ಚಲನಚಿತ್ರ - ಸಾಹಿತ್ಯದ ಸಂಬಂಧ ತೆಳುವಾಗುತ್ತಿದೆಯೇ?

Date: 12-08-2022

Location: ಬೆಂಗಳೂರು


ಬೆಂಗಳೂರಿನ ಅಂತರಾಷ್ಟ್ರೀಯ ಕಿರುಚಿತ್ರ ಉತ್ಸವದ ಅಂಗವಾಗಿ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್‌ ಸೊಸೈಟಿ ಆವರಣದಲ್ಲಿ ಬುಕ್ ಬ್ರಹ್ಮ ಸಹಯೋಗದಲ್ಲಿ ಶುಕ್ರವಾರದಂದು ಕಿರುಚಿತ್ರೋತ್ಸವ ಹಾಗೂ ಸ್ಕ್ರಿಪ್ಟ್‌ನಲ್ಲಿ ಸಾಹಿತ್ಯ ಕಡೆಗಣನೆಗೆ ಒಳಗಾಗಿರುವುದು ಏಕೆ? ಎಂಬ ವಿಷಯದ ಕುರಿತಾಗಿ ಸಂವಾದ ಕಾರ್ಯಕ್ರಮವು ಲೇಖಕ ಅಭಿಷೇಕ್ ಅಯ್ಯಂಗಾರ್ ನೇತೃತ್ವದಲ್ಲಿ ನಡೆಯಿತು.

ಲೇಖಕ ಅಭಿಷೇಕ್ ಅಯ್ಯಂಗಾರ್ : ಕನ್ನಡ ಸಿನಿಮಾದಲ್ಲಿ ನಾವು ಸಾಹಿತ್ಯದ ಛಾಪನ್ನು ಕಳೆದುಕೊಳ್ಳುತ್ತಿದ್ದೇವೆಯೇ?

ಸಿನಿಮಾಗಳ ಸಂಖ್ಯೆಯ ಮುಖೇನ ಸಾಹಿತ್ಯದ ಛಾಪನ್ನು ಅರಿಯಬಹು‌ದು: ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ, ಕಳೆದ ಮೂರು ವರ್ಷದ ಸಿನಿಮಾದ ಲೆಕ್ಕಾಚಾರವನ್ನು ಮಾಡಿದಾಗ ನಾವು ಗಮನಿಸಬಹುದು ಕನ್ನಡದ 1000 ಸಿನಿಮಾಗಳು ಸೆನ್ಸಾರ್ ಆಗಿದ್ದನ್ನು ನೋಡಬಹುದು. ಆ ಒಂದು ಸಾವಿರ ಸಿನಿಮಾಗಳಲ್ಲಿ ಕೇವಲ 40 ಸಿನಿಮಾಗಳನ್ನು ಅಂದಾಜಿಗೆ ಕಾದಂಬರಿ ಆಧಾರಿತ ಸಿನಿಮಾಗಳೆಂದು ಹೇಳಬಹುದು. ಉಳಿದ 960 ಚಿತ್ರಗಳು ಸಿನಿಮಾಕ್ಕಾಗಿಯೇ ರಚನೆಯಾದವುಗಳು. ಆದ್ದರಿಂದ ಇದರಿಂದಲೇ ಇವತ್ತಿನ ಕನ್ನಡ ಸಿನಿಮಾದಲ್ಲಿ ಸಾಹಿತ್ಯದ ಛಾಪು ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಾವು ಅರಿಯಬಹುದಾಗಿದೆ.

