ಆರಂಭಿಕ ಆರ್ಯ ಬುಡಕಟ್ಟುಗಳ ಬದುಕು

Date: 10-10-2023

Location: ಬೆಂಗಳೂರು


''ಆರ್ಯರ ಸಮಾದಲ್ಲಿ ಬುಡಕಟ್ಟುಗಳಿಗೆ ಸಂಬಂಧಿಸದ ಕುಲ ಹಾಗೂ ಗೋತ್ರಗಳು ಮುಖ್ಯವಾಗಿದ್ದವು. ಬುಡಕಟ್ಟುಗಳ ಸದಸ್ಯರನ್ನು ‘ಜನ’ ಎಂದು ಉಲ್ಲೇಖಿಸಲಾಗಿದೆ. ಗೋತ್ರಗಳನ್ನು ಋಷಿಮೂಲದಿಂದ ಗುರುತಿಸಲಾಗುತ್ತಿತ್ತು. ಪ್ರತಿ ಬುಡಕಟ್ಟುಗಳಲ್ಲಿ ಕೆಲವು ರಾಜಮಾನ್ಯ ವಂಶಗಳಿರುತ್ತಿದ್ದವು,'' ಎನ್ನುತ್ತಾರೆ ಅಂಕಣಗಾರ್ತಿ ವೇದಾವತಿ ಎಸ್. ಬಾಲು. ಅವರು ತಮ್ಮ ಅರಿವಿನ ಹೆಜ್ಜೆಗಳು ಅಂಕಣದಲ್ಲಿ, ‘ಆರಂಭಿಕ ಆರ್ಯ ಬುಡಕಟ್ಟುಗಳ ಬದುಕು’ ಬಗ್ಗೆ ಬರೆದಿದ್ದಾರೆ.

ಹೆಜ್ಜೆ-6

ಅಂಕಣ - ಅರಿವಿನ ಹೆಜ್ಜೆಗಳು

ಹೆಜ್ಜೆ-7

ಆರಂಭಿಕ ಆರ್ಯ ಬುಡಕಟ್ಟುಗಳ ಬದುಕು

ಆರ್ಯ ಬುಡಕಟ್ಟುಗಳ ನಿರಂತರ ಭೌಗೋಳಿಕ ಸ್ಥಿತ್ಯಂತರವನ್ನು ವೈದಿಕ ಸಾಹಿತ್ಯ ದರ್ಶಿಸುತ್ತದೆ. ಈ ಹೆಜ್ಜೆಯಲ್ಲಿ ಋಗ್ವೇದ ಸಾಹಿತ್ಯದ ಹಿನ್ನೆಲೆಯಲ್ಲಿ ಆರ್ಯ ಬುಡಕಟ್ಟುಗಳ ಬದುಕಿನ ಕ್ರಮದ ಕುರಿತು ತಿಳಿಯುವ ಪ್ರಯತ್ನ ಮಾಡಲಾಗಿದೆ.

ಮಧ್ಯ ಏಷ್ಯಾ ಅಥವಾ ಈಗಿನ ಇರಾನ್ ಪ್ರದೇಶವು ಆರ್ಯರ ಮೂಲನೆಲೆಯಾಗಿತ್ತೆಂದು ಸದ್ಯಕ್ಕೆ ವಿದ್ವಾಂಸರು ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ಆರ್ಯರು ಭಾರತಕ್ಕೆ ಬರುವ ಮುನ್ನ ನಿರ್ದಿಷ್ಟ ಭಾಷೆಯನ್ನು ಆಡುತ್ತಿದ್ದರೆಂದು ಹಲವು ಭಾಷೆಗಳ ತೌಲನಿಕ ಅಧ್ಯಯನದಿಂದ ತಿಳಿಯುತ್ತದೆ. ಹಿಟ್ಟೈಟ್ ಮತ್ತು ಮಿಟಿನಿ ಜನಾಂಗಗಳಿಗೆ ಸಂಬಂಧಿಸಿದ ಕ್ರಿ.ಪೂ. 14ನೆಯ ಶತಮಾನದ ಬೋಗಾಸ್‍ಕಾಯ್ ಶಾಸನದಲ್ಲಿ ಹಿಂದೂ ದೇವತೆಗಳ ವರ್ಣನೆಯಿರುವುದು ಗಮನಾರ್ಹ. ಋಗ್ವೇದದಲ್ಲಿ ಇಂದ್ರನು ಯದು ಮತ್ತು ತುರ್ವಸ ಎಂಬ ಕುಲಗಳನ್ನು ದೂರದೇಶದಿಂದ ತಂದನೆಂದು ಉಲ್ಲೇಖವಿದೆ. ವಿಲ್ಲೋ ಮರ ಹಾಗೂ ಓಕ್ ಮರಗಳ ಪ್ರಸ್ತಾಪ ವೇದಗಳಲ್ಲಿವೆ. ಹಸುಗಳನ್ನು ಪವಿತ್ರವೆಂದು ಪೂಜಿಸುತ್ತ, ಅವನ್ನು ಕೊಲ್ಲಬಾರದೆಂಬ ವಿವರಗಳು ಇರಾನಿನ ‘ಜಂದ್ ಆವೆಸ್ತಾ’ ಹಾಗೂ ಭಾರತದ ‘ವೇದ’ಗಳಲ್ಲಿರುವುದು ಉಲ್ಲೇಖಾರ್ಹ.

