ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ ಈಗ ಬರೀ ನೆನಪು

Date: 01-02-2020

Location: ಬೆಂಗಳೂರು


ಎಂಬತ್ತರ ದಶಕದ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯ ಸಮ್ಮೇಳನ ಕನ್ನಡದ ಪಾಲಿನ ಸಾಂಸ್ಕೃತಿಕ ಯಾತ್ರೆಯಾಗಿರುತ್ತಿತ್ತು ಜಾತ್ರೆ ಅಲ್ಲ.
ಸಮ್ಮೇಳನಾಧ್ಯಕ್ಷರ ಭಾಷಣ,ವಿಚಾರ ಸಂಕಿರಣಗಳು,ಕವಿಗೋಷ್ಟಿ ಮತ್ತು ಕೆಲವೇ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು.
ಕನ್ನಡದ ಮನಸ್ಸುಗಳ ಸಂಯಮದ ನಡೆ,ವಿದ್ವಾಂಸರ ನುಡಿ ಎಲ್ಲದರಲ್ಲೂ ಕನ್ನಡದ ಕಂಪು,ಕಿವಿಗೆ ಇಂಪು,ಮನಸಿಗೆ ತಂಪು.

ಈಗ…

ಕನ್ನಡ ಸಾಹಿತ್ಯ ಭಾಷೆಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಆದರೆ ಕನ್ನಡ ನೆಲದಲ್ಲಿ ಅನ್ನದ ಭಾಷೆಯಾಗಿ ಬೆಳೆಯಲು ವಿಫಲವಾಗುತ್ತಿದೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳ ಬೆಳವಣಿಗೆ, ಕನ್ನಡ ಸರಕಾರಿ ಶಾಲೆಗಳ ದುಸ್ಥಿತಿ, ಸೊರಗುತ್ತಿರುವ ಓದುಗರ ಸಂಖ್ಯೆ ಕನ್ನಡದ ಮಿತಿ.
ಆದರೆ ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಹಿರಿಮೆ,ಅನಿವಾಸಿ ಕನ್ನಡಿಗ ತಂತ್ರಜ್ಞರ ಆಸಕ್ತಿ ಕನ್ನಡ ಭಾಷೆಗೆ ಹೊಸ ಆಯಾಮ ಕಲ್ಪಿಸಿದೆ. ಹೊಸ ತಂತ್ರಾಂಶ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಜಗದ ಭಾಷೆಯಾಗಿದೆ.

ಹಾಗಾದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಾತ್ರೆಯಾದ ಸಾಹಿತ್ಯ ಸಮ್ಮೇಳನಗಳಿಗೆ ಯಾರು ಹೊಣೆ?
ಕಾರಣ ಹುಡುಕುವುದು ಕಷ್ಟವೇನಲ್ಲ ಆದರೆ ಉತ್ತರ ಹೇಳುವುದು ಕಡು ಕಷ್ಟ.

ಸಾಹಿತ್ಯ ಪರಿಷತ್ತು ಅಡ್ಡಾ ದಿಡ್ಡಿಯಾಗಿ ಬೆಳದು ಬಿಟ್ಟಿದೆ.
ಓಟು ಮಾಡಿಸಿದವರು ಮಾತ್ರ ಗೆಲ್ಲುತ್ತಾರೆ, ಓಟು ಹಾಕಿಸಿಕೊಂಡವರಲ್ಲ; ಓಟು ಹಾಕಿದವರೂ ಅಲ್ಲ.

ನಿಜವಾದ ಸಾಹಿತಿಗಳು ಪರಿಷತ್ತಿನ ಹತ್ತಿರ ಸುಳಿಯುವುದು ದುಬಾರಿ. ಸಂಘಟನಾ ಚತುರರು,ಹಣ,ಅಧಿಕಾರ ಹೊಂದಿದವರ ಹುಲುಸಾದ ತಂಗುದಾಣವಾಗಿದೆ.

