ಬಿಡುಗಡೆಯ ಹಾದಿಯ ಪಿಸುಮಾತು It's Okay to Not Be Okay(Korean Drama)

Date: 15-10-2021

Location: ಬೆಂಗಳೂರು


‘ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವುದು ಬಾಲ್ಯದ ಅನುಭವಗಳ ಆಧಾರದ ಮೇಲೆ’ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ‘ಬೆಳ್ಳಕ್ಕಿ ಸಾಲು’ ಅಂಕಣದಲ್ಲಿ  ‘It's Okay to Not Be Okay’ ಎಂಬ ಕೊರಿಯನ್ ಡ್ರಾಮವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. 

ಅವಳು ಮಕ್ಕಳ ಕಥೆಗಳನ್ನು ಬರೆಯುವ ಪ್ರಸಿದ್ಧ ಲೇಖಕಿ; ಜೊತೆಗೊಬ್ಬ ಆಗಾಗ ಮಿತಿಮೀರುವ ಅವಳ ನಡವಳಿಕೆಯನ್ನು ಸಂಭಾಳಿಸುವ ಪೋಷಕನಂಥ ಪ್ರಕಾಶಕ! ಅವನು ಮನೋವೈದ್ಯಕೀಯ ಚಿಕಿತ್ಸಾಲಯದಲ್ಲಿ ಆರೈಕೆದಾರ; ಅವನಿಗೊಬ್ಬ ಬೆಳವಣಿಗೆಯಲ್ಲಿ ಲೋಪವಿರುವ ಮಗುವಿನಂಥ ಅಣ್ಣ ಹಾಗೂ ಅವನು ಹೋದಲ್ಲೆಲ್ಲ ಹಿಂಬಾಲಿಸುವ ಜೀವದ ಗೆಳೆಯ! ಮತ್ತೊಬ್ಬಳು ಅವನ ಕಷ್ಟ-ಸುಖಗಳಿಗೆ ಒದಗಿಬರುವ ಮೃದುಸ್ವಭಾವದ ಗೆಳತಿ ಮತ್ತು ಪ್ರೀತಿ-ಮಮತೆಗಳನ್ನೇ ಬದುಕಾಗಿಸಿಕೊಂಡ ಗೆಳತಿಯ ಅಮ್ಮ! ಹೀಗೇ ಒಂದಕ್ಕೊಂದು ಹೊಂದಾಣಿಕೆಯೇ ಆಗದಂತೆ ಮೇಲ್ನೋಟಕ್ಕೆ ಭಾಸವಾಗುವ ಭಿನ್ನ ವ್ಯಕ್ತಿತ್ವಗಳ ನಡುವಿನ ಅಪರೂಪದ ಪ್ರೇಮಕಥೆ It's Okay to Not Be Okay.

ಈ ಶೀರ್ಷಿಕೆಯಲ್ಲಿಯೇ ಒಂದು ವಿಶಿಷ್ಟವಾದ ಸಮಾಧಾನವಿದೆ. ಎಲ್ಲವೂ ಸರಿಯಾಗಿರುವ ತೃಪ್ತಿಕರವಾದ ವಾತಾವರಣದಲ್ಲಿ ಪ್ರೀತಿಯೊಂದು ಹುಟ್ಟಿಕೊಳ್ಳುವುದು, ಹಾಗೆ ಹುಟ್ಟಿಕೊಂಡ ಪ್ರೀತಿ ಸಣ್ಣಪುಟ್ಟ ಸವಾಲುಗಳನ್ನೆದುರಿಸಿ, ಕ್ರಮೇಣ ಸರ್ವಸಮ್ಮತವಾಗಿ ಸುಖಾಂತ್ಯ ಹೊಂದುವುದು ಹೊಸದೇನಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಎಲ್ಲವೂ ಅಯೋಮಯವಾದ ಅಸ್ತವ್ಯಸ್ತ ಪರಿಸ್ಥಿತಿಯಲ್ಲಿ ಹುಟ್ಟಿ, ದೃಢವಾದ ಮಾನಸಿಕ ತಯಾರಿಯನ್ನು ಅಪೇಕ್ಷಿಸುವ ಸಂಬಂಧವೊಂದು ಸಕಲ ಹೊಂದಾಣಿಕೆಗಳೊಂದಿಗೆ ಬಲಗೊಳ್ಳುತ್ತ ಹೋಗುವುದಿದೆಯಲ್ಲ, ಅಲ್ಲಿ ಪ್ರೀತಿಯ ನಿಜವಾದ ಸೊಬಗು ಕಾಣಸಿಗುತ್ತದೆ. ಆ ಸೌಂದರ್ಯದ ಅಂತಃಕರಣವೇ ನೆರಳಾಗಿ, ಪ್ರತಿಬಿಂಬವಾಗಿ, ನಮ್ಮನ್ನು ನಾವು ಕಂಡುಕೊಳ್ಳುವ ಶಕ್ತಿಯಾಗಿ ಬದುಕುಗಳನ್ನು ಸಲಹುತ್ತದೆ. ನೀನು ಯಾರೇ ಆಗಿರಲಿ, ಯಾವುದೇ ಪರಿಸ್ಥಿತಿಯಲ್ಲಿರಲಿ, ನಾನು ನಿನ್ನನ್ನು ಪ್ರೀತಿಸಬಲ್ಲೆ ಎನ್ನುವಂತಹ ಮಾತನ್ನು ಹೇಳುವವನಿಗೂ ಹಾಗೂ ಅದನ್ನು ಸ್ವೀಕರಿಸುವವನಿಗೂ ಅಗಾಧವಾದ ಮನೋಬಲದ ಅಗತ್ಯವಿದೆ. ಎಲ್ಲವೂ ಎಲ್ಲ ಕಾಲದಲ್ಲಿಯೂ ಸರಿಯಾಗಿಯೇ ಇರಬೇಕೆಂದೇನಿಲ್ಲ ಎನ್ನುವ ಸಮಾಧಾನವನ್ನು ನೋಡುಗರಿಗೂ ದಾಟಿಸುವ, ಇನ್ನೇನು ಎಲ್ಲ ಮುಗಿದೇಹೋಯಿತು ಎನ್ನುವಷ್ಟರಲ್ಲಿ ಸುಂದರವಾದ ತಿರುವಿನೊಂದಿಗೆ ಮುಂದುವರಿಯುತ್ತ ಹೋಗುವ ಕಥಾವಸ್ತು ಸರಣಿಯುದ್ದಕ್ಕೂ ಆಪ್ತವಾಗುತ್ತ ಹೋಗುತ್ತದೆ.

ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವುದು ಬಾಲ್ಯದ ಅನುಭವಗಳ ಆಧಾರದ ಮೇಲೆ. ಬಾಲ್ಯದ ಯಾವುದೋ ಒಂದು ಕಹಿಘಟನೆ ಅಥವಾ ಮತ್ತೆ ಮತ್ತೆ ಮನಸ್ಸಿಗಿಳಿದ ನಕಾರಾತ್ಮಕ ಸಂವಹನಗಳು ಜೀವನದುದ್ದಕ್ಕೂ ಮೀರಲಾಗದಂತಹ ದೌರ್ಬಲ್ಯವಾಗಿ ಉಳಿದುಹೋಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಆಗುವುದೂ ಅದೇ. ನೀನು ನನ್ನ ಸೃಷ್ಟಿಯಾಗಿರುವ ಒಂದೇ ಒಂದು ಕಾರಣಕ್ಕಾಗಿ ನಿನ್ನ ಬದುಕಿನ ಧ್ಯೇಯೋದ್ದೇಶಗಳು ನಾನು ನಿರ್ದೇಶಿಸಿದಂತೆಯೇ ಇರಬೇಕು ಎಂದು ಅಪೇಕ್ಷಿಸುವ ತಾಯಂದಿರಿಬ್ಬರು ಮಕ್ಕಳ ಬದುಕಿನ ಸ್ಥಿತಿಗತಿಗಳನ್ನೇ ಬದಲಾಯಿಸಿಬಿಡುತ್ತಾರೆ. ಅವಳು ಹತೋಟಿಯಿಲ್ಲದ ಬೇಕಾಬಿಟ್ಟಿ ವರ್ತನೆಯಿಂದಾಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡರೆ, ಅವನು ತನ್ನೆಲ್ಲ ಕನಸುಗಳನ್ನು ತ್ಯಾಗಮಾಡಿ ಅಲೆಮಾರಿ ಜೀವನ ಸಾಗಿಸುತ್ತಿರುತ್ತಾನೆ; ಅವಳಿಗೆ ಬಯಸಿದ್ದೆಲ್ಲವೂ ಸಿಗಲೇಬೇಕೆಂಬ ಕೆಟ್ಟ ಹಠವಾದರೆ, ಅವನು ಅತಿಯಾದ ನಿಗ್ರಹಕ್ಕೆ ತನ್ನನ್ನು ತಾನು ನೂಕಿಕೊಂಡು ಭಾರವಾದ ಹೃದಯದೊಂದಿಗೆ ಬದುಕುತ್ತಿರುವವನು. "ನೀನೊಂದು ಟೊಳ್ಳು ತಗಡಿನ ಡಬ್ಬಿ" ಎಂದು ಪರಸ್ಪರರನ್ನು ದೂಷಿಸಿಕೊಳ್ಳುತ್ತಲೇ, ಖಾಲಿಜಾಗವನ್ನೆಲ್ಲ ಭರಪೂರ ಪ್ರೀತಿಯಿಂದ ತುಂಬಿಕೊಳ್ಳುವ ಅವರಿಬ್ಬರು ಯಾವ ತರ್ಕಕ್ಕೂ ನಿಲುಕದೇ ನಮ್ಮವರೂ ಆಗಿಬಿಡುತ್ತಾರೆ. ಅವಳು ತನ್ನ ಕಥೆಯೊಂದರಲ್ಲಿ ಹೇಳುವಂತೆ: ಯಾತನಾಮಯವಾದ, ಗಾಢವಾದ ಪಶ್ಚಾತ್ತಾಪದ, ಗಾಯಗೊಳಿಸಿದ ಅಥವಾ ಗಾಯಗೊಂಡ, ತಿರಸ್ಕರಿಸಲ್ಪಟ್ಟ ನೆನಪುಗಳನ್ನು ಹೃದಯದಲ್ಲಿ ಮುಚ್ಚಿಟ್ಟುಕೊಂಡವರೇ ಬಲಶಾಲಿಗಳೂ, ಅನುರಕ್ತರೂ, ವಿನಮ್ರರೂ ಆಗಬಲ್ಲರು ಹಾಗೂ ಸಂತೋಷದ ಅನುಭವವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳಬಲ್ಲರು. ಯಾವ ಕಹಿನೆನಪುಗಳೂ ನಿಷಿದ್ಧವಲ್ಲ; ಅವುಗಳನ್ನು ಅಧೀನಪಡಿಸಿಕೊಳ್ಳುತ್ತ ಹೋದಾಗಲೇ ಬಿಡುಗಡೆಯ ಹಾದಿ ತೆರೆದುಕೊಳ್ಳಬಲ್ಲದು.

