ರೋಗ ಮತ್ತು ಅಧಿಕಾರ : ಬೇಂದ್ರೆಯವರ ಜಾತ್ರೆ ನಾಟಕ ಸಮಕಾಲೀನ ಅಸಂಗತ ಅಭಿವ್ಯಕ್ತಿ


‘ಬೇಂದ್ರೆಯವರು ನಾಟಕಕಾರರಾಗಿ ತಮ್ಮ ಜೀವಪರವಾದ ನಿಲುವನ್ನು “ಜಾತ್ರೆ” ನಾಟಕದ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ’ ಎನ್ನುತ್ತಾರೆ ರಂಗಕರ್ಮಿ, ಲೇಖಕ ಡಾ.ಬೇಲೂರು ರಘುನಂದನ. ಅವರು ತಮ್ಮ ಬೇಂದ್ರೆ ನಾಟಕಗಳ ರಂಗ ಪ್ರವೇಶ ವಿಶೇಷ ಸರಣಿಯಲ್ಲಿ ಈ ಬಾರಿ ಜಾತ್ರೆ ನಾಟಕವನ್ನು ಸದ್ಯದ ಕೋವಿಡ್ ಸಂಕಷ್ಟದೊಂದಿಗೆ ಸಮೀಕರಿಸಿ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಕೊರೋನಾ ಪಿಡುಗು ಇಡೀ ಪ್ರಪಂಚವನ್ನೇ ಆವರಿಸಿಕೊಂಡಿರುವ ಈ ಸಂದರ್ಭದಲ್ಲಿ ಬೇಂದ್ರೆಯವರ 'ಜಾತ್ರೆ' ನಾಟಕವು ಅತ್ಯಂತ ಸಮಕಾಲೀನವೂ ಮತ್ತು ಸಕಾಲಿಕವೂ ಆಗಿದೆ. ರೋಗ ಮತ್ತು ಅಧಿಕಾರ ಹೇಗೆ ಜನಸಾಮಾನ್ಯನನ್ನು ಆತಂಕಕ್ಕೆ ತಳ್ಳಿ, ಕಾಲದ ದುರುಪಯೋಗ ಮಾಡಿಕೊಳ್ಳುತ್ತದೆ ಎಂಬುದಕ್ಕೆ ಜಾತ್ರೆ ನಾಟಕ ಉತ್ತಮ ನಿದರ್ಶನವಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯು ಭಾರತದಲ್ಲಿ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಬೇಕಾದ ಪ್ರಭಾವಿ ಅಂಶಗಳು ಮತ್ತು ಅಧಿಕಾರಶಾಹಿಯ ವೈಫಲ್ಯ ಈ ನಾಟಕದ ವ್ಯಾಪ್ತಿಯಲ್ಲಿದೆ. ಅಧಿಕಾರವೆನ್ನುವುದಕ್ಕೆ ಹೇಳುವ ಗುಣವಿದೆಯೇ ಹೊರತು ಕೇಳುವ ವ್ಯವಧಾನವಿಲ್ಲ. ಆಡಳಿತವನ್ನು ಹುಚ್ಚಾಟವೆಂದು ಭ್ರಮಿಸಿ ಜನತಂತ್ರವನ್ನು ದಿಕ್ಕುತಪ್ಪಿಸುವ ಹುನ್ನಾರವನ್ನು ಬೇಂದ್ರೆಯವರು 'ಜಾತ್ರೆ' ನಾಟಕದಲ್ಲಿ ಪ್ರಧಾನ ಆಶಯವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕದ ಸಂಭಾಷಣೆಯೊಂದರಲ್ಲಿ ನಾಟಕಕಾರರು 'ಸರಕಾರ ಹೇಳಿದ್ದೇ ಸತ್ಯ'ಎಂಬ ಮಾತು ಜಾತ್ರೆ ನಾಟಕದ ವಸ್ತು ನಿರೂಪಣೆಗೊಂಡ ಕಾಲಕ್ಕೂ ಜಗತ್ತನ್ನೇ ಬಾಧಿಸಿದ ಕೋವಿಡ್-19 ಕಾಯಿಲೆಯ ಸಂದರ್ಭಕ್ಕೂ ಪೂರಕವಾಗಿಯೇ ಇದೆ.

