ದರುಶನ-ನೋಡು/ನೋಡು-ದರುಶನ

Date: 20-09-2023

Location: ಬೆಂಗಳೂರು


'ಕೀರ‍್ತನ ಸಾಹಿತ್ಯವನ್ನು ಸಾಮಾನ್ಯವಾಗಿ ಬ್ರಾಹ್ಮಣ ಸಾಹಿತ್ಯ ಎಂದು ನೋಡುವ ನೋಟಗಳು, ಯಾವತ್ತೂ ದೇವಾಲಯ ಸಂಸ್ಕ್ರುತಿಯನ್ನು ಹೇರಿದವು ಎಂಬ ಆರೋಪ ಮತ್ತು ಸಂಸ್ಕ್ರುತದ ಪರ ಎಂಬ ವಾದಗಳು ಇವೆ. ಆದರೆ ಈ ಬರಹದ ಮಾತುಕತೆಯಲ್ಲಿ ಅದಕ್ಕೆ ಕಟ್ಟೆದುರಾದ ನಿಲುವು ಕಾಣಿಸುತ್ತವೆ' ಎನ್ನುತ್ತಾರೆ ಭಾಷಾತಜ್ಞ, ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿ ಬರೆಯಬಾರದು' ಅಂಕಣದಲ್ಲಿ 'ದರುಶನ-ನೋಡು/ನೋಡು-ದರುಶನ' ಪದ ಬಳಕೆಗಳ ಕುರಿತು ವಿಶ್ಲೇಷಿಸಿದ್ದಾರೆ.

‘ನೋಡು’ ಎನ್ನುವುದು ಕನ್ನಡ ಶಬ್ದ. ‘ದರ‍್ಶನ’ ಎನ್ನುವುದು ಸಂಸ್ಕ್ರುತ ಶಬ್ದ. ಇದರ ಅರ‍್ತ ‘ನೋಡು’ ಎನ್ನುವುದಾಗಿದೆ. ಕನ್ನಡದ ‘ನೋಡು’ ಪದವು ಕ್ರಿಯಾಪದವಾಗಿದೆ, ಸಂಸ್ಕ್ರುತದ ‘ದರ‍್ಶನ’ ಇದು ನಾಮಪದವಾಗಿದೆ. ಬಾಶೆಯಲ್ಲಿ ಯಾವತ್ತೂ ಪದಗಳ ಬಳಕೆ ಬಲು ತೂಕದ್ದು. ಒಂದು ಪದದ ಬಳಕೆ ದೊಡ್ಡ ಯುದ್ದಕ್ಕೇ ಕಾರಣವಾಗಬಹುದು, ಕೆಲವೊಮ್ಮ ಒಂದು ಶಬ್ದದ ಬಳಕೆ ದೊಡ್ಡ ಯುದ್ದವನ್ನೇ ನಿಲ್ಲಿಸಿಬಿಡಬಹುದು. ಬಾಶೆ ಬಲು ಸೂಕ್ಶ್ಮ. ಇರಲಿ, ನಾವು ಇವತ್ತು ಈ ‘ನೋಡು’-ದರ‍್ಶನ’ ಇವುಗಳ ಕುರಿತು ತುಸು ಮಾತಾಡೋಣ. ಈ ಮಾತಿಗೆ ವಿಜಯದಾಸನ ಕೀರ‍್ತನೆಯೊಂದರ ಮೊದಲ ಎರಡು ಸಾಲುಗಳನ್ನು ತೆಗೆದುಕೊಂಡಿದ್ದೇನೆ. ಈ ಪದಗಳ ಬಳಕೆಯ ವಿನ್ಯಾಸವನ್ನು ತಿಳಿದುಕೊಳ್ಳುತ್ತ ಇಡಿಯಾಗಿ ಕೀರ‍್ತನೆಗಳ ತಾತ್ವಿಕತೆಯನ್ನೆ ಅರಿಯುವ ಕಡೆಗೆ ದಾರಿ ಹಿಡಿಯಬಹುದು.

