ವಾಲ್ಮೀಕಿ -ಸಾಂಸ್ಕೃತಿಕ ಅಸ್ಮಿತೆಯ ಆಕರ

Date: 26-02-2021

Location: .


ಪಕ್ಷಿಯ ಶೋಕದೊಂದಿಗೆ ದುಃಖದ ಅನುಸಂಧಾನದಲ್ಲಿ ಹುಟ್ಟಿದ ಮಹಾಕಾವ್ಯ ‘ರಾಮಾಯಣ’. ವಾಲ್ಮೀಕಿ ಅವರ ಈ ರಾಮಾಯಣದ ಈ ಸಾಂಸ್ಕೃತಿಕ ಅಸ್ಮಿತೆ, ರಾಜಕಾರಣ ಹಾಗೂ ಹಿನ್ನೆಲೆ ಕುರಿತು ಸಂಸ್ಕೃತಿ ಚಿಂತಕ, ಸಂಶೋಧಕ ನಟರಾಜ್ ಬೂದಾಳು ಅವರು ‘ಬಯಲ ಬೆಳಕು’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ನಮ್ಮ ಸಾಂಸ್ಕೃತಿಕ ಅಸ್ಮಿತೆಯೊಂದನ್ನು ನೆನಪಿಸಿಕೊಳ್ಳುವುದು ಈ ಲೇಖನದ ಉದ್ದೇಶ. ನಾವೆಲ್ಲ ಬೇಡ ಕುಲದಿಂದ ಕವಲಾದವರು ಎನ್ನುವುದಂತೂ ಸತ್ಯ. ಇಂದು ನಾವು ಯಾವ ಆವರಣದಲ್ಲಿಯೇ ಇರಲಿ ಇಡೀ ಮನುಷ್ಯಕುಲ ಅನುಸರಿಸಿದ ಮೊದಲ ಉದ್ಯೋಗವೆಂದರೆ ಬೇಟೆಯೇ. ಎಲ್ಲರೂ ಮೂಲದಲ್ಲಿ ಬೇಡರೇ. ಬೇಡ ಬೆಸ್ತ ಕುರುಬ ಮೂಲಗಳೇ ಭಾರತೀಯರ ಮೂಲಕುಲಗಳು. ಜಗತ್ತಿನ ಆದಿ ಕುಲಗಳೆಂದು ಇವುಗಳನ್ನು ಗೌರವಿಸಲೇಬೇಕು. ಈ ಕುಲಮೂಲಗಳಿಂದ ಬಂದವರೇ ವಾಲ್ಮೀಕಿ ವ್ಯಾಸ, ಕಾಳಿದಾಸ ಇತ್ಯಾದಿ.

ಇದೊಂದು ರೀತಿಯಲ್ಲಿ ಚರಿತ್ರೆ, ಪುರಾಣ ಮತ್ತು ಆಧುನಿಕತೆಗಳು ಸಂಗಮಿಸಿರುವ ಕ್ಷಣ. ಯಾವುದನ್ನೂ ಮರೆಯಲಾಗದು. ಪುರಾಣ, ಚರಿತ್ರೆಗಳ ಭರಾಟೆಯಲ್ಲಿ ವರ್ತಮಾನದ ವಿಜ್ಞಾನ, ಆಧುನಿಕತೆ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಮರೆಯಲಾಗದು. ವಾಲ್ಮೀಕಿ ಮಹಾಕವಿ ನಿಜ. ಅವನನ್ನು ಸಾಂಸ್ಕೃತಿಕ ಅಸ್ಮಿತೆಯ ಸಂಕೇತವೆಂದು ಯಾರು ನೆನಪಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಮುಖ್ಯ. ರಾಮಾಯಣವನ್ನು ಬಳಸಿಕೊಳ್ಳುವವರು ಬೇಡರ ವಾಲ್ಮೀಕಿಯನ್ನು ನೆನಪಿಸಿಕೊಳ್ಳುವುದಿಲ್ಲ, ಮಹಾಭಾರತ ಭಗವದ್ಗೀತೆಗಳನ್ನು ಬಳಸಿಕೊಳ್ಳುವವರು ಬೆಸ್ತರ ವ್ಯಾಸನನ್ನು ನೆನಪಿಸಿಕೊಳ್ಳುವುದಿಲ್ಲ. ಇನ್ನು ಮಹಾಕವಿ ಕಾಳಿದಾಸನಾಗಲೀ ಅವನ ಕಾವ್ಯಗಳಾಗಲೀ ತಮ್ಮ ಸಾಂಸ್ಕೃತಿಕ ರಾಜಕಾರಣಕ್ಕೆ ಒದಗಿ ಬರುವುದಿಲ್ಲ ಎನ್ನುವ ಕಾರಣಕ್ಕೆ ಕುರುಬ ಸಮೂಹದಿಂದ ಬಂದ ಆ ಮಹಾಕವಿಯಾಗಲೀ, ಅವನ ಕಾವ್ಯಗಳಾಗಲೀ ಸಾಂಸ್ಕೃತಿಕ ಗುರುತುಗಳಾಗಿ ನಮ್ಮ ನಡುವೆ ಇಲ್ಲ. ಹಾಗಾಗಿ, ಯಾರು ಯಾವುದನ್ನು ಓದುತ್ತಾರೆ, ನೆನಪಿಸಿಕೊಳ್ಳುತ್ತಾರೆ ಎನ್ನುವುದರಷ್ಟೇ ಮುಖ್ಯವಾದುದು. ಯಾರನ್ನು ನೆನಪಿಸಿಕೊಳ್ಳುವುದಿಲ್ಲ, ಯಾವ ಕಾವ್ಯಗಳನ್ನು ಓದುವುದಿಲ್ಲ ಎನ್ನುವುದೂ ಮುಖ್ಯವಾದುದು.

ರಾಮಾಯಣ ಮಹಾಭಾರತಗಳೆರಡೂ ವೈಶ್ವಿಕ ರಚನೆಗಳಾಗಿ ಈಗ ನಮ್ಮ ನಡುವೆ ಇವೆ. ಒಂದನ್ನು ಬರೆದವನು ಬೇಡರವನು ಇನ್ನೊಂದನ್ನು ಬರೆದವರು ಬೆಸ್ತರವನು. ಈ ಬೇಡರು ಬೆಸ್ತರು ಬರೆದ ಕಾವ್ಯಗಳು ಇಂದು ಬೇಡರ ಬೆಸ್ತರ ಕಾವ್ಯಗಳಾಗಿ ಉಳಿದಿವೆಯೇ? ಅವುಗಳ ಯಜಮಾನರು ಬೇರೆ ಇದ್ದಾರೆ. ಅವರು ರಾಮಾಯಣ ಮಹಾಭಾರತಗಳನ್ನು ತಮ್ಮ ಕಾವ್ಯಗಳೆಂದು ಬಳಸಿಕೊಳ್ಳುತ್ತಾರೆಯೇ ಹೊರತು ಬೇಡರ ವಾಲ್ಮೀಕಿಯನ್ನಾಗಲೀ, ಬೆಸ್ತರ ವ್ಯಾಸನನ್ನಾಗಲೀ ನಮ್ಮವನೆಂದುಕೊಂಡಿಲ್ಲ.

