ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ? 

Date: 30-07-2022

Location: ಬೆಂಗಳೂರು


“ಇಂದಿನ ಒಳನುಡಿಗಳ ಅದ್ಯಯನ ವರ‍್ಣನಾತ್ಮಕವಾಗಿ ದೊಡ್ಡ ಸಂಕೆಯಲ್ಲಿ ಕನ್ನಡದಲ್ಲಿ ನಡೆದಿದೆಯಾದರೂ ಗುಣಾತ್ಮಕವಾದ ಇನ್ನೂ ಹೆಚ್ಚಿನ ಅದ್ಯಯನಗಳ ಅವಶ್ಯಕತೆ ಇದೆ. ಈ ಒಳನುಡಿ ಅದ್ಯಯನಗಳನ್ನು ತುಲನಿಕವಾಗಿ ಅದ್ಯಯನ ಮಾಡುವ ಅವಶ್ಯಕತೆ ಇದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಭಾಷೆಯ ಇತಿಹಾಸವನ್ನು ತಿಳಿದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿದ್ದಾರೆ.

ಯಾವುದೆ ಒಂದು ಬಾಶೆಯ ಬೆಳವಣಿಗೆಯನ್ನು ಇಲ್ಲವೆ ಇತಿಹಾಸವನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಅರಿವು ಅತ್ಯವಶ್ಯ. ಕನ್ನಡದಂತ ಸಂದರ‍್ಬದಲ್ಲಿ ಇದು ಇನ್ನೂ ಅವಶ್ಯ. ಇದಕ್ಕೆ ಕಾರಣವೆಂದರೆ ಕನ್ನಡ ಬಾಶೆಯು ಬಹುದೊಡ್ಡ ಸಂಕೆಯ ಮಾತುಗರು ಬಳಸುವ ಬಾಶೆಯಾಗಿದೆ, ಬರಹದ ದಾಕಲೆಗಳು ಸುಮಾರು ಒಂದೂವರೆ ಸಾವಿರ ವರುಶಕ್ಕಿಂತಲೂ ಹೆಚ್ಚು ಕಾಲದಿಂದ ದೊರೆಯುತ್ತವೆ. ಈ ಬಾಶೆಯ ಸಮುದಾಯವು ಸಮಾಜದ ಬಹುತೇಕ ವಲಯಗಳಲ್ಲಿ ವ್ಯಾಪಕವಾದ ಚಟುವಟಿಕೆಗಳನ್ನು ಕಂಡಿದೆ. ಈ ಎಲ್ಲ ಕಾರಣದಿಂದಾಗಿ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯ. ಅಲ್ಲದೆ ಇಂದಿನ ಕಾಲದ ಮತ್ತು ನಾಳಿನ ಹಲವಾರು ಸಮಸ್ಯೆಗಳನ್ನು ಎದುರಿಸುವುದಕ್ಕೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಈ ತಿಳುವಳಿಕೆ ಅತ್ಯವಶ್ಯ. ಬೂತದ ಅರಿವು ನಾಳೆಯನ್ನು ಕಟ್ಟಲು, ಬೂತವೆಂಬ ಬೂತವು ಹೆಗಲೇರಿದಾಗಲೊಮ್ಮೆಯಾದರೂ ಬೂತದ ನೆರಳ ನಿವಾಳಿಸಲಾದರೂ ಇದು ಬೇಕು.

