ಬರಹದ ಭಾವವು ಮನುಷ್ಯ ಪ್ರೀತಿ ಹೆಚ್ಚಿಸಬೇಕು: ಹೇಮಾ ಪಟ್ಟಣಶೆಟ್ಟಿ

Date: 16-10-2021

Location: ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪ, ಕೊಪ್ಪಳ


ಬರಹದ ಯಾವುದೇ ಭಾವವು ಮನುಷ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುವಂತಿರಬೇಕು ಎಂದು ಲೇಖಕಿ ಡಾ. ಹೇಢಮಾ ಪಟ್ಟಣಶೆಟ್ಟಿ ಅವರು ಬರಹಗಾರರಿಗೆ ಸಲಹೆ ನೀಡಿದರು.

ಕೊಪ್ಪಳದ ಗುರು ಪ್ರಕಾಶನ, ಕೋಟೆ, ಕನ್ನಡ ಚಂಪೂ ಬಳಗ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ರಾಘವೇಂದ್ರ ಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಅವರು ಶ್ರೀಮತಿ ಅನಸೂಯ ಜಹಗೀರದಾರ ಅವರ ‘ಆತ್ಮಾನುಸಂಧಾನ (ಗಜಲ್ ಸಂಕಲನ) ಹಾಗೂ ನಿಹಾರಿಕಾ (ಹನಿಗವಿತೆಗಳ ಸಂಕಲನ) ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ರಚನೆಯಾದ ವಿವಿಧ ಸಂವೇದನೆಗಳಿಗೆ ಇಂದು ಸಾಹಿತ್ಯಕ ವಲಯದಲ್ಲಿ ಸೂಕ್ತ ವಿಮರ್ಶೆಗಳು ಬರುತ್ತಿಲ್ಲ. ಬಂದರೂ ಅವು ಮನುಷ್ಯ ಪ್ರೀತಿಯನ್ನು ಹೆಚ್ಚಿಸುತ್ತಿಲ್ಲ. ಬರಹದ ಭಾವನೆಗಳಲ್ಲಿ ಪ್ರೀತಿ ಇರದಿದ್ದರೆ ಅವು ಯಂತ್ರಗಳಿಗೆ ಸಮಾನ. ಆಧುನಿಕತೆಯ ಭರಾಟೆಯಲ್ಲಿ ಇಂತಹ ಅನಾಹುತಗಳನ್ನೇ ನಾವು ಬರಹಗಳಲ್ಲಿ ಕಾಣುತ್ತಿದ್ದೇವೆ. ಇದು ಅಪಾಯಕಾರಿ ಎಂದು ವ್ಯಾಖ್ಯಾನಿಸಿದರು.

ಸಾಹಿತಿ ಸಮಾಜದ ದೀಪ: ಸಾಹಿತಿ-ಕವಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಅವರು ಕತ್ತಲಲ್ಲಿರುವ ದೀಪದಂತೆ ಬೆಳಗಬೇಕು. ಆದರೆ, ಮನುಷ್ಯರ ಮಧ್ಯೆ ಇದ್ದುಕೊಂಡೇ ದ್ವೀಪಗಳಾಗಬಾರದು. ಮನಸ್ಸುಗಳನ್ನು ಬೆಸೆದು ಜೀವನ ಪ್ರೀತಿ ಹೆಚ್ಚಿಸುವಂತೆ ಸಾಹಿತಿಗಳು ಕೆಲಸ ಮಾಡಬೇಕು ಎಂದು ಆಶಿಸಿದರು.

