ಕಲಾ ಜೀವನವನ್ನೇ ಉಸಿರಾಗಿಸಿಕೊಂಡ ಪ್ರತಿಭಾವಂತ ರಂಗ ಕಲಾವಿದೆ


ರಂಗಭೂಮಿ ಕಲಾವಿದೆ , ಹಾಡುಗಾರ್ತಿ, ನೃತ್ಯಗಾರ್ತಿಯೂ ಆಗಿರುವ ಚೈತ್ರಾ ರಾವ್ ಅವರೊಂದಿಗೆ ಕಿರು ಸಂದರ್ಶನ..ನಿಮ್ಮ ಓದಿಗಾಗಿ..

ಬುಕ್ ಬ್ರಹ್ಮ: ಚೈತ್ರಾ ರಾವ್ ಅವರೇ ನಿಮ್ಮ ಹಾಗೂ ರಂಗಭೂಮಿಯ ಪಯಣ ಹೇಗೆ ಶುರುವಾಯಿತು?

ಚೈತ್ರಾ ರಾವ್: ಬಾಲ್ಯದಿಂದಲೂ ನನಗೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನೋ ಹಂಬಲ ಇತ್ತು. ಅದಕ್ಕೆ ಸಾಥ್ ನೀಡಿದ್ದು ಅಪ್ಪ ಕುಮಾರಸ್ವಾಮಿ ಹಾಗೂ ಅಮ್ಮ ಸುಮಂಗಲಾ. ಅವರು ನನ್ನ ಪ್ರತಿಯೊಂದು ವಿಚಾರಗಳನ್ನು ಬೆಂಬಲಿಸುವುದರ ಜೊತೆಗೆ ಶಾಲೆಯಲ್ಲಿ ಸಿಗುವಂತಹ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಳುವಂತೆ ಸಲಹೆ ನೀಡುತ್ತಿದ್ದರು. ಹಾಗೆ ಬೆಳೆದ ಆಸಕ್ತಿಗೆ ನೀರುಣಿಸಿದ್ದು ಮಣಿಪಾಲದ ಚಿಣ್ಣರ ಕಲಾತಂಡ. ’ಚೋರ ಚರಣ ದಾಸ’ ಎನ್ನುವ ಅವರ ನಾಟಕದಿಂದ ಪ್ರಭಾವಿತಳಾಗಿ ನಾನು ರಂಗಭೂಮಿ ಕಲಾವಿದೆಯಾಗಬೇಕು ಅನ್ನೋ ಹಂಬಲ ಬಂತು. ಮಣಿಪಾಲದ ಎಂ.ಜೆ.ಸಿ ಸ್ಕೂಲ್ ನಲ್ಲಿ ನಾನು ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಒಂಭತ್ತನೇ ಕ್ಲಾಸಿನಲ್ಲಿದ್ದಾಗ ನಾಗೇಂದ್ರ ಪೈ ಬೆಂಬಲದೊಂದಿಗೆ ಶ್ರೀಪಾದ್ ಭಟ್ ನಿರ್ದೇಶನದ ರೆಕ್ಕೆ ಕಟ್ಟುವಿರಾ? ನಾಟಕದ ಮೂಲಕ ನನ್ನ ರಂಗಭೂಮಿ ಪಯಣ ಆರಂಭವಾಯಿತು. ಕರ್ನಾಟಕದ ಹಲವು ಕಡೆಗಳಲ್ಲಿ ಈ ನಾಟಕವು ಅದ್ಭುತ ಪ್ರದರ್ಶನವನ್ನು ಕಂಡು ಜನಮೆಚ್ಚುಗೆಯನ್ನು ಗಳಿಸಿತ್ತು. ಪ್ರಸ್ತುತ ಸಂಗಮ ಕಲಾವಿದರು ಮಣಿಪಾಲ ತಂಡದಲ್ಲಿ ಬಣ್ಣಹಚ್ಚುತ್ತಿದ್ದೇನೆ. ತಂಡದ ರೂವಾರಿಯಾದ ರಾಜು ಮಣಿಪಾಲ ಅವರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತು ನನ್ನ ಕಲೆಯನ್ನು ಪ್ರೋತ್ಸಾಹಿಸಿ ಹಲವಾರು ಅವಕಾಶಗಳನ್ನು ನೀಡುತ್ತಿದ್ದಾರೆ.

ಬುಕ್ ಬ್ರಹ್ಮ: ಈವರೆಗೆ ನೀವು ಎಷ್ಟು ನಾಟಕಗಳನ್ನು ಮಾಡಿದ್ದೀರಿ? ನೀವು ಮಾಡಿರುವ ಪಾತ್ರಗಳ ಬಗ್ಗೆ ಹೇಳಿ..?