ಈಗ ವಿಜಯದಾಸನ ಕೀರ‍್ತನೆಯ ನಮ್ಮ ಇವತ್ತಿನ ಮಾತುಕತೆಗೆ ಆಕರವಾದ ಸಾಲುಗಳನ್ನ ಮೊದಲು ಓದೋಣ.

ನಿನ್ನ ದರುಶನಕೆ ಬಂದವನಲ್ಲವೊ
ಪುಣ್ಯವಂತರ ದಿವ್ಯಚರಣ ನೋಡಲು ಬಂದೆ
ಮಹಾಪುಣ್ಯವಂತರ ದಿವ್ಯಚರಣ ನೋಡಲು ಬಂದೆ
ಈ ಸಾಲು ಹೇಳುವ ಕತೆಯನ್ನು ಕತೆಯಂತೆ ಒಮ್ಮೆ ಓದಿಬಿಡೋಣ.

ಒಮ್ಮೆ ವಿಜಯದಾಸ ಪಂಡರಾಪುರಕ್ಕೆ ಹೋಗಿದ್ದನಂತೆ. ದೂರದಾರಿ ನಡೆದು ದಣಿದು ಉಸ್ಸೆಂದು ಗುಡಿಯ ಮುಂದೆ ಕೂರುತಿರುವಾಗ, ಗುಡಿಯ ಒಳಗಿನ ವಿಟಲ ವಿಜಯದಾಸನನ್ನು ನೋಡಿ ನಸುನಕ್ಕಂತೆ ಕಂಡಿರಬೇಕು. ನನ್ನ ದರುಶನಕ್ಕಾಗಿ ದೂರದಾರಿ ನಡೆದು ದಣಿದು ನೀನು ಬಂದೆ ನೋಡು ಎಂದು ವಿಟ್ಟಲ ಅನ್ನುತಿರುವಂತೆ ಅನಿಸಿರಬೇಕು. ನಾನೆ ಮೇಲು ಎಂದ ಹಾಗೆ. ಇದಕ್ಕೆ ವಿಜಯದಾಸ ತುಸು ಕುಸಿಗೊಂಡಿರಬೇಕು. ವಿಟಲನ ಮುಸಿನಗುವಿಗೆ ಎದುರು ಕೊಡುವಂತೆ ‘ನಿನ್ನ ದರುಶನಕೆ ಬಂದವನಲ್ಲವೊ’ ಎನ್ನುತ್ತಾನೆ. ವಿಟಲನಿಗೆ ಈ ಮಾತನ್ನು ಕೇಳಿ ಸಹಜವಾಗಿಯೆ ತುಸು ಕಸಿವಿಸಿ, ಅಚ್ಚರಿ, ಬೆರಗು ಎಲ್ಲವೂ ಒಮ್ಮೆಲೆ ಆಗಿರಬೇಕು. ನನ್ನ ದರುಶನಕ್ಕಾಗಿಯೆ ಅಲ್ಲಿಂದ ಬಂದು ಹೀಗನ್ನವುನಲ್ಲ, ಹಾಗಾದರೆ ಇನ್ಯಾತಕೆ ಬಂದೆ ಎಂದು ಕೇಳಿರಬೇಕು. ಈ ಮಾತಿಗೆ ಉತ್ತರವಾಗಿ ವಿಜಯದಾಸ ಹೇಳುವುದು, ವಿಟಲ ನಿಂತಿರುವ ಈ ಜಾಗಕ್ಕೆ ಬರುವ ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ ಎಂದು. ಮುಂದೆ ಕೀರ‍್ತನೆಯಲ್ಲಿ ಬಾ ಎಂದಾಗ ಬಕುತರಿರುವೆಡೆಯಲ್ಲಿಯೆ ಬರುವ ನಿನ್ನನ್ನು ನೋಡಲು ನಾನ್ಯಾಕೆ ಇಲ್ಲಿವರೆಗೂ ಬರಬೇಕಿತ್ತು ಎಂದು ವಿಟಲನ ಮುಕಕ್ಕೆ ಹೊಡೆದಂತೆ ಮಾತನಾಡುತ್ತಾನೆ ವಿಜಯದಾಸ. ಇಶ್ಟೆಲ್ಲ ಮಾತುಕತೆ ಆಗಿ ಮುಗಿದ ನಂತರ ವಿಟ್ಟಲನೂ, ವಿಜಯದಾಸನೂ ಕೂಡಿ ನಸುನಕ್ಕಿರಬೇಕು.

