ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ

Date: 18-02-2024

Location: ಬೆಂಗಳೂರು


"ಘಾಂದ್ರುಕ್ ಕಾದಂಬರಿ ಇದಕ್ಕಿಂತಲೂ ಭಿನ್ನವಾಗಿ ಬದುಕಿನ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತದೆ. ಪಲ್ಲಟಗೊಳ್ಳುತ್ತಿರುವ ಬದುಕಿನ ವಿನ್ಯಾಸವನ್ನು ಹೊಸ ಕಥನ ಮಾದರಿಯಲ್ಲಿ ನಿರೂಪಿಸುವ ಕ್ರಮ ಈ ಕಾದಂಬರಿಯ ಮುಖ್ಯ ಅಂಶವಾಗಿದೆ," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಘಾಂದ್ರುಕ್’ ಕಾದಂಬರಿ ಕುರಿತು ಬರೆದಿರುವ ಲೇಖನ.

ಜನ ಪತ್ರಿಕೋದ್ಯಮದಲ್ಲಿ ಅಪಾರ ನಂಬಿಕೆಯಿಟ್ಟ ಸತೀಶ ಚಪ್ಪರಿಕೆಯವರು ತಮ್ಮ ಸೃಜಶೀಲತೆಯ ಒರತೆಯನ್ನು ಕಾಪಿಟ್ಟುಕೊಂಡು ಬಂದವರು. ಪತ್ರಿಕೋದ್ಯಮವನ್ನು ಸಾಮಾಜಿಕ ಒಡನಾಡಿಯ ಅಂಗವೆಂದು ಜನಪರವಾದ ವರದಿಗಳನ್ನು ಜೀವಪರವಾಗಿ ನಾಡಿಗೆ ನೀಡುತ್ತಾ ಬಂದವರು. ಅಭಿವೃದ್ಧಿಯ ವಿಕಾರಗಳನ್ನು ಸಾಕ್ಷಿ ಸಮೇತ ವರದಿಗಳನ್ನು ಕೊಡುತ್ತಾ ಅದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳುವ ಕಡೆ ಗಮನ ಹರಿಸಿದವರು. ವರದಿಗಾರಿಕೆಗಾಗಿ ವಿಶ್ವ, ಭಾರತ, ರಾಜ್ಯ ಹಳ್ಳಿಗಳನ್ನು ಸುತ್ತಿದ ಇವರು ವಾಸ್ತವದ ಜೀವನ ದರ್ಶನವನ್ನು ಪಡೆದವರು. ವಾಸ್ತವನದ ನಿಜ ದರ್ಶನ ಇರುವುದರಿಂದ ಯಾವ ಸಿದ್ಧಾಂತಗಳ ಗೋಜಿಗೆ ಹೋಗದೆ ಜೀವನದ ಸತ್ಯವನ್ನು ಅನ್ವೇಷಿಸುವ ಚಿಂತನೆಯನ್ನು ಮಾಡುತ್ತಾ, ಸ್ಪಷ್ಟ ದೃಷ್ಟಿಕೋನವನ್ನು ರೂಪಿಸಿಕೊಂಡವರು. ಆದರ್ಶಗಳ ಗೋಸುಂಬೆತನದ ಬಗ್ಗೆ ತಮ್ಮ ಕಥನದಲ್ಲಿ ಗಂಭೀರವಾಗಿ ಚಿಂತಿಸಿದವರು. ಹುಸಿ ಸೈದ್ಧಾಂತಿಕತೆ ಹುಟ್ಟಿಸುವ ನಿರ್ವಾತ, ಸಂಬಂಧಗಳ ಬಿಕ್ಕಟ್ಟುಗಳು, ಸಡಿಲಗೊಳ್ಳುತ್ತಿರುವ ಮಾನವೀಯ ಸಂಬಂಧಗಳು, ಮಹಿಳೆಯ ಸ್ಥಿತ್ಯಂತರಗಳು, ಜಾಗತೀಕರಣೋತ್ತರ ದಂದುಗಗಳು, ಬಲಾಢ್ಯರ ಕಾಣದ ಕೈಗಳು ಇವರ ಕಥನದಲ್ಲಿ ಕಾಣಿಸಿಕೊಳ್ಳುತ್ತದೆ. ಅವರ `ವರ್ಜಿನ್ ಮೊಹಿತೊ’ ಕಥಾ ಸಂಕಲನದಲ್ಲಿ ಈ ಅಂಶಗಳ ಅನಾವರಣವನ್ನು ಕಾಣುತ್ತೇವೆ.

ಘಾಂದ್ರುಕ್ ಕಾದಂಬರಿ ಇದಕ್ಕಿಂತಲೂ ಭಿನ್ನವಾಗಿ ಬದುಕಿನ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತದೆ. ಪಲ್ಲಟಗೊಳ್ಳುತ್ತಿರುವ ಬದುಕಿನ ವಿನ್ಯಾಸವನ್ನು ಹೊಸ ಕಥನ ಮಾದರಿಯಲ್ಲಿ ನಿರೂಪಿಸುವ ಕ್ರಮ ಈ ಕಾದಂಬರಿಯ ಮುಖ್ಯ ಅಂಶವಾಗಿದೆ. ಜೊತೆಗೆ ಕಾದಂಬರಿಗೆ ಆಯ್ಕೆ ಮಾಡಿಕೊಂಡ ವಸ್ತು ವಿನೂತನವಾದುದು. ಬದುಕಿನ ಪಯಣದೊಂದಿಗೆ ನಮ್ಮೊಳಗಿನ ಕಾಮ, ಪ್ರೇಮ, ಮಮಕಾರ, ಮೋಹ, ಸಾವು, ಹಣ, ಜಿದ್ದು, ವೇಷ, ಧರ್ಮ, ನಿರ್ಮೋಹವನ್ನು ತಾತ್ವಿಕವಾಗಿ ಒರೆಗೆ ಹಚ್ಚುವ ಚಿಂತನೆಯನ್ನು ಮಾಡುತ್ತದೆ.

ಕನ್ನಡ ಕಾದಂಬರಿ ಪರಂಪರೆಯಲ್ಲಿ `ಘಾಂದ್ರುಕ್ ‘ ಕಾದಂಬರಿ ಹೊಸ ನಿರೂಪಣೆ, ವಸ್ತುವಿನಿಂದ ಮುಖ್ಯವಾಗುತ್ತದೆ. ಕಾದಂಬರಿಯ ಮುಖ್ಯ ಪಾತ್ರ ಸಿದ್ಧಾರ್ಥ ಹೊಸ್ಮನೆ. ಮುವ್ವತ್ತಾರು ವರ್ಷಕ್ಕೆ ಜೀವನದ ಎಲ್ಲಾ ಅನುಭವಗಳನ್ನು ಪಡೆದುಕೊಂಡು ಕೋಟಿಗಟ್ಟಲೇ ಹಣವನ್ನು ಗಳಿಸಿ `ಇನ್ನೇನಿದೆ’ ಜೀವನದಲ್ಲಿ ಎಂದು ಹಿಮಾಲಯದ ಕಡೆ ಪಯಣ ಬೆಳೆಸುವ ಕಥನವಿದು. ಸಿದ್ಧಾರ್ಥ ಹೊಸ್ಮನೆ ನೇಪಾಳ ಗಡಿ ಭಾಗದ ಕಡೆ ಚಾರಣ ಮಾಡುತ್ತಾ ಅಲ್ಲಿ ಸಿಗುವ ಸೋಫಿಯಾಳ ಜೊತೆಗೆ ತನ್ನ ಜೀನವ ಕಥನವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತಾನೆ. ಇವನ ಜೊತೆಗೆ ಸೋಫಿಯಾಳದು ಜೀವನ ಕಥನ ಅನಾವರಣಗೊಳ್ಳುತ್ತಾ ಹೋಗುತ್ತದೆ. ಜುಗುಲು ಬಂಧಿಯ ರೀತಿಯಲ್ಲಿ ಇಬ್ಬರು ತಮ್ಮ ಗತವನ್ನು ನೆನೆಪಿಸಿಕೊಳ್ಳುತ್ತಾ ವಿನಿಮಯ ಮಾಡಿಕೊಳ್ಳತ್ತಾ, ತಾತ್ವಿಕವಾಗಿ ಜೀವನದ ಬಗ್ಗೆ ಯೋಚಿಸುತ್ತಾ ಹೋಗುತ್ತಾರೆ. ಇವರಿಬ್ಬರ ಜೀವನ ಕಥನದೊಂದಿಗೆ ನಿಸರ್ಗವೂ ಜೊತೆಯಾಗುತ್ತದೆ. ಹಿಮಾಲಯದ ಅಗಾಧತೆ, ಸೌಂದರ್ಯ, ಬೆರಗು,