ಇನ್ನು ವಾಲ್ಮೀಕಿ ಈಗ ಕೇವಲ ಕವಿಯಲ್ಲ. ಅವನೊಂದು ಸಾಂಸ್ಕೃತಿಕ ಸಂಕೇತ. ಕರ್ನಾಟಕದ ಮಟ್ಟಿಗೆ ಕೆಳಸ್ತರದ ಸಮೂಹವೊಂದು ತನಗೆ ಈವರೆಗೆ ದಕ್ಕಿಲ್ಲದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಪಾಲನ್ನು ಪಡೆಯಲು ಈ ಸಂಕೇತದ ಅಡಿಯಲ್ಲಿ ಒಂದಾಗಿ, ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳುತ್ತಿದೆ. ಇದೇ ತರಹ ಇನ್ನೂ ಕೆಲವು ಅಬ್ಬೇಪಾರಿ ಸಮೂಹಗಳು ಇಂತಹದ್ದೇ ಯಾವುದಾದರೊಂದು ಸಂಕೇತವನ್ನು ಮುಂದಿಟ್ಟುಕೊಂಡು ತಮ್ಮ ಪಾಲನ್ನು ಬೇಡುತ್ತಿವೆ. ಬೆಸ್ತರು ಅಂಬಿಗರ ಚೌಡಯ್ಯನನ್ನು, ಉಪ್ಪಾರರು ಭಗೀರಥನನ್ನು, ಅಗಸರು ಮಡಿವಾಳ ಮಾಚಿದೇವನನ್ನು, ಲಂಬಾಣಿಗಳು ಸೇವಾಲಾಲ್ ಗುರುವನ್ನು, ಕುರುಬರು ಕನಕದಾಸನನ್ನು ನ್ಯಾಯ ಪಂಚಾಯಿತಿಗೆ ಕರೆಯುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾರೆ. ಕೆಲವರಿಗೆ ಇತಿಹಾಸದ ಐಕನ್‌ಗಳು ಸಿಕ್ಕಿವೆ, ಇನ್ನು ಕೆಲವರಿಗೆ ಪುರಾಣದ ಐಕನ್ನುಗಳು ದೊರಕಿವೆ. ಇನ್ನು ಕೆಲವು ದೊಡ್ಡ ಸಮೂಹಗಳಿಗೇ ಐಕನ್ನುಗಳದ್ದೇ ಕೊರತೆ. ಇದ್ದದ್ದರಲ್ಲಿ ಸಿಕ್ಕಿದ್ದನ್ನೇ ಮೆರೆಸುತ್ತಿದ್ದಾರೆ. ಇದು ತಪ್ಪೇನಲ್ಲ. ಆದರೆ ಇಂತಹ ಸಂಕೇತಗಳ ಅಡಿಯಲ್ಲಿ ಒಂದಾಗುತ್ತಿರುವ ಸಮೂಹಗಳು ಸಾಂಸ್ಕೃತಿಕವಾಗಿ ಒಂದು ಎಚ್ಚರವನ್ನು ಇಟ್ಟುಕೊಳ್ಳಬೇಕಾಗಿದೆ. ಅದೇನೆಂದರೆ, ಈ ಐಕನ್ನುಗಳು ಕೇವಲ ಸಂಕೇತಗಳಷ್ಟೇ. ಇವು ಸ್ವತಂತ್ರವಾದ ಐಕನ್ನುಗಳೇ ಅಥವಾ ಇನ್ನಾವುದಾದರೂ ಬೇರೆ ಕ್ಯಾನ್‌ವಾಸಿನಲ್ಲಿ ದುಡಿಯುತ್ತಿವೆಯೇ? ಅಲ್ಲಿ ಬೇರೆ ಯಾರಾದರೂ ಯಜಮಾನರು ಇದ್ದಾರೆಯೇ ಮುಂತಾದ ಸಂಗತಿಗಳನ್ನು ಅತ್ಯಂತ ಎಚ್ಚರದಿಂದ ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ.

