ನಾಡಿನ ಅಂತರಂಗಕ್ಕೆ ಕನ್ನಡಿ ಹಿಡಿವ ಲೇಖಕ-ಲಿಯೋ ಟಾಲ್‍ಸ್ಟಾಯ್

Date: 09-09-2019

Location: ಬೆಂಗಳೂರು


‘ಲಿಯೋ ಟಾಲ್‍ಸ್ಟಾಯ್’ ಎಂದೇ ಪರಿಚಿತರಾಗಿರುವ ಕೌಂಟ್ ಲೆವ್ ನಿಕೊಲಯೆವಿಚ್ ಟಾಲ್‍ಸ್ಟಾಯ್ (1828-1910) ರಷ್ಯಾದವರು. ಜಗತ್ತಿನ ಶ್ರೇಷ್ಠ ಬರಹಗಾರ ಸಾಲಿನಲ್ಲಿ ಪ್ರಮುಖರಾಗಿರುವ ಟಾಲ್‍ಸ್ಟಾಯ್‍ರ ಸೃಜನಶೀಲ ಪ್ರತಿಭೆಯ ಬಗ್ಗೆ ಬರೆಯುತ್ತ ಲೆನಿನ್ ‘...ತನ್ನ ಕಾಲಘಟ್ಟದ ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದರಿಂದಾಗಿ ಮತ್ತು ತನ್ನ ಕೃತಿಗಳಲ್ಲಿ ಕಲಾತ್ಮಕತೆಯ ಶಕ್ತಿಯನ್ನು ಬೆಳೆಸಿದ ಎತ್ತರದಿಂದಾಗಿ ಈತನ ಕೃತಿಗಳು ವಿಶ್ವಸಾಹಿತ್ಯದಲ್ಲಿ ಅಗ್ರಮಾನ್ಯವಾಗಿ ನಿಲ್ಲುತ್ತವೆ’ ಎಂದು ಸರಿಯಾಗಿ ಗುರುತಿಸುತ್ತಾರೆ.

ರಷ್ಯಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟಾಲ್‍ಸ್ಟಾಯ್, ವಾರ್ ಅಂಡ್ ಪೀಸ್ (1869), ಅನ್ನಾ ಕರೆನಿನ (1877), ರಿಸರಕ್ಷನ್ (1899) ಕಾದಂಬರಿಗಳಿಂದ ಲೋಕಮಾನ್ಯರಾದರು. ಚೈಲ್ಡ್‍ಹುಡ್, ಬಾಯ್‍ಹುಡ್ ಅಂಡ್ ಯೂತ್ (1852-1856) ಎಂಬ ಆತ್ಮಕಥಾನಕ ಮಾದರಿಯ ಕೃತಿಗಳು, ಕ್ರಿಮಿಯನ್ ಯುದ್ಧದ ಅನುಭವಗಳನ್ನು ಆಧರಿಸಿದ ಸೆವಾಸ್ಟೊಪೋಲ್ ಸ್ಕೆಚಸ್ (1855) ಸಾಹಿತ್ಯ ಕ್ಷೇತ್ರದಲ್ಲಿ ಟಾಲ್‍ಸ್ಟಾಯ್ ಹೆಸರನ್ನು ಬಲವಾಗಿ ನೆಲೆಗೊಳ್ಳುವಂತೆ ಮಾಡಿದವು. ಇವರ ‘ದ ಡೆತ್ ಆಫ್ ಇವಾನ್ ಇಲಿಚ್’, ‘ಹಾದ್‍ಜಿ ಮುರಾದ್’, ‘ಕ್ರುಯ್‍ತ್ಸರ್ ಸೊನಾಟ’ ಮತ್ತಿತರ ಕತೆಗಳು ಜಗತ್ತಿನ ಕಥಾಸಾಹಿತ್ಯದಲ್ಲಿ ಹೊಸಶಕೆಯನ್ನು ಬರೆದ ಕಥೆಗಳಾಗಿವೆ.

1870ರ ಸಮಯದಲ್ಲಿ ಟಾಲ್‍ಸ್ಟಾಯ್ ಬದುಕಿನಲ್ಲಿ ಉಂಟಾದ ತೀವ್ರ ನೈತಿಕ, ಆಧ್ಯಾತ್ಮಿಕ ಸಂಘರ್ಷಗಳು ಅವರನ್ನು ಹಲವು ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದವು. ಆಗರ್ಭ ಶ್ರೀಮಂತನಾಗಿದ್ದರೂ ವ್ಯವಸಾಯದಲ್ಲಿ ತೊಡಗಿಸಿಕೊಂಡರು, ತೋಟದ ಕಾರ್ಮಿಕರ ಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಹಲವಾರು ದೇಶಗಳನ್ನು ಸುತ್ತಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಅಧ್ಯಯನ ಮಾಡಿ, ರಷ್ಯಾದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಲೋಪದೋಷಗಳ ಬಗ್ಗೆ ಬರೆದರು. ಇದರಿಂದಾಗಿ ಸರ್ಕಾರವನ್ನು ಎದುರುಹಾಕಿಕೊಂಡು ಕಡೆವರೆಗೂ ಹೋರಾಡಿದರು. ಯೇಸುಕ್ರಿಸ್ತನ ಬೋಧನೆಗಳನ್ನು ವಿಶ್ಲೇಷಿಸಿದ್ದಕ್ಕಾಗಿ ಟಾಲ್‍ಸ್ಟಾಯ್‍ರನ್ನು ‘ಕ್ರೈಸ್ತ ಅರಾಜಕತಾವಾದಿ’ಯೆಂದು ಕರೆಯಲಾಯಿತು. ‘ದ ಕಿಂಗ್‍ಡಮ್ ಆಫ್ ಗಾಡ್ ಈಸ್ ವಿದಿನ್ ಯು’ ಎಂಬ ಹೆಸರಿನ ಈ ವಿಶ್ಲೇಷಣಾ ಬರಹವು ಮಹಾತ್ಮಗಾಂಧಿಯವರನ್ನು ಒಳಗೊಂಡಂತೆ ಜಗತ್ತಿನ ಹಲವು ಶ್ರೇಷ್ಠ ವ್ಯಕ್ತಿಗಳ ಮೇಲೆ ಮೇಲೆ ಮಹತ್ವ ಪರಿಣಾಮ ಬೀರಿದ ಕೃತಿ.

ಟಾಲ್‍ಸ್ಟಾಯ್ ಮತ್ತೆ ಹೇಳಿದ ಮಕ್ಕಳ ಕಥೆಗಳು...

ಟಾಲ್‍ಸ್ಟಾಯ್ ಹುಟ್ಟಿದ್ದು ಮತ್ತು ಬದುಕಿನ ಬಹಳಷ್ಟು ಕಾಲ ಕಳೆದದ್ದು ಯಾಸ್ನಾಯ ಪೊಲ್ಯಾನದ ತನ್ನ ತೋಟದಲ್ಲಿ. ಟಾಲ್‍ಸ್ಟಾಯ್‍ಗೆ ಮಕ್ಕಳೆಂದರೆ ಬಹಳ ಪ್ರೀತಿ, ಹಾಗಾಗಿ ತನ್ನ ತೋಟದ ಕೆಲಸಗಾರರ ಮಕ್ಕಳಿಗಾಗಿ ಹಲವಾರು ಕಥೆಗಳನ್ನು ಬರೆದ.

