ಬೆವರಿಗಂಟಿದ ಜನರ ಕವಲು ಹಾದಿಯ ದೈವ


ಸದಾ ಕ್ಯಾಮರಾ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಸತ್ಯಬೋಧ ಜೋಶಿ ಅವರು ಸಿನಿಮಾ, ಕಿರುತೆರೆ ಛಾಯಾಗ್ರಹಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಾಹಿತ್ಯದ ಸಂವೇದನೆ- ಆಸಕ್ತಿ ಕಾಳಜಿ ಹೊಂದಿರುವ ಸತ್ಯಬೋಧ ಅವರು ಕ್ಯಾಮರಾ ಹಿಡಿದು ಓಡಾಡುವ ಕ್ಷಣಗಳಲ್ಲಿ ಕಂಡುಕೇಳಿದ ಸಂಗತಿಗಳನ್ನು ’ಬಯಲ ಪರದೆ’ ಅಂಕಣದಲ್ಲಿ ಬರೆಯುತ್ತಾರೆ.

ಹೀಗೊಂದು ಕಾರ್ಯಕ್ರಮ ಸರಣಿಯ ಚಿತ್ರೀಕರಣಕ್ಕೆ ಅಂತ, ನಾನು ದಕ್ಷಿಣ ಕರ್ನಾಟಕ ಭಾಗದ ಮಂಡ್ಯ, ಮಳವಳ್ಳಿ, ಬೊಪ್ಪೇಗೌಡನಪುರ, ಕುಂದುರು ಬೆಟ್ಟ, ಕುಂತೂರು ಬೆಟ್ಟ, ಮಲೈಮಹದೇಶ್ವರ ಬೆಟ್ಟ, ಬಿಳಿರಂಗನ ಬೆಟ್ಟ ಅಂತ ನಿರಂತರ ಓಡಾಡಿದ್ದ ನಾನು ಈ ಹಿಂದೆ ಎಂದು ಕೇಳರಿಯದ ಜಾನಪದ ಜಗತ್ತಿಗೆ ತೆರೆದುಕೊಂಡೆ. ಹಾಗಾಗಿ ಅಲ್ಲಿಯ ಗುಡ್ಡರು, ನೀಲಗಾರರು, ಪೋಡಿನ ಸೋಲಿಗರಂತೆಯೇ ನನಗೂ ಆ ಬೆಟ್ಟದ ಮಹದೇಶ್ವರ ನನ್ನ ಮಾಯ್ಕಾರ ಮಾದೇವನಾದರೆ, ಬೊಪ್ಪೇಗೌಡನಪುರದ ಸ್ವಾಮಿ ನನ್ನ ಮಂಟೇಲಿಂಗಯ್ಯನೇ ಆದ, ಇನ್ನೂ ಆ ಗರುಡಗಮನ ಬಿಳಿಗಿರಿರಂಗನಾಥ ಸ್ವಾಮಿಯಂತೂ ಬಿಳಿಕಲ್ಲ ರಂಗಭಾವನೇ ಆಗಿ ಹೋದ, ಅಲ್ಲಿ ನನಗೆ ಈ ರುದ್ರ, ಚಮಕ, ಗಮಕಗಳನ್ನೂ ಮೀರಿ, ಮದ್ಯ ಮೈಥುನ, ಮಾಂಸಗಳ ಘಾಟಿನಲ್ಲೂ ಶತಮಾನಗಳಿಂದ ಉಳಿಸಿಕೊಂಡು ಬಂದ ಆ ದೈವ ಮತ್ತು ಒಕ್ಕಲು ಸಮುದಾಯಗಳ ನಂಬಿಕೆ ಶಿಸ್ತು ಸಲಿಗೆಯ ಆ ಕೊಡುಕೊಳ್ಳುವಿಕೆಯಲ್ಲಿ ಆಯಾ ದೇವರುಗಳು ಮನುಷ್ಯರಂತಾಗಿದ್ದು ಹೆಚ್ಚು ಆಪ್ತ ಅನಿಸುತ್ತಾ ಇತ್ತು.