ಚೈತ್ರಾ ರಾವ್: ಎಂಟು ಪ್ರಮುಖ ನಾಟಕಗಳನ್ನು ಮಾಡಿದ್ದೇನೆ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಮೂಡಿಬಂದಂತಹ ರೆಕ್ಕೆ ಕಟ್ಟುವಿರಾ?, ರಿಂಗಿನಾಟ, ಮಹಿಳಾ ಭಾರತ, ಪ್ರತ್ವಿನ್ ಅವರ ಗಾಂಧಿ ಎಟ್ಟ್ ಗೋಡ್ಸೆ ಡಾಟ್ ಕಾಮ್, ಗಣೇಶ್ ನಿನಾಸಂ ನಿರ್ದೇಶನದ ಚೋಮನ ದುಡಿ , ವಾಲಿವಧೆ, ಪ್ರಶಾಂತ್ ಉದ್ಯಾವರ ನಿರ್ದೇಶನದ ವಿ ಟೀಚ್ ಲೈಫ್ ಸರ್ , ರಾಕ್ಷಸ ತಂಗಡಿ: ಪಾತ್ರ ; ಹುಮಾಯುನ್ ಬೇಗಂ. ’ರಿಂಗಿನಾಟ’ ನಾಟಕವು ಗುಲ್ಬರ್ಗದ ರಾಜ್ಯಮಟ್ಟದ ನಾಟಕ ಸ್ಫರ್ಧೇಯಲ್ಲಿ ಮೂರನೇ ಬಹುಮಾನ ಪಡೆದಿದ್ದು, ಚೋಮನದುಡಿಯ ’ಬೆಳ್ಳಿ’ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ , ’ವಾಲಿವಧೆ’ ನಾಟಕದಲ್ಲಿ ವಾಲಿಯ ಹೆಂಡತಿ ’ತಾರೆ’ ಪಾತ್ರಕ್ಕೆ ಶ್ರೇಷ್ಠ ನಟಿ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಹಾಗೂ ಉತ್ತಮ ನಾಟಕವಾಗಿ ಹೊರಹೊಮ್ಮಿತು.

ಬುಕ್ ಬ್ರಹ್ಮ: ನಾಟಕರಂಗವನ್ನು ಹೊರತು ಪಡಿಸಿ ಬೇರೆ ಯಾವ ಕ್ಷೇತ್ರದಲ್ಲಾದರೂ ನಿಮಗೆ ಆಸಕ್ತಿ ಇದ್ಯಾ?

ಚೈತ್ರಾ ರಾವ್: ಹಾಡುಗಾರಿಕೆ, ನೃತ್ಯ, ಪ್ರವಾಸ,ಪತ್ರಿಕೋದ್ಯಮ ಇವು ನನ್ನ ಆಸಕ್ತಿಯ ವಿಚಾರಗಳು. ಈಗಾಗಲೇ ರಂಗಭೂಮಿಯಿಂದ ಹಲವಾರು ಕಡೆಗಳಲ್ಲಿ ಪ್ರವಾಸ ಮಾಡುವ ಅವಕಾಶಗಳು ಕೂಡ ದೊರಕಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿರುವ ಕಾರಣ ಅಲ್ಲಿರುವ ಎಲ್ಲಾ ವಿಚಾರಗಲ್ಲಿಯೂ ನನಗೆ ವಿಶೇಷ ಆಸಕ್ತಿಯಿದೆ. ಬರವಣಿಗೆಯಲ್ಲಿಯೂ ತೊಡಗಿಕೊಂಡಿದ್ದು ಈಗಾಗಲೇ ಹಲವು ಬರವಣಿಗೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ತೊಡಗಿಕೊಂಡಿದ್ದೇನೆ. ನಾಟಕಗಳಿಗೆ ಹಿನ್ನೆಲೆ ಗಾಯಕಿಯಾಗಿ, ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಕವನಗಳಿಗೆ ಧ್ವನಿ ನೀಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಜಾನಪದ ನೃತ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದೇನೆ.

ಬುಕ್ ಬ್ರಹ್ಮ: ರಂಗಭೂಮಿಯಲ್ಲಿ ಎಷ್ಟು ವರ್ಷಗಳಿಂದ ತೊಡಗಿಕೊಂಡಿದ್ದೀರಿ? ಅಲ್ಲಿನ ಅನುಭವಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಬಹುದಾ?

