ಅರಿವೇ ಪ್ರಮಾಣು: ಅಕ್ಕನಾಗಮ್ಮನ ಜೀವನ ಕಥನಕಾವ್ಯ


ಮಹಾಂತಪ್ಪ ನಂದೂರರ ಕಾವ್ಯದಲ್ಲಿ ಎದ್ದು ಕಾಣುವುದು ಶಬ್ಧ ಸಂಪತ್ತು. ವಚನ ಸಾಹಿತ್ಯದ ಆಳವಾದ ಪರಿಚಯವಿರುವುದು ಒಂದೊಂದು ಸುನೀತವನ್ನೂ ಓದುವಾಗಲೂ ಎದ್ದು ಕಾಣುತ್ತದೆ. ಅಲ್ಲದೆ ಇಲ್ಲಿ ನಡೆಸಿರುವ ಛಂದೋ ವೈಶಿಷ್ಟ್ಯವೂ ಓದುಗರ ಗಮನ ಸೆಳೆಯುತ್ತದೆ ಎನ್ನುತ್ತಾರೆ ವಿಮರ್ಶಕ ಸಿ.ಎಸ್.ಭೀಮರಾಯ (ಸಿಎಸ್ಬಿ). ಅವರು ಮಹಾಮತಪ್ಪ ನಂದೂರ ಅವರ ಅರಿವೇ ಪ್ರಮಾಣು ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಕೃತಿ: ಅರಿವೇ ಪ್ರಮಾಣು
ಲೇಖಕ: ಮಹಾಂತಪ್ಪ ನಂದೂರ
ಪುಟ: 208
ಬೆಲೆ: 200
ಪ್ರಕಾಶನ: ಪಟ್ಟಣ ಪ್ರಕಾಶನ, ಹುಬ್ಬಳ್ಳಿ

ಮಹಾಂತಪ್ಪ ನಂದೂರ ನಮ್ಮ ನಡುವಿನ ಪ್ರತಿಭಾನ್ವಿತ ಕವಿ ಮತ್ತು ಕಥೆಗಾರರಲ್ಲೊಬ್ಬರು. ಅವರ ಸೃಜನಶೀಲ ಬರವಣ ಗೆ ಹೊಸ ಭರವಸೆಯನ್ನು ಹುಟ್ಟಿಸಿರುವಂಥದ್ದು. ಕಳೆದ ಎರಡು ದಶಕಗಳಿಂದ ಅವರು ಕಾವ್ಯಧ್ಯಾನ ಮತ್ತು ಕಥಾ ಕೃಷಿಯಲ್ಲಿ ಗಂಭೀರವಾಗಿ ತೊಡಗಿದ್ದಾರೆ. ವ್ಯಕ್ತಿಯಾಗಿ ಅವರ ಮೃದು ಸ್ವಭಾವ, ವಿನಯ ಸಂಪನ್ನತೆಗಳನ್ನು ನಾನು ಅಧಿಕವಾಗಿ ಮೆಚ್ಚಿಕೊಂಡಿದ್ದೇನೆ. ಬಿಸಿಲುನಾಡಿನ ಮೂಲದ ಮಹಾಂತಪ್ಪ ನಂದೂರರು ಕನ್ನಡದ ವಿಶಿಷ್ಟ ಕವಿಪರಂಪರೆಗೆ ಸೇರುತ್ತಾರೆಯೆನ್ನುವುದಕ್ಕೆ ಅವರ ಕಾವ್ಯವೇ ಸಾಕ್ಷಿ. ಕನ್ನಡದಲ್ಲಿ ‘ಸಾನೆಟ್’ ಕಾವ್ಯಪ್ರಕಾರಕ್ಕೆ ಆಳ, ಎತ್ತರ ಮತ್ತು ಅಗಲಗಳನ್ನು ವ್ಯಾಪಕ ಪ್ರಮಾಣದಲ್ಲಿ ನೀಡುತ್ತಿರುವವರು ಮಹಾಂತಪ್ಪ ನಂದೂರ. ಅವರದು ನಿರಂತರ ಪ್ರಯೋಗಶೀಲತೆ.