ಅವಳು ಹುಟ್ಟಿದ್ದೇ ಹಾಗೆ! ಎಲ್ಲ ಅಲಂಕಾರ-ಆಡಂಬರಗಳಿದ್ದೂ ಕಣ್ಣುಗಳಲ್ಲಿ ಜೀವವಿಲ್ಲ; ಅಂತಃಸಾಕ್ಷಿಯ ಅರಿವಿಲ್ಲದ ಅಸ್ತವ್ಯಸ್ತ ಮನಃಸ್ಥಿತಿಯ ವಿಲಕ್ಷಣ ಪ್ರವೃತ್ತಿಯ ಮುದ್ದಾದ ಹೆಣ್ಣುಮಗಳು. ತನ್ನನ್ನು ಹೊರತುಪಡಿಸಿ ಉಳಿದವರನ್ನೆಲ್ಲ ಕಡೆಗಣಿಸುವವಳು. ಶಾಪಗ್ರಸ್ತ ಅರಮನೆಯಲ್ಲಿ ವಾಸಿಸುವ ಪೆಡಂಭೂತವೆಂದೇ ಎಲ್ಲರೂ ಅವಳನ್ನು ಭಾವಿಸುವುದು. ಶ್ರೀಮಂತಿಕೆಯಿದ್ದೂ ನೆಮ್ಮದಿಯಿಲ್ಲದ ತಂದೆತಾಯಿಗಳಿಗೆ ಹುಟ್ಟಿದ ಏಕೈಕ ಮಗಳಾಕೆ; ಏಕಾಂಗಿಯಾಗಿ ಬೆಳೆದು ಒಂಟಿತನದ ವೈಪರೀತ್ಯಗಳನ್ನು ತನ್ನದಾಗಿಸಿಕೊಂಡವಳು. ಅವನೋ ಬಡತನದಲ್ಲಿ ಹುಟ್ಟಿ, ತಂದೆಯನ್ನು ಕಳೆದುಕೊಂಡು, ಆಟಿಸಂನಿಂದ ಬಳಲುತ್ತಿರುವ ಅಣ್ಣನ ಜವಾಬ್ದಾರಿಯನ್ನೂ ತನ್ನದಾಗಿಸಿಕೊಂಡು, ಕೊನೆಗೆ ತಾಯಿಯನ್ನೂ ಕಳೆದುಕೊಂಡು ಕನಸುಗಳೇ ಇಲ್ಲದಂತೆ ಬದುಕುತ್ತಿರುವವನು; ಕಣ್ಣುಗಳಲ್ಲಿ ನೋವು, ಕೋಡಂಗಿಯಂತೆ ನಗು, ಆರ್ದ್ರಹೃದಯ! ಅವರಿಬ್ಬರ ನೋವನ್ನೂ ಕೊನೆಗಾಣಿಸುವಂತೆ, ಒಂಟಿತನದ ಸಂಕಷ್ಟಕ್ಕೆ ಉತ್ತರವೆನ್ನುವಂತೆ ಅಲ್ಲೊಂದು ಪ್ರೀತಿ ಹುಟ್ಟಿಕೊಳ್ಳುತ್ತದೆ; ಹುಟ್ಟು ಹೇಗಿದ್ದರೇನಂತೆ, ಬದುಕು ನಮ್ಮ ಕೈಯಲ್ಲಿದೆಯೆನ್ನುವ ನಂಬಿಕೆಯೇ ಆ ಪ್ರೀತಿಯನ್ನು ಸಲಹತೊಡಗುತ್ತದೆ.

