Article

ಹೂದೋಟದಲ್ಲಿ ಹೆಜ್ಜೆಗಳ ಸಪ್ಪಳ 

ಡಾ. ವಿಜಯ್ ನಾಗ್ ರಿಂದ ಕನ್ನಡಕ್ಕೆ ಭಾಷಾಂತರವಾದ ಜಪಾನಿನ ಕಾದಂಬರಿಕಾರ ಜುನ್ ಇಚಿರೋ ತಾನಿಜ಼ಾಕಿ ಅವರ "ಕಾಗಿ" ಯೇ ಈ "ಬೀಗದ ಕೈ" ಕಾದಂಬರಿ. ಎರಡು ದೇಶಗಳ ಜನರ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಬೆಸೆವ ಕೆಲಸ ಈ ಅನುವಾದ. ಕಲೋನಿಯಲ್ ಎಂಬ ಮಟ್ಟದಲ್ಲಿ ಎಂದೂ ಜಪಾನ್ ಭಾಷೆ ಭಾರತದ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪನೆ ಮಾಡಿಲ್ಲದಿರುವುದು ವಿಶೇಷವಾದ ಮತ್ತು ಬಹಳ ಮುಖ್ಯವಾದ ಅಂಶ. ಚಿತ್ರಲಿಪಿಗೂ ಭಾರತೀಯರ ಅಕ್ಷರ ಲಿಪಿಗೂ ಬಹಳ ವ್ಯತ್ಯಾಸದ ಜೊತೆಗೆ, ಸಂಸ್ಕೃತಿಯಲ್ಲಿನ ವಿಭಿನ್ನತೆ ಒಂದಷ್ಟು ಸಾಮ್ಯತೆಗಳಿದ್ದರೂ ದೊಡ್ಡ ಪ್ರಮಾಣದಲ್ಲಿ‌ ಹೇರಿಕೆ ಆಗಿಲ್ಲದಿರುವುದು, ನಮ್ಮ ಸಾಹಿತ್ಯ ವಲಯ ಆ ಕಲಾ ಪರಂಪರೆಯನ್ನು ಗಮನಿಸುವಂತೆ ಮಾಡಿದೆ.  

ಬೀಗದ ಕೈ ಯಲ್ಲಿ "ದಿನಚರಿ" ಬರೆವ ಕ್ರಮವನ್ನೇ ಕಾದಂಬರಿಯ ತಂತ್ರವಾಗಿ ಬಳಸಿಕೊಂಡು, ಕಾಮ ( LUST ) ವನ್ನೇ ಕೇಂದ್ರಿತವಾಗಿ ಇಟ್ಟುಕೊಂಡು, ಅದರಿಂದ ಉಂಟಾಗುವ ಪರಿಣಾಮಗಳ ವಿವೇಚನೆಗೆ ನಿಲ್ಲುವ ಕಾದಂಬರಿಯಾಗಿದೆ. ಕಾದಂಬರಿಕಾರ "ಹೊಸ ವರ್ಷದ ಮೊದಲ ದಿನ" ದಿಂದ ಆರಂಭ ಮಾಡಿ "ಜೂನ್ ೧೧" ಕ್ಕೆ ಕಾದಂಬರಿಯನ್ನು ಸಮಾಪ್ತಿ ಮಾಡಿದ್ದಾನೆ. ಆರಂಭ, ಮಧ್ಯ, ಸಂಘರ್ಷ ಮತ್ತು ಅಂತ್ಯಗಳೆಂಬ ಸಾಮಾನ್ಯ ಕಾದಂಬರೀ ಸಂವಿಧಾನದಲ್ಲಿಯೇ ಇದರ ಕಥೆ ಸಾಗುತ್ತದೆ. ಕೊನೆಯ ಎರಡು ಭಾಗಗಳಲ್ಲಿನ ದಿನಚರಿಯ ನಿರೂಪಣೆಯ ಮೇಲೆ ಪ್ರಜ್ಞಾಪ್ರವಾಹತಂತ್ರದ ಪ್ರಭಾವವಿರುವುದು