ಸೆಲ್ಫಿ ಮತ್ತು ಅವಳು...

Date: 29-04-2024

Location: ಬೆಂಗಳೂರು


"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದಿರುವಂಥದ್ದು. ಜೀವಶಾಸ್ತ್ರ ಯಾವ ಯಾವುದೋ ಹಾರ್ಮೋನುಗಳ ಹೆಸರುಗಳನ್ನು ಹೇಳಿ ವಿಶ್ಲೇಷಿಸಲು ಪ್ರಯತ್ನಿಸುತ್ತದೆಯಾದರೂ ಅವಳ ಅಂತರಂಗವನ್ನ ಸಂಪೂರ್ಣವಾಗಿ ಡಿಕೋಡ್ ಮಾಡುವುದು ಅದಕ್ಕೂ ಸಾಧ್ಯವಾಗಿಲ್ಲ," ಎನ್ನುತ್ತಾರೆ ಆಶಾ ಜಗದೀಶ್. ಅವರು ಬುಕ್ ಬ್ರಹ್ಮದ ತಮ್ಮ ಅಂಕಣ ಸರಣಿ ‘ಚಿತ್ತ ಪೃಥವಿಯಲ್ಲಿ’ ವಿದ್ಯಾರಶ್ಮಿ ಪೆಲತ್ತಡ್ಕ ಅವರ ‘ಕೆರೆ ದಡ’ ಕೃತಿಯ "ಅವಳೇ ತೆಗೆದ ಅವಳ ಚಿತ್ರ" ಕುರಿತು ವಿಶ್ಲೇಷಿಸಿದ್ದಾರೆ.

ಹೆಣ್ಮನಸ್ಸನ್ನು ಮತ್ತು ಅವಳ ಭಾವುಕತೆಯನ್ನು ಒಮ್ಮೊಮ್ಮೆ ಅರ್ಥಮಾಡಿಕೊಳ್ಳುವುದಾಗಲೀ, ಪದಗಳಲ್ಲಿ ವಿವರಿಸುವುದಾಗಲೀ ಬಹಳವೇ ಕಷ್ಟ. ಹೆಣ್ಣು ಸ್ವಭಾವತಃ ಭಾವುಕಳು. ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದಿರುವಂಥದ್ದು. ಜೀವಶಾಸ್ತ್ರ ಯಾವ ಯಾವುದೋ ಹಾರ್ಮೋನುಗಳ ಹೆಸರುಗಳನ್ನು ಹೇಳಿ ವಿಶ್ಲೇಷಿಸಲು ಪ್ರಯತ್ನಿಸುತ್ತದೆಯಾದರೂ ಅವಳ ಅಂತರಂಗವನ್ನ ಸಂಪೂರ್ಣವಾಗಿ ಡಿಕೋಡ್ ಮಾಡುವುದು ಅದಕ್ಕೂ ಸಾಧ್ಯವಾಗಿಲ್ಲ. ಅವಳ ಅಂತರಂಗದಲ್ಲಿ ಅದೆಷ್ಟೋ ಹೆಸರಿಸಲಾಗದ ಭಾವಗಳ ಬಣ್ಣಗಳು. ಅಲ್ಲಿ ನಿತ್ಯವೂ ಹೋಳಿ. ಆ ಅದ್ಭುತವನ್ನು ಅರಿಯದೇ ಹೋದರೂ ಕನಿಷ್ಟ ಪಕ್ಷ ಅದರ ಭಾಗವಾಗಿ, ಸುಮ್ಮನೇ ನೋಡಿ ಖುಷಿಪಟ್ಟರೂ ಆಯಿತು. ಅವಳು ಮತ್ತೇನನ್ನೂ ಕೇಳಲಾರಳು ಅನಿಸುತ್ತದೆ. ಅವಳಿಗೆ ಗೊತ್ತು ಎಲ್ಲರ ಮನಸ್ಸೂ ಒಂದೊಂದು ಸಿಹಿನೀರಿನ ಸರೋವರ ಎಂದು. ಅದರ ಆಳ ಉದ್ದ ಅಗಲ ಲಕ್ಷಣಗಳನ್ನು ಅರಿಯುವುದೆಂದರೆ ಒಂದಿಡೀ ಬದುಕಿನ ಸಾರವನ್ನು, ಕಬ್ಬನ್ನು ಹೇಗೆ ಮಶೀನಿಗೆ ಹಾಕಿ ಮಡಚಿ ಮಡಚಿ ಇಟ್ಟು ಕೊನೆ ಹನಿಯನ್ನೂ ಬಿಡದಂತೆ ಹಿಂಡಿ ರಸ ತೆಗೆಯುತ್ತೇವೋ ಹಾಗೆ. ಆದರೆ ಬದುಕು ಕಬ್ಬಿನಷ್ಟು ಸುಲಭವಲ್ಲ ಕ್ಷಣ ಮಾತ್ರದಲ್ಲಿ ಹಿಂಡಿ ಕುಡಿಯಲಿಕ್ಕೆ. ಅದು ಸಾವಿನ ಕೊನೆ ಕ್ಷಣದವರೆಗೂ ನಡೆಯುತ್ತಲೇ ಸಾಗುವ ಪ್ರಕ್ರಿಯೆ. ಅವಳು ಪ್ರಕ್ರಿಯೆಯನ್ನೇ ಪ್ರೀತಿಸುವವಳು. ಅವಳೊಂದು ಹಬ್ಬ. ಅದನ್ನು ಸಂಭ್ರಮಿಸಬೇಕು... ಆದರೆ ಕೆಲವೊಮ್ಮೆ ಹಾಗಾಗುವುದಿಲ್ಲ... ಹಬ್ಬಕ್ಕೊಂದು ಸೂತಕ ಕವಿದುಬಿಡುತ್ತದೆ. ಮುಟ್ಟು ಕಳೆದುಕೊಳ್ಳುವುದು ಹೇಗೆ ಈಗ...