ಜನಸಮುದಾಯಕ್ಕೆ ರೋಗ ಹರಡುವ ಬಗೆಯೊಂದಾದರೆ, ರೋಗವನ್ನು ಭಯ ಭೀತಿಗಳೊಡನೆ ಹರಡಿಸುವ ಬಗೆ ಹಲವು ಎಂಬ ತಾತ್ವಿಕ ಒಳನೋಟ ಜಾತ್ರೆ ನಾಟಕದ ಕೇಂದ್ರ ಶಕ್ತಿ. ದೇಶದ ಜನರನ್ನು ಕುರಿತು ಮಾನವೀಯ ಸ್ಪಂದನವನ್ನು ಹುಚ್ಚು ದೊರೆ ಎಂದೂ ತೋರುವುದಿಲ್ಲ ಎನ್ನುವ ಅಂಶ ನಾಟಕದಲ್ಲಿ ಬಹಳ ಮಾರ್ಮಿಕವಾಗಿದೆ. 'ರಾಜ ಪ್ರತ್ಯಕ್ಷ ದೇವತಾ' ಎನ್ನುವ ಆದರ್ಶ ಎಲ್ಲ ಕಾಲಕ್ಕೂ, ಎಲ್ಲ ರಾಜರಿಗೂ ಮತ್ತು ಎಲ್ಲಾ ಸಂದರ್ಭಕ್ಕೂ ಹೊಂದುತ್ತದೆ ಎನ್ನುವ ಭ್ರಮೆಯನ್ನು ಜನಸಾಮಾನ್ಯರಲ್ಲಿ ಎಗ್ಗಿಲ್ಲದೆ ಬಿತ್ತುತ್ತಾ ಬಂದಿದೆ. ಮುಗ್ಧ ಜನರು ಅದನ್ನು ನಂಬುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕಾಯಿಲೆ ಇದೆ ಎಂದು ರಾಜ ಹೇಳಿದರೆ ಕಾಯಿಲೆ ಇದೆ ಎಂದು ನಂಬುತ್ತಾರೆ. ಅದೇ ರಾಜ ಕಾಯಿಲೆ ಇಲ್ಲಾ ಎಂದರೆ ಅದನ್ನೂ ಮುಗ್ಧವಾಗಿ ನಂಬಿಬಿಡುತ್ತಾರೆ. ಜಾತ್ರೆ ನಾಟಕದಲ್ಲಿ ಬರುವ ರೋಗದ ಸ್ವರೂಪ ಒಂದು ದೊಡ್ಡ ಸಕಾಲಿಕ ರೂಪಕವಾಗಿ ಕಾಣುತ್ತದೆ. ವ್ಯಕ್ತಿ ಮತ್ತು ವ್ಯವಸ್ಥೆ ರೋಗಕ್ಕೆ ಬಲಿಯಾಗುವ, ರೋಗದ ಕಾವು ಅಧಿಕಾರಕ್ಕೆ ತಗುಲಿದಾಗ ಉಂಟಾಗುವ ಸಮಯಸಾಧಕ ಸ್ಥಿತಿ ನಾಟಕದಲ್ಲಿ ಅರ್ಥಪೂರ್ಣವಾಗಿ ಚಿತ್ರಿತವಾಗಿದೆ. ರೋಗನಿವಾರಕ ಸ್ಥಿತಿ ಉಂಟಾಗಬೇಕಾದರೆ ವ್ಯವಸ್ಥೆ ರೋಗ ಮುಕ್ತವಾಗಬೇಕು ಇಲ್ಲವೇ ಜನಸಮುದಾಯ ದುರಂತ ಮತ್ತು ಆತಂಕಗಳಿಗೆ ಬಲಿಯಾಗಬೇಕು ಎಂಬ ವಾಸ್ತವಿಕ ಪ್ರತಿಪಾದನೆ ಜಾತ್ರೆ ನಾಟಕದ ಮೂಲ ಬಿತ್ತಿಯಾಗಿದೆ.

ಸ್ವತಂತ್ರಾ ನಂತರದ ಭಾರತದಲ್ಲಿ ಅನೇಕ ಸಣ್ಣಪುಟ್ಟ ಸಂಸ್ಥಾನಗಳು ಇದ್ದವು. ಅನೇಕ ಸಂಸ್ಥಾನಗಳು ಭಾರತದ ಒಕ್ಕೂಟದಲ್ಲಿ ವಿಲೀನ ಹೊಂದಿ ಸಮಗ್ರತೆಯಲ್ಲಿ ನಂಬಿಕೆಯಿಟ್ಟಿದ್ದವು. ಒಕ್ಕೂಟ ವ್ಯವಸ್ಥೆಗೆ ಸೇರದ ರಾಜನೊಬ್ಬನ ಹುಚ್ಚು ಅಧಿಕಾರದ ಕಥನವೇ ಜಾತ್ರೆ ನಾಟಕ. ಪ್ಲೇಗಿನಿಂದ ಊರಲ್ಲಿದ್ದ ಇಲಿಗಳೆಲ್ಲ ಗಂಟಲು ಬೇನೆಯಿಂದ ಬಳಲಿ ಸಾಯತೊಡಗಿದವು ಸರ್ಕಾರಿ ಆಸ್ಪತ್ರೆಯ ವೈದ್ಯನ ಅಭಿಪ್ರಾಯದೊಂದಿಗೆ ಪ್ಲೇಗಿನಿಂದ ಸತ್ತ ಜನರೆಲ್ಲರು ಈ ಬೇನೆಯಿಂದಲೆ ಜೀವಕಳೆದುಕೊಂಡರು. ದಿನೇದಿನೇ ರೋಗ ಉಲ್ಬಣವಾಗುತ್ತಿದ್ದರೂ ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೃದ್ಧಿ ಮಾಡಬೇಕು ಎಂದು ದೇವರ ಉತ್ಸವ, ಜಾತ್ರೆಗಳನ್ನು ಸಾಂಗವಾಗಿ ನಡೆಸಬೇಕೆಂದು ದೊರೆಗಳು ಆಜ್ಞೆ ಹೊರಡಿಸುತ್ತಾನೆ. ಈ ಸಂಬಂಧ ದೊರೆ ತನ್ನ ಆಡಳಿತಯಂತ್ರದ ಭಾಗವಾಗಿದ್ದ ಕಾರಬಾರಿಗಳು, ಕಾರಕೂನರು ಹಾಗೂ ಸರ್ಕಾರಿ ವೈದ್ಯರ ಜೊತೆಗೆ ಸಮಾಲೋಚನೆ ನಡೆಸುತ್ತಾನೆ. ಡಾಕ್ಟರ್ ಮತ್ತು ದೊರೆಯ ನಡುವಿನ ಸಂಭಾಷಣೆ ವಿಡಂಬನಾತ್ಮಕವಾಗಿ ನಗೆಯ ಲೇಪನದೊಂದಿಗೆ ಪ್ರೇಕ್ಷಕರಲ್ಲಿ ಮತ್ತು ಓದುಗರಲ್ಲಿ ಸಾಮಾಜಿಕ ವಿವೇಕವೊಂದನ್ನು ರೂಪಿಸುವಲ್ಲಿ ಸಶಕ್ತವಾಗಿದೆ. ಸರಕಾರಿ ಯಂತ್ರ ಕುಸಿದು ಬೀಳಬಾರದು, ಜಾತ್ರೆಯಿಂದ ಸಂಪತ್ತು ಸಂಗ್ರಹವಾಗಲೇಬೇಕು ಎನ್ನುವ ಹುಚ್ಚು ನಿರ್ಧಾರ ಸಮಕಾಲೀನ ಸಂದರ್ಭವನ್ನೂ ಕೂಡ ಅತ್ಯಂತ ಸೂಕ್ಷ್ಮವಾಗಿ ವಿಡಂಬಿಸುತ್ತಿದೆ. ಮೇಲ್ನೋಟಕ್ಕೆ ನಗೆಯಲೇಪನ ಹೊತ್ತಂತೆ ತೋರಿದರು ನಾಟಕದ ವಸ್ತು ಅಂತಃಶಕ್ತಿ ಅಸಂಗತವಾಗಿ ಜನ ವಿವೇಕಿಯಾಗಿದೆ. 'ಹೆದರಿಸಿದರೂ ಹೆದರಬಾರದು, ಸತ್ತರೂ ಸತ್ಯ ಬಿಡಬಾರದು' ಎಂಬ ನಾಟಕದಲ್ಲಿ ಬರುವ ಮಾತು ರೋಗ ಉಲ್ಬಣಗೊಂಡ ಕಾಲದಲ್ಲಿ ಜಾತ್ರೆಯ ಅವಿವೇಕವನ್ನು ಶಕ್ತಿಯುತವಾಗಿ ವಿಡಂಬಿಸಿದೆ.

ಹುಚ್ಚಾಪುರದ ದೊರೆ ಎಲ್ಲ ಕಾಲದ ಪ್ರತಿನಿಧಿ. ಜಾತ್ರೆ ಮತ್ತು ದೇವರ ಉತ್ಸವ ಎನ್ನುವ ಜನಾಚರಣೆ ಎಲ್ಲ ಕಾಲದಲ್ಲೂ ನಡೆದಿದೆ. ಸಾಂಕ್ರಾಮಿಕ ಕಾಯಿಲೆಗಳು ಭೂಮಿಯ ಮತ್ತು ಮನುಷ್ಯನ ಸಂಬಂಧ ಬಳಕೆಗೆ ಅನುಗುಣವಾಗಿ ಕಾಲರೂಪಿಯಾಗಿ ಬರುತ್ತಲೇ ಇವೆ. ಪ್ಲೇಗ್ ಸಾಂಕ್ರಾಮಿಕದಿಂದ ಊರಿಗೆ ಊರೇ ನಾಶವಾಗಿ, ಗ್ರಾಮಕ್ಕೆ ಗ್ರಾಮವೇ ಊರು ಬಿಟ್ಟ ಅನೇಕ ಉದಾಹರಣೆಗಳಿವೆ. ಜಾತ್ರೆ ನಾಟಕದಲ್ಲಿ ಪ್ಲೇಗ್ ನಿಂದ ಜನರು ಸಾಯುತ್ತಿದ್ದರೂ ಊರಿನಲ್ಲಿ ವಿಜೃಂಭಣೆಯಿಂದ ಜಾತ್ರೆಯಾಗಬೇಕು ಎನ್ನುವ ದೊರೆಯ ಆಜ್ಞೆ ಹುಚ್ಚುತನದ ಪರಮಾವಧಿಯಾಗಿದೆ. ದೊರೆಗೆ ಪೂರ್ವಕವಾಗಿ ಕಾರ್ಯನಿರ್ವಹಿಸುವ ಆಡಳಿತ ಯಂತ್ರ ಮತ್ತು ಡಾಕ್ಟರ್ ಆಜ್ಞಾಪಾಲಕರಾಗಿ ಕೆಲಸ ಮಾಡುತ್ತಾರೆ. ವಿಚಾರ ಮತ್ತು ವಿವೇಕವಿಲ್ಲದ ಈ ಬಗೆಯ ಅಧಿಕಾರಿಗಳಿಂದ ಸಂಕಟಕೀಡಾಗುವ ಜನರ ಸಂಕಷ್ಟ ಯಾವ ಕಾಲದಲ್ಲೂ ತಪ್ಪಿದ್ದಲ್ಲ. ಪ್ರಜೆಗಳು, ಬೆಕ್ಕು ಇಲಿಗಳು ರಾಜಾಜ್ಞೆಯನ್ನು ಪಾಲಿಸಬೇಕು ಎನ್ನುವ ಆಜ್ಞೆ ಕಾಲಿಕ ರೂಪಕದಂತೆ ಕಾಣುತ್ತದೆ. ನಾಟಕದ ಅಂತ್ಯಕ್ಕೆ ಬಂದಾಗ ದೊರೆಗೆ ಕಾಯಿಲೆಯ ಲಕ್ಷಣಗಳು ಕಂಡುಬಂದಾಗ ಜಾತ್ರೆಯ ಬಗೆಗಿನ ನಿರ್ಧಾರವನ್ನು ರಾಜ ಬದಲಿಸುತ್ತಾನೆ. ದೊರೆಸಾನಿಗಳು ಒಳಗೆ ಬರುವ ಜನಸಾಮಾನ್ಯರು ಊರು ಬಿಡುವ ಮತ್ತು ಸರಕಾರ ಹೇಳಿದ್ದೇ ಸತ್ಯ ಎನ್ನುವ ಡಾಕ್ಟರ ಮಾತು ಎಲ್ಲವೂ ಕೊರೊನಾ ಕಾಲದ ಅಥವಾ ಮುಂದೆ ಯಾವುದಾದರೂ ಸಾಂಕ್ರಾಮಿಕ ಬಂದರು ಆ ಕಾಲದ ಸತ್ಯವೇ ಎಂಬಂತೆ ನಾಟಕ ರಚನೆಯಾಗಿದೆ. ಎಲ್ಲ ಬಗೆಯ ಸೃಜನಶೀಲ ಅಭಿವ್ಯಕ್ತಿ ತನ್ನ ಕಾಲದ ಜನವಿರೋಧಿ ಅಧಿಕಾರದ ವಿರುದ್ಧ ಕಾಲಕ್ಕನುಗುಣವಾಗಿ ಪ್ರತಿಕ್ರಿಯಿಸುತ್ತಲೇ ಬಂದಿದೆ. ಜಾತ್ರೆ ವ್ಯವಸ್ಥೆಯನ್ನು ಕುರಿತು ಹೀಗೆ ಪ್ರತಿಕ್ರಿಯಿಸಿ ಸರ್ವಕಾಲಿಕ ಸತ್ಯವೊಂದರ ಅನಾವರಣವನ್ನು ಮಾಡಿದೆ. ಬೇಂದ್ರೆಯವರು ನಾಟಕಕಾರರಾಗಿ ತಮ್ಮ ಜೀವಪರವಾದ ನಿಲುವನ್ನು ಜಾತ್ರೆ ನಾಟಕದ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ದೇವರು ಮತ್ತು ಪೂಜಾರಿ, ಜಲಗಾರ ಮತ್ತು ಧನ್ವಂತರಿ ಚಿಕಿತ್ಸೆ ಮುಂತಾದ ಬರಹಗಳಲ್ಲಿ ನಿರ್ವಚಿಸುವ ದೇವರು, ಜಾತ್ರೆ ಮತ್ತು ಆಡಳಿತ ಜಾತ್ರೆ ನಾಟಕದ ಆಶಯ ಪರಸ್ಪರ ಭಿನ್ನವಾಗಿಲ್ಲ. ಬೇಂದ್ರೆ ಮತ್ತು ಕುವೆಂಪು ಕನ್ನಡದ ದಾರ್ಶನಿಕ ಮನಸ್ಸುಗಳ ಎನ್ನುವ ಮಾತು ಎಲ್ಲಾ ಕಾಲದ ಸತ್ಯವಾಗಿದೆ.