ಅವಳ ಸ್ಪರ್ಶಕ್ಕೆ ಅವನು ಮೆತ್ತಗಾಗತೊಡಗುತ್ತಾನೆ; ಆಷಾಢಭೂತಿಯಂತೆ ಬದುಕುತ್ತಿದ್ದವನು ನಗು-ಉಲ್ಲಾಸಗಳನ್ನು ತನ್ನದಾಗಿಸಿಕೊಳ್ಳತೊಡಗುತ್ತಾನೆ. ಅಮ್ಮ ತನ್ನೊಳಗೆ ಉಳಿಸಿಹೋದ ಅಸ್ವಸ್ಥತೆಯ ತುಣುಕುಗಳನ್ನೆಲ್ಲ ತುಂಡರಿಸಿ ಬಿಸಾಕಲು ಯತ್ನಿಸುವ ಅವಳು ಸರಪಳಿಯಿಂದ ಕಳಚಿಕೊಂಡ ಆನಂದವನ್ನು ಅನುಭವಿಸುತ್ತಾಳೆ. "ನನ್ನನ್ನು ಅರ್ಥಮಾಡಿಕೊಳ್ಳಬಲ್ಲೆ ಎನ್ನುವ ಭ್ರಮೆಯನ್ನು ಬಿಟ್ಟುಬಿಡು; ಸಾಯುವವರೆಗೂ ನಿನಗದು ಸಾಧ್ಯವಿಲ್ಲ" ಎನ್ನುವಂತಹ ಕಟುನುಡಿಯನ್ನು ವಿನಿಮಯ ಮಾಡಿಕೊಂಡವರು ಪರಸ್ಪರರ ಪ್ರಪಂಚವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಲಾರಂಭಿಸುತ್ತಾರೆ. ಇಷ್ಟಪಟ್ಟಿದ್ದನ್ನೆಲ್ಲ ತನ್ನದಾಗಿಸಿಕೊಳ್ಳುವ ಅವಳ ಹಠ ಹಂತಹಂತವಾಗಿ ಪ್ರೀತಿಯ ರೂಪವನ್ನು ಪಡೆದುಕೊಳ್ಳುತ್ತದೆ. ತನ್ನ ಪ್ರೀತಿಗೆ ತಕ್ಕ ಪ್ರಮಾಣದ ಯಾವ ಸೌಕರ್ಯವನ್ನೂ ಆತ ಒದಗಿಸಲಾರನೆಂಬ ಅರಿವಿದ್ದೋ ಇಲ್ಲದೆಯೋ ಗಾಢಾನುರಕ್ತಳಾಗುವ ಅವಳ ಮುಗ್ಧತೆ ಮನಸ್ಸನ್ನು ಕಲಕಿದರೆ, ಅಣ್ಣನೊಂದಿಗೆ ಪ್ರೀತಿಸಿದವಳನ್ನೂ ಜೀವನಪೂರ್ತಿ ಮಗುವಿನಂತೆ ಜೋಪಾನ ಮಾಡಬೇಕೆನ್ನುವುದು ಗೊತ್ತಿದ್ದೂ ಜೊತೆಯಾಗುವ ಅವನ ಹೃದಯವಂತಿಕೆಗೆ ಮನಸ್ಸು ಕರಗುತ್ತದೆ. ಎಲ್ಲ ನಿಗ್ರಹ, ಬಂಧನ, ಭಾವಶೂನ್ಯತೆ, ನೋವಿನ ಗುರುತುಗಳು ಕ್ರಮೇಣ ಕಾಣೆಯಾಗುತ್ತ ಕೇವಲ ಪ್ರೀತಿ-ವಿಶ್ವಾಸಗಳ ಚಿತ್ರಣವೊಂದು ಕಣ್ಣೆದುರು ತೆರೆದುಕೊಳ್ಳುತ್ತದೆ. "ಬಹಳ ಸಮಯದವರೆಗೆ ಬಂಧನದಲ್ಲಿಯೇ ಉಳಿದುಹೋದ ನಾನು ಬಂಧಮುಕ್ತನಾಗುವುದು ಹೇಗೆಂದು ಮರೆತೇಹೋಗಿದ್ದೇನೆ" ಎನ್ನುವ ಅವಳ ಕಥೆಯ ಪಾತ್ರವೊಂದು ಕಾಲ್ಪನಿಕ ಚೌಕಟ್ಟಿನಿಂದ ಹೊರಬಂದು, ಉಲ್ಲಾಸದ ಬದುಕಿನೆಡೆಗೆ ನಮ್ಮನ್ನು ಕೈಹಿಡಿದು ಕರೆದೊಯ್ಯುತ್ತಿರುವಂತೆ ಭಾಸವಾಗುತ್ತದೆ.

