ಹಸ್ತಿನಾವತಿ ಓದಿದ ನಂತರ ಅನೇಕ ಬಯಕೆಗಳು ನನ್ನನು ಕಾಡುತ್ತಿದೆ: ರಂಜನಿ ರಾಘವನ್


"ಯಾವುದೇ ಸಮಸ್ಯೆಗೆ ಸೋಶಿಯಲ್ ಮಿಡಿಯಾ ನಮಗೆ ತಕ್ಷಣ ಪ್ರತಿಕ್ರಿಯೆ ಮಾಡಲು ಜಾಗಮಾಡಿಕೊಡುತ್ತದೆ, ಆದರೆ ಅದೇ ಸತ್ಯವಲ್ಲ, ಸಮಂಜಸವೂ ಅಲ್ಲ. ನಿಧಾನವಾಗಿ ಕೂತು ಯೋಚಿಸುವ ಮನಸ್ಥಿತಿ ಮತ್ತು ಜ್ಞಾನವನ್ನ ನಾವೇ ಬೆಳೆಸಿಕೊಳ್ಳಬೇಕು ಅನ್ನೋದನ್ನ ನಾನು ಪೂರ್ತಿಯಾಗಿ ಒಪ್ಪುತ್ತೇನೆ" ಎನ್ನುತ್ತಾರೆ ನಟಿ, ಲೇಖಕಿ ರಂಜನಿ ರಾಘವನ್. ಅವರು ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ‘ಹಸ್ತಿನಾವತಿ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ದೆಹಲಿಯ ಜಿಪ್ಸಿ ಕೆಫ಼ೆಗೆ ಹೋಗಬೇಕೆನಿಸುತ್ತಿದೆ, ಅಲ್ಲಿರೋ ಪೇಂಟಿಂಗ್ ಗಳನ್ನು ನೋಡಬೇಕೆನಿಸುತ್ತಿದೆ, ಗ್ರೀಕ್ ಸ್ವಾಂಡ್ವಿಚ್ ಮತ್ತು ಗಾರ್ಲಿಕ್ ಬ್ರೆಡ್ ಅಂತೂ ಬೇಕೇ ಬೇಕು. ಸದಾಶಿವ ದೇಸಾಯಿಯವರ ಕಾಡಿನ ಮನೆ ಹೇಗಿರಬಹುದೆಂದು ಯಾವುದಾದರೂ ಇನ್ಸ್ಟಾಗ್ರಾಮ್ ರೀಲಿನಲ್ಲಿ ಸಿಗಬಹುದಾ? ಭಗವತಿಯ ಆರಾಧಕ ವ್ಯಾಸರ ವಿಳಾಸ ಯಾರಿಗಾದರೂ ಗೊತ್ತಿದ್ದರೆ ಭೇಟಿಯಾಗಬೇಕು, ಇಂತಹ ಎಷ್ಟೋ ಬಯಕೆಗಳು ಹಸ್ತಿನಾವತಿ ಓದಿದ ನನ್ನನ್ನು ಕಾಡುತ್ತಿವೆ.

ಶ್ರೀಕೃಷ್ಣನನ್ನು ಮುದ್ದುಕಂದ, ಬೆಣ್ಣೆ ಚೋರ, ಗೋಪಿಲೋಲ, ಗೀತಾಚಾರ್ಯ ಅಂತ ನೋಡಿದ್ದವಳಿಗೆ ಅದೇ ಕೃಷ್ಣ ಒಬ್ಬ ಪೊಲಿಟಿಕಲ್ ಸ್ಟ್ರಟೆಜಿಸ್ಟ್ ಆಗಿ ಕಂಡಿದ್ದು ಸಹದೇವ್ ಉಪಾಧ್ಯನ ಪಾತ್ರದಿಂದ. ಓದುತ್ತಾ ಹೋದಂತೆ ಸಂಸ, ದೇವಯಾನಿಯರ ವ್ಯಕ್ತಿತ್ವದ ಘನತೆಗೆ ಮನಸೋತಿತು. ಎಷ್ಟೋ ಸಲ ಎತ್ತರದ ಸ್ಥಾನಗಳಿಗಿಂತ ಅಲ್ಲಿರೋ ವ್ಯಕ್ತಿಗಳಿಂದಲೇ ಆ ಸ್ಥಾನಕ್ಕೆ ಘನತೆ ಹೆಚ್ಚುತ್ತದೆ. ಇಲ್ಲಿ ಸಂಸ ಸಹದೇವರಂಥವರು ತಮ್ಮ ವೃತ್ತಿಪರತೆಯ ಬಾರ್ ಅನ್ನು ಅದೆಷ್ಟು ಮೇಲಿರಿಸಿರುತ್ತಾರೆ ಎಂದರೆ ಆ ಜವಾಬ್ಬಾರಿಯ ಚಕ್ರದಿಂದ ತಮಗೆ ಬೇಕೆಂದರೂ ಹೊರಬರಲು ಸಾಧ್ಯವಿರುವುದಿಲ್ಲ ಅನ್ನೋ ಕಗ್ಗಂಟು ಸೋಜಿಗ ಉಂಟುಮಾಡಿತು.