ವಿದ್ಯಾರಶ್ಮಿಯವರ ಇತ್ತೀಚಿನ ಪುಸ್ತಕ "ಕೆರೆ ದಡ" ಪುಸ್ತಕದ "ಅವಳೇ ತೆಗೆದ ಅವಳ ಚಿತ್ರ" ಎನ್ನುವ ಕವಿತೆ ಇಂತಹ ಸಂದರ್ಭಕ್ಕೆ ಆಪ್ಟ್ ಎನಿಸುವಂತೆ ಹೊಂದುವ ಚಂದದ ಅಭಿವ್ಯಕ್ತಿ ಅನಿಸಿತು ನನಗೆ. ಕವಿತೆ ಹೀಗೆ ಶುರುವಾಗುತ್ತದೆ...

"ನೋಡುತ್ತಿರುತ್ತೇನೆ ಆಗಾಗ
ಅವಳ ಡಿಪಿಯ ಚಿತ್ರಪಟ
ಬದಲಿಸುವಳು ದಿನಕ್ಕೊಮ್ಮೆ
ಚೆಂದದ ಮುಖ
ಎಂತಹ ಭಂಗಿ, ಆಹಾ ವಯ್ಯಾರ
ದಿನಕ್ಕೆ ಒಂದು ಎರೆಡು
ಕಣ್ಣಿಗೆ ಬೀಳುತ್ತವೆ
ಎಲ್ಲವೂ ಸೆಲ್ಫಿ ಚಿತ್ರಗಳು
ಅವಳೇ ತೆಗೆದ ಅವಳದೇ ಚಿತ್ರ"

