ಕವಿ ಎಸ್ ಶಿಶಿರಂಜನ್ (ಶಿಶಿರ) ಅವರ ನೂರು ಹನಿಗವಿತೆಗಳ ಗುಚ್ಚ. ಈ ಹನಿಗವಿತೆಗಳ ಬಗ್ಗೆ ಹಿರಿಯ ಚುಟುಕು ಕವಿ ಸಿ.ಪಿ.ಕೆ. ಅವರು ಹೀಗೆ ಬರೆದಿದ್ದಾರೆ- ’ಶಿಶಿರ ಅವರ ಹನಿಗವನಗಳು ಇಂದು ಬರುತ್ತಿರುವ ಈ ವರ್ಗದ ಬಹುಪಾಲು ಕವನಗಳ ಇದ್ದಲು ರಾಶಿಯಲ್ಲಿ ವಜ್ರದ ಹರಳು ಗಳಾಗಿವೆ, ವಿರಳ ವಿರಚನೆಗಳಾಗಿವೆ. ಸ್ಥೂಲತೆ ಬೇರೆ; ಮಹತ್ತು ಬೇರೆ. ಬದುಕಿನಲ್ಲಾಗಲಿ ಕವಿತೆಯಲ್ಲಾಗಲಿ ಸ್ಥೂಲತೆ ಸ್ವಸ್ಥತೆಯ ಲಕ್ಷಣವಲ್ಲ. ಶಿಶಿರ ಅವರ ಹನಿಗಳು ಧ್ವನಿ ಪ್ರಚುರವಾಗಿವೆ; ತನ್ಮೂಲಕ, ರೂಕ್ಷತೆಯಿಂದ ಪಾರಾಗಿ, ಸೂಕ್ಷತೆಯನ್ನು ಆವಾಹಿಸಿಕೊಂಡಿವೆ. ಕೆಲವು ಚುಟುಕಗಳು ಸಾಮಾನ್ಯವೆನಿಸಿದರೆ ಬಹುತೇಕ ರಚನೆಗಳು ಅನನ್ಯವೆನಿಸುತ್ತವೆ. 'ಹೆಸರು-ಉಸಿರು', ನಿನ್ನೊಳಗೇ' ಇತ್ಯಾದಿ, (ಯಾವು ದನ್ನು ಉದಾಹರಿಸುವುದು ಯಾವುದನ್ನು ಇಡುವುದು?) ಪರಿಣಾಮಕಾರಿ ರೂಪಕಗಳು, ಚಿತ್ರಗಳು, 'ರೂಢಿವಶವಲ್ಲದ ವಕ್ರೋಕ್ತಿ ವಿನ್ಯಾಸಗಳು, ಪ್ರಾಸೌಚಿತ್ಯ ಸಾಲುಗಟ್ಟಿ ನಿಂತಿವೆಯಿಲ್ಲಿ: ಒಟ್ಟಿನಲ್ಲಿ ಗಟ್ಟಿಕಾವ್ಯ ಮೈದಳೆದಿದೆ.
’ಶಿಶಿರ’ ಕಾವ್ಯನಾಮದ ಮೂಲಕ ಹೆಸರಾಗಿರುವ ಎಸ್.ಶಿಶಿರಂಜನ್ ಜನಿಸಿದ್ದು 1989 ಮಾರ್ಚ್ 5 ರಂದು ಮೈಸೂರಿನ ದೊಡ್ಡಮಾರಗೌಡನಹಳ್ಳಿಯಲ್ಲಿ. ತಂದೆ ಶಂಕರನಾರಾಯಣ, ತಾಯಿ ಲಲಿತ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕೃತಿಗಳೆಂದರೆ ಸಂವೇದನೆ(ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ(ಹನಿಗವಿತೆಗಳು), ಲಂಕೇಶನ ತಲೆಗಳು(ಖಂಡಕಾವ್ಯ). ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ರಂಗ ಪ್ರತಿಭಾ ಸನ್ಮಾನ ಹಾಗೂ ಸ್ಪಂದನಶ್ರೀ ಪ್ರಶಸ್ತಿ ಲಭಿಸಿದೆ. ...
READ MOREಒಂದಿಷ್ಟು ಹನಿಗಳು : ನೆಲೆ ಬಾನೆತ್ತರಕೆ ಹಾರಿದರೂ ನಿಲ್ಲಲೊಂದು ನೆಲೆ ಬೇಕು ... ನೆಲಕೆ ಇಳಿಯಲೇ ಬೇಕು .. ಹಕ್ಕು ಭೇದ ಭಾವಗಳಿಗೆ ಬೆಂಕಿಯಿಕ್ಕು ಸಮಸಮಾಜ ಪ್ರತಿ ಹುಟ್ಟಿನ ಹಕ್ಕು... ನನ್ನೊಳಗೇ ನನ್ನೊಳಗೇ ಇದ್ದಾರೆ ಇಬ್ಬರೂ ಅಂಗೂಲಿಮಾಲಾ ಹಾಗೂ ಬುದ್ಧ ಅವ್ವ ಅಪ್ಪನೊಳಗಿನ ಮದನನ ತಣಿಸಿದ ರತಿ ? ಕಾಮನ ದಹಿಸಿದ ಮುಕ್ಕಣ್ಣೆ? ನೀ ನೀ ಕೇವಲ ಹೆಣ್ಣಲ್ಲ ನನ್ನಾತ್ಮದ ಕಣ್ಣು ಹೆಣ್ಣು ಹೆಣ್ಣು ಹೆಣ್ಣಷ್ಟೇ... ಮಿಕ್ಕವೆಲ್ಲಾ ಗಂಡಿನ ಸ್ವಾರ್ಥ !