ಕನ್ನಡದಂತ ಬಾಶೆಗೆ ದೊಡ್ಡ ಪ್ರಮಾಣದ ಇತಿಹಾಸದ ಪಟ್ಯ ಇವೆ. ಸಾವಿರಾರು ಸಾಹಿತ್ಯ, ಶಾಸ್ತ್ರ ಕ್ರುತಿಗಳು ಮತ್ತು ಸುಮಾರು ಮೂವತ್ತು ಸಾವಿರದಶ್ಟು ಶಾಸನಗಳು ಇವೆ. ಕಾಲಾಂತರದಲ್ಲಿ ಬಂದಿರುವ ಬಾಶಿಕ ದಾಕಲೆಗಳನ್ನು ಅದ್ಯಯನ ಮಾಡುವುದರ ಮೂಲಕ ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಈ ಬಾಶಿಕ ಮಾಹಿತಿಯನ್ನು ಇತಿಹಾಸಿಕ ಬಾಶಾವಿಗ್ನಾನ ಮತ್ತು ತುಲನಿಕ ಬಾಶಾವಿಗ್ನಾನದ ತತ್ವಗಳನ್ನು ಅನ್ವಯಿಸಿ ಅದ್ಯಯನ ಮಾಡಿದಾಗ ಬಾಶಾ ಬೆಳವಣಿಗೆಯ ಚಿತ್ರಣ ಕಣ್ಣಿಗೆ ಕಾಣಬಹುದು. ಈ ಬಗೆಯ ಅದ್ಯಯನಗಳು ಸಾಮಾನ್ಯವಾಗಿ ಕನ್ನಡ ಮಾತುಗಳ ಸಮುದಾಯದ, ಕರ‍್ನಾಟಕ ಪ್ರದೇಶದ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಇದು ಮಾತ್ರವಲ್ಲದೆ ಇನ್ನೂ ಸಾಮಾನ್ಯವಾಗಿ ಸಮಾಜದ, ಇತಿಹಾಸದ ಬೆಳವಣಿಗೆಯ ಕ್ರಮಗಳನ್ನೂ ಅರಿಯಲೂ ಸಹಾಯವಾಗುತ್ತದೆ.

ಇನ್ನು ಕೆಲವು ಬಾಶೆಗಳಿಗೆ ಇತಿಹಾಸಿಕ ಪಟ್ಯಗಳು ದೊರೆಯದೆ ಇರಬಹುದು. ಉದಾಹರಣೆಗೆ ಕುಳು (ಕೊರವ) ಎಂಬ ಕರ‍್ನಾಟಕದ ಒಂದು ಮಹತ್ವದ ಬಾಶೆಗೆ ಬರಹದ ಯಾವುದೆ ದಾಕಲೆಗಳು ಸಿಗುವುದಿಲ್ಲ, ಇಂದಿನವರೆಗೂ ಕುಳು ಬಳಕೆಯ ಬಾಶೆಯಾಗಿಯೆ ಇದೆ. ಹೀಗೆ ಇತಿಹಾಸದ ದಾಕಲೆಗಳು ಸಿಗದಿರುವ ಬಾಶೆಗಳ ಇತಿಹಾಸವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದು ಪ್ರಶ್ನೆ. ಇಂದು ಬಳಕೆಯಲ್ಲಿರುವ ಬಾಶೆಯನ್ನು ಅದ್ಯಯನ ಮಾಡುವ ಮೂಲಕ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಬಾಶೆಯ ಒಳಗೆ ವಿವಿದ ಒಳನುಡಿಗಳು ಇದ್ದರೆ, ಇಂದು ಬಳಕೆಯಲ್ಲಿರುವ ಒಳನುಡಿಗಳನ್ನು ಪರಸ್ಪರ ತುಲನಿಕವಾಗಿ ಅದ್ಯಯನ ಮಾಡಿ ಅವುಗಳ ಹಿಂದಿನ ರೂಪವನ್ನು ಅಂದರೆ ಅವುಗಳ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಕನ್ನಡದಂತ ಬಾಶೆಯಲ್ಲಿ ಹಲವಾರು ಒಳನುಡಿಗಳು ಬಳಕೆಯಲ್ಲಿವೆ. ಇವುಗಳನ್ನು ತುಲನಿಕ ಮಾದರಿಯಲ್ಲಿ ಅದ್ಯಯನ ಮಾಡಿ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಸಾದ್ಯ ಮತ್ತು ಸುಲಬ. ಕೆಲವು ಸಂದರ‍್ಬದಲ್ಲಿ ಒಂದು ಬಾಶೆಯಲ್ಲಿ ದೊಡ್ಡ ಪ್ರಮಾಣದ ಒಳನುಡಿ ಬೇದವು ಕಾಣಿಸದೆ ಹೋದರೆ ಅಂತ ಸಂದರ‍್ಬದಲ್ಲಿ ಆ ಬಾಶೆಯ ಮಾಹಿತಿಯನ್ನು ಇತರ ಸಮೀಪಸಂಬಂದಿ ಬಾಶೆಗಳ ಮಾಹಿತಿಯನ್ನು ಇಟ್ಟುಕೊಂಡು ತುಲನಿಕವಾಗಿ ಅದ್ಯಯನ ಮಾಡಿ ಆ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದು ಸಾದ್ಯ. ಆದರೆ ಸಹಜವಾಗಿ ಇತಿಹಾಸಿಕ ದಾಕಲೆಗಳು ಇರುವ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದು ಹೆಚ್ಚು ಸಹಜವೆನಿಸುತ್ತದೆ. ಯಾಕೆಂದರೆ ಬಿನ್ನವಾದ ಕಾಲದ ಬಾಶಿಕ ಮಾಹಿತಿ ದೊರೆಯುವುದರಿಂದ.

