ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’


'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ. ಜನರು ಅರ್ಥವಿಲ್ಲದ ನಂಬಿಕೆಗಳಿಗೆ ಬಲಿಯಾಗದೆ, ಅತಿಯಾದ ಮಹತ್ವಾಕಾಂಕ್ಷೆಗಳ ಬೆನ್ನು ಬೀಳದೆ ಇತಿಮಿತಿಯಲ್ಲಿ ಹೇಗೆ ಬದುಕಬೇಕು ಎಂಬುದು ಇಲ್ಲಿ ಮನನ ಮಾಡಿಕೊಳ್ಳಬೇಕಾದ ಮುಖ್ಯ ವಿಚಾರವಾಗಿದೆ/ ಎನ್ನುತ್ತಾರೆ ಲೇಖಕಿ ಅನಿತಾ ಪಿ. ತಾಕೊಡೆ ಅವರು ಗುರುರಾಜ್ ಸನಿಲ್ ಉಡುಪಿ ಅವರ ಆವರ್ತನ ಕಾದಂಬರಿಗೆ ಬರೆದ ಅರ್ಥಪೂರ್ಣ ವಿಮರ್ಶೆ ನಿಮ್ಮ ಓದಿಗಾಗಿ.

ಕೃತಿ:ಆವರ್ತನ
ಲೇಖಕರು: ಗುರುರಾಜ್ ಸನಿಲ್ ಉಡುಪಿ
ಪ್ರಕಾಶಕರು: ಕಾವ್ಯಸ್ಪಂದನ
ಪುಟ, 420
ಬೆಲೆ ರೂ, 425
ಸಂಪರ್ಕ:9845083869

ಗುರುರಾಜ್ ಅವರು ಖ್ಯಾತ ಉರಗತಜ್ಞರಾಗಿರುವ ಜೊತೆಗೆ ತಮ್ಮ ಅನುಭವಗಳನ್ನು ಲೇಖನಗಳ ಮೂಲಕ ಬರೆದು ಹಲವಾರು ಕೃತಿಗಳನ್ನು ಲೋಕಮುಖಕ್ಕೆ ಪರಿಚಯಿಸಿದವರು. ಕರ್ನಾಟಕದಲ್ಲಿ ಉರಗತಜ್ಞ ಹಾಗೂ ಸಾಹಿತ್ಯ ಈ ಎರಡೂ ಕ್ಷೇತ್ರದಲ್ಲಿ ಸಾಧನೆಗೈದ ಏಕೈಕ ವ್ಯಕ್ತಿ ಇವರಾಗಿದ್ದಾರೆ. ಈಗಾಗಲೇ ಹತ್ತು ಕೃತಿಗಳನ್ನು ಪ್ರಕಟಿಸಿರುವ ಇವರು, ‘ವಿವಶ’ ಮತ್ತು ‘ಆವರ್ತನ’ ಎಂಬ ಎರಡು ಬೃಹತ್ ಕಾದಂಬರಿಗಳನ್ನು ಬರೆದು ಕಾದಂಬರಿಕಾರರಾಗಿಯೂ ಸಾಹಿತ್ಯ ಲೋಕದಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಆವರ್ತನ ಕಾದಂಬರಿ ಈಗಾಗಲೇ ‘ಸಂಗಾತಿ’ ಅಂತರ್ಜಾಲ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿ ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಒಂದೂವರೆ ವರ್ಷದಿಂದ ಮುಂಬಯಿಯ ಪ್ರತಿಷ್ಠಿತ ಮಾಸ ಪತ್ರಿಕೆಯಾದ ಮೊಗವೀರ ಮಾಸಿಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದೆ.

ಆವರ್ತನ ಕಾದಂಬರಿಗೆ ಮುನ್ನುಡಿಯನ್ನು ಬರೆದಿರುವ ಹೆಸರಾಂತ ಸಾಹಿತಿ ಹಾಗೂ ಪ್ರಾಧ್ಯಾಪಕರೂ ಆಗಿರುವ ಅನುಬೆಳ್ಳೆಯವರು, ‘ಜನಸಾಮಾನ್ಯರ ಆಸೆ, ಆಕಾಂಕ್ಷೆ, ಹಂಬಲಗಳನ್ನು ಇಲ್ಲಿಯ ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ನಡೆದಿದೆ. ಕಾದಂಬರಿಕಾರರು ಹೇಳಬೇಕಾಗಿರುವ ಸೂಕ್ಷ್ಮ ವಿಷಯಗಳನ್ನು ಅನಗತ್ಯ ವಿವರಣೆಗಳಿಲ್ಲದೆ ಕಥೆಗೆ ಪೂರಕವಾಗಿ ಹೇಳಿರುವುದರಿಂದ ಓದುಗನ ಮನಸ್ಸಿನಲ್ಲಿ ಸನ್ನಿವೇಶಗಳು ಮಥಿಸಿ, ಚಿಂತಿಸಿ ಬಹುಕಾಲ ನಿಲ್ಲುತ್ತವೆಯೆನ್ನುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿರುವುದು ಕಾದಂಬರಿಯ ಮೌಲ್ಯವನ್ನು ಪ್ರತಿಪಾದಿಸುತ್ತದೆ.

