Article

ಬುಡಕಟ್ಟು ಬದುಕಿನ ಅನಾವರಣ ‘ಕಾಡ ಕಸ್ತೂರಿ’

ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್ಲಿ ಹೇಳಬೇಕೆಂದರೆ ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಯಿಸಿಕೊಳ್ಳಲು ಯೋಗ್ಯತೆ ಹೊಂದಿರುವವರು. ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ ಸುತ್ತ ಮುತ್ತ ಇವೆ. ಇವರ ಸಂಪ್ರದಾಯ, ಹಿನ್ನೆಲೆ, ಆಚರಣೆ ಎಲ್ಲವೂ ವಿಭಿನ್ನ, ವಿಶಿಷ್ಟ ಹಾಗೂ ಸ್ವಾರಸ್ಯಕರ. ಇವರ ಸ್ಥಿತಿ - ಗತಿ ಹಾಗೂ ಜೀವನಶೈಲಿಯ ಬಹು ಆಯಾಮಗಳ ಅಕ್ಷರ ರೂಪ ‘ಕಾಡ ಕಸ್ತೂರಿ’ ಕೃತಿ.

ಕುಣಬಿಗಳು ನಮ್ಮವರೇ. ಪರಂಪರಾನುಗತವಾಗಿ ನಮ್ಮ ಸಂಸ್ಕೃತಿಯ ರಕ್ಷಕರು. ನಿಜವಾಗಿಯೂ ಈ ನೆಲದ ಮಕ್ಕಳು ಎಂದರೆ ಇವರು. ಆದರೆ ನಮ್ಮ ಮಧ್ಯೆ ಇದ್ದೂ ಅವರು ನಮ್ಮಿಂದ ದೂರ. ನಮ್ಮ ಸಂಸ್ಕೃತಿಯ ರಕ್ಷಕರಾಗಿದ್ದರೂ ಬಹುಪಾಲು ಜನರಿಗೆ ಅಪರಿಚಿತರು. ಮಣ್ಣಿನ ಮಕ್ಕಳಾಗಿದ್ದರೂ ನೆಲದ ಒಡೆಯರಾಗದ ಅತಂತ್ರರು. ಇವರೇ ಕುಣಬಿ ಎಂಬ ಬುಡಕಟ್ಟು ಸಮುದಾಯದವರು. ನಮ್ಮ ದೇಶದ ಮುಖ್ಯವಾಹಿನಿಯ ಜನರಿಗೆ ಇವರು ಬಹುತೇಕ ಅಪರಿಚಿತರಾಗಿರುವುದರಿಂದ ಜೀವನದಾದ್ಯಂತ ಇವರು ವನವಾಸಿಗಳ ಜತೆಗೆ ಅಜ್ಞಾತವಾಸಿಗಳೆಂದರೂ ತಪ್ಪಿಲ್ಲ. ಭಾರತೀಯ ಸಂಸ್ಕೃತಿಯ ತೊಟ್ಟಿಲು ತೂಗುವವರು ಎಂಬುದನ್ನು ಕೃತಿಯಲ್ಲಿ ಲೇಖಕ ತುಂಬಾ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಒಂದು ಪರಿಸರದಲ್ಲಿ ಒಬ್ಬ ವ್ಯಕ್ತಿ ಸುಮ್ಮನೆ ಇದ್ದುಬಿಡುವುದು ಬೇರೆ. ತಾನಿರುವ ಪರಿಸರದ ಕುರಿತು ಜ್ಞಾನ ಸಂಪಾದಿಸಿ ಅದರ ಆಳ ಅಗಲಗಳನ್ನು ತಿಳಿದು ಬದುಕುವುದು ಬೇರೆ. ಪ್ರಸನ್ನ ಬರೆದಿರುವ ಈ ಪುಸ್ತಕದ ಪುಟಗಳನ್ನು ತಿರುವುತ್ತಾ ಹೋದರೆ ನಿಮಗೆ ಜೋಯಿಡಾ ತಾಲೂಕಿನ ಇಡೀ ಪರಿಸರದ ಚಿತ್ರಣ ತಿಳಿಯುತ್ತದೆ. ಅಲ್ಲಿನ ಗದ್ದೆಗಳು, ತೋಟದ ಹಸಿರು, ಜನರ ಹಸಿವು, ಶಾಲೆ, ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆಗಳು ಹೀಗೆ ನಾನಾ ವಿಷಯಗಳ ಕುರಿತು ಅರಿವು ಮೂಡುತ್ತದೆ. ಕಾಡ ಕಸ್ತೂರಿ ಪುಸ್ತಕವನ್ನು ಕೈಯಲ್ಲಿ ಹಿಡಿದರೆ ಕಾಡಿನ ಒಂದೊಂದೇ ಕೌತುಕಗಳು ಕಣ್ಣ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ. 