ಕ್ರಿ.ಪೂ. ಸುಮಾರು 2000ದ ಹೊತ್ತಿಗೆ ಇರಾನ್‍ನಲ್ಲಿದ್ದ ಆರ್ಯರ ಅನೇಕ ಗುಂಪುಗಳು ಆಹಾರ ಹಾಗೂ ಹುಲ್ಲನ್ನು ಹುಡುಕುತ್ತಾ, ಒಂದು ಗುಂಪು ಆಗ್ನೇಯ ಯುರೋಪ್ ಕಡೆಗೆ, ಮತ್ತೊಂದು ಗುಂಪು ಕಾಬೂಲ್ ದಾಟಿ ಹಿಂದೂಕುಷ್ ಪರ್ವತಗಳ ಮೂಲಕ ಹಾದು ಪಂಜಾಬಿನ ಸಪ್ತಸಿಂಧೂ ನದಿ ಬಯಲಿನಲ್ಲಿ ನೆಲೆಸಿತು ಎಂಬುದು ಸದ್ಯಕ್ಕೆ ಒಪ್ಪಿರುವ ವಿಚಾರವಾಗಿದೆ.

ಋಗ್ವೇದ ಕಾಲದ ಜನ ಸಪ್ತಸಿಂಧೂ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸಪ್ತಸಿಂಧೂ ಪ್ರದೇಶವು ಪಂಜಾಬಿನ ಐದು ನದಿಗಳಾದ ಶತುದ್ರಿ (ಸತ್ಲೆಜ್), ವಿಪಾಸ್ (ಬಿಯಾಸ್), ಪರುಷ್ಣಿ (ರಾವಿ), ಅಸಕಿನಿ (ಚಿನಾಬ್) ಹಾಗೂ ವಿತಸ್ಥ (ಝೀಲಂ) ಪಂಚನದಿಗಳ ಜೊತೆಗೆ ಸಿಂಧೂ ಹಾಗೂ ಸರಸ್ವತೀ ನದಿಗಳ ಪ್ರದೇಶವನ್ನು ಒಳಗೊಂಡಿತ್ತು. ದೃಷದ್ವತಿ, ಯಮುನಾ ಮತ್ತು ಗೋಮತಿ ನದಿಗಳ ಉಲ್ಲೇಖ ಋಗ್ವೇದದಲ್ಲಿ ಇರುವುದರಿಂದ ಆ ಪ್ರದೇಶಗಳ ಪರಿಚಯವೂ ಆ ಕಾಲದ ಜನರಿಗಿತ್ತೆಂದು ಭಾವಿಸಬಹುದು.

ಋಗ್ವೇದದಲ್ಲಿ ಆರ್ಯ ಮತ್ತು ದಾಸ ವರ್ಣಗಳ ಉಲ್ಲೇಖವಿದೆ. ಆರ್ಯ ವರ್ಣ ಎಂದರೆ ಗೌರ ಬಣ್ಣ ಹಾಗೂ ದಾಸ ವರ್ಣ ಎಂದರೆ ಕಪ್ಪು ಬಣ್ಣ ಎಂದರ್ಥದಲ್ಲಿ ಇವುಗಳ ಪ್ರಸ್ತಾಪವಿದೆ. ಆರ್ಯರು ಅಗ್ನಿಪೂಜಕರಾಗಿದ್ದರು, ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದರು. ಈ ಆಚರಣೆಗಳನ್ನು ‘ಮತ’ಗಳೆಂದು, ಆಚರಣೆಗಳಲ್ಲಿ ಬಳಸುವ ಮಂತ್ರಗಳಲ್ಲಿನ ಶಕ್ತಿಯನ್ನು ‘ಬ್ರಹ್ಮನ್’ ಎಂದು ಕರೆದಿದ್ದರು. ಯಜ್ಞದ ಮೂಲಕ ಹವಿಸ್ಸನ್ನು ಒಯ್ಯುವ ‘ಇಂದ್ರ’ ಅಥವಾ ‘ದೇವಾ’ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು.