1863ರಲ್ಲಿ ಆರಂಭವಾದ ವಾರ್ ಅಂಡ್ ಪೀಸ್ ಮಹಾಕಾದಂಬರಿಯ ಬರವಣ ಗೆಯ ಕೆಲಸವು ಮುಂದಿನ ಆರು ವರ್ಷಗಳ ಕಾಲ ಟಾಲ್‍ಸ್ಟಾಯ್‍ನನ್ನು ಸಂಪೂರ್ಣವಾಗಿ ಆವರಿಸಿತ್ತು. ರಷ್ಯಾದ ಸ್ಥಳೀಯ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿಯು ಆ ದೇಶದ ಸಾಹಿತ್ಯ ಲೋಕದಲ್ಲಿ ಸಂಚಲನವನ್ನು ಮೂಡಿಸಿತ್ತು. ವಾರ್ ಅಂಡ್ ಪೀಸ್ ಬರವಣ ಗೆ ಆರಂಭಗೊಂಡಾಗ ಟಾಲ್‍ಸ್ಟಾಯ್ ಆಗಿನ್ನೂ ಸೋನ್ಯ ಬೆಹರ್ಸ್‍ಳನ್ನು ಮದುವೆ(1862)ಯಾಗಿದ್ದ. 1869ರ ಡಿಸೆಂಬರ್‍ನಲ್ಲಿ ಕಾದಂಬರಿಯ ಅಂತಿಮ ಭಾಗ ಪ್ರಕಟವಾಗುವ ಹೊತ್ತಿಗೆ ಅವರಿಗೆ ನಾಲ್ಕು ಮಕ್ಕಳು ಹುಟ್ಟಿದ್ದರು. ಇಷ್ಟು ದೀರ್ಘಕಾಲದ ಮಗ್ನ ಅನುಸಂಧಾನದ ಬರವಣ ಗೆಯ ಫಲವಾದ ಕಾದಂಬರಿಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಆದರೆ ಟಾಲ್‍ಸ್ಟಾಯ್ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜರ್ಮನ್ ತತ್ವಶಾಸ್ತ್ರದ ಓದಿನಲ್ಲಿ ತೊಡಗಿಸಿಕೊಂಡ. ದಿನದ ಕೆಲ ಸಮಯವನ್ನು ತನಗಿಷ್ಟವಾದ ಬೇಸಾಯದಲ್ಲಿ ಕಳೆಯುತ್ತಿದ್ದ. ಇದೇ ಕಾಲಕ್ಕೆ ಗ್ರೀಕ್ ಭಾಷೆಯ ಕಲಿಕೆಯನ್ನು ಮೊದಲುಮಾಡಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಹೋಮರ್, ಪ್ಲೇಟೋ, ಈಸೋಫ್, eóÉನೊಫೋನ್ ಮುಂತಾದವರ ಕೃತಿಗಳನ್ನು ಓದುವುದನ್ನು ಸಾಧ್ಯಮಾಡಿಕೊಂಡ. ಇದರ ಜೊತೆಜೊತೆಗೆ ರಷ್ಯಾದ ದಂತಕಥೆಗಳು ಮತ್ತು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ. ಆಗಷ್ಟೆ ಓದು, ಬರಹಕ್ಕೆ ತೆರೆದುಕೊಳ್ಳುತ್ತಿದ್ದ ತನ್ನ ಮಗನಿಗೆ ಗ್ರೀಕ್ ಭಾಷೆ ಕಲಿಸುವುದಕ್ಕೆ ಮತ್ತು ಬಿಡುವಿನ ವೇಳೆಯಲ್ಲಿ ಹಲವು ಮಕ್ಕಳನ್ನು ಕಲೆಹಾಕಿಕೊಂಡು ಕಥೆ ಹೇಳುವುದಕ್ಕೆ ಅವನಿಗೆ ಈ ಅಧ್ಯಯನಗಳು ಸಹಾಯ ಮಾಡಿದವು.

ಈ ಎಲ್ಲ ಅಧ್ಯಯನದ ಜೊತೆಗೆ ಹಳ್ಳಿಮಕ್ಕಳಿಗಾಗಿ ಶಾಲೆ ತೆರೆಯುವ ಟಾಲ್‍ಸ್ಟಾಯ್ ಹಳೆಯ ಕನಸು ಮತ್ತೊಮ್ಮೆ ಚಿಗುರೊಡೆಯಿತು. ಇದರ ಬಗ್ಗೆ ಮಾಹಿತಿ ಸಂಗ್ರಹಿಸಲು ಟಾಲ್‍ಸ್ಟಾಯ್ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಜರ್ಮನಿ, ಇಂಗ್ಲೆಂಡ್ ಮುಂತಾದ ದೇಶಗಳ ಪ್ರವಾಸ ಮಾಡಿ ಅಲ್ಲಿನ ಶಿಕ್ಷಣ ವಿಧಾನಗಳನ್ನು ಅಧ್ಯಯನ ಮಾಡಿದ. ಹಲವು ಶಿಕ್ಷಣ ತಜ್ಞರನ್ನು ಭೇಟಿಯಾಗಿ ಚರ್ಚಿಸಿದ. ಇವೆಲ್ಲದರ ಫಲವಾಗಿ ಯಾಸ್ನಾಯ ಪೋಲ್ಯಾನಾದಲ್ಲಿ ಶಾಲೆಯು ಪ್ರಾರಂಭವಾಯಿತು. ಆ ಶಾಲೆಯ ಮಕ್ಕಳಿಗಾಗಿ ಸಿದ್ಧಪಡಿಸಿದ ಪಠ್ಯಪುಸ್ತಕಗಳು ಎಬಿಸಿ ಮತ್ತು ನ್ಯೂ ಪ್ರೈಮರ್.

ಮಕ್ಕಳು ಚಿಕ್ಕವಯಸ್ಸಿನಿಂದಲೇ ಕಾವ್ಯಭಾಷೆಯ ಸಂಪರ್ಕ ಪಡೆಯಬೇಕೆಂಬುದು ಟಾಲ್‍ಸ್ಟಾಯ್ ಅಭಿಲಾಷೆಯಾಗಿತ್ತು. ಅದರ ಜೊತೆಗೆ ಅವನು ತಮ್ಮ ನಾಡಿನ ಬಗೆಗೆ, ಅದರ ಭೌಗೋಳಿಕ ಅನನ್ಯತೆ ಬಗೆಗೆ, ಸಂಸ್ಕøತಿಯ ವಿವರಗಳು ಮತ್ತು ಜನಭಾಷೆಯ ಬಗೆಗೆ ತಿಳಿದುಕೊಂಡಿರಬೇಕು ಎಂಬ ಅವನ ಹಂಬಲವನ್ನು ಅವನು ಸ್ವತಃ ಸಿದ್ಧಪಡಿಸಿ ಪಠ್ಯಪುಸ್ತಕಗಳು ತುಂಬಿಕೊಂಡಿದ್ದವು. ತಮ್ಮ ಹೃದಯದ ಹಂಬಲವನ್ನು ವೈಜ್ಞಾನಿಕ ಮನಸ್ಸಿನ ತೀಕ್ಷ್ಣತೆಯೊಂದಿಗೆ ಬೆರೆಸಿ ಟಾಲ್‍ಸ್ಟಾಯ್ ಈ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ. ಅವುಗಳ ಅರ್ಧಭಾಗದಲ್ಲಿ ಪುಟ್ಟ ಪುಟ್ಟ ನೀತಿಕಥೆಗಳು, ಕಾಲ್ಪನಿಕ ಕಥೆಗಳು ಮತ್ತು ಇನ್ನರ್ಧ ಭಾಗದಲ್ಲಿ ಬೈಬಲ್‍ನ ಸೂಕ್ತಿಗಳು, ಸಂತರ ಜೀವನದ ಭಾಗಗಳು, ಗಣ ತದ ಆರಂಭಿಕ ಪಾಠಗಳಿದ್ದವು.

ಪಠ್ಯಪುಸ್ತಕದ ಅರ್ಧಭಾಗವನ್ನು ಕಥೆಗಳಿಗೆ ವಿನಿಯೋಗಿಸುವುದರ ಹಿಂದಿನ ಟಾಲ್‍ಸ್ಟಾಯ್ ಉದ್ದೇಶವು ಸ್ಪಷ್ಟವಾದುದಾಗಿತ್ತು, ಅದೆಂದರೆ, ಎಳೆಮನಸ್ಸುಗಳಲ್ಲಿ ‘ಸತ್ಯ, ಪ್ರಾಮಾಣ ಕತೆ, ಕಷ್ಟದ ದುಡಿಮೆಯ ಮೌಲ್ಯಗಳನ್ನು ಬಿತ್ತುವುದು’. ಆದರೆ ಇವನ್ನೆಲ್ಲ ಉಪದೇಶದ ರೀತಿಯಲ್ಲಿ ಹೇಳಲು ಅವನಿಗೆ ಇಷ್ಟವಿರಲಿಲ್ಲ. ಹಾಗೆ ಉಪದೇಶ ಮಾಡಲೆಂದೇ ಹೊರಟ ಹಲವಾರು ಪುಸ್ತಕಗಳ ನಿರರ್ಥಕತೆಯನ್ನು ಟಾಲ್‍ಸ್ಟಾಯ್ ಮನಗಂಡಿದ್ದ. ಆದ್ದರಿಂದ ಅವನು ತನ್ನ ಕತೆಗಳ ವಿಷಯದಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದ. ಹಲವು ಮೂಲಗಳಿಂದ ಆರಿಸಿಕೊಂಡ ಕಥೆಗಳಲ್ಲಿ ಟಾಲ್‍ಸ್ಟಾಯ್ ತನ್ನದೇ ಆದ ಬದಲಾವಣೆಗಳನ್ನು ಮಾಡಿದ. ಅನುವಾದವು ಮೂಲಕ್ಕೆ ಅಂಟಿಕೊಳ್ಳಲಿಲ್ಲ. ಪ್ರತಿ ಕತೆಯನ್ನೂ ಮೂರು-ನಾಲ್ಕು ಬಾರಿ ತಿದ್ದಿದ. ಹೀಗೆ ಸಿದ್ಧಪಡಿಸಿದ ಕತೆಗಳಲ್ಲಿ ರಷ್ಯಾ ನೆಲದ ಕಥೆಗಳು ಮಾತ್ರವಲ್ಲದೆ ಅವನ ಸ್ವಂತ ಅನುಭವಗಳನ್ನು ಆಧರಿಸಿದ ಕಥೆಗಳು ಮತ್ತು ಇತರ ಸಂಸ್ಕøತಿಗಳ ಕಥೆಗಳೂ ಸೇರಿದ್ದವು. ಇವುಗಳಲ್ಲಿ ಈಸೋಪನ ನೀತಿಕತೆಗಳಿಗೆ ಹೆಚ್ಚಿನ ಪಾಲನ್ನು ಟಾಲ್‍ಸ್ಟಾಯ್ ನೀಡಿದ. ಹಲವು ಹಿನ್ನೆಲೆಗಳ ಕಥೆಗಳು ಒಂದೆಡೆ ಸೇರುತ್ತ ಸಿದ್ಧವಾದ ಈ ಮಾಲೆಯು ಕಡೆಗೆ 600 ಸರಳ, ಸಣ್ಣಕಥೆಗಳ ಬೃಹತ್ ಹಸ್ತಪ್ರತಿಯಾಯಿತು. ಇವುಗಳಲ್ಲಿ 372ನ್ನು ಆಯ್ಕೆಮಾಡಿಕೊಂಡು ಪ್ರಕಟಣೆಗೆ ಸಿದ್ಧಪಡಿಸಲಾಯಿತು.

ಈ ಕಥೆಗಳ ವಿಶೇಷತೆಯೆಂದರೆ, ಇವುಗಳನ್ನು ಟಾಲ್‍ಸ್ಟಾಯ್ ಅಕ್ಷರಶಃ ಅನುವಾದಿಸದೆ ಅವುಗಳನ್ನು ತನ್ನ ನೆಲದ ಅಗತ್ಯಗಳಿಗೆ ತಕ್ಕಹಾಗೆ ಒಗ್ಗಿಸುವ ಕೆಲಸ ಮಾಡಿದ್ದು. ಹೀಗೆ ಮಾಡುವಾಗ ಅಗತ್ಯವೆನಿಸಿದ ಕಡೆಗಳಲ್ಲಿ ಒಬ್ಬ ಸೃಜನಶೀಲ ಲೇಖಕನಾಗಿ ಭಾಷೆಯ ಕಾವ್ಯಮಯತೆಯ ಕಡೆಗೆ ಅವನು ಗಮನ ನೀಡಿದ. ಇದರ ಜೊತೆಗೆ ತಾನು ಹೇಳುತ್ತಿರುವ ವಿಚಾರವು ಆದಷ್ಟು ಸರಳವೂ, ಸ್ಪಷ್ಟವೂ ಆಗಿರವುದರ ಕಡೆಗೆ ಟಾಲ್‍ಸ್ಟಾಯ್ ಒತ್ತು ನೀಡಿದ್ದು ಅಲ್ಲಿಯವರೆಗೆ ಮಕ್ಕಳ ಕಥೆಗಳಿಗಿಂತ ಈ ಕಥೆಗಳನ್ನು ಭಿನ್ನವಾಗಿಸಿತ್ತು. ಇಲ್ಲಿನ ಎಲ್ಲ ಕಥೆಗಳೂ ತಾವು ಒಳಗಾಗುವ ಅನುಭವದ ಮೂಲಕವೇ ಸಂದೇಶವನ್ನು ನೀಡುವ ಬಗೆಯು ಕುತೂಹಲಕಾರಿಯೆನ್ನಿಸುತ್ತದೆ.