ಇಲ್ಲಿ ಇನ್ನೊಂದು ಎಚ್ಚರವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಕನ್ನಡದಂತ ಬಾಶೆಯನ್ನು ಗಮನಿಸಿದಾಗ ಕನ್ನಡದಲ್ಲಿ ಹಲವಾರು ಒಳನುಡಿಗಳು ಇವೆ. ಈ ಒಳನುಡಿಗಳು ಬಹು ಹಿಂದೆಯೆ ಒಡೆದುಕೊಂಡಿರುವುದನ್ನು ಕಾಣಬಹುದು. ಇಂತ ಸಂದರ‍್ಬದಲ್ಲಿ ಒಂದು ಬಾಶೆಯಲ್ಲಿ ಹಲವಾರು ಬಿನ್ನ ಬೆಳವಣಿಗೆಗಳು ಇರಲು ಸಾದ್ಯ. ದೊರೆತಿರುವ ದಾಕಲೆಗಳು ಆ ಬಾಶೆಯ ಯಾವ ಬೆಳವಣಿಗೆಯನ್ನು ದಾಕಲಿಸಿವೆ ಎಂಬುದನ್ನೂ ಸ್ಪಶ್ಟವಾಗಿಸಿಕೊಳ್ಳಬೇಕು. ಇಲ್ಲದಿದ್ದರೆ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದು ಕಶ್ಟವಾಗುತ್ತದೆ.

ಇನ್ನು ಬಾಶೆಯ ಬೆಳವಣಿಗೆಯನ್ನು ಯಾವ ಯಾವ ಹಂತಗಳಲ್ಲಿ ಅರಿತುಕೊಳ್ಳಬಹುದು ಎಂಬುದನ್ನು ಗಮನಿಸಬಹುದು. ಬಾಶೆಯ ಬೆಳವಣಿಗೆಯನ್ನು ದ್ವನಿ, ಆಕ್ರುತಿಮಾ, ವಾಕ್ಯ, ಅರ‍್ತ ಈ ಎಲ್ಲ ಹಂತಗಳಲ್ಲಿ ಗಮನಿಸಲು ಸಾದ್ಯ. ಪ್ರತಿಯೊಂದು ಹಂತದಲ್ಲಿಯೂ ಬಾಶೆ ನಿರಂತರ ಬದಲಾವಣೆಗೆ ಒಳಗಾಗುತ್ತಿರುತ್ತದೆ.