ಅವೈದಿಕ ಜನರನ್ನು ದಾಸ, ದಸ್ಯು, ಅಸುರ, ರಾಕ್ಷಸ ಎಂದು ಕರೆಯುತ್ತಿದ್ದರು. ಇವರೊಂದಿಗೆ ವೈದಿಕರಿಗೆ ಸದಾ ಕದನವೇರ್ಪಡುತ್ತಿತ್ತು. ಅವೈದಿಕರು ಆರ್ಯರ ಗೋವುಗಳನ್ನು ಕದ್ದೊಯ್ಯುವುದು ಸಾಮಾನ್ಯವಾಗಿತ್ತು. ದಾಸರು ಮತ್ತು ದಸ್ಯುಗಳು ಭೌತಿಕ ಮುಂದುವರೆದಿದ್ದು, ರಕ್ಷಿತ ವಸತಿಗಳಲ್ಲಿ ವಾಸಿಸುತ್ತಿದ್ದರು. ದಾಸರಲ್ಲಿ ಕಿರಾತ, ಕೀಕಟ, ಚೌಂಡಾಲ ಮೊದಲಾದ ಬುಡಕಟ್ಟುಗಳಿದ್ದವು. ದಸ್ಯುಗಳು ಮೂಢ ವಸ್ತುಗಳ ಪೂಜೆ ಮಾಡುತ್ತಿದ್ದರು.

ಆರ್ಯರು ಅವೈದಿಕರೊಡನೆ ಹೋರಾಡಿ, ಸೋಲಿಸಿ, ಅವರನ್ನು ತಮ್ಮ ಅಧೀನ ಮಾಡಿಕೊಳ್ಳುತ್ತಿದ್ದರು. ವೈದಿಕರು ದಾಸರನ್ನು ದಾನ ನೀಡುವ ಉಲ್ಲೇಖ ಋಗ್ವೇದದಲ್ಲಿ ಹೆಚ್ಚು ಪ್ರಸ್ತಾಪವಾಗಿರುವುದು ಗಮನೀಯ.

ಆರ್ಯರು ಗೆದ್ದ ಸಂಪತ್ತಿನಲ್ಲಿ ಬುಡಕಟ್ಟುಗಳ ಮುಖ್ಯಸ್ಥರು ಸಿಂಹಪಾಲನ್ನು ಇಟ್ಟುಕೊಂಡಿರುತ್ತಿದ್ದರು. ಈ ಮುಖ್ಯಸ್ಥರು ಸಾಮಾನ್ಯರಿಗಿಂತ ಬಲಿಷ್ಠರಾದ್ದರಿಂದ ಸಾಮಾಜಿಕ ಜೀವನದಲ್ಲಿ ಭೇದ ಸೃಷ್ಟಿಯಾಯಿತು. ಹೀಗಾಗಿ ಆರ್ಯ ಸಮಾಜವು ಯೋಧರು, ಪುರೋಹಿತರು ಮತ್ತು ಸಾಮಾನ್ಯ ಜನರು ಎಂಬ ಮೂರು ವಿಭಾಗಗಳಾಗಿ ಒಡೆಯಿತು.

ಆರ್ಯರ ಸಮಾದಲ್ಲಿ ಬುಡಕಟ್ಟುಗಳಿಗೆ ಸಂಬಂಧಿಸದ ಕುಲ ಹಾಗೂ ಗೋತ್ರಗಳು ಮುಖ್ಯವಾಗಿದ್ದವು. ಬುಡಕಟ್ಟುಗಳ ಸದಸ್ಯರನ್ನು ‘ಜನ’ ಎಂದು ಉಲ್ಲೇಖಿಸಲಾಗಿದೆ. ಗೋತ್ರಗಳನ್ನು ಋಷಿಮೂಲದಿಂದ ಗುರುತಿಸಲಾಗುತ್ತಿತ್ತು. ಪ್ರತಿ ಬುಡಕಟ್ಟುಗಳಲ್ಲಿ ಕೆಲವು ರಾಜಮಾನ್ಯ ವಂಶಗಳಿರುತ್ತಿದ್ದವು. ಈ ವಂಶಗಳ ಸದಸ್ಯರಲ್ಲಿ ಪ್ರಬಲನಾದ ವ್ಯಕ್ತಿ ಬುಡಕಟ್ಟಿನ ಮುಂದಾಳು ಹಾಗೂ ರಾಜನೆಂದು ಕರೆಯುತ್ತಿದ್ದರು. ರಾಜಮಾನ್ಯ ಕುಲದವರು ಒಬ್ಬನನ್ನು ರಾಜನೆಂದು ಆಯ್ಕೆ ಮಾಡುವ ವ್ಯವಸ್ಥೆಯೂ ಇದ್ದುದರಿಂದ, ಹಲವು ಬುಡಕಟ್ಟುಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದರ ನಿವಾರಣೆಗಾಗಿ ಆರ್ಯೇತರ ಬುಡಕಟ್ಟುಗಳ ನೆರವನ್ನು ಪಡೆಯುತ್ತಿದ್ದರೆಂದು ತಿಳಿಯುತ್ತದೆ.

