ವ್ಯಕ್ತಿಹೆಸರುಗಳ ಸುತ್ತ ಮುತ್ತ

Date: 24-05-2021

Location: ಬೆಂಗಳೂರು


‘ವ್ಯಕ್ತಿ ಹೆಸರುಗಳು ಕೇವಲ ಹೆಸರುಗಳಲ್ಲ; ಅವು ಗುಣ, ನಡತೆ, ಸ್ವಭಾವಗಳ ಪ್ರತೀಕಗಳು. ಲಿಂಗ, ವಯಸ್ಸು ವರ್ಗ, ವರ್ಣ, ಜಾತಿ, ಧರ್ಮ, ಪ್ರದೇಶ, ಅಂತಸ್ತು-ಆರ್ಥಿಕತೆ, ಪಾಂಥಿಕತೆ, ಬೌದ್ಧಿಕತೆ, ಇತ್ಯಾದಿ ಇತ್ಯಾದಿಗಳ ಸೂಚಕಗಳು’ ಎನ್ನುತ್ತಾರೆ ಲೇಖಕ, ವಿಮರ್ಶಕಡಾ. ರಾಮಲಿಂಗಪ್ಪ ಟಿ. ಬೇಗೂರು. ತಮ್ಮ ‘ನೀರು ನೆರಳು’ ಅಂಕಣದಲ್ಲಿ ವ್ಯಕ್ತಿಗಳ ಹೆಸರು ಮತ್ತು ಅವುಗಳ ಮೂಲಗಳ ಕುರಿತು ವಿಶ್ಲೇಷಿಸಿದ್ದಾರೆ.

೧. ವ್ಯಕ್ತಿನಾಮಗಳು-ಹೆಸರುಗಳು
ಜಗತ್ತಿನಲ್ಲಿ ಎಲ್ಲ ಜೀವಿಗಳನ್ನೂ, ವಸ್ತುಗಳನ್ನೂ ನಾವು ಹೆಸರಿನಿಂದಲೆ ಗುರ್ತಿಸಿಕೊಳ್ಳುತ್ತೇವೆ. ವ್ಯಕ್ತಿಗಳನ್ನಂತು ಹೆಸರಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರಿಗೆ ಅವರ ಹೆಸರೇ ಮೊದಲ ಗುರುತು. ಯಾರನ್ನಾದರೂ ಅವರು ಯಾರು ಎಂದು ಕೇಳುವಾಗ ಸಾಮಾನ್ಯವಾಗಿ ನಾವು ಅವರ ಹೆಸರು, ತಂದೆ ತಾಯಿಯ ಹೆಸರು, ಊರಿನ ಹೆಸರುಗಳನ್ನು ಮೊದಲು ಕೇಳುತ್ತೇವೆ. ಆನಂತರ ಅವರ ಜಾತಿ ಅಥವಾ ಪಂಗಡದ ಹೆಸರು, ಅವರ ದೇಶ, ಭಾಶೆ, ಸಾಧನೆಗಳನ್ನು ಕೇಳುತ್ತೇವೆ. ಯಾರ ಬಗೆಗಾದರು ಮಾತಾಡುವಾಗ ಕೂಡ ನಾವು ಅವರ ಹೆಸರು ಉಲ್ಲೇಖಿಸಿ ಮಾತಾಡುವುದು ನಮ್ಮಲ್ಲಿ ವಾಡಿಕೆ. ರಕ್ತಸಂಬಂಧದಲ್ಲಿ ಸಂಬಂಧಿಕರನ್ನು ಸಂಬೋಧಿಸಲು ನಾವು ಅಣ್ಣ, ಅಮ್ಮ, ಅಪ್ಪ, ಅಕ್ಕ ಎಂಬಿತ್ಯಾದಿ ಸಂಬಂಧ ವಾಚಕಗಳನ್ನು ಬಳಸುತ್ತೇವೆ. ಆದರೆ ಇತರ ವ್ಯಕ್ತಿಗಳನ್ನು ಸಂಬೋಧಿಸಲು ನಾವು ಬಹುಪಾಲು ಸಮಯದಲ್ಲಿ ಅವರವರ ಹೆಸರುಗಳನ್ನೆ ಬಳಸುತ್ತೇವೆ.

ವ್ಯಕ್ತಿ ಹೆಸರುಗಳು ಕೇವಲ ಹೆಸರುಗಳಲ್ಲ; ಅವು ಗುಣ, ನಡತೆ, ಸ್ವಭಾವಗಳ ಪ್ರತೀಕಗಳು. ಲಿಂಗ, ವಯಸ್ಸು ವರ್ಗ, ವರ್ಣ, ಜಾತಿ, ಧರ್ಮ, ಪ್ರದೇಶ, ಅಂತಸ್ತು-ಆರ್ಥಿಕತೆ, ಪಾಂಥಿಕತೆ, ಬೌದ್ಧಿಕತೆ, ಇತ್ಯಾದಿ ಇತ್ಯಾದಿಗಳ ಸೂಚಕಗಳು. ಅವುಗಳು ತಮ್ಮ ರಚನೆ ಮತ್ತು ಅರ್ಥದ ನೆಲೆಯಲ್ಲಿ ಹತ್ತಾರು ಬಗೆಯ ಸಾಧ್ಯತೆಗಳನ್ನು ಪಡೆದಿರುತ್ತವೆ. ಅಷ್ಟೇ ಅಲ್ಲ ಅವು ಸಾಂಸ್ಕೃತಿಕ ಅಧ್ಯಯನದ ಸಾಧನಗಳು ಕೂಡ. ಹೆಸರುಗಳು ನಿರ್ದಿಶ್ಟಷ್ಟ ಕಾಲ ದೇಶಗಳಲ್ಲಿ ಸೃಶ್ಟಿಯಾಗುವುದರಿಂದ ಅವು ಸೃಶ್ಟಿಯಾದ ಕಾಲ ದೇಶಗಳ ಸಂಸ್ಕೃತಿಯನ್ನು ಪುನಾರಚಿಸಲು ನೆರವಾಗುತ್ತವೆ. ಚಾರಿತ್ರಿಕವಾಗಿ ನಮಗೆ ಪೀಳಿಗೆಯಿಂದ ಪೀಳಿಗೆಗೆ ಹೆಸರುಗಳು ಹರಿದು ಬಂದಿರುವುದರಿಂದ ಅವುಗಳನ್ನು ನಾವು ಸಾಂಸ್ಕೃತಿಕ ಚರಿತ್ರೆಯ ಆಕರಗಳನ್ನಾಗಿ ಬಳಸಲು ಸಾಧ್ಯವಿದೆ. ಲಿಪಿಯಿಲ್ಲದ ಭಾಷಾ ಸಮುದಾಯಗಳ ಸಾಂಸ್ಕೃತಿಕ ಚರಿತ್ರೆ ಅಭ್ಯಾಸ ಮಾಡುವಾಗ ಇವು ಮುಖ್ಯ ಆಕರಗಳು

ನಮ್ಮಲ್ಲಿ ಹೆಸರುಗಳನ್ನು ವ್ಯಾಕರಣದಲ್ಲಿ ಅಂಕಿತನಾಮ, ರೂಢನಾಮ, ಅನ್ವರ್ಥನಾಮ ಎಂದು ಮೂರು ಬಗೆಯಾಗಿ ವಿಂಗಡಿಸಿಕೊಂಡಿದ್ದೇವೆ. ಇವಲ್ಲದೆ ಸಹಜನಾಮ, ಸಾಧಿತನಾಮ ಎಂದು ಇನ್ನೆರಡು ಬಗೆಯಾಗಿ ಕೂಡ ವಿಂಗಡಿಸಿಕೊಂಡಿದ್ದೇವೆ. ವ್ಯಕ್ತಿ ಹೆಸರುಗಳಿಗು ತಮ್ಮದೆ ಆದ ರಚನೆ ಮತ್ತು ಬಳಕೆಯ ನಿಯಮಗಳು ಕನ್ನಡದಲ್ಲಿ ಇವೆ. ಆದರೆ ಇವು ವ್ಯಾಕರಣ ಹೇಳುವ ಹಾಗೆ ಸಿದ್ಧಗೊಂಡು ಇರುವ ನಿಯಮಗಳಲ್ಲ; ಸದಾ ಬದಲಾಗುವ ನಿಯಮಗಳು.

೨. ಹೆಸರಿಡುವ ಪದ್ಧತಿಗಳು

ಹೆಸರುಗಳನ್ನು ಇಡುವ ಹಲವು ಪದ್ಧತಿಗಳು ನಮ್ಮಲ್ಲಿ ಚಾಲ್ತಿಯಲ್ಲಿ ಇವೆ. ಆದರೆ ವ್ಯಕ್ತಿಗಳಿಗೆ ಇಡುವ ಹೆಸರುಗಳಿಗು ಮತ್ತು ಆಯಾ ವ್ಯಕ್ತಿಗಳ ವ್ಯಕ್ತಿತ್ವಕ್ಕು ನೇರಾನೇರ ಸಂಬಂಧ ಯಾವಾಗಲು ಇರುತ್ತದೆ ಎಂದೇನೂ ಇಲ್ಲ. ಕೆಂಪಣ್ಣ ಎಂಬ ಹೆಸರಿನ ವ್ಯಕ್ತಿ ಕಪ್ಪಾಗಿರಬಹುದು. ಸೌಮ್ಯ ಎಂಬ ಹೆಸರಿನ ಹುಡುಗಿ ಸದಾ ಜೋರು ಮಾಡುವ ಹುಡುಗಿ ಆಗಿರಬಹುದು. ಧರ್ಮರಾಜ ಎಂಬ ಹೆಸರಿನವನು ಮೋಸಗಾರನೂ, ದಾನಪ್ಪ ಎಂಬ ಹೆಸರಿನವನು ಜಿಪುಣನೂ ಆಗಿರಬಹುದು. ಕೆಲವೊಮ್ಮೆ ಹೆಸರು ಅನ್ವರ್ಥ ಆಗಿ ಇರುವುದು ಉಂಟು. ದಾನಪ್ಪ ಎಂಬವ ನಿಜಕ್ಕೂ ದಾನವಂತ ಆಗಿರಬಹುದು. ಸೌಮ್ಯ ಎಂಬಾಕೆ ನಿಜಕ್ಕು ಸೌಮ್ಯವಾಗೆ ಇರಬಹುದು. ಆದರೂ ವ್ಯಕ್ತಿತ್ವಕ್ಕು ಮತ್ತು ವ್ಯಕ್ತಿಯ ಹೆಸರಿಗು ನೇರ ನಂಟು ಕಟ್ಟುವ ಅಗತ್ಯವಿಲ್ಲ.

ನಮ್ಮವರು ಹೆಸರು ಇಡುವಾಗ ಮತ್ತು ಬಳಕೆ ಮಾಡುವಾಗ ಹತ್ತಾರು ರೀತಿ ರಿವಾಜುಗಳನ್ನು ಅನುಸರಿಸುತ್ತಾರೆ. ಹೆಸರು ಇಡುವುದಕ್ಕೆ ನಮ್ಮಲ್ಲಿನ ಹಲವು ಬಗೆಯ ನಂಬಿಕೆಗಳು ಕಾರಣವಾಗಿವೆ. ದೈವದ ಮೇಲಿನ ನಂಬಿಕೆ, ಗುರುಗಳ ಮೇಲಿನ ಭಕ್ತಿ, ಹಿರಿಯರು ಸತ್ತು ತಮ್ಮ ಮೊಮ್ಮಕ್ಕಳ ಹೊಟ್ಟೆಯಲ್ಲಿ ಮತ್ತೆ ಹುಟ್ಟುತ್ತಾರೆ ಎಂಬ ನಂಬಿಕೆ, ಮನೆಯಲ್ಲಿ ಹುಟ್ಟಿದ ಮಕ್ಕಳು ಒಂದೊಂದಾಗಿ ಯಾವುದಾವುದೊ ಕಾರಣಗಳಿಗೆ ಸಾಯುತ್ತಿದ್ದರೆ ಹುಟ್ಟುವ ಮಕ್ಕಳಿಗೆ ಸುಡಗಾಡಮ್ಮ, ಸುಡಗಾಡಪ್ಪ ಎಂದು ಹೆಸರಿಟ್ಟರೆ ಬದುಕುತ್ತಾರೆ ಎಂಬ ನಂಬಿಕೆ; ತಂದೆಗೆ ಅಧೈರ್ಯ ಇದ್ದರೆ ಮಗನಿಗೆ ಸೂರಪ್ಪ ಎಂಬ ಹೆಸರಿಡಬೇಕು ಎಂಬ ನಂಬಿಕೆ; ಯಾರೂ ಇಟ್ಟಿರದ ಹೊಸ ಹೆಸರನ್ನೆ ಇಡಬೇಕು ಎಂಬ ಹೊಸತನದ ಅಪೇಕ್ಶೆ, ತಮಗೆ ಉಪಕಾರ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವ ಮಾರ್ಗವೆಂದರೆ ತಮ್ಮ ಮಕ್ಕಳಿಗೆ ಅವರ ಹೆಸರನ್ನು ಇಡುವುದು ಎಂಬ ಶ್ರದ್ಧೆ, ನಾಡಿನ ಸುಪ್ರಸಿದ್ಧರ ಮತ್ತು ಸಾಧಕರ ಹೆಸರಿಟ್ಟರೆ ನಮ್ಮ ಮಕ್ಕಳೂ ಅವರಂತೆಯೆ ಕೀರ್ತಿವಂತರಾಗುತ್ತಾರೆ ಎಂಬ ನಂಬಿಕೆ ಇತ್ಯಾದಿ ಇತ್ಯಾದಿ ಹತ್ತಾರು ಬಗೆಯ ನಂಬಿಕೆ, ಆಸೆ, ಅಪೇಕ್ಶೆ, ಶ್ರದ್ಧೆಗಳು ಹೆಸರಿಡುವ ಹಿಂದೆ ಇರುವುದನ್ನು ಕಾಣಬಹುದು.

೨.೧. ಹೆಸರುಬಲ, ಗಳಿಗೆ ನಕ್ಶತ್ರ, ರಾಶಿ: ನಮ್ಮಲ್ಲಿ ಹುಟ್ಟಿದ ಮಗುವಿಗೆ ಹೆಸರಿಡುವುದು ಒಂದು ಆಚರಣೆ: ನಾಮಕರಣ ಸಮಾರಂಭ. ಸೂತಕ ಕಳಕೊಳ್ಳುವ ಆಚರಣೆಯ ಭಾಗವಾಗಿ ಹೆಸರಿಡುವ ಶಾಸ್ತ್ರವನ್ನೂ ನಮ್ಮವರು ಮಾಡುತ್ತಾರೆ. ಹುಟ್ಟಿನಿಂದ ಸಾಯುವವರೆಗೆ ಮತ್ತು ಆನಂತರವೂ ಪಂಚಾಂಗ ನಮ್ಮ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿದೆ. ಹುಟ್ಟಿದ ‘ಗಳಿಗೆ-ನಕ್ಷತ್ರʼ ಇವುಗಳನ್ನು ನೋಡಿ ಮಗುವಿನ ರಾಶಿ ನಿರ್ಧರಿಸಿ ಯಾವ ಅಕ್ಷರದಿಂದ ಹೆಸರು ಇಡಬೇಕು ಎಂದು ಬ್ರಾಹ್ಮಣರು ನಿರ್ಧರಿಸುವ ಪದ್ಧತಿ ಹಿಂದೆ ನಮ್ಮಲ್ಲಿತ್ತು. ಹುಟ್ಟಿದಾಗ ಜಾತಕ ಬರೆಸುವುದೂ ಇತ್ತು. ಈಗಲೂ ಕೆಲವರಲ್ಲಿ ಇದೆ. ಹೀಗಾಗಿ ವ್ಯಕ್ತಿಯ ಹೆಸರು ಕೆಲವೊಮ್ಮೆ ಕುಟುಂಬದ ಇಲ್ಲವೆ ಪೋಷಕರ ಆಯ್ಕೆ ಆಗಿರುವುದಿಲ್ಲ. ಆದರೆ ಇತ್ತೀಚೆಗೆ ಈ ಪದ್ಧತಿ ಸ್ವಲ್ಪ ಕಡಿಮೆ ಆಗುತ್ತಿದೆ.

ಇಂದು ವ್ಯಕ್ತಿಗಳಿಗೆ ತಾವು ಬೆಳೆದು ದೊಡ್ಡವರಾದ ಮೇಲೆ ತಮ್ಮ ಹೆಸರು ಸರಿಕಾಣದಿದ್ದರೆ ಅದನ್ನು ನೋಟರಿ ಹತ್ತಿರ ಅಫಿಡವಿಟ್‌ ಮಾಡಿಸಿ ಅಧಿಕೃತವಾಗಿ ಪ್ರಕಟಿಸಿ ಬದಲಿಸಿಕೊಳ್ಳಲೂ ಕಾನೂನಿನಲ್ಲಿ ಅವಕಾಶ ಇದೆ. ಹಾಗೆಯೆ ಯಾರಿಗಾದರೂ ‘ಗಣಕೂಟʼ, ‘ಸಾಲಾವಳಿʼ ಸರಿಬರದಿದ್ದರೆ; ಕೆಲವೊಮ್ಮೆ ಎಷ್ಟು ಯತ್ನಿಸಿದರೂ ಮದುವೆ ಕೂಡಿ ಬರದಿದ್ದರೆ ಹೆಸರು ಬದಲಿಸುವ ಪದ್ಧತಿಯೂ ಇದೆ. ಕೆಲವೊಮ್ಮೆ ಹಿಡಿದ ಕಾರ್ಯ ಕೈಗೂಡದೆ ಹೋದಾಗಲೂ ಕೆಲವರು ಹೆಸರು ಬದಲಿಸಿಕೊಳ್ಳುವುದು ಉಂಟು. ಅಂತು ನಮ್ಮಲ್ಲಿ ವ್ಯಕ್ತಿನಾಮಗಳ ಹಿಂದೆ ಚಿತ್ರವಿಚಿತ್ರವಾದ, ತಳಬುಡವಿಲ್ಲದ ಆಚಾರ, ನಂಬಿಕೆಗಳು ಇವೆ.

೨.೨ ದೈವಭಕ್ತಿ: ಮನೆಯ ಮಕ್ಕಳಿಗೆ ತಮ್ಮ ಮನೆದೇವರ ಅಥವಾ ಕುಲದೇವರ ಹೆಸರನ್ನು ಇಡುವುದು ನಮ್ಮಲ್ಲಿ ಒಂದು ಸಾಮಾನ್ಯ ವಾಡಿಕೆ. ಕೆಲವೊಮ್ಮೆ ಒಂದು ಕುಟುಂಬಕ್ಕೆ ಎರಡು ಮನೆದೇವರುಗಳು ಇರುವುದುಂಟು. ಆಗ ಒಬ್ಬೊಬ್ಬ ಮಕ್ಕಳಿಗು ಒಂದೊಂದು ದೈವದ ಹೆಸರನ್ನು ಇಡುತ್ತಾರೆ. ಒಬ್ಬನೇ ಮಗ ಇದ್ದರೆ ಆಗ ರಾಮತಿಮ್ಮ ಅಂತಲೋ ರಾಮಲಿಂಗ ಅಂತಲೋ ಎರಡೂ ಹೆಸರುಗಳನ್ನು ಬೆರೆಸಿ ಇಡುವುದೂ ಉಂಟು. ಕೆಲವು ಪ್ರದೇಶಗಳಲ್ಲಿ ಕಾಳಿದೇವತೆ ಇದ್ದರೆ ಕಾಳಮ್ಮ, ಕಾಳಕ್ಕ, ಕಾಳವ್ವೆ, ಮಾಂಕಾಳಮ್ಮ ಇತ್ಯಾದಿಯಾಗಿ ಹಲವರಿಗೆ ಅದೇ ದೇವತೆಯ ಹೆಸರನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಇಡುವುದುಂಟು. ಮೈಲಾರಲಿಂಗನ ಒಕ್ಕಲು ಮನೆಯವರಿಗೆ ಎರಡು ಗಂಡು ಮಕ್ಕಳಿದ್ದರೆ ಕೆಲವೊಮ್ಮೆ ಚಿಕ್ಕ ಮೈಲಾರಯ್ಯ ದೊಡ್ಡ ಮೈಲಾರಯ್ಯ ಎಂದು ಇಡುವುದುಂಟು. ದೇವರ ಒಕ್ಕಲು ಮತ್ತು ಬಾಳುವ ಬಗೆ ಇವುಗಳ ನಡುವೆ ಒಂದು ಅನ್ಯೋನ್ಯ ಸಂಬಂಧ ಇರುತ್ತದೆ. ಬಂಡಿಮಾಂಕಾಳಿ ಒಕ್ಕಲುಗಳ ಬಾಳಿನ ಕ್ರಮದಂತೆಯೆ ತಿರುಪತಿ ತಿಮ್ಮಪ್ಪನ ಒಕ್ಕಲುಗಳ ಬಾಳು ಇರುವುದಿಲ್ಲ. ಇದು ಹೆಸರಿಡುವ ಆಚಾರಕ್ಕು ಅನ್ವಯಿಸುವ ಮಾತು.

೨.೩. ಹಿರಿಯರ ನೆನಪು: ಕೆಲವು ಮನೆಯಲ್ಲಿ ವಂಶವೃಕ್ಶ ನೋಡಿದರೆ ತಾತನ ಹೆಸರು ಮೊಮ್ಮಗನಿಗೆ ಅವನ ಹೆಸರು ಅವನ ಮೊಮ್ಮಗನಿಗೆ ಇಡುತ್ತ ಬಂದಿರುತ್ತಾರೆ. ಸತ್ತವರು ನಮ್ಮ ಮಕ್ಕಳ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಮತ್ತು ತಮ್ಮನ್ನು ಸಲಹಿದ ಹಿರಿಯರನ್ನು ಕೃತಜ್ಞತೆಯಿಂದ ಸ್ಮರಿಸಬೇಕು ಎಂಬ ಉದ್ದೇಶದಿಂದ ಇಂತಹ ಆಚಾರ ನಮ್ಮಲ್ಲಿ ಚಾಲ್ತಿಯಲ್ಲಿದೆ. ಮನೆತನದ ಹೆಸರು ಉಳಿಸಬೇಕೆಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತಿರುತ್ತದೆ. ಇಂತಹ ಕಡೆ ಕೆಲವರಲ್ಲಿ ವಯಸ್ಸಿಗೆ ತಕ್ಕಂತೆ ಹೆಸರುಗಳು ರೂಪಾಂತರ ಆಗುತ್ತವೆ. ಅಂದರೆ ಸಿದ್ದು ಎಂದು ಎಳೆವಯಸ್ಸಿನಲ್ಲಿ ಇದ್ದರೆ ಹರಯದಲ್ಲಿ ಸಿದ್ದಣ್ಣ ಎಂದೂ, ನಡುವಯಸ್ಸಿಗೆ ಬಂದಾಗ ಸಿದ್ಧಪ್ಪ ಎಂದೂ, ವೃದ್ಧಾಪ್ಯ ಬಂದಾಗ ಸಿದ್ದಜ್ಜ ಎಂದೂ ರೂಪಾಂತರ ಆಗುವುದುಂಟು. ಆದರೆ ಈಗೀಗ ಹಿರಿಯರ ಹೆಸರು ಇಡುವ ಪ್ರವೃತ್ತಿಯೆ ಕಡಿಮೆ ಆಗುತ್ತಿದೆ.

೨.೪ ಗುರುಭಕ್ತಿ, ಪಾಂಥಿಕತೆ: ನಮ್ಮಲ್ಲಿ ದಾಸದೀಕ್ಶೆ, ಗುರುದೀಕ್ಶೆ, ಗುಡ್ಡದೀಕ್ಶೆ, ಸನ್ಯಾಸ ದೀಕ್ಶೆ ಹೀಗೆ ಹಲವಾರು ಬಗೆಯ ದೀಕ್ಶೆಗಳನ್ನು ತೆಗೆದುಕೊಳ್ಳುವ ಪರಿಪಾಠಗಳಿವೆ. ಆಗ ಅವರ ಹೆಸರಿನ ಹಿಂದೆ ದಾಸ ಎಂತಲೋ ಅಜ್ಜ ಎಂತಲೊ ಅಥವಾ ಅವರ ಹೆಸರನ್ನೆ ಗುರುಸ್ವಾಮಿ ಎಂತಲೊ ಇನ್ನೇನೋ ಸ್ವಾಮಿ ಎಂತಲೋ ಬದಲಾಯಿಸುವುದು ಪದ್ಧತಿ. ಪಂಥಾಚಾರ ಮತ್ತು ಮಠಾಚಾರಗಳು ನಮ್ಮಲ್ಲಿ ಹೆಚ್ಚು. ಇದೂ ನಮ್ಮ ವ್ಯಕ್ತಿನಾಮಗಳ ಹಿಂದೆ ಕೆಲಸ ಮಾಡುತ್ತದೆ. ನಮ್ಮ ಜನರಲ್ಲಿ ಪಾಂಥಿಕ ಭಕ್ತಿ, ಗುರುಭಕ್ತಿಗಳು ಜಾಸ್ತಿ. ನಮ್ಮವರ ಬದುಕನ್ನು ಮಠಗಳು, ಗುರುಗಳು, ಸಂತರು ನಿರಂತರವಾಗಿ ಪ್ರಭಾವಿಸುತ್ತ ಬಂದಿದ್ದಾರೆ. ತಮ್ಮ ಜೀವನದಲ್ಲಿ ಯಾರೋ ಗುರುಗಳ, ಸಂತರ, ಮಠಪತಿಗಳ ಮಾರ್ಗದರ್ಶನದಿಂದ ಪವಾಡಗಳು ಜರುಗಿವೆ ಎಂದು ನಂಬುವ ಜನ ತಮ್ಮ ಮಕ್ಕಳಿಗೆ ತಮ್ಮ ಗುರುಗಳ ಹೆಸರುಗಳನ್ನೆ ಇರಿಸುತ್ತಾರೆ. ಕೆಲವು ಕಡೆ ಸಂತರ ಸಮಾಧಿ ಇರುವ ಕಡೆ ನಿತ್ಯ ಜಾತ್ರೆ, ನಾಮಕರಣ, ಮಂಡೆ ಕೊಡುವುದು ಎಲ್ಲ ನಡೆಯುವುದುಂಟು. ಚಳ್ಳಕೆರೆ ಭಾಗಕ್ಕೆ ನಾವು ಹೋದರೆ ಅಲ್ಲಿ ಒಂದೊಂದು ತರಗತಿಯಲ್ಲಿ ಐವತ್ತಕ್ಕೆ ಇಪ್ಪತ್ತು ತಿಪ್ಪೇಸ್ವಾಮಿಗಳು ಸಿಗುತ್ತಾರೆ. ಹತ್ತು ಚಿತ್ತಪ್ಪಗಳು ಸಿಗುತ್ತಾರೆ. ಚಾಮರಾಜನಗರದ ಕಡೆ ಮಾದಪ್ಪ, ಮಾದೇಶ, ಮಾದಯ್ಯಗಳು ಬಹಳವಾಗಿ ಸಿಗುತ್ತಾರೆ. ಯಡಿಯೂರ ಕಡೆ ಹೋದರೆ ಸಿದ್ಧಪ್ಪ, ಸಿದ್ಧಲಿಂಗಪ್ಪ, ಸಿದ್ಧಲಿಂಗೇಶ ಹೀಗೆ ಹತ್ತಾರು ಜನರು ಸಿಗುತ್ತಾರೆ. ಗುರುಭಕ್ತಿ, ಪಾಂತಿಕತೆಗಳು ಇದಕ್ಕೆಲ್ಲ ಕಾರಣ. ಹೀಗೆ ಹೆಸರುಗಳು ಎಂದರೆ ನಮ್ಮಲ್ಲಿ ಸಂಸ್ಕೃತಿ ಚರಿತ್ರೆಯ ಉಪ್ಪು ಸವರಿದ ಹೆಣಗಳು.

೨.೫. ರಾಜಭಕ್ತಿ: ರಾಜರುಗಳ ಹೆಸರುಗಳನ್ನು ಜನ ತಮ್ಮ ಮಕ್ಕಳಿಗೆ ಇಡುವ ಪರಿಪಾಠವೂ ಇದೆ. ಇದು ಚರಿತ್ರೆ, ಪುರಾಣಗಳ ರಾಜರೂ ಆಗಬಹುದು, ವರ್ತಮಾನದ ರಾಜರೂ ಆಗಬಹುದು. ಈಗ ರಾಜಪ್ರಭುತ್ವ ಇಲ್ಲ: ಹಿಂದೆ ಈ ರೂಢಿ ಇತ್ತು. ಆದರೂ ನಾವು ಮೈಸೂರು ಭಾಗಕ್ಕೆ ಹೋದರೆ ಇಂದಿಗೂ ಹತ್ತಾರು ಚಾಮಯ್ಯ, ಚಾಮಕ್ಕ, ಚಾಮರಾಜ ಇಂತಹ ಹೆಸರುಗಳನ್ನು ಕಾಣಬಹುದು. ಸುಲ್ತಾನ್‌, ರಾಜ, ರಾಯ, ಬಹಾದೂರ್‌, ಚಕ್ರವರ್ತಿ, ದೊರೆ, ರಾಣಿ, ರಾಜಿ, ಮಾತೆ, ಅಮ್ಮಣ್ಣಿ ಎಂಬ ಹೆಸರುಗಳು ಇಂದಿಗೂ ಕೆಲವೆಡೆ ಸರ್‌ನೇಮ್‌ಗಳಾಗಿ ಕೆಲವೆಡೆ ಪೂರ್ಣ ಹೆಸರುಗಳಾಗಿ ಚಲಾವಣೆಯಲ್ಲಿ ಇರುವುದನ್ನು ಕಾಣಬಹುದು.