ದೊರೆತಿರುವ ಪಟ್ಯಗಳನ್ನು ವಿವಿದ ರೀತಿಯಲ್ಲಿ ಅದ್ಯಯನ ಮಾಡಬೇಕು. ಮೂಲಬೂತವಾಗಿ ದೊರೆತಿರುವ ಸಾಹಿತ್ಯ ಮತ್ತು ಶಾಸ್ತ್ರ ಕ್ರುತಿಗಳಿಗೆ ವರ‍್ಣನಾತ್ಮಕ ವ್ಯಾಕರಣ ಮತ್ತು ನಿಗಂಟನ್ನು ಮಾಡಬೇಕು. ಹಾಗೆಯೆ ಸೂಕ್ತ ರೀತಿಯಲ್ಲಿ ಶಾಸನ ಬಾಶೆಗಳಿಗೂ ಇವುಗಳನ್ನು ತಯಾರಿಸಬೇಕು. ಮುಂದುವರೆದು ಸೂಕ್ತ ಕಾಲಗಟ್ಟದಂತೆ ಹೊಂದಿಸಿಕೊಂಡು ಈ ಬಾಶೆಗಳನ್ನು ಪರಸ್ಪರ ತುಲನಿಸಿ ನೋಡಬೇಕು. ಈ ವರ‍್ಣನಾತ್ಮಕ ವ್ಯಾಕರಣಗಳು ಇತಿಹಾಸಿಕ ಮತ್ತು ತುಲನಿಕ ವ್ಯಾಕರಣಗಳನ್ನು ತಯಾರಿಸಲು ಸಹಾಯಕವಾಗುತ್ತವೆ. ಈ ಇತಿಹಾಸಿಕ ವ್ಯಾಕರಣಗಳು ಸಾಮಾನ್ಯವಾಗಿ ಬಾಶೆಯ ಬೆಳವಣಿಗೆಯನ್ನು ಹೆಚ್ಚು ನಿಕರವಾಗಿ ವಿವರಿಸಬಹುದು. ನಿಗಂಟುಗಳ ತಯಾರಿಕೆಯಿಂದ ಪದಗಳು, ಪದರೂಪಗಳು, ಪದಗಳ ಅರ‍್ತ ಮೊದಲಾದ ಹಂತಗಳಲ್ಲಿ ಕಾಲಾಂತರದಲ್ಲಿ ಆದ ಬದಲಾವಣೆಗಳನ್ನು ಅರಿತುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ.

ಬಾಶೆಯ ಇತಿಹಾಸವನ್ನು ಅರಿತುಕೊಳ್ಳುವ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಎರಡು ನೆಲೆಯಲ್ಲಿ ಗಮನಿಸಬಹುದು. ಬಾಶೆಯ ಆಂತರಿಕ ರಾಚನಿಕ ಬದಲಾವಣೆ ಮತ್ತು ಸಮಾಜದ ಪ್ರಬಾವದಿಂದ ಬಾಶೆಯಲ್ಲಿ ಆಗುವ ಬದಲಾವಣೆ. ಈ ಎರಡೂ ಬಗೆಯ ಇತಿಹಾಸಿಕ ಬೆಳವಣಿಗೆಯ ಅರಿವು ಆ ಬಾಶಿಕ ಸಮುದಾಯದ ಬೆಳವಣಿಗೆಯನ್ನು ಕಟ್ಟಿಕೊಡುತ್ತದೆ ಇಲ್ಲವೆ ಅರಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಸಮಾಜದ ಪ್ರಬಾವದಿಂದ ಆದ ಬದಲಾವಣೆಗಳು ಬಾಶೆಯಲ್ಲಿ ವಿಬಿನ್ನ ರೀತಿಯಲ್ಲಿ ದಾಕಲಾಗಿರುತ್ತವೆ. ಹಾಗಾಗಿ ಈ ಬದಲಾವಣೆಗಳನ್ನು ಅರಿತುಕೊಳ್ಳುವುದು ಆ ಬಾಶಿಕ ಸಮುದಾಯದ ಸಮಾಜದ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಸಹಾಯಕ. ಇತರೇತರ ಮೂಲಗಳಿಗಿಂತ ಬಾಶೆಯ ಅದ್ಯಯನವು ಸಮಾಜದ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಆದಾರಗಳನ್ನು ಒದಗಿಸುತ್ತದೆ. ಸಾಹಿತ್ಯ, ರಾಜಕೀಯ, ವ್ಯಾಪರ-ಆರ‍್ತಿಕತೆ ಮೊದಲಾದ ವಲಯಗಳ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೂ ಇದು ಸಹಾಯಕ. ಹೀಗೆ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಹಲವಾರು ಆಯಾಮಗಳ ಅದ್ಯಯನಗಳು ಅವಶ್ಯ.

