ಅನಾಮಧೇಯ ಗೀರುಗಳ ಜೊತೆ ಒಂದು ವಿಮರ್ಶಾತ್ಮಕ ನೋಟ..


ನಿಝಾಮ್ ಗೋಳಿಪಡ್ಪು ರೂಪಕಗಳನ್ನು, ಪ್ರತಿಮೆಗಳನ್ನು ಸೃಷ್ಟಿಸುವ ರೀತಿ ಸೂಜುಗ. ನಾವು ಕಂಡು-ಕೇಳಿದ, ವಸ್ತು-ವಿಷಯಗಳ ಪರಿಚಯವಿದ್ದೂ ಲೋಕ ವ್ಯವಹಾರದಲ್ಲಿ ಮರೆತುಬಿಟ್ಟಿರುವ ಸಂಗತಿಗಳೆ ಕವಿಗೆ ಬಹುಮುಖ್ಯ ಎನ್ನುತ್ತಾರೆ ರಾಮನ ಗೌಡ ಅಣ್ಣಿಗೇರಿ ಅವರು ನಿಝಾಮ್ ಗೋಳಿಪಡ್ಪು ಅವರ ಅನಾಮಧೇಯ ಗೀರುಗಳು ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕವಿಯನ್ನು ಎಲ್ಲಾ ಕಾಲಕ್ಕೂ ಹೆಚ್ಚು ಕಾಡಿದ್ದು ‘ನೋವು’ ಎನ್ನುವುದರಲ್ಲಿ ತಕರಾರು ಇರಲಾರದು. ವಾಲ್ಮೀಕಿಯ ಪೂರ್ವದ ಕವಿಗಳಿಂದ ಹಿಡಿದು ಈಗ ಬರೆಯುತ್ತಿರುವ ನಿಝಾಮ್ ಗೋಳಿಪಡ್ಪುವರೆಗೆ ನೋವು, ವಿಷಾದ ತನ್ನ ಕಾಲ-ದೇಶದ ಸ್ವರೂಪದಲ್ಲಿ, ವಿಧಾನದಲ್ಲಿ ಬದಲಾಗಿದ್ದರೂ ಅದರ ಮೂಲ ಧಾತು ಉಂಟು ಮಾಡಿದ ಗಾಯ ಮಾತ್ರ ಒಂದೆ ಜಾಗದಲ್ಲಿದೆ. ನೋವನ್ನು, ವಿಷಾದವನ್ನು ಕವಿಯ ಹಿನ್ನೆಲೆಯ ಹಲವು ವಿಧಾನದಲ್ಲಿ ಪರಿಭಾವಿಸಿಕೊಳ್ಳಬಹುದು. ನಿಜಾಮ್‍ಗೆ ನೋವು ದೇಹಕಂಟಿದ ತೊಗಲಿನ ಹಾಗೆ, ಮನಸಿಗಂಟಿದ ಪದದ ಹಾಗೆ. ಇದು ಅಭೇದ ಸ್ಥಿತಿ. ಹಾಗಾದರೆ ಈ ಸಂಕಲನದಲ್ಲಿ ನಲಿವೇ ಇಲ್ಲವೆ ಎಂದರೆ ಅದು ಹಾಗೂ ಆಗಿರಲಾರದು. ಇಲ್ಲಿ ನೋವು ನೇತ್ರಾವತಿ ನಂದಿಯಂತೆ ಹಿರಿದಾಗಿ ಹರಿದರೆ, ನಲಿವು ಗೋಳಿಪಡ್ಪುವಿನ ಯಾವುದೊ ಮೂಲೆಯಲ್ಲಿ ತೊರೆಯಾಗಿ ಜಿಣುಗುತ್ತಿದೆ. ಆ ದೊಡ್ಡನದಿಯ ಎದುರು ಸಣ್ಣ ತೊರೆ ಅಷ್ಟಾಗಿ ಕಾಣದೆ ಹೋಗಿರಬಹುದು. ಬಹುಮುಖ್ಯವಾಗಿ ಕವಿಯನ್ನು ನೋವು ಹೆಚ್ಚು ಕಾಡುತ್ತದೊ ಅಥವಾ ಪ್ರೀತಿಯೋ ಎಂದು ನಾಡಿನ ಪ್ರಮುಖ ಕವಿಗಳನ್ನು ಕೇಳಿದೆ. ಅವರೊಂದು ವಿಚಿತ್ರ ತರ್ಕ ಮುಂದಿಟ್ಟರು. ನಂತರ ‘ಪ್ರೀತಿ ಮನುಷ್ಯನನ್ನು ಕಾಡುವುದೇ ಇಲ್ಲ. ಯಾಕೆಂದರೆ ಪ್ರೀತಿಗೆ ಮರುವಿನ ಗುಣವಿದೆ. ನೋವಿಗೆ ಕಾಡುವ ಗುಣವಿದೆ ಮತ್ತು ನೋವಿಗೆ ಮರುವು ಎಂಬುದೇ ಇಲ್ಲ!’ ಎಂದರು. ಕವಿ ತಾನು ನೋವಿಗೆ ಹೆಚ್ಚು ತೆತ್ತುಕೊಳ್ಳಲು ಇದು ಕಾರಣವಿರಬಹುದು. ಆದರೆ ಕವಿ ನಿಜಾಮ್‍ಗೆ ಈ ಮೇಲಿನ ಸರಳ ಪ್ರಮೇಯ ಹೊಂದದು. ಯಾಕೆ ಎನ್ನುವುದನ್ನು ಮುಂದೆ ಚರ್ಚಿಸೋಣ.