ಬೆಟ್ಟ-ಗುಡ್ಡಗಳು, ಚಾರಣದ ದಾರಿಗಳು ಇವರ ಬದುಕಿನ ಬಿಕ್ಕಟ್ಟುಗಳೊಂದಿಗೆ ತಳಕು ಹಾಕಿಕೊಂಡು ಹೋಗುತ್ತದೆ. ಕೆಲವು ಸಾರಿ ಈ ಜೀವಿಗಳು ನಿಸರ್ಗದ ಜೊತೆಗೆ ಸಹಜವಾಗಿ ಬೆರೆತು ಹೋಗುತ್ತಾರೆ. `ನಿಸರ್ಗ ಸಹಜವಾದ’ ಜೀವನ ಮನುಷ್ಯನಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಇವರಿಬ್ಬರನ್ನು ಕಾಡುತ್ತದೆ. ಈ ಪ್ರಶ್ನೆ ಸಿದ್ಧಾರ್ಥ ಮತ್ತು ಸೋಫಿಯಾದು ಮಾತ್ರವಲ್ಲ. ಮನುಕುಲದ ಪ್ರಶ್ನೆಯಾಗಿದೆ. ಭೋಗಕ್ಕೆ ಒಳಗಾಗುತ್ತಿರುವ ಮನುಷ್ಯ ನಿಸರ್ಗದ ಮೇಲೆ ಅಮಾನುಷವಾಗಿ ಸವಾರಿ ಮಾಡುತ್ತಿದ್ದಾನೆ. ಭವಿಷ್ಯದ ಜೀವಿಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಂತೆ ವರ್ತಿಸುತ್ತಿದ್ದಾನೆ. ಈ ಜೀವನವೇ ಮುಂದುವರೆದರೆ ಏನಾಗಬಹುದೆಂಬ ಆತಂಕ ಇಬ್ಬರನ್ನು ಕಾಡುತ್ತದೆ. ಈ ಅಂಶ ಎಲ್ಲಿಯೂ ವಾಚ್ಯವಾಗಿ ಬರುವುದಿಲ್ಲ. ಕಥನದೊಂದಿಗೆ ಹರಿಯುತ್ತಾ ಹೋಗುತ್ತದೆ. ಕಾಮ, ಹಿಂಸೆ, ಸಾವು, ಮಾನವ ಸಂಬಂಧಗಳು, ಪ್ರಕೃತಿಯ ತಾದಾತ್ಯ್ಮತೆ ಕಾದಂಬರಿಯಲ್ಲಿ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಈ ಕಾದಂಬರಿಯು ಜೀವನ ಉದ್ದೇಶವೇನು ಎಂಬ ತಾತ್ವಿಕ ಚಿಂತನೆಯನ್ನು ಮುಖ್ಯ ಭೂಮಿಕೆಯನ್ನಾಗಿಸಿಕೊಂಡಿದೆ.

ಈ ಕಾದಂಬರಿಯ ಕಾಲಾವಧಿ ತುಂಬಾ ಚಿಕ್ಕದು. ಹದಿನೈದು ದಿನಗಳ ಪಯಣದಲ್ಲಿ ಇಬ್ಬರು ತಮ್ಮ ಜೀವನದ ಸತ್ಯವನ್ನು ಶೋಧಿಸಿಕೊಳ್ಳತ್ತಾ ಹೋಗುತ್ತಾರೆ. ಸಿದ್ಧಾರ್ಥನ ಬೇರುಗಳು ಹಳ್ಳಿಗಳಲ್ಲಿಯೇ ಇವೆ. ಆತ ಬೆಳೆದದ್ದು ಬೆಂಗಳೂರಿನಲ್ಲಿ. ಆತನ ಕುಟುಂಬ ಜೈನ ಧರ್ಮಕ್ಕೆ ಸೇರಿದ್ದು.` ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪದ, ಕಾಲ್ತೋಡು ಗ್ರಾಮದ ಹೊಸ್ಮನೆ ಕುಟುಂಬ ಎಂದರೆ ಅಂತಿಂತ ಕುಟುಂಬವಲ್ಲ. ಒಂದೊಂದು ಕಾಲದಲ್ಲಿ ನೂರಾರು ಎಕರೆ ಗದ್ದೆ, ತೋಟ, ಹಕ್ಕಲು, ಕುಮ್ಕಿಯಿದ್ದ ಅವಿಭಕ್ತ ಕೃಷಿ ಕುಟುಂಬ. ‘ಇಂತಹ ಕುಟುಂಬದಲ್ಲಿ ಸಿದ್ಧಾರ್ಥ ಬೆಳೆದವನು. ತಂದೆ ಧರ್ಮರಾಜ ಶೆಟ್ಟರು ಜೀವನವನ್ನು ಅತೀವವಾಗಿ ಪ್ರೀತಿಸುವವರು. ಬದುಕಿನ ಬಗ್ಗೆ ತಾತ್ವಿಕವಾಗಿ ಚಿಂತನೆ ಮಾಡುವವರು. ಶಿಕ್ಷಣದಿಂದ ಮನುಷ್ಯ ಏಳಿಗೆ ಸಾಧ್ಯ ಎಂದು ನಂಬಿದವರು. ಪರಂಪರಾಗತ ದೈವಗಳ ಮೇಲೆ ಶ್ರದ್ದೆಯುಳ್ಳವರು. ಅಪ್ಪನ ವ್ಯಕ್ತಿತ್ವ ಸಿದ್ಧಾರ್ಥನಿಗೆ ದೊಡ್ಡ ಆದರ್ಶ. ತಂದೆ ತೀರಿ ಹೋದ ಮೇಲೆ ಸಿದ್ಧಾರ್ಥನಿಗೆ ಜೀವನದ ಬಗ್ಗೆ ಒಂದು ರೀತಿಯ ವೈರಾಗ್ಯ ಬರುತ್ತದೆ. ಅದಕ್ಕಾಗಿ ಬದುಕಿನ ಸತ್ಯದ ಹುಡುಕಾಟಕ್ಕಾಗಿ ನೇಪಾಳದ ಅನ್ನಪೂರ್ಣ ಸರ್ಕಿಟ್ ಟ್ರಕ್ ನ ದಾರಿ ಹಿಡಿಯುತ್ತಾನೆ.

ಈ ಪಯಣದಲ್ಲಿ ಸೋಫಿಯಾಳಿಗಿಂತ ಮುಂಚೆ ಲೂಸಿಯಾ ಭೇಟಿಯಾಗುತ್ತಾಳೆ. ಇಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಈ ಪಯಣದಲ್ಲಿ ಭೇಟಿಯಾಗುವ ಮಹಿಳೆಯರು ಸ್ವತಂತ್ರ ಜೀವಿಗಳು. ದೇಹದ ಹಂಗನ್ನು ಮೀರಿದವರು. ಬದುಕಿನ ಬಗ್ಗೆ ಗಾಢವಾಗಿ ಚಿಂತನೆ ಮಾಡುವವರು. ಬೌದ್ಧ ಧರ್ಮದ ಅನುಯಾಯಿಯಾದ ಲೂಸಿ ಧರ್ಮಗಳ ಚಿಂತನೆ ಮಾಡುವುದು ಮುಖ್ಯವಾಗಿದೆ.`ಇವತ್ತು ಧರ್ಮಗಳು ಧರ್ಮಗಳಾಗಿ ಉಳಿದಿಲ್ಲ. ಪ್ರಪಚದಾದ್ಯಂತ ಅವು ರಾಜಕೀಯದ, ರಾಜಕೀಯ ಪಕ್ಷಗಳ ರಾಜಕಾರಣಿಗಳ ಕೈಯ ಒಂದು ಪ್ರಬಲ ಟೂಲ್ ಗಳಾಗಿ ಪರಿವರ್ತನೆಗೊಂಡಿವೆ. ಈಗ ನಾವು ಯಾವ ಹಂತ ತಲುಪಿದ್ದೇವೆಂದರೆ ಧರ್ಮಗಳ ಮೂಲಕವೇ ಹಿಂಸೆಯನ್ನು ಬಿತ್ತುವ ಹಾಗೇ ಬಿತ್ತಿದ ಹಿಂಸೆಯ ಬೀಜಗಳೇ ಬೃಹತ್ ಮರಗಳಾಗಿ, ಅದರಿಂದ ಬೇರೆ ಬೇರೆ ರೂಪದಲ್ಲಿ ಬರುವ ಫಲಗಳ ಮೂಲಕವೇ ರಾಜಕಿಯ ಮಾಡುವ ಒಂದೊಂದು ಹಿಂಸಾತ್ಮಕ ವ್ಯವಸ್ಥೆ. ಈಗ ಜಗತ್ತನ್ನು ಆವರಿಸಿ ನಿಂತಿದೆ. ಈಗ ಜಗತ್ತಿನೆಲ್ಲೆಡೆ ಚಾಲ್ತಿಯಲ್ಲಿರುವ ಸರ್ಕಾರಗಳು ನಿಂತಿರುವುದೇ ಧರ್ಮಾಧಾರಿತ ರಾಜಕೀಯದ ಮೇಲೆ. ಅದು ಒಂದೊಂದು ಕಡೆ ಒಂದೊಂದು ರೂಪ ತಳೆದು ಹೆಮ್ಮರವಾಗಿ ನಿಂತಿದೆ. ಈ ನಡುವೆ ಅಹಿಂಸೆಯ ಬಗ್ಗೆ ಮಾತಾಡುವುದು, ಅದನ್ನೇ ನೆಚ್ಚಿಕೊಂಡು ಧರ್ಮದ ಬೆಳವಣಿಗೆಯ ಕುರಿತು ಕನಸು ಕಾಣುವುದು ಮೂರ್ಖತನದ ಪರಮಾವಧಿ.’ ಎಂದು ಸಿದ್ಧಾರ್ಥನಿಗೆ ಹೇಳುತ್ತಾಳೆ. ಕಾದಂಬರಿಯಲ್ಲಿ ಬರುವ ಈ ಮಾತುಗಳು ಧರ್ಮದ ಸ್ಥಿತಿಯನ್ನು ಮುಂದಿಡುತ್ತದೆ. ಧರ್ಮವನ್ನು ನಂಬಿದ ಮನುಷ್ಯನ ಪಾಡು ಏನಾಗಬೇಕೆಂಬ ಚಿಂತನೆಯು ಕಾದಂಬರಿಯಲ್ಲಿ ಇದೆ. ಅಷ್ಟೇನು ಧರ್ಮದ ಬಗ್ಗೆ ನಂಬಿಕೆ ಇಲ್ಲದ ಸಿದ್ಧಾರ್ಥನಿಗೆ ಬದುಕಿನ ಜೊತೆಗೆ ಸಾಗುವ ಧರ್ಮದ ಬಗ್ಗೆ ಜಿಗುಪ್ಸೆ ಇದೆ. ಆದರೂ ಎಲ್ಲೋ ಒಂದು ಕಡೆ ಅದನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂಬ ಗೊಂದಲವೂ ಇದೆ.