‘ಭರತ’ ಬುಡಕಟ್ಟಿನ ತೃತ್ಸು ಕುಲದ ‘ಸುದಾಸ’ ಮತ್ತು ‘ದಿವೋದಾಸ’ ಎಂಬ ರಾಜರನ್ನು ಋಗ್ವೇದ ಉಲ್ಲೇಖಿಸುತ್ತದೆ. ತೃತ್ಸುಗಳ ಪುರೋಹಿತ ವಿಶ್ವಾಮಿತ್ರ. ಜನ ಆತನನ್ನು ಬಿಟ್ಟು ವಸಿಷ್ಠನನ್ನು ಪುರೋಹಿತನನ್ನಾಗಿ ನೇಮಿಸಿಕೊಳ್ಳುತ್ತಾರೆ. ಆಗ ವಿಶ್ವಾಮಿತ್ರ ಪುರು, ಯದು, ಅನು, ದೃಹ್ಯು, ತುರ್ವಶ, ಅಲೀನ, ಫಕ್ತಿ, ಬಲಾನ, ಶಿವ ಹಾಗೂ ವಿಷಣಿನ್ ಎಂಬ ಹತ್ತು ಬುಡಕಟ್ಟುಗಳ ಸೇನೆಯನ್ನು ಕಟ್ಟಿ, ಸುದಾಸನ ವಿರುದ್ಧ ಕಳುಹಿಸುತ್ತಾನೆ. ಈ ಹೋರಾಟವನ್ನು ‘ಹತ್ತು ರಾಜರ ಯುದ್ಧ’ ಎಂದು ಕರೆಯಲಾಗಿದೆ. ಈ ಯುದ್ಧವು ಪರುಷ್ಣಿ ಅಥವಾ ರಾವಿ ನದಿಯ ದಂಡೆಯ ಮೇಲೆ ನಡೆಯಿತು. ಇದರಲ್ಲಿ ಸುದಾಸ ಗೆದ್ದು, ಭರತ ಎಂಬ ಬುಡಕಟ್ಟಿನ ಸಾರ್ವಭೌಮತ್ವವನ್ನು ಸ್ಥಾಪಿಸಿದನು.

ವೇದ ಕಾಲದ ಆರಂಭದಲ್ಲಿ ಕುಟುಂಬವನ್ನು ‘ಗೃಹ’ ಎನ್ನುತ್ತಿದ್ದರು. ಹಲವು ತಲೆಮಾರಿನ ಜನ ಕುಟುಂಬದಲ್ಲಿ ವಾಸ ಮಾಡುತ್ತಿದ್ದರಿಂದ ಇವು ವಿಸ್ತೃತ ರಕ್ತ ಸಂಬಂಧಗಳ ಗುಂಪಾಗಿದ್ದವು. ಕುಟುಂಬ ಪಿತೃಪ್ರಧಾನ ವ್ಯವಸ್ಥೆ ಪಾಲಿಸುತ್ತಿತ್ತು. ಕುಟುಂಬವನ್ನು ಸೂಚಿಸುವ ‘ಕುಲ’ ಎಂಬ ಶಬ್ದವು ಋಗ್ವೇದದಲ್ಲಿದೆ. ರಾಜ್ಯದಂತಹ ವಿಸ್ತಾರದ ಘಟಕಗಳು ರೂಪುಗೊಂಡಿರಲಿಲ್ಲ. ಕುಲ ಅಥವಾ ಕುಟುಂಬದಲ್ಲಿ ತಂದೆ-ತಾಯಿ, ಮಕ್ಕಳು, ದಾಸರು ಮೊದಲಾದ ಸದಸ್ಯರಿದ್ದರು. ಇಂತಹ ಬಣಗಳ ಕಾದಾಟ ಹೆಚ್ಚಾಗಿ ನಡೆಯುತ್ತಿದ್ದರಿಂದ ಯುದ್ಧಗಳಲ್ಲಿ ಹೋರಾಡುವ ಗಂಡು ಸಂತಾನದ ಬಯಕೆಯೂ ಹೆಚ್ಚಿತ್ತು. ಆದ್ದರಿಂದ ಮಕ್ಕಳಿಗಾಗಿ ದೇವತೆಗಳಲ್ಲಿ ಪ್ರಾರ್ಥನೆ ಸಾಮಾನ್ಯವಾಗಿತ್ತು.