ನಿಝಾಮ್ ಗೋಳಿಪಡ್ಪು ರಚನೆಗಳನ್ನು ಪ್ರವೇಶಿಸಲು ಒಂದು ದಾರಿ ಹುಡುಕುತ್ತಿದ್ದೆ. ನನಗೆ ಇದೇ ತಹತಹ, ವಿಷಾದ, ಪ್ರಕ್ಷುಬ್ಧತೆಯಲ್ಲಿ ಬರೆಯುತ್ತಿದ್ದ ಮತ್ತು ಬರೆಯುತ್ತಿರುವ ಎನ್. ಕೆ ಹನುಮಂತಯ್ಯ, ಲಕ್ಕೂರು ಆನಂದ, ಬಸವರಾಜ ಋಸ್ತಾಕ್ಷಿ, ದೊಡ್ಡಕಲ್ಲಳ್ಳಿ ನಾರಾಯಣ, ರಾಮಪ್ಪ ಕೋಟಿಹಾಳರ ಕವನಗಳು ಮತ್ತು ರಚನೆಗಳು ನೆನಪಾದವು. ನಿಝಾಮ್ ಗೋಳಿಪಡ್ಪು ತನ್ನ ‘ಬೆವರ ಪ್ರತಿ ಹನಿಯನ್ನು ಮಾತನಾಡಿಸಿಯೇ ಬಿಳ್ಕೊಡುವ’ ಕವಿಯಂದರೆ ಸ್ವಲ್ಪ ಉತ್ಪ್ರೇಕ್ಷೆ ಎನಿಸಬಹುದೇನೊ. ಆದರೆ ಕವಿಯ ‘ಪಾದಕ್ಕೆ ಕೆಂಡದ ನಡಿಗೆ ಸಲೀಸು’ ಹಾಗೆ ಅದೆ ಕೆಂಡದ ಮೇಲೆ ‘ಕಾದು ಕಾದು ತನ್ನ ಕಣ್ಣೀರ ಉಪ್ಪಲ್ಲೇ ಗಂಜಿ ನೆಚ್ಚಿಕೊಳ್ಳುವ ರೈತ’ನೂ ಕವಿಯ ಜೊತೆಗಿದ್ದಾನೆ. ಇಲ್ಲಿ ಬೆವರು ಪ್ರಕ್ಷುಬ್ಧತೆಯಾದರೆ, ಕಣ್ಣೀರು ವಿಷಾದ. ಕವಿಯ ಯಾವ ರಚನೆಯೂ ರಂಪಾಟವಾಗದೆ ರಸ, ಭಾವ, ದ್ವನಿ, ಭಾಷೆ ಹದವಾಗಿ ಬೆರೆತು ಎದುರಿದ್ದವನ ಎದೆಯ ಬಾಗಿಲು ತಟ್ಟದೆಯೆ ತೆರೆದುಕೊಂಡಿದೆ. ಓದುಗ ಕ್ಷಣಿಕ ನೋವಿಗೆ ಅಥವಾ ಸುಖಕ್ಕೆ ತೃಪ್ತನಾಗಲು ಇಲ್ಲಿಯ ರಚನೆಗಳು ಬಿಡವು. ನೋವನ್ನು ಎದುರುಗೊಳ್ಳುವ ರಚನೆಗಳಂತು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಇಲ್ಲಿ ನಿಜಾಮ್ ‘ವಾಹ್’ ಅಂತೆನಿಸಿ, ಕ್ಷಣ ಹುಬ್ಬೇರಿಸಿ, ಮುದುಗೊಂಡು ಮುಂದೆ ಸಾಗುಗೊಡದೆ ನಮ್ಮನ್ನೂ ಆ ನೋವಿನಲ್ಲಿ ಮಿಂದು ಹೋಗುವಂತೆ, ಆ ವಿಷಾದದ ಒಂದು ತಂತು ನಮ್ಮೆದೆಯಲ್ಲೂ ಮಿಡಿಯುವಂತೆ, ಪ್ರಕ್ಷುಬ್ಧತೆಯ ಬಿಸಿ ತಾಕಿಸಿ ತಳಮಳಗೊಳುವಂತೆ ಮಾಡಿದ್ದಾರೆ.

