ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು

Date: 29-02-2024

Location: ಬೆಂಗಳೂರು


"ಸಮಾಜದ ಒಂದು ವರ‍್ಗ ಕನ್ನಡ ಮತ್ತು ಇಂಗ್ಲೀಶುಗಳ ನಡುವಿನ ಸಂಬಂದದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಮತ್ತೊಂದು ಗುಂಪು ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಸಂಬಂದದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಎರಡೂ ಗುಂಪುಗಳ ಆಲೊಚನಾ ತರಂಗಗಳು ವಿಬಿನ್ನ ನಡಿಗೆಯವು. ಇವತ್ತು ಬಾಶಾ ಸಂಬಂದಗಳ ಬಗೆಗಿನ ಈ ಸಾಮಾಜಿಕ ಆಲೋಚನೆಗಳನ್ನು ಕುರಿತು ತುಸು ಮಾತಾಡೋಣ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದುಕುರಿತು ಬರೆದಿರುವ ಲೇಖನ.

ಇವತ್ತಿನ ಕರ‍್ನಾಟಕದಲ್ಲಿ ಬಾಶೆಗಳ ನಡುವಿನ ಸಂಬಂದಗಳ ಬಗೆಗೆ ಸಾಕಶ್ಟು ಮಾತುಕತೆ ನಡೆದಿದೆ. ಸಾಮಾಜಿಕ ಮಾದ್ಯಮಗಳಲ್ಲಿ ನಿರಂತರವಾಗಿ ಈ ಪ್ರಗ್ನೆ ಕಾಣಿಸುತ್ತಿರುತ್ತದೆ. ಸಮಾಜದ ಒಂದು ವರ‍್ಗ ಕನ್ನಡ ಮತ್ತು ಇಂಗ್ಲೀಶುಗಳ ನಡುವಿನ ಸಂಬಂದದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಮತ್ತೊಂದು ಗುಂಪು ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಸಂಬಂದದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಎರಡೂ ಗುಂಪುಗಳ ಆಲೊಚನಾ ತರಂಗಗಳು ವಿಬಿನ್ನ ನಡಿಗೆಯವು. ಇವತ್ತು ಬಾಶಾ ಸಂಬಂದಗಳ ಬಗೆಗಿನ ಈ ಸಾಮಾಜಿಕ ಆಲೋಚನೆಗಳನ್ನು ಕುರಿತು ತುಸು ಮಾತಾಡೋಣ.

