ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್


'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಪ್ರಕಾಶನದಿಂದ ಪ್ರಕಟಗೊಂಡ ಬಿಂಬ ಬಿಂಬನ ಕೃತಿಗೆ ಬರೆದ ಪ್ರಕಾಶಕರ ಮಾತು ಇಲ್ಲಿವೆ.

"ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್"... ಸಿನಿಮಾಸಕ್ತ ಗೆಳೆಯರ ಜೊತೆಗೂಡಿದಾಗ ಹೀಗೆ ಮಾತನ್ನಾಡುತ್ತಿರುತ್ತೇನೆ. ಅವರು ರೂಪಕಗಳನ್ನು ಬಳಸಿ ಕಥಾನಕವನ್ನು ಅರ್ಥಮಾಡಿಕೊಳ್ಳಲು ಪ್ರೇಕ್ಷಕನನ್ನು ಆಹ್ವಾನಿಸುತ್ತಿರುತ್ತಾರೆ. ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ. ಈ ಚಿತ್ರಗಳು ವಾಣಿಜ್ಯ ಲಾಭಕ್ಕಿಂತ ಕಲಾತ್ಮಕ ಮತ್ತು ಬೌದ್ಧಿಕ ಉದ್ದೇಶಗಳಿಗಾಗಿಯೇ ನಿರ್ಮಾಣಗೊಂಡಿರುತ್ತವೆ. ಮುಖ್ಯವಾಹಿನಿಯ ಸಿನಿಮಾಗಳ ಆಕರ್ಷಣೆಯಂತಲ್ಲದೆ ಕಲಾತ್ಮಕ ಅಭಿವ್ಯಕ್ತಿ, ವಿಶಿಷ್ಟವಾಗಿ ಕಥೆ ಹೇಳುವಿಕೆ ಮತ್ತು ನಾವೀನ್ಯತೆಗಳಿಗೆ ಆದ್ಯತೆ ನೀಡುತ್ತವೆ. ಸಾಮಾಜಿಕ ಸಮಸ್ಯೆಗಳು, ವಿಷಯ ಪ್ರಚೋದನೆಯ ಕುರಿತಾಗಿರುವ ಈ ಸಿನಿಮಾಗಳಲ್ಲಿ ರೂಪಕಗಳನ್ನು ಹೆಚ್ಚೇ ಬಳಸಲಾಗಿರುತ್ತದೆ. ಅಲ್ಲೊಂದು ಅದ್ಭುತ ಚಿಂತನೆ ಇರುತ್ತದೆ. ಸಮಾಜದ ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂವಾದಕ್ಕೆ ಅನುವಾಗಬಲ್ಲಂತಹ ದೃಶ್ಯಜೋಡಣೆ ಮಾಡಿರುತ್ತಾರೆ. ಒಂದು ಪಾಠದಲ್ಲಿ, ಪದ್ಯದಲ್ಲಿ ಹೇಳಬಹುದಾದುದನ್ನು ನಿರ್ದೇಶಕ ಒಂದು ದೃಶ್ಯದ ಮೂಲಕ ತಣ್ಣಗೆ ಹೇಳಿಬಿಟ್ಟಿರುತ್ತಾನೆ. ಅದು ನೋಡುಗನಿಗೆ ಅರ್ಥವಾಗಿಬಿಟ್ಟರೆ ಸಿನಿಮಾದ ಸಂವಹನ ಸ್ಪಷ್ಟವಾಗುತ್ತದೆ. ಸಿನಿಮಾದ ಸಾರ್ಥಕತೆ ಹೆಚ್ಚುತ್ತದೆ. ಆದರೆ ಸಿನಿಮಾಗಳನ್ನು ಮನರಂಜನೆಗಾಗಿ ನೋಡುವ ಸಾಮಾನ್ಯ ಸಿನಿಮಾಸಕ್ತರಿಗೆ ಈ ಚಿತ್ರಗಳನ್ನು ನೋಡಲು ಒಂದು ವಿಶಿಷ್ಟ ಪ್ರವೇಶ ಬೇಕಾಗುತ್ತದೆ.