ವಾಲ್ಮೀಕಿಯ ಬಗೆಗೆ ಮಾತನಾಡುವುದೋ, ರಾಮಾಯಣದ ಬಗೆಗೆ ಮಾತನಾಡುವುದೋ? ಇದು ನನಗೆ ಇದಿರಾದ ಮೊದಲ ಪ್ರಶ್ನೆ. ಕವಿ ಮತ್ತು ಅವನು ರಚಿಸಿದ ಪಠ್ಯ ಇವೆರಡನ್ನೇ ಇಟ್ಟುಕೊಂಡು ಮಾತನಾಡುವ ಕ್ರಮವನ್ನು ನಾವು ಪಾಲಿಸುತ್ತ ಬಂದಿದ್ದೇವೆ. ದುರಂತರವೆಂದರೆ, ಎದುರಿಗೆ ಇರುವ ಓದುಗರನ್ನು ತಟಸ್ಥರೆಂದು ಭಾವಿಸಿಕೊಂಡಿದ್ದೇವೆ. ಯಾವ ಓದುಗನೂ ತಟಸ್ಥ ಓದುಗನಲ್ಲ; ಯಾವ ಓದು ಕೂಡ ನಿರ್ಲಿಪ್ತ ಓದಲ್ಲ. ಯಾರೂ ಅದಿರುವಂತೆಯೇ ಓದುವುದಿಲ್ಲ. ಓದುವುದು ಎಂದರೆ ಬದಲಾಯಿಸಿಕೊಂಡು ಓದುವುದು ಎಂದೇ ಅರ್ಥ. ಹಾಗಾಗಿ, ಒಂದೇ ಕೃತಿ ಎನ್ನುವುದು ಅಸಂಭವ. ಹಾಗಾಗಿ ಮೂಲ ಪಠ್ಯ ಎನ್ನುವುದೊಂದು ಭ್ರಮೆ. ವಾಲ್ಮೀಕಿ ಬರೆದಿರುವ ಪಠ್ಯವೊಂದಿದೆಯಲ್ಲ ಅದು ಮೂಲ ಪಠ್ಯವಲ್ಲವೆ? ಖಂಡಿತಾ ಅಲ್ಲ. ಅದೊಂದು ಸಾಪೇಕ್ಷ ಪಠ್ಯ ಮಾತ್ರ. ಆ ಪಠ್ಯವನ್ನು ಗಂಡನಿಂದ ಪರಿತ್ಯಕ್ತಳಾದ ಹೆಣ್ಣುಮಗಳು ನಡೆಸುವ ಓದಿಗೂ, ವೈಷ್ಣವ ಭಕ್ತಿ ಪಂಥೀಯನೊಬ್ಬ ನಡೆಸುವ ಓದಿಗೂ ಅಪಾರ ವ್ಯತ್ಯಾಸವಿದೆ. ಪಠ್ಯ ಮಾತ್ರ ಅದೇ. ಆದರೆ ಉಂಟಾಗುವ ಪರಿಣಾಮ ಪಠ್ಯ ಮಾತ್ರ ಒಂದೇ ಆಗಿರಲು ಸಾಧ್ಯವಿಲ್ಲ. ಹಾಗಾದರೆ ಇಷ್ಟೊಂದು ದೀರ್ಘಕಾಲೀನ ಓದುಗಳಲ್ಲಿ ಪಠ್ಯವೊಂದು ಅನೇಕ ಪಠ್ಯಗಳಾಗುವುದು ಒಂದು ಪ್ರಕ್ರಿಯೆ. ಈಗೀಗಂತೂ ರಾಮಾಯಣವನ್ನು ನನ್ನದೇ ಆದ ಓದಿನ ಮೂಲಕ ಓದಲೂ ಬಿಡುತ್ತಿಲ್ಲ. ನಾನು ಅದನ್ನು ಹೇಗೆ ಓದಬೇಕು, ಏನನ್ನು ಹೇಳಬೇಕು ಎನ್ನುವುದನ್ನು ಮತ್ಯಾರೋ, ಮತ್ಯಾವ ಮಾಧ್ಯಮವೋ ನಿಯಂತ್ರಿಸುತ್ತಿದೆ.

ರಾಮಾಯಣದ ಕವಿ ವಾಲ್ಮೀಕಿಯಾಗಲೀ, ಮಹಾಭಾರತದ ಕವಿ ವ್ಯಾಸನಾಗಲೀ ಆ ಕತೆಗಳಿಂದ ಹೊರನಿಂತು ಬರೆಯುತ್ತಿಲ್ಲ; ಬದಲಿಗೆ ಆ ಕತೆಯ ಪಾತ್ರಗಳೂ ಆಗಿದ್ದಾರೆ. ವ್ಯಾಸ ಆರಂಭಕ್ಕೆ ಸಾಕ್ಷಿಯಾದರೆ ವಾಲ್ಮೀಕಿ ಆದಿ ಅಂತ್ಯಗಳೆರಡಕ್ಕೂ ಸಾಕ್ಷಿಯಾಗುತ್ತಾನೆ. ಕವಿ ಚೈತನ್ಯವೇ ಸಾಕ್ಷಿಪ್ರಜ್ಞೆಯ ಸ್ವರೂಪದ್ದು. ಅದು ಕತೆಯನ್ನು ಕೇವಲ ಕತೆಯ ಕಾರಣಕ್ಕೆ ಹೇಳುತ್ತಿಲ್ಲ ಬದಲಿಗೆ ಅದನ್ನು ವರ್ತಮಾನಕ್ಕೆ ತಗುಲಿಸಿ ಓದಬಲ್ಲ ದರ್ಶನವನ್ನಾಗಿ ರೂಪಿಸಲಾಗಿದೆ. ಒಂದು ದಿನ ನಿರಾಳ ಮನಸ್ಸಿನಿಂದ ವಿಹರಿಸುತ್ತಿದ್ದ ವಾಲ್ಮೀಕಿಗೆ ಆಕಾಶದಲ್ಲಿ ವಿಹರಿಸುತ್ತಿದ್ದ ಕ್ರೌಂಚ ಮಿಥುನವೊಂದು ಕಣ್ಣಿಗೆ ಬಿತ್ತು. ಆ ಕ್ರೌಂಚ ಪಕ್ಷಿಗಳು ವಿಹರಿಸುತ್ತಿದ್ದ ರೀತಿ, ಅವುಗಳು ಬಾಳಿನಲ್ಲಿ ಪಾಲಿಸುವ ಏಕ ಸಂಗಾತಿಯ ಬದುಕಿನ ಕ್ರಮ ಎಲ್ಲವೂ ಬೇಡನಾಗಿದ್ದ ಅವನಿಗೆ ತಿಳಿದಿತ್ತು. ಆ ಪಕ್ಷಿಜೋಡಿಯಲ್ಲಿ ಯಾವುದಾದರೊಂದು ಮರಣಕ್ಕೀಡಾದರೆ ಮತ್ತೊಂದು ಜೀವನಪೂರ್ತಿ ವಿರಹದಿಂದ ನರಳುತ್ತ ಏಕಾಗಿಯಾಗಿ ಬಾಳುತ್ತದೆಯೇ ಹೊರತು ಮತ್ತೊಂದು ಪಕ್ಷಿಯ ಜೊತೆ ಬಾಳನ್ನು ಮುಂದುವರಿಸುವುದಿಲ್ಲ. ಹಾಗೆ ವಿಹರಿಸುತ್ತಿದ್ದ ಜೋಡಿ ಪಕ್ಷಿಗಳಲ್ಲಿ ಗಂಡುಪಕ್ಷಿಗೆ ಅದೆಲ್ಲಿಂದಲೋ ಬಂದ ಬಾಣವೊಂದು ತಾಗಿ ಕ್ಷಣಾರ್ಧದಲ್ಲಿ ಆಕಾಶದಿಂದ ಭೂಮಿಗೆ ತೊಪ್ಪನೆ ಬಿತ್ತು. ಆಕ್ಷಣವೇ ಆಕಾಶದಲ್ಲಿದ್ದ ಆ ಹೆಣ್ಣು ಕ್ರೌಂಚ ಜೋರಾಗಿ ಆಕ್ರಂದನವೊಂದನ್ನು ಮಾಡಿತ್ತು. ಆ ಒಂದೇ ಆಕ್ರಂದನ ಅದು ಮುಂದಿನ ತನ್ನ ಜೀವನಪೂರ್ತಿ ಅನುಭವಿಸಬೇಕಾದ ಸಂಕಟವನ್ನೆಲ್ಲ ತೋಡಿಕೊಂಡಂತಿತ್ತು. ಆ ಸಂಕಟದ ಆಕ್ರಂದನ ಕವಿ ಮನಸ್ಸಿನಲ್ಲಿ ಹುಟ್ಟಿಸಿದ ಪ್ರತಿಸ್ಪಂದನವೇ ಈ ಮಹಾಕಾವ್ಯದ ಮೊದಲ ಶ್ಲೋಕ.

