಂದಿದ್ದಾನೆ.

ಮೌರೀಸ್ ಎಲಿಯಾಸ್ ಎಂಬ ಅರ್ಥಶಾಸ್ತ್ರಜ್ಞ ಹೇಳುತ್ತಾರೆ. “ನಾನು ಜನ ಏನು ಮಾಡುತ್ತಾರೆ ಎಂಬುದನ್ನು ಅರಿಯಲು ಪ್ರಯತ್ನಿಸುತ್ತೇನೆ ಹೊರತು ಅವರು ಏನು ಮಾಡಬೇಕೆಂದು ಒತ್ತಾಯಿಸಲಿಲ್ಲ. ಕೆಲವು ಧೋರಣೆಗಳು ಇತರ ಧೋರಣೆಗಳಿಗಿಂತ ಹೆಚ್ಚು ಫಲಕಾರಿಯಾಗಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ಹಿತಾಸಕ್ತಿ,

ಪೂರ್ವಾಭಿಪಾಯ, ಭಾವನೆಗಳು ಇವುಗಳಿಂದ ಪ್ರಭಾವಿತನಾಗಿರುತ್ತಾನೆ. ಈ ಕಾರಣದಿಂದ ವೈಜ್ಞಾನಿಕ ಯೋಚನೆಗಳಿಗೆ ಆತನ ನಿರ್ಧಾರಗಳಲ್ಲಿ ಹೆಚ್ಚಿನ ಪಾತವೇನೂ ಇಲ್ಲ.

"ಅರ್ಥಶಾಸ್ತ್ರದ ಸೂತ್ರಗಳ ಉದ್ದೇಶ ದೃಢ ವಿದ್ಯಮಾನಗಳ ವಿವರಣೆ ಮತ್ತು ಸೀಮಿತ ಸಂಪನ್ಮೂಲಗಳನ್ನು ಮಾನವನ ಅಮಿತವಾಗಿರುವ ಬೇಡಿಕೆಗಳನ್ನು ಪೂರೈಸಲು ಹೇಗೆ ಉಪಯೋಗಿಸಬಹುದು ಎಂದು ವಿಶ್ಲೇಷಣೆ ಮಾಡುವುದು....ಅರ್ಥಶಾಸ್ತ್ರದ ಯಾವುದೇ ವಿಶ್ಲೇಷಣೆ ಮೌಲ್ಯಾಧಾರಿತ ಯೋಚನೆಗಳಿಂದ ಪ್ರಭಾವಿತವಾಗಿರುತ್ತದೆ.... ತಿಳುವಳಿಕೆಯ ಒಂದೇ ಮೂಲ ಅನುಭವ. ಆದುದರಿಂದ ಅರ್ಥಶಾಸ್ತ್ರದ ಸೂತ್ರ ಅನುಭವದ ಸಮನ್ವಯದಿಂದ ಮಾತ್ರ ಸಾಧ್ಯ. ಸೂತ್ರ ಮತ್ತು ಅನುಷ್ಠಾನಕ್ಕೆ ಸಂಬಂಧವಿಲ್ಲ ಎನ್ನುವುದು ಸರಿಯಲ್ಲ. ವಾಸ್ತವದ ಸಮನ್ವಯದಿಂದ ಸೂತ್ರಗಳನ್ನು ರಚಿಸುವುದರಿಂದ ಅನುಭವ ಮತ್ತು ಸೂತ್ರಗಳೊಳಗಿನ ಸಂಬಂಧವನ್ನು ನಿರ್ಲಕ್ಷಿಸಲಸಾಧ್ಯ.”

ಅರ್ಥಶಾಸ್ತ್ರದ ಒಂದು ಮುಖ್ಯ ಅಂಶ, ಆಯ್ಕೆ, ನಮಗೆ ಬೇಕಾದುವೆಲ್ಲ ಸಿಗಲಾರದಾದರೆ, ಯಾವುದನ್ನು ಪಡೆಯಬೇಕು ಮತ್ತು ಯಾವುದನ್ನು ಪಡೆಯುವ ಶ್ರಮ ವ್ಯರ್ಥ? ನಮಗೆ ಪಡೆಯಲೇ ಬೇಕಾದುದನ್ನು ಪಡೆಯಬೇಕಾದರೆ ಏನು ತ್ಯಾಗ ಮಾಡಲು ಸಿದ್ಧರಿದ್ದೇವೆ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಹಲವು ಆಯ್ಕೆಗಳನ್ನು ನಾವು ಮಾಡುತ್ತಿರುತ್ತೇವೆ. ಹಿರಿಯ ಹೆಣ್ಣು ಮಗಳ ಮದುವೆಯನ್ನು ಸಂಭ್ರಮದಿಂದ ನೆರವೇರಿಸುವುದೋ ಅಥವಾ ಅದರ ವೆಚ್ಚವನ್ನು ಒಂದಿಷ್ಟು ಮಿತಗೊಳಿಸಿ ಇನ್ನೂ ವಿದ್ಯಾಭ್ಯಾಸವನ್ನು ಭಾರತದ ಒಂದು ಸುಪ್ರಸಿದ್ದ ವಿಶ್ವವಿದ್ಯಾಲಯದಲ್ಲಿ ಮುಂದುವರಿಸ ಬೇಕೆನ್ನುವ ಕಿರಿಯ ಮಗಳ ಬಯಕೆಯನ್ನು ಪೂರೈಸುವುದೋ? ನಾಲ್ಕು ದಿನದ ಸಂಭ್ರಮ ನನಗೆ ಮುಖ್ಯವೋ ಕಿರಿಮಗಳ ಭವಿಷ್ಯ ಅವಶ್ಯವೋ? ಈಗಿರುವ ಮನೆಯನ್ನು ಚಂದ ಮಾಡಲು ಇಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಲೇ? ಅಥವಾ ನನ್ನ ವೃತ್ತಿಯಿಂದ ನಿವೃತ್ತಿ ಹೊಂದಿದ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಆ ಹಣವನ್ನು ಉಳಿಸಲೇ? ಇಂಥ ಹಲವು ಆಯ್ಕೆಗಳನ್ನು ಮಾಡುತ್ತಲೇ ಇರುತ್ತೇವೆ. ನಿಮ್ಮಲ್ಲಿ ಇರುವ ಅಥವಾ ನಿಮಗೆ ದೊರಕುವ ಸಂಪನ್ಮೂಲ (ಹಣ, ಆಸ್ತಿ, ಸಹಾಯ) ನಿಮ್ಮ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಸಾಕಾಗದಿರುವುದರಿಂದ ನೀವು ಆಯ್ಕೆಯನ್ನು ಮಾಡಲೇಬೇಕು. ಈ ಆಯ್ಕೆ ಮಾಡುವ ಅವಶ್ಯಕತೆ ಅರ್ಥಶಾಸ್ತ್ರದ ಕೇಂದ್ರ ಬಿಂದು.