ಕನ್ನಡ ಸಿನಿಮಾಗಳು ನಿಜವಾಗಿಯೂ ಕನ್ನಡ ಸಿನಿಮಾಗಳಾಗಿಯೇ ಉಳಿದಿದೆಯೇ: ರಘುನಾಥ ಚ.ಹ ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದರು; ಕನ್ನಡ ಸಿನಿಮಾ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಜೊತೆಗಿನ ಬಾಂಧವ್ಯ ಹಾಗೂ ಕನ್ನಡದ ಜೊತೆಗಿನ ಬಾಂದವ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಬಹು ಮುಖ್ಯವಾಗಿದೆ. ಕನ್ನಡ ಸಿನಿಮಾಗಳು ನಿಜವಾಗಿಯೂ ಕನ್ನಡ ಸಿನಿಮಾಗಳಾಗಿಯೇ ಒಳಿದಿದೆಯೇ ಅಥವಾ ಉಳಿಯುತ್ತಿದೆಯೇ ಎನ್ನುವುದು ಪ್ರಮುಖವಾಗಿ ನನಗೆ ಕಾಡುವ ಪ್ರಶ್ನೆಯಾಗಿದೆ .

ಸಿನಿಮಾ ಹಾಗೂ ಸಾಹಿತ್ಯ ಎರಡು ಅಭಿವ್ಯಕ್ತಿ ಮಾಧ್ಯಮ: ಮಂಸೋರೆ; ಸಿನಿಮಾ ಹಾಗೂ ಸಾಹಿತ್ಯ ಎರಡನ್ನು ಅಭಿವ್ಯಕ್ತಿ ಮಾಧ್ಯಮ ಎನ್ನುವಂತೇ ಗುರುತಿಸುವ ದಿನಗಳು ಶುರುವಾಗಲಿ ಎಂಬುದು ನನ್ನ ಅಭಿಲಾಷೆ. ಸಿನಿಮಾಕ್ಕೆ ಸಂಬಂಧಿತ ವಿಷಯವನ್ನು ಒಬ್ಬ ಕಥೆಗಾರನಾಗಿ ನಾನು ಬೇರೆ ಬೇರೆ ಕಡೆಯಿಂದ ಪಡೆದುಕೊಳ್ಳುತ್ತೇನೆ. ಪ್ರಸ್ತುತ ಸಿನಿಮಾಗಳು ಬದುಕಿನ ಕತೆಯ ಮೂಲಕವೇ ತೆರೆಯನ್ನು ಕಾಣುತ್ತಿದೆ. ನಾನು ಕತೆಯನ್ನು ಪೇಪರ್ ನ ಮೂಲಕ ಪಡೆದುಕೊಳ್ಳುತ್ತೇನೆ. ಕೆಲ ಕತೆಗಾರರು ಬದುಕಿನ ಮುಖೇನ ಕತೆಯನ್ನು ಹುಡುಕಿದರೆ, ಇನ್ನು ಕೆಲವರು ಸಾಹಿತ್ಯ ಕೃತಿಗಳ ಮುಖೇನ ಹುಡುಕುತ್ತಾರೆ. ಹೀಗೆ ಒಬ್ಬೊಬ್ಬ ಕತೆಗಾರನ ಕತಾ ಹುಡುವಿಕೆಯು ಭಿನ್ನವಾಗಿರುತ್ತದೆ. ಅದು ನಿರ್ದೇಶಕನ ಆಯ್ಕೆಗೆ ಬಿಟ್ಟಿದ್ದು.

—-

ಲೇಖಕ ಅಭಿಷೇಕ್ ಅಯ್ಯಂಗಾರ್ : ಸಿನಿಮಾದಲ್ಲಿ ಸಾಹಿತ್ಯಬೇಕು. ಸಾಹಿತ್ಯ ಆಧಾರಿತ ಸಿನಿಮಾ ನಮ್ಮ ಈಗಿನ ಕನ್ನಡಚಿತ್ರರಂಗಕ್ಕೆ ಬೇಕಿದೆಯಾ?

