ಕಲಬುರಗಿ ಅಂದ್ರ ಏನನ್ಕೊಂಡೀರಿ-ಕಲಬುರಗಿ ಹೆಸರು

Date: 31-01-2020

Location: ಕಲಬುರಗಿ


ಮೂರು ದಶಕಗಳ ನಂತರ ಕಲಬುರಗಿ ಮತ್ತೊಮ್ಮೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿದೆ. ಸಾಹಿತ್ಯದ ಸಂಭ್ರಮದ ಜೊತೆಯಲ್ಲಿಯೇ ಈ ಪ್ರದೇಶದ ಭಾಷಿಕ ಸೊಗಡು-ವೈಶಿಷ್ಟ್ಯ ಮತ್ತು ಮಹತ್ವ-ವೈವಿಧ್ಯ ಅರಿಯುವ ನಿಟ್ಟಿನಲ್ಲಿ ಭಾಷಾವಿಜ್ಞಾನಿ-ಲೇಖಕ-ಸಂಶೋಧಕರಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಅವರು ’ಕಲಬುರಗಿ ಅಂದ್ರ ಏನನ್ಕೊಂಡೀರಿ’ ಎಂಬ ಸರಣಿ ಬರಹಗಳನ್ನು ’ಬುಕ್‌ ಬ್ರಹ್ಮ’ಕ್ಕೆ ನೀಡಿದ್ದಾರೆ. ಕೋಡಗುಂಟಿ ಅವರು ತಮ್ಮ ಈ ಬರಹಗಳಲ್ಲಿ ಮಹಾಪ್ರಾಣ ಮತ್ತು ಅರ್ಕಾವತ್ತು ಬಿಟ್ಟು ಬರೆದಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ- 

ಕಲಬುರಗಿ ಎಂಬ ಹೆಸರಿನ ಬಗೆಗೆ ಹಲವು ವಿಚಾರಗಳು ಇವೆ, ಕಲ್ಲುಗಳಿರುವ, ಕಲ್ಲುಗಳಿಂದ ಸುತ್ತುವರೆದ ಪ್ರದೇಶದ ಊರು ಎಂಬ ವಿಚಾರ ಹೆಚ್ಚು ಹರಿದಾಡುತ್ತಿದೆ. ಕಲಂಬರಿಗೆ, ಕಲಂಬುರಿಗೆ ಮೊದಲಾದವು ಶಾಸನಗಳಲ್ಲಿ ದೊರೆಯುವ ಈ ಊರಿನ ಹೆಸರುಗಳು. ಕಲಬುರಗಿ ಹೆಸರಿನ ಹಿನ್ನೆಲೆ ಇದಕ್ಕಿಂತಾ ತುಂಬಾ ಬಿನ್ನವಾಗಿದೆ. ಪ್ರತಿ ಊರಿನ ಹೆಸರಿನ ಹಿಂದೆ ಒಂದು ಕತೆ ಇರುತ್ತದೆ. ಅದನ್ನ ಅರಿತುಕೊಂಡಾಗಲೆ ಆ ಹೆಸರಿನ ವಾಸ್ತವ ಹಿನ್ನೆಲೆ ದೊರೆಯಬಹುದು. ನಮಗೆ ಗೊತ್ತಿರುವ ಊರುಗಳು ಸಹಜವಾಗಿ ಒಂದೆ ಕಾಲದಲ್ಲಿ ಹುಟ್ಟಿದವು ಅಲ್ಲ, ಹಾಗಾಗಿ ಅವುಗಳಿಗೆ ಇಟ್ಟ ಹೆಸರುಗಳೂ ಕೂಡ ಬಿನ್ನ ಕಾಲಕ್ಕೆ ಸೇರುತ್ತವೆ. ಹಾಗಾದರೆ ಕಲಬುರಗಿ ಹೆಸರು ಯಾವ ಕಾಲಕ್ಕೆ ಸೇರುತ್ತದೆ ಎಂಬುದನ್ನು ಆಲೋಚಿಸಿದರೆ ಆ ಹೆಸರಿನ ಹಿನ್ನೆಲೆ ಹುಡುಕುವ ಪ್ರಯತ್ನ ಹೆಚ್ಚು ಸಾರ್‍ತಕತೆಯನ್ನು ಪಡೆದುಕೊಳ್ಳಬಹುದು.