ಇದೊಂದು ಪ್ರೇಮಕಥೆಯೇ ಆಗಿದ್ದರೂ ಅತಿರೇಕವೆನ್ನಿಸಬಹುದಾದ ಪ್ರೇಮಾಲಾಪಗಳು ಇಲ್ಲಿಲ್ಲ; ನಾಯಕ-ನಾಯಕಿಯರನ್ನು ಹೊರತುಪಡಿಸಿ ಉಳಿದೆಲ್ಲ ಪಾತ್ರಗಳೂ ಗೌಣವಾಗಿಬಿಡುವ ದುರ್ಬಲತೆಯೂ ಕಾಣಿಸುವುದಿಲ್ಲ. ಪಾತರಗಿತ್ತಿಯಿಂದ ಹಿಡಿದು ಕೆಂಪು ಚಪ್ಪಲಿ, ಬಾಚಣಿಗೆ, ಹೂವಿನ ಗುಚ್ಛ, ಫ್ಯಾಮಿಲಿ ಫೋಟೋ ಎಲ್ಲವೂ ಇಲ್ಲಿ ಮುಖ್ಯವಾಗುತ್ತವೆ. ಮನೋವೈದ್ಯಕೀಯ ಆಸ್ಪತ್ರೆಯ ಒಂದೊಂದು ಘಟನೆಗಳೂ ವಾಸ್ತವ ಪ್ರಪಂಚದ ನೈಜಚಿತ್ರಣವನ್ನು ತೆರೆದಿಡುತ್ತ ಎಲ್ಲ ಅಸ್ತವ್ಯಸ್ತತೆಗಳ ನಡುವೆಯೂ ಬದುಕು ಚಲಿಸುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಪಾಲಕರಿಂದ ತಿರಸ್ಕೃತನಾದ ಮಗ, ಮಗಳನ್ನು ಕಳೆದುಕೊಂಡ ತಾಯಿ, ಕುಡುಕ ಗಂಡನಿಂದ ಶೋಷಣೆಗೆ ಒಳಗಾದ ಹೆಣ್ಣುಮಗಳು, ಕುಡಿತದ ಚಟದಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುವ ಯುವಕ, ತನ್ನ ತಂದೆ ಕೆಟ್ಟವನಲ್ಲ ಮಾನಸಿಕ ರೋಗಿಯಷ್ಟೇ ಎಂದು ಅಳುವ ಮಗು ಹೀಗೇ ಕೊನೆಯೇ ಇಲ್ಲದ ನೋವಿನ ಆರೈಕೆಗೆ ನಿಂತ ಸಿಬ್ಬಂದಿವರ್ಗ; ಎಲ್ಲರ ನೋವು-ನಲಿವುಗಳಿಗೂ ಸ್ಪಂದಿಸುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ! ಒಂದೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವ ಮತ್ತು ಉದ್ದೇಶ. ಒಂದೊಂದು ಹನಿ ಕಣ್ಣೀರಲ್ಲೂ ನೂರೆಂಟು ನೋವು; ಪ್ರತಿ ನಗುವಿನಲ್ಲೂ ಕಾಣಸಿಗುವ ಧನ್ಯತೆಯ ಭಾವ. ನೀನು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೆ ಎಂದು ಅಣ್ಣ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ನಿಂತು ಕೂಗಿ ಹೇಳುವಾಗ, ತಮ್ಮನ ದುಃಖ ನಮ್ಮನ್ನೂ ತಾಕಿ, ಮಾನಸಿಕ ಕಾಯಿಲೆಯೊಂದು ಸೃಷ್ಟಿಸಬಹುದಾದ ಒತ್ತಡದ ವಾತಾವರಣದ ಸ್ಪಷ್ಟ ಕಲ್ಪನೆಯೊಂದು ನಿಟ್ಟುಸಿರನ್ನು ಹುಟ್ಟಿಸುತ್ತದೆ.