ಸಾಹಿತ್ಯ ಹಾಗೂ ಸಿನಿಮಾಕ್ಕೆ ತನ್ನದೇ ಆದ ಭಾಷೆಯಿದೆ: ಪಿ. ಶೇಷಾದ್ರಿ ; ಸಾಹಿತ್ಯಕ್ಕೆ ತನ್ನದೇ ಆದ ಭಾಷೆಯಿರುವ ಹಾಗೆ ಸಿನಿಮಾಕ್ಕೆ ಕೂಡ ಒಂದು ಭಾಷೆಯಿದೆ. ಸಿನಿಮಾ ತನ್ನದೇ ಆದಂತಹ ಭಾಷೆಯನ್ನು ಕಟ್ಟಿಕೊಳ್ಳಬೇಕು. ಯಾವುದೇ ಒಂದು ಜ್ಞಾನಪೀಠ ಪ್ರಶಸ್ತಿ ಅಥವಾ ಬೇರೆ ಯಾವುದೇ ಪ್ರಶಸ್ತಿ ಪಡೆದ ಕೃತಿಯೂ ಸಿನಿಮಾಗೋಸ್ಕರ ಬರೆದಿರುವುದಿಲ್ಲ. ಅದು ಕೇವಲ ಸಾಹಿತ್ಯಿಕ ದೃಷ್ಟಿಯಿಂದ ರಚನೆಯಾಗಿರುತ್ತದೆ. ಅದನ್ನು ನಾವು ಸಿನಿಮಾಕ್ಕೆ ಅಳವಡಿಸಿಕೊಳ್ಳಬೇಕಾದರೆ ಅದನ್ನು ಸಿನಿಮಾದ ಭಾಷೆಗೆ ಪರಿವರ್ತಿಸಬೇಕಾಗುತ್ತದೆ. ಹೀಗೆ ಸಿನಿಮಾಕ್ಕೋಸ್ಕರನೇ ಸಾಹಿತ್ಯ ರಚನೆಯಾಗುವುದಾದರೆ ಯಾಕೆ ಆಗಬಾರದು. ಆದರೆ ಸಿನಿಮಾಲೋಕ ಸಾಹಿತ್ಯವನ್ನು ತನ್ನದೆಂದು ಸ್ವೀಕರಿಸುತ್ತಿಲ್ಲ. ಅದನ್ನು ಬೇರೆಯಾಗಿಯೇ ನೋಡುತ್ತಿದೆ..ಇನ್ನು ಸಿನಿಮಾದ ಮೂಲಕ ಕತೆಯೇ ಆಗಿರುವುದರಿಂದ ಸಾಹಿತ್ಯದ ಎಳೆಯನ್ನು ಪಡೆದುಕೊಳ್ಳಿ ಆದರೆ ತನ್ನದೇ ಸ್ವಂತಿಕೆಯನ್ನು ಅಲ್ಲಿ ಸಾಹಿತ್ಯದ ಮುಖೇನ ರೂಪಿಸುವುದು ಉತ್ತಮ.

ನಿರ್ದೇಶಕನ ಸಂಬಂಧ ಕತೆ ಅಥವಾ ಕಾದಂಬರಿಗೆ ಸಂಬಂಧಪಟ್ಟದಲ್ಲ: ರಘುನಾಥ ಚ.ಹ; ಕನ್ನಡ ಸಾಹಿತ್ಯಕ್ಕೆ ನಿರ್ದೇಶಕನೊಬ್ಬನ ಸಂಬಂಧ ಹೇಗೆಂದರೆ ಅದು ಕತೆ ಅಥವಾ ಕಾದಂಬರಿಗೆ ಸಂಬಂಧಪಟ್ಟಿದಲ್ಲ. ಅಲ್ಲಿನ ಭಾಷೆಗೆ , ಮಣ್ಣಿಗೆ ಹಾಗೂ ಅಲ್ಲಿನ ಪರಿಸರಕ್ಕೆ ಸಂಬಂಧಪಟ್ಟದ್ದಾಗಿದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಈವರೆಗೆ 6 ಸಿನಿಮಾಗಳಿಗೆ ಸ್ವರ್ಣ ಕಮಲ ಬಂದಿದ್ದು, ಆ ಆರು ಸಿನಿಮಾಗಳು ಕೂಡ ಕನ್ನಡ ಸಾಹಿತ್ಯ ಪರಂಪರೆಗೆ ಸೇರಿದಂತಹದ್ದೇ ಆಗಿದೆ. ಕನ್ನಡದ ಅತ್ಯುತ್ತಮ ಸಿನಿಮಾಗಳ ಹೆಸರುಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ನಮಗೆ ನೇರವಾಗಿ ಕಾದಂಬರಿ ಆಧಾರಿತ ಅಥವಾ ಕನ್ನಡ ಸಾಹಿತ್ಯ ಪರಂಪರೆಗೆ ಸೇರಿದ ಸಿನಿಮಾಗಳೇ ಸಿಗುತ್ತದೆ. ಈಗಾಗಿ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಕನ್ನಡ ಸಿನಿಮಾವು ಸಾಹಿತ್ಯವನ್ನು ಅವಲಂಬಿತವಾಗಿದೆ.

ಪ್ರತೀ ಸಿನಿಮಾಕ್ಕೆ ನನಗೆ ಬರಹಗಾರರನನ್ನ ಹುಡುಕುವುದೇ ಒಂದು ಸವಾಲು: ಮಂಸೋರೆ; ನಾನು ಪ್ರತೀ ಸಿನಿಮಾದಲ್ಲು ಒಬ್ಬ ಬರಹಗಾರನನ್ನು ಹುಡುಕಬೇಕಾದರೆ ಬಹಳಷ್ಟು ಕಷ್ಟಪಡುತ್ತೇನೆ. ಯಾಕೆಂದರೆ ಸಾಹಿತಿಯಾದವನು ಕಾದಂಬರಿಯನ್ನು ಅವಲಂಭಿತನಾಗಿ ಕಾದಂಬರಿಯ ರೂಪಕ್ಕೆ ಸಂಭಾಷಣೆ ಅಥವಾ ಕತೆಯನ್ನು ಬರೆಯುತ್ತಾನೆ. ಆದರೆ ನನಗೆ ಸ್ಕ್ರಿಫ್ಟ್ ಗೆ ಸಂಬಂಧಿಸಿದಂತೆ ಕಥೆಯನ್ನು ಬರೆಯುವ ಸಂದರ್ಭದಲ್ಲಿ ಅವರು ಸಿನಿಮಾದಲ್ಲಿ ಮುಂದುವರಿಯಲು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಸಾಹಿತ್ಯದ ಕುರಿತು ಅನುಭವವುಳ್ಳ, ಬರಹಗಾರರಾಗಿ ಸಿನಿಮಾಕ್ಕೆ ಕೈ ಜೋಡಿಸುವವರ ಅವಶ್ಯಕತೆಯಿದೆ. ಅವರಲ್ಲಿರುವ ಭಾಷಾ ಪ್ರೌಢಿಮೆಯನ್ನು ಹೇಳುವಂತಹ ಬರಹಗಾರರು ಕನ್ನಡ ಸಿನಿಮಾಗಳಲ್ಲಿ ಬಂದರೇ ಒಳ್ಳೆಯದು.

----
ಲೇಖಕ ಅಭಿಷೇಕ್ ಅಯ್ಯಂಗಾರ್ : ಈಗಿನ ಕಾಲದ ನಿರ್ದೇಶಕರಿಗೆ ಸಾಹಿತಿಗಳ ಜೊತೆ ಕೆಲಸ ಮಾಡಲು ಕಷ್ಟವಾಗುತ್ತಿದೆಯಾ?