೨.೬. ಹೊಸತನ, ಸೃಜನಶೀಲತೆ: ಕುವೆಂಪು ತಮ್ಮ ಒಬ್ಬ ಮಗನಿಗೆ ಕೋಕಿಲೋದಯ ಚೈತ್ರ ಎಂದೂ ಇನ್ನೊಬ್ಬನಿಗೆ ಪೂರ್ಣಚಂದ್ರ ತೇಜಸ್ವಿ ಎಂದೂ ಹೆಸರಿಟ್ಟಿದ್ದಾರೆ. ಕೆಲವರು ಎರಡೆ ಅಕ್ಶರಗಳು ಇರುವ ಗುಣ, ಭವ, ಸ್ವರ, ಸುವ್ವಿ, ಋತ ಈ ರೀತಿ ಹೆಸರಿಟ್ಟರೆ; ಕೆಲವರು ಧೀ, ಭಾ, ಸೈ ಹೀಗೆ ಒಂದೊಂದೆ ಅಕ್ಶರಗಳ ಹೆಸರುಗಳನ್ನು ಇಡುತ್ತಾರೆ. ಇದುವರೆಗೆ ಎಲ್ಲೂ ಯಾರೂ ಇಟ್ಟಿರದ ಹೊಸ ಹೆಸರನ್ನು ಇಡಬೇಕು ಎಂಬ ಉಮೇದು ಕೆಲವರಿಗೆ ಇರುತ್ತದೆ. ಎಲ್ಲರ ಮನಸ್ಸನ್ನು ಸೆಳೆಯುವ ಬಿನ್ನ ಹೆಸರನ್ನು ಇಡಬೇಕು ಎಂಬ ಆಸೆ ಕೆಲವರಿಗೆ ಇರುತ್ತದೆ. ಇಲ್ಲೆಲ್ಲ ಸೃಜನಶೀಲತೆ, ಹೊಸತನದ ಹಂಬಲ, ವಿಶೇಶತೆಯ ಸೆಳೆತ ಕೆಲಸ ಮಾಡುತ್ತದೆ.

೨.೭. ಸುಪ್ರಸಿದ್ಧರ ಸೆಳೆತ: ರಾಜ್‌ಕುಮಾರ್‌, ಇಂದಿರಾ, ಜವಾಹರ, ಬಸವ, ಶಾಕ್ಯಘೋಶ, ಸಚಿನ್‌, ಕಲಾಮ್‌, ವಿಶ್ವೇಶ್ವರ, ಭೀಮ, ಅಶೋಕ, ದೇವನಾಂಪ್ರಿಯ, ಭರತ, ದಿಲೀಪ, ಸತ್ಯವ್ರತ, ಚೆನ್ನಮ್ಮ, ಓಬಕ್ಕ ಇತ್ಯಾದಿಯಾಗಿ ಕೆಲವರಿಗೆ ತಮ್ಮ ಮಕ್ಕಳಿಗೆ ಸುಪ್ರಸಿದ್ಧರ, ಸಾಧಕರ, ಸ್ಟಾರುಗಳ, ಚಕ್ರವರ್ತಿಗಳ, ಪುರಾಣಪ್ರಸಿದ್ಧರ ಹೆಸರು ಇಡಬೇಕು ಎಂಬ ಆಸೆ ಇರುತ್ತದೆ. ನಮ್ಮ ಮಕ್ಕಳೂ ಅವರಂತೆ ಆದಾರು ಎಂಬ ಆಸೆ ಇಂತಹ ಪ್ರವೃತ್ತಿಯಲ್ಲಿ ಇರುತ್ತದೆ. ಕೆಲವೊಮ್ಮೆ ಇಂದಿರಾ ಪವಾರ, ಜವಾಹರ ನಾಯಕ, ಬಸವರಾಜ ಪಾಟೀಲ, ಭೀಮೇಶ ಹಲಸಂಗಿ ಹೀಗೆ ಪ್ರಸಿದ್ಧರ ಹೆಸರಿನ ಜೊತೆ ತಮ್ಮ ಮನೆತನದ ಹೆಸರನ್ನೂ, ಊರಿನ ಹೆಸರನ್ನೂಸೇರಿಸಿ ಇಡುವುದುಂಟು.

೨.೮. ಜಾತಿ, ವರ್ಗ, ಧರ್ಮದ ಗುರುತುಗಳಿಂದ ಬಿಡುಗಡೆ: ಕೆಲವು ದಲಿತ, ಹಿಂದುಳಿದ ವರ್ಗಕ್ಕೆ, ಗ್ರಾಮೀಣ ಸೊಗಡಿನ ಜನಕ್ಕೆ ತಮ್ಮ ಹೆಸರುಗಳಲ್ಲಿ ಜಾತಿ ಸೂಚಕಗಳು ಇರುವುದು ಇಶ್ಟವಿಲ್ಲ. ಹಾಗಾಗಿ ಅವರೆಲ್ಲ ಇಂದು ತಮ್ಮ ಮನೆ ಮಕ್ಕಳಿಗೆ ʼಮೇಲ್ಜಾತಿʼಯ ಹೆಸರನ್ನು, ಭೀಮ, ಬುದ್ಧರ ಹೆಸರುಗಳನ್ನು ಇಡುತ್ತಿದ್ದಾರೆ. ಗಿಡ್ಡ, ಬೀರಕ್ಕ, ತಿಪ್ಪೇಶಿ, ಬೋರೇಗೌಡ ಎಂದು ಇರುವ ಹೆಸರುಗಳನ್ನು ಅವು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ತಾಪಸಿ ಎಂದೊ, ಬೈರೇಶ್‌ ಎಂದೊ ಬದಲಿಸಿಕೊಳ್ಳುತ್ತಾರೆ. ತಮ್ಮ ಸಾಮಾಜಿಕ ಹಿಂಜರಿಕೆ, ಕೀಳರಿಮೆ ಉಳ್ಳ ತಮ್ಮ ಜಾತಿ, ವರ್ಗ, ಧರ್ಮದ ಗುರುತುಗಳಿಂಗ ಬಿಡಿಸಿಕೊಳ್ಳುವ ಕಾರಣದಿಂದ ಅವರು ಹಾಗೆ ಮಾಡುತ್ತಾರೆ.

೨.೯. ವಿವಾಹದ ಸಂಬಂಧ: ಹೆಣ್ಣುಮಕ್ಕಳು ತಮ್ಮ ಹೆಸರಿನ ಜೊತೆ ತಮ್ಮ ತಂದೆಯ ಹೆಸರನ್ನು ಇಲ್ಲವೆ ಮನೆತನದ ಹೆಸರನ್ನು ಇರಿಸಿಕೊಂಡಿರುತ್ತಾರೆ. ಮದುವೆ ಆದ ನಂತರ ಅವರಲ್ಲಿ ಬಹುಪಾಲು ಮಂದಿ ತಮ್ಮ ಮನೆತನದ ಅಥವಾ ಸರ್‌ನೇಮ್‌ನ್ನು ತೆಗೆದು ತನ್ನ ಗಂಡನ ಹೆಸರನ್ನು ತನ್ನ ಹೆಸರಿನ ಜೊತೆ ಜೋಡಿಸಿಕೊಳ್ಳುತ್ತಾರೆ. ಶಿಶಿಕಲಾ ವಸ್ತ್ರದ ಎಂಬ ಹೆಸರು ವಿವಾಹದ ನಂತರ ಶಶಿಕಲಾ ವೀರಯ್ಯಸ್ವಾಮಿ ಎಂದಾಗಬಹುದು. ಸುಮಾ ಕುಮಾರ್‌ ಎಂಬ ಹೆಸರು ಸುಮಾ ಬಿರಾದಾರ್‌ ಎಂದಾಗಬಹುದು. ಮದುವೆ ಆದ ಹೆಣ್ಣುಮಕ್ಕಳಿಗೆ ಶ್ರೀಮತಿ ಎಂಬ ಮತ್ತು ವಿವಾಹ ಆಗದವರಿಗೆ ಕುಮಾರಿ ಎಂಬ ಪೂರ್ವಪದಗಳನ್ನು ಜೋಡಿಸುವ ಪರಿಪಾಠ ನಮ್ಮಲ್ಲಿದೆ. ಆದರೆ ಗಂಡಸರಿಗೆ ನಮ್ಮಲ್ಲಿ ವಿವಾಹಸೂಚಿ ಪೂರ್ವಪದಗಳು ಇಲ್ಲ. ಎಲ್ಲರಿಗೂ ಗೌರವಸೂಚಕವಾಗಿ ಮತ್ತು ಶಿಶ್ಟಾಚಾರದ ಸೂಚಕವಾಗಿ ಶ್ರೀ, ಶ್ರೀಮಾನ್‌, ಶ್ರೀಯುತ ಎಂಬ ಪೂರ್ವಪದಗಳನ್ನು ಗಂಡಸರಿಗೆ ಬಳಸುತ್ತಾರೆ.

ಕೆಲವೊಮ್ಮೆ ಹೆಂಗಸರಿಗಂತು ಅವರ ಹೆಸರಿನಿಂದ ಕರೆಯುವದೇ ಇಲ್ಲ. ಶ್ರೀ ಮತ್ತು ಶ್ರೀಮತಿ ಬಸವಣ್ಣ ಎಂದೊ, ಶ್ರೀಮತಿ ರಾಜಶೇಖರ ಇತ್ಯಾದಿಯಾಗಿಯೊ ವಿವಾಹಿತ ಹೆಂಗಸರನ್ನು ಅವರ ಗಂಡನ ಹೆಸರಿಗೆ ಶ್ರೀಮತಿ ಸೇರಿಸಿ ಕರೆಯುವುದುಂಟು. ಹೆಸರು ಎಂದರೆ ಅದು ವ್ಯಕ್ತಿಯ ಗುರುತು. ಆದರೆ ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಗಂಡಂದಿರ ಎದುರಿಗೆ ಸ್ವತಂತ್ರ ಅಸ್ತಿತ್ವ ಇಲ್ಲ ಎಂಬುದರ ಸಂಕೇತ ಎಂಬಂತೆ ಇಂತಹ ವ್ಯಕ್ತಿನಾಮದ ಆಚಾರಗಳು ಚಾಲ್ತಿಯಲ್ಲಿ ಇವೆ. ತಂದೆಯ, ಮನೆತನದ, ಗಂಡನ ಗುರುತು ಇಲ್ಲದ ತನ್ನದೆ ಸ್ವತಂತ್ರ ಹೆಸರು ಬಳಸುವುದು ಹೆಂಗಸರಲ್ಲಿ ಈಗೀಗ ಚಾಲ್ತಿ ಆಗುತ್ತಿದೆ. ಹೆಂಗಸರನ್ನು ಅವರ ತಂದೆ ಅಥವಾ ಗಂಡನ ಹೊರತಾಗಿಯು ಗುರ್ತಿಸುವ ಪರಿಪಾಠ ಬೆಳೆಯುತ್ತಿದೆ.

೩. ಸೂಚಕಗಳು ಮತ್ತು ವಾಚಿಗಳು
ಎಲ್ಲ ವ್ಯಕ್ತಿಗಳ ಹೆಸರುಗಳಲ್ಲು ಒಂದಲ್ಲ ಒಂದು ಬಗೆಯ ಅಥವಾ ಹಲವು ಬಗೆಯ ಸೂಚಕಗಳು, ವಾಚಿಗಳು ಇದ್ದೆ ಇರುತ್ತವೆ. ಅವುಗಳು ನಮ್ಮ ಸಮಾಜದ ಚಲನೆಯ ಸ್ವರೂಪ, ಅದರ ಬೇರೆ ಬೇರೆ ಸ್ತರವಿನ್ಯಾಸ, ಆಚಾರ ವಿಚಾರಗಳನ್ನು ಧರಿಸಿರುತ್ತವೆ. ಸಾಮಾಜಿಕ, ಪ್ರಾದೇಶಿಕ, ರಾಜಕೀಯ, ಲಿಂಗೀಯ ಹೀಗೆ ಹಲವು ಬಗೆಯ ಗುರುತುಗಳು ಹೆಸರುಗಳಲ್ಲಿ ಇರುತ್ತವೆ.

೩.೧. ಜಾತಿ, ಧರ್ಮ, ವರ್ಗ ಸೂಚಕಗಳು: ಜವರೇಗೌಡ, ಕೃಶ್ಣಭಟ್ಟ, ಭುಜಂಗಶೆಟ್ಟಿ ಇತ್ಯಾದಿ ಹೆಸರುಗಳನ್ನು ನೋಡಿದರೆ ಅವುಗಳಲ್ಲಿ ಜಾತಿಸೂಚಕಗಳು ಮೇಲ್ನೋಟಕ್ಕೇ ಕಾಣುತ್ತವೆ. ಜೋಸೆಫ್‌, ಶರೀಫ ಎಂಬಂತಹ ಹೆಸರುಗಳನ್ನು ನೋಡಿದರೆ ಅಲ್ಲಿ ಧರ್ಮದ ಸೂಚನೆ ಎದ್ದು ಕಾಣುತ್ತದೆ. ಜವರ, ಬೋರ, ಚಾಮ, ನಿಂಗ, ಬಡ್ಡ, ಬಜ್ಜ, ಕರಿಸಿದ್ದಿ, ತಿಮ್ಮಿ, ಕಾಟಿ ಇಂತಹ ಹೆಸರುಗಳು ಮೇಲ್ನೋಟಕ್ಕೆ ಕೆಳವರ್ಗದ ಸೂಚಕಗಳಾಗಿಯೂ ಸುಬ್ಬರಾಯ, ಸೋಮಶೇಖರ, ಚೆನ್ನಬಸವಯ್ಯ, ಅಯ್ಯಾಶಾಸ್ತ್ರಿ ಇಂತಹ ಕೆಲವು ಹೆಸರುಗಳು ಮೇಲ್ವರ್ಗದ ಸೂಚಕವಾಗಿಯೂ ಕಾಣುತ್ತವೆ. ಶಿವಮ್ಮ ಎಂದಾಗ ಶೈವರೆಂದೂ, ಮೋಹನ ಎಂದಾಗ ವೈಶ್ಣವರೆಂದೂ, ಚನ್ನೇಗೌಡ ಎಂದಾಗ ಒಕ್ಕಲಿಗರೆಂದೂ ಸೂಚನೆಗಳು ಸಿಗುತ್ತವೆ. ಆದರೆ ಹಾಗೆ ಕೆಲವು ಹೆಸರುಗಳು ಜಾತಿ, ಪಂಥಗಳಿಗೆ ಕಟ್ಟುಬಿದ್ದು ಬಳಸಲ್ಪಡುವುದಿಲ್ಲ. ಶಿವಮ್ಮ ಎಂಬ ಹೆಸರನ್ನು ಶೈವರಲ್ಲದವರೂ, ಗೌಡ ಎಂಬ ಅಂತ್ಯಪದವನ್ನು ಒಕ್ಕಲಿಗರಲ್ಲದವರೂ ಬಳಸಬಹುದು. ನಮ್ಮಲ್ಲಿ ಕುರುಬರೂ, ಹಾಲಕ್ಕಿಯವರೂ, ಬಂಟರೂ, ಲಿಂಗಾಯತರೂ ಗೌಡ ಎಂಬ ಉಪನಾಮವನ್ನು ಬಳಸುತ್ತಾರೆ.

