ಅಥ್ಲೆಟಿಕ್ ನಲ್ಲಿ ಸಾಧನೆ ಗೈಯುತ್ತಿರುವ ಹೆಮ್ಮೆಯ ಕನ್ನಡತಿ 'ಮಹಾಲಕ್ಷ್ಮಿ'

Date: 08-10-2023

Location: ಬೆಂಗಳೂರು


'ಹೆಣ್ಣಾಗಿದ್ದುಕೊಂಡು ಚಿಕ್ಕಂದಿನಿಂದ ಇಲ್ಲಿಯವರೆಗೂ ತಮ್ಮ ಸತತ ಪರಿಶ್ರಮದಿಂದ "ಅಥ್ಲೆಟಿಕ್ ನಲ್ಲಿ ಸಾಧನೆ ಗೈಯುತ್ತಿರುವ ಹೆಮ್ಮೆಯ ಕನ್ನಡತಿ ಮಹಾಲಕ್ಷ್ಮಿ ಅವರೊಂದಿಗೆ ಸಂದರ್ಶನ ನಡೆಸಿರುವ ಅಂಕಣಗಾರ್ತಿ ಜ್ಯೋತಿ ಎಸ್ ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ ಮಹಾಲಕ್ಷ್ಮಿಯವರ ಬದುಕು ಹಾಗೂ ಸಾಧನೆಗಳ ಕುರಿತು ವಿವರಿಸಿದ್ದಾರೆ.

ಸಾಧನೆಗೆ ಹೆಣ್ಣು ಗಂಡೆಂಬ ಭೇದವೇನಿಲ್ಲ. ಸರಿಯಾಗಿ ಯೋಜನೆ ಹಾಕಿಕೊಂಡು ಸತತವಾಗಿ ಪ್ರಯತ್ನಪಟ್ಟರೆ ಅಂದುಕೊಂಡ ಗುರಿ ಸಾಧಿಸುವುದು ಯಾರಿಗಾದರೂ ಕಷ್ಟವೇನಲ್ಲ. ಹೆಣ್ಣಾಗಿದ್ದುಕೊಂಡು ಚಿಕ್ಕಂದಿನಿಂದ ಇಲ್ಲಿಯವರೆಗೂ ತಮ್ಮ ಸತತ ಪರಿಶ್ರಮದಿಂದ "ಅಥ್ಲೆಟಿಕ್ ನಲ್ಲಿ ಸಾಧನೆ ಗೈಯುತ್ತಿರುವ ಹೆಮ್ಮೆಯ ಕನ್ನಡತಿ ಮಹಾಲಕ್ಷ್ಮಿ". ಮಹಿಳಾ ಕ್ರೀಡಾಪಟುವಾಗಿರುವ ಮಹಾಲಕ್ಷ್ಮಿಯವರು ಅಥ್ಲೆಟಿಕ್ 'ಮಿಡಲ್ ಹ್ಯಾಂಡ್ ಲಾಂಗ್ ಡಿಸ್ಟೆನ್ಸ್ ರನ್ನರ್' ಆಗಿ ಜಿಲ್ಲೆ, ತಾಲ್ಲೂಕು, ರಾಜ್ಯ, ರಾಷ್ಟಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದ ಸಾಧಕಿ. ಮಹಾಲಕ್ಷ್ಮಿಯವರು 400ಮೀ, 800ಮೀ, 1500ಮೀ, 5ಕಿ.ಮೀ., 10ಕಿ.ಮೀ. ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. '400ಮೀ.ನ್ನು 59 ಸೆಕೆಂಡುಗಳಲ್ಲಿ' ಹಾಗೂ '800ಮೀ ಅನ್ನು 2 ನಿಮಿಷ 5 ಸೆಕೆಂಡುಗಳಲ್ಲಿ' ಓಡಿ ದಾಖಲೆಯನ್ನು ಮಾಡಿರುವ ಮಹಾಲಕ್ಷ್ಮಿಯವರ ಮಾತುಗಳನ್ನು ಓದೋಣ ಬನ್ನಿ. ತಂದೆ ರಾಮಚಂದ್ರಪ್ಪ ತಾಯಿ ಜಯಲಕ್ಷ್ಮಿ ದಂಪತಿಗಳ ಐದು ಮಕ್ಕಳಲ್ಲಿ ಮೂರನೇ ಮಗುವಾಗಿ ಹುಟ್ಟಿದರು.