ಇಂದಿನ ಕನ್ನಡ ಸಿನಿಮಾ ಸಾಹಿತ್ಯ ನಂಟನ್ನು ಕಳೆದುಕೊಂಡಿದೆ: ರಘುನಾಥ ಚ.ಹ; ಇವತ್ತಿನ ಕನ್ನಡ ಸಿನಿಮಾವು ಸಾಹಿತ್ಯದ ಜೊತೆಗಿನ ನಂಟನ್ನೇ ಕಳೆದುಕೊಂಡಿದೆ. ಕನ್ನಡ ಸಾಹಿತ್ಯದ ಅರಿವೇ ಇಲ್ಲದ ಒಂದು ವರ್ಗವಿದೆ. ಅವರು ಎರಡು ಮಾಧ್ಯಮಗಳು ಬೇರೆ ನಮಗೆ ಕತೆ ಮುಖ್ಯವಿಲ್ಲವೆನ್ನುತ್ತಾರೆ. ಸಿನಿಮಾಕ್ಕೆ ಕತೆಯೇ ಆಧಾರ. ಕತೆಯಿಲ್ಲದ ಕಲೆಯೇ ಇಲ್ಲ ಎನ್ನುಬಹುದು.ಸಾಹಿತ್ಯನೃ ಬೇರೆ ಸಿನಿಮಾನೇ ಬೇರೆ. ಸಾಹಿತ್ಯವನ್ನು ಸಿನಿಮಾವನ್ನಾಗಿಸಿ ಹೊಸ ಮಾಧ್ಯಮಕ್ಕೆ ಹೇಗೆ ಕೊಡಬಹುದು ಎನ್ನುವುದೇ ನಿರ್ಮಾಪಕರ ಸವಾಲು. ಒಬ್ಬ ಸಿನಿಮಾ ನಿರ್ಮಾತೃವಿಗೆ ಅಥವಾ ಕಲಾವಿದನಿಗೆ ಪ್ರಜ್ಞೆ ಇರಬೇಕು. ನಾನು ಮಾಡುವಂತಹ ಕಲಾಕೃತಿಯಲ್ಲಿ ಭಾಷೆ ಹಾಗೂ ಮಣ್ಣಿನ ಸೊಗಡನ್ನು ಮೂಡಿಸಬೇಕು ಎನ್ನುವ ಅಭಿಮಾನ ಪ್ರಜ್ಞೆ ಇರಬೇಕು. ಆದರೆ ಪ್ರಸ್ತುತ ಅದು ಯಾವ ನಿರ್ದೇಶಕನಲ್ಲಿಯೂ ಇಲ್ಲ.

ಸಿನಿಮಾವನ್ನು ಭಿನ್ನವಾಗಿ ನೋಡಲು ಕಾರಣಗಳಿವೆ: ಮಂಸೋರೆ; ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ನೋಡಲು ಬೇರೆಯದ್ದೇ ಕಾರಣಗಳಿವೆ. ಸಿನಿಮಾವನ್ನು ನಾವು ಎಷ್ಟೇ ಸೃಜನಶೀಲವಾಗಿ ಕಂಡರೂ ಅದು ವಾಣಿಜ್ಯರೂಪದ ಮುಖೇನವೇ ಹೋಗುತ್ತದೆ. ಇನ್ನು ‘ತಿಥಿ’ಯಂತಹ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣನೆಯನ್ನು ಪಡೆದು ಜನರಿಗೆ ಹತ್ತಿರವಾಗಿದ್ದು ಇದೇ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ವಾಣಿಜ್ಯ ಕ್ಷೇತ್ರದ ಮುಖೇನವೇ ನಡೆಯುತ್ತದೆ. ಅನಿವಾರ್ಯತೆಯಗಳ ಗೊಂದಲಗಳಲ್ಲಿಯೇ ಇಂದಿನ ನಿರ್ದೇಶಕರ, ಕತೆಗಾರರ ಪರಿಸ್ಥಿತಿ ಇದೆ.

ಸಾಹಿತ್ಯಕ್ಕೆ ಸಿನಿಮಾ ಸಿಕ್ಕಿದರೆ ಒಳ್ಳೆಯದು ಸಿನಿಮಾಕ್ಕೆ ಸಾಹಿತ್ಯ ಬೇಕು ಎನ್ನುವಂತಹ ಮಾತಿನ ಮುಖೇನ ಸಂವಾದವನ್ನು ಕೊನೆಗೊಳಿಸಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...