ಇಂಗ್ಲೀಶಿನಿಂದ ಬಂದ ಶಬ್ದಗಳು ಇಲ್ಲದೆ ಕನ್ನಡ ಮಾತನಾಡಲು ಸಾದ್ಯವಿಲ್ಲದ ಸ್ತಿತಿಯಲ್ಲಿ ನಾವಿದ್ದೇವೆ. ಅದಕ್ಕಾಗಿ ಇಂಗ್ಲೀಶಿನಿಂದ ಬಂದ ಶಬ್ದಗಳು ಇಲ್ಲದೆ ಮಾತನಾಡುವ ವಿಚಾರ ಮಾತ್ರವಲ್ಲದೆ ಅಲ್ಲಲ್ಲಿ ಈ ಬಗೆಯ ಸ್ಪರ‍್ದೆಗಳು ಕೂಡ ನಡೆಯುತ್ತಿರುತ್ತವೆ. ಇಲ್ಲಿಯ ಒಂದು ಹಾಸ್ಯವೇನೆಂದರೆ, ಇಂಗ್ಲೀಶಿನಿಂದ ಬಂದ ಶಬ್ದಗಳು ಇಲ್ಲದೆ ಮಾತನಾಡುವುದಕ್ಕೆ 'ಶುದ್ದ ಕನ್ನಡ' ಇಲ್ಲವೆ 'ಅಚ್ಚ ಕನ್ನಡ'ದಲ್ಲಿ ಮಾತನಾಡುವುದು ಎಂದು ಕರೆಯುತ್ತಾರೆ. ಆದರೆ, ಹಾಗೆ ಮಾತನಾಡುವಾಗ ಸಂಸ್ಕ್ರುತದಿಂದ ಬಂದ ಪದಗಳು ಇಡಿಯಾಗಿ ತುಂಬಿಕೊಂಡಿರುತ್ತವೆ. ಅಂದರೆ, ಈ ವರ‍್ಗಕ್ಕೆ ‘ಕನ್ನಡ ಬಾಶೆ’ ಎಂದರೆ ಏನು ಎಂಬುದರ ಬಗೆಗೆ ಬಹಳಶ್ಟು ಗೊಂದಲ ಇದೆ ಎಂದಾಗುತ್ತದೆ. ಮೂಲಬೂತವಾಗಿ ಈ 'ಶುದ್ದ ಕನ್ನಡ' ಎಂಬುದೊಂದು 'ಅಶುದ್ದ' ಪರಿಕಲ್ಪನೆ. 'ಅಚ್ಚ ಕನ್ನಡ' ಎನ್ನುವುದು ಇಂದು ಒಂದು ಬ್ರಮಾತ್ಮಕ ವಾಸ್ತವ. ಇವೆರಡನ್ನು ಬೇರೊಂದು ಕಡೆ ಮಾತನಾಡಬಹುದು, ಇರಲಿ. ಇಂಗ್ಲೀಶಿನಿಂದ ಬಂದ ಪದಗಳಿಲ್ಲದೆ ಮಾತನಾಡುವುದನ್ನು ಕನ್ನಡ ಎಂದು ಕರೆಯುವುದಕ್ಕೆ ಹೇಗೆ ಸಾದ್ಯ. ಸಂಸ್ಕ್ರುತದಿಂದ ಬಂದ ಪದಗಳು ಕನ್ನಡ ಎಂದು ಆಗುವುದಾದರೆ ಇಂಗ್ಲೀಶಿನಿಂದ ಬಂದ ಪದಗಳೂ ಕನ್ನಡವೆ ಆಗಬೇಕಲ್ಲವೆ? ಇಲ್ಲವೆ, ಇಂಗ್ಲೀಶಿನಿಂದ ಬಂದ ಪದಗಳು ಕನ್ನಡ ಅಲ್ಲ ಎನ್ನುವುದಾದರೆ, ಸಂಸ್ಕ್ರುತದಿಂದ ಬಂದ ಪದಗಳೂ ಕನ್ನಡ ಆಗಬಾರದಲ್ಲವೆ? ಈ ಯೋಚನೆಯೆ ಇಲ್ಲದೆ ಸಮಾಜದ ಒಂದು ವರ‍್ಗ 'ಅಚ್ಚ ಕನ್ನಡ'ವನ್ನು ಮಾತನಾಡುತ್ತದೆ. ಇದೆ ವರ‍್ಗಕ್ಕೆ ಸೇರಬಹುದಾದ ಇನ್ನೂ ಕೆಲವು ಮಂದಿ ಕನ್ನಡದಲ್ಲಿ ಇಂಗ್ಲೀಶನ್ನು, ಅಂದರೆ ಇಂಗ್ಲೀಶಿನ ಪದಗಳನ್ನು ಸೇರಿಸಬಾರದು ಎಂದು ವಕಾಲತ್ತು ಹೂಡುವವರು ಇದ್ದಾರೆ. ಇದಕ್ಕೆ ವಿದವಿದವಾದ ಕಾರಣಗಳನ್ನು ಹೇಳುತ್ತಾರೆ. ಅತ್ಯಂತ ಅರ‍್ತವಿಲ್ಲದ ಒಂದು ಅತಿ ಸಾಮಾನ್ಯವಾಗಿ ಕಾಣುವ ವಾದವೆಂದರೆ ಬಾಶೆಯ ಸವುಂದರ‍್ಯ ಕೆಟ್ಟುಹೋಗುತ್ತದೆ ಎನ್ನುವುದು. ಇಲ್ಲಿ ಇನ್ನೊಂದು ಪದವನ್ನು ನಾವು ಎದುರುಗೊಳ್ಳಬೇಕಾಯಿತು. ಈ ಬಾಶೆಯ ಸವುಂದರ‍್ಯ ಎಂದರೇನು? ಓಹ್, ಸವುಂದರ‍್ಯ ಎನ್ನುವುದಕ್ಕೆನೆ ವ್ಯಾಕ್ಯಾನವಿಲ್ಲದೆ ಸಾಮಾಜಿಕ ಬದುಕು ಸಾಗುತ್ತಿರುವ ಈ ಕಾಲದಲ್ಲಿ ಬಾಶೆಯ ಸವುಂದರ‍್ಯದ ಬಗೆಗೆ ತಿಳಿದುಕೊಳ್ಳುವುದಾದರೂ ಹೇಗೆ ಸಾದ್ಯ ಬಿಡಿ. ಇರಲಿ. ಈ ಎರಡೂ ವರ‍್ಗಗಳೂ ಒಂದೆ ದಾರಿಯಲ್ಲಿ ಇವೆಯಾದರೂ ತುಸು ಬಿನ್ನತೆ ಕಾಣಿಸುತ್ತದೆ. ಮೊದಲ ಗುಂಪು ಇಂಗ್ಲೀಶಿನಿಂದ ಬಂದ ಶಬ್ದಗಳನ್ನು ಬಿಟ್ಟು ಮಾತನಾಡುವುದು ಕಶ್ಟ ಎಂದು ತಿಳಿದುಕೊಂಡಿದೆ ಮತ್ತು ಹಾಗೆ ಮಾಡುವುದನ್ನು ಪ್ರಯತ್ನಿಸಬಹುದು ಎಂದು ಹೇಳುತ್ತದೆ. ಆದರೆ, ಎರಡನೆ ಗುಂಪು ಇಂಗ್ಲೀಶಿನಿಂದ ಬಂದ ಪದಗಳ ಬಗೆಗೆ ಹೆಚ್ಚು ಮಡಿ-ಮಯಿಲಿಗೆ ಸ್ವಬಾವವನ್ನು ಇಟ್ಟುಕೊಂಡಿದೆ. ಒಂದು ಬಾಶೆಯ ಪದಗಳನ್ನು ಬಳಸಬಾರದು ಎನ್ನುವುದೂ ಒಂದು ಬಗೆಯ ಅಸ್ಪ್ರುಶ್ಯತೆ.