ಚೈತ್ರಾ ರಾವ್: ಸುಮಾರು ಎಂಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೇನೆ. ರೆಕ್ಕೆ ಕಟ್ಟುವೀರಾ ನಾಟಕದಿಂದ ಆರಂಭವಾದ ನನ್ನ ಪಯಣ ಇಂದಿಗೂ ಆ ಸ್ಫೂರ್ತಿಯೊಂದಿಗೆ ಹಾಗೇ ಇದೆ. ನಾನು ಮಾಡಿದಂತಹ ಮೊದಲ ನಾಟಕ ನ್ಯಾಷ್ ನಲ್ ಸ್ಕೂಲ್ ಆಫ್ ದಿಲ್ಲಿಯ ’ಜಸ್ನೆ ಬಚ್ಚ್ ಪನ್’ ನ್ಯಾಷ್ನನಲ್ ಸ್ಕೂಲ್ ಆಫ್ ಡ್ರಾಮಾ ವಾರ್ಷಿಕ ಹಬ್ಬದಲ್ಲಿ ಕರ್ನಾಟಕದಿಂದ ನಮ್ಮ ತಂಡವು ಆಯ್ಕೆಗೊಂಡು ಅಲ್ಲಿ ಪ್ರದರ್ಶನವನ್ನು ನೀಡಿತ್ತು. ಮೊದಲ ನಾಟಕದಿಂದಲೇ ದಿಲ್ಲಿಗೆ ಪ್ರಯಾಣ ಬೆಳೆಸಿ ಅಲ್ಲಿ ಕಲಿತಂತಹ ಸಾಕಷ್ಟು ವಿಚಾರಗಳು ನನ್ನ ಇಂದಿನ ಕಲಾ ಬದುಕಿಗೂ ಪೂರಕವಾಗುತ್ತಿದೆ. ಎರಡು ಬಾರಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದೇನೆ. ಇನ್ನೂ ಪಾತ್ರಗಳ ಬಗ್ಗೆ ಮಾತಾಡುದಾದ್ರೆ ಚೋಮನದುಡಿ ನಾಟಕದಲ್ಲಿನ ’ ಬೆಳ್ಳಿ’ ಪಾತ್ರವು ನನ್ನ ಜೀವನದ ನೈಜ್ಯತೆಗೆ ಹತ್ತಿರವಾದ ಪಾತ್ರವಾಗಿದೆ. ನನ್ನ ಪ್ರಯಾಣದ ಹುಮ್ಮಸ್ಸಿಗೆ ಪುಷ್ಟಿ ನೀಡಿದ್ದು ಕೂಡ ರಂಗಭೂಮಿ. ಹಲವಾರು ಜಿಲ್ಲೆ, ರಾಜ್ಯಗಳಿಗೆ ಭೇಟಿ ನೀಡಲು ಸಹಾಯಮಾಡಿತು. ಅಲ್ಲಿನ ಜನರ ಜೀವನ ಶೈಲಿಯನ್ನು ತಿಳಿಯುದರ ಜೊತೆಗೆ, ವೈವಿಧ್ಯಮಯವಾದ ಆಹಾರವನ್ನು ಟೇಸ್ಟ್ ಮಾಡಲಿಕ್ಕೂ ಅವಕಾಶ ದೊರೆಯಿತು.

ಬುಕ್ ಬ್ರಹ್ಮ: ರಂಗಭೂಮಿಗೆ ಹೋದ ಮೇಲೆ ಬೇರೆ ಯಾವುದಾದರೂ ಅವಕಾಶಗಳು ಬಂದಿದ್ಯಾ?

ಚೈತ್ರಾ ರಾವ್: ಖಂಡಿತವಾಗಿಯೂ ಬಹಳಷ್ಟು ಅವಕಾಶಗಳು ಸಿಕ್ಕಿದೆ. ಸಾಹಿತ್ಯಕ್ಷೇತ್ರದಲ್ಲಿ ರಂಗಭೂಮಿಯು ನನಗೆ ಬಹಳಷ್ಟು ಉಪಕಾರಿಯಾಗಿದೆ. ಇದರಿಂದ ನನಗೆ ಮೈಲ್ಯಾಂಗ್ ಆಪ್ ನಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ’ಜುಗಾರಿ ಕ್ರಾಸ್ ’ ಕೃತಿಯ ಗೌರಿ ಪಾತ್ರಕ್ಕೆ ಧ್ವನಿಯಾಗುವ ಅವಕಾಶ ಸಿಕ್ಕಿತು. ಅಷ್ಟಲ್ಲದೇ ರಂಗಭೂಮಿ ನನ್ನ ಸಂಗೀತದ ಬದುಕಿಗೂ ಬುನಾದಿಯಾಗಿತ್ತು. ನೃತ್ಯಕ್ಕೂ ಹಲವಾರು ವೇದಿಕೆಗಳು ರಂಗಭೂಮಿಯ ಮೂಲಕವೇ ದೊರೆಯಿತು. ರಂಗಭೂಮಿಯಿಂದ ಮತ್ತೊಂದು ದೊಡ್ಡ ಕೊಡುಗೆಯಾಗಿದ್ದು ನಮ್ಮ ತಂಡಕ್ಕೆ ’ಯಾನ ಡಾನ್ಸ್ ಥಿಯೇಟರ್’ ಅನ್ನೋ ಸಂಸ್ಥೆಯನ್ನು ಹುಟ್ಟುಹಾಕಲು ಅವಕಾಶ ಬಂದಿದ್ದು.