ಹೀಗಂತ ಇವೆಲ್ಲಾ ಸ್ವಲ್ಪವಾದರೂ ನನ್ನ ಅರಿವಿಗೆ ಬರುವುದಕ್ಕೆ, ಈ ಎಲ್ಲಾ ಚಿತ್ರೀಕರಣದ ಉದ್ದಕ್ಕೂ ನನಗೆ ಬೆನ್ನೆಲುಬಾಗಿ ನಿಂತದ್ದು ಪ್ರೊ.ಹಿ.ಚಿ.ಬೋರಲಿಂಗಯ್ಯನವರ ’ಕಾಡು, ಕಾಂಕ್ರೀಟ್ ಮತ್ತು ಜಾನಪದ’ ಕೇಶವನ್ ಪ್ರಸಾದರ ’ಸೋಲಿಗರು ಹಾಡಿದ ಬಿಳಿಗಿರಿರಂಗನಾಥನ ಕಾವ್ಯ’ ಮತ್ತು ಅಂಬಳಿಕೆ ಹಿರಿಯಣ್ಣರವರ ’ಜನಪದ ಮಹಾಕಾವ್ಯ’.  ಕಿರುಹೊತ್ತಿಗೆ ಮತ್ತು ಮಲೆಯೂರು ಗುರುಸ್ವಾಮಿಗಳ ’ಮಹಾಯಾತ್ರಿಕ’. ಹೀಗೆ ಚಿತ್ರೀಕರಣವಾದ ಮೇಲೂ ಜನಪದ ಕಲಾಕೋಶ, ಮಹದೇಶ್ವರ ಕಾವ್ಶ, ಬುಡಕಟ್ಟು ಉಪಸಂಸ್ಕೃತಿ ಮಾಲಿಕೆ, ಅನ್ನುವ ಗುಂಗಿನಲ್ಲಿದ್ದ ನಾನು ಮುಂದಿನ ಒಂದು ಸರಣಿಗೆ ಅಂತ ಬಿಸೋಕಲ್ಲಿನ ಪದಗಳು, ಹಂತಿ ಪದಗಳು, ಗೀಗಿ ಪದಗಳು ಅಂತ, ಉತ್ತರ ಕರ್ನಾಟಕದ ಬಾಗಲಕೋಟೆ, ಕೆರೂರು, ಬೀಳಗಿ ಕಡೆಯ ಆ ಹಾದಿಯಲ್ಲಿ ಇಳಿದಾಗ, ಮುಗಿಲು ಮುಟ್ಟುವವರೆಗೂ ಹಬ್ಬಿದ ಆ ಬಯಲ ಹಾದಿಯಲ್ಲಿ

ಆ ಹಿಂದಿನ ನೀಲಗಾರರ ’ಸಿದ್ದಯ್ಯಸ್ವಾಮಿ ಬನ್ನಿ ಮಂಟೇದಲಿಂಗಯ್ಯ ನೀವೇ ಬನ್ನಿ’ ಅನ್ನೋ ಹಾಡು ಕಿವಿಯಲ್ಲಿ ಗುಂಯ್ಗುಡ್ತಾಯಿದ್ರೆ, ಕಣ್ಮುಂದೆ ಕಾಣಿತ್ತಿದ್ದ, ಆ ಕಪ್ಪು ಮಣ್ಣಿನಲ್ಲಿ ಇನ್ನೊಬ್ಬ ಆ ನೆಲದ ಮಾಯ್ಕಾರ ನನ್ನ ಮಿತಿಯಲ್ಲಿ ಮತ್ತೊಮ್ಮೆ ಮೈತಳಿಲಿಕ್ಕೆ ಶುರುವಾಗಿದ್ದಾ ಅವನೇ ನಮ್ಮ ಬಸವಣ್ಣ. ಮಲೈ ಮಹದೇಶ್ವರ, ಮಂಟೇಸ್ವಾಮಿಗಿಂತ ಸುಮಾರು 4-5 ಶತಮಾನಗಳ ಮುಂಚೆಯೇ ಬಂದ ಈ ಶರಣ ಈಗ  ಅದೆಷ್ಟೋ  ಶಿಷ್ಟರ ಆರಾಧ್ಯದೈವ ಆಗಿರಬಹುದು, ಆದರೆ ಅಂದೊಮ್ಮೆ ಅವನೂ ಕವಲುಹಾದಿಯ ದೈವವೇ ಆದವನು. ಆದರೆ ಯಾಕೆ ಅವನು ಬೆವರಿಗಂಟಿದ ಜನರಿಗೆ ದನಿಯಾದ ಅನ್ನೋದು, ಆ ಚಿತ್ರೀಕರಿಸುತ್ತಿದ್ದ ಪದಗಳು ಮತ್ತು ರೈತಾಪಿ ವರ್ಗದ ಜೊತೆ ಬೆರೆಯುತ್ತ ಹೋದಾಗೆನೇ ಗೊತ್ತಾಗಿದ್ದು. ಅಲ್ಲದೆ ಆ ಹೆದ್ದಾರಿಯ ದೇವರೂ ಕೂಡಾ ವೇದದ ಮಡಿ ಹವಿಸ್ಸಿನಿಂದ ಪುರಾಣ ಕಥೆಗಳಲ್ಲಿ ಬೆಳೆದು, ಕೊನೆಗೆ ಭಕ್ತಿಯ ಎಂಜಲು ಹಣ್ಣನ್ನ ತಿನ್ನಲೇಬೇಕಾದ ಆ ಕವಲು ಹಾದಿಯ ನಡಿಗೆಯ ಕಾರಣ ಕೂಡ ನನಗೆ ಕ್ರಮೇಣ ಆ ಪದಗಳಲ್ಲಿ ಸ್ಪಷ್ಟವಾಗಿ ಕಾಣಲಿಕ್ಕೆ ಶುರುವಾಗಿತ್ತು.