ಪ್ರಸ್ತುತ ‘ಅರಿವೇ ಪ್ರಮಾಣು’ ಮಹಾಂತಪ್ಪ ನಂದೂರರ ದ್ವಿತೀಯ ಸಾನೆಟ್ ಸಂಕಲನ. ಈ ಸಂಕಲನದಲ್ಲಿ ಮುನ್ನೂರ ಎಪ್ಪತ್ತೈದು ಸುನೀತಗಳಿವೆ. ಇದು ಅಕ್ಕನಾಗಮ್ಮನ-ಜೀವನ ಕಥನಕಾವ್ಯ. ಈ ಕೃತಿ ಮಹಾಂತಪ್ಪ ನಂದೂರ ಅವರ ಕಾವ್ಯಸೃಷ್ಟಿಯ ಸುಗ್ಗಿ. ಈ ಕೃತಿಯಲ್ಲಿ ನಂದೂರರ ಕಾವ್ಯಕರ್ಮವು ಅರ್ಥಪೂರ್ಣವಾಗಿ ಮುಂದುವರೆದಿದೆ; ಕಾವ್ಯಕಸುಬು ಮತ್ತಷ್ಟು ಸೂಕ್ಷ್ಮಗೊಂಡಿದೆ. ಒಂದು ಪಕ್ವಮನಸ್ಸಿನ ಪರಿಣತ, ಪ್ರಬುದ್ಧ ಅಭಿವ್ಯಕ್ತಿ ಇಲ್ಲಿ ಕಾಣುತ್ತದೆ. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯದ ಪ್ರಭಾವಗಳಿಗೆ ತೆರೆದ ಕವಿಮನಸ್ಸು ಹಲವು ಪ್ರಯೋಗಗಳನ್ನು ಮಾಡುವ ಸಾನೆಟ್ ಸಂಕಲನ. ಛಂದಸ್ಸಿನಲ್ಲಂತೂ ಎದ್ದು ತೋರುವ ವೈವಿಧ್ಯ. ಪ್ರತಿಯೊಂದು ಸುನೀತ ರಚನೆಗೆ ಕವಿಯ ಆಳವಾದ ಅಭ್ಯಾಸ, ಗಂಭೀರ ಚಿಂತನೆ, ಸಾಮಾಜಿಕ ಕಾಳಜಿಗಳ ಹಿನ್ನೆಲೆ ಇರುವುದು ಈ ಸಂಕಲನದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಾನೆಟ್ಟಿನ ಕಾವ್ಯಬಂಧ ನಂದೂರರಿಗೆ ಪ್ರಿಯವಾದದ್ದು. ‘ಕಾವ್ಯ ರಚನೆಯ ಪ್ರಾರಂಭದಿಂದಲೂ ಅವರ ಮನಸ್ಸನ್ನಾಕರ್ಷಿಸಿದ ಕಾವ್ಯಪ್ರಕಾರ ಸಾನೆಟ್’. ಕಷ್ಟ ಸಾಧ್ಯವಾದ ಈ ಕಾವ್ಯಬಂಧವನ್ನು ವಶಪಡಿಸಿಕೊಂಡು ನಂದೂರ ಸುಂದರವಾದ ಸುನೀತಗಳನ್ನು ರಚಿಸಿದ್ದಾರೆ. ಈ ದೃಷ್ಟಿಯಿಂದ ತಮ್ಮ ಸುನೀತಗಳ ಮುಖಾಂತರ ಮಹಾಂತಪ್ಪ ನಂದೂರ ಸಮಕಾಲೀನ ಕನ್ನಡಕ್ಕೆ ಮಹತ್ವದ ಕಾವ್ಯಕಾಣ ಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಸುನೀತಗಳ ವಿಸ್ತಾರ, ಕಾವ್ಯವಸ್ತು, ನಿರ್ವಹಣೆ, ಅಭಿವ್ಯಕ್ತಿಯಲ್ಲಿನ ಮಿನುಗು ಮಿಂಚು, ಪಾತ್ರಗಳ ಕಡೆಯುವಿಕೆ, ಭಾಷೆಯನ್ನು ಅನನ್ಯವಾಗಿ ಬಳಸಿದ ರೀತಿ ಈ ಎಲ್ಲವೂ ಭವ್ಯವೇ ಎಂಬುದು ಕವಿಯ ಪ್ರತಿಭಾ ಹೆಗ್ಗಳಿಕೆಯಾಗಿದೆ. ಇಲ್ಲಿ ಭಾವದಷ್ಟೇ ಅಭಿವ್ಯಕ್ತಿಯೂ ಪ್ರಜ್ವಲಿಸಿದೆ. ವಿಚಾರವೂ ದೀಪ್ತವಾಗಿ ತನ್ನ ಹೊಂಗದಿರ ಕಾಂತಿಯನ್ನು ಉಜ್ವಲವಾಗಿಸಿದೆ ಕವಿಯ ಕಾವ್ಯಕೈಂಕರ್ಯ. ಸಂಕಲನದಲ್ಲಿನ ಅನುಭವದ ಅಭಿವ್ಯಕ್ತಿ ಶಬ್ದಕ್ಕೆ ಮೀರಿದ ಅನುಭವವನ್ನು ವ್ಯಕ್ತಪಡಿಸುತ್ತದೆ. ನಂದೂರರಿಗೆ ಕನ್ನಡ ಕಾವ್ಯದೇವಿಯ ಆರಾಧನೆ ಸಾಧ್ಯವಾಗಿದೆ. ಇಲ್ಲಿ ನಿಷ್ಠೆ ಇದೆ; ನುಡಿ ಬಳಕೆಯಲ್ಲಿ ಸಂಯಮವಿದೆ. ಮನುಷ್ಯ ತನ್ನೊಳಗಿನ ತನ್ನತನವನ್ನೇ ತೇಯ್ದು ತೇಯ್ದು ತಿಳಿಯುವ ಪರಿಯಿದು ! ಅರಿವಿನ ಮಹಾಬೆಳಗು ಮನುಷ್ಯ ಜೀವನದ ಮಹಾ ಸುಗ್ಗಿ ! ಅದಲ್ಲದೆ, ಅಧಿಕಾರ-ಅಂತಸ್ತು, ಪದವಿ-ಪ್ರಶಸ್ತಿ, ಹೊಟ್ಟೆ-ಬಟ್ಟೆಗಾಗಿಯೇ ಒದ್ದಾಡುವ ಮನುಷ್ಯರ ಸಾಧನೆಗೆ ಯಾವ ಶುದ್ಧಿ? ಯಾವ ಸಿದ್ಧಿ?

ಅಕ್ಕನಾಗಮ್ಮ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯರ ಮಗಳು. ಅಕ್ಕನಾಗಮ್ಮನ ವಿಷಯ ‘ಬಸವ ಪುರಾಣ’ ಮತ್ತು ‘ಸಿಂಗಿರಾಜ ಪುರಾಣ’ಗಳಲ್ಲಿ ಕಂಡುಬರುತ್ತದೆ. ಶರಣನಾದ ಚನ್ನಬಸವಣ್ಣನ ಮಾತೆಯಾದ ಅಕ್ಕನಾಗಮ್ಮ ಬಸವಣ್ಣನವರ ಸಹೋದರಿಯಾಗಿದ್ದಾಳೆ. ಬಸವಣ್ಣನವರ ತತ್ವಗಳನ್ನು ಅನುಸರಿಸುವಲ್ಲಿ ಅಕ್ಕನಾಗಮ್ಮನದೂ ಮಹತ್ವಪೂರ್ಣವಾದ ಪಾತ್ರವಿದೆ. ಅಕ್ಕನಾಗಮ್ಮನ ಜೀವನ ವೃತ್ತಾಂತಗಳ ಬಗೆಗೆ ದೊರಕಿದ ವಿವರಗಳು ಸಂದೇಹಗಳಿಗೆ ಎಡೆಮಾಡಿಕೊಡುವಂತಹುವಾಗಿವೆ. ಅವಳು ‘ತರೀಕೆರೆ’ ಎಂಬ ಊರಿನಲ್ಲಿ ಅಂತ್ಯಕಾಲದಲ್ಲಿ ಐಕ್ಯಳಾಗಿರಬಹುದೆಂದೂ, ಕಲ್ಯಾಣದ ಕ್ರಾಂತಿಯಲ್ಲಿ ಭಾಗವಹಿಸಿ ಅದರಲ್ಲಿ ಗಮನಾರ್ಹವಾದ ಪಾತ್ರವನ್ನು ವಹಿಸಿದವಳು.

ಮಹಾಂತಪ್ಪ ನಂದೂರರ ಕಾವ್ಯದಲ್ಲಿ ಎದ್ದು ಕಾಣುವುದು ಶಬ್ಧ ಸಂಪತ್ತು. ವಚನ ಸಾಹಿತ್ಯದ ಆಳವಾದ ಪರಿಚಯವಿರುವುದು ಒಂದೊಂದು ಸುನೀತವನ್ನೂ ಓದುವಾಗಲೂ ಎದ್ದು ಕಾಣುತ್ತದೆ. ಅಲ್ಲದೆ ಇಲ್ಲಿ ನಡೆಸಿರುವ ಛಂದೋ ವೈಶಿಷ್ಟ್ಯವೂ ಓದುಗರ ಗಮನ ಸೆಳೆಯುತ್ತದೆ. ಅಭ್ಯಾಸಕ್ಕಾಗಿ ಆಯ್ಕೆಮಾಡಿಕೊಂಡ ಕೆಲವು ಸುನೀತಗಳ ಸಾಲುಗಳನ್ನು ಗಮನಿಸಿ;

ನಾಲಿಗೆ ನುಡಿ ಮೇಲೆ ಕುಲವನರಸುವ ಕಾಲ;
ತೇಲಿ ಹರಡುವ ಗಾಳಿ ಕುಲದ ವಾಸನೆ ಪ್ರಾಣ
ವಾಯುವಿನಂತೆ ಕೈಗೊಂಬ ಕೆಲಸ ಕೈನಾತ
ಮೂಸುತ ಅಧಿಕ ಬ್ರಾಹ್ಮಣ ಅಸುರ ಶೂದ್ರ
ಮನುಜ ಅಲ್ಲ ಅಸ್ಪೃಶ್ಯ ಸಹಜ ಸೂತ್ರದಂತೆ
ಕೆನೆದ ಶಾಸ್ತç. ಹೆಣ್ಣು ಯಾವ ಕುಲದವಳು?..... || (01)