ಸೃಷ್ಟಿಯಲ್ಲಿ ಎಲ್ಲವೂ ಸುಂದರವಾಗಿ, ಸಮಂಜಸವಾಗಿ ಇದ್ದಿದ್ದರೆ ಬದುಕು ಹೇಗಿರುತ್ತಿತ್ತೋ ಗೊತ್ತಿಲ್ಲ. ಅಹಿತಕರವಾದ, ಅಸಮರ್ಪಕವಾದ ಅವೆಷ್ಟೋ ಸಂಗತಿಗಳು ಇಲ್ಲಿ ಎಲ್ಲೆಲ್ಲಿಯೂ ಇವೆ. ನೋವು-ಸಂಕಟಗಳಿಗೆ ಕೊನೆಯೆಂಬುದಿಲ್ಲ; ಯಾವ ಜೀವವೂ ಯಾತನೆಯಿಂದ ಹೊರತಲ್ಲ. "ಪ್ರತಿಯೊಬ್ಬ ವ್ಯಕ್ತಿಯೂ ಸಂಭಾವಿತನೂ ಹಾಗೆಯೇ ದುಷ್ಟನೂ ಆಗಿರುತ್ತಾನೆ; ನಾವೆಲ್ಲರೂ ಒಳ್ಳೆತನ ಹಾಗೂ ಕೆಟ್ಟತನ ಈ ಎರಡೂ ಸ್ವಭಾವ ಲಕ್ಷಣಗಳೊಂದಿಗೇ ಬದುಕುತ್ತಿರುತ್ತೇವೆ" ಎನ್ನುವ ಆಸ್ಪತ್ರೆಯ ವ್ಯವಸ್ಥಾಪಕ ಅದೆಷ್ಟು ಬಗೆಯ ಸಂಕಟಗಳನ್ನು ಕಂಡಿರಲಿಕ್ಕಿಲ್ಲ! "ಯಾವ ಕಾರಣಕ್ಕಾಗಿ ನೀನಿನ್ನೂ ಬದುಕುಳಿದಿದ್ದೀಯಾ? ಸಾಯಿ" ಎಂದು ಕಿರುಚುತ್ತ ಮಗಳನ್ನೇ ಕೊಲ್ಲಲು ಬರುವ ತಂದೆಯ ಮಾನಸಿಕ ಕಾಯಿಲೆಯ ತೀವ್ರತೆಯನ್ನು ಊಹಿಸಲಾದರೂ ಸಾಧ್ಯವಾದೀತೇ! ಎಲ್ಲರ ಬದುಕುಗಳನ್ನೂ ಸುಖ-ಸಂತೋಷಗಳ ಸೆರಗಿನಲ್ಲಿ ಬಚ್ಚಿಟ್ಟು, ಬಿಚ್ಚಿಬೀಳದಂತೆ ಕಾಪಾಡುವ ಸೇಫ್ಟಿ ಪಿನ್ನೊಂದು ಸೃಷ್ಟಿಕರ್ತನ ಬಳಿಯಾದರೂ ಇರಬಾರದಿತ್ತೇ! ಪ್ರೀತಿ-ತ್ಯಾಗಗಳು ಮಾತ್ರವೇ ಸಂಬಂಧಗಳನ್ನು ಸಲಹುವ ಸಾಧನಗಳಾದರೆ ಆ 'ಅವನು' ಎಲ್ಲೆಲ್ಲಿಯೂ ಕಾಣಸಿಗುವಂತಾಗಲಿ. ಅತಿರೇಕದ ವರ್ತನೆಯಲ್ಲಿಯೇ ಎಲ್ಲ ಮಾನಸಿಕ ತುಮುಲಗಳಿಗೆ ಪರಿಹಾರವಿದೆಯೆಂದಾದರೆ 'ಅವಳು' ಹಾಗೆಯೇ ಇರಲಿ. ಶಾಪಗ್ರಸ್ತ ಅರಮನೆಗಳೆಲ್ಲವೂ ಆದಷ್ಟು ಬೇಗ ಶಾಪದಿಂದ ಬಿಡುಗಡೆ ಪಡೆದು, ಅಲ್ಲೊಂದು ಪ್ರೀತಿ-ವಾತ್ಸಲ್ಯಗಳ ಪಿಸುಮಾತಿನ ಹೊಸಕಥೆ ಹುಟ್ಟಿಕೊಳ್ಳಲಿ. 

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...