‘ಹೆಣವಾಗುತ್ತಿರುವ ಗಣರಾಜ್ಯ’ ಪರಕಾಲ ಪ್ರಭಾಕರ್ ಅವರ ವಿಸ್ತೃತ ಜ್ಞಾನಕ್ಕೆ ಕನ್ನಡಿ ಹಿಡಿಯುತ್ತದೆ


ಪ್ರಭಾಕರ್ ಅವರ ರಾಜಕೀಯ ವಿಮರ್ಶೆ, ಟೀಕೆ ಟಿಪ್ಪಣಿಗಳಿಗೆ ಸತ್ಯ ತಥ್ಯಗಳ ಸದೃಢವಾದ ನೆಲೆಗಟ್ಟಿರುತ್ತದೆ. ಆದ್ದರಿಂದಲೇ ಅವರ ಅಭಿಪ್ರಾಯಗಳು ಅಜೇಯ-ವಾಗಿರುತ್ತವೆ. ಭಾರತವು ಮುಂದಿನ ಮಹಾಚುನಾವಣೆಗಳ ಕಡೆಗೆ ಭರದಿಂದ ಸಾಗುತ್ತಿರುವಂತೆಯೇ ಹರಿದು ಬರುತ್ತಿರುವ ಅನೇಕ ಸತ್ಯ ಸಂಗತಿಗಳು, ದರಿದ್ರ ದಾಖಲೆಗಳು ಮುಖಕ್ಕೆ ರಾಚುತ್ತಿವೆ. ಅಭಿವೃದ್ಧಿ ಹಾಗೂ ಉತ್ತಮ ಆಡಳಿತ-ಎರಡೂ ದೃಷ್ಟಿಯಿಂದಲೂ ಅದರ ವಿಫಲತೆ ಎದ್ದುಕಾಣುತ್ತಿವೆ ಎನ್ನುತ್ತಾರೆ ರಾಜಕೀಯ ವ್ಯಾಖ್ಯಾನಕಾರ ಸಂಜಯ್ ಬಾರು ಅವರು, ರಾಹು ಅವರು ಅನುವಾದಿಸಿರುವ ‘ಹೆಣವಾಗುತ್ತಿರುವ ಗಣರಾಜ್ಯ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಪರಕಾಲ ಪ್ರಭಾಕರ್ ಅವರು ಪುನರುಜ್ಜೀವಕ ಪುರುಷರು: ಒಬ್ಬ ವಿಖ್ಯಾತ ಅರ್ಥಶಾಸ್ತ್ರಜ್ಞರು; ಸಾರ್ವಜನಿಕ ಧೋರಣೆಯ ವೃತ್ತಿ ತಜ್ಞರು; ಕಾರ್ಪೊರೇಟ್ ಸಲಹೆಗಾರರು; ಸಾರ್ವಜನಿಕ ಅಭಿಪ್ರಾಯದ ಜನಮತ ಗಣನೆಯ ಪರಿಣಿತರು; ಕ್ರಿಯಾಶೀಲ ರಾಜಕೀಯ ಕಾರ್ಯಕರ್ತರು; ಸೂಕ್ಷ್ಮದೃಷ್ಟಿಯ ವಿಶ್ಲೇಷಕರು; ಗಣ್ಯ ಲೇಖಕರು; ತೆಲುಗು ಸಾಹಿತಿಗಳು; ಇದೆಲ್ಲಕ್ಕೂ ಮಿಗಿಲಾಗಿ, ಒಬ್ಬ ತರ್ಕಬದ್ಧ ಚಿಂತನೆಯ ಉದ್ದಾಮ ವಿದ್ವಾಂಸರು. ಪಠಣ ಕುತೂಹಲಂ ಎಂಬ ಶೀರ್ಷಿಕೆಯಡಿಯಲ್ಲಿ ಅವರು ಅಂದಾಜು ಎಪ್ಪತ್ತರಷ್ಟು ಲೇಖನಗಳನ್ನು ಪ್ರಕಟಿಸಿದ್ದಾರೆ. ಆ ಎಲ್ಲ ಬರಹಗಳ ಉದ್ದೇಶ ಜಗತ್ತಿನ ಉದ್ದಗಲಕ್ಕೂ ಇಂದು ಅಲ್ಲಲ್ಲಿ ನೆಲೆನಿಂತಿರುವ ಇಂದಿನ ತೆಲುಗರಿಗೆ ಒಬ್ಬ ಗುರುಜಾಡ ಮತ್ತು ಒಬ್ಬ ಜೋಶುವಾ ಅವರ ಗದ್ಯವನ್ನು ಪರಿಚಯಿಸುವುದು; ಒಬ್ಬ ಶ್ರೀ ಶ್ರೀ ಮತ್ತು ಒಬ್ಬ ದಾಸರಥಿಯವರ ಕಾವ್ಯವನ್ನು ತಲುಪಿಸುವುದು. ಈ ಎಲ್ಲ ಲೇಖನಗಳು ತೆಲುಗು ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಪರಿಸರದ ಬಗ್ಗೆ ಪ್ರಭಾಕರ್ ಅವರಿಗೆ ಇರುವ ಗಾಢವಾದ ಗ್ರಹಿಕೆ ಹಾಗೂ ಆಳವಾದ ತಿಳುವಳಿಕೆಗೆ ಜ್ವಲಂತ ಪುರಾವೆಗಳಾಗಿವೆ. ಮಿಡ್‌ವೀಕ್ ಮ್ಯಾಟರ‍್ಸ್ ಎಂಬುವುದು ಪ್ರಭಾಕರ್ ಅವರ ರಾಜಕೀಯ ವೇದಿಕೆಯಾಗಿದೆ. ಈ ವೇದಿಕೆಯಿಂದ ಹೊರಹೊಮ್ಮಿದ ಅನೇಕ ಮಾತುಕತೆಗಳು, ಲೇಖನಗಳು ನಮ್ಮ ಸಮಕಾಲೀನ ರಾಷ್ಟ್ರೀಯ ರಾಜಕೀಯ ಅರ್ಥವ್ಯವಸ್ಥೆಯ ಕುರಿತು ಅವರಿಗಿರುವ ತಲಸ್ಪರ್ಶಿ ತಿಳುವಳಿಕೆಗೆ, ವಿಸ್ತೃತ ಜ್ಞಾನಕ್ಕೆ ಕನ್ನಡಿ ಹಿಡಿಯುತ್ತದೆ. ಅಷ್ಟೇ ಅಲ್ಲ, ಭಾರತದ ಪ್ರಜಾಸತ್ತೆ, ಅಭಿವೃದ್ಧಿ ಮತ್ತು ಸಮಸ್ತ ನಾಗರಿಕರ ಶ್ರೇಯೋಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಕಟ ಬದ್ಧತೆಯನ್ನು ಎತ್ತಿ ತೋರಿಸುತ್ತವೆ. ಒಂದು ಅರ್ಥದಲ್ಲಿ, ಅವರ ಉದಾತ್ತ ವ್ಯಕ್ತಿತ್ವಕ್ಕೆ ಭಾಷ್ಯ ಬರೆಯುತ್ತವೆ.

ಅನೇಕ ಆಯಾಮಗಳ ವ್ಯಕ್ತಿತ್ವದ ಪ್ರಭಾಕರ್ ಅವರು ನನ್ನ ಸ್ನೇಹಿತರೂ ಆಗಿದ್ದಾರೆ. ನಮ್ಮ ಗೆಳೆತನ ಒಂದು ದಶಕಕ್ಕಿಂತಲೂ ತುಸು ಹೆಚ್ಚಿನ ಕಾಲದ್ದು ಮಾತ್ರ. ನಮ್ಮ ಸ್ನೇಹ ಬಹಳ ದೀರ್ಘಕಾಲದ್ದಾಗಿರದೇ ಇದ್ದುದ್ದರಿಂದ ನನಗೆ ಆ ಬಗ್ಗೆ ವ್ಯಥೆಯಿದೆ. ಇಂಥ ಕ್ರಿಯಾಶೀಲ ಪ್ರಕಾಂಡ ಪಂಡಿತರು ಬಹುಹಿಂದೆಯೇ ನನಗೆ ಪರಿಚಿತರಾಗಿದ್ದರೆ! ಆ ಪರಿಚಯ ಬಹಳ ಹಿಂದೆಯೇ ಎಂದೋ ಒಂದು ಸದ್ಗಳಿಗೆಯಲ್ಲಿ ಸ್ನೇಹಕ್ಕೆ ತಿರುಗಿದ್ದರೆ...! ಅಷ್ಟೇ ಅಲ್ಲ, ನಾವು ಓದುವಾಗಿನ ಅವಧಿಯಲ್ಲಿಯೂ ಒಂದು ದಶಕದಷ್ಟು ಕಾಲದ ವ್ಯತ್ಯಾಸವಿತ್ತು. ನಾವಿಬ್ಬರೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೇ. ನಾನು ಅಲ್ಲಿ ಓದಿದ್ದು 1970ರ ದಶಕದ ಆರಂಭದಲ್ಲಿ. ಆದರೆ, ಅವರು ಅಲ್ಲಿ ಅಧ್ಯಯನ ಕೈಗೊಂಡದ್ದು ಎಂಭತ್ತರ ದಶಕದಲ್ಲಿ. ಕೊನೆಗೂ ನಾವಿಬ್ಬರೂ ಪರಸ್ಪರ ಭೇಟಿಯಾದಾಗ, ನಮ್ಮ ನಡುವೆ ನೇಹ, ಸ್ನೇಹದ ನಂಟು ಚಿಗುರಲು ಬಹಳ ಕಾಲ ಬೇಕಾಗಲಿಲ್ಲ. ಆಶ್ಚರ್ಯವೆಂದರೆ, ಮರುಗಳಿಗೆಯೇ ನಾವು ಮಿತ್ರರಾಗಿಬಿಟ್ಟಿದ್ದೆವು; ಒಡನೆಯೇ ಸಹಪಯಣಿಗರಾಗಿ ಪರಿಣಮಿಸಿದ್ದೆವು. ಇನ್ನೂ ಮುಂದುವರೆದು ಹೇಳುವುದಾದರೆ, ಎಷ್ಟೋ ಸಲ ಕೈತಪ್ಪಿ ಕಳೆದುಹೋದ ಮಹಾಕಾರಣಗಳ ಪ್ರತಿಪಾದಕರಾಗಿದ್ದೆವು. ಇದು ಪ್ರಭಾಕರ್ ಮತ್ತು ನನ್ನ ನಡುವಿನ ಸಂಬಂಧದ ಸಂಕ್ಷಿಪ್ತವಾದರೂ ಅತ್ಯುತ್ತಮವಾದ ವಿವರಣೆಯೆಂಬುದು ನನ್ನ ನಂಬಿಗೆ-ಹೌದು ನಾವಿಬ್ಬರೂ ಕಳೆದುಹೋಗಿರುವ ಮಹಾಮೌಲ್ಯ, ಮಹಾಕಾರಣಗಳ ಪ್ರತಿಪಾದಕರು, ಪ್ರಚುರಕರು. ಒಣಗಿ ಅಂಕುಡೊಂಕಾಗಿ ಸೆಟೆದು, ಅಷ್ಟಾವಕ್ರವಾಗಿರುವ ಕಟ್ಟಿಗೆಯನ್ನು ಬಳಸಿ, ನೇರವಾದ, ನೆಟ್ಟಗಿನ ಯಾವ ಸರಕನ್ನೂ ನಿರ್ಮಿಸಲಾಗದು ಎಂಬುವುದು ಪ್ರಭಾಕರ್ ಅವರು ಸದಾ ಹೇಳುತ್ತ ಬಂದಿರುವ ಮಾತು. ಅದು ಅವರ ಉವಾಚ. ಆದರೂ ಆ ದಾರಿಯಲ್ಲಿ ನಾವು ಛಲಬಿಡದೆ ಪ್ರಯತ್ನಿಸುತ್ತಲೇ ಇದ್ದೇವೆ. ಆ ಒಂದು ಆಶಾಭಿಲಾಷೆಯನ್ನು ಮನದಲ್ಲಿಟ್ಟುಕೊಂಡೇ ಬರೆಯಲಾಗಿರುವ ಲೇಖನಗಳ ಸಂಕಲನವೇ ಈ ಗ್ರಂಥ. ಅಂಕುಡೊಂಕಾದ ಕಟ್ಟಿಗೆಯನ್ನು ಸೇರ್ಪಡಿಸುವ ಹಂಬಲ ಪ್ರಭಾಕರ್ ಅವರದು.