ಸಿದ್ಧಾರ್ಥ ಮಹಾ ಬುದ್ದಿವಂತ `ಜಸ್ಟ್ ಇಂಟಲಿಜೆನ್ಸ್’ ಸಂಸ್ಥೆಯನ್ನು ಕಟ್ಟಿ ನೂರಾರು ಕೋಟಿ ಗಳಿಸಿದವ. ಆತನ ಜೊತೆಗಾರರು ಮೋಸ ಮಾಡಿದರು ಅದನ್ನು ತಡೆದುಕೊಂಡು ಹಠದಿಂದ ಬದುಕುವ ಇಚ್ಚಾಶಕ್ತಿಯೂ ಅವನಿಗೆ ಇದೆ. ಮನುಷ್ಯನ ಮೋಹ, ವಂಚನೆ, ಡಾಂಭಿಕತೆ, ಹಾದರ ಎಲ್ಲವನ್ನು ಬಿಟ್ಟು ಬದುಕಿನಲ್ಲಿ ಏನೋ ಹೊಸದನ್ನು ಪಡೆಯಲು ಚಾರಣಕ್ಕೆ ಬರುವುದು. ಆದರೆ ಬದುಕು ಅಷ್ಟು ಸುಲಭವೇ. ಎಷ್ಟೇ ಈ ಬದುಕಿನಿಂದ ದೂರ ಹೋಗಬೇಕಂದುಕೊಂಡರು ಮತ್ತೆ ಅದು ಲೌಖಿಕಕ್ಕೆ ಸೆಳೆಯುತ್ತದೆ. ಚಾರಣ ಮಾಡುತ್ತಿದ್ದ ಸಿದ್ಧಾರ್ಥ ಒಂದು ಕೊರಕಲಲ್ಲಿ ಬಿದ್ದು ಮೂರ್ಚೆ ಹೋಗುತ್ತಾನೆ. ಮೂರ್ಚೆ ಹೋದವನನ್ನು ನೋಡಿಕೊಂಡ ಸೋಫಿಯಳ ಜೊತೆ ಸಿದ್ಧಾರ್ಥನ ಸ್ನೇಹ ಬೆಳೆಯುತ್ತದೆ. ಆಕೆ ಹೇಳುವ ಮಾತುಗಳು ಸಿದ್ಧಾರ್ಥನಿಗೆ ಮತ್ತೊಂದು ಬದುಕಿನ ಅರ್ಥವನ್ನು ನೀಡುತ್ತವೆ. ` ಸಿದ್ಧಾರ್ಥ್, ಲೆಟ್ ಅಸ್ ನಾಟ್ ಟೇಕ್ ರಿಸ್ಕ್, ಪರ್ವತಗಳ ಜೊತೆಗಿನ ಆ ಆಟ ಹುಡುಗಾಟವಲ್ಲ. ಎಲ್ಲವೂ ಸರಿಯಿದ್ದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ರೋಮಾಂಚನವಾಗುತ್ತಲೇ ಹೋಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಹೇಪ್ ಆಗಿ ಉಸಿರುಗಟ್ಟಿ ಸಾಯಬಹುದು. ಇಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಸ್ ಆದರೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಜೀವ ಹೋಗುತ್ತದೆ. ನಿನಗೆ ಜ್ಞಾನ ತಪ್ಪಿತ್ತು. ಡಾ. ಹಾಪ್ ಕಿನ್ಸ್ ಪರವಾಗಿಲ್ಲ ಅಂತ ಹೇಳಿದರೂ, ಒಂದು ದಿನದ ಮಟ್ಟಿಗೆ ವಿಶ್ರಾಂತಿ ತಗಂಡು ಮುಂದೆ ಹೋಗೋದು ಒಲ್ಲೆಯದು. ಈವತ್ತು ನಾನು ಸೋನಮ್ ನಿಮ್ಮ ಜೊತೆ ಇರ್ತೀವಿ. ನಾಳೆ ಬೆಳಗ್ಗೆ ನಿನ್ನ ಪಯಣ ನೀನು ಮುಂದುವರೆಸು. ನಮ್ಮ ಪಯಣ ನಾವು ಮುಂದುವರೆಸುತ್ತೇವೆ. ಏಕೆಂದರೆ ನಾವು ಸದಾ ಅತ್ಯಂತ ದೀರ್ಘವಾದ ಸಂದುಗೊಂದಿಗಳಲ್ಲಿರುವ ಕಠಿಣವಾದ ಹೈಕಿಂಗ ಟ್ರಾಕ್ ಹಿಡಿದು ಹೈಕ್ ಮಾಡುವ ಹುಚ್ಚರು. ಉಳಿದವರಂತೆ ಎಲ್ಲರೂ ನಡೆದುಕೊಂಡು ಹೋಗುವ ಹೈಕಿಂಗ ಟ್ರಾಕ್ ಅಥವಾ ಮಣ್ಣಿನ ರಸ್ತೆಯಲ್ಲಿ ಹೆಜ್ಜೆ ಹಾಕುವ ವ್ಯಕ್ತಿ ನಾನಲ್ಲ. ಬದುಕಲ್ಲಿ ಕೂಡ. ಇಲ್ಲಿ ಕೂಡ. ಕಾಣದ ನಿಗೂಢ ದಾರಿಯಲ್ಲಿ ಹೆಜ್ಜೆ ಹಾಕುವಾಗ ಸಿಗುವ ಥ್ರಿಲ್ ಇದೆಯೆಲ್ಲಾ, ಅದು ವಿವರಿಸಲು ಸಾಧ್ಯವಿಲ್ಲ.’ ಎಂದು ಹೇಳುತ್ತಾಳೆ. ಆಗ ಸಿದ್ಧಾರ್ಥನಿಗೆ ತನ್ನ ನಿರ್ಧಾರದ ಬಗ್ಗೆ ಬೇರೆಯದೇ ಆಲೋಚನೆ ಹುಟ್ಟುತ್ತದೆ.

ಮುಂದೆ ದೇಹ ಮನಸ್ಸು ಒಂದಾಗುವ ಮಟ್ಟಿಗೆ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯುತ್ತದೆ. ಇಬ್ಬರೂ ಸ್ವಚ್ಚಂದ ನಿರ್ಮಲ ಪ್ರೀತಿಗೆ ಹಂಬಲಿಸುವವರು. ಈಗಾಗಲೇ ಸಿದ್ಧಾರ್ಥ ಅಗರ್ಭ ಶ್ರೀಮಂತರ ಮಗಳು ಸುಚಿತ್ರಾಳನ್ನು ಪ್ರೀತಿಸಿ ಮದುವೆಯಾಗಿ ವಿಚ್ಚೇದನ ಪಡೆದವನು. ಈ ಮೊದಲೇ ಸುಚಿತ್ರ ಮದುವೆಯಾಗಿ ಗಂಡನನ್ನು ಕಳೆದುಕೊಂಡವಳು. ಸಿದ್ಧಾರ್ಥನನ್ನು ಪ್ರೀತಿಸಿ ಮದುವೆಯಾದರೂ ಗಂಡನ ನೆನಪನ್ನು ಮರೆಯಲಾರದೆ ಸಂಕಟ ಪಡುವವಳು. ಇದರಿಂದ ಸಿದ್ಧಾರ್ಥನ ಜೊತೆ ವಿಚ್ಚೇದನ ಪಡೆದವಳು. ಇವಳೊಂದಿಗಿನ ಪ್ರೀತಿ ಯಾವ ಬಗೆಯದೆಂಬುದು ಸಿದ್ದಾರ್ಥನಿಗೆ ಅರ್ಥವಾಗುವುದಿಲ್ಲ. ನಂತರ ನಿಶ್ಚಲಾಳ ಜೊತೆಗೆ ಸ್ನೇಹ ಬೆಳಸಿ ಲೈಂಗಿಕ ಸುಖವನ್ನು ಪಡೆಯುತ್ತಾನೆ. ಆಕೆ ಈಗಾಗಲೇ ಮದುವೆಯಾಗಿ ಮಕ್ಕಳನ್ನು ಪಡೆದಿರುತ್ತಾಳೆ. ದೂರದಲ್ಲಿರುವ ಗಂಡನ ಅನುಮತಿ ಪಡೆದೇ ಸಿದ್ಧಾರ್ಥನ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳತ್ತಾಳೆ. ಸುಚಿತ್ರಾ ಸಿದ್ಧಾರ್ಥರ ಪ್ರೀತಿ ಕೇವಲ ದೇಹ ಸುಖಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಇಬ್ಬರು ಮಹಿಳೆಯರ ಜೊತೆ ಸಿದ್ಧಾರ್ಥ ಸ್ವಲ್ಪ ದಿನ ಜೀವನ ಸಾಗಿಸಿದವನು. ಇವರ ಜೊತೆ ಕಳೆದ ದಿನಗಳಲ್ಲಿ ಬದುಕಿನ ಬಗ್ಗೆ ಜಿಗುಪ್ಸೆ ಮೂಡಿರುತ್ತಿದೆಯೇ ಹೊರತು ಬದುಕಿನನ್ನು ಪ್ರೀತಿಸುವ ಹುಮ್ಮಸ್ಸೇನು ಇರುವುದಿಲ್ಲ. ಅನುಕ್ಷಣವೂ ಜೀವನೋತ್ಸಾಹ ಹೊಂದಿದ ಸೋಫಿಯಾ ಸಿದ್ಧಾರ್ಥನಿಗೆ ಇಷ್ಟವಾಗುತ್ತಾಳೆ.

ಸೋಫಿಯಾ ಬದುಕಿನಲ್ಲಿ ಭಯಾನಕ ಹಿಂಸೆ ಕಂಡವಳು. ಪ್ರೀತಿಸಿ ಮದುವೆಯಾದ ಗಂಡ ತಾಲಿಬಾನಿಗಳಿಂದ ಹತ್ಯೆಯಾಗಿರುತ್ತಾನೆ. ಈಕೆಯು ನಿರ್ಮಲ ಪ್ರೀತಿಗಾಗಿ ಹುಡುಕುತ್ತಿರುತ್ತಾಳೆ. ಇಬ್ಬರು ಜೊತೆಗೂಡಿಯೇ ಚಾರಣ ಮಾಡುತ್ತಾರೆ. ಚಾರಣದ ಸಂದರ್ಭಧಲ್ಲಿ ಬೆಟ್ಟಗಳನ್ನು ಹತ್ತುವಾಗ ಒಬ್ಬ ವೈದ್ಯ ಹೇಳುವ ಮಾತುಗಳು ಮುಖ್ಯಗಿವೆ `ಎಎಂಎಸ್ ಅಷ್ಟೇನು ಡೇಂಜರಸ್ ಅಲ್ಲ. ಆದರೆ ಅದನ್ನು ಕಡೆಗಣಿಸಿದರೆ ಅದು ಹೇಪ್, ಇಲ್ಲ ಹೇಸ್ ಆಗಿ ನಿಮ್ಮ ಜೀವವನ್ನೇ ತೆಗೆದುಕೊಳ್ಳಬಹುದು. ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯ ನೆನಪಿಡಬೇಕಾದ ಮೂಲ ಮಂತ್ರವಿದೆ. ನಾವು ಪ್ರಕೃತಿಯ ಕೂಸುಗಳು. ಈ ಪ್ರಕೃತಿ ನೀಡಿದ ಕೊಡುಗೆ. ನಾವು ಎಷ್ಟೇ ದೈಹಿಕ ಮಾನಸಿಕ ಗಟ್ಟಿಯಾಗಿದ್ದರೂ ಪ್ರಕೃತಿಯನ್ನು ಮಣಿಸಿ, ಗೆದ್ದು ನಿಲ್ಲಲಾಗುವುದಿಲ್ಲ. ಈ ಮಾತು ಪರ್ವತಗಳ ಮಡಿಲು ಮತ್ತು ಸಾಗರದಾಳ ಎರಡರ ವಿಷಯದಲ್ಲಿ ಜಾಸ್ತಿ ಪ್ರಸ್ತುತ. ಪ್ರಕೃತಿಯನ್ನು ಜಯಿಸಲು ಒಂದು ಸುಲಭ ಮಾರ್ಗವಿದೆ. ಅದೇನಂದರೆ ಅದಕ್ಕೆ ಸಂಪೂರ್ಣ ಶರಣಾಗುವುದು. ಅಕಸ್ಮಾತ್ ನಿಮ್ಮಲ್ಲಿ ಯಾರಿಗಾದರೂ ಎಎಂಎಸ್ ಶುರುವಾಗಿದೆಯೆಂದರೆ ದೇಹಕ್ಕೆ ವಿಶ್ರಾಂತಿ ಕೊಡಿ. ದೇಹ ಆ ಸಂಜ್ಞೆಯನ್ನು ಕೊಟ್ಟ ಮೇಲೂ ಎತ್ತರಕ್ಕೇರುವ ದಾರ್ಷ್ಟ್ಯ ತೋರಿಸಬೇಡಿ. ಒಂದೋ ಇರುವ ಜಾಗದಲ್ಲಿ ವಿಶ್ರಾಂತಿ ಮಾಡಿ. ಇಲ್ಲಾ ಅಲ್ಲಿಂದ ಐವತ್ತು ಮೀಟರ್ ಕೆಳಗಿಳಿದು ವಿಶ್ರಮಿಸಿ. ಆಗ ದೇಹ ತಾನೇ ತಾನಾಗಿ ಸಮಸ್ಥಿತಿಗೆ ಬರುತ್ತೆ. ಇನ್ನು ಹೇಪ್ ಇಲ್ಲ ಅಂದ್ರೆ ಹೇಸ್ ಪರಸ್ಥಿತಿ ಎದುರಾದರೆ ಒಂದು ಕ್ಷಣ ವಿಳಂಬ ಮಾಡದೆ ಯಾರದ್ದಾದರೂ ಸಹಾಯ ಪಡೆದು ನೀವಿರುವ ಎತ್ತರದಿಂದ ಕೆಳಗಿಳಿದುಬಿಡಿ. ಆ ಕ್ಷಣ ನೀವು ಸೋತರೂ ಪ್ರಕೃತಿ ನಿಮಗೆ ಜೀವಂತವಾಗಿರುವ ಅವಕಾಶ ನೀಡುತ್ತೆ. ಒಮ್ಮೆ ಜೀವಂತ ಉಳಿದ ಮೇಲೆ, ಮತ್ತೆ ಯಾವಾಗಲಾದರೂ ನೀವು ಥೋರಾಂಗ್ ಲಾ ಪಾಸ್ ಮುಟ್ಟುವ ಅವಕಾಶ ಸಿಗುತ್ತದೆ’. ಇಂತಹ ಮಾತುಗಳು ಸಿದ್ಧಾರ್ಥನಿಗೆ ಕೇವಲ ಚಾರಣದ ಸಂದರ್ಭದ ಮಾತುಗಳಾಗಿ ಕೇಳಿಸುವುದಿಲ್ಲ. ಬದುಕಿನ ಅರ್ಥವನ್ನು ಹುಡುಕಲು ಪ್ರೇರೇಪಿಸುತ್ತವೆ. ಇದರಿಂದ ಚಾರಣ ಸಿದ್ಧಾರ್ಥನಿಗೆ ಕೇವಲ ತನ್ನ ಮುಕ್ತಿ ಅಥವಾ ನೆಮ್ಮದಿಗಾಗಿ ಮಾಡುವುದಾಗುದಿಲ್ಲ.

ಅನೇಕ ಬದುಕಿನ ಅನುಭವಗಳು ಇನ್ನಷ್ಟೂ ಜೀವನದ ಬಗ್ಗೆ ಕುತೂಹಲ, ಪ್ರೀತಿ, ಜಿಜ್ಞಾಸೆ ಹುಟ್ಟಿಸುತ್ತಾ ಹೋಗುತ್ತದೆ. ಹಾಗೆ ನೋಡಿದರೆ ಬದುಕೇ ಒಂದು ಚಾರಣ.

