ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌


"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ…’ ಎಂಬ ನಾಲ್ಕನೆಯ ಕವನ ಸಂಕಲನವನ್ನು ನಮ್ಮ ಕೈಗೆತ್ತಿದ್ದಾರೆ. ಒಟ್ಟು 28 ಕವಿತೆಗಳಿವೆ," ಎನ್ನುತ್ತಾರೆ ಗಿರೀಶ ಸೊಲ್ಲಾಪುರ. ಅವರು ಎಸ್. ಎಸ್. ಸಾತಿಹಾಳ ಅವರ ‘ಏನು ಚಂದವೋ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ವೈಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಿದೆ. ಇದರ ಪರಿಣಾಮವಾಗಿ ಗೇಯ ಗುಣದ ಹಾಡುವ ಕವಿತೆಗಳು ತೀರಾ ವಿರಳವಾಗಿವೆ. ಅದರಲ್ಲೂ ಮಕ್ಕಳ ಪದ್ಯದ ವಿಷಯಕ್ಕೆ ಬಂದಾಗ ಗೇಯತೆ ಎಂಬುದು ವಿಶೇಷವಾದ ಹೊಳಪು ನೀಡುತ್ತದೆ.ಲಯಬದ್ಧ ಕವಿತೆಗಳ ಕೊರತೆಯ ಕಾಲದಲ್ಲಿ ನಾಲಿಗೆ ಮತ್ತು ಕಿವಿಗೆ ಹಿತವೆನಿಸುವಂತಹ ರಚನೆಗಳನ್ನು ಕೆಲ ಮಕ್ಕಳ ಕವಿಗಳು ಈಗಲೂ ಉಳಿಸಿಕೊಂಡು, ಬೆಳೆಸುತ್ತಾ ಸಾಗಿದ್ದಾರೆ. ಆ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಎಸ್. ಎಸ್. ಸಾತಿಹಾಳ ಮಕ್ಕಳ ಸಾಹಿತಿಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ…’ ಎಂಬ ನಾಲ್ಕನೆಯ ಕವನ ಸಂಕಲನವನ್ನು ನಮ್ಮ ಕೈಗೆತ್ತಿದ್ದಾರೆ. ಒಟ್ಟು 28 ಕವಿತೆಗಳಿವೆ. ಇಲ್ಲಿನ ಕವಿತೆಗಳು ಹಸಿ ಗೋಡೆಯ ಹರಳಿನಂತೆ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದಕ್ಕೆ ಪ್ರಮುಖ ಕಾರಣ ಕಾವ್ಯದಲ್ಲಿನ ಗೇಯ ಗುಣ. ಹಾಡುವ ಗುಣ ಹೊಂದಿರುವ ಕವಿತೆಯನ್ನು ನೆನಪಿಟ್ಟುಕೊಳ್ಳುವುದು ಸುಲಭ. ಅರ್ಥ ತಿಳಿಯದೆ ಹೋದರೂ ಗೇಯತೆಯ ಕಾರಣದಿಂದಾಗಿಯೇ ಹಲವು ಹಾಡುಗಳು, ಕಾವ್ಯಗಳು ನಾಲಗೆಗಳಲ್ಲಿ ಉಳಿದು ಬಂದಿವೆ. ಅರ್ಥದ ಸಾಧ್ಯತೆಗಳೆ ಮುಖ್ಯವಾಗಿ ಗೇಯತೆ ಹಿನ್ನೆಲೆಗೆ ಸರಿದಾಗ ಕವಿತೆ ಇಷ್ಟವಾದರೂ ಅದರ ಸಾಲುಗಳು ನೆನಪಿನಲ್ಲಿ ಉಳಿಯುವುದು ಕಷ್ಟ. ಆದರೆ ಎಸ್. ಎಸ್. ಸಾತಿಹಾಳ ಅವರು ಹಾಡಲಿಕ್ಕೆ ಅನುಕೂಲಕರವಾಗುವಂತೆ ರಚಿಸಿ ಕೊಟ್ಟಿರುವ ರಚನೆಗಳು ಒಂದು ಪ್ರಯೋಗದ ರೀತಿಯಲ್ಲಿ ಓದುಗರೆಲ್ಲರಿಗೂ ರುಚಿಸಬಹುದು.