ಈಗ, ನಮ್ಮ ಮಾತುಕತೆ ಆಗಿರುವ ‘ನೋಡು’-ದರ‍್ಶನ/ದರುಶನ’ ಪದಗಳ ಕಡೆಗೆ ಮುಂದುವರೆಯಲಿ. ಮೊದಲಿಗೆ, ಈ ಎರಡೂ ಶಬ್ದಗಳು ಹೊತ್ತುಕೊಳ್ಳುವ ವಿವಿದ ಹಿನ್ನೆಲೆಗಳನ್ನು ಇಲ್ಲಿ ಪಟ್ಟಿ ಮಾಡಿದೆ.

ದರುಶನ ನೋಡು

ಸಂಸ್ಕ್ರುತ ಕನ್ನಡ

ನಾಮಪದ ಕ್ರಿಯಾಪದ

ಜಡತ್ವ ಚಯಿತನ್ಯಶೀಲತೆ

ಗುಡಿ ಸಂಸ್ಕ್ರುತಿ ಬದುಕು ಸಂಸ್ಕ್ರುತಿ

ಜಂಗಮತ್ವ ಸ್ತಾವರತ್ವ

ಇನ್ನು ಮಾತು ಬೆಳೆಸೋಣ. ಮಾತಿಗೆ ಮುನ್ನ ‘ದರುಶನ’ ಪದದ ಅರ‍್ತ ನೋಡು ಮತ್ತು ‘ನೋಡು’ ಎಂಬ ಪದದ ಅರ‍್ತ ದರುಶನ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಆಗಲೆ ಈ ಪದಗಳ ಬಳಕೆಯ ಮಜಾ ಗೊತ್ತಾಗುವುದು. ದರುಶನ ಎಂಬ ಸಂಸ್ಕ್ರುತ ಪದವನ್ನು ತಿರಸ್ಕರಿಸಿ ಕನ್ನಡದ ನೋಡು ಪದವನ್ನು ಇಡುತ್ತ ಈ ಮೇಲೆ ಹೇಳಿದ ಹಲವು ಮಗ್ಗುಲುಗಳನ್ನು ಒಮ್ಮೆಗೆ ವಿಜಯದಾಸ ಎತ್ತಿ ಹಿಡಿಯುತ್ತಿದ್ದಾನೆ. ವ್ಯಾಸಪೀಟವನ್ನು ತಿರಸ್ಕರಿಸಿ ದಾಸಪರಂಪರೆಯಲ್ಲಿ ಬಂದವರು ಕೀರ‍್ತನಕಾರರು. ಆ ನಡಿಗೆಯೆ ಮೂಲಬೂತವಾಗಿ ಸಂಸ್ಕ್ರುತ ವಿರೋದಿ ಮತ್ತು ಕನ್ನಡದತ್ತ ನಡಿಗೆಯಾಗಿತ್ತು. ಈ ಕೀರ‍್ತನೆಯಲ್ಲಿ ವಿಜಯದಾಸ ಸಂಸ್ಕ್ರುತದ ‘ದರುಶನ’ ಮಾಡಿಕೊಳ್ಳುವುದನ್ನು ತಿರಸ್ಕರಿಸಿ ಕನ್ನಡದ ‘ನೋಡು’ವುದನ್ನು ಮುನ್ನೆಲೆಗೆ ತರುತ್ತಿದ್ದಾನೆ. ಸಂಸ್ಕ್ರುತವನ್ನು ಕನ್ನಡದ ಎದುರಿಗೆ ಇಟ್ಟು ಹೀಗೆ ತಿರಸ್ಕರಿಸಿ ಬಿಸುಡುವ ಕೆಲಸವನ್ನು ಇಲ್ಲಿ ಕಾಣಬಹುದು. ಮುಂದುವರೆದು ಈ ಪದಗಳ ವ್ಯಾಕರಾಣತ್ಮಕ ಗಟಕವನ್ನು ಗಮನಕ್ಕೆ ತೆಗೆದುಕೊಂಡರೆ ಇನ್ನೂ ಬೆರಗೊಂದು ಕಾದಿದೆ. ಈ ಎರಡು ಪದಗಳಲ್ಲಿ ಸಂಸ್ಕ್ರುತದ ಪದ ನಾಮಪದವಾಗಿದ್ದರೆ ಕನ್ನಡದ ಪದ ಕ್ರಿಯಾಪದವಾಗಿದೆ. ಇಲ್ಲಿ ಕೆಲಸವನ್ನು, ಚಲನೆಯನ್ನು ಹೇಳುವ ಕ್ರಿಯಾಪದವನ್ನು ಚಯಿತನ್ಯಶೀಲವಾಗಿರುವಿಕೆ ಎಂದು ಅರ‍್ತ ಮಾಡಿಕೊಳ್ಳೋಣ. ಸಂಸ್ಕ್ರುತ ಜಡಗೊಂಡಿರುವುದು, ಕನ್ನಡ ಬದುಕಿರುವುದು ಎಂಬ ತಿಳುವಳಿಕೆ ಇದರ ಹಿಂದೆ ಕಾಣಿಸುತ್ತಿದೆ. ಗುಡಿಗೆ ಹೋಗಿ ಮೂರ‍್ತಿಯನ್ನು ನೋಡಿ ಮುಕ್ತಿ ಸಿಕ್ಕ ಬಾವನೆಯಲ್ಲಿ ತೇಲುವ ಬಾರತೀಯ ಹಲವು ಮನಸುಗಳಿಗೆ ವ್ಯಂಗ್ಯವಾಡುವಂತೆ ವಿಜಯದಾಸ ಆ ಗುಡಿಯಲ್ಲಿನ ಮೂರ‍್ತಿಯನ್ನು ನೋಡಲು ಬಂದಿಲ್ಲ, ಮೂರ‍್ತಿಯನ್ನು ನೋಡುವುದಕ್ಕೆ ಇಲ್ಲಿಗೆ ಬರುವ ಅವಶ್ಯಕತೆಯೆ ಇಲ್ಲ ಎಂದು ಗುಡಿಯೊಳಗೆ ಕುಂತ ವಿಟಲನಿಗೆ ಲೇವಡಿ ಮಾಡುವಂತೆ ಮಾತನಾಡುವುದು ಒಂದೆಡೆ ವಿಜಯದಾಸನ ‘ಸೊಕ್ಕ’ನ್ನು ತಿಳಿಸಿದರೆ ಇನ್ನೊಂದೆಡೆ ಗುಡಿ ಸಂಸ್ಕ್ರುತಿಯ ವಿರೋದವನ್ನು ಇದು ದಾಕಲಿಸುತ್ತದೆ. ಗುಡಿಯೊಳಗಿನ ಮೂರ‍್ತಿಯನ್ನು ಜಡತ್ವಕ್ಕೆ ಹೋಲಿಸಿದರೆ ಗುಡಿಗೆ ಬರುವ ಚಲನಶೀಲರಾದ ಬಕುತರನ್ನು ಪುಣ್ಯವಂತರೆಂದು ಕರೆದು ಅವರ ದಿವ್ಯಚರಣವನ್ನು ನೋಡಲು ಬಂದೆನೆಂದು ಹೇಳುತ್ತಾನೆ. ಇಲ್ಲಿ ಮೂರ‍್ತಿ ಮತ್ತು ಪಾದಗಳನ್ನು ಎದುರು-ಬದುರಾಗಿ ತರುತ್ತಾನೆ. ನಡುಗಾಲದುದ್ದಕ್ಕೂ ‘ನಡಿಗೆ’ ಬಹುದೊಡ್ಡ ಮವುಲ್ಯವಾಗಿ, ತತ್ವವಾಗಿ ಸಮಾಜವನ್ನು ನಿಯಂತ್ರಿಸುತ್ತಲಿದ್ದಿತು. ಮೂರ‍್ತಿ ಸ್ತಾವರನ್ನು ಪ್ರತಿನಿದಿಸಿದರೆ ಪಾದ ಜಂಗಮತ್ವವನ್ನು ಎತ್ತಿಹಿಡಿಯುತ್ತದೆ ಎಂಬುದನ್ನೂ ಗಮನಿಸಬಹುದು. ಹೀಗೆ ಹಲವು ಸ್ತರಗಳನ್ನು ಒಟ್ಟೊಟ್ಟಿಗೆ ಕೊಡುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು.