ಸಂವಿಧಾನಬದ್ಧ ಬುಡಕಟ್ಟು ಮಾನ್ಯತೆ ಸಿಗದೆ ಇಂದಿಗೂ ಕಾಡುವಾಸಿಗಳಾಗಿ, ಮೂಲಸೌಕರ್ಯ ವಂಚಿತರಾದ ಕುಣಬಿ ಸಮುದಾಯ ದೇಶದ ವಿವಿಧೆಡೆ ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿದ್ದು, ಅವರನ್ನು ಒಗ್ಗೂಡಿಸಲು ಅವರ ಸಂಸ್ಕೃತಿ ಎತ್ತರಿಸಲು ಹಾಗೂ ಏಳ್ಗೆಗಾಗಿ ಈ ಸ್ಪಂದನಶೀಲ ಜನಾಂಗದ ಅಭಿವೃದ್ಧಿಗೆ ದುಡಿಯುಲು ತಾವು ದೇಶಪ್ರೇಮಿ ಭಾರತವಾಸಿಗಳಾಗಿ ಆದಿವಾಸಿಗಳ ಹಕ್ಕು ಸ್ಥಾಪಿಸಲು ಮುಂದಾಗುತ್ತಿದ್ದಾರೆ. ಆದರೆ ಇದು ಅರಣ್ಯರೋದನವಾಗಿದೆ. ಈ ಸಮಾಜದಲ್ಲಿ ಹಿಂದುಳಿದವರನ್ನು ಅವಕಾಶ ವಂಚಿತರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವಾಗಿ ಪರಿಗಣಿಸಲು ಅಂಥವರ ಅಭಿವೃದ್ಧಿಗೆ ಕೆಲವು ನಿಶ್ಚಿತ ಅವಕಾಶಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದರು. ಆದರೆ ದೇಶದ ವಿವಿಧೆಡೆ ಹಬ್ಬಿಕೊಂಡಿರುವ ಈ ಕುಣಬಿ ಸಮುದಾಯದಂತೆ ಬಹಳಷ್ಟು ಸಮುದಾಯಗಳು ಮಾನವಶಾಸ್ತ್ರೀಯ ಅಧ್ಯಯನದ ಪ್ರಕಾರ ಈಗಲೂ ತಮ್ಮನ್ನು ಬುಡಕಟ್ಟೆಂದು ಪರಿಗಣಿಸಲು ಸಂವಿಧಾನ ಬದ್ಧ ಸೌಲಭ್ಯಗಳು ಸಿಗಬೇಕೆಂದು ಒತ್ತಾಯಿಸುತ್ತಿದ್ದರೂ ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂಥ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಿಲ್ಲವೆಂಬ ನೋವಿನ ನುಡಿಯೂ ಪುಸ್ತಕದಲ್ಲಿದೆ.

ಕುಣಬಿ ಜನರನ್ನು ಗುರ್ತಿಸುವುದು ಈ ಸಮಾಜದ ಮತ್ತು ಸರ್ಕಾರದ ಕರ್ತವ್ಯವಾಗಿದೆ. ಆದರೆ ಕರ್ತವ್ಯ ಇಲ್ಲಿ ಲೋಪವಾಗಿದೆ. ಅವರು ದೈನಂದಿನ ಜೀವನದಲ್ಲಿ ಹೇಗೆ ಬದುಕುತ್ತಿದ್ದಾರೆ ಮತ್ತು ಯಾವೆಲ್ಲ ಯೋಜನೆಗಳ ಮೂಲಕ ಅವರನ್ನು ಬೆಂಬಲಿಸಬಹುದು ಎಂಬುದರ ಕಾಳಜಿ ಯಾರಿಗೂ ಇಲ್ಲ. ಸರಕಾರ ಕುಣಬಿಗರ ಬೇಡಿಕೆ ಬಗ್ಗೆ ಅಷ್ಟೊಂದು ಗಂಭೀರವಾಗಿಲ್ಲ. ಅರಣ್ಯ ಉಪ ಉತ್ಪನ್ನಗಳ ಬಳಕೆಗೆ ತಡೆ ಒಡ್ಡುವ ಮೂಲಕ ಅವರ ಉಪ ಜೀವನಕ್ಕೆ ಮಾರಕವಾದ ಸರ್ಕಾರದ ನಿಲುವು ಅವರ ಬದುಕಿಗೆ ಬಲು ದೊಡ್ಡ ಪೆಟ್ಟು ನೀಡಿದ್ದರ ಬಗ್ಗೆ ಕೃತಿಕಾರ ಮಾರ್ಮಿಕವಾಗಿ ಬರೆದಿದ್ದಾರೆ. 
ಕಾಡಿನ ನಡುವೆ ಇರುವ ಊರು ಡೇರಿಯಾ ಎಂಬ ಪುಟ್ಟ ಗ್ರಾಮ. ಅದರ ಚೆಲುವನ್ನು ಇಡೀ ಪುಸ್ತಕದಲ್ಲಿ ವರ್ಣಿಸಲಾಗಿದೆ. ಪುಸ್ತಕದ ಮಧ್ಯೆ ಡೇರಿಯಾವನ್ನು ಹೆಣ್ಣೊಬ್ಬಳ ಸೌಂದರ್ಯಕ್ಕೆ ಹೋಲಿಸಿ ಪದಗಳಿಗೆ ಸೀಮಿತಗೊಳಿಸಲಾಗದ ಚೆಲುವು ಅವಳದು ಎಂದಿರುವುದು ಲೇಖಕ ಆ ಜಾಗದ ಸೌಂದರ್ಯಕ್ಕೆ ಎಷ್ಟರ ಮಟ್ಟಿಗೆ ಮನಸೋತಿದ್ದಾನೆ ಎಂಬುದನ್ನು ತೋರಿಸುತ್ತದೆ.

ಕಾಡ ಕಸ್ತೂರಿ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಹಾಂತೇಶ ಬಿರಾದಾರ