ಋಗ್ವೇದ ಕಾಲದಲ್ಲಿ ಬಾಲ್ಯವಿವಾಹವಿರಲಿಲ್ಲ. ಹೆಣ್ಣುಮಕ್ಕಳು ಪೂರ್ಣ ಬೆಳೆದ ನಂತರವೇ ಅವರಿಗೆ ಮದುವೆ ಮಾಡುತ್ತಿದ್ದರು. ಹೆಣ್ಣು ಮತ್ತು ಗಂಡಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವಿದ್ದರೂ ಮಾತಾಪಿತೃಗಳ ಅನುಮತಿ ಅಗತ್ಯವಾಗಿ ಬೇಕಿತ್ತು. ಕನ್ಯೆಯು ಅಂಗಹೀನಳಾಗಿದ್ದರೆ ಮಾತ್ರ ವರದಕ್ಷಿಣೆಯ ವ್ಯವಸ್ಥೆಯಿತ್ತು. ವಿವಾಹ ವಧುವಿನ ಮನೆಯಲ್ಲಿ ನಡೆಯುತ್ತಿತ್ತು. ಬಹುಪತ್ನಿತ್ವದ ಆಚರಣೆ ಕೇವಲ ಉನ್ನತ ವರ್ಗದ ಕುಟುಂಬಗಳಲ್ಲಿತ್ತು. ವಿಧವೆಯರಿಗೆ ಪುನರ್ವಿವಾಹದ ಅವಕಾಶವಿತ್ತು. ಮಕ್ಕಳಿಲ್ಲದ ವಿಧವೆಯು ಮೈದುನನನ್ನು ಗಂಡು ಮಗುವಾಗುವವರೆಗೆ ಸೇರುವ ಪದ್ಧತಿಯಿದ್ದು, ಇದಕ್ಕೆ ‘ನಿಯೋಗ ಪದ್ಧತಿ’ ಎಂಬ ಹೆಸರಿತ್ತು.

ಋಗ್ವೇದದ ಕಾಲದಲ್ಲಿ ವರ್ಣ-ಜಾತಿ ವ್ಯವಸ್ಥೆಗಳ ಸಾಮಾಜಿಕ ಶ್ರೇಣೀಕರಣದ ಕಲ್ಪನೆಯೇ ಇರಲಿಲ್ಲ. ವರ್ಣ ಎಂಬುದು ಕೇವಲ ಬಣ್ಣಕ್ಕೆ ಮಾತ್ರ ಸಂಕೇತವಾಗುತ್ತದೆ. ಸಾಮಾಜಿಕ ವಿಭಜನೆಯು ವೃತ್ತಿಯ ಆಧಾರದ ಮೇಲೆ ನಡೆಯುತ್ತಿತ್ತು. ಆರ್ಯ ಕುಲದ ಯಾರಾದರೂ ಯಾವುದೇ ವೃತ್ತಿಯನ್ನು ಮಾಡಬಹುದಿತ್ತು. ರಾಜಮಾನ್ಯರು ಋಷಿಗಳು ಹಾಗೂ ಪುರೋಹಿತರು ಆಗಿದ್ದ ಉಲ್ಲೇಖ ಋಗ್ವೇದದಲ್ಲಿದೆ. ‘ನಾನು ಕವಿ, ನನ್ನ ತಂದೆ ವೈದ್ಯ ಹಾಗೂ ನನ್ನ ತಾಯಿ ಧಾನ್ಯ ಬೀಸುತ್ತಾಳೆ. ನಾವು ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದ್ದರೂ, ನಾವೆಲ್ಲ ಒಟ್ಟಿಗೆ ವಾಸವಾಗಿದ್ದೇವೆ’ ಎಂಬ ಶ್ಲೋಕವೊಂದು ಋಗ್ವೇದದಲ್ಲಿದೆ. ಇದೇ ಕಾಲದಲ್ಲಿಯೇ ವರ್ಣರಹಿತ ಸಮಾಜವು ಕ್ರಮೇಣ ವರ್ಣ ಸಮಾಜವಾಗಿ ಪರಿವರ್ತನೆಯಾಗಲು ಬೇಕಾದ ಸಿದ್ಧತೆಗಳು ಅಪ್ರಜ್ಞಾಪೂರ್ವಕವಾಗಿ ನಡೆದಿದ್ದವೆಂದು ನಾವು ಭಾವಿಸಬಹುದು.

ಕುಟುಂಬಗಳಲ್ಲಿ ಗಂಡು ಸಂತಾನಕ್ಕೆ ಹೆಚ್ಚು ಒಲವಿದ್ದರೂ ಜನಿಸಿದ ಹೆಣ್ಣು ಮಕ್ಕಳನ್ನು ಪ್ರೀತಿಯಿಂದಲೇ ಸಾಕುತ್ತಿದ್ದರು. ಸ್ತ್ರೀಯರಿಗೆ ಗೌರವದ ಸ್ಥಾನವಿದ್ದು, ರಕ್ಷಣೆಗಾಗಿ ಪುರುಷರನ್ನು ಅವಲಂಬಿಸಿದ್ದರು. ಮಹಿಳೆಯರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ತಮ್ಮ ಪತಿಯೊಡನೆ ಹವಿಸ್ಸು ಅರ್ಪಿಸುವುದರ ಜೊತೆಗೆ ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಮಹಿಳೆಯರು ನೇರವಾಗಿ ಪಾಲ್ಗೊಳ್ಳುತ್ತಿದ್ದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸುತ್ತಿರಲಿಲ್ಲ. ಕೆಲವು ಸ್ತ್ರೀಯರು ಋಕ್ಕುಗಳನ್ನು ರಚಿಸುವಷ್ಟು ವಿದ್ವತ್ ಗಳಿಸಿದ್ದರು. ಋಗ್ವೇದದಲ್ಲಿ ವಿಶ್ವವಾರಾ, ಘೋಷ, ಅಪಾಲಾ ಮೊದಲಾದ ಸ್ತ್ರೀಯರು ಋಕ್ಕುಗಳನ್ನು ರಚಿಸಿರುವ ಉಲ್ಲೇಖಗಳಿವೆ.