ಮೂಲತಃ ಅಮೃತಹಳ್ಳಿ ನನ್ನ ಹುಟ್ಟೂರು. ಅಪ್ಪ ನನಗೆ ಒಂದೂವರೆ ವರ್ಷ ಇರುವಾಗಲೇ ಈಜು ಕಲಿಸಲು ದೊಡ್ಡ ಬಾವಿಗೆ ಕರೆದುಕೊಂಡು ಹೋಗುತ್ತಿದ್ದರು. ಎಲ್ಲರೂ ಹೆಣ್ಣು ಮಗು ಯಾಕೆ ಕರೆದುಕೊಂಡು ಹೋಗುತ್ತೀಯ ಎನ್ನುತ್ತಿದ್ದರೂ ಅಪ್ಪನಿಗೆ ಅವರ ಮಾತುಗಳು ಎದೆಗಿಳಿಯುತ್ತಿರಲಿಲ್ಲ. ಮೂರನೇ ತರಗತಿಯ ಹೊತ್ತಿಗೆ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಓದಿನಲ್ಲೂ ಮುಂದಿದ್ದೆ. ಆರನೇ ತರಗತಿಗೆ ಬರುವ ಹೊತ್ತಿಗೆ ದೈಹಿಕ ಶಿಕ್ಷಕರ ಸಹಾಯದಿಂದ ರಾಜ್ಯ ಸರ್ಕಾರ ನಡೆಸುವ ಬೆಂಗಳೂರಿನ ವಿದ್ಯಾನಗರ್ ಸ್ಪೋರ್ಟ್ಸ್ ಶಾಲೆಯಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮುಂದುವರೆಯಿತು. ಎರಡು ವರ್ಷದ ಫುಟ್ ಬಾಲ್, ವಾಲಿ ಬಾಲ್, ಥ್ರೋ ಬಾಲ್, ರನ್ನಿಂಗ್, ಎಲ್ಲಾ ಕ್ರೀಡಾ ತರಬೇತಿಯ ನಂತರ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡದ್ದು ಮಿಡಲ್ ಹ್ಯಾಂಡ್ ಲಾಂಗ್ ಡಿಸ್ಟೆನ್ಸ್ ರನ್ನರ್ ಆಗಿ. ವಿದ್ಯಾಭ್ಯಾಸದ ಜೊತೆ ಜೊತೆಗೆ ಅಥ್ಲೆಟಿಕ್ ನ ಪ್ರಯಾಣವೂ ಮುಂದುವರೆಯಿತು. ವ್ಯಕ್ತಿಯ ದೈಹಿಕ ಬೆಳವಣಿಗೆಗೆ, ಮಾನಸಿಕ ಸಮತೋಲನೆಗೆ ವ್ಯಾಯಾಮ ಹಾಗೂ ಉತ್ತಮ ಪೌಷ್ಟಿಕ ಆಹಾರ ಅತೀ ಮುಖ್ಯ. ನಮ್ಮ ತಂದೆ ಹೆಣ್ಣು ಗಂಡು ಎಂಬ ಲಿಂಗ ತಾರತಮ್ಯವಿಲ್ಲದೇ ನಮ್ಮನ್ನು ಬೆಳೆಸಿದರು. ಇಬ್ಬರು ಗಂಡುಮಕ್ಕಳು ಹಾಗೂ ಮೂರು ಹೆಣ್ಣುಮಕ್ಕಳಿಗೂ ಬಾಲ್ಯದಿಂದಲೇ ದೈಹಿಕ ಕ್ರೀಡೆಗಳಾದ ಕಬ್ಬಡಿ, ಕ್ರಿಕೆಟ್, ಖೋ ಖೋ, ಈಜು, ಉತ್ತಮ ಆಹಾರದ ಅಭ್ಯಾಸವನ್ನು ಮನೆಯಿಂದಲೇ ಪ್ರಾರಂಭಿಸಿ ಅದಕ್ಕೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿದ್ದರು. ತಾವು ವಿದ್ಯೆ ಕಲಿಯೋದು ಕಷ್ಟವಾಗಿತ್ತು, ತಮಗೆ ಅವಕಾಶಗಳಿರಲಿಲ್ಲ ಎಂದು ಅಪ್ಪ ಕೈ ಕಟ್ಟಿ ಕೂರಲಿಲ್ಲ. ಬದಲಿಗೆ ನಮಗೆ ಎಲ್ಲಾ ರೀತಿಯ ಮನೋಸ್ಥೈರ್ಯವನ್ನು ತುಂಬಿ ಆತ್ಮವಿಶ್ವಾಸವನ್ನು ಬಾಲ್ಯದಿಂದಲೇ ಮೂಡಿಸಿದವರು. ನಾವು ಸಣ್ಣವರಿದ್ದಾಗ ಅಪ್ಪ ಅಂಗ ಸಾಧನೆ ಮಾಡಲು ಗರಡಿ ಮನೆಗೆ ಹೋಗುತ್ತಿದ್ದರು. ಅಂದಿನಿಂದ ಇಂದಿನವರೆಗೂ ಗರಡಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಇಂದಿಗೂ ಬತ್ತದ ಅವರ ಉತ್ಸಾಹ, ಜೀವನ ಪ್ರೀತಿ, ವ್ಯಾಯಾಮ ಅವರ ಪ್ರತಿನಿತ್ಯದ ದಿನಚರಿಗಳಲ್ಲೊಂದು. ನಮ್ಮೆಲ್ಲರ ಈ ಕೆಲಸಗಳಿಗೆ ಶಕ್ತಿ ಅಪ್ಪನೇ ಎನ್ನುತ್ತಾರೆ ಮಹಾಲಕ್ಷ್ಮಿ.

ಮಹಾಲಕ್ಷ್ಮಿಯವರ ವಿದ್ಯಾಭ್ಯಾಸ..?

⏺️ 2013ರಲ್ಲಿ M.B.A. ಪದವಿ, 2020ರಲ್ಲಿ B. P. Ed. ಪದವಿ.

ನಿಮ್ಮ ಸಾಧನೆಗಳು ಯಾವುವು?

⏺️ ಬಿ. ಕಾಂ. ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಕೆಯಿಂದಾಗಿ ಬೆಂಗಳೂರು ಯೂನಿವರ್ಸಿಟಿಯಿಂದ 2009ರಲ್ಲಿ ಪುಟ್ಟಸ್ವಾಮಿ ಅವಾರ್ಡ್.

⏺️ ರೇವ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಓವರ್ ಆಲ್ ಎಕ್ಸಲೆಂಟ್ ಸ್ಪೋರ್ಟ್ಸ್ ಪರ್ಸನ್ ಅವಾರ್ಡ್ 2012.

⏺️ 14ನೇ ಸೌತ್ ಜೋನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ - 2002, ತಿರುವನಂತಪುರದಲ್ಲಿ 800ಮೀ ಓಟದ ಸ್ಪರ್ಧೆಯಲ್ಲಿ 2ನೇ ಸ್ಥಾನ.

⏺️ 14ನೇ ITC ಇಂಟರ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್, ಪಶ್ಚಿಮ ಬಂಗಾಳ 800 ಮೀ ಓಟದ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ.

ಇನ್ನೂ ಹಲವಾರು ಕಡೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ.

ನಿಮ್ಮ ದೊಡ್ಡ ಶಕ್ತಿ ಯಾವುದು..?

⏺️ ಬಾಲ್ಯದಿಂದಲೂ ಉತ್ತಮ ಆರೋಗ್ಯಕ್ಕೆ, ಕ್ರೀಡೆಗೆ, ದೈಹಿಕ ಆರೋಗ್ಯಕ್ಕೆ, ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ತಕ್ಕ ವಾತಾವರಣವನ್ನು ಸೃಷ್ಟಿಸಿ ಪ್ರೋತ್ಸಾಹ ಕೊಡುತ್ತ ಬಂದಿರುವ ಅಪ್ಪ, ಅಮ್ಮ, ಗೆದ್ದಾಗಲೂ ಸೋತಾಗಲೂ ಬೆನ್ನುತಟ್ಟಿ ಪ್ರೋತ್ಸಾಹಿಸುವ ಅಣ್ಣಂದಿರಾದ ಹರೀಶ್ ಕುಮಾರ್, ಪುನೀತ್ ಕುಮಾರ್ ಹಾಗೂ ತಂಗಿಯರು. ಈಗ ಮದುವೆಯಾಗಿದೆ ಗಂಡನದ್ದು ಕೂಡ ಸಂಪೂರ್ಣ ಬೆಂಬಲವಿದೆ. ನನ್ನ ಶಕ್ತಿ, ನನ್ನ ಸ್ಫೂರ್ತಿ, ನನ್ನ ಕುಟುಂಬವೇ.