ಒಂದು ಅನುಭವವನ್ನು ಹರಳುಗಟ್ಟಿಸಿ ಸರಳ ಭಾಷೆಗೆ ಒಗ್ಗಿಸುವುದು ಸೃಜನಶೀಲ ಲೇಖಕನ ಬಹುದೊಡ್ಡ ಸವಾಲು. ಗಾಂಧೀಜಿಯವರ ಆತ್ಮಕಥೆಯು ಇಂತಹ ಬರಹಕ್ಕೆ ನಿದರ್ಶನ. ಗಾಂಧೀಜಿ 20ನೇ ಶತಮಾನ ಕಂಡ ದೊಡ್ಡ ಸೂಕ್ತಿಕಾರ. ಅವರ ಆತ್ಮಕಥೆಯ ಹಲವು ವಾಕ್ಯಗಳನ್ನು ಸೂಕ್ತಿಯ ಹಾಗೆ ಓದಬಹುದಾದ್ದರ ಹಿಂದೆ ನನಗೆ ಆಳ ಅನುಭವ, ಅಪಾರ ತಾಳ್ಮೆ ಮತ್ತು ಪ್ರೀತಿಯ ಅನುಭವವಾಗುತ್ತದೆ. ಟಾಲ್‍ಸ್ಟಾಯ್ ಬದುಕು ಮತ್ತು ಬರಹ ಗಾಂಧೀಜಿಯವರನ್ನು ಪ್ರೇರೇಪಿಸಿದ್ದು ಈಗ ಇತಿಹಾಸದ ಭಾಗ.

ಹೀಗೆ ಪುಟ್ಟ ಕಥೆಗಳ ಬರವಣ ಗೆ ಮತ್ತು ಸಂಗ್ರಹದ ಕೆಲಸ ಮಾಡುವಾಗ ಟಾಲ್‍ಸ್ಟಾಯ್ ಬಿಡುವಿನ ವೇಳೆಯಲ್ಲಿ ತುಂಬ ಇಷ್ಟಪಟ್ಟು ಮಾಡುವ ಕೆಲಸವೊಂದಿತ್ತು. ಅವನ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ದೊಡ್ಡರಸ್ತೆಯು ಕೀವ್ ಪ್ರದೇಶದ ಕ್ರೈಸ್ತ ಸನ್ಯಾಸಿ ಮಠಕ್ಕೆ ಹೋಗುವ ದಾರಿಯಾಗಿತ್ತು. ಪ್ರತಿನಿತ್ಯ ಯಾತ್ರಾರ್ಥಿಗಳು ಆ ದಾರಿಯ ಮೂಲಕ ಹಾದುಹೋಗುತ್ತಿದ್ದರು. ಬಿಡುವಿನ ವೇಳೆಯಲ್ಲಿ ಟಾಲ್‍ಸ್ಟಾಯ್ ಆ ರಸ್ತೆಗೆ ಹೋಗಿ ಯಾತ್ರಾರ್ಥಿಗಳನ್ನು ಭೇಟಿಯಾಗಿ, ಅವರ ಜೊತೆ ಮಾತಾಡಿ ಅವರಿಂದ ಗಾದೆಗಳು ಮತ್ತು ಉಕ್ತಿಗಳನ್ನು ಸಂಗ್ರಹ ಮಾಡುತ್ತಿದ್ದ. ಅವರ ಮಾತಿನಲ್ಲಿ ಲಭ್ಯವಾಗುತ್ತಿದ್ದ ಉಕ್ತಿಗಳನ್ನು ತನ್ನ ನೆಲಕ್ಕೆ ಒಗ್ಗುವ ರೀತಿಯಲ್ಲಿ ಕತೆಯಾಗಿ ಬೆಳೆಸುತ್ತಿದ್ದ.