ಈ ಮೇಲಿನ ಸಾಲುಗಳನ್ನು ಗಮನಿಸಿದಾಗ ಸರಿ ಸುಮಾರು ಒಂಬತ್ತು ನೂರು ವರ್ಷಗಳ ಹಿಂದೆ ಬಸವಾದಿ ಶರಣರು ಕರ್ನಾಟಕ ಕೇಂದ್ರದಲ್ಲಿ ನಡೆಯಿಂದ ಸಾಧಿಸಿದ ಸಾಮಾಜಿಕ-ವೈಚಾರಿಕ ಕ್ರಾಂತಿ ಎಷ್ಟು ಮಹತ್ವದ್ದು ಹಾಗೂ ಎಷ್ಟು ಪ್ರಸ್ತುತವಾದುದು ಎಂದು ಅನ್ನಿಸದೆ ಇರಲಾರದು. ಹನ್ನೆರಡನೆಯ ಶತಮಾನದಂದು ಕರ್ನಾಟಕದ ಕಲ್ಯಾಣ ಕೇಂದ್ರದಲ್ಲಿ ಸಂಭವಿಸಿದ ಸಾಮಾಜಿಕ-ಧಾರ್ಮಿಕ ಸ್ವರೂಪದ ಶರಣ ಧರ್ಮ ಎನ್ನುವುದು ಅಂದಿನ ಸಮಾಜದ ವಿವಿಧ ಸ್ತರಗಳ ಜನಶಕ್ತಿಯನ್ನು ಮೊದಲ ಬಾರಿಗೆ ಸಂಘಟಿಸಿ ವೈಚಾರಿಕ ಸ್ಫೋಟವನ್ನು ತಂದ ಅಪೂರ್ವವಾದ ಐತಿಹಾಸಿಕ ಘಟನೆಯಾಗಿದೆ.

ಬಸವಣ್ಣ ಕರ್ನಾಟಕದ ಕ್ರಾಂತಿಪುರುಷ, ಮಹಾಮಾನವತಾವಾದಿ, ಕ್ರಾಂತದರ್ಶಿ, ಸರ್ವ ಸಮತಾವಾದಿ, ಭಕ್ತಿಭಂಡಾರಿ. ಬಸವಣ್ಣನಿಂದ ಕಲ್ಯಾಣ, ಶರಣ ಸಂಸ್ಕೃತಿ, ಜಗತ್ತಿಗೆ ಬೆಳಕಾಯಿತು. ಬಸವಣ್ಣ ಎಂದ ತಕ್ಷಣ ಅದೊಂದು ಹೆಸರಲ್ಲ, ಅದೊಂದು ದಿವ್ಯಶಕ್ತಿ, ಅದೊಂದು ಸಂಸ್ಕೃತಿ, ಅದೊಂದು ಧರ್ಮ, ಅದೊಂದು ಜ್ಞಾನಪರಂಪರೆ, ಅದೊಂದು ಅಂತಃಕರಣ, ಅದೊಂದು ಬೆಳಕು. ಹೀಗೆ ಬಹುಮಖಿ ವ್ಯಕ್ತಿತ್ವವನ್ನ, ಬಹುಮುಖಿ ಮಾರ್ಗಗಳನ್ನ, ಬಹುಶಿಸ್ತೀಯ ನೆಲೆಗಳನ್ನ ಒಳಗೊಂಡಿರುವAತಹ ಅದ್ಭುತವಾದ ಚಳವಳಿ ವಚನ ಚಳವಳಿ. ಈ ಚಳವಳಿಯ ನೇತಾರ ಮಹಾಮಾನವತಾವಾದಿ ಬಸವಣ್ಣ. ಮಾನವನ, ಸಮಾಜದ ಮತ್ತು ಜಗತ್ತಿನ ಪ್ರಗತಿಗೆ ಬಸವಣ್ಣನ ಕಾಣ ಕೆ ಅಮೂಲ್ಯವಾದದ್ದು.

ಬಿಜ್ಜಳನುದ್ಗಾರ! ಬಸವಣ್ಣ ನಿನ್ನಿಂದ ಕಲ್ಯಾಣ
ಉಜ್ವಲ ಪ್ರಕಾಶ ಬೆಳಗು ಜಗಕೆ ಕಲ್ಯಾಣ ಕಿರಣ
ಶರಣ ಸಂತಾನ; ಬೆಳಗುತ್ತ ಬೆಳೆಯುತ್ತ ತನ್ನ
ತಾನು ಕಾಯಕ ಕಾಯುವ ಮಾನ, ಕಾಯಕ
ಹೂವ ಹೊನ್ನ ಸೃಷ್ಟಿಯ ಧ್ಯಾನ, ದಾಸೋಹ ದಿವ್ಯ
ಭವ್ಯ ಲೋಕ ಪೊರೆವ ದಯೆಯ ದೃಷ್ಟಿ ಜ್ಞಾನ.....|| (247)

ಕನ್ನಡದ ನೆಲದ ಮೇಲೆ ರೂಪತಾಳಿ ವಿಶ್ವವ್ಯಾಪಿಯಾಗಿ ಬೆಳೆದ ತತ್ವ ದರ್ಶನದ ಆಂದೋಲನದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ರಂಗಗಳಲ್ಲಿ ಏಕಪ್ರಕಾರವಾಗಿ ನಡೆದ ಕ್ರಾಂತಿಕಾರಕ ಪ್ರಯೋಗ ಪ್ರಸಾರಕ್ಕೊಂದು ವೈಶಿಷ್ಟ್ಯಪೂರ್ಣ ಸ್ಥಾನವಿದೆ. ಈ ಅವಧಿಯಲ್ಲಿ ಕಾಯಕ ನಿಷ್ಠವಾದ ಹೊಸದೊಂದು ತತ್ವ ದರ್ಶನದಲ್ಲಿ ಭರವಸೆಯುಳ್ಳ ಶಿವಶರಣ-ಶರಣೆಯರದೊಂದು ಅಪೂರ್ವ ಸಂಘಟನೆ ರೂಪುಗೊಂಡಿತು. ಹತ್ತೂಕಡೆಯ ಮೈ-ಮನಗಳು ಅದರಲ್ಲಿ ಕೂಡಿದವು; ಏಕನಾಡಿಯಾಗಿ ಮಿಡಿದವು, ಏಕ ನಿಷ್ಠೆಯಿಂದ ದುಡಿದವು. ಕಲ್ಯಾಣವನ್ನು ಕೇಂದ್ರ ಮಾಡಿಕೊಂಡ ಈ ದಾರ್ಶನಿಕ ಕ್ರಾಂತಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹರಡಿತು. ಕಲ್ಯಾಣದ ಅನುಭವ ಮಂಟಪವು ಬಸವಾದಿ ಶರಣ-ಶರಣೆಯರ ಅನುಭಾವಗೋಷ್ಠಿಗಳ ವೇದಿಕೆಯಾಗಿತ್ತು. ಅನುಭವ ಮಂಟಪ ಜಾತಿ, ಲಿಂಗ, ಭಾಷೆ, ದೇಶಗಳ ಗಡಿಯನ್ನು ಮೀರಿದ್ದು. ಬಸವಾದಿ ಶರಣ-ಶರಣೆಯರು ಅನುಭವ ಮಂಟಪದ ಮುಖಾಂತರ ಆತ್ಮವಿಕಾಸದ ದಾರಿಯನ್ನು ಕಂಡುಕೊAಡರು. ಆದ್ದರಿಂದ ಅವರ ಪಾಲಿಗೆ ಕಲ್ಯಾಣ ಕೈಲಾಸವಾಗಿತ್ತು.

ಕಲ್ಯಾಣ ಎನ್ನುವುದೇ ಒಂದು ಪ್ರಣತಿ. ಭಕ್ತಿರಸವೇ ತೈಲ. ಆಚಾರವೇ ಬತ್ತಿ. ಬಸವಣ್ಣನೇ ಜ್ಯೋತಿ. ಆ ಜ್ಯೋತಿಯ ಬೆಳಕಿನಲ್ಲಿ ಅಸಂಖ್ಯಾತ ಶರಣರು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡರು. ಅವರು ನುಡಿದಂತೆ ನಡೆದರು.

ಮಿಂದಿತ್ತು ಕಲ್ಯಾಣ ಭವದಲ್ಲಿ ಭಯವಿಲ್ಲದೆ
ಸಂದಿತ್ತು ಕಲ್ಯಾಣ ನೀ ಸಂದಲ್ಲಿ ಬಸವಣ್ಣ.....
ಕಲ್ಯಾಣವಾಳಲು ಪ್ರಭು ಬಿಜ್ಜಳ ಬೇಕೆ? ಪ್ರತಿ ಪ್ರಜೆ
ಪ್ರಜೆ ಪ್ರಾಣ ಪ್ರಭು ನಾಡ ಪ್ರಭು ಅಲ್ಲನು ಪ್ರಭು
ಎನಿಸಿದ್ದು ಕಲ್ಯಾಣದಿಂದ ಬಸವಣ್ಣ. ಪ್ರಭು ಮಹದೇವ
ಭೂಪಾಲ ಮಾರಯ್ಯನಾದದ್ದು ಶರಣ ಸಾಕ್ಷಿ. ಮಹದೇವಿ.....|| (280)