ಢಾಳಾಗಿ ಕಾಣುತ್ತದೆ. ಕಾದಂಬರಿಕಾರ ಪಾತ್ರಗಳಲ್ಲಿ ಯಾವೊಂದು ಪಕ್ಷದಲ್ಲಿಯೂ ನಿಲ್ಲದೆ ತಟಸ್ತವಾಗಿದ್ದು ಓದುಗರಲ್ಲಿ ಕಾಮದಿಂದುಟಾಗುವ ಕಾರ್ಯಗಳ ಗುಣಾವಗುಣಗಳ ಚರ್ಚೆಗೆ ಹಾದಿಮಾಡಿಕೊಟ್ಟಿರುವುದು ಇದರ ವಿಶೇಷವಾಗಿದೆ. ಈ  ಕಾದಂಬರಿಯಲ್ಲಿ ಒಟ್ಟೂ ಎಂಟರಿಂದ ಹತ್ತು ಪಾತ್ರಗಳು ಬಂದರೂ, ಕಾದಂಬರಿಯಲ್ಲಿ ಮುಖ್ಯ ಎನಿಸುವುದು ಕೇವಲ ನಾಲಕ್ಕು ಪಾತ್ರಗಳು. ಉಳಿದ ಪಾತ್ರಗಳು ಈ ನಾಲ್ಕು ಪಾತ್ರಗಳ ನಡೆ, ನುಡಿ, ವರ್ತನೆಗಳಿಗೆ ಪೋಷಕವಾಗಿ ಕೆಲಸ ಮಾಡುತ್ತದೆಯೇ ಹೊರತು, ಕಾದಂಬರಿಯ ಕೇಂದ್ರಕ್ಕೆ ಬರುವುದಿಲ್ಲ. ಕಾದಂಬರಿಯಲ್ಲಿನ ಒಂದು ಗಂಡು ಮತ್ತು ಹೆಣ್ಣು ಪಾತ್ರಗಳು ತಮ್ಮ ದಿನಚರಿಯನ್ನು ಬರೆಯುವುದು ಇಲ್ಲಿನ ವಿಶೇಷ. ಇಡೀ ಕಾದಂಬರಿ ಅದೇ ಕ್ರಮದಲ್ಲಿ ನಡೆಯುತ್ತದೆ. ಇದು ಬಹಳ ದೊಡ್ಡ ಸವಾಲಿನ ಕೆಲಸ. ಒಂದಲ್ಲ ಒಂದು ರೀತಿಯಲ್ಲಿ ಉಳಿದ ಪಾತ್ರಗಳು ಕೆಲವೊಮ್ಮೆ ಮಧ್ಯ ಪ್ರವೇಶಿಸಿ ತನ್ನ ಶಕ್ತಿ ಪ್ರದರ್ಶಿಸಿಬಿಡುವಂತಹಾ ಅಪಾಯಗಳು ಇದ್ದರೂ, ಕಾದಂಬರಿಕಾರ ಅದನ್ನು ತಡೆದಿರುವುದನ್ನು ಕಾದಂಬರಿ ಓದಿನಿಂದ ಬೆರಗಾಗಿಸಿಬಿಡುತ್ತದೆ. ಪಾತ್ರಗಳ ಮೂಲಕ ಘಟಿಸಿದ ಎಲ್ಲವನ್ನೂ ನಿರೂಪಣೆ ಮಾಡಿಸುವ ಕ್ರಮವು ಓದಿಸಿಕೊಂಡು ಹೋಗುವಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಬೀಗದ ಕೈ ಎಂಬ ಹೆಸರೇ ಬಹಳ ವಿಶೇವಾದ ಸಂಕೇತದಿಂದ ಕೂಡಿದ್ದು, ಮನುಷ್ಯನ, ಸಮಾಜದ, ಸಂಬಂಧಗಳ ಶೋಧಕ್ಕೆ ಈ ವಸ್ತು, ನಿರೂಪಣೆ, ತಂತ್ರ, ಸಂವಿಧಾನಗಳ ಮೂಲಕ ಕಾದಂಬರಿಯು ಕೀಲಿಕೈ ಆಗಿ ನಿಲ್ಲಲಿ ಎಂಬ ಆಶಯ ಕಾದಂಬರಿಕಾರರದು ಇರಬಹುದು.