ಈ ಗ್ರಂಥದಲ್ಲಿ ಪ್ರಭಾಕರ್ ಅವರು, ನನ್ನದು ನಿರ್ಭೀತ ವಿಮರ್ಶಾತ್ಮಕ ನಿಲುವು; ಧೃತಿ ಧಾರಣದ ಧೀರ ಧ್ವನಿ ಎಂದಿದ್ದಾರೆ : ಯಾವುದೇ ಪರಿತಾಪ, ಪಶ್ಚಾತ್ತಾಪವಿಲ್ಲದ, ಭಿನ್ನಮತದ ದನಿ... ನಾನು ಹೆಗಲಿಗೇರಿಸಿಕೊಂಡಿರುವ ಕಾರ್ಯಭಾರ ಸತ್ವತಃ ಸರಳವಾದುದ್ದು; ಮಿತವಾದ ಉದ್ದೇಶದ್ದು. ಆದರೆ, ಸ್ಪಷ್ಟವಾದ ಗುರಿಯುಳ್ಳದ್ದು; ಏಕೋದೃಢ ದೃಷ್ಟಿಯ ಮೊನಚುಳ್ಳದ್ದು. ನಮ್ಮ ಸರ್ಕಾರ, ನಮ್ಮ ಸಾರ್ವಜನಿಕ ಸಂಸ್ಥೆಗಳು ಮತ್ತು ನಮ್ಮ ನಾಯಕರು ನಮ್ಮ ಗಣರಾಜ್ಯದ ಆದರ್ಶ ಮಾರ್ಗದಿಂದ ದೂರ ಸರಿದಾಗ, ಅವರು ಘೋಷಿಸಿದ ಗೊತ್ತುಗುರಿಗಳು, ಜನತೆಗೆ ನೀಡಿದ ಆಶ್ವಾಸನೆಗಳು-ಮುಂತಾದವುಗಳಿಂದ ವಿಮುಖರಾಗಿ, ಮತಭ್ರಷ್ಟರಾಗಿ ಹೆಜ್ಜೆ ಹಾಕತೊಡಗಿದಾಗ ಅದನ್ನು ಎತ್ತಿ ತೋರಿಸುವುದು; ಅಧಿಕಾರದಲ್ಲಿರುವವರ ಸಮ್ಮುಖದಲ್ಲಿ ನಿರ್ಭಯದಿಂದ ಸತ್ಯವನ್ನು ಹೇಳುವ ಸಹಜ ಸರಳ ಪ್ರಯತ್ನ-ಎಲ್ಲ ಕಾಲದಲ್ಲೂ ರುಜು ಮಾರ್ಗದೆಡೆಗೆ ಬೆರಳು ಮಾಡಿ ತೋರಿಸುವುದು.

ಅಧಿಕಾರದಲ್ಲಿರುವವರ ಹತ್ತಿರದಲ್ಲಿರುವವರೂ ಕೂಡ ಸತ್ಯ ಹೇಳಲು ಭಯ ಪಡುತ್ತಿದ್ದಾರೆ. ಇದು ನಮ್ಮ ಕಾಲದ ಬಗೆಗಿನ ವ್ಯಾಖ್ಯಾನ. ನಿರ್ಭೀತರಾಗಿ ನಡೆದುಕೊಳ್ಳಬೇಕಾದವರೂ ಕೂಡ ಯಾವುದೋ ಒಂದು ಆಂತರಿಕ ಭೀತಿಯಿಂದ ಥರಗುಡುತ್ತಿದ್ದಾರೆ. ಸರ್ಕಾರದ ಎಲ್ಲ ಮಟ್ಟಗಳಲ್ಲೂ ಚುನಾಯಿತ ರಾಜಕಾರಣಿಗಳು ಘನ ಘಮಂಡಿನಿಂದ ಸರ್ವಾಧಿಕಾರಿಗಳಾಗಿ ಬೀಗುತ್ತಿದ್ದಾರೆ. ಅಧಿಕಾರದ ಸ್ಥಾನಗಳಲ್ಲಿರುವ ಪುರುಷರು ಹಾಗೂ ಮಹಿಳೆಯರಿಗೆ ಟೀಕೆ ಟಿಪ್ಪಣಿಗಳೆಂದರೆ ಎಳ್ಳಷ್ಟೂ ಆಗಿಬರುತ್ತಿಲ್ಲ. ವಿಮರ್ಶೆ ಪರಾಮರ್ಶನಗಳ ಬಗ್ಗೆ ದಿನಂಪ್ರತಿ ಅಸಹನೆ ಉಲ್ಬಣಿಸುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆ ಮರೆಯಾಗುತ್ತಿದೆ. ಇಂಥ ದುರ್ಭರ ಸನ್ನಿವೇಶದಲ್ಲಿಯೂ ಪ್ರಭಾಕರ್ ಅವರು ಅಧಿಕಾರದಲ್ಲಿರುವವರ ಮುಖದ ಮುಂದೆಯೇ ಸತ್ಯ ನುಡಿಯುವ ಧೈರ್ಯ ಧಾಡ್ಸಿತನ ತೋರುತ್ತಿದ್ದಾರೆ. ಇದು ನಮ್ಮ ಸಂವಿಧಾನದಲ್ಲಿ ಸ್ಥಾಯಿಗೊಂಡಿರುವ ಮೌಲ್ಯಗಳ ರಕ್ಷಣೆ ಸಂರಕ್ಷಣೆಗಳಿಗೆ ಅವರು ತೋರುತ್ತಿರುವ ಬದ್ಧತೆಗೆ ಸಾಕ್ಷಿಯಾಗಿದೆ.