ಮಹಾತ್ವಾಂಕ್ಷಿಯೊಬ್ಬ ತನ್ನ ಕಾರ್ಯಯೋಜನೆಯೆಲ್ಲಾ ತಲೆಗೆಳಗಾಗುತ್ತಿದೆ ಅನ್ನೋ ಹತಾಶೆಯಲ್ಲಿ ನಕ್ಷತ್ರ ನೋಡುತ್ತಾ - ಈ ಅಸಂಖ್ಯ ಗ್ರ‍ಹಮಂಡಲಗಳ, ನಕ್ಷತ್ರ ಲೋಕಗಳ, ಲಕ್ಷಲಕ್ಷ ಬ್ರಹ್ಮಾಂಡಗಳ ವಿಶ್ವದಲ್ಲಿ ತನ್ನ ಪ್ರತಿಭೆ ಕಾರ್ಯಕ್ಷೇತ್ರ ಸಾರ್ಥಕತೆಗೆಲ್ಲಾ ಬೆಲೆಯೆಲ್ಲಿ? ಆ ಯೋಚನೆಯೇ ತಮಾಷೆಯಲ್ಲವೇ ಎಂದುಕೊಂಡು ನಿಟ್ಟಿಸಿರು ಬಿಟ್ಟು ನಿರುಮ್ಮಳವಾಗಿ ಮಲಗಿಕೊಂಡಾಗ, ಓದುಗನಿಗೂ ಅವನಂತೆಯೇ ಅನ್ನಿಸೋದು ಖಂಡಿತ. ಪುಟ ತಿರುವಿ ಓದುತ್ತಾ ಹೋದಂತೆ ಇಂತಹ ಅದೆಷ್ಟೋ ರಿಯಲೈಸೇಶನ್ ಗಳು ಆಗುತ್ತವೆ. ಕತೆಯಲ್ಲಿರೋ ರಾಜಕೀಯ ತಂತ್ರ ಪ್ರತಿತಂತ್ರಗಳು, ಜನಾಭಿಪ್ರಾಯವನ್ನು ಕಂಟ್ರೋಲ್ ಮಾಡಲು ಹಾಕುವ ಯೋಜನೆಗಳ ಮೇಲೆ ಬೆಳಕು ಬೀರುವ ಸಂದರ್ಭಗಳನ್ನು ಯುವಜನತೆ ಓದಲೇ ಬೇಕು. ಯಾವುದೇ ಸಮಸ್ಯೆಗೆ ಸೋಶಿಯಲ್ ಮಿಡಿಯಾ ನಮಗೆ ತಕ್ಷಣ ಪ್ರತಿಕ್ರಿಯೆ ಮಾಡಲು ಜಾಗಮಾಡಿಕೊಡುತ್ತದೆ, ಆದರೆ ಅದೇ ಸತ್ಯವಲ್ಲ, ಸಮಂಜಸವೂ ಅಲ್ಲ. ನಿಧಾನವಾಗಿ ಕೂತು ಯೋಚಿಸುವ ಮನಸ್ಥಿತಿ ಮತ್ತು ಜ್ಞಾನವನ್ನ ನಾವೇ ಬೆಳೆಸಿಕೊಳ್ಳಬೇಕು ಅನ್ನೋದನ್ನ ನಾನು ಪೂರ್ತಿಯಾಗಿ ಒಪ್ಪುತ್ತೇನೆ.

ಮಹಾಭಾರತದ ಘಟನೆಗಳಿಂದ ಹಿಡಿದು ಚಾಟ್ ಜಿಪಿಟಿ ತನಕ ವಿಷಯಗಳನ್ನು ಒಂದೇ ಕತೆಯಲ್ಲಿ ಹೆಣೆದುಕೊಂಡು ಬಂದಿರೋದು ಜೋಗಿ ಸರ್ ಬರವಣಿಗೆಯಲ್ಲಿನ ಸ್ಪೆಶಾಲಿಟಿ. ಪುರಾಣ, ರಾಜಕೀಯ ಇದ್ಯಾವುದರ ಬಗ್ಗೆ ಆಸಕ್ತಿ, ಮಾಹಿತಿ ಇಲ್ಲದವರನ್ನೂ ಸಹ ಸುಲಭವಾಗಿ ಹಿಡಿದಿಟ್ಟುಕೊಳ್ಳಬಹುದಾದ ಪುಸ್ತಕವಿದು. ನಾನೂರು ಪುಟಗಳನ್ನು ಸರಾಗವಾಗಿ ಓದಿಸಿಕೊಂಡು ಹೋಗೋ ಹಸ್ತಿನಾವತಿ ಕಾದಂಬರಿಯ ಮೂಲಕ ನಮಗೆ ಅದ್ಭುತವಾದ ಅನುಭವ ಮತ್ತು ನವೀನ ದೃಷ್ಟಿಕೋನದ ಪರಿಚಯಮಾಡಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಜೋಗಿ ಸರ್.

- ರಂಜನಿ ರಾಘವನ್

ರಂಜನಿ ರಾಘವನ್ ಅವರ ಲೇಖಕಿ ಪರಿಚಯಕ್ಕಾಗಿ


MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...