ಕಾಮಕ್ಕೂ ಲೈಂಗಿಕತೆಗೂ ಬಹಳ ವ್ಯತ್ಯಾಸಗಳುವೆ. ಲೈಂಗಿಕತೆ ಎರಡು ವಿರುದ್ಧ ಲಿಂಗಗಳಲ್ಲಿರುವ ಮೂಲ ಬಯಕೆಗಳು ಮತ್ತವುಗಳ ವರ್ತನೆಯ ಕಡೆಗೆ ಗಮನ ಸೆಳೆದರೆ, ಕಾಮ ಲಿಂಗಾತೀತವಾದ ಮನುಷ್ಯನ ಆಳ ಮನಸ್ಸಿನ ಮೂಲಭೂತ ಗುಣ. ಕಾಮದ ಅಭಿವ್ಯಕ್ತಿಗೆ ದೇಹದ ಅಗತ್ಯವಂತೂ ಇದ್ದೇ ಇದೆ. ಲೈಂಗಿಕತೆಗೆ ದೇಹವೇ ಮಾಧ್ಯಮ. ಮನುಷ್ಯನಲ್ಲಿರುವ ಈ ಎರಡು ಅಂಶಗಳಲ್ಲಿ ಯಾವುದು ಹೆಚ್ಚಾದರೂ ಅದರ ಅಪಾಯ ಉಳಿದವರ ಮೇಲೂ ಆಗುತ್ತದೆ. ಹಾಗೆ ಅಪಾಯಕ್ಕೆ ಸಿಕ್ಕಿಕೊಂಡವರು ಮಗಳು ಮತ್ತು ಭಾವೀ ಅಳಿಯ. ಕಾಮದ ವಿಲಾಸಗಳಿಗೆ ಸಿಕ್ಕು ನರಳಿದವರು ಉಳಿದೆರಡು ಪಾತ್ರಗಳು. ಕಾದಂಬರಿಯ ಕೇಂದ್ರದಲ್ಲಿ ಎರಡು ಘಟನೆಗಳು ಸೆಳೆದುಬಿಡುತ್ತವೆ. ಒಂದು, ಕಾದಂಬರಿಯಲ್ಲಿ ಪ್ರೊಫೆಸರ್ ನ ವರ್ತನೆಗಳು, ಅದಕ್ಕೆ ಅಷ್ಟೇ ಪ್ರಮಾಣದಲ್ಲಿ ಸಮಾನವಾಗಿ ಸಡ್ಡು ಹೊಡೆದು ನಿಲ್ಲುವ ಅವನ ಹೆಂಡತಿ ಇಕೊಕೋ. ಮತ್ತೊಂದು ಮಗಳಾದ ತೋಷಿಕೋ ಮತ್ತು ಕಿಮೂರಾ ಇವರಿಬ್ಬರ ವರ್ತನೆ. ಈ ನಾಲಕ್ಕು ಪಾತ್ರಗಳು ಮಣಿಗಳಾದರೆ ಇದನ್ನು ಪೋಣಿಸಿರುವವ ದಾರವೇ ಕಾಮ. 

