About the Author

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ.

ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ. 

1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1997 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದು, ಎಂ.ಕಾಂ ಮತ್ತು ಬಿ.ಬಿ.ಎಂ ವಿಭಾಗದಲ್ಲಿ ಉಪನ್ಯಾಸಕರಾಗಿ 13 ವರ್ಷಗಳ ಸೇವೆ ಸಲ್ಲಿಸಿದ್ದಾರೆ. 

2006ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಸೇವೆಗೆ ಸೇರ್ಪಡೆಯಾಗಿದ್ದು, 2008ರಲ್ಲಿ ಕೊಳ್ಳೇಗಾಲದಲ್ಲಿ ಡಿ.ಎಸ್.ಪಿಯಾಗಿ ಹಾಗೂ 2008 ಸೆಪ್ಟಂಬರ್ ನಿಂದ ಇಲಾಖಾ ವಿಚಾರಣೆಯ ಡಿವೈಎಸ್ ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2012ರ ಆಗಸ್ಟ್ ನಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಬಡ್ತಿ ಹೊಂದಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನಲ್ಲಿ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದು, 2012 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಿ, ಆ ನಂತರದಲ್ಲಿ ಮೈಸೂರಿನ ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕೆಜಿಎಫ್ ನಲ್ಲಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಧರಣೀದೇವಿ ಮಾಲಗತ್ತಿ ಅವರು ಪ್ರಜಾವಾಣಿ, ಉದಯವಾಣಿ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಹಾಗೇ ಸಾಹಿತ್ಯ ಸಂಗಾತಿ (ತ್ರೈಮಾಸಿಕ) ಪತ್ರಿಕೆಯ ಸಂಪಾದಕಿಯಾಗಿಯೂ 1992ರಿಂದ 1994ರ ವರೆಗೆ ಕಾರ್ಯ ನಿರ್ವಸಿದ್ದಾರೆ. 

ಬ್ರೆಡ್ ಜಾಮ್, ತುಳುನಾಡ ಸಿರಿ, ಸ್ತ್ರೀವಾದ ಮತ್ತು ಭಾರತೀಯತೆ, ಅನೀಲ ಆರಾಧನಾ, ಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ, ಈವುರಿನ ದಿವ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ, ದಟ್ಟ ಧರಣಿ, ಮಾ ನಿಷಾದ, ಇಳೆಯ ಕಣ್ಣು, ದಹರಾಕಾಶ, ಮಹಿಳೆ ಮತ್ತು ಅಸಾಂಪ್ರದಾಯಿಕತೆ, ಇಳಾಭಾರತಂ-ಮಹಾಕಾವ್ಯ, ಆಯರೆ ಕೊನೆಯ ಮಾವು, ಧರಣಿ ಚುಟುಕು ಕವಿತೆಗಳು, ಭಾಗವತ ಭಾವಗೀತ, ಡುಂಡುವ ವಿಲಾಪ, ಚಿಂತನ ನಿರ್ವಚನ, ಜ್ಞಾನದಾತೆ ಸಾವಿತ್ರಿಬಾಯಿ ಫುಲೆ, ಕಪಿಲ ಗೀತ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. 

ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಗೋರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಮಾಣಿಕ ಬಾಯಿ ಪಾಟೀಲ ಪ್ರಶಸ್ತಿ, ನೀಲಗಂಗಾ ದತ್ತಿ ಬಹುಮಾನ, ಗೀತಾ ದೇಸಾಯಿ ದತ್ತಿ ಬಹುಮಾನ, ಎಚ್. ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇಜಗೌ ಪ್ರಶಸ್ತಿ, ಹಲಸಂಗಿ ಗೆಳಯರು ಪ್ರತಿಷ್ಟಾನದ ಕಾವ್ಯ ಪ್ರಶಸ್ತಿ, ಕದಳಿಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

ಡಾ. ಧರಣೀದೇವಿ ಮಾಲಗತ್ತಿ

(12 May 1967)