ನಿಮ್ಮ ಅಭ್ಯಾಸ ಕ್ರಮ ಹೇಗಿರುತ್ತದೆ ?

⏺️ ವರ್ಷದ 365 ದಿನಗಳು ಪ್ರತೀದಿನ ಜ್ವರ, ತಲೆನೋವು, ಭಾನುವಾರ, ರಜಾದಿನ, ಹಬ್ಬ ಅಂತ ನೆಪ ಹೇಳದೆಯೇ ಬೆಳಗ್ಗೆ 3:30ರಿಂದ 6:00 ಗಂಟೆಯ ತನಕ ಅಭ್ಯಾಸ ಮಾಡುತ್ತೇನೆ.

ನಿಮಗೆ ಸ್ಫೂರ್ತಿ ಯಾರು?

⏺️ ಅಥ್ಲೆಟಿಕ್ ಹಾಗೂ ಏಕಲವ್ಯ ಪ್ರಶಸ್ತಿ ಲಭಿಸಿರುವ ಚಿತ್ರದುರ್ಗದವರಾದ 'ಹೆಚ್. ಎಂ. ಜ್ಯೋತಿ'ಯವರು.

ಬೆಂಗಳೂರಿನಲ್ಲಿ ಅಥ್ಲೆಟಿಕ್ ತರಬೇತಿ ಎಲ್ಲಿ ಪಡೆಯುತ್ತಿದ್ದೀರಿ?

⏺️ ಬೆಂಗಳೂರಿನಲ್ಲಿ ಪದವಿ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕಂಠೀರವ ಸ್ಟೇಡಿಯಂನಲ್ಲಿ 'ಅಯ್ಯಪ್ಪ' ಎಂಬ ಕೋಚ್ ರವರಿಂದ ತರಬೇತಿ ಪಡೆದಿದ್ದೇನೆ.

ನಿಮ್ಮ ಇತರೆ ಹವ್ಯಾಸಗಳು..

⏺️ ಯೋಗ, ಈಜು, ಪುಸ್ತಕ ಓದುವುದು, ಸಂಗೀತ ಕೇಳುವುದು, ಚಿತ್ರಕಲೆ, ಬಾಸ್ಕೆಟ್ ಬಾಲ್, ಫುಟ್ ಬಾಲ್, ವಾಲಿ ಬಾಲ್ ಆಡುವುದು.

ಮುಂದಿನ ಗುರಿ ಏನು?

⏺️ ನನ್ನನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬೇರೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ಕೊಟ್ಟು, ಪ್ರೋತ್ಸಾಹಿಸಿ ಅವರ ಗುರಿ ಮುಟ್ಟಿಸುವಲ್ಲಿ ಸಹಕಾರಿಯಾಗಬೇಕು ಎನ್ನುವ ಕನಸಿದೆ.

ನಮ್ಮ ಯುವ ಜನತೆಗೆ ಏನಾದರೂ ಹೇಳ ಬಯಸುತ್ತೀರಾ..??

⏺️ ಸಾಧನೆಗೆ ವಯಸ್ಸಿನ ಮಿತಿ ಇಲ್ಲ. Don't give up, hardwork ಮಾಡಿ ಸತತ ಅಭ್ಯಾಸ ಮಾಡಿ. ಯಾವುದೇ ಕ್ಷೇತ್ರವಾದರೂ ನಿಮಗಾಗಿ ಕೆಲಸ ಮಾಡಿ ಆಗ ಗುರಿ ಮುಟ್ಟುವುದು ಸುಲಭ.

ಅಥ್ಲೆಟಿಕ್ ನಲ್ಲಿನ ಸಾಧನೆಯೊಂದಿಗೆ ಇವರು ನೂರಾರು ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಿ ಮಹಾಲಕ್ಷ್ಮಿಯವರು ದೇಶ ವಿದೇಶಗಳಲ್ಲೂ ಪ್ರಖ್ಯಾತಿ ಪಡೆಯುವಂತಾಗಲಿ. ನಮ್ಮ ದೇಶಕ್ಕೆ ಮತ್ತಷ್ಟು ಹೆಸರು ಕೀರ್ತಿ ತಂದುಕೊಡುವ ಮಾದರಿ ಹೆಣ್ಣುಮಗಳಾಗಲಿ ಎಂಬ ಶುಭ ಹಾರೈಕೆ ನಮ್ಮದು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

 

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...