ಇನ್ನು, ಇನ್ನೊಂದು ಬಾಶಾ ಕೇಂದ್ರಿತವಾದ ಆಲೋಚನೆಗಳನ್ನು ಹೊಂದಿರುವ ಗುಂಪಿನ ಕಡೆ ನಮ್ಮ ಮಾತನ್ನು ತಿರುಗಿಸೋಣ. ಇನ್ನೊಂದು ವರ‍್ಗ ಸಂಸ್ಕ್ರುತದಿಂದ ಬಂದ ಶಬ್ದಗಳನ್ನು ಬಳಸಬಾರದು ಎಂದು ಹೇಳುತ್ತದೆ. ಯಾಕೆ ಸಂಸ್ಕ್ರುತದಿಂದ ಬಂದ ಶಬ್ದಗಳನ್ನು ಬಳಸಬಾರದು ಎನ್ನುವುದಕ್ಕೆ ಈ ಗುಂಪು ತನ್ನದೆ ಆದ ಅತ್ಯಂತ ಸೀಮಿತ ಗಡಿಗೆರೆಯನ್ನು ಕೊರೆದು ನಿಲ್ಲುವ ಆಲೋಚನೆಯ ಕಾರಣಗಳನ್ನು ಹಾಕಿಕೊಂಡಿದೆ. ಸಂಸ್ಕ್ರುತವನ್ನು ಕನ್ನಡದ ಮೇಲೆ ಹೇರಲಾಗಿದೆ ಎಂಬುದು ಇದಕ್ಕೆ ಮೂಲಬೂತವಾದ ಅಂಶ ಎಂದು ಹೇಳುತ್ತಾರೆ ಇಲ್ಲವೆ ಕನ್ನಡದ ಅಸ್ಮಿತೆ ಎಂಬುದು ಇನ್ನೊಂದು ವಾದ. ಎರಡೂ ಪರಸ್ಪರ ಒಂದೆ ಎನಿಸಿದರೂ ತುಸು ಬಿನ್ನತೆ ಕಾಣಿಸುತ್ತದೆ.