ಕಲಬುರಗಿ ಊರಿನ ಹಳೆಯ ಉಲ್ಲೇಕ ೧೦೯೯ರ ಹುಣಸಿ ಹಡಲಿಗೆಯ ಶಾಸನದಲ್ಲಿ ಕಲಂಬುರಗೆ ಎಂದು. ಶಾಸನಗಳಲ್ಲಿ ಕಲುಂಬರಿಗೆ ಇದು ಹೆಚ್ಚಾಗಿ ಬಳಕೆಯಾಗಿದೆ. ಕಲಂಬರಿಗೆ, ಕಲಂಬಱಗೆ ಹೀಗೆ ಹಲವು ರೂಪಗಳೂ ಇವೆ. ಸದ್ಯಕ್ಕೆ ಕಲಂಬುರಿಗೆ ಎಂಬ ರೂಪವನ್ನೆ ಇಟ್ಟುಕೊಂಡು ಚರ್‍ಚೆ ಮಾಡಬಹುದು.
ಕಲಬುರಗಿ ಹೆಸರಿನ ಚರಿತ್ರೆ ತದಕುತ್ತಾ ಮನುಶ್ಯ ನಾಗರಿಕತೆ ಬೆಳವಣಿಗೆ ಮತ್ತು ಕನ್ನಡ ಬಾಶೆ ಬೆಳವಣಿಗೆ ಈ ಎರಡು ನೆಲೆಯಲ್ಲಿ ಅರ್‍ತ ಮಾಡಿಕೊಳ್ಳಬೇಕಿದೆ. ಮೊದಲು ನಾಗರಿಕತೆ ಬೆಳವಣಿಗೆ ಬಗ್ಗೆ ನೋಡೋಣ,
ಮನುಶ್ಯ ಒಕ್ಕಲುತನವನ್ನು ಕಲಿತ ನಂತರ ಶಿಲಾಯುಗದ ಹಂತ ಮುಗಿಯುತ್ತಾ ಬಂದಿತು. ಒಕ್ಕಲುತನದಿಂದಾಗಿ ಮನುಶ್ಯ ಒಂದೆಡೆ ನೆಲೆ ಊರಿದರು, ಹೀಗೆ ನೆಲೆ ಊರಿದ ಜಾಗಗಳೆ ಊರುಗಳು. ಹೀಗೆ ಒಂದೆ ಕಡೆ ನೆಲೆ ಊರದೆ ಸಹಜವಾಗಿ ಹಲವು ಕಡೆ ನೆಲೆ ಊರಿದರು. ಕ್ರಮೇಣ ಪರಸ್ಪರ ಊರುಗಳ ನಡುವೆ ಸಂಪರ್‍ಕ ಬೆಳೆದವು, ಅವು ಮುಂದೆ ಸಹಜವಾಗಿ ಸಂಬಂದವೂ ಆಗಿ ಬೆಳೆದವು. ಈಗ ಊರುಗಳಿಗೆ ಹೆಸರುಗಳ ಅವಶ್ಯಕತೆ ಕಂಡಿತು. ಮನುಶ್ಯ ಬಾಶೆ ಹಲವು ಸಾವಿರ ವರುಶಗಳ ಹಿಂದಿನಿಂದಲೆ ಬಳಕೆಯಲ್ಲಿದ್ದಿತು. ಈಗ ನೆಲೆ ಊರಿದ ಊರುಗಳಿಗೆ ಹೆಸರನ್ನು ಇಡತೊಡಗಿದರು. ಮೂಲಬೂತವಾಗಿ ಮನುಶ್ಯ ಒಂದು ಕಡೆ ನೆಲೆ ಊರುವುದಕ್ಕೆ ಕಾರಣವಾಗಿದ್ದದ್ದು ಉಳುವ ಬೆಳೆವ ಕೆಲಸ. ಹಾಗಾಗಿ ಹೆಸರಿಡುವುದಕ್ಕೆ ಮೂಲವಾಗಿ ಇದು ನಿಂತಿತು.
ಬನ್ನಿ ಇನ್ನು ಈ ನಾಗರಿಕತೆ ಬೆಳವಣಿಗೆ ಜೊತೆಜೊತೆಗೆ ಕನ್ನಡ ಬಾಶೆಯ ಬೆಳವಣಿಗೆ ಹೇಗಾಯಿತು ಎಂಬುದನ್ನು ನೋಡೋಣ.
