ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್

Date: 11-12-2022

Location: ಬೆಂಗಳೂರು


''ಎಂಥದ್ದೇ ಕಷ್ಟವಿರಲಿ ಸ್ವಲ್ಪ ತಾಳ್ಮೆಯಿಂದ ವಿವೇಚನೆಯಿಂದ ಯೋಚಿಸಿದರೆ ಬಹುತೇಕ ಪರಿಹಾರ ಸಿಗುತ್ತದೆ. ಬದುಕು ಎಷ್ಟೇ ಯಾತನಮಯವಾಗಿದ್ದರೂ ಎಲ್ಲೋ ಒಂದು ಕಡೆ ಒಳ್ಳೆಯ ತಿರುವು ಸಿಗಬಹುದು. ಬಂದ ಎಲ್ಲ ಕಷ್ಟಗಳಿಗೆ ಎದೆಗೊಟ್ಟು ದುರ್ಗದ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಂತಿರುವ ಜ್ಯೋತಿರಾಜ್ ಅವರ 'Incredible Monkey Man' ಸಿನಿಮಾ ಯಶಸ್ವಿಯಾಗಲಿ'' ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಚಿತ್ರದುರ್ಗದ ಜ್ಯೋತಿರಾಜ್’ ಅವರ ಅಪರೂಪದ ವ್ಯಕ್ತಿತ್ವವನ್ನು ಹೀಗೆ ತೆರೆದಿಟ್ಟಿದ್ದಾರೆ...

ಬದುಕು ಒಮ್ಮೊಮ್ಮೆ ಬಲು ವಿಚಿತ್ರ. ತೇಲಬೇಕೆಂದವರನ್ನು ಮುಳುಗಿಸುತ್ತದೆ ಮುಳುಗಬೇಕೆಂದವರನ್ನು ತೇಲಿಸುತ್ತದೆ. ಮುಳುಗಹೋದವರು ತೇಲಿದರೆ ಅಂದರೆ ಸಾಯಲು ಹೋದವರು ಅದೃಷ್ಟವಶಾತ್ ಬದುಕಿದರೆ ಸಾವನ್ನು ಮುಂದೆ ಹಾಕುತ್ತಾರಷ್ಟೆ, ಅವರಲ್ಲಿ ಕೆಲವರು ಮಾತ್ರ ಸಾವೂ ನಾಚುವಂತೆ ಬದುಕನ್ನು ಗೆಲ್ಲುತ್ತಾರೆ. ಆದರೆ ಬದಕನ್ನು ಗೆಲ್ಲುವುದು ಸಾಯುವಷ್ಟು ಸುಲಭವಲ್ಲ ಅದರಲ್ಲೂ ತಾವು ಬದುಕಿ ಇತರರ ಬದುಕಿಗೂ ನೆಲೆಯಾಗುವವರು ಬಹಳ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್. ಇವರು ಹುಟ್ಟಿದ್ದು ತಮಿಳುನಾಡಿನ ತೇನ ಜಿಲ್ಲೆಯ ಕಾಮರಾಜಪುರಂ ಗ್ರಾಮದಲ್ಲಿ. ಈಗ ನೆಲೆನಿಂತಿರುವುದು ನಮ್ಮ ಕರ್ನಾಟಕದ ಚಿತ್ರದುರ್ಗದಲ್ಲಿ. ಇಲ್ಲಿಯವರೆಗಿನ ಅವರ ಜೀವನಗಾಥೆಯನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.