ಹೀಗೆ ಸಂಸ್ಕ್ರುತದ ಪದಗಳನ್ನು ಕನ್ನಡದ ಮೇಲೆ ಹೇರಲಾಗಿದೆ ಎನ್ನುವುದನ್ನು ಯಾವ ಸಂಶೋದನೆಯೂ ಹೇಳಿಲ್ಲ. ಹಾಗೆ ಈ ಅಂಶವನ್ನು ಇಟ್ಟುಕೊಂಡು ಸಂಶೋದನೆ ಮಾಡಿದರೆ ವ್ಯತಿರಿಕ್ತವಾದ ರಿಸಲ್ಟ್ ಬರುವುದರಲ್ಲಿ ಅನುಮಾನವಿಲ್ಲ. ಇರಲಿ. ಇಲ್ಲಿ ಒಂದು ವಿಚಾರವನ್ನು ಎಚ್ಚರಿಸಿಕೊಳ್ಳಬೇಕು. ಮತಪಂತಗಳ ಹಿನ್ನೆಲೆಯಲ್ಲಿ ವಿಶೇಶವಾಗಿ ಲಿಂಗಾಯತದ ಮಾತುಕತೆಯಲ್ಲಿ, ಸಾಮಾಜಿಕತೆಯನ್ನು, ಜಾತಿವ್ಯವಸ್ತೆಯನ್ನು ಮಾತನಾಡುವಲ್ಲಿ, ಹಾಗೆಯೆ ಕೆಲವೊಮ್ಮೆ ಕಾವ್ಯಮೀಮಾಂಸೆಯನ್ನು ಮಾತನಾಡುವಲ್ಲಿ, ವ್ಯಾಕರಣವನ್ನು ಮಾತನಾಡುವಲ್ಲಿ ಇವೆಲ್ಲವುಗಳನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ-ಕರ‍್ನಾಟಕ ಇವುಗಳ ಇತಿಹಾಸವನ್ನು ಮಾತನಾಡುವಲ್ಲಿ ಹೀಗೆ ಹಲವು ಕಡೆ ಸಂಸ್ಕ್ರುತದ ವಿಚಾರಗಳನ್ನು ಕನ್ನಡ ಮಾತನಾಡುವ ಸಮುದಾಯದ ಮೇಲೆ ಹೇರಲಾಗಿದೆ ಎಂಬುದನ್ನು ಹಲವರು ಮಾತನಾಡಿದ್ದಾರೆ. ವಿಚಾರಗಳನ್ನು ಹೇರಿದ ಮೇಲೆ ಬಾಶೆಯನ್ನೂ ಮತ್ತು ಆ ಬಾಶೆಯ ಪದಗಳನ್ನೂ ಹೇರಿದಂತೆಯೆ ಅಲ್ಲವೆ ಎಂಬುದು ಇಲ್ಲಿಯ ವಿಚಾರವಾಗುತ್ತದೆ. ಇದನ್ನು, ಅಂದರೆ ಯಾಕೆ ಸಂಸ್ಕ್ರುತದ ಪದಗಳು ಕನ್ನಡಕ್ಕೆ ಬಂದಿರಬಹುದು, ಬಾಶೆಗಳ ನಡುವಿನ ನಂಟು ಹೇಗಿರುತ್ತದೆ, ಈ ನಂಟು ಹೇಗೆ ಬೆಳೆಯುತ್ತದೆ ಎಂಬುದರ ಬಗೆಗೆ ಒಂದೆರಡು ಬಳಕೆಗಳನ್ನು ತೆಗೆದುಕೊಂಡು ಮುಂದಿನ ಅಂಕಣಗಳಲ್ಲಿ ಮಾತಾಡಬಹುದು

ಇಲ್ಲಿ, ಮೊದಲು ಮಾತಾಡಿದ ಗುಂಪು ಇಂಗ್ಲೀಶಿನ ಬಗೆಗೆ ಮಡಿ-ಮಯಿಲಿಗೆಯನ್ನು ತೋರಿಸುವ ಹಾಗೆ ಈ ಗುಂಪು ಸಂಸ್ಕ್ರುತದ ಬಗೆಗೆ ಅಂತದೆ ಮನೋಬಾವವನ್ನು ತೋರಿಸುತ್ತದೆ. ಮೊದಲ ಗುಂಪು ಅರ‍್ತವಿಹೀನವಾದ ಬಾಶಾ ಸವುಂದರ‍್ಯದ ಬಗೆಗೆ ಮಾತನಾಡಿದರೆ ಈ ಗುಂಪು ಬಾವನಾತ್ಮಕವಾದ, ಸಾಮಾಜಿಕ ಹಿನ್ನೆಲೆಯನ್ನು ಹೊಂದಿರುವ ಬಾಶಾಪ್ರತಿಶ್ಟೆ, ಬಾಶಾ ಸ್ವಾಬಿಮಾನ, ಬಾಶಾ ಅಸ್ಮಿತೆ ಮೊದಲಾದ ಅಂಶಗಳನ್ನು ಮಾತನಾಡುತ್ತದೆ. ಈ ಗುಂಪಿನಲ್ಲಿಯೂ ಎರಡು ಬಗೆ ಕಾಣಬಹುದು. ಒಂದು ಗುಂಪು ಸಂಸ್ಕ್ರುತದ ಪದಗಳನ್ನು ಬಳಸಬೇಡಿ ಎಂದು ಹೇಳಿದರೆ, ಇನ್ನೊಂದು ಗುಂಪು ಸಂಸ್ಕ್ರುತದ ಪದಗಳನ್ನು ಕನ್ನಡದಿಂದ ಕಿತ್ತೊಗೆಯಬೇಕು ಎನ್ನುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮೊದಲ ಗುಂಪು ಇಂಗ್ಲೀಶಿನಿಂದ ಬಂದ ಪದಗಳ ಬಗೆಗೆ ಅಸಹನೆ ತೋರಿಸುವ ಗುಂಪು ಸಂಸ್ಕ್ರುತದಿಂದ ಬಂದ ಪದಗಳ ಬಗೆಗೆ ಬರಿಯ ಸಹನೆಯನ್ನು ಮಾತ್ರವಲ್ಲದೆ ಒಲವನ್ನೂ ಹೊಂದಿದೆ. ಆದರೆ, ಎರಡನೆ ಗುಂಪು, ಸಂಸ್ಕ್ರುತದಿಂದ ಬಂದ ಪದಗಳನ್ನು ತಿರಸ್ಕರಿಸುವ, ವಿರೋದಿಸುವ ಗುಂಪು ಇಂಗ್ಲೀಶಿನಿಂದ ಬಂದ, ಬರುತ್ತಿರುವ ಪದಗಳ ಬಗೆಗೆ ಸಂಸ್ಕ್ರುತದಿಂದ ಬಂದ ಪದಗಳ ವಿಶಯದಲ್ಲಿ ತೋರಿಸುವಶ್ಟು ಕಾಳಜಿಯನ್ನು ತೋರಿಸುವುದಿಲ್ಲ. ಇದು ಕುತೂಹಲ. ಈಗಾಗಲೆ ಹೇಳಿದಂತೆ, ಇಂಗ್ಲೀಶಿನಿಂದ ಬಂದ ಪದಗಳು ಬೇಡ ಎನ್ನುವುದಾದರೆ ಸಂಸ್ಕ್ರುತದಿಂದ ಬಂದ ಪದಗಳೂ ಬೇಡವಾಗಬೇಕು. ಸಂಸ್ಕ್ರುತದಿಂದ ಬಂದ ಪದಗಳು ಬೇಡವಾದರೆ ಇಂಗ್ಲೀಶಿನಿಂದ ಬಂದ ಪದಗಳೂ ಬೇಡವಾಗಬೇಕು. ಹೀಗೆ ಅಸಮಾನ ಚಿಂತನೆಗಳು, ಒರೆಕೊರೆಯ ಆಲೋಚನೆಗಳು ಬೆಳೆಯುವುದಕ್ಕೆ ಕಾಲಮಾನದ ಸಾಮಾಜಿಕತೆ ಮುಕ್ಯವಾದ ಕಾರಣವಾಗಿರುತ್ತದೆ.