ಕೆಯ್ ಎಂಬುದು ದ್ರಾವಿಡದ ಒಂದು ಕ್ರಿಯಾಪದ. ಮೂಲಬೂತವಾಗಿ ಇದರರ್‍ತ ಮಾಡು ಎಂಬುದು. ಈ ಪದ ಹೆಚ್ಚಿನ ದ್ರಾವಿಡ ಬಾಶೆಗಳಲ್ಲೂ ಸಿಗುತ್ತದೆ. ಸರಳವಾಗಿ ಮಾಡುವುದೆಲ್ಲವೂ ಕೆಯ್ಗಳೆ. ಈ ಮೇಲೆ ಮಾತನಾಡಿದ ಒಕ್ಕಲುತನ ಕೆಲಸ ಕೂಡ ಮಾಡುವುದು ಆಗಿದ್ದಿತು. ಹಾಗಾಗಿ ಒಕ್ಕಲುತನ ಕೆಯ್ ಎಂದಾಯಿತು. ಮಾಡಿದ್ದು ಮಾಟ ಎನ್ನುವಂತೆ ಕೆಯ್ದಿದ್ದು ಕೆಯ್ಮೆ. ಗೆಯ್ಮೆ ಎಂಬ ಪದ ಇದೆ. ಒಕ್ಕಲುತನ ಮಾಡುವ ಜಾಗವೂ ಕೆಯ್ ಎಂದಾಯಿತು. ಕನ್ನಡದ ಸಾವಿರಾರು ಶಾಸನಗಳಲ್ಲಿ ಕೆಯ್ ಅನ್ನು ದಾನ ಮಾಡಿದ್ದರ ದಾಕಲೆಗಳು ದೊರೆಯುತ್ತವೆ. ಹೀಗೆ ಕೆಯ್ ಎಂದರೆ ಮಾಡು, ಊಳು ಇಲ್ಲವೆ ಒಕ್ಕಲುತನ ಮಾಡು, ಹೊಲ ಮೊದಲಾದ ಅರ್‍ತಗಳು ಬೆಳೆದವು. ಇದಕ್ಕೆ ಇನ್ನೂ ಹಲವಾರು ಅರ್‍ತಗಳು ಬೆಳೆದು ಬಳಕೆಯಲ್ಲಿವೆ, ಅವೆಲ್ಲ ಇಲ್ಲಿ ಮಾತಿಗೆ ಅನವಶ್ಯಕ.
ಸರಿ, ಇನ್ನು ಮೊದಲ ಮತ್ತು ಎರಡನೆ ಬೆಳವಣಿಗೆಗಳನ್ನು ಜೋಡಿಸೋಣ. ಒಕ್ಕಲುತನ ಮಾಡಿದ ಬೇರೆ ಬೇರೆ ಜಾಗಗಳನ್ನು ಹೆಸರಿಸುವಾಗ ಒಕ್ಕಲುತನ ಮುಕ್ಯವಾಗಿ ಇದ್ದಿತು. ಹಾಗಾಗಿ ಕೆಯ್ ಹೆಸರಿನಿಂದ ಊರುಗಳನ್ನು ಹೆಸರಿಸುವುದು ಸಾದ್ಯವಾಯಿತು. ಕೇವಲ ಕೆಯ್ ಎಂದರೆ ಎಲ್ಲ ಒಕ್ಕಲುತನದ, ನೆಲೆಯೂರಿದ ಜಾಗಗಳೂ ಕೆಯ್ಗಳೆ. ಹಾಗಾಗಿ ಅದಕ್ಕೆ ಇನ್ನೊಂದು ನಿರ್‍ದಿಶ್ಟ ಪದವನ್ನು ಬಳಸಿದರು. ಕಲಬುರಗಿ ಊರಿಗೆ ಬಳಸಿದ ಇಂತಾ ನಿರ್‍ದಿಶ್ಟ ಪದ ಕಲುಂಬ ಇಲ್ಲವೆ ಕಲುಂಬರ್ ಎಂಬುದಾಗಿರಬೇಕು. ಬಹುಹಿಂದೆ ಕನ್ನಡದಲ್ಲಿ ವ್ಯಂಜನಕೊನೆಗಳು ಸಹಜವಾಗಿ ಇದ್ದದ್ದರಿಂದ ಕಲಂಬರ್ ಎನ್ನುವುದು ಹೆಚ್ಚು ಸಹಜವೆನಿಸುತ್ತದೆ. ಹಾಗಾದರೆ ಕಲುಂಬರ್+ಕೆಯ್=ಕಲುಂಬರ್‍ಕೆಯ್. ಇನ್ನೂ ಹಿಂದೆ ಕನ್ನಡದಾಗ ಗ್, ಜ್, ಡ್, ದ್, ಬ್ ಗಳು ಇರಲಿಲ್ಲ, ಅವು ಆನಂತರ ಬೆಳೆದಿವೆ. ಹಾಗಾದರೆ ಹೆಸರು ಕಲುಂಪರ್+ಕೆಯ್=ಕಲುಂಪರ್‍ಕೆಯ್ ಆಗಿದ್ದಿರಬೇಕು. ಆನಂತರ ಇದು ನಿರಂತರ ಬದಲಾವಣೆಗೆ ಪಕ್ಕಾಗಿದೆ.
