ಆತ್ಮ ಚರಿತ್ರೆಗಳ ಓದು ವಿದ್ಯಾಭ್ಯಾಸದ ಗುಣಮಟ್ಟವನ್ನು ಹೆಚ್ಚಿಸಬಲ್ಲುದು: ಕೆ. ಎ. ದಯಾನಂದ


ಹೆಚ್ ನರಸಿಂಹಯ್ಯನವರ 'ಹೊರಾಟದ ಹಾದಿ', ಎಸ್ ಜಿ ಎಸ್ ಅವರ 'ಯರೆಬೇವು' ಆತ್ಮ ಚರಿತ್ರೆಗಳನ್ನು ಶಾಲಾ ಕಾಲೇಜುಗಳ ಮೇಷ್ಟ್ರುಗಳಿಗೆ ಕಡ್ಡಾಯ ಅಧ್ಯಯನ ಪಠ್ಯವನ್ನಾಗಿಯಾದರೂ ಮಾಡಿದಲ್ಲಿ ಬಹುಶಃ ನಮ್ಮ ಶಾಲಾಕಾಲೇಜಿನ ಪರಿಸ್ಥಿತಿ ಕಿಂಚಿತ್ತಾದರೂ ಸುಧಾರಿಸಬಹುದೇನೊ ಎಂಬ ಆಶಾಭಾವವಷ್ಟೆ ಎನ್ನುತ್ತಾರೆ ಐಎಎಸ್ ಅಧಿಕಾರಿ, ಬರಹಗಾರ ಕೆ. ಎ. ದಯಾನಂದ. ಅವರು ಆತ್ಮಚರಿತ್ರೆಗಳ ಬಗೆಗೆ ಬರೆದ ಲೇಖನ ನಿಮ್ಮ ಓದಿಗಾಗಿ...

ವಿದ್ಯಾರ್ಥಿಯಾಗಿದ್ದಾಗ ವಿವೇಕಾನಂದರ ಜೀವನ ಚರಿತ್ರೆ ಓದಿದ್ದರೂ ಅದು ಯಾಂತ್ರಿಕವಾಗಿತ್ತು. ನಂತರ ಗಾಂಧೀಜಿಯವರ ಆತ್ಮ ಚರಿತ್ರೆ ಓದಿದ್ದರೂ ಅದು ಇತಿಹಾಸದ ಪಠ್ಯ ಭಾಗವೆಂಬಂತೆ ಓದಿದ್ದೇನೆಯೇ ಹೊರತು ಬೇರೆ ದೃಷ್ಟಿಕೋನವಿರಲಿಲ್ಲ. ಆತ್ಮ ವೃತ್ತಾಂತದ ಹಣೆಪಟ್ಟಿಯಲ್ಲಿ ನಾನು 'ಹಾದಿಗಲ್ಲು' ಕೃತಿಯನ್ನು ರಚಿಸಿದ್ದ ನನ್ನ ಆತ್ಮ ಚರಿತ್ರೆ ಎಂಬ ಕಲ್ಪನೆಗಿಂತ ನನ್ನಂತಹ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ತುಂಬುವ ಉದ್ದೇಶವಾಗಿತ್ತೇ ಹೊರತು ಬೇರೆ ಯೋಚನೆಯ ನನ್ನಲಿರಲಿಲ್ಲ. ನನ್ನ ಕೃತಿಯನ್ನು ಕೆಲವರ ಕೈಗಿತ್ತಾಗ ಆ ಆತ್ಮಚರಿತ್ರೆ ಓದಿದ್ದೀರ, ಈ ಆತ್ಮ ಚರಿತ್ರೆ ಓದಿದ್ದೀರ ಎಂದು ಕೇಳುತಿದ್ದಾಗ ನನ್ನೊಳಗೆ ನನಗೆ ಏನೋ ಕೊರತೆ ಕಾಡಲಾರಂಭಿಸಿತ್ತು.

ಅದೆ ಗುಂಗಿನಲ್ಲಿ ಮತ್ತೊಮ್ಮೆ ಗಾಂಧೀಜಿಯವರ 'ಸತ್ಯಾನ್ವೇಷಣೆ' ಮತ್ತು ಹೆಚ್ ನರಸಿಂಹಯ್ಯನವರ 'ಹೋರಾಟದ ಹಾದಿ' ಓದಿದೆ. ಸತ್ಯಾನ್ವೇಷಣೆ ಬದುಕನ್ನು ಪ್ರಯೋಗಶಾಲೆಯಲ್ಲಿಟ್ಟು ಪ್ರಯೋಗ ಮಾಡಿದ ಅನುಭವವಾದರೆ, ಹೋರಾಟದ ಹಾದಿ ಆದರ್ಶ ಬದುಕಿನ ಬೆನ್ನಟ್ಟಿ ಬದುಕು ಮುಗಿಸಿದ ಯಶಸ್ಸಿನ ಯಾನವಾಗಿತ್ತು. ಕೆಲವು ತಿಂಗಳ ಹಿಂದೆ ಪುರುಷೋತ್ತಮ ಬಿಳಿಮಲೆಯವರ 'ಕಾಗೆ ಮುಟ್ಟಿದ ನೀರು' ಆತ್ಮ ಚರಿತ್ರೆ ಹೊರ ಬಂದ ನಂತರ ಅದನ್ನು ಓದಿದ್ದೆ.

