86ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆ

Date: 22-01-2021

Location: ಬೆಂಗಳೂರು


ಹಾವೇರಿಯಲ್ಲಿ ಜರುಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ. ದೊಡ್ಡರಂಗೇಗೌಡರು ಆಯ್ಕೆಯಾಗಿದ್ದಾರೆ.

2021ರ ಫೆಬ್ರವರಿ 26 ರಿಂದ 28ರವರೆಗೆ ಸಮ್ಮೇಳನ ಜರುಗುತ್ತಿದ್ದು, ಶುಕ್ರವಾರ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆ ನಡೆದು, ಸಾಹಿತಿ ಡಾ. ದೊಡ್ಡರಂಗೇಗೌಡರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯಲ್ಲಿ ಜರುಗುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ. ದೊಡ್ಡರಂಗೇಗೌಡರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಸಾಹಿತಿಗಳಾದ ಕೆ.ಎಸ್. ಭಗವಾನ್, ಗೊ.ರು. ಚೆನ್ನಬಸಪ್ಪ, ವೀಣಾ ಶಾಂತೇಶ್ವರ, ಎಸ್. ಆರ್. ಗುಂಜಾಳ ಅವರ ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಸಮಿತಿಯು ಸಾಹಿತಿ ಡಾ. ದೊಡ್ಡರಂಗೇಗೌಡರ ಹೆಸರನ್ನು ಸರ್ವಾನುಮತದೊಂದಿಗೆ ಒಪ್ಪಿಗೆ ಸೂಚಿಸಲಾಯಿತು ಎಂದರು.

ಪರಿಷತ್ತು ಈವರೆಗೂ ಸಾಹಿತ್ಯಕ ಅರ್ಹತೆ ಹಾಗೂ ಪ್ರತಿಭೆಯನ್ನು ಪರಿಗಣಿಸಿಯೇ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುತ್ತಿದೆ. ಅದೇ ಪಾರಂಪರಿಕ ವಿಧಾನದೊಂದಿಗೆ ಸಾಹಿತಿ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಿದೆ. ಕೋವಿಡ್ -19 ಸನ್ನಿವೇಶವು ಸಮ್ಮೇಳನದ ಸರಾಗತೆಗೆ ಭಂಗ ಬರದಂತೆ ಎಚ್ಚರವಹಿಸಲಾಗಿದೆ. ಈ ಕುರಿತು ನಿರ್ಬಂಧಗಳನ್ನು ಸಡಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ ಎಂದೂ ಅವರು ಮಾಹಿತಿ ನೀಡಿದರು.

ದೊಡ್ಡರಂಗೇಗೌಡರ ಪರಿಚಯ: ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ಪ್ರವಾಸ ಕಥನ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರ ಪ್ರಮುಖ ಕೃತಿಗಳೆಂದರೆ ಅನನ್ಯನಾಡು , ಪಿರಮಿಡ್ಡುಗಳ ಪರಿಸರದಲ್ಲಿ (ಪ್ರವಾಸ ಕಥನ), ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ (ಭಕ್ತಿಗೀತೆಯ ಕೃತಿ), ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ (ಗದ್ಯ ಕೃತಿ) ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ (ಕಾವ್ಯ),ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ (ರೂಪಕ) ಮುಂತಾದವು.

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರು ಸಿನಿಮಾ ಸಂಭಾಷಣೆ ಹಾಗೂ ಚಲನಚಿತ್ರಗೀತೆಗಳನ್ನು ಬರೆದಿದ್ದಾರೆ. ಜನುಮದ ಜೋಡಿ, ಅಶ್ವಮೇಧ, ಬಂಗಾರದ ಜಿಂಕೆ ಮುಂತಾದ ಪ್ರಖ್ಯಾತ ಸಿನಿಮಾಗಳಿಗೂ ಗೀತೆ ರಚನೆ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ, ವಿಶೇಷ ಗೀತೆ ಪ್ರಶಸ್ತಿ, ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಸಂದಿವೆ.

 

MORE NEWS

ಲೇಖಿಕಾ ಸಾಹಿತ್ಯ ವೇದಿಕೆಯ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ’ ಫಲಿತಾಂಶ ಪ್ರಕಟ

07-05-2024 ಬೆಂಗಳೂರು

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ- ಹಿರಿಯ ಲೇಖಕಿ ವಾಣಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ `ವಾಣಿ ಕೌಟುಂಬಿಕ ಕಥಾ ...

ನಯನ ರಾಜು ಅವರ ಕಾರ್ಯವೈಖರಿ ಪಕ್ವತೆಯಿಂದ ಕೂಡಿದೆ; ಬರಗೂರು ರಾಮಚಂದ್ರಪ್ಪ

05-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜ...

ಗಂಭೀರವಾದ ಸಾಹಿತ್ಯ ವಿಮರ್ಶೆಗಳ ಸ್ಥಾನಮಾನ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದೆ; ಬಸವರಾಜ ಕಲ್ಗುಡಿ

05-05-2024 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನ...