Article

ಸನಿಹವೆನಿಸುವ ಕಸ್ತೂರ್ ಬಾ ಹಾಗೂ ಗಾಂಧಿ

ಬರಗೂರು ರಾಮಚಂದ್ರಪ್ಪನವರ ’ಕಸ್ತೂರ್ ಬಾ Vs ಗಾಂಧಿ’ – ಒಂದು ಸಹೃದಯ ಪ್ರತಿಕ್ರಿಯೆ

ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ ಗಂಭೀರವಾಗುತ್ತಾ ಸಾಗುತ್ತದೆ. ಹೆಸರಿಗೆ ತಕ್ಕಂತೆ ಕಾದಂಬರಿಯುದ್ದಕ್ಕೂ ಪತಿ-ಪತ್ನಿಯರ ಸಂವಾದವೇ ಪ್ರಧಾನವಾಗಿ, ಅದರ ಮೂಲಕವೇ ಅವರಿಬ್ಬರ ನಡುವಿನ ಸಂಬಂಧದ ಆಳ ಅಗಲಗಳನ್ನೂ ಅನಾವರಣಗೊಳಿಸಲಾಗಿದೆ.

ಪೀಠಿಕೆಯ ಭಾಗದಲ್ಲಿ ಲೇಖಕರು ಕೆಲವು ಅಂಶಗಳನ್ನು ಸ್ಪಷ್ಟಪಡಿಸುತ್ತಾರೆ: ಕಸ್ತೂರ್ ಬಾ ಮತ್ತು ಗಾಂಧಿ ನಡುವೆ ಇದ್ದದ್ದು ವಿಚಾರ ವೈರುಧ್ಯವೇ ಹೊರತು ವ್ಯಕ್ತಿ ವಿರೋಧವಲ್ಲ. ಗಾಂಧಿ ಮತ್ತು ಕಸ್ತೂರ್ ಬಾ ಅವರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಇದ್ದವೆಂಬಾ ಕಾರಣಕ್ಕೆ ಅವರು ಪರಸ್ಪರ ವಿರೋಧಿ ನೆಲೆಯಲ್ಲಿ ನಿಂತಿದ್ದರೆಂದು ಭಾವಿಸಬೇಕಾಗಿಲ್ಲ. ಮುಖಾಮುಖಿಯಾಗುತ್ತಲೇ ಬದಲಾಗುತ್ತ ಬಂದ ವಿಶಿಷ್ಟ ವ್ಯಕ್ತಿತ್ವದ ಇವರಿಬ್ಬರದೂ ಪ್ರಜಾಸತ್ತಾತ್ಮಕ ಮನಸ್ಸು. ಪರಸ್ಪರ ಎದುರು ಬದರಾಗುವ ವಿಷಯಗಳಿದ್ದ ಕಾರಣಕ್ಕೆ ಯಾವತ್ತೂ ವಿರೋಧಿಗಳಾಗಿ ವಿಜೃಂಭಿಸದೆ, ವೈರುಧ್ಯಗಳನ್ನು ಮೀರುವ ಮಾನಸಿಕ ಹೋರಾಟವನ್ನು ಉಳಿಸಿಕೊಂಡು ಬೆಳೆದ ಅಪರೂಪದ ಜೋಡಿ ಜೀವಗಳು ಕಸ್ತೂರ್ ಬಾ ಮತ್ತು ಗಾಂಧಿ.

ಕಸ್ತೂರ್ ಬಾ ಹಾಗೂ ಗಾಂಧಿಯರ ಬದಕು ಪದರಪದರವಾಗಿ ಚಿತ್ರಿತವಾಗಿರುವ ಈ ಕಾದಂಬರಿಯಲ್ಲಿ ದಂಪತಿಗಳು ಸಂವಾದಕ್ಕೆ ಇಳಿಯುತ್ತಿಳಿಯುತ್ತಲೇ ಬದಲಾಗುತ್ತ ಸಾಗುವ ಪರಿ ಅನನ್ಯವಾಗಿದೆ. ಸಂಸಾರದಲ್ಲಿದ್ದುಕೊಂಡೇ ಬ್ರಹ್ಮಚರ್ಯವನ್ನು ಆಚರಿಸಬೇಕೆಂಬ ತಮ್ಮ ಇಚ್ಛೆಯನ್ನು ಕಸ್ತೂರ್ ಬಾ ರಿಗೆ ಹೇಳುವ ಸಂದರ್ಭವನ್ನು ನೆನೆಯುತ್ತ ಗಾಂಧಿ, 'ಅವತ್ತಿನಿಂದ ನನ್ನ ಬದುಕು ವಿರಹವಿಲ್ಲದ ಬರಹ’ ಎಂದುಕೊಂಡರೆ, ಕಸ್ತೂರ್ ಬಾ ರಿಗೆ ’ಅವತ್ತಿನಿಂದ ನನ್ನ ಬದುಕು ನನ್ನದಲ್ಲದ ಹಣೆ ಬರಹ’ ಎನ್ನಿಸುತ್ತದೆ!