'ನನ್ನ ತಂದೆ ಈಶ್ವರನ್ ತಾಯಿ ಕುಂಜರಮ್ಮ. ನಾನು ಮೂರು ವರ್ಷದ ಮಗುವಿದ್ದಾಗ ದೇವಸ್ಥಾನದಲ್ಲಿ ಕಾಣೆಯಾಗಿ ಅಲ್ಲಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಯಾರೋ ತಮಿಳರ ಕೈಗೆ ಸಿಕ್ಕಿ ಬೆಳೆದೆ. ನನಗೆ ಹದಿಮೂರು ವರ್ಷ ಕಳೆಯುವಷ್ಟರಲ್ಲಿ ನರಕ ತೋರಿಸಿಬಿಟ್ಟಿದ್ರು... ಕೆಲಸ ಮಾಡಿಸಿದ್ರೆ ಮಾಡ್ತಿದ್ದೆ. ಆದರೆ ತುಂಬ ಹೊಡೆಯುವುದು, ಬೈಯುವುದು, ಚುಚ್ಚಿ ಮಾತನಾಡುವುದು ತಡೆಯಲಾರದೆ ಒಂದಿನ ಅವರ ಮನೆಬಿಟ್ಟು ತಪ್ಪಿಸಿಕೊಂಡು ಓಡಿ ಬಂದುಬಿಟ್ಟೆ. ತೋಚಿದ ಯಾವ್ಯಾವ್ದೋ ಹಾದಿ ಹಿಡಿದು ಹೊರಟು ಹಾಗೆ ಬಂದದ್ದೇ ಚಿತ್ರದುರ್ಗಕ್ಕೆ. ದುರ್ಗದಲ್ಲಿ ಗಾರೆ ಕೆಲಸ ಮಾಡುತ್ತಾ ಅಲ್ಲೇ ಉಳಿದುಕೊಂಡು ಬಿಟ್ಟೆ. ಬದುಕು ಸಾಕೆನಿಸಿ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಕೋಟೆಗೆ ಹೋದೆ. ದೊಡ್ಡ ಬಂಡೆ ಹತ್ತಿ ಬೀಳಲು ಹೋದಾಗ ಅಲ್ಲಿಗೆ ಬಂದ ಪ್ರವಾಸಿಗರೆಲ್ಲ ನಾನು ಬಂಡೆ ಹತ್ತಿ ಏನೋ ಸಾಹಸ ಮಾಡುತ್ತಿದ್ದೇನೆಂದು ತಿಳಿದು ಚಪ್ಪಾಳೆ ಹೊಡೆದರು. ಅವರ ಚಪ್ಪಾಳೆ ನನ್ನ ಬದುಕಿಸಿ ಇಳಿದು ಬರುವ ಹಾಗೆ ಮಾಡಿತ್ತು. ನಂತರ ಕೋತಿಗಳನ್ನು ನೋಡಿ ದೊಡ್ಡ ಬಂಡೆಗಳನ್ನು ಹತ್ತುವುದು ಕಲಿತೆ. ನಾನು ಸಾಯಲು ಅಂತ ಮಾಡಿದ ಪ್ರಯತ್ನ ಅಲ್ಲಿಂದ ನನ್ನ ಬದುಕಿನ ಪಥವನ್ನೇ ಬದಲಿಸಿತು. ನಾನು ಸಾಯಲು ಹತ್ತಿದ್ದೇನೆ ಅಂತ ಅವರಿಗೇನು ಗೊತ್ತಿತ್ತು. ಆಕಸ್ಮಿಕವಾಗಿ ತಟ್ಟಿದ ಆ ಚಪ್ಪಾಳೆ ನನಗೆ ಇಂದಿಗೂ ರೋಚಕ ಕ್ಷಣವೇ... ಯಾರೂ ಇಲ್ಲದೆ ಅನಾಥನಾಗಿ ಬೆಳೆದ ನಾನು, ಫುಟ್ಪಾತ್ ಮೇಲಿರುವ ಮಕ್ಕಳು, ಅನಾಥ ಮಕ್ಕಳು, ಅಪ್ಪ ಇದ್ದರೆ ಅಮ್ಮ ಇರಲ್ಲ ಅಮ್ಮ ಇದ್ದರೆ ಅಪ್ಪ ಇರಲ್ಲ ಅಂತಹ ಹನ್ನೊಂದು ಮಕ್ಕಳನ್ನು ಸಾಕುತ್ತಿದ್ದೇನೆ. ಒಂದು ವರ್ಷದಿಂದ ಹದಿನೈದು ವರ್ಷದವರೆಗಿನ ಮಕ್ಕಳು ನನ್ನ ಹತ್ತಿರ ಇದ್ದಾರೆ. ಪುಟ್ಟ ಮಕ್ಕಳು ಮನೇಲಿರುತ್ತಾರೆ ಉಳಿದವರು ಎಲ್ಲರೂ ಒಟ್ಟಿಗೆ ಹೋಗುತ್ತೇವೆ, ಬಂಡೆ ಹತ್ತುತ್ತೇವೆ, ಈಜಾಡಿಕೊಂಡು ಸ್ನಾನ ಮಾಡಿ ಆಡ್ಕೊಂತ ಬೆಟ್ಟ ಗುಡ್ಡ ಹತ್ತುತ್ತೇವೆ. ಬೆಟ್ಟಕ್ಕೆ ಬಂದ ಪ್ರವಾಸಿಗರೆಲ್ಲ ಸಿಕ್ಕಿ ಮಾತಾಡಿಸುತ್ತಾರೆ. ಅವರು ಕೊಡುವ ಕಾಣಿಕೆಯೇ ನನ್ನ ಮತ್ತು ನನ್ನಲ್ಲಿರುವ ಮಕ್ಕಳ ಬದುಕಿಗೆ ಆಧಾರ. ಪ್ರೀತಿಯಿಂದ ಅವರು ಕೊಟ್ಟಿದ್ದನ್ನು ತಂದು ಎಲ್ಲರೂ ಒಟ್ಟಿಗೆ ತಿಂದು ಮಲಗುತ್ತೇವೆ. ಬೆಳಗ್ಗೆ ನಾಲ್ಕೈದು ಗಂಟೆಗೆ ಎದ್ದು ಯಾವ ಬೆಟ್ಟ ಹೆಂಗ್ ಹತ್ತೋದು ಅಂತ ಮನಸ್ಸಿನಲ್ಲೇ ಯೋಚನೆ ಮಾಡ್ತಾ ದಿನಚರಿ ಪ್ರಾರಂಭಿಸುತ್ತೇವೆ. ಮಕ್ಕಳಿಗೆ ಹಗ್ಗ ಕಟ್ಟಿ ತರಬೇತಿ ಕೊಡುತ್ತೇನೆ. ನಾನು ಬಂಡೆ ಹತ್ತುವುದನ್ನು ಎಲ್ಲಿಯೂ ತರಬೇತಿ ಪಡೆದುಕೊಂಡಿಲ್ಲ. ಕೋಟೆಯಲ್ಲಿರುವ ಕೋತಿಗಳಿಂದಲೇ ನಾನದನ್ನು ಕಲಿತದ್ದು. ಇಲ್ಲಿಯವರೆಗೆ ಬದಾಮಿ, ಹಂಪೆ, ರಾಮನಗರ, ನಂದಿಬೆಟ್ಟ, ಶಿವಗಂಗೆ, ಟಿಪ್ಪು ಡ್ರಾಪ್, ಮಧುಗಿರಿ ಬೆಟ್ಟಗಳನ್ನಲ್ಲದೆ ಕುಲು ಮನಾಲಿ ಅಮೇರಿಕಾದ ಏಂಜಲ್ ಫಾಲ್ಸ್ ಅನ್ನೂ ಹತ್ತಿದ್ದೇನೆ. ನನಗೆ ಕೋತಿರಾಜ್ ಎನ್ನುವ ಹೆಸರು ಬರಲು ಕಾರಣ ಡಿಸ್ಕವರಿ ಚಾನೆಲ್ ನವರು ನಾನು ಬೆಟ್ಟ ಹತ್ತುವಾಗ ನನಗೂ ಕೋತಿಗೂ ಎದೆಬಡಿತ ಒಂದೇ ತರ ಇರತ್ತೆ ಎಂದರು. ಕೋತಿ ತಾನು ಬೆಟ್ಟ ಹತ್ತಿದ್ದೇನೆ ಅಂತ ಏನಾದರೂ ತಕತಕ ಕುಣಿಯತ್ತ ಅಥವಾ ಕೂರತ್ತಾ ಅದು ಸುಮ್ಮನೆ ಹತ್ತತ್ತೆ ಅದರ ಪಾಡಿಗೆ ಅದು ಹೋಗುತ್ತಿರುತ್ತದೆ ನನ್ನದೂ ಅದೇ ಭಾವ. ಅದಿಕ್ಕೆ ಸ್ಪೈಡರ್ ಮ್ಯಾನ್ ಬರದಿದ್ದಾರಲ್ಲ ಸ್ಟಾನ್ಲೀ ಅವರು ನನ್ನನ್ನು ಮಂಕಿ ಕಿಂಗ್ ಅಂದರೆ ಕೋತಿರಾಜ್ ಅಂತ ಕರೆದರು. ನಾನು ಅದನ್ನೇ ಕನ್ನಡದಲ್ಲಿ ಕೋ ತೆಗೆದು ಜೋ ಹಾಕಿ ಜೋತಿರಾಜ್ ಮಾಡಿಕೊಂಡೆ. ನನಗೆ ಕೋತಿ ಅಂದ್ರೆ ಪ್ರಾಣ. ಹುಡುಗಾಟಕ್ಕೆ ಮಂಗ, ಕೋತಿ ಅಂತ ಬೈಯಬಹುದೇನೋ... ಆದರೆ ನಿಜ ಜೀವನದಲ್ಲಿ ಆ ಹೆಸರು ಗಳಿಸುವುದು ತುಂಬ ಕಷ್ಟ'.