೩.೪. ಲಿಂಗಸೂಚಕಗಳು, ದ್ವಿಲಿಂಗಿ ಯಜಮಾನಿಕೆ: ನಮ್ಮಲ್ಲಿ ಸಾಕಶ್ಟು ಹೆಸರುಗಳಿಗೆ ಲಿಂಗಸೂಚನೆ ಇರುತ್ತದೆ. ಆದರೆ ಎಲ್ಲ ಹೆಸರುಗಳಲ್ಲಿ ವ್ಯಕ್ತಿಯ ಲಿಂಗ ಸೂಚನೆ ಕಂಡೇ ಕಾಣುತ್ತದೆ ಎಂದೇನೂ ಇಲ್ಲ. ಉದಾಹರಣೆಗೆ ಗುಣ, ಪ್ರೀತಿ, ಮನು, ಚಂದನ, ವೈಶಾಖ, ಋತ, ಮೋಹನ ಇಂತಹ ಕೆಲ ಹೆಸರುಗಳನ್ನು ಸ್ತ್ರೀಯರಿಗು ಇಡುತ್ತಾರೆ; ಪುರುಶರಿಗು ಇಡುತ್ತಾರೆ. ರಂಗ-ರಂಗಿ, ರಾಜ-ರಾಜಿ, ಕಾಳ-ಕಾಳಿ, ಚೆನ್ನ-ಚೆನ್ನಿ, ಮಂಜ ಹೀಗೆ ಕೆಲವು ಅಕಾರಾಂತ ಹೆಸರುಗಳನ್ನು ಇಕಾರಾಂತವಾಗಿ, ಎಕಾರಾಂತವಾಗಿ ಬದಲಿಸಿದರೆ ಗಂಡು ಹೆಣ್ಣಾಗುತ್ತದೆ. ಸಿದ್ದಮ್ಮ-ಸಿದ್ದಪ್ಪ, ಜವರಯ್ಯ-ಜವರಮ್ಮ, ಕಾಳಯ್ಯ-ಕಾಳಮ್ಮ, ಬಸಯ್ಯ-ಬಸಮ್ಮ, ಮಂಜಣ್ಣ-ಮಂಜಕ್ಕ, ಶಿವಣ್ಣ-ಶಿವಕ್ಕ ಹೀಗೆ ಅಕ್ಕ, ಅಣ್ಣ, ಅಯ್ಯ, ಅಮ್ಮ ಇತ್ಯಾದಿ ಸಂಬಂಧಸೂಚಿ ಶಬ್ದಗಳಿಂದಲೂ ಲಿಂಗಸೂಚಕ ಹೆಸರುಗಳನ್ನು ರೂಪಿಸಿಕೊಳ್ಳುವುದು ಉಂಟು. ಇವೆಲ್ಲವೂ ವಿನಾಯಿತಿಯಿಲ್ಲದ ಸಾರ್ವತ್ರಿಕ ನಿಯಮಗಳೇನೂ ಅಲ್ಲ.

ನಮ್ಮ ಸಮಾಜದಲ್ಲಿ ಗಂಡು ಹೆಣ್ಣು ಎಂಬ ಎರಡೇ ಲಿಂಗಗಳ ಬೈನರಿ ಯಜಮಾನಿಕೆ ಇದೆ. ಎಲ್.ಜಿ.ಬಿ.ಟಿ. ಆದಿಯಾಗಿ ಇತರೆಲ್ಲ ಹೆಸರುಗಳನ್ನೂ ಶಿಖಂಡಿ ಎಂದೋ, ಎಲ್ಲಮ್ಮ, ಜೋಗ್ಯಾ, ಜೋಗತಿ ಎಂದೋ ನಾವು ಕರೆದುಕೊಂಡು ಬಂದಿದ್ದೇವೆ. ಆದರೆ ವ್ಯಕ್ತಿನಾಮಗಳಲ್ಲಿ (ನಾಮವಿಜ್ಞಾನದಲ್ಲಿ) ನಮ್ಮ ಸಮಾಜದಲ್ಲಿ ಇರುವ ಬಹುಲಿಂಗೀಯ ಅಸ್ತಿತ್ವಕ್ಕೆ ಅಶ್ಟಾಗಿ ಪ್ರಾತಿನಿಧ್ಯ ಇಲ್ಲ. ಸಮೂಹವಾಚಿ ಶಬ್ದಗಳಾಗಿ ಅಕ್ಕಯ್ಯ, ಅಣ್ಣಯ್ಯ, ಚಕ್ಕ, ಚನ್ನಪಟ್ಟಣ, ಹಿಜಡಾ, ಬೃಹನ್ನಳೆ, ಹಾಫು, ಒಂಬತ್ತು, ಮಂಗಳಮುಖಿ ಇತ್ಯಾದಿ ಹೆಸರುಪದಗಳಿವೆ. ಸ್ತ್ರೀಲಿಂಗ, ಪುಲ್ಲಿಂಗ, ನಪು೦ಸಕಲಿ೦ಗ ಸೂಚಿ ಹೆಸರುಗಳಿವೆ. ಆದರೆ ಬದಲುಗೊಳ್ಳುವ ಲಿಂಗವನ್ನು ಸೂಚಿಸುವ, ಇತರೆಲ್ಲ ಲಿಂಗಗಳನ್ನು ಸೂಚಿಸುವ ಹೆಸರುಪದಗಳು ನಮ್ಮಲ್ಲಿ ಇಲ್ಲ.

ಆದರೆ ಹಿಜಡಾ ಸಮುದಾಯದಲ್ಲಿ ದೀಕ್ಶೆ ತೆಗೆದುಕೊಂಡ ನಂತರ ಅಥವಾ ಲಿಂಗಬದಲಾದದ್ದನ್ನು ಸಾರ್ವಜನಿಕವಾಗಿ ಒಪ್ಪಿದ ನಂತರ ಹೊಸದಾಗಿ ಹೆಸರು ಬದಲಿಸಿ ಇಡುವ/ಇಟ್ಟುಕೊಳ್ಳುವ ಪದ್ಧತಿ ಇದೆ. ಮಂಜಮ್ಮ ಜೋಗತಿಯ ಹುಟ್ಟು ಹೆಸರು ಬಿ. ಮಂಜುನಾಥ ಶೆಟ್ಟಿ. ಕನ್ನಡದ ಮೊದಲ ತೃತೀಯಲಿಂಗಿ ವಕೀಲೆ ಶಶಿ ಅವರ ಮೊದಲ ಹೆಸರು ಶಶಿಕುಮಾರ್.‌ ಕರ್ನಾಟಕದ ಮೊದಲ ತೃತೀಯಲಿಂಗಿ ವೈದ್ಯೆಯಾದ ತ್ರಿನೇತ್ರಾರ ಮೊದಲ ಹೆಸರು ಅಂಗದ್‌ ಗುಮ್ಮರಾಜು. ಹೀಗೆ ʼತೃತೀಯʼಲಿಂಗಿ ಸಮುದಾಯದಲ್ಲಿ ಗಂಡು ಹೆಣ್ಣಾದಾಗ, ಹೆಣ್ಣು ಗಂಡಾದಾಗ ಹೆಸರು ಬದಲಿಸುವ ಪದ್ಧತಿ ಇದೆ. ಉಭಯಲಿಂಗಿ ಆಗಿದ್ದಾಗ? ಕೆಲವು ಜಾತಿ ಹೆಸರುಗಳನ್ನು ಬೈಯುವುದಕ್ಕೆ ಬಳಸುವಂತೆ ಹಿಜಡಾ, ಶಿಖಂಡಿ ಎಂಬ ಸಮೂಹವಾಚಿ ಹೆಸರುಗಳನ್ನು ನಮ್ಮವರು ಬೈಗುಳವಾಗಿಯೆ ಬಳಸುತ್ತಾರೆ. ನಮ್ಮಲ್ಲಿ ಗಂಡು ಮತ್ತು ಹೆಣ್ಣುಗಳಿಗೆ ಗಂಡಸ್ತನ, ಹೆಣ್ತನ ಇರುವುದರಲ್ಲಿ ದರ್ಜೆ ಉಂಟು. ಶಿಖಂಡಿತನ, ಹಿಜಡಾತನ ಎಂಬುದಕ್ಕೆ ನಮ್ಮಲ್ಲಿ ಜನ ಗೌರವವನ್ನೆ ನೀಡುವುದಿಲ್ಲ. ಲಿಂಗನ್ಯಾಯದ ನೆಲೆಯಲ್ಲಿ ಇದೊಂದು ನಿರಾಕರಣೀಯ ನಡಾವಳಿ.

೩.೫. ಪ್ರದೇಶವಾಚಿ: ದ್ರುಪದ-ದ್ರೌಪದಿ, ಗಾಂಧಾರ-ಗಾಂಧಾರಿ ಹೀಗೆ ಪ್ರದೇಶದ ಮೂಲಕ ವ್ಯಕ್ತಿಗಳನ್ನು ಗುರುತಿಸುವುದೂ ಉಂಟು. ಪೂನಾವಾಲ, ತುಮಕೂರಯ್ಯ, ಬರಗೂರಪ್ಪ ಹೀಗೆ (ಪ್ರದೇಶದ) ಊರಿನ ಹೆಸರುಗಳನ್ನೆ ವ್ಯಕ್ತಿಗಳಿಗು ಇಡುವುದುಂಟು. ರಂಗನಹಳ್ಳಿಯ ರಾಮ, ಶಿರಾಳಕೊಪ್ಪದ ರಾಮಣ್ಣ, ಬೆಸಗರಹಳ್ಳಿರ ರಾಮಣ್ಣ, ಬಸವಾಪಟ್ಟಣದ ಬೈರ, ಕೋಡಲೂರ ಬಸವಲಿಂಗ, ಕೋಣಂದೂರ ಲಿಂಗಪ್ಪ, ಕಿತ್ತೂರ ರಾಣಿ ಚೆನ್ನಮ್ಮ ಹೀಗೆ ಜನರನ್ನು ಗುರುತಿಸಲು ಊರನ್ನು ಪೂರ್ವನಾಮವಾಗಿ ಬಳಸುವುದು ಮತ್ತು ಗವಿಸಿದ್ಧ ಬಳ್ಳಾರಿ, ರಮೇಶ ಕಮತಗಿ ಹೀಗೆ ಪರನಾಮವಾಗಿ ಬಳಸುವುದೂ ಉಂಟು. ಒಂದೊಂದು ಜಾತಿ, ಧರ್ಮಗಳಿಗು ಅವುಗಳದ್ದೆ ಆದ ಹೆಸರಿನ ಅನನ್ಯತೆ, ವಿಶಿಶ್ಟತೆ ಇರುವಂತೆ ಒಂದೊಂದು ಪ್ರದೇಶಕ್ಕು ಅಂತಹ ವಿಶಿಶ್ಟತೆ, ಅನನ್ಯತೆ ಇರುತ್ತದೆ. ಮೈಸೂರಿನ ಕಡೆಯವರು ಇಟ್ಟುಕೊಳ್ಳುವ ಹೆಸರುಗಳಿಗು ಕೊಡವರು ಇರಿಸಿಕೊಳ್ಳುವ ಹೆಸರಿಗು ವ್ಯತ್ಯಾಸಗಳು ಇರುತ್ತವೆ. ಮಂಗಳೂರಿಗರ ಹೆಸರುಗಳಿಗು ಕೋಲಾರದವರ ಹೆಸರುಗಳಿಗು ಭಿನ್ನತೆಗಳು ಇರುತ್ತವೆ. ಪ್ರಾದೇಶಿಕ, ಸಾಮಾಜಿಕ ಆಡುನುಡಿಗಳ ಅನನ್ಯತೆಗಳು ಆಯಾ ಪ್ರದೇಶದ ಮತ್ತು ಸಮಾಜದ ಹೆಸರುಗಳಿಗು ಇರುತ್ತವೆ.

೩.೬. ಗೌರವಸೂಚಕಗಳು: ಹೆಸರುಗಳ ಜೊತೆ ಕೊನೆಯಲ್ಲಿ ಅಥವಾ ಮೊದಲಿಗೆ ಹಲವಾರು ಗೌರವಸೂಚಕ ಪದಗಳನ್ನು ನಾವು ಸೇರಿಸಿ ಬಳಸುವುದುಂಟು. ಅಕ್ಕ, ಅಮ್ಮ, ತಂದೆ, ಅಣ್ಣ ಇತ್ಯಾದಿ ಸಂಬಂಧವಾಚಕಗಳು ಗೌರವಸೂಚಕಗಳಾಗಿ ಬಳಕೆ ಆಗುವುದುಂಟು. ಅಯ್ನೋರು, ಸ್ವಾಮ್ಗುಳು, ಅಮ್ಮನೋರು, ಅಮ್ಮಣ್ಣೇರು, ಸ್ವಾಮಿ, ಬುದ್ಧಿ, ಸಾರು, ಮೇಡಮ್ಮನವರು, ಸಾಹೇಬರು, ಸಾಯಾಬರು ಇತ್ಯಾದಿ ಗೌರವಸೂಚಕಗಳು ಸ್ವತಂತ್ರವಾಗಿಯೂ ಹೆಸರುಗಳ ಜೊತೆಯಲ್ಲು ಬಳಕೆ ಆಗುವುದುಂಟು.

೩.೭. ಅಧಿಕಾರ ಸೂಚಿ, ವೃತ್ತಿಸೂಚಕಗಳು: ಇನ್ಸ್‌ಪೆಕ್ಟರ್‌ ಸಾಹೇಬರು ಹೇಗಿದ್ದೀರಿ? ಮಿನಿಸ್ಟರ್‌ ಸಾಯಾಬರು ಇದ್ದಾರಾ? ಸಿಯೆಮ್ಮು, ಪಿಯೆಮ್ಮು, ಮೇಶ್ಟ್ರೇ ಆರಾಮಾ? ಡಾಕ್ಟರೇ ಹೊಟ್ಟೆ ನೋಯ್ತಿದೆ, ನರ್ಸಮ್ಮ (ಸಿಸ್ಟರ್)‌ ಇಲ್ಲಿ ಬನ್ನಿ; ಅಧ್ಯಕ್ಶರೆ ರೂಲಿಂಗ್‌ ನೀಡಿ ಸ್ವಾಮಿ ಹೀಗೆ ಹುದ್ದೆಗಳನ್ನು ಹಿಡಿದು ಹೆಸರಾಗಿ ಬಳಸುವುದು ನಮ್ಮಲ್ಲುಂಟು. ಅಲ್ಲದೆ ಹೋಮು, ಎಸ್ಪಿ, ಎಸಿ, ಎಇ, ಡಿಸಿ ಹೀಗೆ ಅಧಿಕಾರ ಮತ್ತು ವೃತ್ತಿಸೂಚಿ ಹೆಸರುಗಳಲ್ಲಿ ಕೆಲವೊಮ್ಮೆ ಹುದ್ದೆಗಳ ಮೂಲಕವೆ ವ್ಯಕ್ತಿಗಳನ್ನು ಸಂಕ್ಶೇಪವಾಗಿಯು ಕರೆಯುವುದುಂಟು. ಇಲ್ಲಿ ಭಾಶೆಯ ಮಡಿವಂತಿಕೆ ಇಲ್ಲದೆ ಪದಗಳನ್ನು ಎರವಲು ಪಡೆದು ಪದರಚನೆಗೆ ಹೆಚ್ಚಿನ ಗಮನ ಕೊಡದೆ ತತ್ಸಮವಾಗಿಯು, ತದ್ಭವವಾಗಿಯು, ಸಂಕ್ಶಿಪ್ತ ಮಾಡಿಯೂ, ವಿಸ್ತಾರ ಮಾಡಿಯೂ, ಉಚ್ಚಾರದ ಅನುಕೂಲಕ್ಕೆ ಸಮರೂಪ ಮಾಡಿಯೂ, ವರ್ಣಪಲ್ಲಟ ಮಾಡಿಯೂ ಬಳಸಲಾಗುತ್ತದೆ. ಸಂಕ್ಶೇಪಾಕ್ಶರಗಳ ಬಳಕೆಯಲ್ಲಂತು ಇಲ್ಲಿ ಭಾಶೆಯ ಗಡಿಯಿಲ್ಲ. ಬಹುಭಾಶಿಕ ಪ್ರಭಾವದಿಂದಾಗಿ ಸಾಬ್‌, ಬಾಸ್, ಸುಲ್ತಾನ್‌‌ ಹೀಗೆ ಹಿಂದಿ, ಉರ್ದು, ಇಂಗ್ಲಿಶ್‌ ಎಲ್ಲವನ್ನೂ ನಾವು ಬಳಸುತ್ತೇವೆ.