ರೂಪಕನಿಷ್ಠರೆಂದೇ ಖ್ಯಾತಿಯಾಗಿರುವ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು ಇದೇ ಸಾಲಿನವು. ಕನ್ನಡಿಗರಿಂದ ಮಾತ್ರವಲ್ಲ ದೇಶವ್ಯಾಪಿ ಜನರಿಂದ ಮೆಚ್ಚುಗೆ ಪುರಸ್ಕಾರಗಳನ್ನು ಪಡೆದುಕೊಂಡಂತಹವು. ನೂರು ವರ್ಷಗಳ ಭಾರತೀಯ ಸಿನಿಮಾರಂಗದ ಸರ್ವಶ್ರೇಷ್ಠ ಇಪ್ಪತ್ತು ಸಿನಿಮಾಗಳಲ್ಲಿ ನಮ್ಮ ಗಿರೀಶ್ ಕಾಸರವಳ್ಳಿಯವರ ಸಿನಿಮಾವೂ ಇದೆ ಎಂಬುದು ಕನ್ನಡಿಗರು ಹೆಮ್ಮೆಪಡಬೇಕಾದಂತಹ ವಿಷಯ. ನನ್ನ ನಿರ್ವಹಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ವಿಷ್ಣುವರ್ಧನ್ ಅವರ ದತ್ತಿ ಪ್ರಶಸ್ತಿಯೊಂದಿದೆ. ಆ ಪ್ರಶಸ್ತಿಗೆ ಗಿರೀಶ್ ಕಾಸರವಳ್ಳಿಯವರು ಭಾಜನರಾಗಿದ್ದಾಗ ನಾನು ಮೊದಲು ಅವರನ್ನು ನೋಡಿದ್ದು. ಸಿನಿಮಾಗಳ ಮೂಲಕ ಪರಿಚಿತರಾಗಿದ್ದ ಗಿರೀಶ್ ಕಾಸರವಳ್ಳಿಯವರು ವೈಯಕ್ತಿಕವಾಗಿಯೂ ಪರಿಚಿತರಾದರು. ಆಗಿನಿಂದಲೂ ಅವರೊಂದಿಗಿನ ಸಂಬಂಧ ಹಾಗೇ ಉಳಿದಿರುವುದು ನನ್ನ ಪಾಲಿನ ಬಹುದೊಡ್ಡ ಖುಷಿ. ನನ್ನ ಅನೇಕ ಗೆಳೆಯರು ಗಿರೀಶ್ ಕಾಸರವಳ್ಳಿಯವರ ಜೊತೆಗೊಂದು ಸಿನಿಮಾಮಾಡು, ತುಂಬಾ ಪ್ರಸಿದ್ಧನಾಗಬಹುದು ಅನ್ನೋ ಸಲಹೆಯನ್ನು ಆಗಾಗ ಕೊಡುತ್ತಲೇ ಇರುತ್ತಾರೆ. ಆದರೆ ಯಾಕೋ ನನಗೆ ಅದು ಸಾಧ್ಯವಾಗಲೇ ಇಲ್ಲ. ನನ್ನ ಹಣೆಬರಹದಲ್ಲಿ ಅವರೊಂದಿಗೆ ಸಿನಿಮಾಯೋಗ ಇದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಪುಸ್ತಕಯೋಗವಂತೂ ದಕ್ಕಿಬಿಟ್ಟಿದೆ. ಈ 'ಬಿಂಬ ಬಿಂಬನ' ಕನ್ನಡದ ಮಟ್ಟಿಗೆ ಒಂದು ವಿಶಿಷ್ಟ ಕೃತಿ.

ನಾನು ಆಗಲೇ ಹೇಳಿದ ಹಾಗೆ ಕಲಾತ್ಮಕ ಚಿತ್ರಗಳಲ್ಲಿ ರೂಪಕಗಳದ್ದೇ ಮೇಲುಗೈ. ಆದರೆ ಆ ರೂಪಕಗಳ ಜೋಡಣೆಯ ಹಿಂದೆ ನಿರ್ದೇಶಕನ ಉದ್ದೇಶ ಏನಾಗಿತ್ತು? ಎಂಬುದು ಬಹುತೇಕ ಸಂದರ್ಭದಲ್ಲಿ ಒಗಟಾಗಿಯೇ ಉಳಿದುಬಿಡುತ್ತದೆ. ಆಗಾಗ ಸಂವಾದಗಳನ್ನು ಏರ್ಪಡಿಸಿ ಇವುಗಳ ಬಗ್ಗೆ ಮಾತನಾಡುವುದೂ ಇದೆ. ಆದರೆ ಆ ರೂಪಕಗಳ ಹಿನ್ನಲೆ ಕುರಿತಾಗಿ ಪುಸ್ತಕವಾಗಿದ್ದು ಭಾರತದ ಮಟ್ಟಿಗೆ ಇದೇ ಮೊದಲು ಎನಿಸುತ್ತೆ. ಸಿನಿ ಕರ್ಮಿಗಳ ಪಾಲಿಗೆ ಇದೊಂದು ಅತ್ಯುತ್ತಮ ಸಿನಿಭಗವದ್ಗೀತೆಯಾಗಲಿದೆ ಎಂಬುದು ನನ್ನ ಅಭಿಪ್ರಾಯ. ಇಂತಹದ್ದೊಂದು ಪುಸ್ತಕ ವೀರಲೋಕದಿಂದ ಪ್ರಕಟಗೊಳ್ಳಲು ಮೂಲ ಕಾರಣೀಕರ್ತರಾದ ನನ್ನ ಅನುಗಾಲದ ಹಿತೈಷಿಗಳೂ ಮತ್ತು ಕನ್ನಡದ ಮತ್ತೊಬ್ಬ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಬಿ.ಎಸ್. ಲಿಂಗದೇವರು ಅವರಿಗೆ ನನ್ನ ತುಂಬು ಪ್ರೀತಿ. ಗೋಪಾಲಕೃಷ್ಣ ಪೈ ಅವರು ಈ ಕೃತಿಯ ಮತ್ತೊಬ್ಬ ಲೇಖಕರು. ಅವರ ಪ್ರಶ್ನೆಗಳು ಕನ್ನಡ ಸಿನಿಪ್ರೇಕ್ಷಕರ ಪ್ರಶ್ನೆಗಳೂ ಹೌದು. ಈ ಪುಸ್ತಕದ ಹೆಚ್ಚುಗಾರಿಕೆಯಲ್ಲಿ ಅವರ ಪ್ರಶ್ನೆಗಳ ಪಾಲೂ ಇದೆ. ಅವರಿಗೆ ಮನದಾಳದ ಧನ್ಯವಾದಗಳು.

ಓದುವ ಸುಖ ನಿಮ್ಮದಾಗಲಿ.
ವೀರಕಪುತ್ರ ಶ್ರೀನಿವಾಸ

ವೀರಲೋಕ, ಪ್ರಕಾಶಕ

 

MORE FEATURES

ಓದು-ಬರಹ ನನಗೆಂದಿಗೂ ವ್ಯಸನವೇ: ಮೇಘನಾ ಕಾನೇಟ್ಕರ್ 

27-04-2024 ಬೆಂಗಳೂರು

‘ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿ...

ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’

27-04-2024 ಬೆಂಗಳೂರು

'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ...

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...