ಗುರುಗಳಾದ ಎಸ್ ಜಿ ಎಸ್ ರವರು ತಮ್ಮ ಆತ್ಮಚರಿತ್ರೆ ಬರೆಯುತ್ತಿರುವುದು ತಿಳಿದೆ ಇತ್ತು. ಹಾಗೂ ಅದರೊಳಗಿನ ಒಂದೆರಡನ್ನು ಲೇಖನವನ್ನು ಕರಡು ಹಂತದಲ್ಲಿ ಓದಿದ್ದರಿಂದ ಕುತೂಹಲ ಹುಟ್ಟಿತ್ತು. ಕೃತಿ ರಚನೆಗೊಂಡು ಅದರ ಬಿಡುಗಡೆ ಅಹ್ವಾನ ಪತ್ರಿಕೆಯನ್ನು ಕಳುಹಿಸಿದರು ಭಾಗವಹಿಸಲಾಗಲಿಲ್ಲ. ಅಲ್ಲದೆ ಕಾರ್ಯದೊತ್ತಡವೊ ಸೋಮಾರಿತನವೊ ಒಂದೆರಡು ಮೂರು ತಿಂಗಳಿನಿಂದ ಮಾತನಾಡಿಸಲು ಆಗದ್ದರಿಂದ, ಅವರ 'ಯರೆಬೇವು' ಕೊಂಡು ಓದಿಯೇ ಅಭಿಪ್ರಾಯದೊಂದಿಗೆ ಅಭಿನಂಧನೆ ಸಲ್ಲಿಸಬೇಕೆನಿಸಿ ಕೊಂಡು ತಂದು ಓದಿಯೂ ಮುಗಿಸಿದೆ.

'ಯರೆಬೇವು' ಅದು ಅವರ ಆತ್ಮಚರಿತ್ರೆಯಾದರು ಗ್ರಾಮೀಣ ಭಾಗದ ಕಷ್ಟದ ಬದುಕಿನಿಂದ ಬಂದ ನಮ್ಮಂತಹವರಿಗೆ ನನ್ನದೆ ಬದುಕೆಂಬಂತೆ ಅಲ್ಲಲ್ಲಿ ಭಾಷವಾಗುತ್ತಿತ್ತು. ಅದರಲ್ಲಿಯೂ ಅವರ ಇಂಗ್ಲೀಷ್ ಕಲಿಕೆಯ ಯಾನ ಅವರ ವಿದ್ಯಾರ್ಥಿ ಬದುಕಿನುದ್ದಕ್ಕೂ ಸಾಗಿದ ರೀತಿ ಹಾಗೂ ಮೇಷ್ಟ್ರು ಕೆಲಸದ ಮಹತ್ವ ಅದಕ್ಕೆ ತನ್ನನ್ನು ತಾನು ತೊಡಗಿಸಿಕೊಂಡ ಶೈಕ್ಷಣಿಕ ಬದುಕಿನ ಯಾನ ನಿಜಕ್ಕೂ ಹೆಮ್ಮೆ ಎನಿಸಿತು. ಜೊತೆ ಜೊತೆಗೆ ಬದುಕಿನ ಜಂಜಾಟ, ಹಳ್ಳಿಯ ಬದುಕಿನ ಬವಣೆ, ಹಳ್ಳಿ ಸೊಗಡಿನ ಸಂಸ್ಕೃತಿಯೊಂದಿಗೆ ಬದುಕನ್ನು ವೈಚಾರಿಕತೆಗೆ ಒರೆಗಚ್ಚಿಕೊಳ್ಳುತ್ತಾ ಅಂತೆಯೇ ನಡೆಯುತ್ತಾ ಸಾಗುವುದು ಹೆಮ್ಮೆಯ ವಿಚಾರ.

ಶಿಕ್ಷಕನಾದವನು ಮಕ್ಕಳ ಮನಸ್ಥಿತಿಯನ್ನರಿತು ಕಾಲ, ಸ್ಥಳ, ಹಿನ್ನೆಲೆಗಳನ್ನು ಗಮನದಲ್ಲಿರಿಸಿಕೊಂಡು ನಿತ್ಯ ಓದಿನ ಮೂಲಕ ತಾನೂ ವಿದ್ವತ್ತನ್ನು ಹೆಚ್ಚಿಸಿಕೊಳ್ಳುತ್ತ, ಭೋದಿಸುತ್ತಾ, ಮಕ್ಕಳನ್ನು ಬೆಳೆಸುತ್ತಾ, ವಿದ್ಯಾರ್ಥಿಗಳ ಮನಸಿನಲ್ಲಿ 'ನಮ್ಮ ಮೇಷ್ಟ್ರು' ಎಂಬ ಭಾವನೆ ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿಕೊಂಡವರು ಕೆಲವರು ಮಾತ್ರ. ಅಂತಹವರಲ್ಲಿ ಎಸ್.ಜಿ.ಎಸ್ ಅವರು ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಕೃತಿ ಓದುತ್ತಾ ಹೋದಂತೆ ಆ ತಲೆಮಾರೆ ಕಳೆದು ಹೋಗಿದೆಯೇನೊ ಎಂಬ ಭಾವನೆ ಮೂಡುತ್ತದೆ.