ಋಗ್ವೇದ ಕಾಲದ ಜನ ನೀವಿ, ವಾಸ ಅಥವಾ ಪರಿದಾನ ಎಂಬ ಉಡುಪುಗಳನ್ನು; ಅಧಿವಾಸ, ಅಟಕ/ದ್ರಾಪಿ ಎಂಬ ಹೊದಿಕೆಗಳನ್ನು ಬಳಸುತ್ತಿದ್ದರು. ವಿವಿಧ ಬಣ್ಣಗಳ ಉಡುಪುಗಳನ್ನು ಮಾತ್ರವಲ್ಲದೆ, ಚಿನ್ನದ ಕಸೂತಿಯಿರುವ ಬಟ್ಟೆಗಳನ್ನು ಧರಿಸುತ್ತಿದ್ದರೆಂದು ತಿಳಿಯುತ್ತದೆ.

ಯವ (ಬಾರ್ಲಿ), ಹಾಲು, ಹಾಲಿನ ಉತ್ಪನ್ನಗಳು, ತರಕಾರಿ ಹಾಗೂ ಹಣ್ಣುಗಳನ್ನು ಸಾಮಾನ್ಯ ದಿನನಿತ್ಯದ ಆಹಾರಕ್ಕಾಗಿ ಬಳಸುತ್ತಿದ್ದರು. ಪ್ರಾಣಿಗಳ ಮಾಂಸವನ್ನು ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ಬಳಸುತ್ತಿದ್ದುದಾಗಿ ತಿಳಿಯುತ್ತದೆ. ಕ್ರಮೇಣ ಗೋವಧೆ ನಿಷೇಧವಾಗಿರುವುದು ಹಾಗೂ ಸಂಬಂಧಿಸಿದಂತೆ ಋಗ್ವೇದದಲ್ಲಿ ಬಳಸಿರುವ ‘ಆಜ್ಞಾ’ (ಕೊಲ್ಲಬಾರದು) ಎಂಬ ಪದದಿಂದ ತಿಳಿಯುತ್ತದೆ. ನೀರಿಗೆ ‘ಉತ್ಸ’(ನದಿಯ ಚಿಲುಮೆ), ‘ಅವಸತ್’(ನಿರ್ಮಿತ ಬಾವಿ)ಗಳನ್ನು ಅವಲಂಬಿಸಿದ್ದರು. ಪರ್ವತಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಹಿಮಾಲಯದ ‘ಮೂಜವತ್’ ಶಿಖರದಲ್ಲಿ ಬೆಳೆಯುತ್ತಿದ್ದ ಗಿಡವೊಂದರ ರಸವಾದ ‘ಸೋಮ’ವನ್ನು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರ ಉಪಯೋಗಿಸಲಾಗುತ್ತಿತ್ತು. ‘ಸುರ’ ಎಂಬುದು ಸಾಮಾನ್ಯ ಮಾದಕ ಪಾನೀಯವಾಗಿತ್ತು.

ಆರಂಭಿಕ ವೇದಕಾಲದ ಪುರುಷರು ಬೇಟೆ, ಸಮರ ನೃತ್ಯ ಹಾಗೂ ರಥದ ಓಟದ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ಪಗಡೆಯಾಟ ಹಾಗೂ ಮುಷ್ಠಿ ಯುದ್ಧ ನಡೆಯುತ್ತಿದ್ದವು. ಸ್ತ್ರೀಯರು ವೀಣೆಯಂತಹ ವಾದ್ಯ ಮತ್ತು ತಾಳದ ಜೊತೆ ಸಂಗೀತ-ನೃತ್ಯಗಳಲ್ಲಿ ತೊಡಗುತ್ತಿದ್ದರು.

ಕೃಷಿ ಆರ್ಯರ ಮುಖ್ಯ ಉದ್ಯೋಗವಾಗಿತ್ತು. ಎತ್ತುಗಳು ಹಾಗೂ ನೇಗಿಲ ಬಳಕೆ ಜನರಿಗೆ ತಿಳಿದಿತ್ತು. ಸಾಗುವಳಿ ಭೂಮಿಯನ್ನು ‘ಉರ್ವರ’ ಅಥವಾ ‘ಕ್ಷೇತ್ರ’ ಎಂದು ಕರೆಯಲಾಗುತ್ತಿತ್ತು. ಬೀಜ ಬಿತ್ತುವ, ಕೊಯ್ಲು ಮಾಡುವ ವಿಧಾನ ಜನರಿಗೆ ಗೊತ್ತಿತ್ತು. ಅವತಸ್‍ಗಳಿಂದ ನೀರನ್ನು ಶಿಲೆಯ ಚಕ್ರಗಳ ನೆರವಿನಿಂದ ಭೂಮಿಗೆ ಹಾಯಿಸಲಾಗುತ್ತಿತ್ತು. ಅಕ್ಕಿ ಮತ್ತು ಬಾರ್ಲಿ ಪ್ರಧಾನ ಬೆಳೆಗಳಾಗಿದ್ದವು. ಗೋವುಗಳು ಆರ್ಯರ ಆರ್ಥಿಕ ಸಂಪತ್ತಿನ ಮೂಲದ್ರವ್ಯಗಳಾಗಿದ್ದವು. ಜನ ಗೋವುಗಳ ರಕ್ಷಣೆಗೆ ಯುದ್ಧಕ್ಕೂ ಸಿದ್ಧರಾಗಿರುತ್ತಿದ್ದರು. ಎತ್ತು, ಕುದುರೆ, ನಾಯಿ, ಆಡು ಮತ್ತು ಕುರಿಗಳನ್ನೂ ಸಾಕುತ್ತಿದ್ದರೆಂದು ತಿಳಿಯುತ್ತದೆ.

ವ್ಯಾಪಾರವು ‘ಫಣಿ’ ಎಂಬ ಆರ್ಯೇತರ ಬುಡಕಟ್ಟಿನ ಮುಖ್ಯ ಕಸುಬಾಗಿತ್ತು. ಬಟ್ಟೆ, ಹೊದಿಕೆ ವಸ್ತ್ರ ಹಾಗೂ ಚರ್ಮದ ವಸ್ತುಗಳು ಮಾರಾಟದ ಸರಕುಗಳಾಗಿದ್ದವು. ಗೋವಿನ ಬೆಲೆಯ ಆಧಾರದ ಮೇಲೆ ವಸ್ತುಗಳ ಬೆಲೆಯನ್ನು ನಿರ್ಧರಿಸಲಾಗುತ್ತಿತ್ತು. ‘ನಿಷ್ಕ’ ಎಂಬುದು ಅಂದು ಬಳಕೆಯಲ್ಲಿದ್ದ ನಾಣ್ಯದ ಹೆಸರು. ಬ್ಯಾಬಿಲೋನಿಯಾ ಸಂಸ್ಕೃತಿಯೊಂದಿಗೆ ವಾಣಿಜ್ಯ ಸಂಪರ್ಕವಿದ್ದುದಾಗಿ ತಿಳಿಯುತ್ತದೆ.

ಮರಗೆಲಸ, ಲೋಹಗಾರಿಕೆ, ಚಮ್ಮಾರಿಕೆ, ನೇಯ್ಗೆ ಮತ್ತು ಕುಂಬಾರಿಕೆ ಋಗ್ವೇದ ಕಾಲದ ಆರ್ಯರ ಪ್ರಮುಖ ಕೈಗಾರಿಕೆಗಳಾಗಿದ್ದವು. ರಥ ನಿರ್ಮಿಸುವ ಬಡಗಿಗೆ ಉನ್ನತ ಸ್ಥಾನವಿತ್ತು. ತಾಮ್ರ, ಚಿನ್ನ ಹಾಗೂ ಇತರ ಲೋಹಗಳಿಂದ ಆಯುಧಗಳು, ಉಪಕರಣಗಳು ಹಾಗೂ ಆಭರಣಗಳನ್ನು ಲೋಹಗಾರರು ತಯಾರಿಸುತ್ತಿದ್ದರು. ಬಟ್ಟೆ ಹೊಲಿಯುವುದು, ನೇಯುವುದು, ಚಾಪೆ ಹೆಣೆಯುವುದು ಮೊದಲಾದ ಕೆಲಸಗಳನ್ನು ಮಹಿಳೆಯರು ಮಾಡುತ್ತಿದ್ದರು. ಕುಂಬಾರರು ಮಡಕೆಗಳನ್ನು ಮಾಡುತ್ತಿದ್ದರು.