ಕಾದಂಬರಿಯಲ್ಲಿ 'ಪೊರನ್ ಪೋಳಿ’ಯ ಪ್ರಸಂಗವೊಂದಿದೆ. ಕಸ್ತೂರ್ ಬಾ ರಿಗೆ ಒಮ್ಮೆ ಸಿಹಿ ತಿನ್ನುವ ಆಸೆಯಾಗಿ 'ಪೊರನ್ ಪೋಳಿ’ಯನ್ನು ಮಾಡುತ್ತಾರೆ. ಆಶ್ರಮವೆಂದ ಮೇಲೆ ತಾವೊಬ್ಬರೇ ತಿನ್ನುವಂತಿಲ್ಲವಲ್ಲ.. ಇತರ ಆಶ್ರಮವಾಸಿಗಳಿಗೂ ಸೇರಿ ಮಾಡಬೇಕು! ತಾವೊಬ್ಬರೇ ಕೂತು ಕಷ್ಟಪಟ್ಟು ಮಾಡುತ್ತಾರೆ. ದುರ್ಗಾಬೆನ್ ಬಾಪುವಿಗೆ ಕೊಡಲು ತಟ್ಟೆಯಲ್ಲಿ ಹಾಕಿಕೊಂಡು ಬರುತ್ತಾರೆ. 'ಕಸ್ತೂರ್ ಬಾಳ ಆರೋಗ್ಯ ಸರಿಯಿಲ್ಲದ ಕಾರಣ ಅವಳು ತಿನ್ನದಿದ್ದರೆ ಮಾತ್ರ ನಾನು ತಿನ್ನುತ್ತೀನಿ’ ಎನ್ನುತ್ತಾರೆ ಬಾಪು! ವಿಷಯ ತಿಳಿದ ಕಸ್ತೂರ್ ಬಾ ಸಿಹಿ ತಿನ್ನುವುದಿಲ್ಲ. 'ಕಸ್ತೂರ್ ಬಾ ತಿನ್ನದೇ ಇರೋ ಸಿಹಿ ನನಗೂ ಬೇಡ’ ಎಂದುಕೊಂಡು ಆ ನಂತರ ಬಾಪುವೂ ತಿನ್ನುವುದಿಲ್ಲ. ಈ ಪ್ರಸಂಗ ಅತ್ಯಂತ ಭಾವುಕವಾಗಿ ನಿರೂಪಿತಗೊಂಡಿದೆ.

'ನೀನು, ನಿನ್ನ ಜೀವನದಲ್ಲಿ ಅಳವಡಿಸಿಕೊಂಡಿರೋ ನೀತಿ ನಿಯಮಗಳ ವಿಸ್ತರಣೆಯೇ ನನ್ನ ಸತ್ಯಾಗ್ರಹದ ನೀತಿನಿಯಮ ಅಂತ ಬರ್ದಿದ್ದೀನಿ. ನಿನ್ನ ವ್ಯಕ್ತಿತ್ವದ ಪ್ರತಿಫಲವೇ ಅಹಿಂಸೆಯ ತತ್ವ ಅಂತಾನೂ ಹೇಳಿದ್ದೀನಿ’ ಎನ್ನುತ್ತಾರೆ ಬಾಪು ಕಸ್ತೂರ್ ಬಾ ರಿಗೆ ಒಂದು ಕಡೆ. ಮುಂದುವರೆದು, 'ನಾವಿಬ್ಬರು ಒರೆಗಲ್ಲು ಇದ್ದ ಹಾಗೆ. ನೀನು ನನಗೆ ಒರೆಗಲ್ಲು, ನಾನು ನಿನಗೆ ಒರೆಗಲ್ಲು. ಒರೆಗಲ್ಲುಗಳು ಎದುರು ಬದರಾಗೋದರಲ್ಲೂ ವ್ಯಕ್ತಿತ್ವ ಬೆಳೆಯುತ್ತೆ. ಎದುರಾಗ್ತಾನೇ ಒಂದಾಗೋದು ಸಾಧ್ಯ ಆಗುತ್ತೆ’ ಎನ್ನುತ್ತಾರೆ. ಹೀಗೆ ಗಾಂಧಿ ತತ್ವದ ಹಿಂದಿನ ಪ್ರೇರಣೆ ಕಸ್ತೂರ್ ಬಾ ಎನ್ನುವುದನ್ನೂ, ಮುಂದುವರೆದು ಇಬ್ಬರ ಸಂಬಂಧದ ಸಾಮರಸ್ಯವನ್ನೂ ಅನಾವರಣಗೊಳಿಸುತ್ತಾರೆ ಲೇಖಕರು.

ಸರಳಾದೇವಿ ಚೌದರಿ ಹಾಗೂ ಎಸ್ತರ್ ಷೇರಿಂಗರ ಸನ್ನಿವೇಶಗಳು ಅಚ್ಚರಿಗೊಳಿಸುತ್ತವೆ! ಗಾಂಧಿಯ ಅನುಯಾಯಿಯಾಗಿ ಸಬರಮತಿ ಆಶ್ರಮಕ್ಕೆ ಸೇರಿಕೊಳ್ಳುವ ಸರಳಾದೇವಿಯಲ್ಲಿ ಗಾಂಧಿಗೆ ವಿಚಿತ್ರ ವ್ಯಾಮೋಹ ಎಂದು ಪ್ರಚುರವಾಗುತ್ತದೆ. ಗಾಂಧಿಗೂ ಸರಳಾದೇವಿಗೂ ಅನೈತಿಕ ಸಂಬಂಧ ಇರಲಿಲ್ಲವಾದರೂ ಅದೇನೋ ವಿಶೇಷ ಆಕರ್ಷಣೆಗೆ ಗಾಂಧಿ ಒಳಗಾಗಿದ್ದರೆಂದೂ, ತಮ್ಮ ತಪ್ಪಿನ ಅರಿವಾದ ಮೇಲೆ ಸರಳಾದೇವಿಗೆ ಆಶ್ರಮದ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಗಾಂಧಿ ಒತ್ತಾಯಿಸುವುದು, ಸ್ವಲ್ಪ ಕಾಲಾನಂತರದಲ್ಲಿ ಆಕೆ ಆಶ್ರಮ ಬಿಟ್ಟು ಹೊರಡುವುದು ಎಲ್ಲವವೂ ಕಸ್ತೂರ್ ಬಾ ಸ್ಮರಣೆಯಲ್ಲಿ ಹಾದು ಹೋಗುವ ಚಿತ್ರಣವಿದೆ. ಅಂತೆಯೇ ಎಸ್ತರ್ ಹಾಗೂ ತಮ್ಮ ನಡುವೆ ಆಗಾಗ ಮನಸ್ತಾಪ ಬರುತ್ತಿದ್ದು, ಗಾಂಧಿ ಎಸ್ತರ್ ಪರವನ್ನೇ ವಹಿಸುತ್ತಿದ್ದು, ಕಸ್ತೂರ್ ಬಾ ಹಾಗೂ ಎಸ್ತರ್ ಳ ನಡುವಿನ ಸಂಘರ್ಷ ಬಗೆಹರಿಯದಾದಾಗ, ಕಡೆಗೆ ಎಸ್ತರ್ ಗಾಗಿ ಬೇರೆಯ ಅಡುಗೆ ಕೋಣೆಯನ್ನೇ ಗಾಂಧಿ ವ್ಯವಸ್ಥೆಗೊಳಿಸಿದರೆಂದೂ ಕಸ್ತೂರ್ ಬಾ ನೆನೆಯುತ್ತಾರೆ.

ಕಸ್ತೂರ್ ಬಾ ರವರು ನಾರಾಯಣ ದೇಸಾಯಿಯಿಂದ ರಾಮಾಯಣದ ಪಾಠ ಹೇಳಿಸಿಕೊಳ್ಳುವ ಭಾಗ ಸ್ವಾರಸ್ಯಕರವಾಗಿದೆ. ಹರಿಲಾಲನ ವಿವರಗಳು ಸಂತಾಪ ಉಂಟುಮಾಡುತ್ತವೆ. ಈ ಸಂದರ್ಭ ಗಾಂಧಿ ಹಾಗೂ ಕಸ್ತೂರ್ ಬಾ ರವರ ಆಂತರಿಕ ತುಮುಲಗಳನ್ನು ಕುರಿತು ಹೇಳುತ್ತಾ ’ಗಾಂಧಿ ಸರಳಜೀವಿ, ಕಸ್ತೂರ್ ಬಾ ಕರುಳಜೀವಿ’ ಎನ್ನುತ್ತಾರೆ ಲೇಖಕರು.
ಒಟ್ಟಾರೆ ಸರಳ ಸಂವಾದದ ದಾಟಿಯ ನಿರೂಪಣೆಯು ಆಪ್ತವಾಗಿ ಓದಿಸಿಕೊಂಡು ಹೋಗುತ್ತದೆ. ಎಲ್ಲಿಯೂ ಬೇಸರವಾಗುವುದಿಲ್ಲ. ಓದುಗರ ಅರಿವಿನಲ್ಲಿ ಇರಬಹುದಾದ ಕಸ್ತೂರ್ ಬಾ ಹಾಗೂ ಗಾಂಧಿಯರು ಈ ಕಾದಂಬರಿಯ ಓದಿನ ನಂತರದಲ್ಲಿ ಇನ್ನಷ್ಟು ವಿಸ್ತಾರವಾಗಿಯೂ, ಘನವಾಗಿಯೂ, ಸನಿಹವೆಂಬಂತೆಯೂ ಕಾಣತೊಡಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಸ್ತೂರ್ ಬಾ v/s ಗಾಂಧಿ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆಶಾ ರಘು