ಅವಳೇ ಒಂದು ಮೈತುಂಬ ಹೂವುಗಳನ್ನೇ ಮುಡಿದ ಗುಲಾಬಿ ಗಿಡ. ಅವಳು ತನ್ನನ್ನು ತಾನು ತುಂಬ ಪ್ರೀತಿಸುತ್ತಾಳೆ. ಅದಕ್ಕೆ ಸಾಕ್ಷಿ ಅವಳ ಸೆಲ್ಫಿಗಳು ಮತ್ತು ನಿತ್ಯ ಬಸಲಿಸುವ ಡಿಪಿಗಳು. ಅವಳ ಚಂದಕ್ಕೆ ಒಂದು ಮೆರುಗಿದೆ. ವಯ್ಯಾರವಿದೆ. ಮತ್ತದು ಅವಳದ್ದು ಮಾತ್ರ ಎನಿಸುವಷ್ಟು ಅವಳ ಸ್ವಂತದ್ದು. ಆದರೆ "ಅವಳೇ ತೆಗೆದ" ಎನ್ನುವ ಸಾಲಿನಲ್ಲಿ ಅಷ್ಟೆಲ್ಲಾ ಚಂದವಿರುವ ಅಂದಗಾತಿ ಒಂಟಿಯಾ?! ಎಂಬ ಅನುಮಾನ ಮೂಡುತ್ತದೆ. ಅದು ಆಶ್ಚರ್ಯವೇನಲ್ಲ. ಎಲ್ಲರಿಗೂ ತಮ್ಮನ್ನು ಪ್ರೀತಿಸುವವರು ಬೇಕೇ ಹೊರತು ತಮ್ಮನ್ನು ತಾವು ಪ್ರೀತಿಸುವವರು ಬೇಡ. ಆ ಸತ್ಯ ಅರ್ಥವಾದಂದಿನಿಂದ ಅವಳು ತನ್ನನ್ನು ತಾನು ಅತಿಯಾಗಿ ಪ್ರೀತಿಸಲು ಶುರುಮಾಡಿದ್ದಾಳೆ. ನಮ್ಮನ್ನು ನಾವಷ್ಟೇ ಅಷ್ಟು ಅರ್ಥಮಾಡುಕೊಳ್ಳಲು ಸಾಧ್ಯ, ಪ್ರೀತಿಸಲು ಸಾಧ್ಯ ಎಂದು ಗೊತ್ತಾಗಿದೆ ಅವಳಿಗೆ... ಅಷ್ಟಕ್ಕೂ ಒಂಟಿಯಾಗಿರುವುದು ಅವಳ ಆಯ್ಕೆಯೂ ಆಗಿರಬಹುದು...

"ಭಾನುವಾರ ಒಂದು ಸಂಜೆಯ ಚಿತ್ರಪಟ
ಸೋಮವಾರದ ನಿತ್ಯಕ್ಕೆ ಮತ್ತೊಂದು
ಮಂಗಳವಾರದ ಮುದಕ್ಕೆ ಇನ್ನೊಂದು
ಖುಷಿ ಕೊಡುತ್ತಾಳೆ ನಗೆಯೊಂದಿಗೆ
ಟ್ರೆಂಡಿ ಹುಡುಗಿ
ಹೊಸ ಹೊಸದಕ್ಕೆಲ್ಲ ಒಗ್ಗಿಕೊಳ್ಳುವಳು ಬೇಗಬೇಗ
ಮೆಚ್ಚದಿರುವುದು ಹೇಗೆ"

Thing of beauty is joy for ever ಎನ್ನುತ್ತಾನೆ ಕೀಟ್ಸ್. ಅವಳೂ ಸಹ ಅದನ್ನೇ ನಂಬುವವಳು. ಅವಳ ಪ್ರತಿ ದಿನದ ಹೊಸತನದ ಸೆಲ್ಫಿಗಳು ಅಪರಿಚಿತರಿಗೂ ಒಂದು ಉಲ್ಲಾಸ ಮತ್ತು ಸ್ಪೂರ್ತಿ ತುಂಬುವ ಚಿಲುಮೆಯಂಥ ಶಕ್ತಿ. ಅದಕ್ಕೆ ಮೆರುಗು ಆ ಅಂದಕ್ಕೆ ಇತ್ತ ಆಧುನಿಕತೆಯ ಸ್ಪರ್ಶ. ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಅಪ್ಡೇಟ್ ಮಾಡಿಕೊಂಡು ಎಲ್ಲ ವಯೋಮಾನದವರೊಂದಿಗೂ ರೆಲೇಟ್ ಆಗುವ ಅವಳ ರೀತಿಯನ್ನು ಮೆಚ್ಚದಿರಲು ಯಾರಿಂದಲೂ ಸಾದ್ಯವಿಲ್ಲವಾಗುತ್ತದೆ.