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಯಾರೇ ತಪ್ಪು ಮಾಡಿದರೂ ಪ್ರಶ್ನಿಸುವ ನೈತಿಕತೆ ಹೊಂದಿದ್ದರು. ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುದೇವರ ಪ್ರಸಂಗ ಇದಕ್ಕೆ ಸಾಕ್ಷಿ. ಅಂದಿನ ಶರಣರ ಹಾಗೆ ಆಚಾರನಿಷ್ಠೆಯನ್ನು ಬೆಳೆಸಿಕೊಂಡರೆ ದೇಶದಲ್ಲಿ ರುವ ಎಲ್ಲ ಅನಿಷ್ಟಗಳನ್ನು ತೊಡೆದುಹಾಕಲು ಸಾಧ್ಯವಿದೆ. ಆಗ ಕಲ್ಯಾಣ ರಾಜ್ಯ ನಿರ್ಮಾಣವಾಗುವುದು. ಇಲ್ಲವಾದರೆ ಕಟುಕರ-ಭ್ರಷ್ಟರ ರಾಜ್ಯವಾಗುವುದು. ನಮ್ಮ ಬದುಕು ಸಾರ್ಥಕವಾಗಲು ಮತ್ತು ಕಲ್ಯಾಣರಾಜ್ಯ ನೆಲೆಗೊಳ್ಳಲು ಪಂಚಾಚಾರಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅನುಷ್ಠಾನದಲ್ಲಿ ತರುವ ಸಂಕಲ್ಪ ಮಾಡಬೇಕು. ಕಾಶ್ಮೀರದಲ್ಲಿ ರಾಜನಾಗಿದ್ದ ಮಹಾದೇವ ಭೂಪಾಲ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿದು ಮಾರುವ ಕಾಯಕ ಸ್ವೀಕರಿಸಿ ಮೋಳಿಗೆ ಮಾರಯ್ಯನಾಗಿದ್ದು ಸಾಮಾನ್ಯ ಸಂಗತಿಯಲ್ಲ.

ಹನ್ನೆರಡನೆಯ ಶತಮಾನದ ಶರಣರು ಅರಿವು ಮತ್ತು ಆಚಾರಗಳನ್ನು ಒಂದಾಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡವರು. ಶರಣರು ವಚನಗಳನ್ನು ರಚಿಸಿ ಅದರ ಮೂಲಕ ಜನಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ವಿಯಾದರು.

ಬಸವ ಬೆಳವಿದ ಭಕ್ತಿ ಬಸವ ಬೆಳಗಿದ ಶಕ್ತಿ ಶರಣ
ಬಸವ ಬದುಕಿನ ದೇಹ ಬಸವ ಬದುಕಿನ ಗೇಹ ವಚನ
ಉಳಿಸಬೇಕು ಉಳಿಯಬೇಕು ಲೋಕ ಲೇಸಿಗೆ; ಉಳವಿ
ಗಾಗಿ ಮತ್ತೆ ಬೆಳವಿಗಾಗಿ ಕೈಯೆತ್ತಿ ಮನವೆತ್ತಿ ಒಲವೆತ್ತಿ
ಬಲವೆತ್ತಿ ಛಲವೆತ್ತಿ ಮುಂಗರೆದು, ಕನ್ನಡ ರಾಜ ಕದಂಬ
ರಾಜ ಶರಣ ಸಾಲ ಬಸವ ಲೋಲ, ಸಕಲ ರಾಜ ಗೌರವ.....|| (335)

ವಚನ ಸಾಹಿತ್ಯವನ್ನು ರಕ್ಷಿಸುವಲ್ಲಿ ಅಕ್ಕನಾಗಮ್ಮನ ಪಾತ್ರ ಪ್ರಮುಖವಾಗಿದೆ. ಅವಳು ರಕ್ಷಿಸಿದ ವಚನಗಳು ಕನ್ನಡ ಸಾಹಿತ್ಯದ ನಿಧಿಯೇ ಆಗಿವೆ. ಬಸವಣ್ಣನವರ ತತ್ವಗಳನ್ನು ಅನುಸರಿಸುವಲ್ಲಿ ಅಕ್ಕನಾಗಮ್ಮನದೂ ಮಹತ್ವದ ಪಾತ್ರವಿದೆ. ಅವಳು ತನ್ನ ಸಹೋದರ ಬಸವಣ್ಣನ ಬೆನ್ನು ಹಿಡಿದೇ ಕಲ್ಯಾಣಕ್ಕೆ ನಡೆದು ಬಂದವಳು. ವಚನಕಾರರು, ಶರಣರು ಬೇರೆ ಬೇರೆಯಲ್ಲ. ಆದ್ದರಿಂದ ಶರಣರು ಎಂದರೆ ವಚನಕಾರರು ಎಂದೇ ಅರ್ಥೈಸಿಕೊಳ್ಳಬೇಕು. ವಚನಕಾರರಲ್ಲಿದ್ದುದು ಕೇವಲ ವಿಚಾರವಲ್ಲ; ವಿಚಾರಕ್ಕೆ ತಕ್ಕ ಆಚಾರ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯ ಮಹತ್ವಪೂರ್ಣವಾದ ಸ್ಥಾನವನ್ನು ಪಡೆದಿದೆ.