‘ಗೂನು ಬೆನ್ನಿನ ಹೂವಿನಲಿ ಶಾಪ ಮಡಿಚಿಟ್ಟ’ ಕವಿಗೂ ತಾಪ ತಾಕತ್ತಲೆ ಇದೆ. ‘ಬದುಕ ಹೂಜಿಯಲ್ಲಿ ನೀರಿಲ್ಲದಾಗಲೂ ದಾಹ ಎನ್ನ’ದ ಕವಿಯ ಗೈರು ಯಾರಿಗೂ ಕಾಡುತ್ತಿಲ್ಲ. ಜನಕ್ಕೆ ‘ನೆನಪ ಹೂವಿನ ಪಕಳೆಯೊಂದು ಕಳೆದುಕೊಂಡ’ಷ್ಟೆ ಸಲೀಸು. ಕವಿಗೂ ಗೊತ್ತು ಅದಕ್ಕಾಗಿಯೇ ‘ಇದ್ದಾಗ ದಕ್ಕಿಸಿಕೊಂಡವರು ಯಾರೋ ನಗುತ್ತಿರಲಿ, ಎಂದಿಗೂ ಅಗಲದ ನೆನಪು ಜೋಳಿಗೆಗೆ ಸುರಿದಿದ್ದೇನಲ್ಲ’ ಎನ್ನುತ್ತಾನೆ ಕವಿ. ಕವಿ ಇಲ್ಲಿ ನೆನಪು ಮತ್ತು ಸಾವಿನ ಬಗೆಗೂ ಹೆಚ್ಚು ಧ್ಯಾನಿಸಿದ್ದಾನೆ. ಮುಕ್ಕಾಲು ಪಾಲು ಸಾವು ಸುತ್ತಲೆ ರಚನೆಗಳಿವೆ. ಸಾವನ್ನು ಎದುರುಗೊಳ್ಳುವ ರೂಪಕಗಳು ಕೆಲವು ಕಡೆಗಳಲ್ಲಿ ಅಲಂಕಾರವಾಗಿ ಬಂದಿವೆ. ಕೆಲವು ಕಡೆ ಸಾವನ್ನು ಜಯಿಸುವ ರಚನೆಗಳಿದ್ದರೆ. ಕೆಲವು ಕಡೆ ಸಾವು ಒಂದು ಮಾರ್ಗ ಎನ್ನುವ ಅರ್ಥದ ರಚನೆಗಳು ಬರುತ್ತವೆ. ನನಗೇಕೊ ಸಾವಿನ ಕುರಿತ ಇಷ್ಟು ಅತಿರೇಕ ಅನವಶ್ಯ ಎನಿಸಿತು. ಸಾವು ಮಾರ್ಗವಲ್ಲ ಅದೊಂದು ಅಂತ್ಯ. ನೆನಪು ಸದಾ ಜೀವಂತವಗಿರುವವನ ಗುರುತು.

ನಿಜಾಮ್ ಗೋಳಿಪಡ್ಪು ರೂಪಕಗಳನ್ನು, ಪ್ರತಿಮೆಗಳನ್ನು ಸೃಷ್ಟಿಸುವ ರೀತಿ ಸೂಜುಗ. ನಾವು ಕಂಡು-ಕೇಳಿದ, ವಸ್ತು-ವಿಷಯಗಳ ಪರಿಚಯವಿದ್ದೂ ಲೋಕ ವ್ಯವಹಾರದಲ್ಲಿ ಮರೆತುಬಿಟ್ಟಿರುವ ಸಂಗತಿಗಳೆ ಕವಿಗೆ ಬಹುಮುಖ್ಯ. ಅಂದರೆ ತಾನು ನೋಡುತ್ತಿರುವುದನ್ನು ನಮಗೆ ತೋರುವ ಉಮೇದಿನಲ್ಲಿ (ಈ ಉಮೇದು ನೋವು, ವಿಷಾದ, ಪ್ರಕ್ಷುಬ್ಧತೆಯ ಪಾತಳಿಯಿಂದಲೆ ಬಂದಂತಹ ಪ್ರತಿಮಾರೂಪಗಳು) ಸೃಷ್ಟಿಯ ಸೊಬಗಿದೆ. ಅಂದರೆ ನಿರೂಪದ ಸ್ವರೂಪ ಕಾಣಿಸುವ ಉಮೇದು ಎಂದರೂ ಆದೀತು.