ಅದೆಷ್ಟೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಿಲ್ಲದೆ, ತಾನು ಸಾಧಿಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವ ಮಾರ್ಗದರ್ಶಕರಿಲ್ಲದೆ, ತಮ್ಮ ಕೀಳರಿಮೆ, ಬಡತನ, ನಿರುತ್ಸಾಹದಿಂದ ನಲುಗುತ್ತಿರುವವರು ಇಂದಿನ ಬಹುಪಾಲು ವಿದ್ಯಾರ್ಥಿಗಳು.

ಶಿಕ್ಷಕನೆಂದರೆ ಮಕ್ಕಳ ಅಂಕಪಟ್ಟಿಯಲ್ಲಿ ಅಂಕಗಳು ಹೆಚ್ಚೆಚ್ಚು ಬರುವಂತೆ ಮಾಡುವುದೇ ಗುರಿಯೆಂದು ಭಾವಿಸಿ ಬೋಧಿಸುವ ಕೆಲವು ಗುರುಗಳು, ಸರಕಾರಿ ಕೆಲಸಕ್ಕಾಗಿ ಹಾತೊರೆಯುವ ಸಂಧರ್ಭದಲ್ಲಿ ಜಗತ್ತಿನ ಆದರ್ಶಗಳನ್ನು ಮಾತನಾಡುತ್ತಾ ಇಡೀ ವ್ಯವಸ್ಥೆಯನ್ನು ಹಿಯ್ಯಾಳಿಸುತ್ತಾ, ನನಗೆ ಉದ್ಯೋಗ ಸಿಕ್ಕರೆ ಮಾಡಿತೋರಿಸುತ್ತೇವೆ ಎಂದವರು, ಸಿಕ್ಕ ತಕ್ಷಣ ಉತ್ತಮ ಸ್ಥಳ, ಬಡ್ತಿ, ಇಂಕ್ರಿಮೆಂಟ್ ಹೀಗೆ ಮುಳುಗಿದವರೇ ಬಹುಪಾಲು. ಇನ್ನು ಬಹುಪಾಲು ಶಿಕ್ಷಕರ ವೃತ್ತಿ ಜೀವನ ಭಿನ್ನವೇನಿಲ್ಲ. ತಾವು ವಿದ್ಯಾರ್ಥಿಯಾಗಿದ್ದಾಗ ಬರೆದುಕೊಂಡ ನೋಟ್ಸನ್ನೆ ತಾವು ಶಿಕ್ಷಕರಾಗಿದ್ದಾಗ ತಮ್ಮ ವಿದ್ಯಾರ್ಥಿಗಳಿಗೆ ಬರೆಸುತ್ತಿದ್ದುದ್ದನ್ನು ನಾನು ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಕನಾಗಿದ್ದಾಗ ನೋಡಿದ್ದೇನೆ. ಶಿಕ್ಷಕ ವೃತ್ತಿ ದೊರೆತ ನಂತರ ನೆಪಮಾತ್ರಕ್ಕೆ ಪಾಠ ಮಾಡಿ ಉಳಿದ ವ್ಯವಹಾರ ವ್ಯವಸಾಯ ಮಾಡುವ ಶಿಕ್ಷಕರನ್ನು ಸಹ ನೋಡಿದ್ದೇನೆ. ಅವೆಲ್ಲದರ ಫಲಿತಾಂಶ ನಮ್ಮ ಸರ್ಕಾರಿ ಕಾಲೇಜುಗಳು ಮತ್ತು ಶಾಲೆಗಳ ಸ್ಥಿತಿ ಕಣ್ಮುಂದೆಯೇ ಕಾಣುತ್ತಿದೆ.

ಹೆಚ್ ನರಸಿಂಹಯ್ಯನವರ 'ಹೊರಾಟದ ಹಾದಿ', ಎಸ್ ಜಿ ಎಸ್ ಅವರ 'ಯರೆಬೇವು' ಆತ್ಮ ಚರಿತ್ರೆಗಳನ್ನು ಶಾಲಾ ಕಾಲೇಜುಗಳ ಮೇಷ್ಟ್ರುಗಳಿಗೆ ಕಡ್ಡಾಯ ಅಧ್ಯಯನ ಪಠ್ಯವನ್ನಾಗಿಯಾದರೂ ಮಾಡಿದಲ್ಲಿ ಬಹುಶಃ ನಮ್ಮ ಶಾಲಾಕಾಲೇಜಿನ ಪರಿಸ್ಥಿತಿ ಕಿಂಚಿತ್ತಾದರೂ ಸುಧಾರಿಸಬಹುದೇನೊ ಎಂಬ ಆಶಾಭಾವವಷ್ಟೆ.

ಕೆ. ಎ. ದಯಾನಂದ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಹಾದಿಗಲ್ಲು ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...