ಅಕ್ಕನಾಗಮ್ಮ ತಾಯಿ ಲೋಕ ಎದುರು ಶರಣ ಬಾಳು
ಪಕ್ಕು ಫಲಿತ ಜೀವ ರಸದ ವಾಸನೆ ಹಣ್ಣ ಬಣ್ಣ ಬೀಜ
ಬಲಿತು ನಾಂಟು ಸತ್ವ ನೆಲದಲಿ. ತತ್ವ ಸಾರುವಂತೆ
ಅಗಲ ಮೊಗದ ತುಂಬ ಅರಳು ನಗು, ನೆರೆದ ವಿಭೂತಿ
ನೊಸಲ ಬಿಂಬ, ಕಣ್ಣಾಗಸದಲಿ ಹೊಳೆವ ದಯೆ ಬೆಳಕು
ನಾಲಿಗೆ ಮೇಲೆ ನಲಿವ ವಚನ ಸಿರಿ, ಕೊರಳನೇರಿದ....|| (362)

ಅಕ್ಕನಾಗಮ್ಮನ ಜೀವನದೃಷ್ಟಿ ಅದ್ಭುತವಾದುದು. ಅವಳ ವೈಚಾರಿಕ ನಿಲುವು, ಬಂಡಾಯ ಮನೋಭಾವ, ಸ್ತ್ರೀವಾದಿ ನೆಲೆಗಳು ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಅನುಭವ ಮಂಟಪ ಮತ್ತು ವಚನ ಚಳವಳಿಯ ಪರಿಣಾಮವಾಗಿ ಅನೇಕ ಮಹಿಳೆಯರು ಅಡುಗೆ ಮನೆಯಿಂದ ಅನುಭವ ಮಂಟಪಕ್ಕೆ ಬರಲು, ಸಮಾಜದಲ್ಲಿ ತಲೆ ಎತ್ತಿ ಬದುಕಲು, ಪುರುಷ ತಪ್ಪು ಮಾಡಿದಾಗ ತಿದ್ದಿ ಹೇಳಲು ಸಾಧ್ಯವಾಯಿತು. ಅಂಥವರಲ್ಲಿ ಎದ್ದು ತೋರುವ ವ್ಯಕ್ತಿತ್ವ ಅಕ್ಕನಾಗಮ್ಮನದು.

‘ಅರಿವೇ ಪ್ರಮಾಣು’ ನಂದೂರ ಅವರ ಕಾವ್ಯ ಒಂದು ಚಿಂತನ ಪರಂಪರೆಯಲ್ಲಿ, ಒಂದು ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದಿದೆ. ನಂದೂರರ ಈ ಕೃತಿ ನನಗೆ ಅಧಿಕ ಸಂತೋಷವನ್ನು ಕೊಟ್ಟಿದೆ. ಪ್ರಸಿದ್ಧ ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಹೇಳಿದಂತೆ ‘ಗಿಡಕ್ಕೆ ಎಲೆ ಬರುವಷ್ಟು ಸಹಜವಾಗಿ ಕಾವ್ಯ ಬರಬೇಕು; ಇಲ್ಲವಾದರೆ ಬರುವುದೇ ಬೇಡ’ ಎಂದು. ಮಹಾಂತಪ್ಪ ನಂದೂರರ ಈ ಸಾನೆಟ್‌ಗಳಲ್ಲಿ ಕಾವ್ಯ ಅಷ್ಟೇ ಸಹಜವಾಗಿ ರೂಪ ತಾಳಿದಂತೆ ಭಾಸವಾಗುತ್ತದೆ. ಆದರೆ ಇದರ ಹಿಂದೆ ಕವಿಯ ಸುಮಾರು ಹತ್ತು ವರ್ಷಗಳ ಶ್ರದ್ಧಾವಂತ ಅಭ್ಯಾಸವಿದೆ, ಪ್ರಯೋಗವಿದೆ ಮತ್ತು ಯಶಸ್ವಿ ಕಾವ್ಯರಚನೆ ಇದೆ. ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಕಾವ್ಯ ಹೊಸ ದಾರಿಯತ್ತ ಬೆರಳು ಮಾಡಿ ತೋರುವ ಕೃತಿಗಳೇ ಹೆಚ್ಚು ಬಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಮಹತ್ವದ ಕವಿ ಯಾರೂ ಮೂಡಿ ಬಂದಿಲ್ಲ. ಹೊಸ ಸಾಧ್ಯತೆಯನ್ನು ಸೂಚಿಸುವ, ಜೊತೆಗೆ ಓದುಗನಿಗೆ ಆಹ್ವಾನವಾಗುವ ಕಾವ್ಯ ಇಲ್ಲಿದೆ. ಭಾಷೆ ಸರಳ, ಛಂದಸ್ಸು ಪ್ರಯೋಗ ವೈವಿಧ್ಯದಿಂದ ಕೂಡಿದೆ.

ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಕುರಿತು ಇದುವರೆಗೂ ಬಂದಿರುವ ಕೃತಿಗಳಿಗೆ ಲೆಕ್ಕವಿಲ್ಲ. ಕಥೆ -ಕಾದಂಬರಿಯಿಂದ ಹಿಡಿದು ಪಾಂಡಿತ್ಯ ಪೂರ್ಣವಾದ ಅಧ್ಯಯನ ಗ್ರಂಥಗಳವರೆಗೆ ವಿವಿಧ ಬಗೆಯ ವಿಶ್ಲೇಷಣೆಗಳು ಅಧಿಕ ಸಂಖ್ಯೆಯಲ್ಲಿ ಬಂದಿವೆ. ಬಸವಣ್ಣನ ವಿದ್ಯಾಭ್ಯಾಸದ ಸಂಗತಿಗಳಿಂದ ಹಿಡಿದು ಕಲ್ಯಾಣ ಕ್ರಾಂತಿಯವರೆಗೆ ಅನೇಕ ಲೇಖಕರು ಈಗಾಗಲೇ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಆದರೆ ಬಸವಣ್ಣನ ಸಹೋದರಿ ಅಕ್ಕನಾಗಮ್ಮನ ಜೀವಿತದ ಕುರಿತು ಯಾವುದೇ ಗಮನಾರ್ಹ ಕೃತಿಗಳು ಪ್ರತ್ಯೇಕವಾಗಿ ಇದುವರೆಗೂ ಬಂದಿಲ್ಲ. ಈ ಕೊರತೆಯನ್ನು ಮಹಾಂತಪ್ಪ ನಂದೂರರು ಈಗ ನಿವಾರಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಅಕ್ಕನಾಗಮ್ಮನ ಬದುಕಿನ ಹಲವು ಸಂದರ್ಭಗಳನ್ನು ನೂತನ ದಿಸೆಯಲ್ಲಿ ವೈಚಾರಿಕ ನೆಲೆಗಟ್ಟಿನ ಮೇಲೆ ಇಲ್ಲಿ ವಿಚಾರಿಸಿ ಸುನೀತಗಳನ್ನು ರಚಿಸಲಾಗಿದೆ. ಬರವಣ ಗೆ ಕುತೂಹಲಕರವಾಗಿದೆ. ಆಲೋಚನಾ ಸರಣ ಓದುಗರಿಗೆ ಬೆರಗುಗೊಳಿಸುತ್ತದೆ. ಮುತ್ತಬ್ಬೆ, ಮಾದರಸ, ಮಾದಲಾಂಬೆ, ಬಸವಣ್ಣ, ಶಿವದೇವ, ಅಲ್ಲಮಪ್ರಭು, ನೀಲಾಂಬಿಕೆ, ಗಂಗಾಂಬಿಕೆ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಮಾಚಿದೇವ, ಹರಳಯ್ಯ, ಲಕ್ಕಮ್ಮ, ಸಂಕವ್ವೆ, ಜಡೆಸಿದ್ಧ, ಕೇತಣ್ಣ-ಮುಂತಾದವರನ್ನು ಹೊಸ ರೀತಿಯಲ್ಲಿ ನೋಡುವ ಪ್ರಯತ್ನ ನಡೆದಿದೆ. ಅಭಿವ್ಯಕ್ತಿಯ ವಿಧಾನ ಆಶ್ಚರ್ಯ ಹುಟ್ಟಿಸುತ್ತದೆ; ಮರುಚಿಂತನೆಗೆ ಪ್ರೇರೇಪಿಸುತ್ತದೆ. ಅಕ್ಕನಾಗಮ್ಮನ ವೈಚಾರಿಕ-ಸಾಮಾಜಿಕ ಜೀವನದ ವಿಚಾರಗಳ ವಿಶೇಷತೆಯನ್ನು ಗುರುತಿಸುವಲ್ಲಿ ಮಹಾಂತಪ್ಪ ನಂದೂರ ಸಾಕಷ್ಟು ಯಶಸ್ವಿಯಾಗಿದ್ದಾರೆ. ಅಕ್ಕನಾಗಮ್ಮನ ಹಲವು ಎತ್ತರಗಳು ಚೆನ್ನಾಗಿವೆ. ಅನ್ಯಾಯ, ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ, ಶೋಷಣೆಯ ವಿರುದ್ಧ ಬಸವಾದಿ ಶರಣರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುತ್ತ, ಬಸವಾದಿ ಶರಣರೊಂದಿಗೆ ಪ್ರತಿಭಟಿಸಿ ಅಪೂರ್ವ ವ್ಯಕ್ತಿಯಾಗಿ ಬೆಳಗಿದ ಅಕ್ಕನಾಗಮ್ಮನ ಜೀವನಾನುಭವದ ಮುಖ್ಯ ಅಂಶಗಳನ್ನು ಈ ಕೃತಿ ಆಕರ್ಷಕವಾಗಿ ಕಟ್ಟಿಕೊಡುತ್ತದೆ.

ಮಹಾಂತಪ್ಪ ನಂದೂರ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
“ಅರಿವೇ ಪ್ರಮಾಣು’ ಕರತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..
ಸಿ.ಎಸ್. ಭೀಮರಾಯ ಅವರ ಪರಿಚಯ ಇಲ್ಲಿದೆ..

 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...