ಗೇಯತೆ ‘ಅಪ್ರಮುಖ’ ಎಂದು ಕೆಲವರ ವಾದವಿದೆ. ಆದರೆ ಅಂತಹ ಕವಿತೆಗಳು ಮಕ್ಕಳ ಪಾಲಿಗೆ ಅಷ್ಟಕಷ್ಟೇ. ಮಕ್ಕಳು ಪದ್ಯವನ್ನು ಹಾಡುತ್ತಾ, ಕುಣಿಯುತ್ತ ಖುಷಿ ಪಡುತ್ತಾ, ರಾಗಬದ್ಧವಾಗಿ ಹಾಡುವ ಕವಿತೆಗಳನ್ನು ಹೆಚ್ಚು ಇಷ್ಟಪಡುವರು ಎಂಬುದೇ ನಿಜ. ಹಲವಾರು ಕವಿ ಮಹನೀಯರು ಇಂತಹ ಗೇಯಗುಣದ ಕವಿತೆಗಳನ್ನು ನೀಡುವ ಮೂಲಕ ಬಾಲ್ಯದಲ್ಲಿ ಸಂತಸ ಹಂಚಿದ್ದಾರೆ. ಬೇಕಿದ್ದರೆ ಬಾಲ್ಯದ ಕವಿತೆಗಳನ್ನು ಒಮ್ಮೆ ನೆನಪಿಸಿಕೊಳ್ಳಬಹುದು. ಅದೆಷ್ಟೋ ಹಾಡುಗಳು ಈಗಲೂ ತಮ್ಮ ಗೇಯ ಗುಣದಿಂದಲೇ ನಮ್ಮ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿವೆ ಅಲ್ಲವೇ?

ಇಲ್ಲಿನ ಬಹುತೇಕ ಪದ್ಯಗಳು ಪರಿಸರ ಕಾಳಜಿ, ಆರೋಗ್ಯ, ಬಾಲ್ಯ, ಸಾಮರಸ್ಯ ಹಾಗೂ ಕುಟುಂಬದ ಮೇಲೆ ಬೆಳಕು ಚೆಲ್ಲುತ್ತವೆ.

ಬನ್ನಿ ಗೆಳೆಯರೇ ಊರ ಬಯಲಲಿ
ಹಸಿರು ಗಿಡ ಮರ ನೆಡೆಸುವಾ
ದಿನವು ಎಲ್ಲರೂ ನೀರು ಗೊಬ್ಬರ
ಹಾಕಿ ಉಸಿರನು ಪಡೆಯುವಾ
( ಗಿಡಮರ ನೆಡೆಸೋಣ ಪದ್ಯ )

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂಬ ಭಾವವನ್ನ ಹೊತ್ತ ಈ ಕವಿತೆ ‘ಉಸಿರನ್ನು ಪಡೆಯುವಾ…’ ಎಂಬ ಸಾಲಿನಿಂದ ಗಮನಸೆಳೆಯುತ್ತದೆ.

ಪುಕ್ಕಟೆಯಾಗಿ ಕೊಟ್ಟಿಹ ಸೃಷ್ಟಿಗೆ
ಎಂದಿಗೂ ಋಣಿಯಾಗಿರಬೇಕು
ಪರಹಿತಕ್ಕಾಗಿ ಕಾರ್ಯವಗೈಯುವ
ಅವುಗಳ ಹಿರಿಮೆಯ ತಿಳಿಬೇಕು
( ಸೃಷ್ಟಿಯ ಕೊಡುಗೆ ಪದ್ಯ )

“ನಿಸರ್ಗ ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸುತ್ತದೆ. ಆದರೆ ದುರಾಸೆಯನ್ನಲ್ಲ” ಎಂಬ ಮಹಾತ್ಮ ಗಾಂಧೀಜಿಯವರ ಮಾತು ಈ ಸಾಲುಗಳಿಗೆ ಹೊಂದುತ್ತದೆ.