"ದಿನದಿನವೂ ಅವಳೊಬ್ಬಳದೇ ಮೊಗ
ಜತೆಗಾರನೂ ಇಲ್ಲವೇ
ಸಂದೇಹ ಹುಟ್ಟಿದೆ ಈಗೀಗ
ಒಮ್ಮೆ ಕೇಳುವಾಸೆ
ಚಿತ್ರ ತೆಗೆಯಲು ಜೊತೆಗಾರನೂ ಇಲ್ಲವೇ
ಇದ್ದರೂ ಬಾರರೇ?"

ಆದರೂ ಅವಳ ನಗುವಿನ ಹಿಂದೆ ಏನಿದೆ ಎನ್ನುವ ಗುಮಾನಿ. ಅವಳ ಒಂಟಿತನದಲ್ಲಿ ಎಂಥದೋ ಅನುಮಾನದ ವಾಸನೆ. ಬರೀ ಸೆಲ್ಫಿಯನ್ನೇ ಏಕೆ ಹಂಚಿಕೊಳ್ಳುತ್ತಾಳೆ ಅವಳು! ಜೊತೆಗೆ ಯಾರೂ ಇಲ್ಲವೇ ಒಂದು ಸ್ನಾಪ್ ಮಾಡಲು! ಇದ್ದರೂ ಬರುವುದಿಲ್ಲವೇ... ಯಾರು ಯಾರೋ ಅವಳನ್ನು ಮೆಚ್ಚಿ ಮಾತನಾಡುವಾಗ, ಅವಳು ಬಯಸುವ ಅವಳ ಹೃದಯಕ್ಕೆ ಹತ್ತಿರವಾಗಬಲ್ಲ, ಅವಳ ಮನಸಿಗೆ ಖುಷಿಕೊಡಬಲ್ಲ ಒಬ್ಬರೂ ಅವಳೊಂದಿಗೆ ಇಲ್ಲವೇ?! ಎನಿಸುವಾಗ ಅವಳ ನಗುವಿನ ನಾಟಕೀಯತೆಯ ಬಗ್ಗೆ ವಿಷಾದವೆನಿಸತೊಡಗುತ್ತದೆ. ಆದರೆ ಅವಳು ಯಾವುದನ್ನೂ ಒಪ್ಪುವುದಿಲ್ಲ, ಅಲ್ಲಗಳೆಯುವುದಿಲ್ಲ, ಒಪ್ಪದಿರುವ ಅಸಮ್ಮತಿಯನ್ನೂ ತೋರಿಸಿಕೊಳ್ಳುವುದಿಲ್ಲ... ಸತ್ಯ ಮಿಥ್ಯಗಳ ನಡುವೆಯೊಂದು ಉಯ್ಯಾಲೆಯನು ತೂಗುಬಿಟ್ಟು ಆಟವಾಡತೊಡಗುತ್ತಾಳೆ...

"ಸಂಭ್ರಮಕ್ಕೆಲ್ಲ ಒಬ್ಬಳಿದ್ದರೆ ಚಂದವೇನೇ
ಹೇಳುತ್ತಾಳಾ ಅವಳೊಳಗ...
ಯಾಕೋ ಈಗೀಗ ಸೆಲ್ಫಿ ಅಂದರೆ
ಒಳಗೇನೋ ಸಂಕಟ"