ವೃತ್ತಿಗಳನ್ನು ವ್ಯಕ್ತಿಗಳ, ಮನೆತನಗಳ ಹೆಸರುಗಳನ್ನಾಗಿ ಇರಿಸಿಕೊಳ್ಳುವುದು ನಮ್ಮಲ್ಲಿ ಹಿಂದಿನಿಂದಲು ಇದೆ. ಕುಲಕರ್ಣಿ, ಉಪ್ಪಾರ, ಸುಣಗಾರ, ಬಣಕಾರ, ಕಂಬಾರ, ಕುಂಬಾರ, ಮಾಲೀಪಾಟೀಲ, ಇತ್ಯಾದಿಯಾಗಿ ವೃತ್ತಿಗಳೆ ಇಂದು ಜಾತಿಸೂಚಕಗಳಾಗಿ, ಕುಲನಾಮಗಳಾಗಿ ಬದಲಾಗಿವೆ ಕೂಡ. ಅಲ್ಲದೆ ವೃತ್ತಿ ಮತ್ತು ಮನೆತನಗಳ ಹೆಸರುಗಳನ್ನು ಸಮೂಹವಾಚಿ ಆಗಿಯೂ ಬಳಸುವುದುಂಟು. ಮಠ, ಶೆಟ್ರು, ಗೌಡ್ರು, ಪಾಟೀಲರು, ಶಾಸ್ತ್ರಿಗಳು, ಭಟ್ಟರು, ಆಚಾರಿ, ಹೊಲೆಯಾರ್‌, ಮಾದರ ಇತ್ಯಾದಿಗಳನ್ನು ನಾವು ಜಾತಿ, ವೃತ್ತಿ ಸೂಚಕಗಳಗಿ ನಿರ್ದಿಶ್ಟವಾಗಿಯೂ ಮತ್ತು ಎಲ್ಲರಿಗು ಅನ್ವಯಿಸುವಂತೆ ಸಮೂಹವಾಚಿಗಳಾಗಿಯೂ ಬಳಸುತ್ತೇವೆ.

೩.೮. ಸಂಬಂಧಸೂಚಿಗಳು, ಸಮೂಹವಾಚಿಗಳು: ಕಾಳವ್ವೆ, ಬಸಣ್ಣ, ಚೌಡಯ್ಯ, ರಾಮಕ್ಕ ಹೀಗೆ ಅಣ್ಣ, ಅಯ್ಯ, ಅಕ್ಕ, ಅವ್ವೆ ಇತ್ಯಾದಿ ಪದಗಳನ್ನು ಕೊನೆಯಲ್ಲಿ ಪಡೆದುಕೊಂಡು ಕೆಲವು ಸಂಬಂಧಸೂಚಿ ಹೆಸರುಗಳು ಬಳಕೆ ಆದರೆ ಕೆಲವು ಸಂಬಂಧಗಳನ್ನೆ ಹೆಸರುಗಳನ್ನಾಗಿ ಬಳಸುವ ಪದ್ಧತಿಯೂ ಇದೆ. ಉದಾಹರಣೆಗೆ ತಮ್ಮಯ್ಯಪ್ಪ, ಅಣ್ಣಯ್ಯಪ್ಪ, ಚಿಕ್ಕಣ್ಣ, ಅಕ್ಕಯ್ಯಮ್ಮ ಹೀಗೆ ಸಂಬಂಧಗಳು ಹೆಸರುಪದಗಳಾಗಿ ಬಳಕೆ ಆಗುತ್ತವೆ. ದೊಡ್ಡಯ್ಯ, ಚಿಕ್ಕಯ್ಯ, ದೊಡ್ಡಮ್ಮ, ಪುಟ್ಟಕ್ಕ, ಮರಿಯಯ್ಯ, ಹಿರಿಯಯ್ಯ, ಕಿರಿಯಜ್ಜ, ಹಿರಿಯಜ್ಜ ಇತ್ಯಾದಿ ವಯಸ್ಸಿನ ಸೂಚಿಗಳನ್ನು, ಹಿರಿಕಿರಿ ಸಂಬಂಧವಾಚಿಗಳನ್ನು ಹೆಸರುಗಳನ್ನಾಗಿಯು ನಾವು ಬಳಸುತ್ತೇವೆ. ಇಂತಹ ಸಂಬಂಧವಾಚಿಗಳು ದೊಡ್ಡಿ, ದೊಡ್ಡ, ಚಿಕ್ಕಿ, ಚಿಕ್ಕ, ತಮ್ಮ, ಅಕ್ಕ, ತಂಗಿ, ತಂಗ್ಯವ್ವ, ತಂಗ್ಯಮ್ಮ ಹೀಗೆ ರಕ್ತಸಂಬಂಧದ ಆಚೆ ಯಾರಿಗೆ ಬೇಕಾದರೂ ಸಮೂಹವಾಚಿಗಳ ರೀತಿಯೂ, ಅಂಕಿತನಾಮಗಳ ರೀತಿಯೂ ಬಳಕೆ ಆಗುತ್ತವೆ. ಬ್ರೊ, ಸಿಸ್‌, ಬ್ರದರ್, ಸಿಸ್ಟರ್, ಅಂಕಲ್‌, ಅಂಕಲ್ಲು, ಆಂಟಿ, ಬಾಸ್‌‌ ಇಂತಹ ಇಂಗ್ಲಿಶ್‌ ಸಂಬಂಧಸೂಚಿ ಸಂಬೋಧನೆಗಳೂ ನಮ್ಮಲ್ಲಿವೆ.

೪. ಹೆಸರಿನ ಸಂಕ್ಶೇಪ ರೂಪ: ಉದ್ದನೆಯ ಹೆಸರುಗಳನ್ನು ಕುಗ್ಗಿಸಿ ಬಳಸುವುದು, ಎಶ್ಟು ಸಾಧ್ಯವೋ ಅಶ್ಟು ಕಿರಿದು ಮಾಡಿ ಉಚ್ಚಾರಕ್ಕು, ಸಂಬೋಧನೆಗು ಸುಲಭ ಮಾಡಿಕೊಂಡು ಹೆಸರುಗಳನ್ನು ಬಳಸುವುದು ನಮ್ಮಲ್ಲಿ ಸಾಮಾನ್ಯ. ಇಂತಹ ಕುಗ್ಗಿಸುವಿಕೆಗೆ ನಿರ್ದಿಶ್ಟ ನಿಯಮಗಳು ಇಲ್ಲ. ಕೆಲವೊಮ್ಮೆ ಲಿಂಗ, ಜಾತಿ, ವೃತ್ತಿ, ಗೌರಸೂಚಕಗಳೆಲ್ಲ ಈ ಪ್ರಕ್ರಿಯೆಯಲ್ಲಿ ಕಳೆದುಹೋಗುತ್ತವೆ. ಉದಾಹರಣೆಗೆ ಇಂತಹ ಹೆಸರುಗಳ ಕುಗ್ಗಿಸುವಿಕೆಯ ವೈವಿದ್ಯವನ್ನು ರಮಾದೇವಿ-ರಮ್ಮಿ, ರಮೇಶ-ರಮ್ಮಿ, ಕುಮಾರ-ಕುಮಾರಿ-ಕುಮ್ಮಿ, ರಾಜಶೇಖರ-ರಾಜ, ಶಾರದಾ-ಶಾರಿ, ಕಮಲ-ಕಮ್ಮಿ, ಅಶೋಕ-ಅಶು, ವಿಶುಕುಮಾರ-ವಿಶು, ವಿಶಾಲಾಕ್ಶಿ-ವಿಶು, ವೀರರಾಜು-ಈರಾಜು, ಬಸವಣ್ಣ-ಬಸ್ಯ, ನಾರಾಯಣ-ನಾಣಿ ಇತ್ಯಾದಿಗಳಲ್ಲಿ ನೋಡಬಹುದು.

೪.೧. ಮೊದಲಕ್ಶರಗಳ ಬಳಕೆ: ಹೆಸರುಗಳನ್ನು ಬಳಸುವಾಗ ತಮ್ಮ ಹೆಸರಿನ ಮೊದಲ ಅಕ್ಶರಗಳನ್ನು ಶಿಕ್ಶಕ ವೃತ್ತಿಯಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಅವರವರ ಹೆಸರುಗಳ ಮೊದಲ ಅಕ್ಶರಗಳಿಂದಲೆ ಅವರನ್ನು ಸಂಬೋಧಿಸುವುದು, ಗುರ್ತಿಸುವುದು ಎರಡನ್ನೂ ಮಾಡುತ್ತಾರೆ. ಕುವೆಂಪು, ಜಹೊನಾ, ಜೆಸುನಾ, ದೇಜಗೌ ಹೀಗೆ ಕನ್ನಡ ಮೊದಲಕ್ಶರಗಳನ್ನು ಬಳಸುವುದೂ, ಸಿಪಿಕೆ, ಬಿಆರ್‌ಎಲ್‌, ಎಚ್ಚೆಸ್ವಿ, ಎಚ್ಚೆನ್‌, ಕೆವಿಎನ್‌ ಹೀಗೆ ಇಂಗ್ಲಿಶಿನ ಮೊದಲಕ್ಶರಗಳನ್ನ ಬಳಸುವುದೂ ಉಂಟು. ಹೆಸರುಗಳನ್ನು ಬಳಸುವಾಗ ಊರಿನ ಅಥವಾ ತಂದೆಯ ಹೆಸರಿನ ಮೊದಲಕ್ಶರಗಳನ್ನು ಇಂಗ್ಲಿಶಿನಲ್ಲೆ ಇರಿಸಿಕೊಂಡು ಮಿಕ್ಕ ಹೆಸರನ್ನು ಕನ್ನಡದಲ್ಲಿ ಎಸ್.ವಿ.ಪರಮೇಶ್ವರ ಭಟ್ಟ, ಎಚ್.ಆರ್.‌ ಅಮರನಾಥ ಹೀಗೆ ಬಳಸುವುದೂ ಉಂಟು. ದ.ರಾ.ಬೇಂದ್ರೆ, ನಾ.ಮೊಗಸಾಲೆ ಹೀಗೆ ಕನ್ನಡದ್ದೆ ಮೊದಲಕ್ಶರದ ಜೊತೆ ಕನ್ನಡದ್ದೆ ಹೆಸರು ಇರಿಸಿಕೊಂಡು ಬಳಸುವುದೂ ಉಂಟು. ಕೆಲವೊಮ್ಮೆ ಹೆಸರಿನ ಮೊದಲು ಮೊದಲಕ್ಶರಗಳನ್ನು ಬಳಸಿದರೆ ಕೆಲವೊಮ್ಮೆ ಹೆಸರಿನ ಕೊನೆಯಲ್ಲಿ ಮೊದಲಕ್ಶರ (ಇನಿಶಿಯಲ್ಸ್‌ಗಳನ್ನು) ಬಸವರಾಜ ಕೆ.ಇ., ಅನಸೂಯ ಬಿ.ವಿ. ಹೀಗೆ ಅನಿಯತವಾಗಿ ಬಳಸುವುದುಂಟು. ಇಲ್ಲೆಲ್ಲ ಒಂದು ನಿಯತ ನಿಯಮ ಇರುವಂತೆ ಕಾಣುವುದಿಲ್ಲ.

ಬಿ.ಎಸ್.‌ ಶಿವಪ್ಪ, ಚಂದಪ್ಪ ವಾಯ್‌ ಜವಳಿ, ಚಂದ್ರಣ್ಣ ವೈ.ಜೆ., ಚಂದ್ರಶೇಖರ ಎಚ್.‌ ಇಂತಹ ಉದಾಹರಣೆಗಳನ್ನು ನೋಡಿದರೆ; ಕೆಲವೊಂದು ಮೊದಲಕ್ಶರಗಳನ್ನು ಹೆಸರಿನ ಮೊದಲಲ್ಲು, ಕೊನೆಯಲ್ಲು, ಮಧ್ಯದಲ್ಲು ಮೂರೂ ಕಡೆ ಬಳಸುವ ಪರಿಪಾಠ ನಮ್ಮಲ್ಲಿಇರುವುದು ಕಾಣುತ್ತದೆ. ಕೆಲವರು ಸಿಂಗಾನಳ್ಳಿ ಪುಟ್ಟಸ್ವಾಮಯ್ಯ ರುದ್ರಯ್ಯ ಹೀಗೆ ಊರಿನ ಹೆಸರು, ತಂದೆ ಹೆಸರು, ತಮ್ಮ ಹೆಸರು; ಬಸಪ್ಪ ದಾನಪ್ಪ ಜತ್ತಿ ಹೀಗೆ ತಂದೆ ಹೆಸರು ತನ್ನ ಹೆಸರು, ಊರಿನ ಹೆಸರು (ಸರ್ನೇಮ್) ಹೀಗೆ ಮುಕ್ಕೂಟ ಮಾದರಿಯಲ್ಲಿ ಇರಿಸಿಕೊಳ್ಳವುದು ಉಂಟು.

೫. ಹೆಸರಿನ ಬಳಕೆಯ ಇನ್ನಶ್ಟು ರೀತಿಗಳು : ದಾಸಣ್ಣನವರ್‌, ಪುಟ್ಟಕ್ಕನವರ್‌, ಪಾಟೀಲ, ಮಾದರ, ಹೊಲೆಯಾರ್‌ ಹೀಗೆ ನಮ್ಮಲ್ಲಿ ಕುಲವಾಚಿ, ಕುಟುಂಬವಾಚಿ, ಮನೆತನವಾಚಿಗಳನ್ನು (ಸರ್‌ನೇಮ್‌ಗಳನ್ನು) ಹೆಸರಿನೊಂದಿಗೆ ಸೇರಿಸಿ ಬಳಸುವುದು ಉಂಟು. ಬರಗೂರಯ್ಯ, ತುಮಕೂರಯ್ಯ, ಬೆಳ್ಳೂರಪ್ಪ, ಯಡಿಯೂರಪ್ಪ ಹೀಗೆ ಸ್ಥಳವಾಚಿ, ಗ್ರಾಮವಾಚಿ ಹೆಸರುಗಳೂ ಉಂಟು. ಮೆಣಸಿನಕಾಯಿ, ಬಾಳೀಕಾಯಿ, ಬ್ಯಾಳಿ, ಟೆಂಗಿನಕಾಯಿ ಹೀಗೆ ತರಕಾರಿ, ದವಸಧಾನ್ಯಗಳ ಹೆಸರುಗಳನ್ನೂ ಇರಿಸಿಕೊಳ್ಳುವುದು ಉಂಟು. ಅಲ್ಲದೆ ನಮ್ಮಲ್ಲಿ ಮೂಲಿಮನಿ, ತೆಗ್ಗಿನಮನಿ, ಕೆಳಗಿನಮನಿ, ಕಟ್ಟೀಮನಿ, ಕೋಟೆ ಇತ್ಯಾದಿಯಾಗಿ ವ್ಯಕ್ತಿಗಳನ್ನು ನಿರ್ದಿಶ್ಟಗೊಳಿಸುವುದಕ್ಕಾಗಿ ಪ್ರದೇಶವಾಚಿ, ಮನೆಸೂಚಿ ಹೆಸರುಗಳನ್ನೂ ಹೆಸರಿನ ಕೊನೆಗೆ ಸೇರಿಸಿ ಬಳಸುವುದುಂಟು.

