ಕಾದಂಬರಿಯಲ್ಲಿ ಯುದ್ಧದ ಭಾಷೆಯೆ ಹೆಚ್ಚು ಮಾತನಾಡಿದೆ


“ಮಯೂರ ತನ್ನ ಅಜ್ಜನಾದ ವೀರಶರ್ಮ ನ ಜೊತೆಗೆ ಕುಂತಳ ನಾಡಿನಿಂದ,ಪಲ್ಲವರ ಕಂಚಿ ನಾಡಿಗೆ ಹೆಚ್ಚಿನ ಅದ್ಯಯನ ಮಾಡಲು ಬಂದಾಗ ಆತನ ಅಪ್ರತಿಮ ಜಾಣತನ, ಕುಶಾಗ್ರಮತಿ,ಚಾಕಚಕ್ಯತೆಯು ಆತನಿಗೆ ಮುಳುವಾಗಿ ಪಲ್ಲವರ ಸಾಮ್ರಾಜ್ಯದಿಂದ ಹೊರಬರಬೇಕಾಯಿತು.ಈ ಸಂಗತಿ ಪಲ್ಲವ ಅರಸ ಶಿವಸ್ಕಂದವರ್ಮ ನಿಗೆ ತಿಳಿದಿತ್ತು,” ಎನ್ನುತ್ತಾರೆ ಲೇಖಕಿ ಡಾ.ಶೈಲಜಾ. ಅವರು ಸಂತೋಷ ಕುಮಾರ್ ಮೆಹಂದಳೆ ಅವರ ‘ವೈಜಯಂತಿಪುರ’ ಕೃತಿಗೆ ಬರೆದ ವಿಮರ್ಶೆ.

"ಕನ್ನಡದ ಮೊದಲ ಅರಸು ಮನೆತನವಾದ ಕದಂಬ ವಂಶದ ಅರಸ ಮಯೂರಶರ್ಮನ ವೀರೋಚಿತ ಬದುಕಿನ ಕಥಾವಸ್ತು ಒಳಗೊಂಡ ಕಾದಂಬರಿ ಇದಾಗಿದೆ. ಕೌಮುದೀಪುರ, ಚೈದಿಲಿಪುರ, ಜಯಂತಿಪುರ, ವನವಾಸಿ, ಬನವಾಸಿ ಆಗಿ ಹೆಸರು ಆದದ್ದು, ಮಯೂರ ವರ್ಮ ನಿಂದ ಮಯೂರಶರ್ಮ ಆದ ಬಗೆ ಈ ಎಲ್ಲದರ ಅಮೂಲಾಗ್ರ ಸಂಗತಿಗಳನ್ನು ಲೇಖಕರು ಸಮರ್ಪಕವಾಗಿ ಕಟ್ಟಿ ಕೊಟ್ಟಿದ್ದಾರೆ.

ಮಯೂರ ಎಂಬ ಬಾಲಕ ಕಂಚಿ ಪಟ್ಟಣಕ್ಕೆ ಶಿಕ್ಷಣ ಪಡೆಯಲು ಹೋಗಿ, ಅಲ್ಲಿ ಅವಮಾನಿತನಾಗಿ ಮರಳಿ ಬಂದು ಸೈನ್ಯ ಸಂಘಟನೆ ಮಾಡಿ, ಪಲ್ಲವರನ್ನು ಸೋಲಿಸಿ ಕನ್ನಡ ನೆಲದಲ್ಲಿ ಮೊದಲ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಪಡೆದ ಮಯೂರನ ಯಶೋಗಾಥೆಯ ಬದುಕನ್ನು ಮೂರುನೂರು ಪುಟ ಗಳಷ್ಟು ವಿಸ್ತರಿಸಿ ವರ್ಣಿಸಿದ ಪರಿ ನೋಡಿದರೆ ಲೇಖಕನ ಆಲೋಚನಾ ಕ್ರಮ, ವಿಷಯ ಸಂಗ್ರಹಣೆಯಲ್ಲಿ ಪಟ್ಟ ಪರಿಶ್ರಮ ಜೊತೆಗೆ ಕನ್ನಡದ ಅರಸು ಮನೆತನದ ಅಸ್ತಿತ್ವ, ಅಸ್ಮಿತೆಯ ಉಳಿಸುವಿಕೆಯ ಕಾಳಜಿ, ಕಕ್ಕುಲಾತಿ ಎದ್ದು ಕಾಣುತ್ತದೆ.