ಪ್ರೊ.ಚಂದ್ರಶೇಖರ ಪಾಟೀಲ ಅವರು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಪರಿಷತ್ತಿನ ಘನತೆಗಾಗಿ ಶ್ರಮಿಸಿದರು.
ರಾಜಕೀಯ ಸಿದ್ಧಾಂತ ಮತ್ತು ನಾಯಕರ ಹಸ್ತಕ್ಷೇಪಕ್ಕೆ ತಾತ್ಕಾಲಿಕ ತಡೆ ಒಡ್ಡಿದ್ದು ಈಗ ಇತಿಹಾಸ.

ಅಗತ್ಯವೋ,ಅನಗತ್ಯವೋ ಗೊತ್ತಿಲ್ಲ, ಕೋಟಿಗಟ್ಟಲೆ ಸರಕಾರದ ಮತ್ತು ಸಾರ್ವಜನಿಕರ ಹಣದ ಜಮಾವಣೆ ಮತ್ತು ಅದೇ ಪ್ರಮಾಣದ ಖರ್ಚು.

ಮಂತ್ರಿಗಳು, ಕೇಂದ್ರ ಕಸಾಪ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳ ಸರ್ಪಗಾವಲಿನಲ್ಲಿ ಹಣದ ವಿನಿಯೋಗ.
ಸ್ಥಾನಿಕವಾಗಿ ಜನರಿಗೆ "ನಮ್ಮ ಊರಿನಲ್ಲಿ ಸಮ್ಮೇಳನ" ಎಂಬ ಮಹಾ ಸಡಗರ ಅದು ಬಿಟ್ಟರೆ ಉಳಿದವರಿಗೆ ಏನೂ ಕೆಲಸ ಇಲ್ಲ ಅದಕ್ಕೆ ಅವಕಾಶವೂ ಇಲ್ಲ.

ಏಕೆಂದರೆ ಕೇಂದ್ರ ಕಸಾಪ ಅಧ್ಯಕ್ಷರು ಸಾರ್ವಭೌಮರು ಎಂಬ ವಾತಾವರಣ ಈಗ ಸೃಷ್ಟಿಯಾಗಿದೆ, ಏನಾದರೂ ಪ್ರಶ್ನೆ ಕೇಳಿದರೆ ಅವಕಾಶಗಳಿಂದ ಔಟ್.

ಪುಸ್ತಕೋದ್ಯಮ ಬೆಳೆಯಬಹುದೆಂಬ ಭರವಸೆ, ವಿಪರೀತ ಜನ ಸೇರುವ ಕನ್ನಡದ ಜಾತ್ರೆ ಇದಲ್ಲವೇ!
ಗೋಷ್ಠಿಗಳ ಚರ್ಚೆ ಆಳುವ ವರ್ಗದವರ ನೋಯಿಸಬಾರದು; ಅವರು ಅನುದಾನ ಬಿಡುಗಡೆ ಮಾಡುತ್ತಾರೆ, ಅವರ ಮನೆಯ ಹಣದಿಂದ!

ಆಳುವ ವರ್ಗದವರಿಗೆ ಬೇಡವಾದವರನ್ನು ಆಹ್ವಾನಿಸುವ ಗೊಡವೆಗೆ ಹೋಗುವುದೇ ಬೇಡ. ನಿಷ್ಪಕ್ಷಪಾತವಾಗಿ ಅತಿಥಿಗಳ ಆಹ್ವಾನಿಸಲಾಗದು, ಜಿಲ್ಲಾ ಘಟಕಗಳ ಅಧ್ಯಕ್ಷರು ಶಿಫಾರಸ್ಸು ಮಾಡಬೇಕು, ಪಾಪ ಅವರ ಚುನಾವಣಾ ಗೆಲುವಿಗೆ ಗೆದ್ದವರ ದಂಡನ್ನು ಸಮಾಧಾನ ಪಡಿಸುವ ಭರದಲ್ಲಿ ಸಾಹಿತಿ ಕಾಣೆಯಾಗಿಬಿಡುತ್ತಾನೆ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಎಂಬಂತೆ.