ಕೆಯ್ ಎನ್ನುವುದನ್ನು ಮಾತನಾಡಿದೆವು. ಆದರೆ ಕಲುಂಬರ್ ಎಂದರೆ ಎನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸದ್ಯ ಹೆಚ್ಚಿನ ಅದ್ಯಯನಗಳು ಬೇಕು. ಸಹಜವಾಗಿಯೆ ಇದೊಂದು ಹೆಸರಾಗಿರಬೇಕು, ವ್ಯಕ್ತಿಯದೊ, ಗುಂಪಿನದೊ ತಿಳಿಯದು. ಆದರೆ ಕೆಯ್ ಹೆಸರಿನ ಊರು ಕಲಬುರಗಿ ಮಾತ್ರವಲ್ಲ ಸಾವಳಗಿ, ಜೇವರಗಿ ಹೀಗೆ ನೂರಾರು, ಇಲ್ಲ ಸಾವಿರಾರು ಇವೆ. ಮಹಾರಾಶ್ಟ್ರದಿಂದ ಕೇರಳದವರೆಗೆ ಕೆಯ್ ರಾರಾಜಿಸುತ್ತಿದೆ. ಹಾಗಾಗಿ ಅವೆಲ್ಲವನ್ನು ಒಟ್ಟಿಗೆ ನೋಡಿದಾಗ ಮಾತ್ರ ಇದು ವ್ಯಕ್ತಿಯದೊ, ಗುಂಪಿನದೊ, ಪರಿಸರದ್ದೊ ಹೀಗೆ ಇನ್ನಾವುದೊ ಆಗಿರಬಹುದು ಎಂದು ಊಹಿಸಬಹುದು. ಒಂದು ವಿಚಾರ ನಿಜ. ಕನ್ನಡದಲ್ಲಿ ಹಿಂದೆ ಕೇವಲ ಒಂದಕ್ಕರದ ಮತ್ತು ಎರಡಕ್ಕರದ ಪದಗಳು ಸಹಜವಾಗಿ ಇದ್ದವು. ಮೂರಕ್ಕರದ ಪದಗಳು ಸಾಮಾನ್ಯವಾಗಿ ಸಮಾಸಗಳು. ಹಾಗಾದರೆ ಮೂರಕ್ಕದ ಕಲುಂಬ/ಕಲುಂಬರ್ ಕೂಡ ಒಂದು ಸಮಾಸಪದ. ಹಾಗಾದರೆ ಈ ಸಮಾಸದಲ್ಲಿ ಇರುವ ಎರಡು ಪದಗಳು ಯಾವು ಎಂದು ತಲೆ ಕೆಡಿಸಿಕೊಳ್ಳಬೇಕು. ನಮಗೆ ಹೇಗೆಲ್ಲ ಯೋಚಿಸಲು ಸಾದ್ಯವೊ ಹಾಗೆಲ್ಲ ಇದನ್ನು ಒಡೆದು ನೋಡಬೇಕು. ಆಗ ಯಾವುದೊ ಒಂದು ವಾಸ್ತವ ಇಲ್ಲವೆ ವಾಸ್ತವಕ್ಕೆ ಹತ್ತಿರದ್ದು ಕಾಣಿಸಬಹುದು. ಕಲುನ್+ಅರ್, ಕಲುನ್+ಪರ್, ಕಲುನ್ಪ+ಅರ್/ಕಲುಂಪ+ಅರ್, ಕಲ್+ಅನ್ಪರ್/ಕಲ್+ಅಂಪರ್. ಇನ್ನಾವುದಾದರೂ ರೀತಿಯಲ್ಲಿ ಒಡೆಯುವಿರಾ, ನೋಡಿ.