"ರಂಗಭೂಮಿಯ ಇತಿಮಿತಿಗಳನ್ನು ದಾಟಿ, ಹಸಿರು ಹುಲ್ಲು ಮತ್ತು ದಟ್ಟವಾದ ಮರಗಳನ್ನೇ ರಂಗವನ್ನಾಗಿ ಮಾಡಿಕೊಂಡ 'ಜಾತ್ರೆ' ವಿಜೃಂಭಣೆಯಿಂದ ಜರುಗಿ, ಬೇಂದ್ರೆಯವರ ನಾಟಕಕ್ಕೆ ಒಂದು ಹೊಸ ಆಯಾಮವನ್ನೇ ಕೊಟ್ಟಿತು. ಹಲವಾರು ಜಾನಪದ ಹಾಡು, ಕುಣಿತಗಳನ್ನು ಒಳಗೊಂಡ ಈ ನಾಟಕ ಕೇವಲ ಜಾನಪದ ಶೈಲಿಯನ್ನಷ್ಟೇ ಅಲ್ಲದೆ, ಬೀದಿ ನಾಟಕಗಳಂತೆ ಮೈಮ್ ಮತ್ತು ಪರೋಡಿಯ ಅಂಶಗಳನ್ನು ಸಮರಸವಾಗಿ ಅಳವಡಿಸಿಕೊಂಡಿದ್ದು ಒಂದು ವಿಶೇಷ. ಪ್ಲೇಗ್ ನಿಂದ ಸತ್ತವನೊಬ್ಬನ ಹೆಣ ಸಾಗಿಸುವ ದೃಶ್ಯ, ಅರಮನೆಯಲ್ಲಿ ಪ್ಲೇಗಿನಿಂದ ಸತ್ತ ಇಲಿ ಬಿದ್ದ ಸನ್ನಿವೇಶ. ಊರಿನಲ್ಲಿ ಪ್ಲೇಗ್ ಇಲ್ಲವೆಂದು ಸರಕಾರಿ ಸಂದೇಶವನ್ನು ಬಾರಿಬಾರಿಗೂ ಡಂಗುರ ಸಾರುವ ಚಪರಾಸಿ ಇವುಗಳೆಲ್ಲ ಬೀದಿನಾಟಕಗಳನ್ನು ನೆನಪಿಗೆ ತಂದರೆ; ಕುದುರೆಯ ದೃಶ್ಯ, ಕೋಲಾಟ ಮತ್ತು ಕುಣಿತ ಹಾಡಿನ ಸನ್ನಿವೇಶಗಳು, ಜಾನಪದ ಶೈಲಿಯ ಹೆಗ್ಗುರುತುಗಳಾಗಿದ್ದವು. ಈ ನಾಟಕವನ್ನು ಒಂದು ಅಪೂರ್ಣ ಅನುಭವವನ್ನಾಗಿಸಿದವು." (ನೇಸರು-ತಿಂಗಳೋಲೆ-ಮೇ,1987. ನಾಟ್ಯ ಪ್ರಯೋಗ ವರದಿ) ಜಾತ್ರೆ ನಾಟಕದ ಪ್ರಯೋಗವನ್ನು ಕುರಿತು ಈ ವರದಿ ರಂಗಪ್ರಯೋಗದ ಕೆಲ ವಿವರಗಳನ್ನು ಕೊಡುತ್ತಿದೆ ಮತ್ತು ಈ ಹೊತ್ತು ಜಾತ್ರೆ ನಾಟಕವನ್ನು ಪ್ರಯೋಗಿಸಬೇಕಾದ ತುರ್ತನ್ನು ಕೂಡ ಪ್ರಸ್ತಾಪಿಸುತ್ತಿದೆ. ಯಾವುದೇ ಸಾಹಿತ್ಯ ಮತ್ತು ರಂಗಕೃತಿಗಳು ಹೀಗೆ ಕಾಲಕಾಲಕ್ಕೆ ಮರುಹುಟ್ಟು ಪಡೆಯುತ್ತಿದ್ದ ಅದೊಂದು ಶ್ರೇಷ್ಠ ಅಭಿವ್ಯಕ್ತಿಯಾಗುತ್ತದೆ. ರಂಗಭೂಮಿಯು ಇಂದು ತನ್ನ ಪ್ರಯೋಗ ಮಂಡನೆ ಹಾಗೂ ಕಲಾಭಿವ್ಯಕ್ತಿಯ ಸಂಕೀರ್ಣತೆಯ ದೃಷ್ಟಿಯಿಂದ ಅನೇಕ ಹೊಸತುಗಳನ್ನು ಕಂಡಿದೆ. ಜಾತ್ರೆ ಎನ್ನುವ ನಾಟಕ ಈ ಎಲ್ಲ ಹೊಸತುಗಳನ್ನು ಮೈದಾಳಿ ಬರಬಹುದಾದ ಸಾಧ್ಯತೆಯುಳ್ಳ ರೂಪಕಾತ್ಮಕ ನಾಟಕ. ಮಾತು ದೃಶ್ಯವಾಗುವ, ದೃಶ್ಯವೇ ಮಾತಾಗುವ ಕಲಾತ್ಮಕತೆ ಜಾತ್ರೆ ನಾಟಕಕ್ಕೆ ಒದಗಿದೆ. ಸಮರ್ಥ ನಿರ್ದೇಶಕನ ದರ್ಶನಗಳನ್ನು ವಿಸ್ತರಿಸಿಕೊಂಡು ನಾಟಕ ಕಟ್ಟಬಹುದಾದ ರಂಗಪಠ್ಯವಿದು.