ಸೋಫಿಯಾ ಅಗರ್ಭ ಶ್ರೀಮಂತ ಕುಟುಂಬದಲ್ಲಿ ಸದಾ ಭಯ, ಅತಂತ್ರ ಸ್ಥಿತಿಯಲ್ಲಿ ಬೆಳೆದವಳು. ಹೊರಗಿನ ಅರಿವಿಲ್ಲದೆ ಕೇವಲ ಸುಖದ ಸುಪ್ಪತ್ತಿಗೆಯಲ್ಲಿ ಕಾಲ ಕಳೆಯುವದು ಆಕೆಗೆ ಇಷ್ಟವಾಗುವುದಿಲ್ಲ. ಆಕೆಯ ತಂದೆ ಜಗತ್ತಿನಲ್ಲಿಯೇ ಶ್ರೀಮಂತನಾಗಿದ್ದರೂ ಆ ಶ್ರೀಮಂತಿಕೆ ಆಕೆಯಲ್ಲಿ ಯಾವ ಮೋಹವನ್ನು ಹುಟ್ಟಿಸುವುದಿಲ್ಲ. ಅದನ್ನು ತ್ಯಜಿಸಿ ಸ್ವಂತ ಗಳಿಸಿ ಬದುಕುವ ನಿರ್ಧಾರ ಮಾಡಿ ಸಿರಿಯಾ ಭಾಗದ ಪ್ರದೇಶದಲ್ಲಿ ನಿರಾಶ್ರಿತರನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರುತ್ತಾಳೆ. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಕಳ್ಳ ಸಾಕಾಣಿಕೆ, ದೇಶಗಳ ನಡುವಿನ ದ್ವೇಷ, ಹಿಂಸೆಯನ್ನು ನೋಡುತ್ತಾಳೆ. ತಾನು ಪ್ರೀತಿಸಿದ ಪ್ಯಾಟ್ರಿಕ್ ನ ಹತ್ಯೆಯಾದ ಮೇಲೆ ಜೀವನದ ಬಗ್ಗೆ ಜಿಗುಪ್ಸೆ ಬರುತ್ತದೆ. ಆಗ ಜೀವನದ ಸುಖ ಹುಡಿಕಿಕೊಂಡು ಅನ್ನಪೂರ್ಣದ ಕಡೆಗೆ ಚಾರಣಕ್ಕೆ ಬರುತ್ತಾಳೆ. ವರ್ಷದಲ್ಲಿ ಈ ಕಡೆ ಚಾರಣ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ಪಡೆದುಕೊಂಡು ಜೀವನೋತ್ಸಾಹ ಪಡೆದುಕೊಳ್ಳುತ್ತಿರುತ್ತಾಳೆ. ಈ ಸಲದ ಚಾರಣದಲ್ಲಿ ಸಿದ್ಧಾರ್ಥನ ಭೇಟಿಯಾಗಿ ಆತನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಪ್ರೀತಿಯ ಬಗ್ಗೆ ಸಿದ್ಧಾರ್ಥ ಮಾತುಗಳನ್ನು ಗಮನಿಸಬೇಕು.` ನನ್ನ ಪ್ರಕಾರ ಜೀವನದಲ್ಲಿ ನಿಜವಾದ ಪ್ರೀತಿ ಅನ್ನೋದು ಒಂದು ಭ್ರಮೆ. ಪ್ರೀತಿ ಅನ್ನೋದು ಪ್ರೀತಿ ಅಷ್ಟೇ. ಅದು ಆಯಾ ಕಾಲ, ಎದುರಿನ ವ್ಯಕ್ತಿ, ಸಂದರ್ಭಕ್ಕೆ ಅನುಗುಣವಾಗಿ ಎದೆಯಲ್ಲಿ ಮೊಳಕೆಯೊಡೆಯಬಹುದು. ಅದು ಒಬ್ಬ ವ್ಯಕ್ತಿಯ ಹೃದಯದಲ್ಲಿ ಒಂದೇ ಬಾರಿ ಮಾತ್ರ ಚಿಗುರಬೇಕು ಅಂತೇನು ಇಲ್ಲ. ಎರಡೋ ಮೂರೋ ನಾಲ್ಕೋ ಬಾರಿ ಪ್ರೀತಿ ಹುಟ್ಟಬಹುದು. ಹುಟ್ಟಿ ಸಂಪೂರ್ಣವಾಗಿ ಚಿಗುರಿ ಮರವಾಗಬಹುದು. ಬದುಕು ಭದ್ರವಾಗಬಹುದು. ಕೆಲವೊಮ್ಮೆ ಏನೂ ಆಗದೇ ಹೋಗಬಹುದು. ಆದ್ರೆ ಅದೊಂದು ರೋಗವಾಗಿ ಜೀವನವನ್ನು ಮುಗಿಸಬಾರದು ಅಷ್ಟೆ.’ ಎಂದು ಸೋಫಿಯಾಳಗೆ ಹೇಳುತ್ತಾನೆ.

ಇಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾ ಮುಕ್ತವಾಗಿ ತಮ್ಮ ಬದುಕಿನ ನೆನಪುಗಳನ್ನು ಬಿಚ್ಚಿಕೊಳ್ಳುತ್ತಾ ಪಯಣ ಬೆಳೆಸುತ್ತಾರೆ. ಈ ಪಯಣದಲ್ಲಿ ಎದುರಾಗುವ ಸವಾಲುಗಳು ಬದುಕಿನ ಸವಾಲುಗಳು ಆಗಿರುತ್ತವೆ. ಸೋಫಿಯಾ ಪ್ರತಿ ಪಯಣದಲ್ಲಿಯೂ ಆ ಪಯಣದ ದಾರಿಯ ಬಗ್ಗೆ ವಿವರ ಕೊಡುತ್ತಾಳೆ. ಆ ವಿವರಗಳು ಬದುಕಿನ ವಿವಿಧತೆಯನ್ನು ಅರಿತುಕೊಳ್ಳುವ ತತ್ವವನ್ನು ಧ್ವನಿಸುತ್ತವೆ. `ಸಿದ್ ಮುಂದಿನ ದಾರಿ ಈಗಿಗಿಂತ ಕಠಿಣ. ನಿನ್ನ ವಿಲ್ ಪವರ್ ಗಟ್ಟಿ ಮಾಡಿಕೋ. ಹಾದಿ ಕಠಿಣ ಇದ್ದರೂ ಇದು ಬದುಕಿನಲ್ಲಿಯೇ ನೀನು ಸಾಗಿದ ಅತ್ಯಂತ ಸುಂದರ ಹಾದಿಯಾಗಲಿದೆ. ನಾನು ಅನ್ನಪೂರ್ಣ ಸರ್ಕೀಟಿಗೆ ಪದೇ ಪದೇ ಬರಲು ಮುಖ್ಯ ಕಾರಣ ಫೆಡಿಯಿಂದ ಮುಕ್ತಿನಾಥಕ್ಕೆ ಹೋಗುವ ಈ ಹಾದಿಯಲ್ಲಿನ ಸೌಂದರ್ಯ, ಶಾಂತಿ, ನೆಮ್ಮದಿಗಾಗಿ. ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವುದು ಮಾತ್ರವಲ್ಲ. ಮುಕ್ತವಾಗಿ ತೆರೆದಿಟ್ಟುಕೊಂಡು ಹೆಜ್ಜೆ ಹಾಕಬೇಕು. ಕೇವಲ ಕಣ್ಣನ್ನಲ್ಲ, ಒಳಗಿನ ಕಣ್ಣು ಕೂಡ ಸಂಪೂರ್ಣವಾಗಿ ತೆರೆದಿರಲಿ. ನೀನೊಮ್ಮೆ ಈ ಹಾದಿಯ ಮೋಡಿಗೆ ಸಿಕ್ಕಿ ಹಾಕಿಕೊಂಡರೆ ಪದೇ ಪದೇ ಅದು ನಿನ್ನನ್ನು ಕರೆಯುತ್ತಲೇ ಇರುತ್ತದೆ. ಈ ನೋವು – ಕಷ್ಟ-ಶಾಂತಿ-ನೆಮ್ಮದಿ- ಸಾರ್ಥಕ ಮನೋಭಾವ ಎಲ್ಲವೂ ಒಂದು ಅದ್ಭುತ ಪ್ಯಾಕೇಜ್. ಇದು ಬೇರೆಲ್ಲಿಯೂ ಸಿಗೊಲ್ಲ. ಇದನ್ನು ಮನಸಾರೆ ಅನುಭವಿಸಬೇಕು. ಕಮಾನ್....’ ಎಂದು ಹೇಳುತ್ತಾಳೆ. ಮೇಲ್ನೋಟಕ್ಕೆ ಈ ಮಾತುಗಳು ಚಾರಣದ ಬಗ್ಗೆ ಹೇಳುತ್ತವೆ ಎಂದು ಅನಿಸುತ್ತದೆ. ಆದರೆ ಸಿದ್ಧಾರ್ಥ ಸೋಫಿಯಾ ಬದುಕಿನೊಂದಿಗೆ ನೋಡಿದಾಗ ವಿಶೇಷ ಅರ್ಥ ನೀಡುತ್ತವೆ.

ಮನಾಂಗ್ ನ ಥೋರಾಂಗ್ ಲಾ ಪಾಸ್ ತಲುಪಿದ ಮೇಲೆ ಅಲ್ಲಿ ಆಗುವ ಅನುಭೂತಿಯನ್ನು ಸಿದ್ಧಾರ್ಥನು ಸೋಫಿಯಾಳಿಗೆ ಹೇಳುವ ಮಾತುಗಳಲ್ಲಿಯೇ ಕೇಳಬೇಕು. `ನೀನು ಹೇಳಿದ ಹಾಗೆ ನಿಜಕ್ಕೂ ಇದೊಂದು ಮಾಯಾಲೋಕ. ನನ್ನ ಅರಿವನ್ನು ಮೀರಿದ ಭಾವಾಲೋಕ. ಈ ಲೋಕದ ಬಗ್ಗೆ ನಿನಗೇಕಿಷ್ಟು ಮೋಹ ಎಂಬುದು ಈಗ ನನಗರ್ಥವಾಗುತ್ತಿದೆ. ನನ್ನ ಇಡೀ ಜೀವನದಲ್ಲಿ ಇಂತಹ ಒಂದು ಅನುಭೂತಿಯನ್ನು ಇದುವರೆಗೆ ನಾನು ಅನುಭವಿಸಿರಲಿಲ್ಲ, ಜನ ಬಂದು ತುಂಬಿಕೊಳ್ಳುವ ಮೊದಲಿನ ಆ ಮೌನಂಧಕಾರ, ಅದರೊಳಗೆ ಹುದುಗಿದ್ದ ಆ ಬೆಳಕು. ಸ್ತೂಪದೆದರು ಕಣ್ನು ಮುಚ್ಚಿ ಕೂತಾಗ ಅದೆಂತದೋ ಒಂದು ಒಂದು ವಿಶಿಷ್ಟ ಅನುಭವ. ನನ್ನೆಲ್ಲ ನೋವುಗಳು ಕಷ್ಟ ಕಾರ್ಪಣ್ಯಗಳು ಎದೆಯಾಳದಿಂದ ಕೊಚ್ಚಿ ಹೋಗಿ, ಅಲ್ಲೊಂದು ಶಾಂತಿಯ ನೀಲ ಸರೋವರದ ಸೃಷ್ಟಿಯಾದಂತೆ. ಮನಸ್ಸು ಸ್ಥಬ್ಧವಾಗಿ ಯಾವುದೋ ಒಂದು ಮಾಯಾಲೋಕ ಸೇರಿ ಅಲ್ಲಿಯ ಗಾಳಿಯಲ್ಲಿ ಸ್ವತಂತ್ರವಾಗಿ ತೇಲಿದ ಅನುಭವ.’ ಈ ರೀತಿಯ ಅನುಭೂತಿಯ ಹುಡುಕಾಟವನ್ನು ಕಾದಂಬರಿ ಮಾಡುತ್ತದೆ.