“ಕಂಚಿನ ಕಣ ಮಾಡಿ , ಗಾಜಿನ ಮೇಟಿಯ ನಡಶ್ಶಾ
ಜಾರೋಗುಂಟೇಲ್ಲಾ ಜರತಾರಿ (೨)
ಕಣದೊಳಗೆ, ತುರೋತಟ್ಟೆಲ್ಲಾ ಬಂಗಾರೋ”

ಅನ್ನೋ  ಉತ್ತರ ಕರ್ನಾಟಕದ ಈ ಹಂತಿ ಪದದ (ಬೇರ್ಪಡಿಸಿದ ತೆನೆಯನ್ನ ಎತ್ತುಗಳಿಂದ ತುಳಿಸಿ ಕಾಳುಗಳನ್ನ ಬೇರೆ ಮಾಡುವಾಗ ಹಾಡುವ ಪದಗಳು) ಸಾಲಿನ ಗುಂಗು ಮನಸ್ಸಿಗೆ ಹಿಡಿದಾಗೊಮ್ಮೆ, ರಣಬಿಸಿಲಿನ ಮೈಲುದ್ದ ಹಾದಿಯ ಪಕ್ಕದಲ್ಲಿ ಹಬ್ಬಿದ ಒಣ ಹೊಲಗಳಲ್ಲೂ, ರೈತ ಈ ರೀತಿ ಕನಸು ಕಾಣುತ್ತಾನೆ ಅನ್ನೋದೇ ಬೆರಗು ಮೂಡಿಸುವಂತಹದ್ದು. ಯಾಕಂದ್ರೆ ಆ ಮಣ್ಣು ಮಳೆ ನೀರನ್ನ ಹೀರಿದ್ದಕ್ಕಿಂತ ಬಳಲಿ ಬೆವರಿದ್ದೇ ಹೆಚ್ಚು. ಆದರೂ ಅಷ್ಟಿಷ್ಟು ಬಂದ ಬೆಳೆಯಲ್ಲೂ ಈ ರೀತಿ ಕನಸು ಕಾಣಬಲ್ಲ ಕಸುವು ಅವನಲ್ಲಿ ಮತ್ತವನ ಆ ಹಳ್ಳಿಗರಲ್ಲಿ ಮೂಡಿದ್ದು ಹೇಗೆ ಅಂತ ನೋಡಿದರೆ, “ಕಾಯಕದಲ್ಲೇ ಕೈಲಾಸವೂ ಅಡಗಿದೆ ಅದಕ್ಕೇ ಗುಡಿ ಅಂಗಳದ ಹಂಗು ಬೇಕಿಲ್ಲ” ಅಂತ ಅವನು ಕಂಡುಕೊಂಡ ಆ 12ನೇ ಶತಮಾನದ ಶರಣರ ಅನುಭಾವ ತೆರೆದುಕೊಳ್ತಾ ಹೋಗತ್ತೆ. ಯಾಕೆಂದರೆ ಗುಡಿಯ ಮಡಿಯ ಹಿಂದಿನ ಮಂತ್ರಗಳಿಗೆ, ಬಸದಿಯ ನಮೋಕಾರಗಳನ್ನ ನಂಬಿದ ವ್ಯಾಪಾರಗಳಿಗೆ ಅಂದಿನಿಂದಲೂ ಬೆನ್ನೆಲುಬಾದ ಅನ್ನ, ಧಾನ್ಯಗಳಿಂದ ಹಿಡಿದು ಎಲ್ಲವನ್ನೂ ಕೊಂಡು ಕೂಡಿಟ್ಟು ಬದುಕುವ ಸಂಸ್ಕೃತಿಗೆ, ಅವೆಲ್ಲವನ್ನೂ ಆಯಾ ದಿನಗಳಿಂದಲೇ ದುಡಿದು ಬದುಕನ್ನ ಕಟ್ಟಿಕೊಳ್ಳುತ್ತಿದ್ದ ರೈತ, ಚಮ್ಮಾರ, ಕಮ್ಮಾರ, ಮಡಿವಾಳ, ಅಂಬಿಗರಂತಹ ಅದೆಷ್ಟೋ ಕಾಯಕವನ್ನೆ ನಂಬಿದ ಬಹುಪಾಲು ವರ್ಗಗಳ ಮಧ್ಯೇ ಅದೆಷ್ಟು ಅಂತರವಿತ್ತು!!! ತಮ್ಮ ಮನೆಯ ಹಸಿಗೂಸಿಗೆ ಕುಡಿಸುವ ಎದೆಹಾಲೇ ಬತ್ತಿರುವಾಗಲೂ ಉಳ್ಳವರ ಶಿವರ ಮೈಜಾರಿ ಹರಿಯುವ ಹಾಲೇ ಹೆಚ್ಚು ಅನ್ನೋದು ಅರ್ಥವಾಗುತ್ತಿದ್ದರೂ ಹೇಳಲಾಗದಷ್ಟು ತುಳಿತಕ್ಕೊಳಗಾದಾಗ ಕ್ಷೀರ ಸಾಗರದಲ್ಲಿ ಪವಡಿಸುವವನನ್ನ ಹೇಗೆ ತಾನೇ ಮನಸಾರೆ ನಂಬಬಹುದಾಗಿತ್ತು. ಅಲ್ಲದೇ ಪ್ರಕೃತಿಯ ಪ್ರತಿ ನಡವಳಿಕೆಯನ್ನೂ ಭೀತಿ, ಬೆರಗಿನಿಂದ ಕಂಡು ಅಗಿನ ಅಹಿಂಸೆಯ ತತ್ವ ಹೇಗಾದರೂ ಆಪ್ತವೆನಿಸಬಹುದಾಗಿತ್ತು. ಹಾಗಾಗಿ ಮನೆಯ ಜಗುಲಿ, ಪೂಜೆಯ ಮೂಲೆಗಿಂತ, ಗುಡಿ ಮಠದ ಪ್ರಾಕಾರಗಳಿಗಿಂತ, ಮುಗಿಲಿಗೆ ತೆರೆದ ಬಯಲಲ್ಲಿ, ಮೂಲ ಕಾಣದ ಝರಿಯಲ್ಲಿ, ಸಾಯದೆಯೂ ಸುಡುವ ಬೆಂಕಿಯಲ್ಲಿ, ತಂಗಳೋಗರದಲ್ಲಿ ತನ್ನ ದನ, ಕರು, ಕುರಿಯ, ಸಗಣಿ, ಹಿಕ್ಕೆಯಲ್ಲೇ ತನ್ನ ಬಾಳನ್ನ ಕಾಣುವವನಿಗೆ ಹೀಗೊಬ್ಬ ಮೂಲೆಯ ದೇವರನ್ನ ತೋರಿ, ’ಇವ ನಮ್ಮವ… ಆದರೆ ನಿಮ್ಮಂತಾಗಬೇಕಾದರೆ ಆ ದೇವರ ಮುಖದಿಂದ ನೀವು ಹುಟ್ಟಬೇಕು, ಇಲ್ಲವೆ ಭುಜದಿಂದಾದರೂ ಹುಟ್ಟಿರಬೇಕು, ಕೊನೆಗೆ ತೊಡೆಯಿಂದಾದರೂ ಸರಿ ಅಂತ ಹೀಗಳೆದು ಅರ್ಥವಾಗದ ಭಾಷೆಯಲ್ಲಿ ’ನೀವು ಪಾದದಿಂದ ಹುಟ್ಟಿದ ಶೂದ್ರರು’ ಅಂತ ದೂರ ಮಾಡಿದಾಗ

