ಜವಾಬ್ದಾರಿ ಹೊರಬೇಕಾದ ʼಅಪ್ಪʼ ಕೃತಿಯಲ್ಲಿ ಕಣ್ಮರೆಯಾಗಿದ್ದಾನೆ : ಅಗ್ರಹಾರ ಕೃಷ್ಣಮೂರ್ತಿ  


'ಅಪ್ಪ ಕಾಣೆಯಾಗಿದ್ದಾನೆ' ಎಂಬ ಶೀರ್ಷಿಕೆಯೇ ಒಂಬತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯೂ ಆಗಿದೆ. ಆ ಬಾಲಕನ ಬಾಯಲ್ಲಿ ಬರುವ ಮಾತು ಸಂಕಲನದ ಕತೆಗಳಲ್ಲಿ ಗುಪ್ತವಾಗಿ ಅಣುರಣಿಸುತ್ತದೆ. ಒಂದೆರಡು ಅಪವಾದಗಳಿದ್ದರೂ ಸಂಕಲನದ ಬಹುತೇಕ ಕಥೆಗಳಲ್ಲಿ ಗಂಡ, ಅಪ್ಪ, ಮಗ ಮುಂತಾಗಿ ಕರೆಯಲಾಗುವ 'ಪುರುಷ' ಕುಲವೇ ಕಣ್ಮರೆಯಾಗಿದೆ' ಎನ್ನುತ್ತಾರೆ ಲೇಖಕ ಅಗ್ರಹಾರ ಕೃಷ್ಣಮೂರ್ತಿ . ಅವರು ಬೇಲೂರು ರಘುನಂದನ್ ಅವರ ಅಪ್ಪ ಕಾಣೆಯಾಗಿದ್ದಾನೆ ಕಥಾ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕವಿ ಮತ್ತು ನಾಟಕಕಾರರಾಗಿ ಈಗಾಗಲೆ ಗಮನಾರ್ಹರಾಗಿರುವ ಬೇಲೂರು ರಘುನಂದನ್ ತಮ್ಮ ಕಥೆಗಳ ಮೊದಲ ಸಂಕಲನವನ್ನು ಓದುಗರ ಮುಂದಿಟ್ಟಿದ್ದಾರೆ. ಇಲ್ಲಿನ 'ಅಪ್ಪ ಕಾಣೆಯಾಗಿದ್ದಾನೆ,' ಕಥೆಯಲ್ಲಿ ಬಡತನದ ಕೂಡು ಕುಟುಂಬವೊಂದು ವಿಘಟಿತವಾಗಿದೆ. ವರ್ಷಕ್ಕೊಮ್ಮೆ ಮರ‍್ನಾಮಿ ಹಬ್ಬವನ್ನು ಅಣ್ಣತಮ್ಮಂದಿರ ಕುಟುಂಬಗಳೆಲ್ಲ ಒಟ್ಟಿಗೆ ಸೇರಿ, ಖರ್ಚುವೆಚ್ಚವನ್ನು ಹಂಚಿಕೊಂಡು ಆಚರಿಸುವುದು ರೂಢಿ. ಅದರ ಜವಾಬ್ದಾರಿ ಹಿರಿಸೊಸೆ ಸೀತಕ್ಕಳ ಮೇಲೆ ಬಿದ್ದಿದೆ. ಆದರೆ ಇಬ್ಬರು ಮಕ್ಕಳಿರುವ ಅವಳಿಗೆ ಊಟಕ್ಕೂ ಗತಿಯಿಲ್ಲ. ಮಕ್ಕಳ ಅಪ್ಪನ ಹೆಸರು ರಾಮಯ್ಯ, ರಾಮಯ್ಯ ಬೇಜವಾಬ್ದಾರಿ ಅಪ್ಪ ಮತ್ತು ಗಂಡ. ಅವನು ಇಲ್ಲಿ ಕಾಣೆಯಾಗಿದ್ದಾನೆ. ಇವರ ಸಂಸಾರದ ಭಾಗಕ್ಕೆ ದಕ್ಕಿರುವುದು ನೂರು ವರ್ಷಗಳಿಂದಲೂ ಬಳಕೆಯಲ್ಲಿರುವ ನೀರು ಕಾಯಿಸೊ ಮಣ್ಣಿನ ಗುಡಾಣವೊಂದೇ. ಸೀತಕ್ಕ ಅದರ ಜೊತೆಯೇ ಮಾತಾಡುತ್ತ ತನ್ನ ದುಃಖ ತೋಡಿಕೊಳ್ಳುತ್ತಾಳೆ. ಸೀತಕ್ಕಳಿಗೆ ತವರುಮನೆಯ ತಾಯಿಯ ಬೆಂಬಲವಿದ್ದರೂ ಅಣ್ಣಂದಿರ ಸಹಾನುಭೂತಿಯಿಲ್ಲ. ಅವರು ತಮ್ಮ ಹೆಂಡತಿಯರ ಕೈಗೊಂಬೆಗಳು. ಇಲ್ಲಿನ ಮಣ್ಣಿನ ಗುಡಾಣ, ಸೀತಕ್ಕ-ರಾಮಯ್ಯ ಇವೆಲ್ಲವನ್ನೂ ಸಂಕೇತಗಳನ್ನಾಗಿಯೂ, ಪುರಾಣಾನ್ವರ್ಥಕಗಳನ್ನಾಗಿಯೂ ಪರಿಭಾವಿಸಬಹುದು. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಬಡ ಕುಟುಂಬದ ಜವಾಬ್ದಾರಿ ಹೊರಬೇಕಾಗಿದ್ದ ವ್ಯಕ್ತಿ ನಾಪತ್ತೆಯಾಗಿರುವುದು. ಕತೆಯಲ್ಲಿ ಬರುವ ಬಾಲಕನ ಬಾಯಲ್ಲಿ 'ಅಪ್ಪ ಕಾಣೆಯಾಗಿದ್ದಾನೆ' ಎಂಬ ಮಾತು ಎರಡು ಮೂರು ಸಲ ಬಂದುಹೋಗುತ್ತದೆ.

ಮೇಲಿನ ಕತೆಯ 'ಅಪ್ಪ ಕಾಣೆಯಾಗಿದ್ದಾನೆ' ಎಂಬ ಶೀರ್ಷಿಕೆಯೇ ಒಂಬತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯೂ ಆಗಿದೆ. ಆ ಬಾಲಕನ ಬಾಯಲ್ಲಿ ಬರುವ ಮಾತು ಸಂಕಲನದ ಕತೆಗಳಲ್ಲಿ ಗುಪ್ತವಾಗಿ ಅಣುರಣಿಸುತ್ತದೆ. ಒಂದೆರಡು ಅಪವಾದಗಳಿದ್ದರೂ ಸಂಕಲನದ ಬಹುತೇಕ ಕಥೆಗಳಲ್ಲಿ ಗಂಡ, ಅಪ್ಪ, ಮಗ ಮುಂತಾಗಿ ಕರೆಯಲಾಗುವ 'ಪುರುಷ' ಕುಲವೇ ಕಣ್ಮರೆಯಾಗಿದೆ. ಕಥಾ ನಿರೂಪಣೆಯಲ್ಲಿ ಈ ಅದೃಶ್ಯ ಪುರುಷ ಕ್ವಚಿತ್ತಾಗಿ ಕಾಣಿಸಿಕೊಂಡರೂ ನಾಪತ್ತೆಯಾಗಿರುತ್ತಾನೆ ಅಥವಾ ಹಿನ್ನೆಲೆಗೆ ಸರಿದಿರುತ್ತಾನೆ. ಈ ದೃಷ್ಟಿಯಿಂದ ಬೇಲೂರು ರಘುನಂದನ್ ಅವರ ಪ್ರಸ್ತುತ ಸಂಕಲನದ ಕಥೆಗಳನ್ನು ಸ್ತ್ರೀ ಕೇಂದ್ರಿತ ಕಥೆಗಳೆಂದೇ ಕರೆಯಬಹುದು. ಅಮ್ಮಯ್ಯಳ ಗಂಡ ಈ ರತ್ನಳ ಮಗಳು ಸುಂದರಿಯ ಜೊತೆ ಓಡಿಹೋಗಿ ಅಮ್ಮಯ್ಯಳ ಪಾಲಿಗೆ ಕಾಣೆಯಾಗಿದ್ದಾನೆ. ಈರ ಮತ್ತು ಸುಂದರಿ ಬೇರೆ ಊರಿನ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಾ ವಾಸ ಮಾಡುತ್ತಿರುವ ಸಮಾಚಾರ ಸಿಕ್ಕರೂ ತನ್ನ ಬೇಜವಾಬ್ದಾರಿ ಗಂಡನನ್ನು ಹುಡುಕುವ ಗೋಜಿಗೂ ಹೋಗದ ದಿಟ್ಟೆ ಇಲ್ಲಿನ ಅಮ್ಮಯ್ಯ. ಜಗತ್ತನ್ನೇ ರಕ್ಷಿಸುವ ದೇವಿ ಲೋಕದಮ್ಮನನ್ನು ಹಿಗ್ಗಾಮುಗ್ಗಾ ಬೈಯ್ಯುವ ಧೈರ್ಯಗಾತಿ ಅಮ್ಮಯ್ಯಳ ಮನಸ್ಸನ್ನು ಮೂರ್ತಿಯೆಂಬ ಚಿಕ್ಕ ಬಾಲಕನ ಮಾತುಗಳು ತಟ್ಟಿಬಿಡುತ್ತವೆ. ಏಡಿ ಹಿಡಿಯುವುದರಲ್ಲಿ ನಿಸ್ಸೀಮೆಯಾದ ಅವಳು ಅವರಿವರಿಗೆ ಏಡಿ ಹಿಡಿದುಕೊಟ್ಟು ಪುಡಿಗಾಸು ಸಂಪಾದಿಸಿ, ಕೂಲಿನಾಲಿ ಮಾಡಿ ತನ್ನ ನಾಲ್ಕನೇ ಕ್ಲಾಸಿನ ಮಗನನ್ನು ಸಾಕುತ್ತಾ ಜೀವನ ಕಟ್ಟಿಕೊಳ್ಳುವ ಹೊಲಗೇರಿಯ ಹೆಂಗಸು ಏಡಿ ಅಮ್ಮಯ್ಯ ('ಏಡಿ ಅಮ್ಮಯ್ಯ') ನಿಸರ್ಗದ ರೂಕ್ಷತೆಯ ಮುಂದೆ ಅಸಹಾಯಕಳಾಗಿಬಿಡುತ್ತಾಳೆ. ಕಿಟ್ಟಿಯೆಂಬ ಬಾಲಕನ ದೃಷ್ಟಿಯಲ್ಲಿ ಚಿತ್ರಿತವಾಗುವ ಕಾಡು ಹಣ್ಣುಗಳನ್ನು ಮಾರಿ ಜೀವಿಸುವ ರಂಗಿ ಹಿಂದೆ ಮುಂದೆ ಯಾರೂ ಇಲ್ಲದವಳು. ಹಳ್ಳಿಯಲ್ಲಿ ಕಾಡು ಹಣ್ಣುಗಳನ್ನು ಮಾರುತ್ತಿದ್ದ ರಂಗಿ ನಗರದ ಸಂಪರ್ಕದಿಂದ ಸೇಬು ಹಣ್ಣನ್ನು ಮಾರುವವಳಾಗಿ, ಕ್ರಮೇಣ ತನ್ನ ಎಂದಿನ ವರ್ತನೆ ಸ್ವಭಾವಗಳಲ್ಲಿ ಬದಲಾಗುತ್ತಾ ಹೋಗುತ್ತಾಳೆ. ಸೇಬು ಮತ್ತು ಕಾಡು ಹಣ್ಣುಗಳ ಭಿನ್ನತೆಯಲ್ಲಿ ನಗರ ಮತ್ತು ಹಳ್ಳಿಯ ಭಿನ್ನತೆಯನ್ನೂ ವರ್ಗ ತಾರತಮ್ಯವನ್ನೂ ಕತೆಗಾರರು ಸೂಚಿಸುತ್ತಾರೆ. ರಂಗಿಯು ರಂಗು ಬದಲಾಯಿಸಿದ ಹಣ್ಣಿನಂತೆಯೂ, ಹೆಣ್ಣಿನಂತೆಯೂ ಸೂಚಿತವಾಗುವ ಮೂಲಕ ಬಾಲ್ಯದ ನೆನಪು ಮತ್ತು ಬದಲಾವಣೆಯ ಗತಿಯನ್ನು ಈ ಕತೆ ('ರಂಗಿ') ಗುರುತಿಸುತ್ತದೆ.