ಬದುಕಿನಲ್ಲಿ ಎದುರಾಗುವ ಬಿಕ್ಕಟ್ಟುಗಳಿಗೆ ಬಿರುಗಾಳಿಯಂತಹ ಸಮಸ್ಯೆಗಳಿಗೆ ಪರಿಹಾರಗಳೇನು ಎಂಬುದನ್ನು ಕಾದಂಬರಿ ಗಂಭೀರವಾಗಿ ಚಿಂತಿಸುತ್ತದೆ. ಒಂದು ಪ್ರಕೃತಿಯ ಮಡಿಲಲ್ಲಿ ಒಂದಾಗುವುದು. ಅಲ್ಲಿಯೇ ದೈವಿಕತೆಯನ್ನು ಕಂಡುಕೊಳ್ಳುವುದು. ಆ ಮೂಲಕ ಬದುಕಿನ ಉತ್ಸಾಹ ಶಾಂತಿಯನ್ನು ಪಡೆಯುವದು. ಎಂಬ ಚಿಂತನೆಯನ್ನು ಕಾಣುತ್ತೇವೆ. ಇಲ್ಲಿ ಸೂಕ್ಷ್ಮತೆ ಕಾಣುವುದು ಈ ಹುಡುಕಾಟವೇ ಒಂದು ವ್ಯಸನವಾಗಿ ಬದುಕಿನ ನೆಮ್ಮದಿಯನ್ನು ಕಸಿಯಬಾರದು ಎಂಬ ಎಚ್ಚರ. ಈ ಎಚ್ಚರ ಸಿದ್ಧಾರ್ಥ ಮತ್ತು ಸೋಫಿಯಾಗೆ ಇದೆ. ಸಿದ್ಧಾರ್ಥನಿಗೆ ಸೋಫಿಯಾ ಹೇಳುವ ಮಾತುಗಳು ಈ ಸೂಕ್ಷ್ಮತೆಯನ್ನು ಧ್ವನಿಸುತ್ತದೆ. `ಸಿದ್ ನಾನು ನೀನು ಇಲ್ಲಿ ನೆಪ ಮಾತ್ರ. ವಿಧಿ, ದೇವರು, ಅದೃಷ್ಟ ಯಾವುದನ್ನು ನಾನು ನಂಬುವುದಿಲ್ಲ. ಆದರೂ ನಮ್ಮ ಸುತ್ತ ಮುತ್ತ ಆವರಿಸಿ ನಿಂತ ಈ ಪ್ರಕೃತಿ, ಅದರ ಶಕ್ತಿಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಈ ಹೊತ್ತು ನಿನ್ನಲ್ಲಿ ಆ ನೆಮ್ಮದಿ ಮೂಡಲು ಮನಸ್ಸು ಶಾಂತವಾಗಲು ನಾನು ಕಾರಣಳಲ್ಲ. ಅನ್ನಪೂರ್ಣೆಯ ಈ ಮಡಿಲು ಕಾರಣ. ಮೊದಲ ಬಾರಿಗೆ ನಾನು ಅವಳ ಅಂಗಳಕ್ಕೆ ಕಾಲಿಟ್ಟಾಗ ಒಬ್ಬ ವ್ಯಕ್ತಿಯಾಗಿ ನಿನಗಿಂತ ನಾನು ಛಿದ್ರ ಛಿದ್ರವಾಗಿದ್ದೆ. ಮೊದಲ ಬಾರಿಗೆ ನಾನು ಅಲ್ಲಿರೋ ಆ ಸ್ತೂಪದ ಮುಂದೆ ಬಂದು ಕಣ್ಣು ಮುಚ್ಚಿದಾಗ ಈವತ್ತು ನಿನಗಾದಂತೆಯೇ ನನ್ನೊಳಗಿನ ನೋವೆಲ್ಲಾ ಮಾಯವಾಗಿ ನನ್ನೊಳಗಿನ ವಿಷವೆಲ್ಲಾ ಹೊರ ಬಂದು .... ನಾನು ಸ್ವಲ್ಪ ಮಟ್ಟಿಗೆ ಮನುಷ್ಯಳಾದ ಅನುಭವ ಆಗಿತ್ತು. ಆ ಕಾರಣದಿಂದಲೇ ಪ್ರತಿ ವರ್ಷ ನಾನು ಈ ಹಾದಿಯಲ್ಲಿ ಪದೇ ಪದೇ ಹೆಜ್ಜೆ ಹಾಕುತ್ತಿರುವುದು. ಮತ್ತೆ ಮತ್ತೆ ಮನುಷ್ಯಳಾಗುವ ಯತ್ನ ಮಂದುವರೆಸಿರುವುದು. ಪರಿಪೂರ್ಣಳಾಗುವ ಯತ್ನ ಮಾಡುತ್ತಿರುವದು.’ ಎನ್ನುತ್ತಾಳೆ.

ಈ ಪಯಣದಲ್ಲಿ ಇಬ್ಬರನ್ನು ಕಾಡುವುದು ಸಾವು ಮತ್ತು ಕಾಮ. ಇಬ್ಬರು ಸಾವನ್ನು ಕಂಡವರು. ಸಾವಿನ ನೋವಿನಿಂದ ಬಿಡುಗಡೆ ಪಡೆಯಲು ಚಾರಣಕ್ಕೆ ಬಂದವರು. ಚಾರಣವೇ ಕಾದಂಬರಿಯಲ್ಲಿ ಒಂದು ಪಾತ್ರವಾಗಿ ಬರುತ್ತದೆ. ನೇಪಾಳದ ಗಡಿ ಭಾಗದಲ್ಲಿರುವ ಅನ್ನಪೂರ್ಣ ಸರ್ಕಿಟ್ ಟ್ರಕಿಂಗ್ ನ ಪ್ರತಿಯೊಂದು ಸ್ಥಳಗಳು, ಹೋಟಲ್ ಗಳು, ಮಾರ್ಗದರ್ಶಕರು, ಕಾರ್ಯನಿರತರ ಪ್ರತಿಯೊಂದು ವಿಷಯಗಳನ್ನು ಕತೆಯೊಂದಿಗೆ ಜೋಡಿಸಿಕೊಂಡಿವೆ. ಆದ್ದರಿಂದ ಈ ಕಾದಂಬರಿ ಚಾರಣದ ವರದಿ ಅನಿಸಿಕೊಳ್ಳುವುದಿಲ್ಲ.

ಸಾವು ಮತ್ತು ಕಾಮದ ಬಗ್ಗೆ ಇರುವ ಅವರಿಬ್ಬರ ಅಭಿಪ್ರಾಯವನ್ನು ಇಲ್ಲಿ ದಾಖಲಿಸಬೇಕು. ‘ಬದುಕಲ್ಲಿ ಕಾಣಬಾರದಷ್ಟು ಹಿಂಸೆ - ರಕ್ತವನ್ನ ಕಣ್ಣಾರೆ ಕಂಡ ನನ್ನನ್ನು ಸದಾ ಕಾಡುವ ಎರಡು ಅಂಶಗಳೆಂದರೆ ಸಾವು, ಕಾಮ. ಅವು ನನ್ನನ್ನು ಕಾಡಿದಷ್ಟು ಬೇರೆ ಯಾವುದೂ ಕಾಡಿಲ್ಲ. ಕಾಡುತ್ತಿಲ್ಲ’ ಎನ್ನುತ್ತಾಳೆ ಸೋಫಿಯಾ.

`ನನ್ನನ್ನೂ ಕೂಡ ಬಹಳಷ್ಟು ಕಾಡಿದ್ದು, ಕಾಡುತ್ತಿರುವುದು ಸಾವು ಕಾಮ. ನಾನು ನಿನ್ನಷ್ಟು ಹಿಂಸೆ - ರಕ್ತದ ಹೊಳೆಯನ್ನು ಕಣ್ಣಾರೆ ಕಂಡಿಲ್ಲ. ಆದರೆ, ಕಾರ್ಪೋರೇಟ್ ಜಗತ್ತಿನ ಹಿಂಸೆ - ಕಗ್ಗೋಲೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಸಾವು - ಕಾಮದ ಕಾಡುವಿಕೆಗೆ ಅದು ಮಾತ್ರವಲ್ಲ ಬದುಕಿನುದ್ದಕ್ಕೂ ಕಾಣದ – ದೊರಕದ ಅಮ್ಮನ ಪ್ರೀತಿ ಕೂಡ ಇರಬಹುದು. `ಸೋಫಿಯ, ಒಂದು ಮಾತು ಹೇಳಲಾ? ಹೀಗೆ ನಮ್ಮ ವ್ಯಕ್ತಿತ್ವವನ್ನು ನಾವೇ ಬಗೆದು ನೋಡುವಾಗ ಆಗುವ ಹಿಂಸೆಯಿದೆಯಲ್ಲಾ, ಅದನ್ನ ಸಹಿಸೋಕೆ ಆಗೊಲ್ಲ"