ಈ ಹಿನ್ನೆಲೆಯಲ್ಲಿ, ಇಲ್ಲಿ ನಾವು ಅರ್ಥಶಾಸ್ತ್ರದ ಕೆಲವು ಕುತೂಹಲಕಾರೀ ಪರಿಕಲ್ಪನೆಗಳನ್ನಷ್ಟೇ ಸೀಮಿತ ನೆಲೆಯಲ್ಲಿ ಚರ್ಚಿಸೋಣ. ಈ ಪರಿಕಲ್ಪನೆಗಳ ಅರ್ಥ ಏನು? ಅವು ನಮ್ಮ ಆಯ್ಕೆಗೆ ಯಾಕೆ ಅವಶ್ಯ ಮತ್ತು ಅವು ನಮ್ಮ ಆಯ್ಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ? ಎಂಬುದನ್ನು ನಾವಿಲ್ಲಿ ಚರ್ಚಿಸುತ್ತೇವೆ. ಇಲ್ಲಿ ನಾವು ಪೂರ್ಣ ಪ್ರರ್ಥಶಾಸ್ತ್ರವನ್ನು ಅರಿಯುವ ಪ್ರಯತ್ನಮಾಡುವುದಿಲ್ಲ. ಅರ್ಥಶಾಸ್ತ್ರದ ಕೆಲವು ಮುಖ್ಯ ಪರಿಕಲ್ಪನೆಗಳನ್ನು ಮಾತ್ರ ಚರ್ಚಿಸುತ್ತೇುವಾಗು ಓದುಗರಿಗೆ ಅರ್ಥಶಾಸ್ತ್ರದೆ ಅಂತರಾಳವನ್ನು ಅರಿಯಲು ನಮ್ಮ ದಿನನಿತ್ಯದ ಪೂರ್ವಾಭಿಪ್ರಾಯ, ಭಾವನೆಗಳು ಇವುಗಳಿಂದ ಪ್ರಭಾವಿತನಾಗಿರುತ್ತಾನೆ. ಈ ಕಾರಣದಿಂದ ವೈಜ್ಞಾನಿಕ ಯೋಚನೆಗಳಿಗೆ ಆತನ ನಿರ್ಧಾರಗಳಲ್ಲಿ ಹೆಚ್ಚಿನ ಪಾತ್ರವೇನೂ ಇಲ್ಲ.

ಆಯ್ಕೆಗಳನ್ನು ಯಾವ ದೃಷ್ಟಿಕೋನದಿಂದ ಕಾಣಬಹುದು, ಆಯ್ಕೆಗಳ ಪ್ರಾಮುಖ್ಯತೆ, ಜೀವನದಲ್ಲಿ ಪ್ರತಿಯೊಂದು ಆಯ್ಕೆಗೂ ಒಂದಲ್ಲ ಒಂದು ಬೆಲೆಯನ್ನು ಕೊಡಲೇಬೇಕು, ಆದರೆ ಯಾವ ಬೆಲೆ ಅತ್ಯಂತ ಸಮಂಜಸ ಈ ವಿಷಯಗಳನ್ನು ಅರ್ಥಶಾಸ್ತ್ರದ ತಿಳುವಳಿಕೆ ಇರದಿದ್ದರೂ ಅರಿಯಲು ಸಾಧ್ಯವಾಗುವಂತೆ ಮಾಡುವುದು ಈ ಪುಸ್ತಕದ ಉದ್ದೇಶ.

ಅರ್ಥಶಾಸ್ತ್ರದ ಒಂದು ಕಲ್ಪನೆ, “ನಮಗೆ ಸಂಬಂಧಪಟ್ಟ ನಿರ್ಣಯಗಳನ್ನು ತಾರ್ಕಿಕವಾಗಿ ತೆಗೆದುಕೊಳ್ಳುತ್ತೇವೆ” ಎನ್ನುವುದು. ನಮ್ಮ ಆಯ್ಕೆಗಳು ನಮ್ಮ ತರ್ಕದಂತೆ ನಮಗೆ ಅತ್ಯಂತ ಹೆಚ್ಚು ಹಿತಸಾಧನೆಗೆ ಪೂರಕವಾಗಿರುವವು. ಇದನ್ನು ವಿವರವಾಗಿ ಮುಂದಿನ ಪುಟಗಳಲ್ಲಿ ಚರ್ಚಿಸುತ್ತೇವೆ (ಆಡಮ್ ಸ್ಮಿಥ್‌ನ ಅಗೋಚರ ಕೈ, ತಾರ್ಕಿಕ ಜೀವನ, ಇತ್ಯಾದಿ), ಸದ್ಯಕ್ಕೆ ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ಎಂದರೆ ನಮ್ಮ ಎಲ್ಲಾ ವ್ಯವಹಾರಗಳು ಒಂದಲ್ಲ ಒಂದು ರೀತಿಯಿಂದ ನಮ್ಮ ಮೇಲೆ ಆರ್ಥಿಕ ಪರಿಣಾಮವನ್ನು ಬೀರುತ್ತವೆ.