ಯಾರನ್ನು ಏನೂ ಅನ್ನಲಾಗದ ಅಸಹಾಯಕ ವಾತಾವರಣ, ನಿರೀಕ್ಷೆಗೆ ಮೀರಿ ಜನ ಸೇರಿ ಬಿಡುತ್ತಾರೆ, ಮಾಧ್ಯಮಗಳು ಅಸ್ತವ್ಯಸ್ತತೆ ತೋರಿಸುವ ಭರದಲ್ಲಿ ಸುವ್ಯವಸ್ಥೆಗೆ ಅವಕಾಶ ಸಿಗುವುದಿಲ್ಲ, ಹಾಗಾಗಿ ಎಷ್ಟು ಖರ್ಚು ಮಾಡಿದರೇನು ಪರಿಣಾಮ ಮೊದಲೇ ಗೊತ್ತಾದ ಸಂಘಟಿಕರು ರೆಡಿಮೇಡ್ ಉತ್ತರ ಇಟ್ಟುಕೊಂಡಿರುತ್ತಾರೆ.

'ಎಲ್ಲ ತಯಾರಿ ಮಾಡಿಕೊಂಡಿದ್ದರೂ ನಿರೀಕ್ಷೆಗೆ ಮೀರಿ ಜನ ಬಂದಿದ್ದರಿಂದ ಕೊಂಚ ಅಸ್ತವ್ಯಸ್ತವಾಯಿತು, ಮುಂದಿನ ಸಮ್ಮೇಳನದಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು' ಎಂಬ ದೇಶಾವರಿ ಉತ್ತರ.

ವಿಳಂಬವಾಗಿ ಕಾರ್ಯಕ್ರಮ ಪ್ರಾರಂಭವಾಗಲು ಕಾರಣವಾಗುವ ರಾಜಕಾರಣಿಗಳು ಒಂದು ಸಣ್ಣ ವಿಷಾದವನ್ನು ವ್ಯಕ್ತ ಪಡಿಸಲಾಗದಷ್ಟು ಗಟ್ಟಿಗರು.

ಇಡೀ ಬದುಕಿನುದ್ದಕ್ಕೂ ವಿವಿಧ ಬಗೆಯ ಅಧಿಕಾರದ ಸವಿ ಉಂಡವರು ಅಧ್ಯಕ್ಷರಾಗಿ, ' ನಾನು ಸಾಹಿತಿ ಅದೀನ್ರಿ ಇವರ ಹಣೆಬರಹ ಗೊತ್ತು ಬಿಡ್ರಿ' ಅನ್ನೋ ಅರ್ಥ ಬರೋ ಮಾತುಗಳನ್ನಾಡುತ್ತ ಕನ್ನಡಿಗರ ಮತ್ತು ಪರಿಷತ್ತಿನ ಘನತೆಗೆ  ಅವಮಾನ ಮಾಡಿದರೂ ಎಲ್ಲರೂ ಗಪ್ ಚುಪ್. ಹೋಗಲಿ ಬಿಡು ಸಿಗೋ ಅವಕಾಶನೂ ಹೋಗುತ್ತದೆ, ಬೈದು ಮಾನ ಹರಾಜು ಹಾಕ್ತಾರೆ ಎಂಬ ಸಂಕೋಚ ಮತ್ತು ಅಳುಕು.

ಸದಾ ಅಧಿಕಾರಸ್ಥ ರಾಜಕಾರಣಿಗಳ ಪರ ನಿಲ್ಲುವ ಜನ ವಿರೋಧಿ ನಿಲುವನ್ನು ಪ್ರಶ್ನಿಸಲಾಗದ ಅಸಹಾಯಕ ಮೌನ.

ಕನ್ನಡಕ್ಕೆ ಅನ್ಯಾಯವಾದಾಗ ಪರಿಷತ್ತಿನ ಅಧ್ಯಕ್ಷರು ಕನ್ನಡ ಭಾಷೆಯ ಮುಖ್ಯ ಮಂತ್ರಿಗಳ ತರಹ ಎಂಬ ಸಾಕ್ಷಿ ಪ್ರಜ್ಞೆ ಇಟ್ಟುಕೊಂಡು ಸರಕಾರದ ಜೊತೆ ಹೋರಾಟ ಮಾಡಿ ತಮ್ಮ ಅಸ್ಮಿತೆ ಉಳಿಸಿಕೊಳ್ಳುತ್ತಿದ್ದರು.