ಇನ್ನೊಂದು ವಿಪರೀತ ಆಲೋಚನೆಯ ಗುಂಪಿನ ಬಗೆಗೂ ಇಲ್ಲಿ ಮಾತಾಡಬೇಕು. ಈ ಗುಂಪು ಸಂಸ್ಕ್ರುತದಿಂದ ಬಂದ ಪದಗಳು ಇಲ್ಲದಿದ್ದರೆ ಕನ್ನಡ ಇರುವುದಿಲ್ಲ ಎನ್ನುವಂತೆ ಮಾತನಾಡುತ್ತದೆ. ಕನ್ನಡಕ್ಕೆ ತೂಕ ಬರುತ್ತದೆ, ಸವುಂದರ‍್ಯ ಬರುತ್ತದೆ ಎಂದೆಲ್ಲ ಈ ಗುಂಪು ನಂಬುತ್ತದೆ. ಈ ಮೇಲಿನ ಯಾವುದೆ ಗುಂಪಿಗಿಂತಲೂ ಇದು ಕಳಪೆ ಆಲೋಚನೆಗಳನ್ನು ಬಾಶೆಯ ಬಗೆಗೆ ಇಟ್ಟುಕೊಂಡಿದೆ ಎಂದೆನಿಸುತ್ತದೆ. ಇದರಲ್ಲಿ ಕನ್ನಡದ ಬಗೆಗಿನ ಆಲೋಚನೆಗಿಂತ ಪರಂಪರೆಯ ಬಗೆಗೆ ಮತ್ತು ಇನ್ನೂ ಮುಂದುವರೆದು ಸಂಸ್ಕ್ರುತದ ಬಗೆಗೆ ಹೆಚ್ಚು ಆಲೋಚನೆ ಕಾಣಿಸುತ್ತದೆ. ಇದರಲ್ಲಿಯೂ ಎರಡು ಗುಂಪುಗಳನ್ನು ಕಾಣಬಹುದು. ಒಂದು ಗುಂಪು ಕನ್ನಡದಲ್ಲಿ ಸಂಸ್ಕ್ರುತದಿಂದ ಬಂದ ಪದಗಳು ಇದ್ದರೇನೆ ಚೆಂದ ಎಂದು ಹೇಳಿದರೆ ಇನ್ನೊಂದು ಗುಂಪು ಅತಿಯಾಗಿ ಮುಂದುವರೆದು ಸಂಸ್ಕ್ರುತದಿಂದ ಬಂದ ಪದಗಳು ಇದ್ದರೇನೆ ಕನ್ನಡ ಎಂದು ಹೇಳುತ್ತದೆ. ಇನ್ನೊಂದು ಬಾಶೆಯ ಪದಗಳು ಬರಬೇಕಾದರೆ ತೆಗೆದುಕೊಳ್ಳುವ ಬಾಶೆಗೂ ಒಂದು ಅಸ್ತಿತ್ವ ಇರಲೇಬೇಕು ಎಂಬ ಸಾಮಾನ್ಯ ತತ್ವವನ್ನೂ ಇಲ್ಲಿ ಮರೆತಂತಾಗುತ್ತದೆ.