ಮಾನಿಷಾದ ಪ್ರತಿಷ್ಠಂ ತ್ವಮಗಮಃ ಶಾಶ್ವತಿಃ ಸಮಾಃ | ಯತ್ಕ್ರೌಂಚಮಿಥುನಾದೇಕಮವಧಿಃ ಕಾಮಮೋಹತಂ |

ಆ ಪಕ್ಷಿಯ ಶೋಕದ ಜೊತೆಗೆ ದುಃಖದ ಅನುಸಂಧಾನದ ಮಹಾಕಾವ್ಯ ಹುಟ್ಟಿತು. ಆ ಶಾಪವನ್ನು ಮಹಾಕವಿ ವಿಷ್ಣುವಿಗೇ ನೀಡಿದನೆಂದೂ, ಮಹಾಕವಿಯ ಆ ಶಾಪವನ್ನು ತೀರಿಸಲೆಂದೇ ಅವನು ಶ್ರೀರಾಮನಾಗಿ ಹುಟ್ಟಿ ತಾನೂ ವಿರಹವೇದನೆಯಿಂದ ನೊಂದನೆಂದೂ ವ್ಯಾಖ್ಯಾನಗಳಿವೆ. ಆದರೆ ಅಂತಹ ವ್ಯಾಖ್ಯಾನಗಳು ಶ್ರೀರಾಮನ ಬಗೆಗೆ ಮಾತ್ರ ಅನುಕಂಪದಿಂದ ಮಾತನಾಡುತ್ತವೆಯೇ ಹೊರತು ಅದೇ ಅನುಕಂಪವನ್ನು ಸೀತೆಯ ಬಗೆಗೆ ತೋರುವುದಿಲ್ಲ.

ಎಲ್ಲಿಯವರೆಗೆ ಈ ಮಹಾಕಾವ್ಯ ಲೋಕದ ಸಂಕಟದ ಅನುಸಂಧಾನದಲ್ಲಿ ತೊಡಗಿತ್ತೋ ಅಲ್ಲಿಯವರೆಗೆ ಅದನ್ನು ವ್ಯಾಖ್ಯಾನಿಸಬಹುದಾದ ಕಾವ್ಯಮೀಮಾಂಸೆಯ ಪರಿಕರಗಳು ಬೇರೆಯಾಗಿದ್ದವು. ಅದಕ್ಕೆ ವೈಷ್ಣವ ಶಕ್ತಿ ಸಂಚಯವಾದ ಮೇಲೆ, ಶ್ರೀರಾಮನಲ್ಲಿ ವಿಷ್ಣುವಿನ ಆವಾಹನೆ ಆದಮೇಲೆ, ರಾಮಾಯಣವನ್ನು ಭಕ್ತಿಯೆಂಬ ಮಹಾ ವಿಸ್ಮೃತಿ ಕವಿದುಕೊಂಡ ಮೇಲೇ, ಅದರ ಸ್ವರೂಪವೇ ಬೇರೆಯಾಯಿತು. ಉದಾಹರಣೆಗೆ ಅದನ್ನು ಹೀಗೂ ಓದಬಹುದು. ಅದು ಮನುಷ್ಯನ ದುಃಖ, ದುಃಖಕಾರಣ ಮತ್ತು ಅದನ್ನು ನಿವಾರಿಸಿಕೊಳ್ಳುವುದರ ಬಗೆಗೆ ಲೋಕದ ಬಗೆಗೆ ಕರುಣಾಮೈತ್ರಿಯನ್ನುಳ್ಳ ಕವಿಪ್ರಜ್ಞೆಯೊಂದು ಮಾಡಿದ ದುಃಖದ ಅನುಸಂಧಾನ. ಆದರೆ ಅದನ್ನು ರಾಮಭಕ್ತಿಕಾವ್ಯವಾಗಿ ನೋಡಿದಾಕ್ಷಣ, ಅದನ್ನು ದೈವೀಕರಿಸಿದಾಕ್ಷಣ ಅಲ್ಲಿಯ ದುಃಖ ದುಃಖವಾಗದೆ, ಅಲ್ಲಿಯ ಮಾನವೀಯ ಅಂಶಗಳು ಮಾನವ ಲೋಕಕ್ಕೆ ಸಂಬಂಧಿಸಿದವುಗಳಾಗದೆ ಎಲ್ಲವೂ ಸಾಮಾನ್ಯ ಜೀವಲೋಕಕ್ಕೆ ಮೀರಿದ ದೈವೀಕರಿಸಿದ ಸಂಗತಿಗಳಾಗಿಬಿಡುತ್ತವೆ.