ನಮ್ಮ ಬೇಕು-ಬೇಡಗಳ ನಿರ್ಣಯದಲ್ಲಿ ನಾವು ತೊರೆಯುವುದು ಅಥವಾ ಪಡೆಯುವುದು, ಗಳಿಸುವುದು ಅಥವಾ ಕಳೆದುಕೊಳ್ಳುವುದು, ಇವೆಲ್ಲಾ ನಮ್ಮ ತೀರ್ಮಾನದ ಪರಿಣಾಮಗಳು ಮತ್ತು ಆ ತೀರ್ಮಾನಗಳನ್ನು ನಾವು ನಮ್ಮ ಅತ್ಯಂತ ಹೆಚ್ಚು ಹಿತಸಾಧನೆಯ ಉದ್ದೇಶದಿಂದ ಮಾಡಿರುತ್ತೇವೆ. ನಾವು ತೀರ್ಮಾನ ತೆಗೆದುಕೊಳ್ಳುವಾಗ ಪರಿಗಣಿಸಿದ ಮಾಹಿತಿಗಳು, ಆ ಮಾಹಿತಿಗಳ ಸತ್ಯಾಸತ್ಯತೆ. ಇವೆಲ್ಲ ನಮ್ಮ ನಿರ್ಧಾರಗಳ ಹಿನ್ನೆಲೆ. ನಮ್ಮ ವ್ಯವಹಾರ ನಡೆಯುವ ವ್ಯವಸ್ಥೆಯನ್ನು ಮಾರುಕಟ್ಟೆ ಎನ್ನುತ್ತೇವೆ. ಮಾರುಕಟ್ಟೆ ಮುಕ್ತವಾಗಿ ಎಲ್ಲರಿಗೂ ಹಿತಸಾಧನೆ ಸಾಧ್ಯವಾಗುವಂತೆ ಕಾರ್ಯ ನಿರ್ವಹಣೆ ಮಾಡಬೇಕಿದ್ದರೆ ಅಲ್ಲಿ ಮಾಹಿತಿ ಮುಕ್ತವಾಗಿ ದೊರೆಯಬೇಕು. ಅಸಂಪೂರ್ಣ ಮಾಹಿತಿ, ಮಾಹಿತಿಗಳ ತಿರುಚುವಿಕೆ, ಮಾರುಕಟ್ಟೆಯ ವ್ಯವಹಾರದ ಮೇಲೆ ನಿರ್ಬಂಧಗಳು, ಇವು ಮಾರುಕಟ್ಟೆಯ ಕಾರ್ಯ ನಿರ್ವಹಣೆಯನ್ನು ಮುಕ್ತವಾಗಿ ಮಾಡಲು ಅಡಚಣೆ ನೀಡುತ್ತವೆ. ಇಲ್ಲಿ ನಾವು ಚರ್ಚಿಸುವ ಹೆಚ್ಚಿನ ಪರಿಕಲ್ಪನೆಗಳು ಮಾರುಕಟ್ಟೆಗೆ ಅಡಚಣೆ ತರುವ ಕಾರ್ಯಕಲಾಪಗಳು, ಸನ್ನಿವೇಶಗಳು, ವ್ಯಕ್ತಿಗಳು ಇವುಗಳ ಕುರಿತು. ಮುಕ್ತ ಮಾರುಕಟ್ಟೆಯಿಂದ ಮಾತ್ರ ಸಮಾಜ ಹಿತ ಸಾಧ್ಯ; ಅದರ ದುರುಪಯೋಗವಾಗದಂತೆ ಅದಕ್ಕೂ ಕೆಲವು ಮಿತಿಯನ್ನು ಸರಕಾರ ಅಥವಾ ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...