ಗೆಳೆಯರೆಲ್ಲ ಕೂಡಿಕೊಂಡು
ಓಣಿಯಲ್ಲಿ ಸೇರಿಕೊಂಡು
ಸಕ್ಕ ಸರಿಗಿ ಆಡು ಆಟ
ಏನು ಚಂದವೋ… ಏನೋ ಅಂದವೋ..
( ಏನು ಚಂದವೋ ಪದ್ಯ )

ಈ ಸಂಕಲನದ ಶೀರ್ಷಿಕೆ ಹಾಡು ಬಾಲ್ಯದ ದಿನಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿ, ಸಾರ್ಥಕ ಭಾವ ಮೂಡಿಸುತ್ತದೆ. ಆದರೆ ಈಗ ಇದೆಲ್ಲ ನೇಪತ್ಯಕ್ಕೆ ಸರಿಯುತ್ತಿರುವುದು ವಿಷಾದದ ಸಂಗತಿ.

ಎಲ್ಲರ ಮಾತನು ಆಲಿಸಿಕೊಂಡು
ಸಭೆಯಲ್ಲಿ ನುಡಿಯಿತು ಅನಾನಸು
ಯಾರಲೂ ಹೆಚ್ಚು ಕಡಿಮೆ ಬೇಡ
ತೊರೆಯಿರಿ ನಿಮ್ಮಲ್ಲಿ ವೈಮನಸು
( ಹಣ್ಣಿನ ಸಭೆ ಪದ್ಯ )

ಈ ಪದ್ಯ ಓದಲು, ಹಾಡಲು ಮೋಜುದಾಯಕ ಅನಿಸುತ್ತದೆ.

ಭೂಮಿಗೆ ಬೆಳಕನು ನೀಡುವ ಸೂರ್ಯಗೆ
ಚಳಿ ಜ್ವರ ಬಂದರೆ ಹೇಗಮ್ಮ?
ಮದ್ದನು ನೀಡಿ ಮಾತ್ರೆ ಕೊಡುವ
ವೈದ್ಯನು ಯಾರು ಹೇಳಮ್ಮ?
( ಲೋಕದ ವೈದ್ಯ ಪದ್ಯ )

ಮಗುವಿನ ಮುಗ್ದತೆಯೊಂದಿಗೆ ನಿಸರ್ಗದ ಮಹತ್ವ ತಿಳಿಸುವ ಈ ಪದ್ಯ ಬೆರಗು ಮೂಡಿಸುತ್ತದೆ.

ಹಿತಮಿತವಾಗಿ ಅರಿಯುತ ಬಳಸಿರೆ
ಎಲ್ಲರಿಗೂ ಹಿತವಾಗುವೆನು!
ಮಿತಿಯನು ಮೀರಿ ನೋಡುತ ನಡೆದರೆ
ಜೀವನಕೆ ಕುತ್ತಾಗುವೆನು!
( ಮೊಬೈಲ್ ಮಹಿಮೆ ಪದ್ಯ )

ಮೊಬೈಲಿಂದ ಉಂಟಾಗುವ ಲಾಭ-ನಷ್ಟ ಎರಡನ್ನೂ ಹೇಳುವ ಈ ಪದ್ಯ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಹೀಗೆ ‘ಏನು ಚಂದವೋ..’ ಮಕ್ಕಳ ಕವನ ಸಂಕಲನದ ಎಲ್ಲ ಪದ್ಯಗಳು ಒಂದು ವಿಶೇಷವಾದ ಉಣಿಸನ್ನು ನೀಡುತ್ತವೆ. ಸೃಜನಶೀಲರಾದ ಎಸ್. ಎಸ್. ಸಾತಿಹಾಳ ಅವರು ಹೀಗೆ ಸಕ್ಕರೆಯ ಸವಿಯನ್ನು ಮತ್ತೆ ಮತ್ತೆ ಹಂಚಲಿ ಎಂಬುದು ನಮ್ಮ ಪ್ರೀತಿಯ ಒತ್ತಾಯ.

*
- ಗಿರೀಶ ಸೊಲ್ಲಾಪುರ.

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...