"ಕರ್ನಾಟಕ, ಭಾರತ ಭೂಮಂಡಲ ಐಕ್ಯ ಎಂಬುದು ಬಾಯಿ ಬಡಾಯಿ, ಬೆನ್ನ ಲಢಾಯಿ ಆಗಬಾರದು. ನಾವು ವಿವೇಕ ಹೀನರು, ಹೃದಯ ಹೀನರು ಆಗಬಾರದು. ಆದರೆ ಹೃದಯ ಮತ್ತು ವಿವೇಕ; ಸ್ವರೂಪ ಹೀನರಲ್ಲಿ ತಲೆದೋರಲಾರದು. ನಾಟಕ ಪ್ರೇಕ್ಷಣೀಯವಾಗಿ, ಮನೆಮನೆಯ ಪ್ರಾಪಂಚಿಕ ನಾಟಕ ಟ್ರ್ಯಾಜಿಡಿ ಆಗಬಾರದು, ಪ್ರಹಸನನೂ ಆಗಬಾರದು. ಉಪವಾಸಕ್ಕೂ, ಅಪಹಾಸಕ್ಕೂ ಈಡಾಗುವುದು ಬಾಳುವೆಯೇ ಅಲ್ಲ." (ಪುಟ5,ಜಾತ್ರೆ, ದರಾ ಬೇಂದ್ರೆ, ಶ್ರೀಮಾತಾ ಪ್ರಕಾಶನ, ಧಾರವಾಡ 2008) ನಾಟಕಕಾರ ಬೇಂದ್ರೆಯವರ ಮಾತು ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ ಎರಡು ನೆಲೆಗಳಲ್ಲೂ ಸ್ಪಷ್ಟತೆಯೊಂದನ್ನು ದಾಖಲಿಸುತ್ತಿದೆ. 1939 ರಲ್ಲಿ 'ಜಾತ್ರೆ' ನಾಟಕವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದರೂ, ಎಲ್ಲಿಯೂ ಅನುವಾದವೆಂಬಂತೆ ಕಾಣುವುದಿಲ್ಲ ಇದು ನಾಟಕದ ಶಕ್ತಿ. ಬೇಂದ್ರೆ ಜಾತ್ರೆ ನಾಟಕದ ಮೂಲಕ ಒಬ್ಬ ನಾಟಕಕಾರರಾಗಿ ಕಾಣುತ್ತಾರೆ ಎಂಬುದಂತೂ ಸತ್ಯ.