ಮತ್ತೊಬ್ಬ ನಾಯಕಿ ಭಾರತಿ ಮಧ್ಯವಯಸ್ಸಿನ ಓರ್ವ ವಿಚ್ಛೇದಿತ ಮಹಿಳೆ. ಆ 'ಎಕ್ಸ್ ಹಸ್ಬೆಂಡ್'ನಿಂದ ಒಬ್ಬ ಮಗನನ್ನೂ ಪಡೆದಿದ್ದಾಳೆ. ಈಗ ಅವಳಿಗೆ ತನಗಿಂತ ಹನ್ನೆರಡು ವರ್ಷ ಕಿರಿಯನಾದ ಒಬ್ಬ ಪ್ರಿಯಕರ ಸಿಕ್ಕಿದ್ದಾನೆ. ಅವಳಿಗೆ ಕಳೆದು ಹೋದ ಗಂಡ ಮತ್ತು ಬದುಕಿನ ಬಗೆಗೆ ದುಃಖ, ಹಳಹಳಿಕೆಗಳಿಲ್ಲ. ಪರಿತ್ಯಕ್ತೆಯೆಂಬ ಭಾವನೆ ಕಾಡುವುದಿಲ್ಲ. ಹೊಸ ತಲೆಮಾರಿನ ಕಾರ್ಪೋರೇಟ್ ವರ್ಗದ ದುಡಿಯುವ ಮಹಿಳೆಯರ ಪ್ರತಿನಿಧಿಯಂತಿದ್ದಾಳೆ. ಅವಳು ಪ್ರಿಯಕರ ರಕ್ಷಿತ್‌ನ ಜೊತೆಗಿನ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ತೀರ್ಮಾನವನ್ನು ತೆಗೆದುಕೊಂಡಿದ್ದಾಳೆ. ಅವಳಲ್ಲಿ ಯಾವ ಗೊಂದಲಗಳಿಲ್ಲ. ಇದು ('ಆಗಮನ') ಹೆಣ್ಣು-ಗಂಡು ಸಂಬಂಧದ ಒಂದು ಹ್ಯಾಪಿ ಸ್ಟೋರಿ! ಒಂಟಿ ಜೀವನದ ಮಂಗಳಮುಖಿ ಶಾಂಭವಿ ಗಂಡ, ಅಪ್ಪ, ಮಾವ ಎಲ್ಲರಿಂದ ದೂರವಾದವಳು ('ಭೇಟಿ').

ಈ ಮೇಲಿನ ಐದೂ ಕತೆಗಳನ್ನು ಒಂದು ರೀತಿಯಲ್ಲಿ ಪರಿತ್ಯೆಕ್ತೆಯರ ಪರಿವಾರವೆಂದೇ ಕರೆಯಬಹುದು. ಉಳಿದ ಕತೆಗಳಲ್ಲಿರುವ ಪುರುಷರು ಕೂಡ ಮುನ್ನೆಲೆಗೆ ಬರುವಂಥವರಲ್ಲ. 'ಸ್ಕೇರಿ ಹೌಸ್' ಕತೆಯ ದಂಪತಿಗಳು ತಮ್ಮ ಮಗನ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದರೂ ಪರಸ್ಪರ ಎಲ್ಲರೂ ಕಳೆದುಹೋಗಿದ್ದಾರೆ! ಎಲ್ಲರೂ ಇದ್ದರೂ ಯಾರಿಗೆ ಯಾರುಂಟು ಎನ್ನುವ ಪರಿಸ್ಥಿತಿ. ಗಂಡ ಹೆಂಡತಿ ಇಬ್ಬರೂ ಐಟಿಬಿಟಿಗಳಲ್ಲಿ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಕತೆ ಇದು. 