ಬುಕ್ ಬ್ರಹ್ಮ: ಹೆಣ್ಣು ಮಕ್ಕಳಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲು ಇದ್ದೇ ಇರುತ್ತದೆ. ರಂಗಭೂಮಿಯಲ್ಲಿ ನೀವು ಎದುರಿಸಿದ ಸವಾಲುಗಳ ಬಗ್ಗೆ ಮಾತಾಡ್ತೀರಾ?

ಚೈತ್ರಾ ರಾವ್: ಹೌದು..ಯಾವ ಕ್ಷೇತ್ರದಲ್ಲೇ ಆದರೂ ಹೆಣ್ಣು ಅನೇಕ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾನು ಕಂಡಂತೆ ಹೆಣ್ಣು ಯಾವುದಾದರೂ ಸಾಧನೆ ಮಾಡಲು ಹೊರಟಾಗ ಮೊದಲು ಆಕೆಯನ್ನು ತಡೆಯುವಂತದ್ದು ಸಮಾಜ. ಬೆಳೆಸುವ ಸಮಾಜವೇ ಕೆಲವೊಂದು ಸಲ ತುಳಿಯುವ ಕೆಲಸವನ್ನು ಮಾಡುತ್ತದೆ. ಆಕೆಯ ಮನೆಯವರು ಅವಳನ್ನು ಬೆಂಬಲಿಸಿದರು ಸಮಾಜ ಮಾತ್ರ ಆಕೆಯ ಏಳಿಗೆಯನ್ನು ತಿರಸ್ಕರಿಸುತ್ತಲೇ ಇದೆ. ನಾಟಕರಂಗದಲ್ಲಿ ಇರುವ ಕಾರಣ ಎಲ್ಲಾ ಕಡೆಯೂ ನಾನು ಪ್ರಯಾಣವನ್ನು ಮಾಡುವುದು ಅನಿವಾರ್‍ಯವಾಗುತ್ತದೆ. ಆಗ ಕೆಲವರು ಮಾತಾಡಿದುಂಟ್ಟು. ಗಂಡು ಮಕ್ಕಳಾದ್ರೆ ರಾತ್ರಿ ಹೊತ್ತು ತಿರುಗಾಡುವುದು ಪರವಾಗಿಲ್ಲ. ಆದ್ರೆ ಹೆಣ್ಣುಮಕ್ಕಳಿಗೆ ಅಷ್ಟೊಂದು ಸರಿ ಇರಲ್ಲ. ಯಾಕೆ ಮಗಳನ್ನು ನಾಟಕಕ್ಷೇತ್ರಕ್ಕೆ ಬೆಂಬಲಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದರು . ಹೀಗೆ ಹಲವಾರು ಜನ ಹಲವು ರೀತಿ ಹೇಳಿದರು ನನ್ನ ಆಸಕ್ತಿ ಮಾತ್ರ ಎಂದಿಗೂ ಕಡಿಮೆ ಆಗಿಲ್ಲ.

ಬುಕ್ ಬ್ರಹ್ಮ : ನಿಮ್ಮ ಮುಂದಿನ ಕಾರ್ಯಯೋಜನೆಗಳು ಏನು?

ಚೈತ್ರಾ ರಾವ್: ನನಗೆ ಹಿನ್ನಲೆ ಗಾಯಕಿಯಾಗುವ ಇಚ್ಛೆಯಿದ್ದು ಜೊತೆಗೆ ದೇಶ ವಿದೇಶಗಳಿಗೆ ಪ್ರವಾಸ ಮಾಡುವ ಹಂಬಲವಿದೆ. ಒಬ್ಬ ಕಲಾವಿದೆಯಾಗಿ ಉನ್ನತ ಮಟ್ಟಕ್ಕೆ ಬೆಳೆದು , ನನ್ನದೇ ಆದಂತಹ ಒಂದು ನೃತ್ಯ ಸಂಸ್ಥೆಯನ್ನು ತೆರೆಯುವ ಕನಸನ್ನು ಹೊತ್ತುಕೊಂಡಿದ್ದೇನೆ.

MORE FEATURES

ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’

27-04-2024 ಬೆಂಗಳೂರು

'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ...

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...