ಹಳಗನ್ನಡ ಸಂದರ್ಭದಲ್ಲಿ ಹೆಸರುಗಳಲ್ಲಿ ವ್ಯಂಜನಾಂತಗಳ ಬಳಕೆ ವ್ಯಾಪಕವಾಗಿತ್ತು. ಇತ್ತೀಚೆಗೆ ಇಂಗ್ಲಿಶಿನ ಪ್ರಭಾವದಿಂದ ಹೆಸರುಗಳಲ್ಲಿ ವ್ಯಂಜನಾಂತಗಳು ಬಳಕೆ ಆಗುತ್ತಿವೆ. ರಮೇಶ-ರಮೇಶ್‌, ಮಹೇಶ-ಮಹೇಶ್‌, ರವೀಶ-ರವೀಶ್‌, ಚಂದನ-ಚಂದನ್‌, ಶಿವರಾವ್‌, ಶಿವರಾಮ್‌, ಶಿವರಾಜ್‌ ಹೀಗೆ ಇವುಗಳ ಬಳಕೆ ವ್ಯಾಪಕವಾಗುತ್ತಿದೆ. ಸ್ತ್ರೀವಾಚಿ ಹೆಸರುಗಳಿಗೆ ವ್ಯಂಜನಾಂತಗಳು ನಮ್ಮಲ್ಲಿ ಇಲ್ಲವೆನ್ನುವಶ್ಟು ಕಡಿಮೆ. ಸ್ತ್ರೀವಾಚಿ ಹೆಸರುಗಳು ಕೆಲವೊಮ್ಮೆ ಅಕಾರಾಂತಗಳು ಇಕಾರಾಂತಗಳಾಗಿ ಬದಲಾಗಿ ಮಂಗಳಿ, ದೇವಕಿ, ದ್ರೌಪದಿ, ಸುಮತಿ, ಗೌರಿ ಹೀಗೆ ರೂಪಗೊಳ್ಳುವುದುಂಟು. ಈ ನಿಯಮ ಕೂಡ ನಿಯತವಲ್ಲ, ಸಾರ್ವತ್ರಿಕ ಅಲ್ಲ.

ವ್ಯಕ್ತಿ ಹೆಸರುಗಳನ್ನು ಬಳಸುವಾಗ ಅದರಲ್ಲು ಐಪಚಾರಿಕ ಸನ್ನಿವೇಶಗಳಲ್ಲಿ; ಪತ್ರಗಳನ್ನು ಬರೆಯುವಾಗ, ಭಾಶಣಗಳನ್ನು ಮಾಡುವಾಗ, ಆಸ್ತಿಪಾಸ್ತಿ ದಾಖಲೆಗಳನ್ನು ಬರೆಸುವಾಗ, ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಶ್ರೀಮತಿ, ಶ್ರೀ, ಶ್ರೀಮಾನ್‌, ಸನ್ಮಾನ್ಯ, ಖಾವಂದರಾದ, ಸಾಹೇಬರಾದ, ಪೂಜ್ಯರಾದ, ಮಾತೋಶ್ರೀ, ಪಿತಾಶ್ರೀ, ಬ್ರಾತೋಶ್ರೀ, ಶ್ರೀಶ್ರೀಶ್ರೀ ಇತ್ಯಾದಿಯಾಗಿ ಔಪಚಾರಿಕವಾಗಿ ಹಾಗೂ ಗೌರವಸೂಚಕ ಆಗಿ ಹೆಸರಿಗೆ ಮುನ್ನ ಪೂರ್ವಪದಗಳನ್ನು ಬಳಸುವ ಪದ್ಧತಿ ನಮ್ಮಲ್ಲಿದೆ. ಲಗ್ನಪತ್ರಿಕೆಗಳನ್ನು ಬರೆಸುವಾಗ ಹೆಣ್ಣಿಗೆ ಕುಮಾರಿ ಎಂದೂ, ಗಂಡಿಗೆ ಚಿರಂಜೀವಿ ಎಂದೂ ಬಳಸುವುದುಂಟು. ಕೆಲವೊಮ್ಮೆ ಹೆಣ್ಣಿಗೆ ಹ.ಕುಂ.ಶೋ. ಅಂದರೆ ಹರಿಶಿಣ ಕುಂಕುಮ ಶೋಭಿತೆ ಎಂದೂ ಗಂಡಿಗೆ ಚಿ.ರಾ. ಅಂದರೆ ಚಿರಂಜೀವಿ ರಾಜಕುಮಾರ ಎಂಬ ಪೂರ್ವಪದಗಳನ್ನು ಬರೆಸುವುದು ವಾಡಿಕೆ.

ಸಾಮಾನ್ಯವಾಗಿ ಅನೌಪಚಾರಿಕವಾಗಿ ಯಾರನ್ನಾದರೂ ಸಂಬೋಧಿಸುವಾಗ ಹುಡುಗರಾದರೆ ಏನ್‌ ಗುರು, ಏನ್‌ ಮಗಾ, ಏನ್‌ ದೊರೆ, ಮಚ್ಚಾ, ಬಾಮೈದಾ, ಮಾವ, ಚಿಕ್ಕೋವ್‌, ಅಣ್ಣೋವ್‌, ಅಣ್ಣಾ, ಅಪ್ಪಾಜಿ, ತಮ್ಮಾ, ಬ್ರೋ, ಇತ್ಯಾದಿಯಾಗಿ ಸಂಬೋಧನೆ ಮಾಡುವುದುಂಟು. ಹೆಣ್ಣುಮಕ್ಕಳನ್ನು ಅವ್ವಿ, ಅಮ್ಮಿ, ತಂಗ್ಯವ್ವ, ತಂಗಿ, ಸಿಸ್ಟರ್‌ ಎಂದು ಸಂಬೋಧನೆ ಮಾಡುವುದುಂಟು.

೬. ಅಡ್ಡ ಹೆಸರು, ಮುದ್ದುಹೆಸರು, ಪರ್ಯಾಯ ಹೆಸರು, ಗುಪ್ತ ಹೆಸರು, ಬಿರುದುಗಳು : ನಮ್ಮಲ್ಲಿ ಗುಜ್ಜಾನೆ, ಡ್ರಮ್ಮು, ಲಂಬು, ಸಿಂಗಳೀಕ, ಕರ್ಪಿ, ಕೆಂಚ, ತೊನ್ನಿ, ಬಾಂಡ್ಲಿ, ಅಂಚಿಕಡ್ಡಿ, ಕುರಿ, ಪಾದರಸ, ಬಚ್ಚ, ಧಡಿಯ, ಕುಡುಮಿ, ಪಿಳ್ಳಂಗೋವಿ, ಊಸರವಳ್ಳಿ ಇತ್ಯಾದಿಯಾಗಿ ಗುಣ, ಸ್ವಭಾವ, ವಯಸ್ಸು, ದೇಹರಚನೆ, ಬಣ್ಣ ಇತ್ಯಾದಿಗಳನ್ನು ಆಧರಿಸಿ ಅಡ್ಡ ಹೆಸರುಗಳನ್ನು ಇಡುವುದು ರೂಢಿಯಲ್ಲಿದೆ. ಟ್ಯೂಬ್‌ಲೈಟು, ಬಕೀಟು, ಚಮಚಾ, ಪಿಂಪು ಹೀಗೆ ಕೆಲವೊಮ್ಮೆ ಹೀನಾರ್ಥದಲ್ಲು ಕೆಲವರ ನಡತೆಯನ್ನು ನಿಶೇಧ ಎಂಬಂತೆ ಬಳಸುವುದುಂಟು. ಕೆಲವೊಮ್ಮೆ ತಮಗೆ ಇಚ್ಛೆ ಬಂದ ಹಾಗೆ ಕರೆಯಲು ಗೌಪ್ಯವಾಗಿ ಬಳಸಲು ಅಡ್ಡ ಹೆಸರುಗಳನ್ನು, ಸಂಕೇತನಾಮಗಳನ್ನು ಬಾಂಡ್ಲಿ, ಬೆಂಕಿ, ಸೊಟ್ಟ, ನಾಯಿ, ಜೊಲ್ಲಂಕಲ್ ಹೀಗೆ ಇಡುವುದೂ ಉಂಟು.

ಅಮ್ಮು, ಅಮ್ಮಿ, ಸ್ವೀಟಿ, ಡಾರ್ಲಿಂಗ್‌, ಡವ್, ಪ್ಯಾರೆಜಾನ್‌ ಇತ್ಯಾದಿ ಮುದ್ದು‌ ಹೆಸರುಗಳನ್ನು ಹೆಂಗಸರಿಗೆ (ಪ್ರೇಮಿಗಳಿಗೆ ವಿಶೇಶವಾಗಿ) ಬಳಸುವಂತೆಯೆ ಗಾಡಿ, ಪೆಟ್ರೋಮ್ಯಾಕ್ಸ್‌, ಡಗಾರ್‌, ಸೆಟಪ್ಪು, ಕೀಪು, ಹೀಗೆ ಲೈಂಗಿಕವಾದ ಪರ್ಯಾಯನಾಮಗಳನ್ನೂ ಹೀನಾರ್ಥದಲ್ಲಿ, ನಿಶೇಧಿತ ನಡವಳಿಕೆ ಎಂಬ ಅರ್ಥದಲ್ಲಿ ಬಳಸುವುದುಂಟು. ಅದೇ ಗಂಡಸರಿಗೆ ಬಳಸುವಾಗ ಅಪ್ಪಿ, ಚಿನ್ನು, ಮುದ್ದು, ಬಂಗಾರಾ ಇತ್ಯಾದಿಗಳನ್ನು ಮುದ್ದು ಹೆಸರುಗಳಾಗಿ ಬಳಸುವುದುಂಟು. ಲೈಂಗಿಕವಾದ ನಿಶೇಧಿತ ಅರ್ಥದಲ್ಲಿ ಮಾಮ, ಲಂಗಡಾ, ಜೋಗ್ಯಾ ಎಂಬ ಹೆಸರುಗಳನ್ನು ಬಳಸುತ್ತೇವೆ. ಲೈಂಗಿಕ ವೃತ್ತಿ ಕ್ಶೇತ್ರದಲ್ಲಿ ಪ್ರಾಚೀನ ಕಾಲದಿಂದಲು ದೇವದಾಸಿ, ಬಸವಿ, ನಾಯಕಸಾನಿ, ಜೋಗತಿ ಇತ್ಯಾದಿ ವೃತ್ತಿಸೂಚಕ ಹೆಸರುಗಳು ನಮ್ಮಲ್ಲಿ ಬಳಕೆಯಲ್ಲಿ ಇದ್ದುದನ್ನು ಕಾಣಬಹುದು.

ಅಪರಾಧ ಲೋಕದಲ್ಲಿ ಎರಡು ಮೂರು ಪರ್ಯಾಯ ಹೆಸರುಗಳು, ಅಡ್ಡಹೆಸರುಗಳು ಇರುವುದು ಮಾಮೂಲಿ. ಲೊಡ್ಡೆ ಉರುಫ್‌ ಸೀನ, ಬಾಲ ಅಲಿಯಾಸ್‌ ಸೀಮೆಣ್ಣೆ, ಕಟ್ರು ಅಲಿಯಾಸ್‌ ಕುರ್ಪ, ಮುನಿ ಅಲಿಯಾಸ್‌ ಕರಿಯ, ಅಜಯ್‌ ಅಲಿಯಾಸ್‌ ಗಜ್ಜಿ ಹೀಗೆ ಅಡ್ಡಹೆಸರುಗಳಿಗೆ ಒಂದು ರೀತಿಯ ಅವರವರ ಗುಣ ನಡತೆ, ಸ್ವಭಾವ, ಅಪರಾಧದ ವಿಧಾನ, ಪರಿಣತಿ ಇತ್ಯಾದಿಗಳೆಲ್ಲ ಕಾರಣವಾಗುತ್ತವೆ. ಮಚ್ ನಾಗ, ಬ್ಲೇಡ್‌ ಸೀನ, ಆಸಿಡ್‌ ರಾಜ ಹೀಗೆ ಆಯುಧಗಳ ಮೂಲಕವು ವ್ಯಕ್ತಿಗಳನ್ನು ಗುರ್ತಿಸುವುದುಂಟು. ಸ್ಲಮ್‌ ಬಾಲ, ಬಾಂಬೆ ಶೆಟ್ಟಿ, ದುಬೈ ಒಂಟೆ, ಬೆತ್ತನಗೆರೆ ಸೀನ ಹೀಗೆ ಪ್ರದೇಶವಾಚಿ ಆಗಿಯೂ ರೌಡಿಗಳ ಹೆಸರುಗಳು ಇರುತ್ತವೆ. ಕೆಲವೊಮ್ಮೆ ಲೊಡ್ಡೆ, ಡೀಜಲ್‌, ಪಟ್ರೆ, ಲೂಸು, ಡಾನ್, ಮೀಸೆ, ಕೊತ್ವಾಲ್‌, ಮೊಟ್ಟೆ ಹೀಗೆ ಒಂದೊಂದೆ ಅಡ್ಡಹೆಸರುಗಳಿಂದಲು ವ್ಯಕ್ತಿಗಳನ್ನು ಗುರ್ತಿಸುವುದುಂಟು. ಪೊಲೀಸ್‌ ರೆಕಾರ್ಡುಗಳಲ್ಲಿ ಉಲ್ಲೇಖ ಆಗಿರುವ ಎಲ್ಲ ಇಂತಹ ಹೆಸರುಗಳನ್ನೂ ಅಧ್ಯಯನ ಮಾಡಿದರೆ ನಮ್ಮ ಅಪರಾಧ ಲೋಕದ ಸಂಸ್ಕೃತಿ ಏನು ಎಂಬುದು ತಿಳಿಯುತ್ತದೆ. ಅಪರಾಧ ಲೋಕದಲ್ಲಿ ಮಹಿಳೆಯರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಆದರೂ ಗಂಡಸರಂತೆ ಬ್ಲೇಡ್‌ ರಾಣಿ, ಆಸಿಡ್‌ ರಾಣಿ ಇತ್ಯಾದಿ ಇವರಿಗೆ ಇನ್ನೂ ಅಡ್ಡಹೆಸರುಗಳು ಬಂದಿರುವಂತೆ ಕಾಣುವುದಿಲ್ಲ.

ಸಿನೆಮಾ, ಟಿವಿ ಧಾರವಾಹಿ, ನಾಟಕಗಳಲ್ಲಿ ನಟಿಸುವ ನಟನಟಿಯರನ್ನು ಅವರವರ ಪಾತ್ರಗಳ ಮೂಲಕವೆ ಗುರ್ತಿಸುವುದುಂಟು. ಕೆಲವರಿಗೆ ಅವರ ಹುಟ್ಟುಹೆಸರು ಚೆಂದವಿಲ್ಲ ಅಥವಾ ಆಗಿಬರುವುದಿಲ್ಲ ಎಂದು ಸಿನೆಮಾ, ಧಾರವಾಹಿಗಳಿಗೆ ಬೇರೆಯೆ ಹೆಸರನ್ನು ಕಟ್ಟುವುದು ಉಂಟು. ಹಾಗೆ ಕಟ್ಟಿದ ಹೆಸರಿನಿಂದಲೆ ಅವರು ಪ್ರಸಿದ್ಧರಾಗುವುದು ಉಂಟು. ರಾಜ್‌ಕುಮಾರ್‌ (ಮುತ್ತುರಾಜ್), ವಿಶ್ಣುವರ್ಧನ್‌‌ (ಸಂಪತ್‌ಕುಮಾರ್)‌, ಅಂಬರೀಶ್‌ (ಎಮ್.ಎಚ್.ಅಮರನಾಥ್), ಜಗ್ಗೇಶ್‌ (ಈಶ್ವರ್‌ಗೌಡ), ಪುನೀತ್‌ ರಾಜ್‌ಕುಮಾರ್‌ (ಲೋಹಿತ್)‌, ದರ್ಶನ್‌ (ಹೇಮಂತ್‌ ಕುಮಾರ್)‌, ಯಶ್‌ (ನವೀನ್‌ ಕುಮಾರ್‌ ಗೌಡ), ಶ್ರೀನಾಥ್‌ (ನಾರಾಯಣಸ್ವಾಮಿ) ಇವರ ಹೆಸರುಗಳೆಲ್ಲ ಹಾಗೆ ಕಟ್ಟುಹೆಸರುಗಳೆ ವಿನಾ ಹುಟ್ಟು ಹೆಸರುಗಳಲ್ಲ.