ಮಯೂರ ತನ್ನ ಅಜ್ಜನಾದ ವೀರಶರ್ಮ ನ ಜೊತೆಗೆ ಕುಂತಳ ನಾಡಿನಿಂದ, ಪಲ್ಲವರ ಕಂಚಿ ನಾಡಿಗೆ ಹೆಚ್ಚಿನ ಅದ್ಯಯನ ಮಾಡಲು ಬಂದಾಗ ಆತನ ಅಪ್ರತಿಮ ಜಾಣತನ, ಕುಶಾಗ್ರಮತಿ,ಚಾಕಚಕ್ಯತೆಯು ಆತನಿಗೆ ಮುಳುವಾಗಿ ಪಲ್ಲವರ ಸಾಮ್ರಾಜ್ಯದಿಂದ ಹೊರಬರಬೇಕಾಯಿತು. ಈ ಸಂಗತಿ ಪಲ್ಲವ ಅರಸ ಶಿವಸ್ಕಂದವರ್ಮ ನಿಗೆ ತಿಳಿದಿತ್ತು. ಆದರೆ ಅವನ ತೀವ್ರ ಬೆಳವಣಿಗೆ ಯಾರಿಗೂ ಸಹಿಸದಾಗದೆ ಹೊರಹಾಕುವುದೆ ಸರಿ ಎಂದು ಭಾವಿಸಿದ್ದರು. ಆದರೆ ಅಪಮಾನದ ಈ ಸಣ್ಣ ಕಿಡಿ ಮುಂದೆ ದೊಡ್ಡ ಜ್ವಾಲೆಯಾಗಿ ಪರಿಣಮಿಸುತ್ತದೆ ಎಂದು ಯಾರು ಭಾವಿಸಿರಲಿಲ್ಲ.

ಮಯೂರ ಅಲ್ಲಿಂದ ಮರಳಿ ಕುಂತಳ ನೆಲಕ್ಕೆ ಬಂದು ತಂದೆ ಬಂಧುಸೇನನ ನೆರವು, ಅಜ್ಜ ವೀರಶರ್ಮ ಅಮಾತ್ಯನ ಸ್ಥಾನದಲ್ಲಿ ನಿಂತು ಅನೇಕ ವನವಾಸಿಗಳ, ಕಾಡುಗೊಂಡರ,ಬುಡಕಟ್ಟು ಜನರ ನೆರವಿನಿಂದ ನೂರಕ್ಕೂ ಹೆಚ್ಚು ಸಾಮಂತರನ್ನು ಮಟ್ಟಹಾಕಿ, ಹನ್ನೆರಡು ಸಾವಿರ ಗ್ರಾಮಗಳನ್ನು ವಶಪಡಿಸಿಕೊಂಡ. ನಂತರ ತನ್ನ ಮೂಲ ಉದ್ದೇಶ ಪಲ್ಲವರ ನಿರ್ನಾಮ. ಅದರಂತೆ ಅವರ ಮೇಲೆ ಆಕ್ರಮಣ ಮಾಡಿದಾಗ ಪಲ್ಲವ ಅರಸ ಶಿವಸ್ಕಂದವರ್ಮ ಸೋತು ಶರಣಾಗತನಾದ. ಅವನ ವರ್ಮ ಎಂಬ ಅಂಕಿತ ತಾನು ಪಡೆದು ಮಯೂರಶರ್ಮ ಬದಲು ಮಯೂರವರ್ಮನಾದ. ತನಗಾದ ಅಪಮಾನಕ್ಕೆ ಪ್ರತಿಕಾರ ತೀರಿಸಿಕೊಂಡ. ಮುಂದೆ ಬನವಾಸಿ ಯನ್ನು ರಾಜಧಾನಿಯಾಗಿ ಮಾಡಿಕೊಂಡು ಅನೇಕ ಜನಪರ ಕಾರ್ಯ ಮಾಡಿ ಕುಂತಳ ನೆಲದಲ್ಲಿ ಮೊದಲ ಸಾಮ್ರಾಜ್ಯ ಕಟ್ಟಿದ ಕೀರ್ತಿ ಪಡೆದ. ಅಶ್ವಮೇಧ ಯಾಗ ಮಾಡಿದ, ಅಗ್ರಹಾರಕ್ಕೆ ಅವಕಾಶ ಕಲ್ಪಿಸಿದ, ಶಶಾಂಕಮುದ್ರೆ ಯನ್ನು ವರಿಸಿ ಕಂಗವರ್ಮ ಎಂಬ ಮಗನನ್ನು ಪಡೆದು ಸುಖಿ ಸಾಮ್ರಾಜ್ಯ ಸ್ಥಾಪಿಸಿದ. ಅಭೀರರು ಎಂಬ ಸಾಮಂತರ ಹುಟ್ಟಡಗಿಸಿ, ಭರತಖಂಡದ ಮದ್ಯ ಭಾಗವನ್ನು ಪೂರ್ಣವಾಗಿ ಆವರಿಸಿದ. ಉತ್ತರದಲ್ಲಿ ಗುಪ್ತರು ಇದ್ದರೆ ದಕ್ಷಿಣದಲ್ಲಿ ಪಲ್ಲವರು, ಮದ್ಯದಲ್ಲಿ ತನ್ನದೇ ಅಸ್ತಿತ್ವ ಅಸ್ಮಿತೆ ಹೊಂದಿದ ವಿಶಾಲ ಸಾಮ್ರಾಜ್ಯದ ಅಧಿಪತಿಯಾಗಿ ತನ್ನ 60 ನೇ ವರ್ಷದ ವರೆಗೆ ಆಳಿದ, ಜೊತೆಗೆ ಜನಹಿತಕಾರಿ ಕೆಲಸದ ಮೂಲಕ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡುವಂತೆ ಮಾಡಿದ ಮಯೂರ ವರ್ಮ.