ಬಾಡಿಗೆ ಮನೆಯಲ್ಲಿದ್ದುಕೊಂಡು ತೀರ ಬಡತನದ ಪರಿಸ್ಥಿತಿಯಲ್ಲಿದ್ದು ರಾಧಾ ಅನುಭವಿಸುತ್ತಿರುವ ಮಾನಸಿಕ ತುಮುಲದಿಂದ ಆವರ್ತನ ಕಾದಂಬರಿ ತೆರೆದುಕೊಳ್ಳುತ್ತದೆ. ಬಡತನ ಒಂದೆಡೆಯಾದರೆ ಮನೆ ಮಾಲೀಕರಿಂದ ಅನುಭವಿಸುವ ಕಿರುಕುಳ ಅವಳನ್ನು ಇನ್ನಷ್ಟು ಜರ್ಜರಿತಳನ್ನಾಗಿಸುತ್ತದೆ. ಸ್ವಂತ ಮನೆಯ ಕನಸನ್ನು ಈಡೇರಿಸುವ ಸಲುವಾಗಿ ರಾಧಾ ಮತ್ತು ಗೋಪಾಲ ದಂಪತಿ ಪಡುವ ಪಾಡು ಹೃದಯಂಗಮವಾಗಿ ಮೂಡಿಬಂದಿದೆ.

ಆವರ್ತನದಲ್ಲಿ ಏಕನಾಥ ಗುರೂಜಿ, ರಾಧಾ, ಗೋಪಾಲ, ಶಂಕರ ಈ ನಾಲ್ಕು ಪಾತ್ರಗಳು ಕೊನೆಯವರೆಗೂ ಪ್ರದಾನ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ಬರುವ ಇತರ ಪಾತ್ರಗಳಿಗೂ ಅದರದ್ದೇ ಆದ ಪ್ರಾಧಾನ್ಯತೆ ನೀಡಿರುವುದು ಕಾದಂಬರಿಗೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಏಕನಾಥರು ಪೆದುಮಾಳರ ಆಶ್ರಯದಲ್ಲಿ ಮುಂಬಯಿಯಲ್ಲಿ ಕೆಲವು ವರ್ಷಗಳ ಕಾಲ ವಾಸವಾಗಿದ್ದವರು ಊರಿಗೆ ಬಂದು ನೆಲೆಸಬೇಕಾಗುತ್ತದೆ. ಮುಂಬಯಿ ನಗರದ ತೆರೆಮರೆಯಲ್ಲಿರುವ ಕಟುವಾಸ್ತವದ ಚಿತ್ರಣವೂ ಇಲ್ಲಿ ಧ್ವನಿತವಾಗಿದೆ. ಇಂಥ ಸಮಸ್ಯೆಗಳು ಊರಿನಲ್ಲ್ಲಿಯೂ ಬೇರೊಂದು ರೂಪದಲ್ಲಿ ವಕ್ಕರಿಸಿರುವುದನ್ನು ಆವರ್ತನ ಕಾದಂಬರಿಯುದ್ದಕ್ಕೂ ವೇದ್ಯವಾಗುತ್ತದೆ. ಏಕನಾಥರ ನಂತರ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವವನು ಶ್ರೀಮಂತಿಕೆಯ ಬೆನ್ನುಹತ್ತಿದ ಶಂಕರ. ಸ್ಥಿತಿವಂತನಾದಾಗ ಮಿತಿಮೀರಿ ಬೆಳೆಯುವ ಮಹತ್ವಾಕಾಂಕ್ಷೆಯು ಸಾಮಾಜಿಕವಾಗಿ ಮತ್ತು ಸಾಂಸಾರಿಕವಾಗಿ ಮನುಷ್ಯನ ಅಧಃಪಥನಕ್ಕೆ ಹೇಗೆ ಕಾರಣವಾಗಬಹುದು ಎಂಬುದು ಕಾದಂಬರಿಯಲ್ಲಿ ಮನೋಜ್ಞವಾಗಿ ಬಿಂಬಿತವಾಗಿದೆ.