ವಾಲ್ಮೀಕಿ ತಾನೇ ಒಬ್ಬ ಬೇಡನಾಗಿ ಇಂತಹ ಅನೇಕ ಬೇಟೆಗಳನ್ನು ಮಾಡಿದ್ದವನು. ಬೇಟೆಯ ಸುಖದುಃಖಗಳನ್ನು ಬಲ್ಲವನು. ಜೀವಿಗಳ ಬದುಕಿನ ಮರ್ಮವ ತಿಳಿದವನು. ಲೋಕದ ಬಗೆಗೆ ಕರುಣಾಮೈತ್ರಿಯ ಸಾಕಾರ ಮೂರ್ತಿಯಾಗಿ ದುಃಖದ ಅನುಸಂಧಾನಕ್ಕೆಂದೇ ಈ ಕಾವ್ಯವನ್ನು ರಚಿಸುತ್ತೇನೆ ಎಂದು ಘೋಷಿಸಿಕೊಂಡು ಈ ಕಾವ್ಯವನ್ನು ರಚಿಸಿದವನು. ನಾವು ಅನುಸಂಧಾನ ಮಾಡಹೊರಟಿರುವುದು ಒಂದು ಪುರಾಣ ಮಹಾಕಾವ್ಯವನ್ನು ಮತ್ತು ಇಂತಹ ಮಹಾಕಾವ್ಯ ರಚಿಸಿದ ವ್ಯಕ್ತಿಯು ಚಾರಿತ್ರಿಕವಾದವನಾದರೂ ಅವನನ್ನು ಪುರಾಣೀಕರಿಸಿಕೊಂಡಿದ್ದೇವೆ. ಆದುದರಿಂದ ಅವನೂ ಸಹ ಚಾರಿತ್ರಿಕ ವ್ಯಕ್ತಿಯಲ್ಲ. ಭಾರತೀಯರಿಗೆ ಪುರಾಣ ಮತ್ತು ಚರಿತ್ರೆಯ ನಡುವಿನ ಗೆರೆ ತೀರಾ ತೆಳುವಾದುದು. ಒಮ್ಮೊಮ್ಮೆ ಪುರಾಣವನ್ನೇ ಚರಿತ್ರೆಯೆಂದು ಅದೂ ಪ್ರಶ್ನಾತೀತ ಚರಿತ್ರೆಯೆಂದು ಓದುತ್ತಿರುತ್ತೇವೆ. ಅನೇಕ ರಾಮಾಯಣಗಳಿರುವಂತೆ ರಾಮಾಯಣವನ್ನು ಓದುವ ಅನೇಕ ಓದುಗಳಿವೆ. ಆದರೆ ವಾಲ್ಮೀಕ ಕೃತ ರಾಮಾಯಣವನ್ನು ಪ್ರಮಾಣ ರಾಮಾಯಣವೆಂದು ಓದುವ ಪರಿಪಾಠ ನಮ್ಮಲ್ಲಿದೆ. ಆದರೆ ಅದರಲ್ಲಿ ಸೇರಿರಬಹುದಾದ ಪ್ರಕ್ಷಿಪ್ತಗಳನ್ನು ವಾಲ್ಮೀಕಿಯ ಬಾಯಿಗೆ ಹಾಕಿದ್ದಾದರೆ ಅವನ ವ್ಯಕ್ತಿತ್ವಕ್ಕೆ ಆಗುವ ಅನಾಹುತವನ್ನು ನಾವು ಗಮನಿಸದಿರಲು ಸಾಧ್ಯವಿಲ್ಲ. ಓದುವುದೆಂದರೆ ಬದಲಿಸಿ ಓದುವುದೆಂದೇ ಅರ್ಥ. ಯಾರೂ ಪಠ್ಯ ಅದಿರುವಂತೆಯೇ ಓದುವುದಿಲ್ಲ. ಬದಲಾಯಿಸದೆ ಓದುವ ಓದು ಎಂಬುದಿರುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮಸ್ತರದ ರಾಜಕಾರಣ.

ವಾಲ್ಮೀಕಿಯೇನೋ ಕೆಳಸ್ತರದ ಮೂಲದವನಿರಬಹುದು. ಆದರೆ ಅವನ ರಾಮಾಯಣ ಇಂದು ನಮ್ಮ ಪರವಾದ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಿಲ್ಲ. ರಾಮ ದೈವವೋ, ದೈವದ ಅವತಾರವೋ ಏನಾದರೂ ಇರಲಿ ಅವನನ್ನು ವಾಲ್ಮೀಕಿ ಯಾವ ಸ್ತರದಿಂದ ಬಂದನೋ ಆ ಸ್ತರದ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ರಾಮಾಯಣ ಇವತ್ತು ಉಳಿದಿಲ್ಲ. ಅದೀಗ ನಮ್ಮದಲ್ಲ. ವಾಲ್ಮೀಕಿ ಮಾತ್ರ ನಮ್ಮವನೇ ಹೊರತು ಅವನ ರಾಮಾಯಣ ನಮ್ಮದಾಗಿ ಉಳಿದಿಲ್ಲ. ಪಠ್ಯ ಮಾತ್ರ ಅದೇ ಇರಬಹುದು. ಆದರೆ ಅದನ್ನು ಓದುವ, ಓದಿನ ಕ್ರಮವನ್ನು ಈಗ ನಿಯಂತ್ರಿಸುತ್ತಿರುವ ಶಕ್ತಿಗಳು ಬೇರೆ. ಹಾಗಾಗಿ ಅದರ ಓದನ್ನು ನಿಯಂತ್ರಿಸಲಾಗಿದೆ. ಆ ನಿಯಂತ್ರಿತ ಓದಿನಲ್ಲಿ ಯಾವ ಪಠ್ಯ ಉಂಟಾಗಬೇಕೋ ಅದು ಉಂಟಾದರೆ ಮಾತ್ರ ಆ ಶಕ್ತಿಗಳು ಸುಮ್ಮನಿರುತ್ತವೆ ಇಲ್ಲವೇ ಒಂದೇ ಸಮ ಊಳಿಡಲಾರಂಭಿಸುತ್ತವೆ.

ಯಾಕೆ ರಾಮಾಯಣ ಮಹಾಭಾರತಗಳೇ ಪುನಾ ಪುನಾ ರಚನೆಗೊಂಡು ಸದಾ ಓದಿನಲ್ಲಿರುವಂತೆ ನೋಡಿಕೊಳ್ಳಲಾಯಿತು? ಯಾವಾಗ ರಾಮ ಮತ್ತು ಕೃಷ್ಣರು ವಿಷ್ಣುವಿನ ಅಂಶವನ್ನು ಆವಾಹಿಸಿಕೊಂಡರೋ ಅವಾಗಲೇ ಇವು ನಮ್ಮಿಂದ ಕೈತಪ್ಪಿ ಹೋದವು. ಇದೇ ಭಾಗ್ಯ ಕಾಳಿದಾಸನಿಗೆ ಸಿಗಲಿಲ್ಲ. ಯಾಕೆಂದರೆ ಅವನ ಕೃತಿಗಳೆಲ್ಲ ಶಾಕ್ತ ಮತ್ತು ಶೈವ ಪಂಥದ ಕೃತಿಗಳಾಗಿದ್ದವು ಎನ್ನುವುದು ಗಮನಿಸಿಬೇಕಾದ ಅಂಶ. ಇನ್ನು ಅಭಿಜ್ಞಾನ ಶಾಕುಂತಲವೂ ಈಶ್ವರ ಪ್ರತ್ಯಭಿಜ್ಞೆಯ ಅನುಸಂಧಾನದ ಕೃತಿಯೆನ್ನುವುದನ್ನು ಮರೆಯುವಂತಿಲ್ಲ.