ಹೀಗೆ ಇಟ್ಟುಕೊಂಡ ಹೆಸರುಗಳಲ್ಲದೆ ಆಧುನಿಕ ಸಿನೆಮಾ ನಟರಿಗೆ ನಟಸಾರ್ವಭೌಮ, ರೆಬೆಲ್‌ ಸ್ಟಾರ್‌, ಸಾಹಸಸಿಂಹ, ಅಭಿನವ ಭಾರ್ಗವ, ಚಾಲೆಂಜಿಂಗ್‌ ಸ್ಟಾರ್, ಪವರ್‌ ಸ್ಟಾರ್‌, ರಾಕಿ ಭಾಯ್‌, ಮಿನುಗುತಾರೆ, ಅಭಿನಯ ಶಾರದೆ, ಇತ್ಯಾದಿ ಬಿರುದುಗಳನ್ನು ನೀಡಲಾಗಿದೆ. ವ್ಯಕ್ತಿಗಳ ಹೆಸರಿನ ಜೊತೆಯಲ್ಲಿ ಮತ್ತು ಸ್ವತಂತ್ರವಾಗಿಯು ಇವುಗಳನ್ನು ಬಳಸುವುದುಂಟು. ಕೆಲವೊಮ್ಮೆ ಅಭಿನಯ ಚಕ್ರವರ್ತಿ, ಬಾದ್‌ಶಾ, ಭರತ ಚಕ್ರವರ್ತಿ, ಕರುನಾಡ ಕಲಾ ಕುಲತಿಲಕ, ಕರುನಾಡ ಚಕ್ರವರ್ತಿ, ನಾದಬ್ರಹ್ಮ ಇತ್ಯಾದಿಯಾಗಿ ಅತಿಯೆನ್ನಿಸುವ ವೈಭವೀಕೃತ ಬಿರುದುಗಳನ್ನೂ ನೀಡಲಾಗಿದೆ.

ಚರಿತ್ರೆ ಪುರಾಣದಲ್ಲಿ ಕವಿರತ್ನ, ಕವಿಚಕ್ರವರ್ತಿ, ದಾನಶೂರ, ದಾನಚಿಂತಾಮಣಿ ಇತ್ಯಾದಿ ಬಿರುದುಗಳು ವ್ಯಕ್ತಿಗಳಿಗೆ ಇರುವುದುಂಟು. ಹಿಂದೆ ಸರ್‌, ನೈಟ್ ಪದವಿಯನ್ನು ಬ್ರಿಟಿಶರು ನೀಡುತ್ತಿದ್ದರು. ಸ್ಥಳೀಯ ಮಹಾರಾಜರು ರಾಜಸೇವಾಸಕ್ತ, ರಾವ್‌ ಬಹಾದೂರ್‌ ಎಂಬ ಬಿರುದುಗಳನ್ನು ನೀಡುತ್ತಿದ್ದರು. ಅವುಗಳನ್ನು ಹೆಸರಿನ ಮೊದಲು ಹಾಕಿಕೊಳ್ಳುವುದು ಆಗ ರೂಢಿಯಲ್ಲಿಇತ್ತು. ಕವಿರತ್ನ‌ ಕಾಳಿದಾಸ, ವರಕವಿ ಬೇಂದ್ರೆ, ರಾಶ್ಟ್ರಕವಿ ಕುವೆಂಪು ಹೀಗೆ ಹಲವು ವಿಶೇಶಣ, ಬಿರುದುಗಳನ್ನು ನಾವು ಹಿಂದಿನವರಿಗೆ, ಇಂದಿನವರಿಗೆ ನೀಡಿದ್ದೇವೆ. ಅವುಗಳನ್ನು ವೀರರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಗಾನಕೋಗಿಲೆ ಸರೋಜಿನಿ ನಾಯ್ಡು, ಬಾಬಾಸಾಹೇಬ ಅಂಬೇಡ್ಕರ್, ಮಹಾನಾಯಕ‌ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ ಹೀಗೆ ಹೆಸರಿನ ಮೊದಲು ಬಳಸುತ್ತೇವೆ. ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಪರಮವೀರಚಕ್ರ, ಅಶೋಕಚಕ್ರ ಮೊದಲಾದ ಪದವಿಗಳನ್ನು ನೀಡುವ ಪದ್ಧತಿಯೂ ನಮ್ಮಲ್ಲಿದೆ. ಸಮಾಜದ ಸಾಧಕರಿಗೆ ಭಾರತರತ್ನ, ಪದ್ಮವಿಭೂಶಣ, ಪದ್ಮಶ್ರೀ ಇತ್ಯಾದಿ ಪದವಿಗಳನ್ನು ಸರ್ಕಾರ ನೀಡುತ್ತದೆ. ಇವುಗಳನ್ನೂ ವ್ಯಕ್ತಿಗಳ ಹೆಸರಿಗೆ ಮುಂಚೆ ಬಳಸುತ್ತೇವೆ.

ನಮ್ಮಲ್ಲಿ ಬೇರೆ ಬೇರೆ ಭಾಶೆ, ದೇಶದ ಜನರ ಹೆಸರುಗಳನ್ನು ಸ್ಥಳೀಯವಾಗಿ ಕೆಲವರಿಗೆ ಗುರ್ತಿಸಿಕೊಳ್ಳುವುದು ಉಂಟು. ಕನ್ನಡದ ಕಾಳಿದಾಸ, ಕನ್ನಡದ ಶೇಕ್ಸ್‌ಪಿಯರ್‌, ಕನ್ನಡದ ವರ್ಡ್‌ಸ್‌ವರ್ತ್‌, ಅಭಿನವ ಪಂಪ, ಅಭಿನವ ಗಾಂಧಿ, ಅಭಿನವ ಅಂಬೇಡ್ಕರ್‌, ಆಧುನಿಕ ಬಸವಣ್ಣ, ಭಾರತದ ಮಾರ್ಕ್ಸ್, ಅಭಿನವ ಶಾರದೆ, ಕನ್ನಡ ಸರಸ್ವತಿ ಇತ್ಯಾದಿಯಾಗಿ ಹೊಗಳಿ, ವರ್ಣಿಸುವ ಪರಿಪಾಠ ಇದೆ. ಇದು ಹೊಗಳಿಕೆಯಶ್ಟೆ ಅಲ್ಲ, ಸ್ವಂತಿಕೆಯ ನಿರಾಕರಣೆ ಕೂಡ ಹೌದು.

೭. ಅಂಕಿತನಾಮ, ಕಾವ್ಯನಾಮಗಳು: ಸಾಹಿತಿಗಳು ತಮ್ಮ ಬರವಣಿಗೆಗೆ ಬೇರೆಯದೇ ಹೆಸರನ್ನು ಇಟ್ಟುಕೊಳ್ಳುವುದು ಹಿಂದಿನಿಂದಲು ರೂಡಿಯಲ್ಲಿ ಬಂದಿದೆ. ಕೂಡಲಸಂಗಮದೇವ, ಚೆನ್ನಮಲ್ಲಿಕಾರ್ಜುನ, ಗುಹೇಶ್ವರಾ ಹೀಗೆ ವಚನಕಾರರು ಬೇರೆ ಬೇರೆ ಅಂಕಿತಗಳಲ್ಲಿ ವಚನಗಳನ್ನು ಬರೆದಿದ್ದಾರೆ. ಪುರಂದರ ವಿಠಲ, ಆದಿಕೇಶವ ಹೀಗೆ ಹಲವು ಅಂಕಿತಗಳಲ್ಲಿ ದಾಸರು ತಮ್ಮ ಕೀರ್ತನೆಗಳನ್ನು ಬರೆದಿದ್ದಾರೆ. ಇವರ ಅಂಕಿತಗಳೆಲ್ಲವೂ ತಮ್ಮ ತಮ್ಮ ದೇವರ ಹೆಸರುಗಳೆ ಆಗಿವೆ. ಭಕ್ತಿ ಇಲ್ಲಿ ಪ್ರಧಾನ. ಕುಮಾರವ್ಯಾಸ, ಕುಮಾರ ವಾಲ್ಮೀಕಿ ಎಂಬಂತಹ ಹೆಸರುಗಳನ್ನೂ ಕವಿಗಳು ಇಟ್ಟುಕೊಂಡು ಕಾವ್ಯ ಬರೆದಿದ್ದಾರೆ. ಇಲ್ಲಿ ತಾವು ಅನುಸರಿಸಿರುವ ಆಕರದ ಕವಿಗಳನ್ನು ಸ್ಮರಿಸುವ, ಅವರಿಗೆ ವಿನಯ ತೋರುವ, ಗೌರವಿಸುವ ಉದ್ದೇಶ ಇರುವಂತೆ ಕಾಣುತ್ತದೆ. ತಮ್ಮ ಬರವಣಿಗೆ ಒಂದು ನಿರ್ಧಿಶ್ಟ ಹೆಸರಿನಲ್ಲಿ ಇರಲಿ, ಅದನ್ನು ಬೇರೆಯವರು ಎತ್ತಿಹಾಕಿಕೊಳ್ಳದಿರಲಿ ಎಂಬ ಉದ್ದೇಶದಿಂದ, ಸಾಮಾಜಿಕತೆಯೆ ಮುಖ್ಯ; ಇದರಲ್ಲಿ ನಮ್ಮ ವಯಕ್ತಿಕತೆ ಇಲ್ಲ ಎಂಬ ದೃಶ್ಟಿಯಿಂದಲು ಅಂಕಿತಗಳು ಬಳಕೆ ಆಗಿರಬಹುದು.

ಇನ್ನು ಆಧುನಿಕ ಸಂದರ್ಭಕ್ಕೆ ಬಂದರೆ ಇಲ್ಲಿ ಮುದ್ದಣ (ನಂದಳಿಕೆ ಲಕ್ಶ್ಮೀನಾರಾಯಣಪ್ಪ), ಭಾರತಿ (ತಿರುಮಲೆ ರಾಜಮ್ಮ), ಡಿವಿಜಿ (ಡಿ.ವಿ. ಗುಂಡಪ್ಪ), ಶ್ರೀರಂಗ (ಆದ್ಯ ರಂಗಾಚಾರ್ಯ), ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯ್ಯಂಗಾರ್‌), ಕುವೆಂಪು (ಕುಪ್ಪಳಿ ವೆಂಕಟಪ್ಪನ ಮಗ ಪುಟ್ಟಪ್ಪ), ಅಂಬಿಕಾತನಯ ದತ್ತ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ), ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ), ಚದುರಂಗ (ಕುಳಕುಂದ ಶಿವರಾಯ), ವಾಣಿ (ಸುಬ್ಬಮ್ಮ), ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಹೀಗೆ ಹಲವು ಬಗೆಯಲ್ಲಿ ಕಾವ್ಯನಾಮಗಳನ್ನು ಇಟ್ಟುಕೊಂಡು ಬರೆಯುವುದು ವಾಡಿಕೆಯಲ್ಲಿದೆ. ಸಾಹಿತ್ಯ ರಚನೆಯಲ್ಲಿ ಒಬ್ಬರೇ ಹಲವು ಹೆಸರುಗಳಿಂದ ಬರೆಯುವುದೂ, ಗುಪ್ತನಾಮಗಳಿಂದ ಬರೆಯುವುದೂ ಉಂಟು.

೮. ನಾಮಾವಳಿ, ನಾಮಸಂಕೀರ್ತನೆಗಳು: ನಮ್ಮಲ್ಲಿ ಹಲವು ಬಗೆಯ ಭಕ್ತಿಪರಂಪರೆಗಳು ಆಗಿಹೋಗಿವೆ. ಅವುಗಳಲ್ಲಿ ದೈವದ ಹೆಸರುಗಳನ್ನೆ ಆಧರಿಸಿದ ಹಲವು ಬಗೆಯ ದೇವರನಾಮಗಳು, ದೇವತಾಸ್ತುತಿಗಳು, ನಾಮಸಂಕೀರ್ತನೆಗಳು, ನಾಮಾವಳಿಗಳು, ಸ್ತೋತ್ರಗಳು, ಭಜನೆಗಳು ರಚನೆಯಾಗಿವೆ. ಅವುಗಳನ್ನು ಬಳಸಿ ಪಠಣ, ಗಾಯನ, ಸ್ತೋತ್ರ, ಸ್ತುತಿ ಮಾಡುವ ಆರಾಧನಾ ಆಚಾರಗಳು ನಮ್ಮಲ್ಲಿವೆ. ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ, ರಾಮನಾಮ ಪಾಯಸಕ್ಕೆ ಕೃಶ್ಣನಾಮ ಸಕ್ಕರೆ, ಹೀಗೆ ಹೆಸರುಗಳನ್ನು ಆಧರಿಸಿದ ಹಲವಾರು ರಚನೆಗಳು ನಮ್ಮಲ್ಲಿವೆ. ಕೀರ್ತನೆಗಳಲ್ಲಿ ಹೆಸರುಗಳು ಮತ್ತು ಸಂಬಂಧಗಳನ್ನೆ ಆಧರಿಸಿದ ಪದಗಳನ್ನು ವಾವೆ ವರಸೆಯ ರಚನೆಗಳು ಎಂದೆ ಕರೆಯುತ್ತಾರೆ.

ದೇವರನ್ನು ನೆನಪಿಸಿಕೊಳ್ಳುವ ಮೂಲಕ, ಅವರ ಹೆಸರನ್ನು ಬಳಸುವ ಮೂಲಕ ಇತರರನ್ನು ಸಂಬೋಧಿಸುವುದು ನಮ್ಮ ಸಂಸ್ಕೃತಿಯ ಭಾಗ. ಉತ್ತರಭಾರತದಲ್ಲಿ ಯಾರಿಗಾದರೂ ನಮಸ್ಕರಿಸುವಾಗ ರಾಮ್‌ ರಾಮ್‌ಜಿ ಎನ್ನುವುದುಂಟು. ನಮ್ಮಲ್ಲಿ ಶೈವರು ಶಿವೋಹಂ, ಏನ್‌ ಶಿವ ಚೆನ್ನಾಗಿದೀರಾ? ಎಂದು ಕೇಳುವುದುಂಟು. ವೈಶ್ಣವರು ಹರಿಓಂ ಎನ್ನುವುದುಂಟು. ನಮ್ಮಲ್ಲಿ ದೇವರ ಹೆಸರು ಎಶ್ಟೊಂದು ಮಾತಿನಲ್ಲಿ ಒಗ್ಗಿಹೋಗಿದೆ ಎಂದರೆ ಯಾರಾದರು ಉದ್ಗಾರ ತೆಗೆಯುವಾಗ ಶಿವಶಿವಾ, ರಾಮರಾಮಾ ಎನ್ನುವುದುಂಟು. ಕೆಲವರು ತಮ್ಮ ಮೊಬೈಲುಗಳನ್ನು ರಿಸೀವ್‌ ಮಾಡುವಾಗ ಹಲೊ ಎನ್ನದೆ ಹರಿಓಂ ಎಂತಲೋ ಶರಣ್ರೀ ಎಂತಲೋ, ಶಿವ ಶಿವಾ ಎಂತಲೋ ಹೇಳುವುದುಂಟು.