ಕಾದಂಬರಿಯ ಪೂರ್ಣ ಲೈಂಗಿಕ ಚಿತ್ರಗಳು, ಲೈಂಗಿಕ ಕ್ರಿಯೆಗಳು, ಅದಕ್ಕೆ ಕಾರಣವಾದ ಕಾಮ ಪ್ರವೃತ್ತಿಯು ಬಹಳ ನಿರ್ಭಿಡೆಯಿಂದ ಪುಟ ಪುಟಗಳಲ್ಲೂ ಚಿತ್ರವಿಚಿತ್ರವಾಗಿ ಅಭಿವ್ಯಕ್ತಿಗೊಂಡಿವೆ. ಈ ವಿಸ್ತಾರವಾದ ಲೈಂಗಿಕ ಕ್ರಿಯೆ ಮತ್ತು ಅದಕ್ಕೆ ಮೂಲವಾದ ಕಾಮವು ಮಾಡುವ ಕಾರ್ಯದ ಅಭಿವ್ಯಕ್ತಿ ಮತ್ತದಕ್ಕೆ ಮಾಡಿಕೊಂಡಿರುವ ದಿನಚರಿಯ ತಂತ್ರಗಳ ಮೂಲಕ ಕಾದಂಬರಿಕಾರ ಹೇಳಲು ಹೊರಟಿರುವ ಆಶಯವಾದರೂ ಏನು ? ಈ ಪ್ರಶ್ನೆ ಬಹಳ ಮುಖ್ಯವಾಗಿ ಕಾಡುವಂತಹದ್ದು. ಇದಕ್ಕೆ ಎರಡು ದಿಕ್ಕಿನಿಂದ ಉತ್ತರಗಳನ್ನು ಕೊಡುವ ಸಾಧ್ಯತೆಯಿದೆ. ಒಂದು, ಮನುಷ್ಯನ ಮೂಲ ಪ್ರವೃತ್ತಿಯೇ ಕಾಮ. ಅದನ್ನು ತೀರಿಸಿಕೊಳ್ಳುವ ಅವಕಾಶ ಮನುಷ್ಯನಿಗೆ ಸಿಕ್ಕರೆ ನೈತ್ತಿಕ ಅಧಃಪತನದ ಜೊತೆಗೆ ಕೌಟುಂಬಿಕ, ಸಾಮಾಜಿಕ ಸಂಬಂಧಗಳಲ್ಲೂ ಏರ್ಪಡುವ ಪತನದ ಎತ್ತರವನ್ನು ಕಾದಂಬರಿಕಾರ ಪಾತ್ರಗಳ ಮೂಲಕ‌ ಪರಿಚಯ ಮಾಡುತ್ತಿದ್ದಾನೆ. ಮತ್ತೊಂದು ಎರಡನೆಯ ಮಹಾಯುದ್ಧದ ಅನಂತರದ ಕಾದಂಬರಿಯಾದ ಕಾರಣ ಇದರಲ್ಲಿನ ಪಾತ್ರಗಳ ಮನಸ್ಥಿತಿಗಳು ಹೀಗೆ ಬಂದಿವೆ ಎನ್ನಬಹುದು. ಕಾದಂಬರಿಯಲ್ಲಿ ಒಮ್ಮೆ ಷೇಕ್ಸ್ಪಿಯರನ ನಾಟಕದ ಹೆಣ್ಣು ಪಾತ್ರವೊಂದರ ಪ್ರಸ್ತಾಪ ಬರುವುದರಿಂದ ಅವನನ್ನೂ ಒಳಗೊಂಡು ಕಮು, ಕಾಫ್ಕರು ತೆರೆದು ತೋರಿದ ಕಾಮ, ಈರ್ಷ್ಯೆಗಳ ಅಪಾಯದ ಹಾದಿಯನ್ನು ಈ ಕಾದಂಬರಿಯು ತನ್ನ ನೆಲದಲ್ಲಿ ಪರಿಚಯಿಸುತ್ತಿದೆ ಎನಿಸಿದೆ. 

ಭಾರತೀಯ ಕಾವ್ಯ ಮತ್ತು ಶಾಸ್ತ್ರ ಪರಂಪರೆಯಲ್ಲಿ ವಾತ್ಸ್ಯಾಯನನ ಕಾಮಸೂತ್ರದಿಂದ ಮೊದಲ್ಗೊಂಡು ಎಲ್ಲ ಕಾವ್ಯ ಕಲೆಗಳಲ್ಲೂ ಈ ಕಾಮದ ವಿಷಯ ಬಂದೇ ಇದೆ. ಜನಪದರಂತೂ ಪ್ರಸ್ತುತ ಕಾದಂಬರಿ ವಿವರಿಸುವುದಕ್ಕಿಂತ ನಾಲಕ್ಕು ಪಟ್ಟು ಹೆಚ್ಚಾಗಿ ಲೈಂಗಿಕತೆ, ಕಾಮವನ್ನು ಕುರಿತು ಮಾತನಾಡಿದ್ದಾರೆ. ಭಾರತೀಯರಿಗೆ, ಕನ್ನಡಿಗರಿಗೆ ಇದು ಹೊಸ ವಿಷಯವೇ ಅಲ್ಲ. ಆದರೆ ಇದರಲ್ಲಿನ ಪಾತ್ರಗಳು, ಅವುಗಳನ್ನು ಹೆಣೆದಿರುವ ತಂತ್ರವಷ್ಟೇ ಈ ಕಾದಂಬರಿ ನಮ್ಮ ನೆಲಕ್ಕೆ ಹೊಸದಾಗಿದೆ. ಕನ್ನಡದ ಆದಿಮಹಾಕವಿ ಪಂಪನಂತೂ ಬಹಳ ವಿಸ್ತಾರವಾದ ಅರ್ಥದಲ್ಲಿ ಆದಿಪುರಾಣದಲ್ಲಿ "ಧರ್ಮಂ ಪ್ರಧಾನಂ, ಅರ್ಥಂ ಧರ್ಮಾಂಘ್ರಿಪ ಫಣಂ, ಅದರ್ಕೆ ರಸಮದು ಕಾಮಂ" ಎಂದು ಮನುಷ್ಯನ ಬದುಕಿನ ಮಾರ್ಗ ಮತ್ತು ಕ್ರಮವನ್ನು ಬಹಳ ಜಾಗರೂಕವಾಗಿ ಎಚ್ಚರಿಕೆಯನ್ನು ಘೋಷಿಸಿಯೇ ಬಿಟ್ಟಿದ್ದಾನೆ. ಪಂಪನಲ್ಲಿ ಧರ್ಮ ಎನ್ನವುದೂ ಕೇವಲ ಜೈನಮತಧರ್ಮವಲ್ಲ,‌ ಪ್ರಕೃತಿಧರ್ಮವದು. ಮನುಷ್ಯಪ್ರಕೃತಿಧರ್ಮವದು, ಅದನ್ನು ಬಳಸಿಕೊಂಡು ಉಳಿದ ಎರಡರ ಗಳಿಕೆ, ಪೋಷಣೆ ಮತ್ತು ನಿಯಂತ್ರಣದಿಂದ‌ ಮನುಷ್ಯ ಏರಬಹುದಾದ ಎತ್ತರವನ್ನು ತನ್ನ ಕಾವ್ಯಗಳ ಪಾತ್ರಗಳ ಮೂಲಕ ಕಂಡು, ಕಾಣಿಸಿದ್ದಾನೆ. ಅನಂತರದಲ್ಲಿ ಬಂದ ಜನ್ನ ಮತ್ತು ನಾಗಚಂದ್ರರಲ್ಲಿ ಬರುವುದಕ್ಕೆ ಬೇರೆಯದೇ ಆದ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕಾರಣಗಳು ಇವೆ. ಯಶೋಧರಚರಿತೆ ಮತ್ತು ರಾಮಚಂದ್ರಚರಿತಪುರಾಣಗಳ ಹಿಂದೆ ಕೆಲಸ ಮಾಡಿರುವ ಪ್ರಜ್ಞೆ ವಿಚಿತ್ರ ಮತ್ತು ವಿಶಿಷ್ಟವಾದದ್ದೆನ್ನುವುದನ್ನಂತೂ ಇಲ್ಲಿ ಮರೆಯುವಂತಿಲ್ಲ. ಈ ಕಾವ್ಯಗಳು ತೆರೆದು ತೋರುವ ಕಾಮದ ಕಾರ್ಯ ಕಾರಣಗಳ ಶೋಧದ ಜೊತೆಗೆ ಒಂದಷ್ಟು ತನ್ನ ಕಾಲದ ವಿನಯಗಳನ್ನು ಪ್ರಶ್ನಿಸುತ್ತವೆ. ಜೊತೆಗೆ ಪಾಪ ಪುಣ್ಯಗಳೆಂಬ ಕಲ್ಪನೆಯ ಅಡಿಯಲ್ಲಿ ಮನುಷ್ಯನ ಬದುಕಿನ ಕ್ರಮದ ನಿರ್ವಚನಕ್ಕೆ ಕಲಾತ್ಮಕವಾಗಿ ನಿಂತಿವೆ. 