ಮದುವೆ ಯಾವಾಗ ಎಂಬ ಪ್ರಶ್ನೆಗೆ... 'ಈಗ ನನಗೂ ಬುದ್ದಿ ಬಂದಿದೆ. ನಾನೆ ಎಷ್ಟೋ ಹೆಣ್ಣು ಮಕ್ಕಳ ಶವಗಳನ್ನು ಕೆರೆ, ಬಾವಿ, ಜಲಪಾತಗಳಿಂದ ತೆಗೆದಿದ್ದೀನೆ. ನನಗೇನಾದರೂ ಹೆಚ್ಚು ಕಡಿಮೆಯಾದರೆ, ನನ್ನ ನಂಬಿಕೊಂಡು ಬಂದವಳ ಪಾಡೇನು. ನನ್ನ ನಂಬಿ ಬಂದವಳನ್ನು ನಾನು ಸಾಯುವ ತನಕ ಚೆನ್ನಾಗಿ ನೋಡಿಕೊಳ್ಳಬೇಕು. ಅರ್ಧ ದಾರಿಯಲ್ಲಿ ಬಿಟ್ಟು ಹೋಗುವುದು ಸರಿಯಲ್ಲ. ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ. ನನ್ನ ಹೆಂಡತಿ ಹಂಗಿರಬೇಕು ಹಿಂಗಿರಬೇಕು ಎನ್ನುವ ಯಾವ ಕನಸಿಲ್ಲ. ನಾನು ಚಿಕ್ಕ ವಯಸ್ಸಿನಿಂದ ಅನಾಥನಾಗಿ ಬದುಕಿದವನು ಆದ್ದರಿಂದ ನನಗೆ ಹೆಂಡತಿಯಾಗಿರುವುದಕ್ಕಿಂತ ತಾಯಿಯಾಗಿರಬೇಕು. ನಾನು ಅಂತಹ ಎಲ್ಲ ಪ್ರೀತಿಯಿಂದ ವಂಚಿತನಾದವನು. ನಾನು ಹುಡುಗನಾಗಿ ಪಟ್ಟ ಕಷ್ಟ ಹೆಣ್ಣು ಮಕ್ಕಳು ಪಡೋದು ಅಷ್ಟು ಸುಲಭವಲ್ಲ..ಸದ್ಯ ನನ್ನ 'Incredible Monkey Man' ಎಂಬ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಎಲ್ಲಾ ಮುಗಿದು ಅದರಿಂದ ಏನಾದರೂ ಅಲ್ಪ ಸ್ವಲ್ಪ ಹಣ ಬಂದ್ರೆ, ನನಗೆ ಇಲ್ಲ ಅಂದ್ರೂ ನನ್ನ ನಂಬಿ ಬಂದವರಿಗೆ ಬದುಕಲು ಏನಾದರೂ ವ್ಯವಸ್ಥೆ ಮಾಡಬೇಕು. ಹಾಗಾದ್ರೆ ಮದುವೆ ಮಾಡಿಕೊಳ್ಳುತ್ತೇನೆ ಇಲ್ಲವಾದರೆ ಇಲ್ಲ. ನನಗೆ ಎಂಗೇಜ್ಮೆಂಟ್ ಆಗಿ ಕ್ಯಾನ್ಸಲ್ ಆಯ್ತು. ಈಗ ನನ್ನಲ್ಲಿ ಹುಡುಗರೆಲ್ಲ ಇದ್ದಾರಲ್ಲ ಹಾಗೆ ಅವರಲ್ಲೇ ಅವರು ಕೂಡ ಒಬ್ಬರಾಗಿದ್ದರು. ಮಾಮ ಮಾಮ ಅಂತಲೇ ಕರೆಯುತ್ತಿದ್ದರು. ಅವರಿಗೆ ಅಪ್ಪ ಇರಲಿಲ್ಲ ಅಮ್ಮ ಒಬ್ಬರೇ. ಐದು ಜನ ಅಕ್ಕ ತಂಗಿಯರಿದ್ದರು. ಇಂಜಿನಿಯರಿಂಗ್ ಓದಿಸಿದೆ. ಆ ಹುಡುಗಿ ಅವರ ಅಮ್ಮ ಎಲ್ಲ ಒಪ್ಪಿ ನಾನೆ ಮದುವೆ ಮಾಡಿಕೊಳ್ಳಬೇಕು ಅಂತ ದಿನಾಂಕ ಫಿಕ್ಸ್ ಮಾಡಿದರು. ನಾನು ಒಮ್ಮೆ ಜೋಗ್ ಫಾಲ್ಸ್ ನಲ್ಲಿ ಯಾರನ್ನೋ ಕಾಪಾಡಲು ಹೋಗಿ ಬಿದ್ದುಬಿಟ್ಟಿದ್ದೆ. ಸೊಂಟ, ಬೆನ್ನಿನ ಮೂಳೆ ಮುರಿದು ವರ್ಷಾನುಗಟ್ಟಲೆ ಹಾಸ್ಪಿಟಲ್ ನಲ್ಲಿ ಇರಬೇಕಾಯಿತು. ನನ್ನಲ್ಲಿದ್ದ ದುಡ್ಡೆಲ್ಲ ಖರ್ಚಾಯಿತು. ಆಗ ಆ ಹುಡುಗಿ ನೀನು ಮತ್ತೆ ಬಂಡೆ ಹತ್ತಿದರೆ ಖಡಾ ಖಂಡಿತವಾಗಿ ನಾನು ನಿನ್ನ ಮದುವೆ ಆಗಲ್ಲ. ಬೀದಿ ಹುಡುಗರನ್ನು ಸಾಕುತ್ತೀಯ ಬಂಡೆ ಹತ್ತಿಕೊಂಡು ಇರುತ್ತೀಯ ಅಂತ ಆ ಹುಡುಗಿ ಅಂದಾಗ ನೀನು ಕೂಡ ಹಾಗೆ ಬಂದವಳು ಆಲ್ವಾ ಅಮ್ಮ, ಈಗ ಹೀಗೆ ಮಾತಾಡೋದು ಸರಿಯಲ್ಲ ಎಂದೆ. ಅವಳು ನಾನು ಇಂಜಿನಿಯರಿಂಗ್ ಓದಿದ್ದೇನೆ ಐವತ್ತು ಸಾವಿರ ರೂಪಾಯಿ ಸಂಬಳ ಸಿಗತ್ತೆ. ನಮ್ಮ ಕಾಲೇಜಿನಲ್ಲೇ ಬಹಳ ಜನ ಹುಡುಗರು ಇದ್ದಾರೆ ನಾನು ಒಬ್ಬ ಇಂಜಿನಿಯರ್ನನ್ನೆ ಮದುವೆಯಾಗುತ್ತೇನೆ ಎಂದಳು. ಸರಿನಮ್ಮ ಚೆನ್ನಾಗಿರು ಮದುವೆಗೆ ಹೇಳು ಬರುತ್ತೇನೆ ಅಂತ ಹೇಳಿದೆ' ಎಂದು ನಗು ಮೊಗದಿಂದಲೇ ಹರಸುತ್ತಾರೆ ಜ್ಯೋತಿರಾಜ್. ಈ ಸಂಗತಿ ನಿಮ್ಮನ್ನು ಕುಗ್ಗಿಸಲಿಲ್ಲವಾ ಎಂಬ ಪ್ರಶ್ನೆಗೆ...'ಖಂಡಿತ ಇಲ್ಲ. ಆ ಹುಡುಗಿಯ ನಿರ್ಧಾರ ಸರಿಯಾಗಿದೆ. ಇದರಲ್ಲಿ ಬೇಜಾರು ಆಗುವಂತ ವಿಷಯ ಏನಿಲ್ಲ. ನಾವು ಯಾರಿಗಾದ್ರೂ ಊಟಕೊಟ್ರೆ ಅದನ್ನು ಮರೆತು ಬಿಡಬೇಕು. ನಮಗೆ ಯಾರಾದ್ರೂ ನೀರು ಕೊಟ್ಟರೂ ಸಾಯುವ ತನಕ ಮರೆಯಬಾರದು. ಕಳೆದು ಹೋದ ದಿನಗಳು ಸತ್ತುಹೋದ ಮನುಷ್ಯರು ಯಾವತ್ತೂ ಮತ್ತೆ ಸಿಗೋದಿಲ್ಲ. ಆ ಹುಡುಗಿ ನಾನು ಅಂತ ಬದುಕತ್ತೆ. ನಾನು ನಾವು ಅಂತ ಬದುಕುತ್ತೇನೆ ಅಷ್ಟೇ ವ್ಯತ್ಯಾಸ. ಈಗಲೂ ನಾನು ಎಷ್ಟೋ ಹೆಣ್ಣು ಮಕ್ಕಳಿಗೆ ನನ್ನಿಂದಾದ ಸಹಾಯ ಮಾಡಿ ಪಿಜಿಗೆ ಸೇರಿಸಿ ನನ್ನ ಕೈಲಾದಷ್ಟು ಓದಿಸುತ್ತಿದ್ದೇನೆ. ಹತ್ತೊಂಬತ್ತು ವರ್ಷಕ್ಕೆ ಕುಂಡಿ ಕಾಣದಂತೆ ನಿಕ್ಕರ್ ಹಾಕಿದವನು ನಾನು. ಅಲ್ಲಿಯವರೆಗೆ ಹರಕು ಬಟ್ಟೆ ಹಾಕಿದ್ದು. ಹತ್ತೊಂಬತ್ತು ವರ್ಷಕ್ಕೆ ಹೊಟ್ಟೆ ತುಂಬಾ ಊಟ ಅಂತ ತಿಂದದ್ದು, ಬಿರಿಯಾನಿ ಅಂತ ನೋಡಿದ್ದು. ಅಷ್ಟು ಕಷ್ಟಪಟ್ಟಿದ್ದೇನೆ. ಕೆಲವೊಮ್ಮೆ ಹೊಟ್ಟೆ ಹಸಿವಿಗೆ ಚರಂಡಿಯಲ್ಲಿ ಬಿದ್ದಿದ್ದೆಲ್ಲ ತಿಂದಿದ್ದೇನೆ. ಮೈ ಕಾಣೋ ಸಮಯದಲ್ಲಿ ಹಾಕಿಕೊಳ್ಳಲು ನನಗೆ ಸರಿಯಾದ ಬಟ್ಟೆ ಇರಲಿಲ್ಲ. ಅವತ್ತು ನನ್ನತ್ರ ಇದ್ದದ್ದು ಹಾಫ್ ಪ್ಯಾಂಟ್ ಅದಕ್ಕೆ ಇವತ್ತಿಗೂ ನಾನು ಹಾಫ್ ಪ್ಯಾಂಟನ್ನೆ ಹಾಕಿಕೊಳ್ಳುತ್ತೇನೆ. ಇವತ್ತಿಗೂ ತಂಗಳನ್ನ ಮುದ್ದೆ ಸಾರು ಏನಿದ್ದರೂ ಕಣ್ಣಿಗೆ ಒತ್ತಿಕೊಂಡು ತಿನ್ನುತ್ತೇನೆ. ನನಗೆ ಎಲ್ಲರೂ ಬೇಕು ಎಲ್ಲರೂ ನನ್ನವರು'.