ಉರ್ದು, ಮುಸ್ಲಿರ ಭಾಷೆಯಲ್ಲ: 'ಆತ್ಮಾನುಸಂಧಾನ' ಗಜಲ್ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಸಾಹಿತಿ ಅಲ್ಲಾಗಿರಿರಾಜ ಗಜಲ್ ಮಾತನಾಡಿ, ಉರ್ದು ಭಾಷೆಯು ಮುಸ್ಲಿಂರದ್ದಲ್ಲ. ಅದು ಕಾವ್ಯಾತ್ಮಕವಾದ ಭಾಷೆ. ಯಾವ ಜನಾಂಗಕ್ಕೂ ಸೇರಿದ್ದಲ್ಲ. ಭಾಷೆಗಳಿಗೆ ಧರ್ಮವಿಲ್ಲ. ಭಾಷೆಗೆ ಭಾವನೆಯ ಅಭಿವ್ಯಕ್ತಿ ಇರುತ್ತೆ. ಹೈದರಾಬಾದ್ ಕರ್ನಾಟಕದ ದಖನಿ ಭಾಷೆಯು ಗಜಲ್ ಪರಂಪರೆಗೆ ನೀರೆರೆಯಿತು. ಆದ್ದರಿಂದ, ಇಲ್ಲಿನ ಗಜಲ್ ದೇಶದ ಗಜಲ್ ಸಾಹಿತ್ಯದ ಜೊತೆ ಗುರುತಿಸಲ್ಪಡುತ್ತಿದೆ ಎಂದರು.

'ಆತ್ಮಾನುಸಂಧಾನ' ಕೃತಿ ಬಗ್ಗೆ ರಾಯಚೂರಿನ ಸಾಹಿತಿ ಡಾ.ದಸ್ತಗೀರಸಾಬ ದಿನ್ನಿ ಮಾತನಾಡಿ ‘ಮಧುರತೆಯ ಪ್ರತೀಕ ಕನ್ನಡ ಗಜಲ್ ಪರಂಪರೆಗೆ ಶಾಂತರಸರು ಅಡಿಪಾಯ ಹಾಕಿದರು. ಅವರ ಮಾದರಿಯಲ್ಲಿ ಇಂದು ಜಂಬಣ್ಣ ಅಮರಚಿಂತರು, ಮುಕ್ತಾಯಕ್ಕ , ಚಿದಾನಂದ ಸಾಲಿ, ಅರುಣಾ ನರೇಂದ್ರ , ಅನಸೂಯ ಜಹಗೀರದಾರ ಗಜಲ್ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ' ಎಂದರು.

ಕವಿತೆಯಲ್ಲಿ ಅಬ್ಬರ ಮಾತ್ರ; ಸತ್ವವಿಲ್ಲ: ಅನಸೂಯ ಜಹಗೀರದಾರ ಅವರ ಮತ್ತೊಂದು ಹನಿಗವನ ಕೃತಿ 'ನೀಹಾರಿಕೆ'ಯನ್ನು ಶ್ರೀಮತಿ' ಶಾಂತಾದೇವಿ ಹಿರೇಮಠರು ಲೋಕಾರ್ಪಣೆಗೊಳಿಸಿದರು. ಈ ಕೃತಿಯ ಕುರಿತು ಮಾತನಾಡಿದ ಸಾಹಿತಿ ಪವನಕುಮಾರ ಗುಂಡೂರು ' ಇತ್ತೀಚಿನ ಕನ್ನಡದ ಸಾಹಿತ್ಯ ರಚನೆಯಲ್ಲಿ ಅಬ್ಬರವಿದೆ ಹೊರತು ಸತ್ವ ಕಡಿಮೆಯಾಗುತ್ತಿದೆ. ಸಾಹಿತಿಗಳು ಸಂವಾದ ರಹಿತ ದಿನಗಳತ್ತ ಹೊರಳುತ್ತಿದ್ದಾರೆ' ಎಂದು ವಿಷಾದಿಸಿದರು.

ಸಾಹಿತಿ ಡಿ.ಎಂ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಅನಸೂಯ ಜಹಗೀರದಾರ ಉಪಸ್ಥಿತರಿದ್ದರು. ಅಕ್ಷತಾ ಬಣ್ಣದಬಾವಿ ಗಜಲ್ ಗಾಯನ ನಡೆಸಿಕೊಟ್ಟರು. ಕು.ಅಮೃತ ವರ್ಷಿಣಿ ಪ್ರಾರ್ಥಿಸಿದರು. ಹನಮಂತಪ್ಪ ಕುರಿ ನಿರೂಪಿಸಿದರು. ಪ್ರಕಾಶಕ ಕೃಷ್ಣ ಶಾಸ್ತ್ರಿ ವಂದಿಸಿದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...