ಪ್ರಸ್ತುತ ಕಾದಂಬರಿಯಲ್ಲಿನ ಸ್ತ್ರೀಪಾತ್ರ ಹಲವಾರು ಬಾರಿ ಆ ಸಮಾಜ ಒಪ್ಪಿತ ವಿನಯದ ಪಾತಿವ್ರತ್ಯ ಬಗೆಗೆ ಮಾತನಾಡಿದರೂ, ಕೊನೆಗೆ ತನ್ನಿಷ್ಟದಂತೆಯೇ ಅವುಗಳನ್ನು ಮೀರಿ ನಿಲ್ಲುತ್ತದೆ. ಆದರೆ ಸಾಮಾಜಿಕವಾಗಿ ಅದನ್ನು ವಿರೋಧಿಸದೆ ಒಂದು ಕೌಟುಂಬಿಕ ಒಳ ಒಪ್ಪಂದದ ಮೂಲಕ ಯಶಸ್ವಿಯಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಕಾದಂಬರಿಯ ಕೊನೆಯ ಭಾಗದ ಸಾಲುಗಳನ್ನು ಗಮನಿಸಿ "ಕಿಮುರಾ ಹೇಳಿದಂತೆ, ನನ್ನ ಪತಿಯ ಮೃತ್ಯುವಿನ ಸಂತಾಪದ ಸಮಯಯಾವಾಗ ಕಳೆದುಹೋಗುವುದೋ ಆಗ ಕೋಷಿಕೋ ಜೊತೆ ಅವನು ವಿವಾಹವಾಗುವನು. ಬಹುಶಃ ಜನರು ಬೇರೆ ರೀತಿ ಯೋಚಿಸದಿರಲೆಂದು ತೋಷಿಕೋ ಹಾಗೆ ಮಾಡುತ್ತಿರಬಹುದು. ಅನಂತರ ನಾವು ಮೂವರೂ ಒಟ್ಟಿಗೆ ಇಲ್ಲಿ ಇರಬಹುದು. ಇದನ್ನೇ ನನಗೆ ಕಿಮುರಾ ಹೇಳಿದ್ದಾನೆ ...!" ( ಪುಟ ೧೧೬ ) ಈ ಮಾತುಗಳ ಮೂಲಕ ಪಾತ್ರಕ್ಕೆ ಜಯ ಸಿಕ್ಕರೂ, ಸಾಮಾಜಿಕ ವಿನಯವನ್ನು ಪ್ರಶ್ನಿಸದ ಮಟ್ಟದಲ್ಲಿ ಕಾದಂಬರಿಕಾರನಿದ್ದಾನೆ ಎನ್ನುವುದು ತಿಳಿಯುತ್ತದೆ. ಹಾಗೆಯೇ ಸ್ತ್ರೀಯ ನಡೆಯ ಮೇಲೆ ಪುರುಷಪ್ರಧಾನತೆ ಕೆಲಸ ಮಾಡಿದೆ ಎನ್ನುವುದು ಮೊದಲ ಓದಿನಲ್ಲಿಯೇ ತಿಳಿದುಬಿಡುತ್ತದೆ. ಕೇವಲ ಆಂತರಿಕ ಸಂಬಂಧಗಳಲ್ಲಿ ಕರ್ಷಣ ಏರ್ಪಟ್ಟರಷ್ಟೇ ಸಾಲದು, ಬಾಹ್ಯವಾಗಿಯೂ ಈ ಕರ್ಷಣವು ಏರ್ಪಟ್ಟರೆ ಸಂಘರ್ಷದ ಮೂಲಕ ಮತ್ತೊಂದು ಅರ್ಥದ ಕೀಲಿ ಕೈ ಓದುಗನಿಗೆ ದೊರೆಯುತ್ತಿತ್ತು ಎನಿಸಿದೆ. ಈ ವಿಷಯದಲ್ಲಿ ಕನ್ನಡದ ಅಭಿಜಾತ ಕಾವ್ಯಗಳು ಒಂದಲ್ಲ ಹತ್ತು ಹೆಜ್ಜೆ ಮುಂದೆಯೇ ಇವೆ. ಅರಿಕೇಸರಿಯನ್ನು ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ನಡೆಸುವುದು ಆ ಕಾಲದ ರಾಜಕೀಯ, ಸಾಮಾಜಿಕ ವಿನಯವನ್ನು ಮುರಿದರೆ, ಯಶೋಧರ ಚರಿತೆಯಲ್ಲಿನ ಅಮೃತಮತಿಯು "ತೊಟ್ಟನೆ ಮನಮಂ ಪಸಾಯದಾನಂಗೊಟ್ಟ" ನಿರ್ಧಾರ ಏಕಕಾಲದಲ್ಲಿ ಆ ಕಾಲದ ಕೌಟುಂಬಿಕ, ಸಾಮಾಜಿಕ ವಿನಯಗಳನ್ನು ಮೀರಿಬಿಡುತ್ತವೆ. ಆದರೆ ಈ ಮೀರುವಿಕೆಗಳು ಕ್ಷಣಿಕವೇ ಆದರೂ ಹಾಗೆ ಯೋಚಿಸುವಲ್ಲಿ, ಕಾವ್ಯದ ಮೂಲಕ ಸಾಧಿಸುವುದರಲ್ಲಿನ ಕನ್ನಡದ ಕವಿಗಳ ಗಟ್ಟಿತನ, ಅವರು ಇಟ್ಟಿರುವ ದಿಟ್ಟ ಹೆಜ್ಜೆಯ ಗುರುತುಗಳನ್ನಂತೂ ಅಳಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಲಾಗದು, ಮರೆಯಲೂಬಾರದು. 

ಉತ್ತಮ ಕಾದಂಬರಿಯನ್ನು ಕನ್ನಡಕ್ಕೆ ತಂದು ಕೊಟ್ಟ ಡಾ. ವಿಜಯನಾಗರಿಗೆ ಧನ್ಯವಾದಗಳು. ಕಾದಂಬರಿಯಲ್ಲಿನ ಮೂಲ ಎಳೆಯನ್ನು ಹಿಡಿದು ನಮ್ಮ ನೆಲದಲ್ಲಿನ ಸೃಜನಶೀಲ ಪ್ರತಿಭೆಯ ಕಾರ್ಯವನ್ನು ಒಂದಷ್ಟು ಆಲೋಚಿಸುವಂತೆ ಮಾಡಲು ಕಾದಂಬರಿಯ ಮೂಲಕ ಹಾದಿ ಮಾಡಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಸದ್ಯದಲ್ಲಿ ಈ ಕಾದಂಬರಿ ಕನ್ನಡಕ್ಕೆ ಬಂದಿರುವ ಸಮಯ ಮತ್ತು ನಮ್ಮ ಸಮಾಜಗಳ ಅಡಿಯಲ್ಲಿ ಕಾದಂಬರಿಯನ್ನು ಕೇಂದ್ರವಾಗಿಟ್ಟುಕೊಂಡು ಮನುಷ್ಯನ ಆಳ ಮನಸ್ಸಿನ ಮೂಲಭಾವದ ಶೋಧ, ಅದರ ಅಭಿವ್ಯಕ್ತಿಯಾದ ವರ್ತನೆ,‌ಕಲೆಗಳ ಅಧ್ಯಯನ ನಡೆಯಲಿ ಎಂದು ಹಾರೈಸುವೆ. ಇತ್ತೀಚೆಗೆ ನಾನು ಬಹಳ ಕುತೂಹಲ, ಬೆರಗಿನಿಂದ ಓದುವಂತೆ ತಮ್ಮ ಬರಹಗಳ ಮೂಲಕ ಮಾಡಿರುವವರು ವಿಜಯರು ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ. ಅವರು ಭಾಷಾಂತರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿರುವ ಕಲಾಕೃತಿಗಳ ವಸ್ತುವಿಶಿಷ್ಟತೆಗಳೇ ಅವರ ತಾತ್ತ್ವಿಕತೆಯನ್ನು ತಿಳಿಸುತ್ತಿದೆ, ಜೊತೆಗೆ ಅವರನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಒಂದೊಳ್ಳೆಯ ಕಾದಂಬರಿ ಓದಿಸಿದ್ದಕ್ಕೆ ಧನ್ಯವಾದಗಳು, ಶುಭವಾಗಲಿ. 

ಬೀಗದ ಕೈ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆರ್. ದಿಲೀಪ್ ಕುಮಾರ್