ಶ್ರೀಮಂತ ಪಾಳೆಗಾರಿಕೆಯ ಕುಟುಂಬದಲ್ಲಿ ಹುಟ್ಟಿ, ಯುದ್ಧದಲ್ಲಿ ಹೋರಾಡಿ, ಜೂಜಿನಲ್ಲಿ ಆಸ್ತಿಯನ್ನು ಕಳೆದು, ಮನಸೋ ಇಚ್ಛೆ ಹೆಣ್ಣುಗಳನ್ನು ಭೋಗಿಸಿ, ಜನಸಾಮಾನ್ಯರು, ರೈತರ ಜೊತೆ ಬೆರೆತು ಹೊಸ ಸತ್ಯಗಳನ್ನು ಕಂಡುಕೊಂಡು, ರೈತ ಮಕ್ಕಳಿಗೆ ಶಾಲೆ ತೆರೆದು, ರಾಜರ ಮತ್ತು ಪಾಳೇಗಾರಿಕೆಯ ವಿರುದ್ಧ ದನಿಯೆತ್ತಿ, ಸ್ವಂತ ಆಸ್ತಿಯ ಮೇಲಿನ ಸ್ವಾಮ್ಯ ತೊರೆದು, ಅಪ್ರಸ್ತುತ ಶೈಕ್ಷಣ ಕ ವ್ಯವಸ್ಥೆಯ ವಿರುದ್ಧ ಹೋರಾಡಿ, ಮನಸ್ಸಿನ ಚಂಚಲತೆ, ದ್ವಂದ್ವ, ಮುಖವಾಡಗಳು, ಯುದ್ಧದ ನಶ್ವರತೆ, ಸಾವಿನ ಅನಿವಾರ್ಯತೆ, ಆತ್ಮವಂಚನೆಯ ಘೋರತೆಯ ಬಗ್ಗೆ ನೂರಾರು ಪುಟಗಳ ಬೃಹತ್ ಕಾದಂಬರಿಯನ್ನೂ, ನೀಳ್ಗತೆಗಳನ್ನೂ ಬರೆದ ಟಾಲ್‍ಸ್ಟಾಯ್ ಇಂತಹ ಪುಟ್ಟ ಕಥೆಗಳನ್ನು ಬರೆಯುವ ಅನಿವಾರ್ಯತೆ ಯಾವುದಾಗಿತ್ತು ಮತ್ತು ಅದು ಸಾಧ್ಯವಾದದ್ದು ಹೇಗೆ ಎಂಬ ಕುತೂಹಲದ ಹಿಂದೆ ಹೊರಟು ನಾನು ಇಷ್ಟನ್ನು ಬರೆಯಬೇಕಾಯಿತು. 1865ರಲ್ಲಿ ಟಾಲ್‍ಸ್ಟಾಯ್ ತನ್ನ ಸಹಲೇಖಕ ಪಿ.ಡಿ.ಬೊಬೊರಿಕಿನ್ ಅವರಿಗೆ ಒಂದು ಪತ್ರ ಬರೆಯುತ್ತಾನೆ. ಅದರಲ್ಲಿ ‘ಎಲ್ಲ ಸಾಮಾಜಿಕ ಪ್ರಶ್ನೆಗಳನ್ನೂ ನನಗೆ ಸರಿ ಎನಿಸಿದ ದೃಷ್ಟಿಕೋನದಿಂದ ನಿರ್ವಿವಾದಿತ ರೀತಿಯಲ್ಲಿ ನಿರೂಪಿಸುವ ಒಂದು ಕಾದಂಬರಿಯನ್ನು ನಾನು ಬರೆಯಬಲ್ಲೆ ಎಂದು ಯಾರಾದರೂ ನನಗೆ ಹೇಳಿದರೆ, ಅಂತಹ ಕಾದಂಬರಿಯ ಬರವಣ ಗೆಗೆ ನಾನು ನನ್ನ ಎರಡು ಗಂಟೆಗಳ ಶ್ರಮವನ್ನೂ ಮೀಸಲಿಡಲಾರೆ; ಆದರೆ ನಾನು ಈಗ ಬರೆದಿದ್ದನ್ನು ಇನ್ನು ಇಪ್ಪತ್ತು ವರ್ಷಗಳ ನಂತರ ಇಂದಿನ ಮಕ್ಕಳು ಓದುತ್ತಾರೆ, ಅದನ್ನು ಓದಿ ಅವರು ಅಳುತ್ತಾರೆ ನಗುತ್ತಾರೆ ಮತ್ತು ಈ ಬದುಕನ್ನು ಪ್ರೀತಿಸತೊಡಗುತ್ತಾರೆ ಎಂದು ಯಾರಾದರೂ ನನಗೆ ಹೇಳಿದರೆ, ನಾನು ನನ್ನಿಡೀ ಬದುಕು ಮತ್ತು ಶಕ್ತಿಯನ್ನು ಅದಕ್ಕೆ ವಿನಿಯೋಗಿಸುತ್ತಾನೆ’ ಎಂದು ಹೇಳುತ್ತಾನೆ. ವಿಚಿತ್ರವೆಂದರೆ, ಅವನು ಈ ಪತ್ರವನ್ನು ತನ್ನ ಗೆಳೆಯನಿಗೆ ಕಳುಹಿಸುವುದೇ ಇಲ್ಲ. 82 ವರ್ಷಗಳ ದೀರ್ಘ ಬದುಕಿನಲ್ಲಿ ಟಾಲ್‍ಸ್ಟಾಯ್ ಬರೆದದ್ದು ಮತ್ತು ತನ್ನ ಬದುಕಿನ ರೀತಿಯ ಮೂಲಕ ನಿರೂಪಿಸಿದ ಸೃಷ್ಟಿಯ ಸರಳ ಸತ್ಯಗಳನ್ನು ಈ ಪುಟ್ಟ ಪುಟ್ಟ ಕಥೆಗಳಲ್ಲಿ ಅಡಗಿರುವ ಕನಸುಗಳು ಮಾತಾಡುತ್ತವೆ ಎಂಬುದು ನನ್ನ ನಂಬಿಕೆ; ಈ ಕಥೆಗಳು ನಮ್ಮ ಅಭಿರುಚಿ ನಿರ್ಮಾಣದ ಪಾಠಗಳು.

ಇಂದು ಜಗತ್ತನ್ನು ಆವರಿಸಿರುವ ವಿಜ್ಞಾನ, ತಂತ್ರಜ್ಞಾನದ ಫಲವಾದ ವೇಗಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳದೆ ಬೇರೆ ಮಾರ್ಗವಿಲ್ಲವೆಂಬುದು ನಿಜವಾದರೂ ಸಂಸ್ಕøತಿಯ ಆಳಬೇರುಗಳು ಮೌಖಿಕ ಪರಂಪರೆಯಲ್ಲಿ ಹರಡಿಕೊಂಡಿವೆ ಎಂಬ ಸತ್ಯವನ್ನು ನಾವು ಮರೆಯುವಂತಿಲ್ಲ. ನಮ್ಮ ಅಸ್ತಿತ್ವದ ಎಳೆಯು ಜಗತ್ತಿನ ಯಾವುದೋ ಮೂಲೆಯ ಬೇರಿನ ಎಳೆಯೊಂದಿಗೆ ಹೆಣೆದುಕೊಂಡಿದೆ, ಆ ಹೆಣ ಗೆಯನ್ನು ಗಟ್ಟಿಗೊಳಿಸುವ ದಾರಿಗಳಲ್ಲಿ ಕಥೆ ‘ಹೇಳುವುದು’ ಬಹು ಮುಖ್ಯವಾದುದು ಎಂಬುದು ನನ್ನ ನಂಬಿಕೆ. ಇವು ನಾನು ಅಕ್ಷರಶಃ ಅನುವಾದಿಸಿದ ಕಥೆಗಳಲ್ಲ, ‘ಮತ್ತೆ ಹೇಳಿದ’ ಕಥೆಗಳು. ‘ಕಲಾವಿದನ ಗುರಿಯು ಒಂದು ಪ್ರಶ್ನೆಯನ್ನು ವಿವಾದರಹಿತವಾಗಿ ಪರಿಹರಿಸುವುದಲ್ಲ, ಆದರೆ ಈ ಅಸಂಖ್ಯ, ಅಪರಿಮಿತ ಬದುಕಿನ ಬಗೆಗಳನ್ನು ಪ್ರೀತಿಸುವಂತೆ ಜನರನ್ನು ಒತ್ತಾಯಿಸುವುದಾಗಿದೆ’ ಎನ್ನುವ ಟಾಲ್‍ಸ್ಟಾಯ್ ಮನುಷ್ಯ ಬದುಕುವುದು ಮತ್ತು ಅವನ ಅಸ್ತಿತ್ವಕ್ಕೆ ಅರ್ಥ ಒದಗುವುದು ಪ್ರೀತಿಯಿಂದ ಮಾತ್ರ ಎಂಬ ಸತ್ಯವನ್ನು ಬರೆದವನು ಮತ್ತು ಬದುಕಿದವನು. ತಂದೆಯಾಗಿ ಮತ್ತು ಶಿಕ್ಷಕನಾಗಿ ತನ್ನ ಅಧಿಕಾರಯುತ ದನಿಯನ್ನು ತಗ್ಗಿಸಿಕೊಳ್ಳುವ ಪ್ರಯತ್ನವನ್ನು ಈ ಕತೆಗಳ ಬರವಣ ಗೆಯ ಮೂಲಕ ಟಾಲ್‍ಸ್ಟಾಯ್ ಮಾಡಿರುವುದೆ ಬದುಕಿನ ಬಗೆಗಿನ ಅವನ ಪ್ರೀತಿಯ ಬಗೆಯಾಗಿದೆ.