ಆದರೂ ಸಂಭ್ರಮದಲ್ಲಿ ಒಂಟಿಯಾಗಿದ್ದರೆ ಎಂಥ ಚಂದ?! ಜೊತೆಗೆ ನಮ್ಮವರು ಎನಿಸಿಕೊಂಡವರು ಇದ್ದಾಗಲೇ ಸಾಧಾರಣ ದಿನವೂ ಹಬ್ಬದ ದಿನವಾಗುವುದು. ಅವಳ ಒಳಗೂ ಇಂಥದ್ದೊಂದು ಕೊರತೆಯಿದೆಯಾ?! ಅದನ್ನು ಮುಚ್ಚಿಡಲೆಂದೇ ಹೀಗೆ ಸೆಲ್ಫಿಗಳ ಮೊರೆ ಹೋಗಿದ್ದಾಳಾ?! ಎದೆಯಾಳದೊಳಗೆ ಮಡುಗಟ್ಟಿರುವ ಒಂದು ತೀರದ ನೋವಿನ ಎಳೆಯನ್ನು ಮುಚ್ಚಿಡಲೆಂದೇ ಅಷ್ಟು ಚಂದ ನಗುತ್ತಾಳಾ?! ಹೀಗೆಲ್ಲ ಅನಿಸುವಾಗ ಎಂಥದೋ ಸಂಕಟದ ಸುನಾಮಿ ಏಳುತ್ತದೆ ಮುಗಿಲೆತ್ತರಕೆ ಎಲ್ಲವನ್ನೂ ಕಾಲಡಿ ಹೊಸಕಿ ಹಾಕುವಂಥ ದೈತ್ಯನಂತೆ...

ಎಷ್ಟು ಚಂದ ಈ ಕವಿತೆ?! ಬಾಂಧವ್ಯದ ನಡುವಿನ ಪೊಳ್ಳುತನವನ್ನು ನಗುವೆನ್ನುವ ನಿರುಪದ್ರವಿ ಲೇಪನದ ಅಡಿಯಲ್ಲಿ ಕಾಣದಂತೆ ಮುಚ್ಚಿಟ್ಟುಬಿಡುವುದು, ಆರೋಗ್ಯವಂತ ದೇಹದೊಳಗೆ ಕ್ಯಾನ್ಸರಿನ ಗಡ್ಡೆಯೊಂದನ್ನು ಪೋಶಿಸಿಕೊಂಡಂತೆ. ಅಂಥ ಕರಾಳ ಸತ್ಯಕ್ಕೆ ಎದುರಾದ ಅವಳು ಅದರಿಂದ ಹೊರಬರುವ ಮಾರ್ಗವಾಗಿ ತನ್ನನ್ನು ತಾನು ಪ್ರೀತಿಸತೊಡಗುವುದು ನಮ್ಮ ಮುಂದೆ ಅವಳೇ ತೆರೆದ ಮಾರ್ಗವೇ ಎನಿಸುವ ಹೊತ್ತಿನಲ್ಲಿಯೇ ಅವಳ ಮನಸ್ಸಿನ ಯಾವುದೋ ಮೂಲೆಯಲ್ಲಿ ಅದೊಂದು ಸಾಂಗತ್ಯದ ಕೊರತೆ ಇನ್ನೂ ಉಸಿರಾಡುತ್ತಿದೆ ಎನಿಸುವಾಗ ನಿಟ್ಟುಸಿರೊಂದು ಹೊರಬರುತ್ತದೆ...

ಕೆಲವೇ ಸಾಲುಗಳಲ್ಲಿ ಮೂಡಿ ಬಂದಿರುವ ಈ ಕವಿತೆ ವಿದ್ಯಾರವರ ಕಾವ್ಯಾಭಿವ್ಯಕ್ತಿಯ ಶಕ್ತಿಗೆ ಹಿಡಿದ ಕೈಗನ್ನಡಿ. ಇತ್ತೀಚೆಗಷ್ಟೇ ಹೊರಬಂದಿರುವ ಅವರ "ಕೆರೆ-ದಡ" ಸಂಕಲನದ ಅಷ್ಟೂ ಕವಿತೆಗಳೂ ಅದನ್ನು ಪುಷ್ಟೀಕರಿಸುತ್ತವೆ.

- ಆಶಾ ಜಗದೀಶ್

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...