`ಹೌದು ಆ ನೋವು ಸಹಿಸೋಕೆ ಸಾಧ್ಯವಿಲ್ಲ. ಆದ್ರೆ, ಆ ನೋವಿಗೆ ಒಳಗಾಗದೇ, ನಮ್ಮನ್ನು ನಾವು ಬಗೆದು ನೋಡದೇ ಹೋದರೆ ನಾವು ನಾವಾಗಲು ಸಾಧ್ಯವೇ ಇಲ್ಲ. ಇದೊಂಥರಾ ಥೋರಾಂಗ್ ಲಾ ಇಫೆಕ್ಟ್ ತರಹ. ಆ ಎತ್ತರಕ್ಕೆ ಏರಬೇಕೆಂದರೆ ಎದುರಾಗುವ ಹಾದಿಯಲ್ಲಿನ ಎಲ್ಲ ನೋವನ್ನು ಅನುಭವಿಸಲೇಬೇಕು. ಮುಕ್ತಿ ಪಡೆಯಬೇಕೆಂದರೆ ವಿಷ ಕುಡಿಯಲೇಬೇಕು.’ ತಮ್ಮ ಬದುಕಿನಲ್ಲಾದ ನೋವುಗಳನ್ನು ಮರೆಯಲು, ಹೊಸ ಬದುಕನ್ನು ಕಟ್ಟಿಕೊಳ್ಳಲು ಚಾರಣವೇ ಸ್ಪೂರ್ತಿಯಾಗುತ್ತದೆ. ಬದುಕಿನ ಅನೇಕ ಪಾಠಗಳನ್ನು ಇಲ್ಲಿ ಕಲಿಯತ್ತಲೇ ಹೋಗುತ್ತಾರೆ. ಅವರಿಬ್ಬರ ನಡುವೆ ನಡೆಯುವ ಚರ್ಚೆಗಳು ಬದುಕನ್ನು ಅರಿತುಕೊಳ್ಳುವ ಚಿಂತನೆಯಾಗಿ ಕಾದಂಬರಿಯಲ್ಲಿ ಬರುತ್ತವೆ.

`ಸಿದ್. ನಾವು ದೇವರು- ಧರ್ಮವನ್ನ ನಂಬೋದು. ಬಿಡೋದು ನಮ್ಮ ನಮ್ಮ ನಂಬಿಕೆಗೆ ಬಿಟ್ಟಿದ್ದು. ಅಂತಹ ಒಂದು ನಂಬಿಕೆಯ ತಾಣಕ್ಕೆ ಹೋಗ್ತಿವಿ ಅಂದ್ರೆ ಅಲ್ಲಿಗೆ ಬರುವ ಉಳಿದ ಯಾತ್ರಾರ್ಥಿಗಳ ಭಾವನೆಗಳಿಗೆ ಬೆಲೆ ಕೊಡಬೇಕು. ಅದು ಸಾಧ್ಯವಾಗದೇ ಹೋದರೆ ಅಲ್ಲಿಗೆ ನಾವು ಕಾಲಿಡಬಾರದು. ನಾನು ಪ್ರತಿ ಭಾರಿ ಇಲ್ಲಿಗೆ ಬಂದಾಗಲೂ ಮುಕ್ತಿನಾಥ ಮಂದಿರದ ಸುತ್ತಮುತ್ತ ಕನಿಷ್ಠ ಒಂದೆರಡು ಗಂಟೆ ಕಳಿತೀನಿ. ದೇವರನ್ನೇ ನಂಬದ ನಾನು ಆ ಮಂದಿರದಲ್ಲಿ ಕೂಡ ಅದರ ಪ್ರಾಕೃತಿಕ ಶಕ್ತಿಯ ಮೂಲಕ ಶಾಂತಿ - ನೆಮ್ಮದಿಯನ್ನು ಕಾಣ್ತೀನಿ. ದೇವರ ಮೂಲಕವಲ್ಲ. ಅಲ್ಲಿನ ವಾತಾವರಣ, ಉಳಿದವರ ಮುಖದ ಮೇಲಿನ ಭಕ್ತಿ-ಭಾವಗಳ ಮೂಲಕ.’ ಎನ್ನುತ್ತಾಳೆ ಸೋಫಿಯಾ. ದೇವರು, ಧರ್ಮ, ಜೀವನ ಒಂದಕ್ಕೊಂದು ಬಿಡಿಸಲಾರದ ಸಂಬಂಧಗಳು. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಜೀವನವನ್ನು ನೆಮ್ಮದಿಯಾಗಿ ಕಳೆಯಬಹುದು. ಸಾಫ್ಟ್ ವೇರ್ ಇಂಜಿನಿಯರ್ ಬಗ್ಗೆ ಹೇಳುವ ಸೋಫಿಯಾಳ ಮಾತುಗಳನ್ನು ಗಮನಿಸಬೇಕು

`ಸಾಫ್ಟ್ ವೇರ್ ಪ್ರಪಂಚದಲ್ಲಿರೋ ಮೇಧಾವಿಗಳು, ಆಂತಪ್ರನೋರಿಯಲ್ ಲೋಕದಲ್ಲಿನ ನಿನ್ನಂತಹ ಜೀನಿಯಸ್‌ಗಳ ಮಿತಿ ಏನು ಗೊತ್ತಾ, ನೀವುಗಳು ನಿಮ್ಮ ಲೋಕದ ಹೊರಗೆ ಕಣ್ಣು ಹಾಯಿಸಿ ಕೂಡ ನೋಡೊಲ್ಲ. ನಿಮ್ಮ ಲೋಕ ಕೋಡಿಂಗ್, ಸಾಫ್ಟ್ ವೇರ್, ಪ್ರಾಡಕ್ಟ್, ಏಂಜಲ್, ವಿಸಿ ಫಂಡಿಂಗ್, ಸೈಲಿಂಗ್, ಎಕ್ಸ್ ಪಾನ್ಸನ್, ಅಕ್ವಿಸಿಷಿನ್, ಯೂನಿಕಾರ್ನ್, ಎಕ್ಸಿಟ್... ಇಷ್ಟೇ. ಹೆಚ್ಚೆಂದರೆ ರಿಟೈರ್ ಆಗೋ ಸಂದರ್ಭದಲ್ಲಿ ನಾಲ್ಕೈದು ಫ್ಲಾಟ್‌ ಗಳು, ಒಂದು ವಿಲ್ಲಾ, ಎರಡು-ಮೂರು ಕಾರುಗಳು, ಬ್ಯಾಂಕ್‌ನಲ್ಲಿ ಒಂದಿಷ್ಟು ಕೋಟಿ ಡೆಪಾಸಿಟ್, ಹತ್ತಿಪ್ಪತ್ತು ಸ್ಟಾರ್ಟ್ ಅಪ್‌ಗಳಲ್ಲಿ ಏಂಜಲ್ ಇನ್‌ವೆಸ್ಟ್ಮೆಂಟ್, ದೊಡ್ಡ-ದೊಡ್ಡ ಕಂಪೆನಿಗಳಲ್ಲಿ ಷೇರುಗಳು... ಅಷ್ಟೇ ಜೀವನ, ಕಮಾನ್, ಜಗತ್ತು ವಿಶಾಲವಾಗಿದೆ. ಬಹಳ ಸುಂದರವಿದೆ. ನಾವೆಣಿಸಿಕೊಂಡದ್ದಕ್ಕಿಂತ ಸೊಗಸಾಗಿದೆ. ಅದನ್ನ ನೋಡೋಕೆ, ಅನುಭವಿಸೋಕೆ ಹಣ, ಅಧಿಕಾರ, ಪೊಸಿಷನ್ ಯಾವುದೂ ಬೇಡ. ಕೇವಲ ಕಣ್ಣು ತೆರೆದು ಪ್ರಪಂಚವನ್ನ ನೋಡೋಕೆ, ಕಲಿಯೋಕೆ ಸಿದ್ಧರಿರಬೇಕು ಅಷ್ಟೇ. ಮುಕ್ತ ಮನಸ್ಸು ಬೇಕು’ ಎಂಬ ಮಾತುಗಳು ಈ ವಿಶಾಲ ಪ್ರಪಂಚದಲ್ಲಿ ಮನುಷ್ಯ ಒಂದಾಗಬೇಕೆಂದು ಕಾದಂಬರಿ ಹೇಳುತ್ತದೆ.