ಇಲ್ಲಿ, ಇನ್ನೊಂದು ಅತ್ಯಂತ ಮುಕ್ಯವಾದ ವಿಚಾರವನ್ನು ಹೇಳಬೇಕು. ಕನ್ನಡಕ್ಕೆ ಪದಗಳನ್ನು ಕೊಟ್ಟ ಅತಿದೊಡ್ಡ ಬಾಶೆಗಳು ಮೂರು ಗುಂಪುಗಳು. ಅವುಗಳೆಂದರೆ ಒಂದು, ಪ್ರಾಕ್ರುತ-ಸಂಸ್ಕ್ರುತ, ಎರಡು ಅರಾಬಿಕ್-ಪರ‍್ಶಿಯನ್ ಮೂರು, ಇಂಗ್ಲೀಶು. ಈ ಮೂರೂ ಬಾಶೆಗಳು ಕನ್ನಡದ ಬದುಕು ಬಣ್ಣಬಣ್ಣವಾಗುವುದಕ್ಕೆ ಸಮಾನ ಕಾರಣವಾಗಿವೆ. ಆದರೆ, ನಾವು ಮೇಲೆ ಎರಡು ಗುಂಪುಗಳನ್ನು ನೋಡಿದೆವು. ಒಂದು ಇಂಗ್ಲೀಶಿನಿಂದ ಬಂದ ಪದಗಳಿಗೆ ಮುಕ ತಿರುವಿಕೊಂಡರೆ ಇನ್ನೊಂದು ಸಂಸ್ಕ್ರುತದಿಂದ ಬಂದ ಪದಗಳಿಗೆ ಮುಕ ತಿರುವಿಕೊಳ್ಳುವುದು. ಆದರೆ, ಹೀಗೆ ನಿರ‍್ದಿಶ್ಟವಾಗಿ ಅರಾಬಿಕ್-ಪರ‍್ಶಿಯನ್ ಬಾಶೆಗಳಿಂದ ಬಂದ ಪದಗಳನ್ನು ಈ ರೀತಿಯಲ್ಲಿ ನೋಡುವ ಗುಂಪು ಎದ್ದು ಕಾಣುವುದಿಲ್ಲ. ಇದು ಕೂಡ ಸಾಮಾಜಿಕ ರಚನೆಯ ಕಾರಣದಿಂದಲೆ ಆಗಿರಬೇಕು.

ಇಲ್ಲಿ ಮಾತನಾಡಿದ ಗುಂಪುಗಳು ಬಾಶೆಯ ಬಗೆಗೆ ಸಮಾಜಿಕರಲ್ಲಿ ಇರುವ ಕೆಲವು ಆಲೋಚನೆಗಳ ಪ್ರಾತಿನಿದಿಕ ವಿಚಾರಗಳು ಮಾತ್ರ. ಹೀಗೆ ಮಾತ್ರ ಇವೆ, ಇಶ್ಟು ಮಾತ್ರ ಇವೆ ಎಂಬುದಲ್ಲ. ಹಾಗೆ ಮಾತನಾಡುವುದು ತುಂಬಾ ಕಶ್ಟವಾದರೂ ವಿಸ್ತಾರವಾದ ಅದ್ಯಯನವೊಂದು ಒಂದು ಹಂತಕ್ಕೆ ನಿಂತು ಮಾತನಾಡಬಹುದು. ಇಲ್ಲಿನ ಮಾತುಕತೆ ಹೆಚ್ಚು ದನಿ ಕೇಳಿಸುವ, ಪ್ರಬಾವ ಬೀರಬಹುದಾದ ಮಟ್ಟದಲ್ಲಿ ಇರುವ ಕೆಲವು ವಿಚಾರಗಳು ಮಾತ್ರ.

ಓಹೊ, ಇಲ್ಲಿ ಮಾತನಾಡುವುದಕ್ಕೆ ತುಂಬಾ ಮಾತುಗಳಿಗೆ. ಇರಲಿ. ಸದ್ಯ ಮಾತನ್ನು ಮುಂದಿನ ಬರಹಕ್ಕೆ ಮುಂದೆ ಹಾಕಬಹುದು.

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...