ಸಮುದಾಯದ ಒಳಿತಿನ ಚಿಂತನೆಗಳ ಮೂಲಕ ಒಂದು ಕಾಲಘಟ್ಟದ ಸಂವೇದನೆಯನ್ನು ಸಕಾರಾತ್ಮಕವಾಗಿ ರೂಪಿಸಿದ ಲೇಖಕ ಟಾಲ್‍ಸ್ಟಾಯ್. ಆಧುನಿಕ ಕಾಲದ ಹಲವು ತೊಡರು, ಸವಾಲುಗಳಿಗೆ ಅವರ ಬರಹಗಳಲ್ಲಿ ಉತ್ತರವಿದೆ. ಅವುಗಳನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವಿರಲಿ ಬಿಡಲಿ ಅವುಗಳ ಮೌಲಿಕತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಮಾಜಗಳು ಅಲ್ಲದಿದ್ದರೂ ವ್ಯಕ್ತಿಗಳು ಅವುಗಳನ್ನು ಅಳವಡಿಸಿಕೊಳ್ಳಲು ಯಾರ ಅಡ್ಡಿಯೂ ಇಲ್ಲ. ಬಸವಣ್ಣನವರು ಹೇಳಿದಂತೆ ಅದು ನಮ್ಮ ನಮ್ಮ ‘ತನುವ ಸಂತೈಸಿಕೊಳ್ಳುವ ಕೆಲಸ’.

ಶ್ರೀಮಂತ ಪಾಳೆಗಾರಿಕೆಯ ಕುಟುಂಬದಲ್ಲಿ ಹುಟ್ಟಿ, ಯುದ್ಧಗಳಲ್ಲಿ ಹೋರಾಡಿ, ಜೂಜಿನಲ್ಲಿ ಆಸ್ತಿಯನ್ನು ಕಳೆದು, ಜನಸಾಮಾನ್ಯರು, ರೈತರ ಜೊತೆ ಬೆರೆತು ಹೊಸ ಸತ್ಯಗಳನ್ನು ಕಂಡುಕೊಂಡು, ರೈತ ಮಕ್ಕಳಿಗೆ ಶಾಲೆ ತೆರೆದು, ರಾಜತ್ವ ಮತ್ತು ಪಾಳೆಗಾರಿಕೆಯ ವಿರುದ್ಧ ದನಿಯೆತ್ತಿ, ಸ್ವಂತ ಆಸ್ತಿಯ ಮೇಲಿನ ಹಕ್ಕು ತೊರೆದು, ಅಪ್ರಸ್ತುತವಾದ ಶೈಕ್ಷಣ ಕ ವ್ಯವಸ್ಥೆಯ ವಿರುದ್ಧ ಹೋರಾಡಿ, ಮನಸ್ಸಿನ ಚಂಚಲತೆ, ದ್ವಂದ್ವ, ಮುಖವಾಡಗಳು, ಯುದ್ಧದ ನಶ್ವರತೆ, ಸಾವಿನ ಅನಿವಾರ್ಯತೆ, ಆತ್ಮವಂಚನೆಯ ಘೋರತೆಯ ಬಗ್ಗೆ ಸಾವಿರಾರು ಪುಟಗಳಲ್ಲಿ ಟಾಲ್‍ಸ್ಟಾಯ್ ತಮ್ಮನ್ನೇ ತೆರೆದುಕೊಂಡರು. ಜೊತೆಯಲ್ಲಿ ತಮ್ಮ ಸಹಜೀವಿಗಳ ಹಾಗೂ ಸಮಾಜದ ಅಂತರಂಗ ಬಹಿರಂಗವನ್ನೂ ಅನನ್ಯವಾಗಿ ತೆರೆದಿಟ್ಟರು. ಎಂಬತ್ತೆರಡು ವರ್ಷಗಳ ಸುದೀರ್ಘ ಬದುಕಿನಲ್ಲಿ ಅವರು ಬರೆದ ಮತ್ತು ಬದುಕಿದ ಬಗೆಗಳು ನಮ್ಮ ಅಭಿರುಚಿ ನಿರ್ಮಾಣದ ಪಾಠಗಳಾಗಿವೆ. ಸ್ವಾನುಭವ ಮತ್ತು ಆತ್ಮಶೋಧನೆಯ ಹಾದಿಯಲ್ಲಿ ಸಾಗಿದ ಟಾಲ್‍ಸ್ಟಾಯ್ ತಮ್ಮ ಬಾಳನ್ನು ನಮ್ಮ ಬಾಳಿನೊಂದಿಗೆ ಬೆಸೆಯುತ್ತಾರೆ. ಆದ್ದರಿಂದಲೇ ಅವರದು ನಮ್ಮ ಮೂಲಕ ಮುಂದುವರಿಯುವ ಜೀವನಪಯಣ.

1-ಗಂಡು ಕುದುರೆ ಮತ್ತು ಹೆಣ್ಣು ಕುದುರೆ

ಒಂದೂರಲ್ಲಿ ಒಂದು ಹೆಣ್ಣು ಕುದುರೆಯಿತ್ತು. ಅದು ಉಳುಮೆ ಮಾಡದೆ ಹಗಲು, ರಾತ್ರಿ ಹುಲ್ಲುಗಾವಲಿನಲ್ಲಿ ಮೇಯ್ತಾ ಇರ್ತಿತ್ತು. ಆದರೆ ಗಂಡು ಕುದುರೆ ರಾತ್ರಿಯಲ್ಲಿ ಮಾತ್ರ ಮೇಯ್ದು ಹಗಲೆಲ್ಲ ಉಳುತ್ತಿತ್ತು. ಒಂದು ದಿನ ಹೆಣ್ಣು ಗಂಡಿಗೆ ಹೇಳಿತು:

“ನೀನ್ಯಾಕಪ್ಪ ದಿನಾಲು ಉಳುತ್ತೀಯ? ನಾನೇನಾದರೂ ನೀನಾಗಿದ್ದಿದ್ದರೆ ಉಳಕ್ಕೆ ಹೋಗ್ತನೆ ಇರ್ಲಿಲ್ಲ. ಯಜಮಾನನೇನಾದರೂ ಚಾವಟಿಯಲ್ಲಿ ಹೊಡೆದರೆ ನಾನು ಅವನಿಗೆ ತಿರುಗೆ ಒದೆಯುತ್ತಿದ್ದೆ.”

ಮರುದಿನ ಹೆಣ್ಣು ಕುದುರೆ ಹೇಳಿದಂತೆ ಗಂಡು ಮಾಡಿತು. ಅದು ಹಠಮಾರಿಯಾಗಿದೆಯಂಬುದನ್ನು ಕಂಡುಕೊಂಡ ಯಜಮಾನ ಗಂಡಿನ ಬದಲಿಗೆ ಹೆಣ್ಣುಕುದುರೆಯನ್ನು ಉಳಲು ಕರೆದುಕೊಂಡು ಹೋದ.