ಇಡೀ ಕಾದಂಬರಿಯು ಅನೇಕ ಮುಲಾಧಾರಗಳ ಮೇಲೆ ರಚಿಸಿದ್ದು, ಪ್ರತಿಪುಟಕ್ಕು ಅಡಿ ಟಿಪ್ಪಣಿ ನೀಡಲಾಗಿದೆ. ಲೇಖಕರು ಕ್ಷೇತ್ರಕಾರ್ಯ ಹಾಗು ಮಾಹಿತಿ ಸಂಗ್ರಹಣೆಗೆ ಹೆಚ್ಚು ಶ್ರಮವಹಿಸಿದ್ದು ಎದ್ದು ಕಾಣುತ್ತದೆ. ಇತಿಹಾಸದ ಪಾತ್ರವನ್ನು ಕಾದಂಬರಿ ರೂಪದಲ್ಲಿ ತರುವಾಗ ಕಲ್ಪನೆ, ರಮ್ಯತೆ, ರೋಚಕತೆಗೆ ಹೆಚ್ಚು ಅವಕಾಶ ಇರುತ್ತದೆ. ಆದರೆ ಲೇಖಕರು ತಮಗೆ ದೊರೆತ ಆಧಾರದ ಮೇಲೆ ಕತೆ ಹೆಣೆದಿದ್ದು, ಹೆಚ್ಚಾಗಿ ಸೈನ್ಯ ಸಂಘಟನೆ ಮತ್ತು ಆಕ್ರಮಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಇಡೀ ಕಾದಂಬರಿಯು ಯುದ್ಧದ ವರ್ಣನೆ ಯಿಂದ ಕೂಡಿದ್ದು, ರಣತಂತ್ರ, ರಣರಂಗದಲ್ಲಿ ಮಯೂರನ ಆಕ್ರಮಣಕಾರಿ ನಿಲುವು, ವಿರೋಧಿ ಸೈನಿಕರ ರುಂಡ ಚಂಡಾಡುವ ಸನ್ನಿವೇಶಗಳೆ ಕೃತಿಯ ಉದ್ದಕ್ಕೂ ಕಾಣುವೆವು.ನಿರ್ದಯವಾಗಿ ಕೊಲ್ಲುವ, ರಕ್ತದ ಓಕುಳಿ ಆಡುವ ನರಹತ್ಯೆ ಬೆಚ್ಚಿಬೀಳಿಸುತ್ತದೆ. ರಕ್ತದ ರೊಣೆ ಮಯೂರನ ಅಲಗಿಗೆ ಮೆತ್ತಿದ್ದು ಪದೆ ಪದೆ ಓದಿದಾಗ ರೇಜಿಗೆ ಆಗದೆ ಇರದು.