'ನಾನು ತಮಿಳುನಾಡಿನಲ್ಲಿ ಹುಟ್ಟಿದರೂ ನಾನು ಇಲ್ಲಿಯ ಅನ್ನ ತಿಂದು ಇಲ್ಲಿ ಬದುಕಿದವ, ಕನ್ನಡವೇ ನನ್ನುಸಿರು... ನಾನು ಕರ್ನಾಟಕಕ್ಕೆ ನನ್ನ ದೇಶಕ್ಕೆ ಹೆಮ್ಮೆಯ ಮಗನಾಗಬೇಕು. ನನ್ನಾಸೆ ಅಂದ್ರೆ ನಾನು ಸತ್ತಾಗ ನನ್ನ ಸ್ಮಶಾನ ತುಂಬಾ ದೊಡ್ಡದಾಗಿರಬೇಕು. ಅಷ್ಟು ಮಣ್ಣು ದುಡಿಯಬೇಕು. ನಾನು ಸತ್ತು ಹತ್ತು ವರ್ಷ ಆಗಿದ್ದರೂ ಅಮೇರಿಕಾದಿಂದ ಯಾರಾದರೂ ಬಂದರೆ ಅಲ್ಲಿಂದ ಒಂದು ಹಿಡಿ ಮಣ್ಣು ತಂದು ನನಗೆ ಹಾಕಬೇಕು. ಹೀಗೆ ಒಂದು ಗುಡ್ಡದಷ್ಟು ಮಣ್ಣು ಬೆಳೆಯಬೇಕು. ಯಾರಾದರೂ ನೋಡಿದವರು ನನ್ನ ಸಮಾಧಿ ನೋಡಿ ಕೋತಿರಾಜ್ ಸಮಾಧಿ ನೋಡದು ಎನ್ನಬೇಕು. ತಮಿಳುನಾಡು, ಕೇರಳ, ಮಹಾರಾಷ್ಟ್ರ ಅಲ್ಲಿಂದ ಬಂದವರು ಕೂಡ ಕನ್ನಡವೇ ಉಸಿರು ಅಂತ ನಿಂತವನ ಸಮಾಧಿ ನೋಡಿ ಇದು ಅಂತ ಅನ್ನಬೇಕು. ನಾನು ಕನ್ನಡವನ್ನೇ ಮಾತನಾಡುತ್ತೇನೆ. ನಾನು ಇವತ್ತು ಅಮೇರಿಕಕ್ಕೆ ಹೋದರೂ ಇಡೀ ಪ್ರಪಂಚವೇ ನನ್ನ ಗುರುತಿಸತ್ತೆ ನಮ್ಮ ಇಂಡಿಯನ್ ಮಂಕಿ ಮ್ಯಾನ್ ಅಂತ. ಕಾರಣ ನನಗೆ ಜಾಗ ಕೊಟ್ಟದ್ದು ಕರ್ನಾಟಕ. ನಾನು ಕನ್ನಡಿಗನಾಗಿ ಹುಟ್ಟಲಿಲ್ಲ ಆದರೆ ಈಗ ಕನ್ನಡಿಗನಾಗಿ ಬದುಕಿದ್ದೇನೆ ಕನ್ನಡಿಗನಾಗಿಯೇ ಸಾಯಬೇಕು. ಕ್ಲೈಂಬಿಂಗ್ ಕಂಪನಿ, ಜಿಮ್ ನವರು ಎಷ್ಟೇ ಕರೆದರೂ ನಾನು ನಮ್ಮ ಕರ್ನಾಟಕದಲ್ಲೇ ಬದುಕಬೇಕು ಎಂಬ ಪಣ ತೊಟ್ಟಿರುವುದರಿಂದ ಎಲ್ಲಾ ಕಡೆಗೂ ನಿರಾಕರಿಸಿದ್ದೇನೆ. ನನ್ನ ಸಿನಿಮಾ ಯಶಸ್ವಿಯಾದರೆ ಅದರಿಂದ ನನಗೇನಾದರೂ ಸ್ವಲ್ಪ ಹಣ ಬಂದರೆ, ಚಿತ್ರದುರ್ಗದಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಒಂದು ಗುರುಕುಲ ಮಾಡಬೇಕು. ಯಾರೇ ಹುಡುಗರು ಬಂದರೂ ಒಳಗೆ ಬಂದಮೇಲೆ ನೂರು ದಿನದ ತನಕ ಆಚೆ ಹೋಗುವ ಹಾಗಿಲ್ಲ. ಉಚಿತವಾಗಿ ಆ ಮಕ್ಕಳಿಗೆ ಹೇಳಿ ಕೊಡಬೇಕು. ನೂರು ದಿನಗಳಲ್ಲಿ ಒಬ್ಬ ಹುಡುಗನಿಗೆ ಕಲಿಕೆಯ ತಳಹದಿಯನ್ನು ಹಾಕಬಹುದು. ಅಷ್ಟು ಹೊತ್ತಿಗೆ ಆ ಹುಡುಗ ಒಂದು ಹಂತದ ಶಿಸ್ತು ಕಲಿತಿರುತ್ತಾನೆ. ನಾನು ಸಾಯುವುದರೊಳಗೆ ಒಲಂಪಿಕ್ ನಲ್ಲಿ ಇಂಡಿಯಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕು. ನಮ್ಮ ಭಾರತದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವುದು ಸ್ವಲ್ಪ ಕಡಿಮೆಯೇ. ನಾನು ಇರುವುದು ಬಾಡಿಗೆ ಮನೆಯಲ್ಲಿ. ಜೊತೆಗೆ ಹನ್ನೊಂದು ಮಕ್ಕಳಿದ್ದಾರೆ. ಪ್ರವಾಸಿಗರು ಕೊಡುವ ಹಣದಿಂದಲೇ ನಮ್ಮ ಜೀವನ ಸಾಗುತ್ತಿದೆ. ನಾವು ಯಾರಿಗಾದ್ರೂ ಊಟ ಕೊಟ್ರೆ ಅದನ್ನು ಮರೆತು ಬಿಡಬೇಕು. ನಮಗೆ ಯಾರಾದ್ರೂ ನೀರು ಕೊಟ್ಟರೂ ಸಾಯುವ ತನಕ ಮರೆಯಬಾರದು. ತುತ್ತು ಅನ್ನವನ್ನು ಕೊಟ್ಟು ಸಲಹಿದ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ'.

ಎಂಥದ್ದೇ ಕಷ್ಟವಿರಲಿ ಸ್ವಲ್ಪ ತಾಳ್ಮೆಯಿಂದ ವಿವೇಚನೆಯಿಂದ ಯೋಚಿಸಿದರೆ ಬಹುತೇಕ ಪರಿಹಾರ ಸಿಗುತ್ತದೆ. ಬದುಕು ಎಷ್ಟೇ ಯಾತನಮಯವಾಗಿದ್ದರೂ ಎಲ್ಲೋ ಒಂದು ಕಡೆ ಒಳ್ಳೆಯ ತಿರುವು ಸಿಗಬಹುದು. ಬಂದ ಎಲ್ಲ ಕಷ್ಟಗಳಿಗೆ ಎದೆಗೊಟ್ಟು ದುರ್ಗದ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಂತಿರುವ ಜ್ಯೋತಿರಾಜ್ ಅವರ 'Incredible Monkey Man' ಸಿನಿಮಾ ಯಶಸ್ವಿಯಾಗಲಿ. ಅವರ ಮುಂದಿನ ಎಲ್ಲ ದಿನಗಳೂ ಶ್ರೇಯಸ್ಕರವಾಗಿರಲಿ.

'ಕೆರೆ, ಬಾವಿಯಲ್ಲಿ ಯಾರಾದರೂ ಬಿದ್ದರೆ, ಎಷ್ಟು ದಿನ ಆದ್ರೂ ಬಾಡಿ ಸಿಗುತ್ತಿಲ್ಲವೆಂದರೆ ದಯವಿಟ್ಟು ನನ್ನ ನಂಬರ್ ಗೆ ಕರೆಮಾಡಿ. ಸಹಾಯ ಮಾಡಬೇಕು ಎನ್ನುವವರೂ ಕರೆ ಮಾಡಬಹುದು'.
ಜ್ಯೋತಿರಾಜ್ - 9980420995.

ಧನ್ಯವಾದಗಳೊಂದಿಗೆ
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...