"ಸತ್ತವರೆ ಸಾಯುವರು ಇರುವವರೇ ಬಾಳುವರು
ಗುಟ್ಟಿಲ್ಲ ರಟ್ಟಿಲ್ಲ,ಕುಟ್ಟು ಧಿಕತಿಟಿ, ದಿಮಿದಿಮಿ, ಭೂತನೃತ್ಯದ ಸೀಮಿ
ಒಡಕಿಲ್ಲ. ಪೆಳ್ಳು ಒಕ್ಕಟ್ಟು!"

ನಾಕುತಂತಿ ಕವನ ಸಂಕಲನದ ಈ ಕವಿತೆ ನಾಟಕದಲ್ಲೂ ಆಶಯ ಮತ್ತು ಅಭಿವ್ಯಕ್ತಿಗೆ ಪೂರಕವಾಗಿ ಬಳಕೆಯಾಗಿದೆ. ಈ ಹಾಡು ನೊಂದವರ ಹಾಡಿಗೆ ಪಾಡಾಗಿದೆ. ಒಗ್ಗಟ್ಟಿಗೆ ಇರುವ ತೊಡಕುಗಳಿಗೆ ದಾರಿಗಳನ್ನು ತೋರಿಸುವ ಸೂಕ್ಷ್ಮತೆಯಾಗಿವೆ ಈ ಹಾಡು ಜನ ಗೀತೆಯಾಗಿದೆ. ಜಾತ್ರೆ ನಾಟಕ ಜನರ ನಾಟಕವಾಗಿದೆ. ಈ ಹಿಂದೆ ಸಾಂಕ್ರಾಮಿಕ ಪ್ಲೇಗು ಬಂದ ಕಾಲಕ್ಕೂ, ಇಡೀ ಪ್ರಪಂಚವನ್ನೇ ಭಾದಿಸುತ್ತಿರುವ ಕರೋನ ಕಾಲದಲ್ಲೂ ಅಧಿಕಾರ ಮತ್ತು ಆಡಳಿತ ಯಂತ್ರದ ಚಾಲನೆಯಲ್ಲಿ ಕಾಣದ ಬದಲಾವಣೆಯನ್ನು ಮತ್ತು ಸಾಮಾನ್ಯ ಜನರು ಸಂಕಟಕ್ಕೀಡಾಗುವ, ಸಾವು ನೋವಿಗೆ ಬಲಿಯಾಗುವ ಸೂಕ್ಷ್ಮತೆಯನ್ನು ನಾಟಕ ಸಮರ್ಥವಾಗಿ ಮಂಡಿಸುತ್ತದೆ. ಜಾತ್ರೆ ನಾಟಕ ಈ ಎಲ್ಲ ನೆಲೆಗಳಿಂದ ಕಾಲಿಕ ಅಭಿವ್ಯಕ್ತಿಯಾಗಿದೆ.