ಹೆಸರುಗಳನ್ನೆ ಪಠಿಸುತ್ತ ತೋತರಣೆ ಕಟ್ಟುವುದು ಅಥವಾ ಸ್ತೋತ್ರ ಮಾಡುವುದು ನಮ್ಮಲ್ಲಿ ಭಕ್ತಿ ಆಚರಣೆ ಮಾಡುವ, ಅರ್ಚನೆ ಮಾಡುವ ಒಂದು ವಿಶಿಶ್ಟ ಕ್ರಮ. ಶಿವಸ್ತೋತ್ರ, ಬಸವಸ್ತೋತ್ರ, ಆಂಜನೇಯ ಸ್ತೋತ್ರ, ಲಕ್ಶ್ಮಿ ಸ್ತೋತ್ರ, ವಿಶ್ಣುಸಹಸ್ರ ನಾಮ, ಅಶ್ಟೋತ್ತ್ರ ಸಹಸ್ರನಾಮಾರ್ಚನೆ ಹೀಗೆ ಹತ್ತಾರು ವ್ಯಕ್ತಿಗಳ ಹೆಸರುಗಳನ್ನು ನಮ್ಮವರು ಸ್ತುತಿ, ಪಠಣ, ಸ್ತೋತ್ರ, ಅರ್ಚನೆ ಮಾಡುತ್ತಾರೆ. ಹೆಸರಿನ ಮೇಲೆ ಅರ್ಚನೆ ಮಾಡಿಸುವುದು ಕೂಡ ನಮ್ಮ ದೇಗುಲಾಚಾರಗಳಲ್ಲಿ ಒಂದು ಮುಖ್ಯವಾದ ಆಚಾರ. ಜನಪದರಲ್ಲಿ ಬೈಗುಳದ ರೀತಿಯಲ್ಲಿ ಹೆಸರುಗಳನ್ನು ಬಳಸಿ ಚೆನ್ನಾಗಿ ಬಯ್ಯುವುದನ್ನು ಸಹಸ್ರನಾಮಾರ್ಚನೆ, ಅರ್ಚನೆ, ಮುಖಕ್ಕೆ ಮಂಗಳಾರತಿ ಮಾಡುವುದು ಎಂದು ಕರೆಯವುದೂ ಉಂಟು.

ಕೆಲವರಂತು ತಮ್ಮ ಮಾನಸಿಕ ಸಮತೋಲ ಕಾಪಾಡಿಕೊಳ್ಳಲು, ಧೈರ್ಯ ತಂದುಕೊಳ್ಳಲು, ನೆಮ್ಮದಿ ಕಾಪಾಡಿಕೊಳ್ಳಲು, ಏನೂ ಮಾಡಲು ಬೇರೆ ಕೆಲಸವಿಲ್ಲದೆ ಸಮಯ ಕೊಲ್ಲಲು ಹೀಗೆ ಹಲವಾರು ಉದ್ದೇಶಗಳಿಗಾಗಿ ದೇವರ ಹೆಸರುಗಳನ್ನು ಬರೆಯುವುದನ್ನು ಒಂದು ಕಾಯಕ ಮಾಡಿಕೊಂಡಿರುತ್ತಾರೆ. ಕೆಲವರು ಸಾವಿರ ಸಲ ಸಾಯಿಬಾಬನ ಹೆಸರು ಬರೆದರೆ ಪುಣ್ಯ ಸಿಗುತ್ತದೆ; ಶ್ರೀರಾಮ್‌ ಜೈರಾಮ್‌, ಜಯಜಯ ಹನುಮಂತ ಎಂದು ಲಕ್ಶ ಸಾರಿ ಹೆಸರು ಬರೆದರೆ ಸ್ವರ್ಗ ಸಿಗುತ್ತದೆ ಎಂದು ಮುಗ್ಧವಾಗಿ ಬರೆಯುತ್ತಾರೆ. ಒಬ್ಬನೇ ದೈವದ ಹಲವು ಹೆಸರುಗಳನ್ನು ಬರೆಯುವುದು ಮತ್ತು ಒಂದೆ ಹೆಸರನ್ನು ಲಕ್ಶಾಂತರ ಸಾರಿ ಬರೆಯುವುದು ಹೀಗೆ ಎರಡೂ ಪದ್ಧತಿಗಳು ಇದರಲ್ಲಿವೆ.

ಹೆಸರುಗಳನ್ನು ಬಳಸಿ ಜೈಕಾರ ಹಾಕುವುದು ಮತ್ತು ಧಿಕ್ಕಾರ ಕೂಗುವುದು ಎರಡೂ ನಮ್ಮಲ್ಲಿವೆ. ಜೈಶ್ರೀರಾಮ್‌, ಜೈ ಭಜರಂಗಬಲಿ, ಜೈ ಹನುಮಾನ್‌ ಇತ್ಯಾದಿಯಾಗಿ ಜೈಕಾರ ಹಾಕುವುದು ಕಡ್ಡಾಯ ಎಂಬಂತೆ ಕೆಲವೆಡೆ ಪಾಲನೆ ಆಗುತ್ತದೆ. ಕೆಲವರಂತೂ ದೇವರ ಹೆಸರನ್ನು ಹಿಡಿದು ಜೈಕಾರ ಹಾಕುವುದನ್ನೆ ಇಂದು ದೇಶಭಕ್ತಿ ಎಂಬಂತೆ ಬಿಂಬಿಸುತ್ತ ಇದ್ದಾರೆ. ಕೆಲವೇ ಜಾತಿ, ಧರ್ಮಕ್ಕೆ ಸೇರಿದ ಪುರಾಣದ ವ್ಯಕ್ತಿನಾಮಗಳನ್ನು ಜೈಕಾರ ಕೂಗಿದರೆ ಅವರನ್ನು ದೇಶಭಕ್ತರೆಂದೂ ಇಲ್ಲವಾದರೆ ದೇಶದ್ರೋಹಿಗಳೆಂದೂ ಕರೆಯವುದು ಅತಿರೇಕವೇ ಸರಿ. ಜೈ ಭಾರತ್‌, ಜೈ ಕರ್ನಾಟಕ, ಜೈ ಹಿಂದ್‌ ಎಂದು ಹೇಳುವುದನ್ನು ಅಶ್ಟಾಗಿ ಸಹಿಸದ ಧಾರ್ಮಿಕ ಮೂಲಭೂತವಾದಿಗಳು ಜೈಭೀಮ್‌ ಎಂದು ಹೇಳುವುದನ್ನೂ ಸಹಿಸುವುದಿಲ್ಲ. ಅಲ್ಲಾ ಹೋ ಅಕ್ಬರ್‌ ಎನ್ನುವುದನ್ನಂತೂ ವಯಕ್ತಿಕ ಸ್ವಾತಂತ್ರ್ಯ ಎನ್ನುವುದೇ ಇಲ್ಲ. ಭಾರತದಲ್ಲಿ ಇದ್ದರೆ ನೀವು ಜೈಶ್ರೀರಾಮ್‌ ಎಂದರೆ ಮಾತ್ರ ದೇಶಭಕ್ತರು ಎಂದು ವಾದಿಸುವ ಧಾರ್ಮಿಕ ಮೂಲಭೂತವಾದಿ ವಿತಂಡವಾದ ನಮ್ಮಲ್ಲಿಂದು ವ್ಯಾಪಿಸಿಕೊಳ್ಳುತ್ತಿದೆ. ಇದಕ್ಕಾಗಿ ಎಶ್ಟೋ ಕಡೆ ಗುಂಪುಹಲ್ಲೆ, ಗಲಭೆಗಳೂ ಆಗಿವೆ. ಇದೂ ಕೂಡ ಒಂದು ನಿರಾಕರಣೀಯ ನಡಾವಳಿ.

೯. ಸ್ವಭಾವ, ಗುಣಪ್ರತೀಕವಾಗಿ ಹೆಸರುಗಳ ಬಳಕೆ: ಸ್ವಭಾವಗಳಿಗೆ, ನಡತೆಗಳಿಗೆ ಸಂಕೇತವೆಂಬಂತೆ ಪರ್ಯಾಯವಾಗಿ ಕೆಲವು ಪುರಾಣ, ಚರಿತ್ರೆಯ ಹೆಸರುಗಳು ನಮ್ಮಲ್ಲಿ ಬಳಕೆ ಆಗುತ್ತವೆ. ಪುರಾಣದ ವ್ಯಕ್ತಿನಾಮಗಳಿಗೆ ಸಮಾನಾರ್ಥಕವಾಗಿ, ಪರ್ಯಾಯವಾಗಿ ಕೆಲವನ್ನು ಬಳಸುತ್ತೇವೆ. ಉದಾಹರಣೆಗೆ ನಾರದ, ಬಕಾಸುರ, ಸೂಪರ್ಲಕ್ಕಿ, ರಾವಳಾಸುರ, ಧರ್ಮರಾಯ, ಯಮಧರ್ಮ, ಶಕುನಿ, ಅನಸೂಯಾ ಇತ್ಯಾದಿ ಹೆಸರುಗಳು ಇಂದು ತಮ್ಮ ಸ್ವಭಾವಕ್ಕೆ ಅನ್ವರ್ಥವೆಂಬಂತೆ ಬಳಕೆ ಆಗುತ್ತವೆ. ಇನ್ನು ಕೆಲವು ಹೆಸರುಗಳು ತದ್ವಿರುದ್ಧ ಅರ್ಥದಲ್ಲಿ ಬಳಕೆ ಆಗುತ್ತವೆ. ಬೃಹಸ್ಪತಿ, ಸತ್ಯ ಹರಿಶ್ಚಂದ್ರ, ಬ್ರಹ್ಮ, ಸತಿ ಸಾವಿತ್ರಿ ಇತ್ಯಾದಿ ಹೆಸರುಗಳನ್ನು ಹಾಗೆ ಆಯಾ ಸ್ವಭಾವಕ್ಕೆ ವಿರುದ್ಧವಾಗಿ ಇರುವವರಿಗೆ ನಾವು ಬಳಸುತ್ತೇವೆ. ಈ ಪ್ರತೀಕರೂಪಿ ಹೆಸರುಗಳು ಗುಣವಾಚಿಗಳಾಗಿ ಬಳಕೆ ಆಗುವುದೆ ಹೆಚ್ಚು

ಕೆಲವು ಒಳ್ಳೆಯ ಯಶಸ್ವಿ ಪ್ರಯತ್ನಗಳನ್ನು ಕುರಿತು ಹೇಳುವಾಗ ಭಗೀರಥ ಪ್ರಯತ್ನ ಎಂದೂ, ಹೇಳಿದ್ದಕ್ಕೆಲ್ಲ ವಿರುದ್ಧವಾಗಿ ನಡೆದುಕೊಳ್ಳುವ ಹೆಂಗಸರನ್ನು ಚಂಡಿ ಎಂದೂ, ವ್ಯಂಗ್ಯವಾಗಿ ಹಂಗಿಸುವಾಗ ಓಹೋ ದಾನಶೂರ ಕರ್ಣ ಎಂದೂ, ಹಲವು ಹೆಣ್ಣುಗಳ ಸಂಗ ಮಾಡುವವನನ್ನು ಶ್ರೀಕೃಶ್ಣ ಎಂದೂ, ಬಡವನನ್ನು ಕುಚೇಲ ಎಂದೂ, ಏಕಪತ್ನೀ ವ್ರತಸ್ಥರನ್ನು ಶ್ರೀರಾಮಚಂದ್ರ ಎಂದೂ ಪುರಾಣದ ಹೆಸರುಗಳನ್ನು ಪರ್ಯಾಯವಾಚಿಗಳು ಎಂಬಂತೆ, ನುಡಿಗಟ್ಟುಗಳ ರೀತಿಯಲ್ಲಿ ಬಳಸುವುದುಂಟು.

ಜಾಗತೀಕರಣ, ಆಧುನೀಕರಣ ಸಂದರ್ಭದಲ್ಲಿ ಹಳೆಯ ಹೆಸರಿಡುವ ಪದ್ಧತಿಗಳು ಮತ್ತು ಅವುಗಳನ್ನು ಬಳಸುವ ಪದ್ಧತಿಗಳು ಎರಡರಲ್ಲೂ ಅಪಾರವಾದ ಪಲ್ಲಟಗಳು ಆಗುತ್ತಿವೆ. ಸಂಬಂಧವಾಚಿ, ಗ್ರಾಮ್ಯರೂಪಿ, ಜಾತಿವಾಚಿ ಹೆಸರುಗಳನ್ನು ನಮ್ಮವರು ಕೈಬಿಡುತ್ತಿದ್ದಾರೆ. ಕುಲ, ಜಾತಿಗಳನ್ನು ಮರೆಮಾಚುವ ರೀತಿ ಇಲ್ಲವೆ ʼಉನ್ನತʼ ಜಾತಿ, ಕುಲಗಳನ್ನು ಅನುಕರಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯರ, ಪಿತೃಪಿತಾಮಹರ ಹೆಸರು ಇಡಲು ಸಾಕಶ್ಟು ಮಂದಿ ಇಶ್ಟ ಪಡುವುದಿಲ್ಲ. ಇಂಗ್ಲಿಶ್‌ ಮತ್ತು ವಿದೇಶಿ ಪ್ರಭಾವದಿಂದ ಅಪರಿಚಿತ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಇಂಟರ್ನೆಟ್‌, ಸಿನೆಮಾ, ಮೊಬೈಲ್‌, ಧಾರವಾಹಿಗಳ ಪ್ರಭಾವದಿಂದ ನಮ್ಮ ಸಾಂಪ್ರದಾಯಿಕ ಆಚಾರ ಮತ್ತು ಸಾಂಸ್ಕೃತಿಕ ಗುರುತುಗಳನ್ನು ನಮ್ಮ ಹೊಸ ಹೆಸರುಗಳು ಕಳೆದುಕೊಳ್ಳುತ್ತಿವೆ. ಹೆಸರೆತ್ತುವುದು, ಅಪ್ಪನ ಹೆಸರು ಎತ್ತುವುದು ಎಂಬ ನುಡಿಗಟ್ಟಿಗೆ ಇಂದು ಬೆಲೆ ಇಲ್ಲವಾಗಿದೆ. ಹೆಸರು ಮಾಡುವುದು ಎಂದರೆ ಕೀರ್ತಿ ಸಂಪಾದಿಸುವುದು ಅಶ್ಟೆ. ಅದಕ್ಕು ಪರಂಪರೆಗು, ಮನೆತನಕ್ಕು ಸಂಬಂಧವಿಲ್ಲ. ಜನಪದೀಯತೆಯೆ ಹೊರಳು ದಾರಿಯಲ್ಲಿದೆ. ಹೆಸರಲ್ಲೇನಿದೆ? ಹೆಸರಲ್ಲಿ ಎಲ್ಲವೂ ಇದೆ.

ಈ ಅಂಕಣದ ಹಿಂದಿನ ಬರೆಹಗಳು:
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...