'ಒಂದು ಮೂಟೆ ಅಕ್ಕಿ' ಎಂಬ ಕತೆಯಲ್ಲಿ ಮಗ ರಾಮನ್‌ಗಿಂತಲೂ ಹೆಚ್ಚು ಪ್ರಾಕ್ಟಿಕಲ್ಲಾಗಿರುವವರು ಅವನ ಹೆಂಡತಿ ಕೌಸಲ್ಯ ಮತ್ತು ತಾಯಿ ರುಕ್ಮಿಣಮ್ಮ. ಲಾಕ್ ಡೌನ್ ವಿಪತ್ತಿನ ಪರಿಸ್ಥಿತಿ ಹೇಗೆ ರಾಮನ್‌ಗಿಂತಲೂ ತೀವ್ರವಾಗಿ ಹೆಂಗಸರ ಸಾಂಪ್ರದಾಯಿಕ ಮನಸ್ಥಿತಿಗಳನ್ನು ಅಲುಗಾಡಿಸಿ ಸೌಹಾರ್ದತೆಯೆಡೆಗೆ ಒಯ್ಯಬಲ್ಲುದು ಎಂಬುದನ್ನು ನಿರೂಪಿಸುವ ಕತೆ. ಜವಾಬ್ದಾರಿ ಹೊರಬೇಕಾದ ಮನೆ ಮಗ ರಾಮನ್‌ಗೆ ತನ್ನ ಪ್ರತಿಷ್ಠೆ, ಸಾಮಾಜಿಕ ಆದರ್ಶವೇ ಮುಖ್ಯವಾಗುತ್ತದೆ. ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸುವ 'ಮುಲ್ಲಾ ಮತ್ತು ಪಾಂಡುರಂಗ' ಕತೆಯ ಬಷೀರ್ ಮುಲ್ಲಾ ಕೂಡ ಅಪಾರ ತಾಳ್ಮೆ ಮತ್ತು ಪೊರೆಯುವ ಗುಣವುಳ್ಳ ಹೆಂಗರುಳಿನಂಥ ವ್ಯಕ್ತಿಯಾಗಿಯೇ ರೂಪುಗೊಳ್ಳುತ್ತಾನೆ. ಸ್ವಧರ್ಮ ಮತ್ತು ಪರಧರ್ಮಗಳ ಬಗ್ಗೆ ಅತ್ಯಂತ ಉದಾತ್ತ ನಿಲುವನ್ನು ತೋರುತ್ತಾನೆ. 'ಗಿಡವೊಂದು ಮರವಾದ ಕಥೆ'ಯ ಸೀತೆಗೆ ಆಕೆಯ ಅಪ್ಪ ಶಿಕ್ಷಣ ಕೊಡಿಸುವಲ್ಲಿ ಕಾಳಜಿ ತೋರುತ್ತಾನೆ ನಿಜ. ಆದರೆ ಸೀತೆಗಿರುವ ಪರಿಸರ, ಮರಗಿಡಗಳ ಬಗೆಗಿನ ಪ್ರೀತಿಯ ವಿಷಯದಲ್ಲಿ ನಿರಾಶೆಯನ್ನುಂಟು ಮಾಡುವ ಅಪ್ಪನಾಗಿದ್ದಾನೆ.

ಮೇಲಿನ ಮಾತುಗಳಿಂದ ನಾನೊಬ್ಬ ಕೂದಲು ಸೀಳುವಂತೆ ಎಲ್ಲ ಕತೆಗಳಲ್ಲೂ 'ಅದೃಶ್ಯ ಪುರುಷರ'ನ್ನು ಹುಡುಕುತ್ತಿರುವ ಮನುಷ್ಯನೊ ಎಂಬಂತೆ ನಿಮಗೆ ಕಾಣಿಸಬಹುದು! ಅದಕ್ಕೆ ಕಾರಣ ಸಂಕಲನದ ಶೀರ್ಷಿಕೆಯ ಚೋದನೆ ಇದ್ದೀತು. ಆದರೆ ಕತೆಗಾರರು ಪ್ರಜ್ಞಾಪೂರ್ವಕವಾಗಿ ಅಂತಹ ಮಾರ್ಗ ಹಿಡಿದಿರಲಾರರು! ಈ ನೆಲೆಯಲ್ಲಿ ಇವರ ಕತೆಗಳಲ್ಲಿ ಸ್ತ್ರೀ ಸಂವೇದನೆ ಪ್ರಮುಖವಾಗಿದೆ ಎಂದು ಹೇಳುವುದು ನನ್ನ ಉದ್ದೇಶ.