ಜನಪದರ ಚಿತ್ರಪಟ ರಾಮಾಯಣದಲ್ಲಿ ಸಖಿಯರ ಒತ್ತಾಯಕ್ಕೆ ಸೀತೆ ಆದರ್ಶ ಪುರುಷನ ಚಿತ್ರ ಬಿಡಿಸಲು ತೊಡಗುತ್ತಾಳೆ. ಕಾಲ ಹೆಬ್ಬೆರಳಿನಿಂದಾರಂಭಿಸಿದ ಚಿತ್ರ ಮುಗಿದಾಗ ರಾವಣನ ಚಿತ್ರ ಸಿದ್ಧವಾಗಿರುತ್ತದೆ. ಈ ಕತೆಯನ್ನು ಮಾತ್ರ ಯಾರೋ ಹೆಣ್ಣೇ ನಿರೂಪಿಸಿರಬೇಕು. ಚಿತ್ರವನ್ನು ಕಾಲಿನಿಂದ ಏಕೆ ಆರಂಭಿಸಿದಳು? ರಾವಣನ ಚಿತ್ರವನ್ನೇ ಏಕೆ ಬಿಡಿಸಿದಳು? ಮುಂತಾಗಿ ಪ್ರಶ್ನೆಗಳು ಬಂದರೆ, ಕೇಳಿದವನು ಗಂಡಸಿರಬೇಕು ಎನ್ನುವುದು ಮಾತ್ರ ಖಾತ್ರಿಯಾಗುತ್ತದೆ.

ಉದಾಹರಣೆಗೆ ಸೀತಾತ್ಯಾಗದ ಪ್ರಸಂಗವನ್ನು ಗಮನಿಸಬಹುದು. ಅದರ ಒಂದು ಪಠ್ಯವಾದ ಚಿತ್ರಪಟ ರಾಮಾಯಣದ ಕತೆಯನ್ನು ಗಮನಿಸಿಬಹುದು. ಇದೂ ಕೂಡ ಜನಪದ ರಾಮಾಯಣವೊಂದರ ಪಠದ ಸಂಧಿಯೆಂದೂ, ಇದು ಆನಂದ ರಾಮಾಯಣದಲ್ಲಿದೆಯೆಂದೂ, ಭಾಗವತರು ಆರಂಭದಲ್ಲಿ ನಿರೂಪಿಸಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಇದು ಇಲ್ಲ. ಅಣ್ಣನನ್ನು ಕಳೆದುಕೊಂಡ ಶೂರ್ಪನಖಿ ರಾಮ ಲಕ್ಷ್ಮಣರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾಳೆ. ರಾಮ-ಸೀತೆಯರ ನಡುವೆ ಹೇಗಾದರೂ ಒಡಕು ತರಲು ಕಾಡಿನಲ್ಲಿದ್ದು ಹೊಂಚು ಹಾಕುತ್ತಿರುತ್ತಾಳೆ. ಶ್ರೀರಾಮ ಕಾಡಿಗೆ ಬೇಟೆಗೆಂದು ಬಂದ ಸಮಯ ಸಾಧಿಸಿ ಯೋಗಿನಿಯ ವೇಷದಲ್ಲಿ ಸೀತೆಯನ್ನು ಕಾಣಲು ಅರಮನೆಗೆ ಬರುತ್ತಾಳೆ. ಸೀತೆಯ ಬಳಿ ತನಗೆ ತಿರಿದುಣ್ಣಲು ಅನುವಾಗುವಂತೆ ರಾವಣನ ಚಿತ್ರಪಟವೊಂದನ್ನು ಬರೆದುಕೊಡಲು ಕೋರುತ್ತಾಳೆ.

ಅನ್ನ ವಸ್ತ್ರವನೊಲ್ಲೆ ಹೊನ್ನು ಹಣವನೊಲ್ಲೆ
ನಿನ್ನ ಭಾಗ್ಯವನು ನಾನೊಲ್ಲೆ
ಮುನ್ನಿನ ಸುರನ ರೂಪ ಇನ್ನು ನೀ ಬರೆದರೆ
ಚೆನ್ನಾಗಿ ಹರನ ಗೆಲ್ಲುವೆನು

ಎಂದು ಬೇಡುತ್ತಾಳೆ. ಸೀತೆ ತಾನು ರಾವಣನ ಉಂಗುಷ್ಠವನ್ನು ಮಾತ್ರ ಕಂಡಿರುವುದಾಗಿ ಹೇಳಿದಾಗ,

ಅಂಗುಷ್ಟ ಎಂಬುದಕ ಮುಂದ ಪಾದವ ಬರಿ
ಹಿಮ್ಮಡಿ ಕಾಲು ಚೆಂದಾದ ನಡ ತೊಡಿ
ಹತ್ತು ಸಿರಗಳ ಬರೆದಳು ಮುಂದೆರಡು ಪಾದ
ಬೆಟ್ಟವ ಕೆದರಿದಂಥ ಕಾಯಕೆ||