ಇದರ ಜೊತೆಗೆ ‘ದರ‍್ಶನ’ ಎಂಬ ರೂಪದ ಸಂಸ್ಕ್ರುತ ಪದವನ್ನು ‘ವಿರೂಪ’ಗೊಳಿಸಿ ವಿಜಾತಿ ಒತ್ತಕ್ಕರವನ್ನು ಒಡೆದು ಕನ್ನಡ ಜಾಯಮಾನಕ್ಕೆ ತಂದಿರುವ ‘ದರುಶನ’ ರೂಪದಲ್ಲಿ ಬಳಸಿರುವುದನ್ನು ಮುಕ್ಯವಾಗಿ ಗಮನಿಸಬೇಕು.

ಈ ಎಲ್ಲ ವಿಚಾರಗಳು ವಿಜಯದಾಸನ ಮನದೊಳಗೆ ಸುಳಿದು ಹೋಗಿರದಿದ್ದರೆ ವಿಟಲನನ್ನು ನೋಡಲು ಪಂಡರಪುರದವರೆಗೆ ಹೋಗಿ ಅವನೆದುರು ನಿಂದಾಗ ವಿಜಯದಾಸನನ್ನು ನೋಡಿ ವಿಟಲ ಬೀರಿದ ನಗುವಿನಲ್ಲಿ ಮಿಂದು ದನ್ಯನಾಗಬೇಕಿದ್ದವನಿಗೆ ಅಸಹನೆ, ಅಸಮಾದಾನ, ತಿರಸ್ಕಾರಗಳು ಮೂಡಿದ್ದಾದರೂ ಏತಕ್ಕೆ? ಈ ಬಾವನೆಗಳೆ ಆ ಮೊದಲ ಎರಡು ಸಾಲುಗಳಲ್ಲಿನ ಗಡುಸುತನಕ್ಕೆ ಕಾರಣವಾಗಿವೆ. ವಿಜಯದಾಸ ಎಶ್ಟು ದೊಡ್ಡವನೆಂದರೆ ತನ್ನ ದೇವರು ವಿಟಲನ ಎದುರು ಅಶ್ಟು ಗಡುಸುತನವನ್ನು ತೋರಿದಾಗಲೂ ಅದನ್ನು ಮುಗುಳುನಗೆಯ ಮೂಲಕವೆ ಹೇಳುತ್ತಿದ್ದಾನೆ. ಅದಕ್ಕೆ ಆ ಎರಡೂ ಸಾಲುಗಳಲ್ಲಿ ಅಲ್ಲದೆ ಇಡಿಯ ಕೀರ‍್ತನೆಯಲ್ಲಿ ಆವೇಶವೆಲ್ಲಿಯೂ ಕಾಣದೆ ತಣ್ಣಗಿನ ಬಾವ ಸುಳಿದಾಡುತ್ತಿದೆ.