ಇದುವರೆಗೆ ಕನ್ನಡ ಬಾಶೆಯ ಇತಿಹಾಸಿಕ ಪಟ್ಯಗಳ ಅದ್ಯಯನ ತುಂಬ ಸೀಮಿತ ಹಂತದಲ್ಲಿದೆ. ಆಗಿರುವ ಅದ್ಯಯನಗಳೂ ವರ‍್ಣನಾತ್ಮಕ ಹಂತಕ್ಕೆ ಸೀಮಿತವಾಗಿವೆ. ಬಾಶಿಕ ವಲಯದಾಚೆಗೆ ಬಂದು ಸಾಮಾಜಿಕ ಹಿನ್ನೆಲೆಯಿಂದ ಬಾಶೆಯ ಬೆಳವಣಿಗೆಯನ್ನು ಅದ್ಯಯನ ಮಾಡುವ ಪ್ರಯತ್ನಗಳು ಇಲ್ಲ. ಅದರೊಟ್ಟಿಗೆ ತುಲನಿಕ ಅದ್ಯಯನಗಳೂ ಕನ್ನಡದಲ್ಲಿ ಇಲ್ಲವೆ ಇಲ್ಲ. ಹೀಗಾಗಿ ಕನ್ನಡ ಬಾಶೆಯ ಇತಿಹಾಸ ಇಲ್ಲವೆ ಬೆಳವಣಿಗೆ ಬಗೆಗೆ ಸದ್ಯ ಇರುವ ತಿಳುವಳಿಕೆ ತುಂಬಾ ಮಿತಿಯಿಂದ ಕೂಡಿದೆ.

ಇಂದಿನ ಒಳನುಡಿಗಳ ಅದ್ಯಯನ ವರ‍್ಣನಾತ್ಮಕವಾಗಿ ದೊಡ್ಡ ಸಂಕೆಯಲ್ಲಿ ಕನ್ನಡದಲ್ಲಿ ನಡೆದಿದೆಯಾದರೂ ಗುಣಾತ್ಮಕವಾದ ಇನ್ನೂ ಹೆಚ್ಚಿನ ಅದ್ಯಯನಗಳ ಅವಶ್ಯಕತೆ ಇದೆ. ಈ ಒಳನುಡಿ ಅದ್ಯಯನಗಳನ್ನು ತುಲನಿಕವಾಗಿ ಅದ್ಯಯನ ಮಾಡುವ ಅವಶ್ಯಕತೆ ಇದೆ. ಈ ತುಲನಿಕ ಅದ್ಯಯನ ಬಾಶೆಯ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಒಳನುಡಿ ನಿಗಂಟಗಳೂ ಹೀಗೆ ಹೆಚ್ಚು ಸಹಾಯಕ. ಕನ್ನಡದ ಪದೋತ್ಪತ್ತಿ ಕೋಶ (ಪದಗಳ ಮೂಲ ಮತ್ತು ಬೆಳವಣಿಗೆಯನ್ನು ತಿಳಿದುಕೊಳ್ಳುವ ಆಶಯದ ನಿಗಂಟು), ಕನ್ನಡ ಪದವಿಸ್ತರಣ ಕೋಶ (ಪದಗಳ ಅರ‍್ತವಿಸ್ತರಣೆ ತೋರಿಸುವ ಆಶಯದ ನಿಗಂಟು) ಮೊದಲಾದವನ್ನು ಮಾಡಬೇಕು. ಇವು ನೇರವಾಗಿ ಇತಿಹಾಸಿಕ ಅದ್ಯಯನಗಳಿಗೆ ಆಕರವಾಗುತ್ತವೆ. ಸಮಾಜದ ಬಿನ್ನ ವಲಯಗಳಲ್ಲಿನ ಬೆಳವಣಿಗೆಯನ್ನು ಇವುಗಳ ಮೂಲಕ ಅರಿತುಕೊಳ್ಳುವುದು ಸಾದ್ಯ. ಸಮಾಜದ ವಿವಿದ ವಲಯಗಳಲ್ಲಿ ಪದಕೋಶಗಳನ್ನು ತಯಾರಿಸುವುದೂ ಇಂತ ಮಹತ್ವದ ಕೆಲಸಗಳಲ್ಲಿ ಒಂದು.

ಈ ಅಂಕಣದ ಹಿಂದಿನ ಬರೆಹ:
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...