ಹೀಗೆ ರಾವಣನ ಚಿತ್ರ ಪೂರ್ತಿಯಾಗುತ್ತದೆ. ಈ ಹತ್ತಾರು ತಲೆಗಳು ಗಂಡಸಿಗೆ ಮಾತ್ರ ಎಂದುಕೊಂಡದ್ದೇ ಇಲ್ಲಿ ಸಮಸ್ಯೆಯಾಗುತ್ತದೆ! ಯೋಗಿನಿ, ದೊಡ್ಡ ಆಕಾರದ ಚಿತ್ರಪಟವನ್ನು ಹೊತ್ತೊಯ್ಯಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಜೀವಕೊಟ್ಟರೆ ನಡೆಸಿಕೊಂಡು ಹೋಗುತ್ತೇನೆ ಎಂದು ಚಿತ್ರಪಟಕ್ಕೆ ಜೀವಕೊಡಲು ಸೀತೆಯನ್ನು ಬೇಡುತ್ತಾಳೆ. ಸೀತೆ ಅದಕ್ಕೆ ಜೀವ ಕೊಡುತ್ತಾಳೆ. ಸೀತೆಯಿಂದ ಜೀವ ಪಡೆದ ಅದು ಸೀತೆಯನ್ನೆ ಅನುಕರಿಸುತ್ತದೆ, ಅನುಸರಿಸುತ್ತದೆ. ಈ ಚಿತ್ರದ ರಾವಣನನ್ನು ಯಾರಾದರೂ ಅಪಹರಿಸಿ ತೊಂದರೆ ಕೊಡದಂತೆ, ಲಕ್ಷ್ಮಣನಿಂದ ಮಾತ್ರ ಇದು ವಿಸರ್ಜನೆಯಾಗುವಂತೆ, ಹರಸಿ ಕಾಪಾಡು ಎಂದು ಸೀತೆಯನ್ನು ಯೋಗಿನಿ ಕೋರಿಕೊಳ್ಳುತ್ತಾಳೆ. ಸೀತೆ ಲಕ್ಷ್ಮಣನ ಹೊರತಾಗಿ ಇದನ್ನು ಬೇರೆ ಯಾರೂ ನಾಶ ಮಾಡದಂತೆ ಆಶೀರ್ವದಿಸುತ್ತಾಳೆ. ಇಷ್ಟಾದ ಮೇಲೆ ಶೂರ್ಪನಖಿ ತನ್ನ ನಿಜರೂಪ ತೋರಿಸಿ ಇದರಿಂದ ನಿನ್ನ ಕುಟುಂಬ ಸಂಕಟಕ್ಕೆ ಸಿಲುಕಲಿ ಎಂದು ಬಯಸಿ ಅದನ್ನು ಅಲ್ಲಿಯೇ ಬಿಟ್ಟು ಹೋಗುತ್ತಾಳೆ. ಸೀತೆಗೆ ಮುಂದೆ ಏನು ಮಾಡಬೇಕೆಂದು ಗೊತ್ತಾಗದೆ, ಅದನ್ನು ಮಂಚದ ಕೆಳಗೆ ಅಡಗಿಸಿಡುತ್ತಾಳೆ. ರಾಮ ಕಾಡಿನಿಂದ ವಾಪಸ್ಸು ಬಂದು ಮಂಚದ ಮೇಲೆ ಕುಳಿತಾಗ ಅದು ಮುರಿದುಬೀಳುತ್ತದೆ. ಅದರಡಿಯಲ್ಲಿದ್ದ ರಾವಣನ ’ಜೀವಂತ ಚಿತ್ರ’ವನ್ನು ಕಂಡು ಸೀತೆಯನ್ನು ಶಂಕಿಸಿ, ಅರಮನೆಯ ಹಿರಿಯರನ್ನು ಕರೆಸಿ ವಿಚಾರಣೆ ನಡೆಸುತ್ತಾನೆ. ಸೀತೆ ನಡೆದುದನ್ನು ನಿವೇದಿಸಿದರೂ, ಕೌಸಲ್ಯಾದಿಗಳು ನಂಬಿದರೂ, ರಾಮ ಅದನ್ನು ಸಾರ್ವಜನಿಕವಾಗಿ ನಂಬುವಂತಿರಲಿಲ್ಲ. ಲಕ್ಷ್ಮಣ ಆ ಚಿತ್ರವನ್ನು ಹರಿದುಹಾಕುತ್ತಾನೆ. ವಿಚಾರಣೆ ನಡೆದು ಸೀತೆಯನ್ನು ಅಡವಿಯಲ್ಲಿ ಬಿಟ್ಟುಬರುವಂತೆ ರಾಮನು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ಅಡವಿಯಲ್ಲಿ ವಾಲ್ಮೀಕಿಯ ಆಶ್ರಯ ದೊರೆತು ಲವ-ಕುಶರನ್ನು ಪಡೆಯುವ ಕತೆಯನ್ನು ವಾಲ್ಮೀಕಿ ನಿರೂಪಿಸುತ್ತಾನೆ.

ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸುವ ಸಂದರ್ಭವನ್ನು ರಾಮಾಯಣಗಳು ಅನೇಕ ರೀತಿಯಲ್ಲಿ ನಿರ್ವಹಿಸಿವೆ. ಲಕ್ಷ್ಮೀಶನಂತೂ ಸೀತೆ, ತಾನು ಹೆಣ್ಣಾಗಿ ಹುಟ್ಟಿದ ತಪ್ಪೇ ಎಲ್ಲಕ್ಕೂ ಕಾರಣವೆಂದು ಹಲುಬುವಂತೆ, ಕತೆಯಾಚೆಗೆ ನಿಂತು ನುಡಿಸುತ್ತಾನೆ. ಇನ್ನು ಮೂಡಲಪಾಯದ ಶ್ರೇಷ್ಠ ಭಾಗವತ ತುಮಕೂರು ಜಿಲ್ಲೆಯ ಕಲ್ಲುಮನೆ ನಂಜಪ್ಪನವರ ’ಲವ-ಕುಶ’ ಪಠ್ಯದಲ್ಲಿ ದೀರ್ಘಕಾಲ ಮಕ್ಕಳಾಗದ ರಾಮ ಸೀತಾ ದಂಪತಿಗಳು ಮಕ್ಕಳಿಗಾಗಿ, ವಂಶದ ಮುಂದುವರಿಕೆಗಾಗಿ ಹಂಬಲಿಸುತ್ತಿರುವಾಗ, ವಶಿಷ್ಟರು ಬಂದು ಮಂತ್ರೋಪದೇಶವನ್ನು ಮಾಡಿ ತುಮಕಿಪುರದ (ತುಮಕೂರಿನ) ಚಿಕ್ಕಪೇಟೆಯ ಗಂಗಾಧರೇಶ್ವರನ ಕೃಪೆಯಾಗದ ಹೊರತು ಮಕ್ಕಳಾಗಲು ಸಾಧ್ಯವಿಲ್ಲವೆನ್ನುತ್ತಾರೆ. ತುಮಕಿಪುರದ ಚಿಕ್ಕಪೇಟೆಯ ಗಂಗಾಧರನಿಗೆ ಸೀತೆ ನಡೆದುಕೊಳ್ಳುತ್ತಾಳಾಗಿ ಗರ್ಭಿಣಿಯಾಗುತ್ತಾಳೆ. ಸೀತೆ ಗರ್ಭಿಣಿಯಾಗಿರುವಾಗ ರಜಕನೊಬ್ಬನ ಬಿರುನುಡಿಯನ್ನು ದೂತನ ಮುಖಾಂತರ ಕೇಳಿಸಿಕೊಂಡ ರಾಮ, ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡುತ್ತಾನೆ. ಈ ರಜಕನ ಪ್ರಸಂಗವಿರುವ ಪಠ್ಯ ಹೆಚ್ಚು ಪ್ರಚಲಿತದಲ್ಲಿದೆ. ಹೀಗೆ ರಾಮ ಸೀತೆಯರು ಜನಪದರ ಮಾನಸದಲ್ಲಿ ಓಡಾಡುತ್ತಲೇ ಇರುತ್ತಾರೆ. ನೀರು ಹರಿವೆಡೆಗಳಲ್ಲಿ ಸೀತೆ ಬಟ್ಟೆ ತೊಳೆದು ಬಂಡೆಯ ಮೇಲೆ ಹರವಿದ್ದಾಳೆ; ನಾಮ ಇಟ್ಟುಕೊಳ್ಳಲು ನೀರು ಸಿಗದಿದ್ದುದರಿಂದ ರಾಮ, ಬಾಣವನ್ನು ಬಿಟ್ಟು ಬೋರ್‌ವೆಲ್ ಕೊರೆದು ಬಂದ ನೀರಿನಲ್ಲಿ ನಾಮ ಇಟ್ಟುಕೊಂಡದ್ದರಿಂದಾಗಿ ನಮ್ಮೂರಿನ ಬಳಿ ನಾಮದ ಚಿಲುಮೆ ಇದೆ, ಇತ್ಯಾದಿ.