2-ನರಿ ಮತ್ತು ಕೊಕ್ಕರೆ

ಒಮ್ಮೆ ನರಿ ಕೊಕ್ಕರೆಯನ್ನು ಭೋಜನಕ್ಕೆ ಕರೆದು ಒಂದು ತಟ್ಟೆಯಲ್ಲಿ ಅದಕ್ಕೆ ಊಟ ಬಡಿಸಿತು. ಪಾಪದ ಕೊಕ್ಕರೆಗೆ ತನ್ನ ಉದ್ದ ಕೊಕ್ಕಿನ ದೆಸೆಯಿಂದ ತಟ್ಟೆಯಲ್ಲಿ ಬಡಿಸಿದ್ದ ಊಟವನ್ನು ಮಾಡಲಾಗಲಿಲ್ಲ. ತಾನು ಮೊದಲೇ ಉಪಾಯ ಮಾಡಿದ್ದಂತೆ ಜಾಣ ನರಿ ಕೊಕ್ಕರೆಗೆಂದು ತಾನು ಬಡಿಸಿದ್ದ ಊಟವನ್ನೆಲ್ಲ ತಾನೇ ತಿಂದುಬಿಟ್ಟಿತು. ಮಾರನೆ ದಿನ ಕೊಕ್ಕರೆ ನರಿಯನ್ನು ತನ್ನ ಮನೆಗೆ ಊಟಕ್ಕೆ ಕರೆದು ಸಪೂರ ಕುತ್ತಿಗೆಯಂತ ಬಾಯುಳ್ಳ ಜಾಡಿಯಲ್ಲಿ ಅದಕ್ಕೆ ಊಟ ಬಡಿಸಿತು. ನರಿಗೆ ತನ್ನ ದಪ್ಪ ಮೂತಿಯನ್ನು ಆ ಜಾಡಿಯೊಳಗೆ ತೂರಿಸಲಾಗಲಿಲ್ಲ. ಜಾಣ ಕೊಕ್ಕರೆ ಏನು ಮಾಡಿತು ಗೊತ್ತ? ತನ್ನ ಉದ್ದನೆಯ, ಸಪೂರ ಕುತ್ತಿಗೆಯನ್ನು ಜಾಡಿಯೊಳಗೆ ತೂರಿಸಿ ಅದರೊಳಗೆ ನರಿಗೆಂದು ಬಡಿಸಿದ್ದ ಪಾಯಸವನ್ನು ಕುಡಿದುಹಾಕಿತು.

3-ಕೋತಿಯ ಮರಿಗಳು

ಒಂದೂರಿನಲ್ಲಿ ಒಂದು ಕೋತಿಯಿತ್ತು, ಅದಕ್ಕೆ ಎರಡು ಮರಿಗಳು. ಆ ಎರಡರಲ್ಲಿ ತಾಯಿಕೋತಿ ಒಂದನ್ನು ಮಾತ್ರ ತುಂಬ ಪ್ರೀತಿಸುತ್ತಿತ್ತು, ಮತ್ತೊಂದನ್ನು ತಿರುಗಿಯೂ ನೋಡುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಒಂದಷ್ಟು ಜನರು ಈ ಕೋತಿಗಳನ್ನು ಬೆನ್ನಟ್ಟುತ್ತ ಬಂದರು. ಆಗ ತಾಯಿಕೋತಿ ತನಗಿಷ್ಟವಾದ ಮರಿಯನ್ನು ಹೊಟ್ಟೆಗೆ ಅವುಚಿಕೊಂಡು ಇನ್ನೊಂದನ್ನು ಅಲ್ಲಿಯೇ ಬಿಟ್ಟು ಓಡಿಹೋಯಿತು. ಹಿಂದೆ ಉಳಿದ ಒಂಟಿ ಪುಟಾಣ ಕೋತಿಮರಿ ಓಡಿ ಹೋಗಿ ಒಂದು ಪೊದೆಯೊಳಗೆ ಅವಿತುಕೊಂಡು ಬಿಟ್ಟಿತು. ಆ ಪುಟಾಣ ಯನ್ನು ಜನಗಳು ಗಮನಿಸಲೇ ಇಲ್ಲ, ಅದರ ಜೀವ ಉಳಿಯಿತು. ಓಡುತ್ತ ಓಡುತ್ತ ಆ ಜನಗಳೆಲ್ಲ ಮುಂದೆ ಹೋದರು. ತನಗಿಷ್ಟವಾದ ಮರಿಯನ್ನು ಎತ್ತಿಕೊಂಡು ವೇಗದಲ್ಲಿ ಮರದಿಂದ ಮರಕ್ಕೆ ಹಾರಿಹೋಗುತ್ತಿದ್ದ ತಾಯಿಕೋತಿಗೆ ಭಯದಲ್ಲಿ ತಾನು ಎಷ್ಟು ಜೋರಾಗಿ ಓಡುತ್ತಿದ್ದೇನೆ ಅಂತಲೇ ತಿಳಿಯಲಿಲ್ಲ. ಆ ಆವೇಶ, ರಭಸಕ್ಕೆ ತನ್ನ ಮುದ್ದಿನ ಮರಿಯ ತಲೆ ಮರದ ರೆಂಬೆಯೊಂದಕ್ಕೆ ಬಡಿದು ಅದು ಪ್ರಾಣ ಬಿಟ್ಟಿತು.

ಇತ್ತ ಕಡೆ, ಕೋತಿಗಳನ್ನು ಅಟ್ಟುತ್ತ ಬಂದ ಜನರ ಗುಂಪಿಗೆ ತಾಯಿಕೋತಿಯಾಗಲಿ, ಮರಿಕೋತಿಗಳಾಗಲಿ ಸಿಗದೆ ಬರಿ ಕೈಯಲ್ಲಿ ಹಿಂದಿರುಗಿ ಹೋದರು. ಅವರುಗಳೆಲ್ಲ ಜಾಗ ಖಾಲಿ ಮಾಡಿದ ಮೇಲೆ ತಾಯಿಕೋತಿ ಅಳುತ್ತ, ಅಳುತ್ತ ಇನ್ನೊಂದು ಮರಿಯನ್ನು ಹುಡುಕುತ್ತ ಹೋಯಿತು. ಆದರೆ ಅದಕ್ಕೆ ಆ ಮರಿಯೂ ಸಿಗಲಿಲ್ಲ, ಒಂಟಿಯಾಗಿ ಮರುಕಪಟ್ಟಿತು.