ಮೂವತ್ತೊಂದು ಮನೆಗಳಿರುವ ಭಾಗೀವನವೆಂದರೆ ಹಲವು ಸಮುದಾಯಗಳ ಒಂದು ಸಂಗಮದಂತೆ ಕಾದಂಬರಿಯಲ್ಲಿ ಮೂಡಿ ಬಂದಿದೆ. ವೃತ್ತಿ, ಜಾತಿ ಯಾವುದೇ ಇರಲಿ; ಇಲ್ಲಿರಬೇಕಾದುದು ಮನುಷ್ಯ ಜಾತಿಯೊಂದೇ. ಬಡವನಾಗಲಿ ಬಲ್ಲಿದನಿರಲಿ, ಎಲ್ಲರಿಗೂ ಒಂದೇ ನೀತಿ ಎಂಬ ಜಾತ್ಯಾತೀತ ಮನೋಭಾವದ ಪ್ರತೀಕವಾಗಿ ಬಾಗೀವನ ಕಾದಂಬರಿಯಲ್ಲಿ ಸೊಗಸಾಗಿ ಚಿತ್ರಿತವಾಗಿದೆ. ಕೃಷಿ ಕುಟುಂಬದಿಂದ ಬಂದ ರಾಧಾಳ ಪ್ರಾಣಿ ಪ್ರೀತಿ ನೆರೆಹೊರೆಯವರಿಗೆ ಕಂಟಕವಾಗುತ್ತದೆ. ನಾಗರಹಾವು ಭಾಗೀವನದಲ್ಲಿರುವ ಸುಮಿತ್ರಮ್ಮನ ಮನೆಯೊಳಗೆ ಹೊಕ್ಕಾಗ ಅಲ್ಲಿ ಹಲವಾರು ಊಹಾಪೋಹಗಳು ಸೃಷ್ಟಿಯಾಗುತ್ತವೆ. ಪ್ರಸ್ತುತ ಸಮಾಜದಲ್ಲಿ ನಿರಂತರ ನಡೆಯುತ್ತಿರುವ ಸಂಗತಿಗಳೇ ಇಲ್ಲಿ ಪಡಿಮೂಡಿವೆ. ಈ ಕಥಾನಕದಲ್ಲಿ ಬರುವಂಥ ರಾಧಾ, ದೇವಕಿ, ವಿನೋದಾ ಮುನಿಯಮ್ಮ, ದ್ಯಾವಮ್ಮ, ಸುಮಿತ್ರಮ್ಮ, ಅನುಸೂಯಮ್ಮ ಮುಂತಾದ ಸ್ತ್ರೀ ಪಾತ್ರಗಳ ಗುಣ ಸ್ವಭಾವ, ಮಾನಸಿಕ ಸ್ಥಿತಿ ಮತ್ತು ಒಟ್ಟು ಜೀವನ ಶೈಲಿಯನ್ನು ಭಿನ್ನ ರೀತಿಯಲ್ಲಿ ವ್ಯಕ್ತವಾಗಿದೆ. ಪುರುಷ ಪಾತ್ರಗಳು ಕೂಡ ಹಾಗೆಯೇ. ಎಲ್ಲರ ನೋವು ನಲಿವುಗಳು ಮತ್ತು ಬಂದೆರಗುವ ಸಮಸ್ಯೆಗಳು ಭಿನ್ನವಾಗಿವೆ.

ಆವರ್ತನದ ಸರಾಗವಾದ ಓದಿಗೆ ಪುಷ್ಠಿ ನೀಡುವುದು ಕಾದಂಬರಿಕಾರರ ಹಾಸ್ಯ ಪ್ರವೃತ್ತಿ. ಉದಾಹರಣೆಗೆ ಶಂಕರ ಮೊದಲ ಬಾರಿ ಏಕನಾಥರನ್ನು ಭೇಟಿಯಾದ ಸಂದರ್ಭದಲ್ಲಿ ನಡೆದ ಮಾತುಕತೆ, ಬಂಡೆಗಲ್ಲಿನ ಪ್ರಸಂಗ, ತಂಗವೇಲು ಮಾತನಾಡುವ ಶೈಲಿ, ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ಸಮಾಜದ ನಡುವೆ, ಆಡಳಿತವರ್ಗದಲ್ಲಿ ನಡೆಯುತ್ತಿರುವಂಥ ಕೆಲವೊಂದು ಹುಳುಕುಗಳನ್ನು ಕೂಡ ತಿಳಿ ಹಾಸ್ಯದ ಮೂಲಕವೇ ಬಿಂಬಿಸಿದ್ದಾರೆ. ಮಾನವನ ಅತಿಕ್ರಮಣದಿಂದ ಪ್ರಕೃತಿಯಲ್ಲಾಗುವ ತಲ್ಲಣಗಳು ರೋಚಕವಾಗಿ ಚಿತ್ರಿತವಾಗಿವೆ. ಕಾಂಚಾಣದ ಮಹಿಮೆ ಹೇಗೆ ಕೆಲಸ ಮಾಡುತ್ತದೆ? ಅದೇ ಮುಂದೆ ಎಂಥ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂಬುದಕ್ಕೆ ಆವರ್ತನ ಒಂದೊಳ್ಳೆಯ ನಿದರ್ಶನ. ಲೇಖಕರು ಸುತ್ತಮುತ್ತಲಿನ ವಿದ್ಯಾಮಾನಗಳ ಸೂಕ್ಷ್ಮತೆಗಳನ್ನು ಸರಿಯಾಗಿ ಅರ್ಥೈಸಿಕೊಂಡವರಾಗಿದ್ದಾರೆ. ಎಲ್ಲರಿಗೂ ಸರಳವಾಗಿ ಗ್ರಾಹ್ಯವಾಗುವಂತೆ ವಾಸ್ತವ ಸತ್ಯವನ್ನು ತೆರೆದಿಟ್ಟಿದ್ದಾರೆ.

ಈ ಕಾದಂಬರಿಯಲ್ಲಿ ಮೂವರು ಪ್ರಗತಿಪರ ಚಿಂತಕರ ಪಾತ್ರದಲ್ಲಿ ಕಂಡುಬರುತ್ತಾರೆ. ಉರಗತಜ್ಞ ರೋಹಿತ್ ಗೌರವ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾ. ನರಹರಿ ಮತ್ತು ರಾಜಶೇಖರ ಪರಿಸರ ಪ್ರೇಮಿಗಳಾಗಿ ಕಾಣಿಸಿಕೊಂಡು ಅಲ್ಲಿ ನಡೆಯಲಿರುವಂಥ ಅನಾಹುತವನ್ನು ತಡೆಯಲು ಪ್ರಯತ್ನಿಸುತ್ತಾರೆ. ಇಲ್ಲಿ ನಂಬಿಕೆ ಮತ್ತು ಆರಾಧನೆಗಳಿಗೆ ಬೆಂಬಲವಿದೆ. ಆದರೆ ಅದನ್ನೇ ಅಸ್ತ್ರವಾಗಿಸಿ ಅಮಾಯಕರನ್ನು ಶೋಷಿಸುವ ಪರಿಸರವನ್ನು ನಾಶ ಮಾಡುವ ಪ್ರಕ್ರಿಯೆಯ ಕುರಿತು ಆಕ್ಷೇಪವಿದೆ. ಬೈಬಲ್ ಕುರಾನ್ ಹಿಂದೂ ಧರ್ಮಗ್ರಂಥಗಳಲ್ಲಿ ಇರುವ ಕೆಲವೊಂದು ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಸಮಾಜದಲ್ಲಿ ಏನೆಲ್ಲ ಪ್ರಮಾದಗಳು ನಡೆದುಬಿಡುತ್ತವೆ ಎಂಬುದನ್ನು ಸಂದರ್ಭಕ್ಕನುಸಾರವಾಗಿ ವಿವರಿಸಲಾಗಿದೆ.