ರಾಮ ಸೀತೆಯರ ಮನೋಭೂಮಿಕೆಯಲ್ಲಿ ಕೇಡಿಗೆ ತಾವಿಲ್ಲವೆನ್ನುವುದೇ ಇಲ್ಲಿ ವ್ಯಕ್ತವಾಗಿರುವ ಎಲ್ಲರ ಮನೋ ಇಂಗಿತ. ಯಾಕೆಂದರೆ ರಾತ್ರಿಯೆಲ್ಲ ರಾಮಾಯಣ ನೋಡಿದ ಮೇಲೆ ಕೇವಲ ಅನ್ನ ತಿಂದು ಬದುಕುವ ಸಾಮಾನ್ಯ ಮನುಷ್ಯನಲ್ಲಿ ಉಳಿವ, ಬೆಳೆವ ಪ್ರಶ್ನೆ ಅದೊಂದೇ: ಹಾಗಾದರೆ ರಾಮನಿಗೂ ಸೀತೆಗೂ ಏನು ಸಂಬಂಧ? ಇನ್ನು ದೀರ್ಘಕಾಲೀನ ಭ್ರಮಾ ಸಂರಚನೆಗಳನ್ನೇ ಮೆದುಳಿಗೆ, ಹೊಟ್ಟೆಗೆ ಅನ್ನವೆಂದುಕೊಂಡ ಭಾರತೀಯರ ಪ್ರಶ್ನೆಗಳು ಬೇರೆಯೇ ಇವೆ. ರಾಮನನ್ನು ಇಂತಹ ಅನೇಕ ಬಿಕ್ಕಟ್ಟುಗಳಿಂದ ಪಾರು ಮಾಡಲು ಅನೇಕ ಉಪಾಖ್ಯಾನಗಳು ಹುಟ್ಟಿವೆ, ಹುಟ್ಟುತ್ತಲೇ ಇವೆ.

ಜೈನರು ಪ್ರತಿಪುರಾಣವನ್ನು ಸೃಷ್ಟಿಸಿದುದರ ಹಿನ್ನೆಲೆಯನ್ನು ಗಮನಿಸಿದರೆ ರಾಮಾಯಣ ಮಹಾಭಾರತಗಳಲ್ಲಿ ವೈಷ್ಣವ ಸಂಚಯನದ ನಂತರ ಅದು ಮುಕ್ತತೆಯನ್ನು ಕಳೆದುಕೊಂಡಿತು ಎನ್ನಲಡ್ಡಿಯಿಲ್ಲ. ಉದಾಹರಣೆಗೆ ರಾಮಾಯಣ ಮತ್ತು ಭಾರತಗಳನ್ನು ಈ ನೆಲದ ಬೇರೆ ಬೇರೆ ಮತಪಂಥಗಳು ತಮ್ಮ ಕತೆಗಳಂತೆಯೇ ಬಳಸಿವೆ. ಹೀಗೆ ಈ ಕಥನಗಳನ್ನು ತಮ್ಮದಾಗಿಸಿಕೊಂಡು ತಮ್ಮ ಪ್ರಾಚೀನತೆಗೆ ಪುರಾವೆ ಒದಗಿಸಿಕೊಳ್ಳುವ ಯತ್ನವನ್ನೂ ಮಾಡಿವೆ. ಹಾಗಾಗಿ ಕತೆ ಯಾರದ್ದು ಎನ್ನುವುದಕ್ಕಿಂತ ಯಾರು ಬಳಸಿದರು? ಯಾರು ಯಜಮಾನಿಕೆ ಸಾಧಿಸಿ ಯಾರು ತಮ್ಮದಾಗಿಸಿಕೊಂಡರು? ಇದು ಮುಖ್ಯ. ಈ ದೇಶದಲ್ಲಿ ರಾಮಾಯಣ ಮತ್ತು ಭಾರತಗಳೆಂಬ ಉತ್ತರದ ಕಥನಗಳನ್ನು ಬಹುಮಟ್ಟಿಗೆ ಉತ್ತರಮೂಲವನ್ನೇ ಹೊಂದಿರುವ ಜೈನ, ಬೌದ್ಧ ಹಾಗೂ ವೈದಿಕಗಳೆಂಬ ಮೂರೂ ಕವಲುಗಳು ಬಳಸಿವೆ. ಪರಿಣಾಮವಾಗಿ ಬೇರೆ ಬೇರೆ ಪರಂಪರೆಯ ರಾಮಾಯಣ ಭಾರತಗಳೂ ಇವೆ. ಈ ಪರಂಪರೆಗಳಲ್ಲಿ ವೈದಿಕಪರಂಪರೆ ತನ್ನನ್ನು ಹೆಚ್ಚು ಪ್ರಚುರಗೊಳಿಸಿಕೊಂಡುದರಿಂದಲೂ ಇರಬಹುದು ರಾಮಾಯಣ ಭಾರತಗಳ ಈ ಭಿನ್ನ ಪರಂಪರೆಗಳನ್ನು ವೈದಿಕದೊಂದಿಗಿನ ತುಲನೆಯಲ್ಲಿಯೇ ತೂಗಿನೋಡುವ ಕ್ರಮವೇ ನೆಲೆಗೊಂಡಿದೆ.

ಟಿಬೆಟ್, ಲಾವೋಸ, ಕಾಂಬೊಡಿಯಾ, ಮಲೇಷಿಯಾ, ಇಂಡೊನೇಷಿಯಾ, ಜಾವಾ ಮುಂತಾದ ದೇಶಗಳಲ್ಲಿಯೂ ರಾಮಾಯಣ ಪರಂಪರೆ ಇದೆ. ಕನ್ನಡದ ರಾಮಾಯಣಗಳೂ ಮಹತ್ವದ ವಿಸ್ತರಣೆಗಳನ್ನು ಹೊಂದಿವೆ. ಶ್ರೀಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಮತ್ತು ಅದರ ಸುತ್ತಲಿನ ಚರ್ಚೆಗಳು ನಮ್ಮ ನಡುವೆ ಇವೆ. ಇವುಗಳನ್ನು ಪಕ್ಕಕ್ಕೆ ಸರಿಸಿ ರಾಮಾಯಣವನ್ನು ಕುರಿತು ಮಾತುಕತೆ ನಡೆಸಲಾಗದು.

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...