ಕಾದಂಬರಿಯಲ್ಲಿ ಯುದ್ಧದ ಬಾಷೆಯೆ ಹೆಚ್ಚು ಮಾತನಾಡಿದೆ. ಕೂಚು ಹೊರಡುವುದು, ಧರಾಶಾಯಿ ಆಗುವುದು, ರುಂಡ ಮುಂಡಗಳ ಚೆಂಡಾಟ ಮಾಡುವ ವರ್ಣನೆ ಓದಿದರೆ ಇದು ಅನಿವಾರ್ಯವೇ ಎಂಬ ಪ್ರಶ್ನೆ ಕಾಡುತ್ತದೆ.

ಒಟ್ಟು ಕಾದಂಬರಿ ಒಬ್ಬ ವೈದಿಕ ಬಾಲಕನ ಸೇಡು, ಅದರ ಪರಿಣಾಮ, ಸಾಮ್ರಾಜ್ಯ ಸ್ಥಾಪನೆ ಮಾಡಿ ಕುಂತಳಕ್ಕೆ ಅಸ್ತಿತ್ವ ತಂದದ್ದು ಎಲ್ಲವೂ ಸರಿ. ಆದರೆ ಅದರ ಹಿಂದಿನ ಸಾವು ನೋವು ಕಂಡಾಗ ಮನಮಿಡಿಯುತ್ತದೆ.ಇತಿಹಾಸದ ಪುಟಗಳನ್ನು ತಿರುವಿದಾಗ ಎಲ್ಲವೂ ಹೀಗೆ, ಒಬ್ಬರನ್ನು ಮೆಟ್ಟಿ ಇನ್ನೊಬ್ಬರ ಆಳ್ವಿಕೆ. ಸೀಮೆ, ಗಡಿ ಗಳ ಲೆಕ್ಕಾಚಾರ, ಆದರೆ ಯಾವ ರೇಖೆಗಳು ಸೀಮೆಗಳು ಶಾಶ್ವತವಿಲ್ಲ.ಕೋಟೆ ಕಟ್ಟಿ ಮೆರೆದವರೆಲ್ಲಾ ಏನಾದರು.....