ನವಿರಾದ ಹಾಸ್ಯ, ಗಂಭೀರವಾದ ವಿಡಂಬನೆ, ಭಾಷಾ ಪ್ರಬುದ್ಧತೆ ಮತ್ತು ಸರಳವಾದ ನಿರೂಪಣಾ ಶೈಲಿ ರಸವತ್ತಾಗಿ ಮೂಡಿಬಂದಿರುವುದು ಈ ಕಾದಂಬರಿಯ ವಿಶೇಷತೆಯಾಗಿದೆ. ಪಾತ್ರಗಳು ಯಾವ ಊರನ್ನು ಪ್ರತಿನಿಧಿಸುತ್ತವೋ ಅದೇ ಊರಿನ ಭಾಷೆಯನ್ನು ಅಳವಡಿಸಲಾಗಿದೆ. ಜೊತೆಗೆ ಅಲ್ಲಲ್ಲಿ ಗಾದೆಮಾತುಗಳು ಮನಸೆಳೆಯುತ್ತವೆ. ಭಿನ್ನ ವಿಭಿನ್ನ ಮನಸ್ಥಿತಿಯ ಪಾತ್ರಗಳು, ಆ ಪಾತ್ರಗಳ ಹಿನ್ನೆಲೆ, ಪೂರ್ವಾಪರಗಳು, ಅದರೊಳಗೆ ಬರುವ ಉಪಕತೆಗಳು, ಊರಿನ ಹೆಸರಿಗೊಂದೊಂದು ಕಥೆ ಹೀಗೆ ಎಲ್ಲದರಲ್ಲಿಯೂ ಒಂದು ರೀತಿಯ ಹೊಸತನವಿದೆ. ನೈಜತೆಯಿದೆ. ಹೀಗೆ ಇಡೀ ಕಥಾನಕದೊಳಗೆ ಓದುಗರು ತಲ್ಲೀನರಾಗಿ ಪಾತ್ರದೊಳಗೆ ಲೀನರಾಗಿ ಅಲ್ಲಿ ಘಟಿಸುವ ಪ್ರತಿಯೊಂದು ಸನ್ನಿವೇಶಗಳು ನಮ್ಮ ಕಣ್ಣೆದುರೇ ನಡೆಯುತ್ತಿವೆ ಎಂಬಂತೆ ಭಾಸವಾಗುತ್ತವೆ. ರಸಭಾವಗಳನ್ನು ಸಮರ್ಥವಾಗಿ ಬಳಸಿಕೊಂಡಿರುವುದರಿಂದ ಕಥೆಗೆ ಸಂವಾದಿಯಾದ ಭಾವನೆಗಳು ಯಾವ ವಿಳಂಬವೂ ಇಲ್ಲದೆ ಓದುಗನಲ್ಲಿ ಒಡಮೂಡುವಂತೆ ಕಾದಂಬರಿಕಾರರು ತಮ್ಮ ಕೌಶಲ್ಯವನ್ನು ಮೆರೆದಿದ್ದಾರೆ.

ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ. ಜನರು ಅರ್ಥವಿಲ್ಲದ ನಂಬಿಕೆಗಳಿಗೆ ಬಲಿಯಾಗದೆ, ಅತಿಯಾದ ಮಹತ್ವಾಕಾಂಕ್ಷೆಗಳ ಬೆನ್ನು ಬೀಳದೆ ಇತಿಮಿತಿಯಲ್ಲಿ ಹೇಗೆ ಬದುಕಬೇಕು ಎಂಬುದು ಇಲ್ಲಿ ಮನನ ಮಾಡಿಕೊಳ್ಳಬೇಕಾದ ಮುಖ್ಯ ವಿಚಾರವಾಗಿದೆ. ಕಾದಂಬರಿಕಾರರನ್ನು ಹಲವು ವರ್ಷಗಳಿಂದ ಕಾಡಿಸಿದ ವಿಚಾರಗಳೇ ಆವರ್ತನ ಕಾದಂಬರಿಯಾಗಿ ರೂಪುಗೊಂಡಿದೆಯೆನ್ನಬಹುದು. ಸಮಕಾಲೀನ ಸಮಾಜದಲ್ಲಿರುವ ಸ್ಥಿತಿಗತಿ, ಹಾಗೂ ಆರೋಗ್ಯಪೂರ್ಣ ಸಮಾಜಕ್ಕೆ ಮತ್ತು ಪರಿಸರಕ್ಕೆ ಮಾರಕವಾಗಿರುವಂಥ ವಿಚಾರಗಳಿಗೆ ಲೇಖಕರು ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದು ಕೇವಲ ಕಾದಂಬರಿಯಾಗಿ ಓದುಗರ ಮನ ರಂಜಿಸುವುದು ಮಾತ್ರವಲ್ಲ; ಪರಿಸರ ಸಂರಕ್ಷಣೆ, ಅಂಧಾನುಕರಣೆಗಳ ನಿವಾರಣೆ ಹಾಗೂ ಶೋಷಿತ ವರ್ಗವನ್ನು ಸುಧಾರಣೆಗೆ ತರುವಂಥ ಒಂದೊಳ್ಳೆಯ ಸಂದೇಶವನ್ನು ಸಾರುತ್ತದೆ.

-ಅನಿತಾ ಪಿ. ತಾಕೊಡೆ

 

MORE FEATURES

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...