ಒಮ್ಮೆ ಈ ಕೀರ‍್ತನೆಯನ್ನು ನಿದಾನವಾಗಿ ಓದೋಣ. ಈ ಅರ‍್ತಗಳು ಅಲ್ಲಿ ವಿರಮಿಸುತ್ತಿವೆ, ಅವುಗಳನ್ನು ಎತ್ತಿಕೊಂಡು ಸಮಾಜಕ್ಕೆ ತರೋಣ. ಆ ಎರಡು ಸಾಲುಗಳಲ್ಲಿನ ಎರಡು ಪದಗಳಲ್ಲಿ ನಮಗೆ ಈ ಎಲ್ಲವೂ ಕಾಣುತ್ತಿಲ್ಲವೆ? ಸರಿ, ಅವುಗಳು ಇವೆಯೆಂದು ಸಮಾಜಕ್ಕೆ ಬರೋಣ.

ಕೀರ‍್ತನ ಸಾಹಿತ್ಯವನ್ನು ಸಾಮಾನ್ಯವಾಗಿ ಬ್ರಾಹ್ಮಣ ಸಾಹಿತ್ಯ ಎಂದು ನೋಡುವ ನೋಟಗಳು, ಯಾವತ್ತೂ ದೇವಾಲಯ ಸಂಸ್ಕ್ರುತಿಯನ್ನು ಹೇರಿದವು ಎಂಬ ಆರೋಪ ಮತ್ತು ಸಂಸ್ಕ್ರುತದ ಪರ ಎಂಬ ವಾದಗಳು ಇವೆ. ಆದರೆ ಈ ಬರಹದ ಮಾತುಕತೆಯಲ್ಲಿ ಅದಕ್ಕೆ ಕಟ್ಟೆದುರಾದ ನಿಲುವು ಕಾಣಿಸುತ್ತವೆ. ಈ ನಿಲುವುಗಳು ನಂಬುವಂತವೆ ಎಂದು ನಿದಾನವಾಗಿ ನೋಡೋಣ, ಯೋಚಿಸೋಣ. ಈ ನಿಲುವಿಗೆ ಇದೊಂದು ಕೀರ‍್ತನೆಯ ಆಚೆಗೆ ಬೇರೆ ಬಲಗಳು ಇವೆಯೆ ಎಂದೂ ನೋಡೋಣ. ಆನಂತರ ಈ ಜಾಡನ್ನ ಹಿಡಿದುಕೊಂಡು ಕೀರ‍್ತನ ಸಾಹಿತ್ಯವೆಂಬ ಸಾಗರದೊಳಗೆ ಈಜಲು ಇಳಿಯೋಣ.

ಇಲ್ಲಿ, ಈ ಚರ‍್ಚೆಯನ್ನು ಸಾಮಾಜಿಕ ಬಂಡಾಯ ಎಂಬ ನೆಲೆಯಲ್ಲಿ ತೆಗೆದುಕೊಳ್ಳದೆ ಆಂತರಿಕ ಬಂಡಾಯ ಎಂದು ತೆಗೆದುಕೊಳ್ಳಬೇಕು. ಈ ಎರಡು ಬಂಡಾಯಗಳ ಕುರಿತು ಮಾತಾಡಲು ಇಲ್ಲಿ ಎಡೆ ಇಲ್ಲ. ಒಳಗಿನಿಂದ ಹೊರ ನೋಡುವ, ಅರಿಯುವ ದಾರಿ ಎಂಬುದು ನಿಜ.

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...