ಆರ್ಯರ ಕಾಲದ ಪ್ರಾಚೀನ ದೇವತೆಗಳೆಂದರೆ ‘ದ್ಯಯುಸ’ ಮತ್ತು ‘ಪೃಥ್ವಿ’. ಪಾಪವಿಮೋಚನೆಗಾಗಿ ವರುಣನನ್ನು ಪ್ರಾರ್ಥಿಸುತ್ತಿದ್ದರು. ಇಂದ್ರ ಪ್ರಬಲವಾದ ಯುದ್ಧದೇವತೆಯಾಗಿ, ‘ಪುರಂದರ’ (ಕೋಟೆಗಳ ವಿನಾಶಕ) ಎಂದೂ ಗುರುತಿಸಿರುವುದು ಗಮನಾರ್ಹ. ಮಿತ್ರ, ಅಶ್ವಿನಿ ದೇವತೆಗಳು, ರುದ್ರ, ವಾತ, ಮರುತ ಮತ್ತು ಪರ್ಜನ್ಯ ಎಂಬ ಇತರ ದೇವತೆಗಳನ್ನು ಜನ ಪೂಜಿಸುತ್ತಿದ್ದುದಾಗಿ ತಿಳಿಯುತ್ತದೆ. ಯಜ್ಞಗಳನ್ನು ಗೃಹಕೃತ್ಯ, ಸಾರ್ವಜನಿಕ ಶಾಂತಿ ಮತ್ತು ಕಲ್ಯಾಣಕ್ಕೆ ದೇವರ ನೆರವಿಗಾಗಿ ನಡೆಸುತ್ತಿದ್ದರು. ಹಾಲು, ತುಪ್ಪ, ಮಾಂಸ ಹಾಗೂ ಧಾನ್ಯಗಳನ್ನು ಯಜ್ಞದ ಹೋಮಕುಂಡಕ್ಕೆ ಅರ್ಪಿಸುತ್ತಿದ್ದರೆಂದೂ, ಯಜ್ಞದ ಕಾಲಕ್ಕೆ ಬಂದ ಅತಿಥಿಗಳಿಗೆ ಗೋಮಾಂಸ ನೀಡಲಾಗುತ್ತಿತ್ತು.

ಋಗ್ವೇದ ಕಾಲದ ಆರ್ಯರಿಗೆ ಬರವಣಿಗೆ ತಿಳಿದಿತ್ತು. ಗೋವುಗಳ ಕಿವಿಯ ಮೇಲೆ ‘8’ರ ಗುರುತು ಹಾಕಿ, ಅದನ್ನು ‘ಅಷ್ಟಕರ್ಣಿ’ ಎಂದು ಕರೆಯುತ್ತಿದ್ದರು. ಉಲ್ಲೇಖವಿದೆ. ಕೋಟೆಗೋಡೆಗಳು ಮತ್ತು ಕಲ್ಲಿನ ಗೋಡೆಗಳ ನಿರ್ಮಾಣದ ಉಲ್ಲೇಖವೂ ಇದೆ. ಯಾಗದಲ್ಲಿ ಇಂದ್ರನ ವಿಗ್ರಹದ ಪ್ರಸ್ತಾಪವಿರುವುದನ್ನು ಗಮನಿಸಬಹುದು.

ಋಗ್ವೇದದಲ್ಲಿ ವಿವಿಧ ದೇವತೆಗಳನ್ನು ಸ್ತುತಿಸುವ 1017 ಸ್ತೋತ್ರಗಳಿವೆ. ಉಷಸ್ ದೇವತೆಯ ಸ್ತೋತ್ರಗಳು ಉತ್ತಮವಾಗಿವೆ. ಕಾವ್ಯ ರಚನೆ ಪರಿಪೂರ್ಣವಾಗಿ ವಿಕಾಸವನ್ನು ಹೊಂದಿತ್ತೆಂದು ತಿಳಿಯುತ್ತದೆ.

ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿ ಸಾಧಿಸಿದ್ದ ಜನರಿಗೆ ಅನೇಕ ರೋಗಗಳು, ಅವುಗಳನ್ನು ಗುಣಪಡಿಸಲು ಗಿಡಮೂಲಿಕೆಗಳ ಔಷಧಿಗಳ ಕುರಿತು ತಿಳಿದಿತ್ತು. ಜೊತೆಗೆ ಮಂತ್ರ-ತಂತ್ರಗಳ ಅನುಸರಣೆಯು ತಿಳಿದಿತ್ತು. ಕ್ಷಯ, ಕುಶ್ಮ, ಕಾಮಾಲೆ ಮೊದಲಾದ ರೋಗಗಳ ಹೆಸರನ್ನು ವೇದಗಳಲ್ಲಿ ಉಲ್ಲೇಖ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯನ್ನು ತಿಳಿದಿದ್ದ ಜನರು ಕೃತಕ ಕಾಲು ಜೋಡಿಸಿದ್ದ ಕುರಿತು ಉದಾಹರಣೆಗಳಿವೆ.

ನಕ್ಷತ್ರಗಳ ಚಲನೆಯನ್ನು ಗಮನಿಸುತ್ತಿದ್ದ ಜನರಿಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿಯಿತ್ತು. ‘ವರ್ಷ’ದ ಕಲ್ಪನೆ ಅಂದಿನ ಜನರಿಗಿತ್ತು.

ಡಾ. ವೇದಾವತಿ.ಎಸ್ ಬಾಲು

ಚಿತ್ರ-1: ಆರ್ಯರು ಬಳಸುತ್ತಿದ್ದ ಉಡುಪು, ಪ್ರಾಣಿಗಳು

ಚಿತ್ರ-2: ಇಂದ್ರ ಹಾಗೂ ಅಗ್ನಿ ದೇವತೆಗಳು

ಚಿತ್ರ-3: ಹೋಮ / ಯಜ್ಞಯಾಗಾದಿಗಳು

ಚಿತ್ರ-4: ಋಗ್ವೇದದ ಬರಹಗಳು

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...