“ಆಡಿನ ಹಿಕ್ಕೆಯ ತಂದು ತೀಡಿ ಲಿಂಗವ ಮಾಡಿ,
ನೋಡವ್ವ ಶಿವನಾ ಮಹಿಮಾನ ಗೊಲಗೇರಿ

ಲಿಂಗ ಆಡಿನ ಹಿಕ್ಕ್ಯಾಗ ನೆನದಾನ”

ಅನ್ನೋ ಒಂದು ಹಂತಿ ಪದದಷ್ಟೇ ಸರಳವಾಗಿ, 8 ಶತಮಾನಗಳ ಹಿಂದೇ ಬಸವಾದಿ ಶರಣರು ಅವನ ಕಾಯಕದಲ್ಲೇ ದೇವರನ್ನ ತೋರಿದಾಗ, ಆ ಮಾರ್ಗವನ್ನೇಕೆ ಸಾಮಾನ್ಯ ತುಳಿಯಬಾರದಿತ್ತು, ಬೆಳೆಯೋದು, ಕೂಡಿಡುವುದು, ಸಮಾನವಾಗಿ ಹಂಚಿ ತಿನ್ನೋ ದಾಸೋಹಕ್ಕೆ ಅಂತ ಕಲಿಸಿದಾಗ ಆ ಮಾರ್ಗದಲ್ಲೇಕೆ ಸಾಮಾನ್ಯ ನಡೆಯಬಾರದಿತ್ತು  ’ನ ಸ್ತ್ರೀ ಸ್ವಾತಂತ್ರಮರ್ಹತಿ’ ಅಂತ ಸ್ರ‍್ಮತಿ ಹೇಳುವಾಗ, ದಿಗಂಬರರಾಗದೇ ಮೋಕ್ಷವಿಲ್ಲ. ಹಾಗಾಗಿ ಬತ್ತಲಾಗಲಿಕ್ಕಾಗದ ಸ್ತ್ರೀ ಮೋಕ್ಷ ಯೋಗ್ಯವಲ್ಲ ಅನ್ನೋ ಸಿದ್ದಾಂತಗಳಿರುವಾಗ ಅತೀ ಆದರದಿಂದ ಆಯ್ದಕ್ಕಿ ಮಾರವ್ವನನ್ನ, ಅಕ್ಕ ಮಹಾದೇವಿಯನ್ನ, ರೆಮ್ಮೆವ್ವೆ, ಸೂಳೆ ಸಂಕವ್ವೆ ಅಂತನ್ನೋ ವಿವಿಧ ವರ್ಗಗಳ ಸ್ತ್ರೀಯರನ್ನ ಆಪ್ತವಾಗಿ ಕಂಡ ಬಳಗವನ್ನೇ ತನ್ನ ಬಾಳಹಾದಿಯನ್ನಾಗಿ ಅಂದಿನ ಸಾಮಾನ್ಯ ಸಹಜವಾಗಿಯೇ ತನ್ನದಾಗಿಸಿಕೊಂಡ ಅಂತಹ ಕಾಯಕ ಜಗತ್ತನ್ನು, ಇಹದ ಬದುಕನ್ನು ಎತ್ತಿ ಹಿಡಿದ ಬಸವಣ್ಣನಂತೆಯೇ ಬೀರಪ್ಪ, ಹುಲಜಂತಿ ಮಾಳಿಂಗರಾಯ, ಅಮೋಘಸಿದ್ದ, ಜುಂಜಪ್ಫ, ಮೈಲಾರ ಲಿಂಗೇಶ್ವರ ಅಂತ ಇಹಕ್ಕಾಗಿಯೇ ಬದುಕಿದ ದೇವರನ್ನ ಕಂಡ ಅದೆಷ್ಟೋ ತಲೆಮಾರುಗಳಿಂದ ಒಕ್ಕಲಾದ ಈ ಗ್ರಾಮಗಳ ಇಂದಿನ ಗ್ರಾಮಸ್ಥರ ಚಿತ್ರೀಕರಣ ಮಾಡುತ್ತಾ ಇದ್ದಂತೆ ಅವರ ಕಾಯಕದ ಜೊತೆ  ಒಂದಾಗಿ ಅವರ ದಣಿವನ್ನು ಕಡಿಮೆ ಮಾಡುವ ಎಷ್ಟೋ ಪದಗಳಲ್ಲಿ ಅವರ ಬಾಳಿನ ಚಿತ್ರಣಗಳು ನನ್ನ ಕಣ್ಮುಂದೆ ಬರುತ್ತಾ ಇತ್ತು. 