ಉದಾಹರಣೆಗೆ:

‘ನನ್ನ ಉಮ್ಮ ಬೀಡಿ ಕಟ್ಟುತ್ತಾಳೆ
ಅವಳಿಗದು ಮೈದಳೆದು
ಕಿತ್ತುಕೋ ಅನ್ನುವ
ಹೂ ಕೀಳುವಷ್ಟು ಸುಲಭ ಅಂತೇನಲ್ಲ. (೩)

ದೇಹದ ನೆರಳು ಮೂರಾದಾಗ
ದಾರಿಯಲಿ ಎಣ್ಣೆ ಬತ್ತಿದ
ಲಾಟೀನು ಇದೆ ನನ್ನ ಸಂಗಡ
ನಂಬುವುದು ಯಾರನ್ನೀಗ ನಾನು
ಪವಾಡವನ್ನೊ ಎಣ್ಣೆಯನ್ನೊ (೧)

ಎಷ್ಟೋ ಸಲ ಅಂದುಕೊಳ್ಳುತ್ತೇನೆ
ಈ ಕತ್ತಲನ್ನು ತುದಿಬೆಳಲ್ಲಿ
ಆಚೆ ನೂಕಿಬಿಡಬೇಕೆಂದು
ಬೆಳಕು ಮೊಗೆದಂತೆ ಏಳುತ್ತದೆ
ಅದರ ಬೆನ್ನಿಗೆ ಮತ್ತೆ ಕತ್ತಲು (೪೨)

ಕವಿಯ ನೋವಿನ ಬಂಡೆ ಸೀಳಿ ಪ್ರೇಮದೊಂದು ಅಂಕುರಿಸಿದ ಗುರುತು 45 ಮತ್ತು 43ನೆಯ ರಚನೆಯಲ್ಲಿ ಕಾಣಿಸುತ್ತದೆ. ಪ್ರೇಮ ಮತ್ತು ಭಕ್ತಿಯ ಕುರಿತ ಕವಿಯ ತಿಳುವು ಅಗಾದವಾದದ್ದು. ಭಕ್ತಿಯ ಸಮರ್ಪಣೆಯ ಗುಣವೆ ಪ್ರೇಮದಲ್ಲೂ ಇದೆ. ಪ್ರೇಮದ ಬಗ್ಗೆ ಇಲ್ಲಿ ಕವಿ ತಕರಾರು ನೋಡಿ..

‘ನಿನ್ನ ಹೊಕ್ಕುಳ ಬಳ್ಳಿಯಿಂದ
ನನ್ನ ರಕ್ತದ ಬಳ್ಳಿಯ ಹರಿಸುವುದೊಂದೇ
ಗಂಡಸುತನವಾಗುವುದಾದರೆ
ಪವಿತ್ರ ಪ್ರೇಮವೆಂಬೆಲ್ಲ
ಪೀಠಿಕೆ ಏಕೆ ಬೇಕಿತ್ತು. (೪೫) ಎನ್ನುತ್ತಾನೆ. ಈ ರಚನೆ ಜನ್ನನ ಯಶೋಧರ ಚರಿತೆಯಲ್ಲಿಯ ‘ಪುರುಷಮಣಿ’ ಸಂವಾದಕ್ಕೆ ಈ ರಚನೆ ಸಂವಾದಿಯಾಗಬಲ್ಲದು. ಇನ್ನು ಭಕ್ತಿಯ ಕುರಿತ ಇಲ್ಲಿಯ ರಚನೆಯ ಆಂತರ್ಯದ ಭಾವವನ್ನು ಈಗಾಗಲೆ ಕನ್ನಡ ಕಾವ್ಯ ಹಿಡಿದಿಟ್ಟಿದೆ. ಇಲ್ಲಿ ಕವಿ ತುಸು ಭಿನ್ನವಾಗಿ ಹೇಳಿದ್ದಾನೆ.