`ಇದೇ ಧರ್ಮ. ಧರ್ಮದ ಅನುಯಾಯಿಗಳು ಮ್ಯಾನ್ಮಾರ್‌ನಲ್ಲಿ ಮಾಡುತ್ತಿರುವುದೇನನ್ನು? ಈ ಭೂಮಿಯ ಮೇಲಿರುವ ಪ್ರತಿಯೊಂದು ಧರ್ಮ ಕೂಡ ಅಸ್ತಿತ್ವಕ್ಕೆ ಬಂದದ್ದು, ವಿಸ್ತಾರವಾಗಿದ್ದು, ವಿಸ್ತಾರವಾಗಲು ಹೊರಟಿರುವುದು ರಕ್ತ ಸಾಗರದ ಮೇಲೆ ತೇಲಿಯೇ!? ಮನುಷ್ಯತ್ವವನ್ನು ಸಮಾಧಿ ಮಾಡಿಯೇ!? ಯಾವುದೇ ಧರ್ಮ ಮನುಷ್ಯತ್ವದ ಸಾಕಾರಕ್ಕಾಗಿ ವಿಸ್ತಾರಗೊಂಡ ಉದಾಹರಣೆ ಎಲ್ಲಿಯೂ ಇಲ್ಲ. ಜಗದೆಲ್ಲೆಡೆ ಶಾಂತಿಯನ್ನು ಸ್ಥಾಪಿಸುವ ಅಂತಃಕರಣ ಯಾವುದೇ ಧರ್ಮಕ್ಕಿಲ್ಲ. ಯಾವುದೋ ಒಬ್ಬ ಸಾಮ್ರಾಟ, ಚಕ್ರವರ್ತಿ, ರಾಜಕಾರಣಿ... ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಸದಾ ಉಪಯೋಗಿಸಿದ್ದು ಧರ್ಮ ಎನ್ನುವ ಭೀಕರ ಅಸ್ತ್ರವನ್ನ. ಇತಿಹಾಸದಲ್ಲಿ ಆಗಿದ್ದೂ ಅದೇ. ವರ್ತಮಾನದಲ್ಲಿ ಆಗುತ್ತಿರುವುದು ಅದೇ. ಆಫ್ಘನಿಸ್ತಾನ, ಸಿರಿಯದಲ್ಲಿ ನೋಡಿದರೆ ಒಂದು ಧರ್ಮ. ಇಲ್ಲಿ ಶ್ರೀಲಂಕಾ-ಮ್ಯಾನ್ಮಾರ್‌ನಲ್ಲಿ ನೋಡಿದರೆ ಮತ್ತೊಂದು ಧರ್ಮ. ಈ ನಡುವೆ ವ್ಯಾಪಾರ ಮಾಡುತ್ತಿರುವ ಮಗದೊಂದು ಬೃಹತ್ ಧರ್ಮ! ಇದು ಆಯಾಯ ಧರ್ಮಗಳ ತಪ್ಪೇ?’ ಎಂದು ಸೋಫಿಯಾ ಕೇಳುವ ಪ್ರಶ್ನೆಗಳು ಮನುಕುಲಕ್ಕೆ ಕೇಳುವ ಪ್ರಶ್ನೆಗಳೇ ಆಗಿವೆ. ಧರ್ಮವನ್ನು ಮುಂದಿಟ್ಟುಕೊಂಡು ಮನುಷ್ಯನನ್ನು ಮೂರ್ಖನನ್ನಾಗಿಸುವ ಮನಸ್ಸುಗಳ ಬಗ್ಗೆ ಜಾಗೃತರಾಗಿರಬೇಕಾದ ಸಂದರ್ಭ ಬಂದಿದೆ ಎಂಬುದನ್ನು ಕಾದಂಬರಿ ಮಾರ್ಮಿಕವಾಗಿ ಹೇಳುತ್ತದೆ.

'ನೂರಾರು ವರ್ಷಗಳ ಹಿಂದೆ. ಘಾಂದ್ರುಕ್ ಗ್ರಾಮದ ಒಂಬತ್ತು ವರ್ಷದ ಬಾಲಕ ಔಬರ್ ಗರಾಬ್ ಗುರುಂಗ್ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುತ್ತಾನೆ. ಮೂರ್ನಾಲ್ಕು ದಿನಗಳ ಕಾಲ ಮನೆಯವರು, ಕುಟುಂಬದವರು, ಗ್ರಾಮಸ್ಥರು ಕಾಣೆಯಾದ ಔಬರ್‌ಗಾಗಿ ಕಾಡು-ಮೇಡು ಅಲೆದು ಹುಡುಕುತ್ತಾರೆ. ಎಲ್ಲಿಯೂ ಬಾಲಕ ಪತ್ತೆಯಾಗುವುದಿಲ್ಲ. ಅವನ ಮೇಲಿನ ಆಸೆಯನ್ನೇ ಅವರೆಲ್ಲ ಕಳೆದುಕೊಂಡಿರುತ್ತಾರೆ. ಒಂಬತ್ತನೇ ದಿನ ಬಾಲಕ ಇದ್ದಕ್ಕಿದ್ದಂತೆ ಮರಳಿ ಗ್ರಾಮದಲ್ಲಿ ಪತ್ತೆಯಾಗುತ್ತಾನೆ.ಆದರೆ ಮುಗ್ಧ ಬಾಲಕನ ರೂಪದಲಲ್ಲ. ಬದಲಾಗಿ ಒಂದು ಅದೃಶ್ಯ ಶಕ್ತಿಯ ರೂಪ ತಾಳಿ. ಹಾಗೆ ಮರಳಿ ಬಂದ ಬಾಲಕನ ರೂಪದ ಆ ಅದೃಶ್ಯ ಶಕ್ತಿ ಈ ಗ್ರಾಮದ ಪಶ್ಚಿಮ ಭಾಗದ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿ ಒಂದು ಸರೋವರವಿದೆ. ಆಸರೋವರವೇ ನನ್ನ ಮನೆ. ನಿಮ್ಮ ಗ್ರಾಮದಿಂದ ಬಂದ ಆ ಬಾಲಕನನ್ನು ಒಂಬತ್ತು ದಿನಗಳ ಕಾಲ ನನ್ನ ಮನೆಯಲ್ಲಿ ಇಟ್ಟುಕೊಂಡು ಅವನಿಗೆ ಜ್ಞಾನೋದಯವಾಗುವಂತೆ ಮಾಡಿ, ಹೊಸ ಶಕ್ತಿಯಾಗಿ ಮರಳಿ ಊರಿಗೆ ಕಳುಹಿಸುತ್ತಿದ್ದೇನೆ. ಇನ್ನು ಮುಂದೆ ಈ ಹೊಸ ಶಕ್ತಿ ಫಾಂದ್ರುಕ್ ಗ್ರಾಮದಲ್ಲಿರುವ ಪ್ರತಿಯೊಬ್ಬರಿಗೂ ಉಪದೇಶ ಮಾಡುತ್ತದೆ. ಅವನ ಉಪದೇಶ ಕೇಳುತ್ತಾ ನೀವು ನನ್ನನ್ನ ಸದಾ ಆರಾಧಿಸುತ್ತಿದ್ದರೆ ಎಲ್ಲ ಕಾಲಘಟ್ಟದಲ್ಲೂ ಘಾಂದ್ರುಕ್ ಗ್ರಾಮ, ಗ್ರಾಮಸ್ಥರು ಸುಃಖ ಸಮೃದ್ಧಿಯಿಂದ ಜೀವನ ಸಾಗಿಸುವಂತಾಗುತ್ತದೆ ಎಂಬ ಭರವಸೆ ನೀಡುತ್ತದೆ.’

ಘಾಂದ್ರುಕ್ ಗ್ರಾಮ ದೈವಶಕ್ತಿಯನ್ನು ಹೊಂದಿದ್ದು. ಪ್ರತಿಯೊಂದು ಜೀವಿಯೂ ಶಾಂತಿ, ನೆಮ್ಮದಿಯಿಂದ ಬದುಕುವ ಸಂದೇಶವನ್ನು ಸಾರುವಂತದ್ದು. ಪ್ರತಿಯಬ್ಬರ ಮನಸ್ಸುಗಳು ಈ ಸಂದೇಶವನ್ನು ಹೊತ್ತುಕೊಂಡು ಮುನ್ನಡೆದರೆ ಬದುಕು ಬೇರೆಯದೆ ದಾರಿಯನ್ನು ಹಿಡಿಯಲು ಸಾಧ್ಯ ಎಂಬುದು ಕಾದಂಬರಿಯ ಮುಖ್ಯ ಧ್ವನಿಯಾಗಿದೆ. ತಮ್ಮ ಕೌಟಂಬಿಕ ಸಂಬಂಧಗಳ ಅನೋನ್ಯತೆಯಲ್ಲಿ ಈ ಸಾಧ್ಯತೆಯನ್ನು ಕಂಡುಕೊಳ್ಳುವ ಪ್ರಯತ್ನ ಸಿದ್ಧಾರ್ಥ ಮಾಡುತ್ತಾನೆ.

ಬದುಕನ್ನು ಶೋಧಿಸುವ ಚಿಂತನೆಯ ಕಥನವಾಗಿಯೂ ಕಾದಂಬರಿ ಮುಖ್ಯವಾಗುತ್ತದೆ. ಈ ರೀತಿಯ ಚಿಂತನೆ ಮಾಡುವ ಅನೇಕ ಕಾದಂಬರಿಗಳು ಬಂದಿವೆ. ಆದರೆ ಚಾರಣದ ತಂತ್ರದದೊಂದಿಗೆ ದೈವಿಕ, ಪ್ರಾಕೃತಿಕ ಅನುಭೂತಿಯೊಂದಿಗೆ ಜೀವನವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದು ಈ ಕಾದಂಬರಿ ಮೊದಲು. ಮುಖ್ಯವಾಗಿ ಜಾಗತೀಕರಣೋತ್ತರ ಬದುಕಿನ ಪಲ್ಲಟಗಳಿಗೆ ಒಳಗಾಗುತ್ತಿರುವ ಹೆಣ್ತನ, ಪುರುಷತನಗಳ ಸ್ವಾಯತ್ತತೆಯ ಬಿಕ್ಕಟ್ಟುಗಳನ್ನು ಕಾದಂಬರಿ ಅನ್ವೇಷಿಸುತ್ತದೆ. ಆದ್ದರಿಂದ ಈ ಕಾದಂಬರಿಗೆ ವಿಶೇಷ ಸ್ಥಾನವಿದೆ.

- ರಾಜಶೇಖರ ಹಳೆಮನೆ, ಕನ್ನಡ ವಿಭಾಗ ಶ್ರೀ ಧ. ಮಂ. ಕಾಲೇಜು(ಸ್ವಾಯತ್ತ), ಉಜಿರೆ-574240

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...