ಮಾತು ಮುಗಿಸುವ ಮುನ್ನ ಇನ್ನೊಂದು ಅಂಶವನ್ನು ಕಾಣಿಸಬೇಕು. ರಘುನಂದನ್ ತಮ್ಮ ಪ್ರತಿಯೊಂದು ಕತೆಯಲ್ಲೂ ಸಾಕಷ್ಟು ಸಣ್ಣ ಸಣ್ಣ ವಿವರಗಳನ್ನು ಕೊಡುತ್ತಾರೆ. ಇದೊಂದು ವಿಶೇಷ ಗುಣ. ಕತೆಯ ಆವರಣ, ಪರಿಸರ, ಪಾತ್ರ ಚಿತ್ರಣಗಳನ್ನು ಕಟ್ಟಿಕೊಡಲು ಈ ವಿವರಗಳು ಸಮರ್ಥ ಪೋಷಕಾಂಶಗಳಂತೆ ಒದಗಿಬರುತ್ತವೆ. ಮೊದಲನೆಯ ಕತೆಯ ಮೊದಲ ಎರಡು ಪ್ಯಾರಗಳಲ್ಲೇ ಈ ವಿಶೇಷ ಗುಣವನ್ನು ಗುರುತಿಸಬಹುದು. ಮನೆಯ ಬಡತನವನ್ನು, ಒಳಾಂಗಣದ ವರ್ಣನೆಯನ್ನು ವಿವರಗಳು ಕಟ್ಟಿಕೊಡುತ್ತವೆ. ಮುಂದಿನ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಮಲೆನಾಡಿನ ಗುಡಿಸಲುಗಳು, ಹೊಲಗೇರಿಯ ಮನೆಗಳು, ಮಳೆ, ಏಡಿ ಅಮ್ಮಯ್ಯಳ ಕುಡಿತ, ಏಡಿ ಹಿಡಿಯುವುದು, ತೊಳೆಯುವುದು, ತಿನ್ನುವುದು ಇವನ್ನೆಲ್ಲ ಸೂಕ್ಷ್ಮ ಒಳವಿವರಗಳ ಮೂಲಕ ಚಿತ್ರಿಸುತ್ತಾರೆ. ಕತೆಯ ಪ್ರಾರಂಭದಿಂದ ಮುಕ್ತಾಯದವರೆಗೂ ಇರುವ ಮಳೆಯ ಚಿತ್ರಣ, ಕತೆ ಬೆಳೆದಂತೆ ಅದೊಂದು ದುರಂತವನ್ನು ಸೃಷ್ಟಿಮಾಡುತ್ತದೆಂಬ ಯಾವ ಸೂಚನೆಯನ್ನೂ ಕೊಡದೆ ರೂಕ್ಷತೆಯನ್ನು ತೋರಿಬಿಡುತ್ತದೆ. 'ಆಗಮನ' ಕತೆಯ ಮಳೆ ಮತ್ತು ಕಚೇರಿಯ ಗಾಜಿನ ಗೋಡೆಯ ಮೇಲೆ ಹರಿಯುವ ಮಳೆ ನೀರಿನ ವಿವರಗಳ ಮೂಲಕ ಕತೆಯ ನಾಯಕಿಯ ವ್ಯಕ್ತಿತ್ವವನ್ನು, ಅವಳ ಪಾರದರ್ಶಕ ಬದುಕಿನ ಅಭಿಲಾಶೆಯನ್ನು ಒಂದು ಸಮರ್ಥ ಪ್ರತಿಮೆಯನ್ನಾಗಿ ಕಟ್ಟಿಕೊಡುತ್ತದೆ. ಒಂದೇ ಒಂದು ಉದಾಹರಣೆ ಕೊಡಬಹುದಾದರೆ, "ಅದರ ಮೇಲೆ ಒಂದೇ ಒಂದು ಗುಂಗುರು ಹುಳು ಗುಯ್ ಗುಡುತ್ತಿತ್ತು. ಒರೆಸಿ ಎಸೆದ ಟಿಶ್ಯೂ ಪೇಪರ್ ನೆಲಕ್ಕೆ ಅಂಟಿಕೊಂಡಿತ್ತು" -ಇಂಥ ಅತಿಸೂಕ್ಷ್ಮ ವಿವರಗಳು ಈ ಕತೆಗಾರ ರೂಢಿಸಿಕೊಳ್ಳುತ್ತಿರುವ ನಿರೂಪಣಾ ಶೈಲಿಯ ಬಗ್ಗೆ ಮೆಚ್ಚುಗೆಯನ್ನೂ, ಹೆಚ್ಚಿನ ನಿರೀಕ್ಷೆಯನ್ನೂ ಮೂಡಿಸುತ್ತವೆ. ಈ ಗುಣದಿಂದಾಗಿ ದುರ್ಬಲ ಅನಿಸುವ ಒಂದೆರಡು ಕತೆಗಳೂ ಮೇಲೇರುವ ತವಕದಲ್ಲಿರುತ್ತವೆ. ಕತೆಗಳ ಲೋಕಕ್ಕೂ ಹೆಜ್ಜೆಯೂರುತ್ತಿರುವ ರಘುನಂದನ್ ಅವರನ್ನು ಓದುಗರು ಸ್ವಾಗತಿಸುವರೆಂಬ ನಂಬಿಕೆ ನನ್ನದು.

- ಅಗ್ರಹಾರ ಕೃಷ್ಣಮೂರ್ತಿ
ಅಗ್ರಹಾರ ಕೃಷ್ಣಮೂರ್ತಿ ಲೇಖಕ ಪರಿಚಯಕ್ಕಾಗಿ

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...