ಪರಮ ಪವಿತ್ರವೆಂಬ
ಪ್ರಾರ್ಥನೆಯಿಲ್ಲ
ನೀ ಬದಲಾಗಲಿರುವ
ಪ್ರಾರ್ಥನೆಗಿಂತ…

ಬೊಗಸೆ ಹಿಡಿದೋ
ಬೆರಳ ಬಂದಿಸಿಯೋ
ಎದೆಗಾತು ಕೊಂಡ
ಕೈಗಳ ಮುಖೀನವೋ
ದಯಾಮಯನಿಗೆ
ನಿನ್ನ ಭಂಗಿಯ ಬಗೆಗೆ
ತಕರಾರಿಲ್ಲ.
ಇರುವೆಯ ಶ್ರಮದಂತಿರಲಿ ಪ್ರಾರ್ಥನೆ...
ಕಡಲೆದುರಿನ ದಡದಂತಾಗು ಪ್ರಾರ್ಥನೆಯಲ್ಲಿ. (೧೨) ಎನ್ನುತ್ತಾನೆ.

ಪದಮಿತಿಯೇ ಭಾವದ ಮಿತಿಯೂ ಆಗಿ ಕೆಲವು ರಚನೆಗಳಲ್ಲಿ ಅಸ್ಪಷ್ಟತೆ ಇದೆ. ಕೆಲವು ರಚನೆಗಳು ಅಪೂರ್ಣವಾಂದಂತಿವೆ. ಉದಾಹರಣೆಗೆ 27ನೆಯ ರಚನೆಯ ಎರಡನೆ ಸ್ಟಾಂಜಾ ಗಮನಿಸಬಹುದು. ಈ ಸಂಕಲನದ ಎಲ್ಲ ರಚನೆಗಳು ಈ ಮೇಲೆ ಸೂಚಿಸಿದ ಸಂಗತಿಯ ಹೊರತಾಗಿಯೂ ಕೆಲವು ರಚನೆಗಳು ಕ್ಷಣದ ತುರ್ತಿಗೆ ಬರೆದಂತಿವೆ. ಕೆಲವು ಕಡೆ ವಾಚ್ಯವಾಗಿಯೂ, ಕೆಲವು ಕಡೆ ರಚನೆಯ ಭಾಷೆಗಿಂತ ಮಿಗಿಲಾಗಿ ವರದಿಯಂತಹ ಸಾಲುಗಳು ಸೇರಿವೆ. ರಚನೆಗಳಲ್ಲಿ ಹುಡುಕಾಟ, ವ್ಯಂಗ್ಯವೂ ಇದೆಯೇನೊ ಸರಿ ಆದರೆ ಅದು ಅಹಂ ಆಗಿ ಮಾರ್ಪಟ್ಟು ಓದುಗನ ಮತ್ತು ಕವಿ ಆ ಕ್ಷಣದ ಸ್ವಮರಕಕ್ಕೆ ಮಾತ್ರ ಸೀಮಿತವಾಗಿಬಿಡಬಲ್ಲ ಅಪಾಯವನ್ನು ಮರೆಯಬಾರದು. ಕವಿ ನಿಜಾಮ್ ಈ ಎಲ್ಲ ಮಿತಿಯನ್ನು ಖಂಡಿತಾ ಮೀರಬಲ್ಲರು. ಕವಿಗೆ ಆ ಶಕ್ತಿ ಇದೆ.

ಟಿಪ್ಪಣಿ

ಗೆಳೆಯ ಸುಬ್ಬು ಹೇಳಿದ ಮಾತು ‘ಈ ಕವಿ ಹೀಗೆ ಬರೆಯುತ್ತ ಸಾಗಿದರೆ ಅರಾಜಕನು/ ಪ್ರಕ್ಷುಬ್ಧನು ಆಗಿಬಿಡಬಲ್ಲ. ವ್ಯವಧಾನಿಸಿ ಬರೆದರೆ ಕನ್ನಡದ ಬಹುಮುಖ್ಯ ಕವಿಯೂ ಆಗಬಲ್ಲ.’

-ರಾಮನ ಗೌಡ ಅಣ್ಣಿಗೇರಿ

 

MORE FEATURES

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...

ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿ `ರಾಮಾಯಣ ಪರೀಕ್ಷಣಂ' 

31-12-1899 ಬೆಂಗಳೂರು

"ಶ್ರೀರಾಮನು ವಾಲಿಯ ಸಂಹಾರ ಮಾಡಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ ಕಥೆ ನಮಗೆಲ್ಲಾ ಗೊತ್ತಿರುವುದೇ. ಇಲ್ಲಿ ವಾಲಿ...

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...