“ಮುಂಜಾನೆ ನಾನೆದ್ದು ಯಾರ್‍ಯಾರ ನೆನೆಯಲಿ, 
ಎಳ್ಳು ಜೀರಿಗೇ ಬೆಳೆಯೋಳಾ, ಎಳ್ಳು ಜೀರಿಗೆ ಬೆಳೆಯೊಳ 
ಭೂಮಿತಾಯನ್ನ ದಿನಕ್ಕೊಂದು ಗಳಿಗೆ ನೆನೆದೇನೆ”

ಅನ್ನೋ ಬೀಸೊಕಲ್ಲಿನ ಪದಗಳಿಂದ ಶುರುವಾಗಿತ್ತಿದ್ದ ಆ ಹಳ್ಳಿಯ ತಾಯಂದಿರ ಜೀವನ, ’ಓಡಿ ಬಾ ನನಕಂದ ಅಂಗಾಲು ತೊಳೆದೇನ.’ ಅನ್ನೋ ಲಾಲನೆ, ಪೋಷಣೆಯಿಂದ ಅತ್ತ ಎತ್ತುಗಳಿಗೆ ಮೇವು, ನೀರನ್ನ ಹಾಕಿ, ಒಲೆ ಹೊತ್ತಿಸಿ ಗಂಡನಿಗೆ ರೊಟ್ಟಿಯನ್ನ ಮಾಡಿಕೊಟ್ಟು 'ಹೆಂಗಸಾದ ಬಳಿಕ ಹೇಳಿಕೊಳ್ಳೋದೇನ, ತನ್ನಾಗಿನದೆಲ್ಲ ಮನಿಕೆಲಸ  ಮಾಡಿದರ ತಮ್ಮವ್ವನಾರ ಬೇದಾರ’ ಅನ್ನೋ ಕಾಳಜಿಯ ಜೊತೆಗೆ ಜೀವನ ಪೂರ್ತಿ ಮನೆಯ ಒಲೆಯನ್ನ, ಒಡಲನ್ನ ಯಾವಾಗಲೂ ಬಚ್ಚಿಟ್ಟುಕೊಂಡು, ಎಲ್ಲರನ್ನ ತಂಪಾಗಿರಿಸಿ ಕಾಯ್ದರೆ, ಅತ್ತ ಗಂಡಸರು ಎತ್ತುಗಳನ್ನ, ರಂಟೆ, ಕುಂಟೆ, ಅಂತ ಹೊಲ, ಮಣ್ಣು ಬೆಳೆಗಳ ಮಧ್ಯದಲ್ಲೇ ಕಳೆಯೊರು, ಹಾಗಾಗಿಯೇ ಬಿರು ಬಿಸುಲು, ತಂಗಾಳಿಯಲ್ಲೂ ತನ್ನ ಜೊತೆಗಾರನಾಗಿ ದುಡಿಯೋ ಆ ಎತ್ತುಗಳನ್ನು ತನ್ನ ಹಾಡಿನಲ್ಲಿ ಅವನು ಮೊದಲಿಂದಲೂ ಕೊಂಡಾಡಿದ್ದು..

“ಏರಬಾರದ ಗುಡ್ಡ ಏರ್ಯಾವ ನಮ್ಮೆತ್ತ, 
ಬೋರಂಗಿ ಪಂಖ ಸರಗಂಟೆ, (೨)
ಕಟಗೊಂಡು ಎರಿ ಮೇದಾವ ಹೊಡಿ ಹುಲ್ಲ..” 