4-ತೋಳ ಮತ್ತು ಅಳಿಲು

ಅಳಿಲೊಂದು ಒಮ್ಮೆ ಕೊಂಬೆಯಿಂದ ಕೊಂಬೆಗೆ ನೆಗೆಯುತ್ತ ಆಟವಾಡುತ್ತಿತ್ತು. ಹೀಗೆ ಆಡುತ್ತ ಅದು ಆಯ ತಪ್ಪಿ ನಿದ್ರೆ ಮಾಡುತ್ತಿದ್ದ ತೋಳದ ಮೇಲೆ ‘ಧೊಪ್’ ಎಂದು ಬಿದ್ದುಬಿಟ್ಟಿತು. ಸಿಟ್ಟುಗೊಂಡ ತೋಳ ಅಳಿಲನ್ನು ಹಿಡಿದು ‘ನಿನ್ನನ್ನು ತಿಂದುಬಿಡುವೆ’ನೆಂದು ಕೂಗಾಡುತ್ತಿದ್ದಾಗ ಅಳಿಲು, “ನನ್ನನ್ನು ಬಿಟ್ಟುಬಿಡು ಅಣ್ಣ” ಎಂದು ಅಂಗಲಾಚಿ ಬೇಡಿತು. ಅದಕ್ಕೆ ತೋಳ, “ಹಾಗೇ ಆಗಲಿ, ನಾನು ನಿನ್ನನ್ನು ಬಿಟ್ಟುಬಿಡ್ತಿನಿ, ಆದರೆ ಅಳಿಲುಗಳು ಯಾವಾಗಲೂ ಯಾಕಷ್ಟು ಸಂತೋಷವಾಗಿರ್ತವೆ ಅಂತ ಕಾರಣ ಹೇಳಿದರೆ ಮಾತ್ರ. ನನ್ನನ್ನು ನೋಡು ಯಾವಾಗಲು ದುಃಖವೆ, ಆದರೆ ನೀವು, ಅಳಿಲುಗಳು ಅಲ್ಲಿ ಮೇಲೆ ಮರದಲ್ಲಿ ಜಿಗಿಯುತ್ತ, ಕುಣ ಯುತ್ತ ಯಾವಾಗಲೂ ಸಂತೋಷದಲ್ಲಿ ಆಟವಾಡುತ್ತಿರ್ತಿರ” ಎಂದಿತು.

“ಮೊದಲು ನನ್ನನ್ನ ಬಿಟ್ಟು ಮರದ ಮೇಲೆ ಹೋಗಲು ಬಿಡು, ಆಮೇಲೆ ನಾನು ಅಲ್ಲಿಂದಲೆ ನಿನಗೆ ಎಲ್ಲ ಗುಟ್ಟನ್ನು ಹೇಳಿಕೊಡ್ತಿನಿ, ಈಗಲೇ ಹೇಳಲು ನನಗೆ ನಿನ್ನನ್ನ ಕಂಡರೆ ಭಯ.” ಎಂದಿತು ಅಳಿಲು.

ಅಳಿಲನ್ನು ನಂಬಿ ತೋಳ ಹೋಗಲು ಬಿಟ್ಟಿತು. ಅದು ಹಾಗೆ ಬಿಟ್ಟ ಕೂಡಲೆ ಅಳಿಲು ಹಾರಿ ನೆಗೆದು ಮರದ ಮೇಲೆ ಕುಳಿತು,

“ನೀವುಗಳು ದುಃಖದಲ್ಲಿರೋದು ಯಾಕಂದ್ರೆ ನೀವು ಕೆಟ್ಟವರು ಅದಕ್ಕೆ. ಯಾವಾಗಲು ಇನ್ನೊಬ್ಬರಿಗೆ ನೋವು ಮಾಡುವ ನಿಮ್ಮ ಕೆಟ್ಟತನ ನಿಮ್ಮ ಹೃದಯವನ್ನೆ ಸುಡುತ್ತದೆ. ನಾವು ಸಂತೊಷವಾಗಿದ್ದೇವೆ ಯಾಕೆ ಗೊತ್ತ? ನಾವು ಯಾವಾಗಲೂ ಯಾರ ಹೃದಯಕ್ಕೂ ನೋವು ಮಾಡುವುದಿಲ್ಲ ಅದಕ್ಕೆ” ಎಂದು ಹೇಳಿ ಅಲ್ಲಿಂದ ಓಡಿ ಕಣ್ಮರೆಯಾಯಿತು.

5-ಹದ್ದು, ಕಾಗೆ ಮತ್ತು ಕುರುಬ

ಕುರಿಮಂದೆಯೊಂದು ಬಯಲಲ್ಲಿ ಮೇಯುತ್ತಿತ್ತು. ತಕ್ಷಣ ಒಂದು ಹದ್ದು ರೊಂಯ್ಯನೆ ಹಾರಿ ಬಂದು ತನ್ನ ಚೂಪು ಉಗುರಿನ ಕಾಲ್ಗಳಿಂದ ಪುಟಾಣ ಕುರಿಮರಿಯೊಂದನ್ನು ಹಿಡಿದು ಹಾರಿಹೋಯಿತು. ಇದನ್ನು ನೋಡಿದ ಕಾಗೆಗೂ ಮಾಂಸದ ಆಸೆಯಾಯಿತು.

“ಓಹೋ...ಇದಪ್ಪ ಅದೃಷ್ಟ ಅಂದ್ರೆ, ಈ ಕೆಲಸ ತುಂಬ ಸುಲಭ ಬೇರೆ. ಆ ಹದ್ದಿಗಿಂತ ಈ ಕೆಲಸವನ್ನ ನಾನು ಚೆನ್ನಾಗೇ ಮಾಡ್ತಿನಿ. ಅದೊಂದು ಮೂರ್ಖ ಹದ್ದು, ಎಷ್ಟು ಪುಟ್ಟ ಕುರಿಮರಿಯನ್ನು ಹೊತ್ತುಕೊಂಡು ಹೋಯಿತು ಆದರೆ ನಾನು ಆ ಮಂದೆಯಲ್ಲಿ ಕೊಬ್ಬಿದ ಟಗರೊಂದನ್ನು ಆರಿಸಿ ಎತ್ತಿಕೊಂಡು ಬರುವೆ” ಎಂದು ತನಗೆ ತಾನೆ ಕಾಗೆ ಹೇಳಿಕೊಂಡಿತು.

ಹಾಗೆ ಅಂದುಕೊಂಡ ಮರುಕ್ಷಣವೆ ಅದು ಹಾರಿ ಒಂದು ಟಗರಿನ ಮೇಲೆಗರಿ ಅದರ ಉಣ್ಣೆಯೊಳಗೆ ತನ್ನ ಪಾದವನ್ನೂರಿ ಮೇಲಕ್ಕೆಳೆಯಿತು, ಆದರೆ ಅದಕ್ಕೆ ಎಳೆಯಲಾಗಲಿಲ್ಲ. ಉಣ್ಣೆಯೊಳಗೆ ಅದರ ಪಾದಗಳು ಭದ್ರವಾಗಿ ಸಿಕ್ಕಿಕೊಂಡು ಬಿಟ್ಟಿದ್ದವು. ಮಂದೆಯನ್ನು ಮೇಯಿಸುತ್ತಿದ್ದ ಕುರುಬ ಕಾಗೆಯಿದ್ದಲ್ಲಿಗೆ ಬಂದು, ಅದರ ಕಾಲುಗಳನ್ನು ಟಗರಿನ ತುಪ್ಪಟದೊಳಗಿಂದ ಹೊರಗೆಳೆದು, ಕಾಗೆಯನ್ನು ಕೊಂದು ಅಲ್ಲಿಯೇ ಬಿಸಾಡಿ ಹೋದನು.



 

 

 

ಜ.ನಾ.ತೇಜಶ್ರೀ

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...