ಕನ್ನಡದಲ್ಲಿ ಅನೇಕ ಐತಿಹಾಸಿಕ ಕಾದಂಬರಿ ರಚನೆಯಾಗಿವೆ. ಅದರಲ್ಲು ವ್ಯಕ್ತಿ ಕೇಂದ್ರಿತ ಕೃತಿಗಳಾದ ತ.ರಾ.ಸು.ರವರ ದುರ್ಗಾಸ್ತಮಾನ, ಸಿ.ಕೆ.ನಾಗರಾಜರಾವ್ ಅವರ ಪಟ್ಟಮಹಾದೇವಿ ಶಾನ್ತಲೆ, ಮಾಸ್ತಿಯವರ ಚಿಕ್ಕವಿರರಾಜೇಂದ್ರ, ಎಸ್.ಎಲ್ ಭೈರಪ್ಪನವರ ಆವರಣ, ಇತ್ತೀಚೆಗೆ ಬಂದ ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಎಲ್ಲವೂ ಸ್ಮತಿಪಟಲದ ಮೇಲೆ ಅಚ್ಚಳಿಯದೆ ಮೂಡಿವೆ. ಅದೆ ಜಾಡಿನಲ್ಲಿ ವೈಜಯಂತಿಪುರ ಮೂಡಿಬಂದಿದೆ. ಆದರೂ ಕೂಡ, ಲೇಖಕ ಆಯ್ಕೆ ಮಾಡಿಕೊಂಡ ಪ್ರಕಾರ ಕಾದಂಬರಿ ಆದ ಕಾರಣ ಇನ್ನೂ ಏನೆಲ್ಲಾ ಹೇಳುವ ಅವಕಾಶವಿತ್ತು. ಕಾದಂಬರಿಗೆ ದೊಡ್ಡ ಕ್ಯಾನ್ವಾಸ್ ಇರುವುದರಿಂದ ಯುದ್ಧ, ಅದರ ಸಿದ್ಧತೆ, ರಣರಂಗದ ದೃಶ್ಯಗಳ ವೈಭವಿಕರಣದ ಆಚೆಯೂ ಮಯೂರ ಪಾತ್ರವನ್ನು ಬೆಳಸಬಹುದಿತ್ತು. ಇದೊಂದು ಸಂಶೋಧನಾ ಮಹಾಪ್ರಬಂಧದ ರೀತಿಯಲ್ಲಿ ಮೂಡಿಬಂದಿದೆ ಎಂಬುದು ನನ್ನ ಅನಿಸಿಕೆ. ಆದರೆ ಲೇಖಕನ ಇತಿಮಿತಿಯಲ್ಲಿ 17-18 ಶತಮಾನದ ಹಿಂದಿನ ಪಾತ್ರಕ್ಕೆ ಜೀವ ತುಂಬಿ ಕಾದಂಬರಿ ರಚಿಸುವುದು ಸಾಮಾನ್ಯ ಸಂಗತಿಯಲ್ಲ. ಆದರೆ ಕಾದಂಬರಿ ಒಂದೇ ಗುಕ್ಕಿನಲ್ಲಿ ಓದಿ ಅರಗಿಸಿಕೊಳ್ಳಲು ಕಷ್ಟ ಸಾಧ್ಯ. ಕಾರಣ ಸ್ಥಳನಾಮಗಳು, ಸಾಮಂತರ ಹೆಸರುಗಳು, ಯುದ್ಧದ ಸನ್ನಿವೇಶ ಎಲ್ಲವೂ ಬೇಗನೆ ದಕ್ಕುವುದಿಲ್ಲ. ಆದರೂ ಮೂರು ಸಾಲಿನ ಸಂಗತಿಗೆ ಮೂರುನೂರು ಪುಟದಷ್ಟು ಕತೆ ಹೆಣೆಯುವುದು ಸರಳವೇನಲ್ಲ. ಒಟ್ಟು ಅವರ ಬರವಣಿಗೆ ನಮ್ಮ ನೆಲದ ಇತಿಹಾಸದ ಮೇಲೆ ಪ್ರಾಮಾಣಿಕವಾಗಿ ಬೆಳಕು ಚೆಲ್ಲುವ ಕಾರ್ಯ ಮಾಡಿದೆ.

ಡಾ. ಶೈಲಜಾ

MORE FEATURES

ಪುಟ ತೆರೆದರೆ ಚೆಂದ ಚೆಂದದ ರೇಖಾಚಿತ್ರಗಳ ಅನಾವರಣ

29-12-2025 ಬೆಂಗಳೂರು

"ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇ...

ಈ ದೇಶದ ಮೂರನೆಯ ಒಂದು ಭಾಗ ಮಿಡಲ್ ಕ್ಲಾಸ್

29-12-2025 ಬೆಂಗಳೂರು

"ಎಲ್ಲರಿಗೂ ಅರ್ಥವಾಗುವ ಹಾಗೆ ಅಥವಾ ಮನೆ ಮಂದಿಯಲ್ಲೊಬ್ಬರಂತೆ ಸರಳ ಪದಗಳನ್ನೇ ಆರಿಸಿಕೊಂಡು ವಿವರಿಸಿ ಹೇಳುತ್ತಾರೆ. ...

ಬಾ ಕುವೆಂಪು ದರ್ಶನಕೆ; 210 ಪುಟಗಳ ಕೆನ್ವಾಸಿನಲ್ಲಿ ಕುವೆಂಪು ಕಾವ್ಯ ದರ್ಶನ

29-12-2025 ಬೆಂಗಳೂರು

ನರಹಳ್ಳಿಯವರು ಕುವೆಂಪು ಕಾವ್ಯದ ಭಾಗಗಳಿಗೆ ಕೊಡುವ ಶೀರ್ಷಿಕೆಗಳು  ಅರ್ಥಪೂರ್ಣ ಧ್ವನಿ ಪ್ರಚುರ ಆಗಿವೆ. ಇವು ಕುವೆಂಪ...