ತನ್ನ ಎತ್ತುಗಳು ಅದೆಷ್ಟು ಕಸುವಿದ್ದವು ಅಂದ್ರೆ ಬೋರಂಗಿಯ (ಜೀರಜಿಂಬೆ) ರೆಕ್ಕೆ ಕಟ್ಟಿಕೊಂಡು ಅತೀ ದುರ್ಗಮ ಬೆಟ್ಟವನ್ನೂ ಎರಿ ಹುಲ್ಲು ಮೇಯುವಂತಹವು. ಅನ್ನೋದು ಅದರ ಅರ್ಥ. ಹೀಗೆ ಒಂದು ಕಾಯಕ ವರ್ಗ ಅದು 9ನೇ ಶತಮಾನದಿಂದೀಚೆಗೆ ಪುರೋಹಿತಶಾಹಿ ವೈದಿಕರಿಂದ ಕಡೆಗಣಿಸಲ್ಪಟಗ್ಟು ಜೈನ ಧರ್ಮದ ಅಹಿಂಸೆಯ ಕಟ್ಟುಪಾಡುಗಳನ್ನೂ ಪಾಲಿಸಲಾಗದೆ, ಆಗಮಗಳ ಸಂಕೋಲೆಯಲ್ಲಿರುವಾಗ 12ನೇ ಶತಮಾನದಲ್ಲಿ ಅವನ ಕಾಯಕದಲ್ಲೇ ಕೈವಲ್ಯವಿದೆ ಅನ್ನೋದನ್ನ ಅವನಿಗೆ ಶರಣರ ಚಳುವಳಿ ತೋರಿಸಿತ್ತು. ಆದರೆ ಮುಂದೆ ಅದೇ ಶರಣರ ಕ್ರಾಂತಿ ಪ್ರಭುತ್ವದ ಕೈಯಲ್ಲಿ ಚದುರಿ ಹೋದಾಗ ವಚನದ ಹೊನ್ನ ಬಿತ್ತಿದ್ದ ಅದೇ ಭೂಮಿ ಯುದ್ದ ಸಂಘರ್ಷಗಳ ನೆಲೆಯಾಗಿ ಮಾರ್ಪಟ್ಟಿದ್ದರೆ ದಕ್ಷಿಣದ ಸುಭಿಕ್ಷ ವಿಜಯನಗರ ಸಾಮ್ರಾಜ್ಯದಲ್ಲಿ ಆ ನೂರೊಂದು ವಿರಕ್ತರು ಮತ್ತು ದಾಸಕೂಟದಿಂದ ಕನ್ನಡ ಸಾಹಿತ್ಯ ರಚನೆ ಮತ್ತೊಂದು ಔನ್ಯತ್ಯವನ್ನು ಮುಟ್ಟಿತ್ತು. ಆದರೆ ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ 17ನೇ ಶತಮಾನದಿಂದೀಚೆಗೆ ಬಹುಮನಿ ರಾಜರ ಆಡಳಿತದಿಂದ, ಯುದ್ದ ಸಂಘರ್ಷದಿಂದ ಮತ್ತೆ ಬಂಜರಾಯಿತು ಅಂದುಕೊಂಡ ಅದೇ ವಚನ ಬಿತ್ತಿದ್ದ ಮಣ್ಣಲ್ಲೇ ಹಿಂದು-ಇಸ್ಲಾಂ ಸೌಹಾರ್ದತೆಯ 'ತತ್ವಪದ' ಸಂಸ್ಕೃತಿ ಬೆಳೆಯಿತು. ಅನ್ನುವ ಡಾ.ಅಮರೇಶ್ ನುಗಡೋಣಿ ತತ್ವಪದ ಪುಸ್ತಕ ನನ್ನ ಆ ಕುರಿತು ಅರಿವನ್ನ ಎಷ್ಟೋ ಹೆಚ್ಚಿಸಿ 'ನಿನ್ನ ಅಧ್ಯಯನ ಚೆನ್ನಾಗಿ ನಡಿತಾ ಇದೆ' ಅಂತಾ ನನಗೆ ನಾನೆ ಹೇಳಿಕೊಂಡು ಬೀಗುತ ಇರಬೇಕಾದರೆ ಕಡಕೋಳ ಮಡಿವಾಳಜ್ಜ, ನಾಗಲಿಂಗಜ್ಜ, ಶರೀಫರು ಅಂತ ಮಾತನಾಡಿಕೊಂಡು ಬಂದ ಒಂದು ಕೆರೂರು ಹಿರಿಯರ ತಂಡ 'ಭಲೆ ತಮಾಷಿಲೈತಿ, ಭಲೆ ತಮಾಷಿಲೈತಿ, ಮಾತು ಭಲೆ ತಮಾಷಿಲೈತಿ …. ಅಂತ ನನ್ನ ಮುಂದು ಕೂತು ಹಾಡಲಿಕ್ಕೆ ಶುರುಮಾಡಿದ್ರು.

 

ಕಲಾಕೃತಿಗಳು: ಡಾ. ಅಶೋಕ ಶೆಟಕಾರ್, ಹಾಡು- ಅಪರ್ಣ ಸತ್ಯಬೋಧ ಜೋಶಿ

 

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...