ಇನ್ನು ಕಲಬುರಗಿ ಕತೆಯನ್ನು ಮುಂದುವರೆಸೋಣ.
ಬಹು ಹಿಂದಿನ ಗ್,ಜ್,ಡ್,ದ್,ಬ್ ಗಳ ಬೆಳವಣಿಗೆಯಲ್ಲಿ ಕಲುಂಬರ್‍ಕೆಯ್>ಕಲುಂಬರ್‍ಗೆಯ್ ಎಂದಾಯಿತು. ಪದಕೊನೆಯ ಸಂದ್ಯಕ್ಕರವನ್ನು ಕಳೆದುಕೊಂಡು ಇದು ಕಲುಂಬರಗೆ ಎಂದಾಗಿದೆ. ಮೂರು ಅಕ್ಶರಗಳು ಇರುವ ಪದದ ಎರಡನೆಯ ಮತ್ತು ನಾಲ್ಕು ಅಕ್ಶರಗಳು ಇರುವ ಪದದ ಮೂರನೆಯ ಅಕ್ಶರದ ಸ್ವರ ಕನ್ನಡದಲ್ಲಿ ತುಂಬಾ ಸ್ವೇಚ್ಚೆಯಿಂದ ಬಳಕೆಯಾಗುತ್ತದೆ. ಇದಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕಿದೆ. ಈ ಪ್ರಕ್ರಿಯೆಯಲ್ಲಿ ಕಲುಂಬರಿಗೆ ಪದ ವಿವಿದ ರೂಪಗಳನ್ನು ಪಡೆದುಕೊಂಡಿತು. ಆಗ ಕಲುಂಬರಿಗೆ, ಕಲುಂಬುರಿಗೆ, ಕಲಂಬರಿಗೆ, ಕಲಂಬುರಿಗೆ ಹೀಗೆ ವಿವಿದ ರೂಪಗಳನ್ನು ಪಡೆದುಕೊಂಡಿತು. ಪದಕೊನೆಯ ಎ>ಇ ಬೆಳವಣಿಗೆ ಸುಮಾರು ಸಾವಿರ ವರುಶಗಳಿಂದ ಆಗುತ್ತಾ ಬಂದಿರುವಂತಿದೆ. ಈ ಬೆಳವಣಿಗೆಯಲ್ಲಿ ಕಲುಂಬುರಗೆ>ಕಲುಂಬುರಗಿ ಎಂದಾಯಿತು. ಕನ್ನಡದ ಪದಗಳಲ್ಲಿ ಎರಡು ಲಗು/ಒಂದು ಗುರು ಮಾತ್ರಾ ಲೆಕ್ಕದ ಅಕ್ಶರಗಳ ನಂತರ ಇಲ್ಲವೆ ಎರಡು ಗಿಡ್ಡಕ್ಕರದ/ಒಂದು ಉದ್ದಕ್ಕರದ ನಂತರದ ಅನುನಾಸಿಕ ಬಿದ್ದುಹೋಯಿತು. ಆಗ, ಕಲುಂಬುರಗಿ>ಕಲುಬುರಗಿ ಆಯಿತು. ಆನಂತರ ಮೂರಕ್ಕಿಂತ ಹೆಚ್ಚು ಅಕ್ಕರಗಳು ಇರುವ ಪದಗಳ ಎರಡನೆಯ/ಮೂರನೆಯ ಸ್ವರ ಬಿದ್ದುಹೋಗುವುದು ಸಾಮಾನ್ಯ ಆಯಿತು. ಹೀಗೆ ಕಲುಬುರಗಿ/ಕಲಬುರಗಿ>ಕಲಬುರ್‍ಗಿ>ಕಲ್ಬುರ್‍ಗಿ ಎಂದು ಬೆಳೆಯಿತು.

ಚಿತ್ರಗಳು: ಸಾಂದರ್ಭಿಕ (ಬರಹದ ಉಲ್ಲೇಖಿತ ಶಾಸನಗಳಲ್ಲ)
 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...