ಸುಳ್ಳಿನ ಮತ್ತು ಹುಚ್ಚಾಟಗಳ ವಿಡಂಬನೆಯನ್ನು ಜಾತ್ರೆ ನಾಟಕ ಮಂಡಿಸುತ್ತದೆ. ನಾಟಕದುದ್ದಕ್ಕೂ ಬರುವ ಜಾತ್ರೆಯ ಪ್ರಸ್ತಾಪ ಸುಳ್ಳಿನ ಜಾತ್ರೆಯೇ ಆಗಿದೆ. ಒಬ್ಬ ಪಾಳೇಗಾರ ಊರಲ್ಲಿ ಪ್ಲೇಗ್ ಬಂದರೂ ಜಾತ್ರೆ ತಪ್ಪಿಸಲು ತಯಾರಿಲ್ಲದೆ ತೋರುವ ಉದ್ಧಟತನ ಜನಸಾಮಾನ್ಯರಿಗೆ ಮಾರಕವಾಗುತ್ತದೆ. ಜನ ಸತ್ತರೆ ಸಾಯಲಿ, ಬೊಕ್ಕಸಕ್ಕೆ ಬರುವ ಆದಾಯ ತಪ್ಪಬಾರದು ಎಂಬ ಹಠದಿಂದ ಊರಿಗೆ ಊರೇ ಅನಾರೋಗ್ಯಕ್ಕೆ ತುತ್ತಾಗುವ ದೃಶ್ಯ ಮತ್ತೆ ಸಮಕಾಲೀನ ಕರೋನ ಕಾಲವನ್ನೇ ಪ್ರತಿನಿಧಿಸುತ್ತಿದೆ. ಊರಲ್ಲಿ ಪ್ಲೇಗ್ ಇಲ್ಲ ಎಂದು ಡಂಗುರ ಸಾರಿಸಿ ಬೊಕ್ಕಸವನ್ನು ತುಂಬಿಸುವ ಪ್ರಯತ್ನ ಮಾಡಿ ಕಡೆಗೇ ತಾನೇ ಪ್ಲೇಗ್ ರೋಗಕ್ಕೆ ತುತ್ತಾಗಿ, ತನ್ನ ಸುಳ್ಳು, ಉದ್ಧಟತನ, ಜನವಿರೋಧಿಯಾದ ನಿಲುವುಗಳಿಗೆ ತುತ್ತಾಗುತ್ತಾನೆ.ರಾಜ ಪ್ಲೇಗ್ ಇದೆ ಎಂದರೆ ಪ್ಲೇಗ್ ಇದೆ, ಇಲ್ಲವೆಂದರೆ ಇಲ್ಲ ಎನ್ನುವ ಡಾಕ್ಟರ್ ಅಧಿಕಾರಶಾಹಿಯ ಮೂರ್ಖತನ ಹೇಗೆ ಇಡೀ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುತ್ತದೆ ಎನ್ನುವುದಕ್ಕೆ ಜಾತ್ರೆ ನಾಟಕ ಉತ್ತಮ ಉದಾಹರಣೆಯಾಗಿದೆ. ಕನ್ನಡ ರಂಗಭೂಮಿ ಆಗ ತಾನೇ ಹೊಸ ಹುಡುಕಾಟಗಳಿಗೆ ತೆರೆದುಕೊಳ್ಳುತ್ತಿರುವ ಕಾಲದಲ್ಲಿ ಟ್ರಾಜಿಡಿ ಮತ್ತು ಕಾಮಿಡಿಗಳ ಮೂಲಕ ನಾಟಕವನ್ನು ಕಟ್ಟಿರುವ ಬೇಂದ್ರೆಯವರು ಕಾವ್ಯದಲ್ಲಿ ಕಂಡ ಯಶಸ್ಸು ನಾಟಕದಲ್ಲಿ ಸಂಪೂರ್ಣ ಪಡೆಯಲು ಆಗಲಿಲ್ಲವೆನ್ನಬಹುದು.

ಈ ಸರಣಿಯ ಹಿಂದಿನ ಬರೆಹಗಳು:

ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ

MORE FEATURES

ಗಜಲ್ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ

27-04-2024 ಬೆಂಗಳೂರು

"ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ...

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...