ಈಗ ಕೋಟಿಗಟ್ಟಲೆ ಅನುದಾನ ಮತ್ತು ಅಧಿಕಾರ ಪರ ನಿಲುವಿನಿಂದಾಗಿ ಸ್ವಾಭಿಮಾನಿ ಕನ್ನಡಿಗರ ಧ್ವನಿ ಕ್ಷೀಣಿಸಿದ್ದು ವಿಷಾದನೀಯ. ಏನೇನೋ ಅನೇಕ ಕಾರಣಗಳಿಂದ ಅಂತಹ ವ್ಯಕ್ತಿಗಳನ್ನು ಚುನಾಯಿಸಿದ ಕನ್ನಡಿಗ ಮೌನವಾಗಿರುವುದು ಅನಿವಾರ್ಯ.

ಇಷ್ಟೆಲ್ಲಾ ತಲ್ಲಣಗಳ ಮಧ್ಯೆ ಸಮ್ಮೇಳನಗಳು ನಡೆಯುತ್ತಲೇ ಇವೆ. ಕೋಟಿಗಟ್ಟಲೆ ಹಣ ಸಮರ್ಥವಾಗಿ ಉಪಯೋಗವಾಗುತ್ತದೆ. ನಂತರ ಒಂದಿಷ್ಟು ಸುದೀರ್ಘ ಚರ್ಚೆಯೂ ಆಗುತ್ತದೆ.

ಸಮ್ಮೇಳನದ ನಿರ್ಣಯಗಳ ಅನುಷ್ಠಾನಕ್ಕೆ ಮುಂದಿನ ವರ್ಷದ ತನಕ ಕಾಯುತ್ತ,ಕನ್ನಡದ ಹೆಸರಿನ ಮೇಲೆ ಈಗ ಲಕ್ಷಾಂತರ ಜನ ಒಟ್ಟಿಗೆ ಸೇರುತ್ತಾರೆ ಎಂಬ ಸಮಾಧಾನ ಮತ್ತು ಆಶಾಭಾವ ಇಟ್ಟುಕೊಂಡು ಹೀಗೆಯೆ ಸಮ್ಮೇಳನಗಳಿಗೆ ಸಾಕ್ಷಿಯಾಗುವ ಅಸಹಾಯಕ ಕನ್ನಡಿಗರು ನಾವು.

ಪುಸ್ತಕೋದ್ಯಮದ ಜೊತೆಗೆ ಇತರ ವ್ಯಾಪಾರಗಳು ಭರ್ಜರಿಯಾಗಿ ನಡೆಯುತ್ತವೆ, ಕನ್ನಡದ ಈ ಜಾತ್ರೆಯಲ್ಲಿ ಸ್ಥಾನಿಕರು ಖುಷಿ ಪಡುವ ಕಾರಣದಿಂದಾಗಿ ಇನ್ನೂ ಸ್ವಲ್ಪ ದಿನ ಭರವಸೆಯಿಂದ ಅನಗತ್ಯ ಟೀಕೆ ಮಾಡದೆ ಮೌನವಾಗಿರುವ ಸಂದಿಗ್ಧತೆ.

ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳನ್ನು ಮೌಲಿಕ ಎತ್ತರಕ್ಕೆ ಏರಿಸುವ ಭರವಸೆ ಕಳೆದುಕೊಂಡವರು ಪರ್ಯಾಯ ಸಮ್ಮೇಳನಗಳ ಮೂಲಕ ತೃಪ್ತಿ ಹುಡುಕುವಷ್ಟು ಸಹನಶೀಲರು.

ಅದರ ಪ್ರತಿಫಲವೇ ಮೋಹನ್ ಆಳ್ವಾ ಅವರ ನುಡಿಸಿರಿ, ಧಾರವಾಡದ ಸಾಹಿತ್ಯ ಸಂಭ್ರಮ ಇತ್ಯಾದಿ ಇತ್ಯಾದಿ.
ಎಲ್ಲಾ ನೋವುಗಳನ್ನು ಸಹಿಸಿಕೊಂಡು ಸಾಹಿತ್ಯ ಜಾತ್ರೆಯನ್ನು ಸಾಂಸ್ಕೃತಿಕ ಯಾತ್ರೆಯಾಗುವ ಸಂಕಲ್ಪ ಮಾಡೋಣ ಬನ್ನಿ.
 

-ಸಿದ್ದು ಯಾಪಲಪರವಿ

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...