ಪ್ರಭಾಕರ್ ಅವರು ಕಳೆದ ಒಂದು ದಶಕದ ಅವಧಿಯಲ್ಲಿ ಬಹುಸರಳವಾಗಿ ರಾಷ್ಟ್ರೀಯ ರಾಜಕಾರಣದ ಸ್ತರಕ್ಕೆ ಏರಬಹುದಾಗಿತ್ತು. ಆದರೂ ಅವರು ಹೈದರಾಬಾದಿನಲ್ಲಿಯೇ ನೆಲೆ ನಿಲ್ಲುವ ನಿರ್ಧಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅದರಿಂದಾಗಿ ಇಡೀ ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ವಾಸ್ತವದ ಅವರ ಪ್ರಜ್ಞೆಯ ಮಟ್ಟ ಮತ್ತು ಮೊತ್ತದಲ್ಲೇನೂ ಕಡಿಮೆಯಾಗಿಲ್ಲ. ಅದಕ್ಕೆ ಬದಲಾಗಿ ಅವರ ಬರಹಗಳಲ್ಲಿ ಕಂಡುಬರುವ ದೃಷ್ಟಿ-ಧೋರಣೆಗಳು ಸ್ಥಳೀಯವಾಗಿರುವುದರ ಜೊತೆಗೆ ರಾಷ್ಟ್ರೀಯ ಮಟ್ಟದ್ದು ಆಗಿರುವುದನ್ನು ಕಾಣುತ್ತೇವೆ. ಅಂದರೆ, ತಮ್ಮ ಪರಿಸರದಲ್ಲಿ ಗಟ್ಟಿಯಾಗಿ ನೆಲೆನಿಂತಿರುವ ಅವರ ದೃಷ್ಟಿಯ ವ್ಯಾಪ್ತಿ ಇಡೀ ರಾಷ್ಟ್ರಕ್ಕೆ ಚಾಚಿಕೊಂಡಿರುವುದನ್ನು ನೋಡಬಹುದು.

ತೆಲುಗರ ನಾಡಿನ ಸಂಸ್ಕೃತಿ ಹಾಗೂ ರಾಜಕಾರಣದಲ್ಲಿ ನಖಶಿಖಾಂತ ಮುಳುಗಿ ಎದ್ದಿರುವ ಪ್ರಭಾಕರ್ ಅವರು ರಾಷ್ಟ್ರೀಯ ರಾಜಕಾರಣ ಹಾಗೂ ಆರ್ಥಿಕ ವ್ಯವಸ್ಥೆಯ ನಾಡಿಮಿಡಿತವನ್ನು ಕೂಡ ಚೆನ್ನಾಗಿ ಬಲ್ಲರು. ಹಾಗೆಂದೇ ಅವರು ಅವುಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಅವರ ವ್ಯಕ್ತಿತ್ವದ ಈ ಗುಣ ಅವರ ಬೌದ್ಧಿಕತೆಯ ಈ ಶಕ್ತಿ ಅಂದರೆ, ತಮ್ಮ ಜನ್ಮಭೂಮಿಯಲ್ಲಿ ಆಳವಾಗಿ ಬೇರುಬಿಟ್ಟು ನಿಂತರೂ ರಾಷ್ಟ್ರೀಯ ರಾಜಕಾರಣ ಹಾಗೂ ಅಭಿವೃದ್ಧಿ ಅಂತೆಯೇ ಜಾಗತಿಕ ಮಟ್ಟದ ಆಗು ಹೋಗುಗಳು-ಈ ಎಲ್ಲ ಕ್ಷೇತ್ರಗಳೊಳಗೂ ತಮ್ಮ ಕೊಂಬೆ-ರೆಂಬೆಗಳನ್ನು ಚಾಚಿದ್ದಾರೆ; ಅವುಗಳನ್ನು ಅತ್ಯಂತ ಮುತುವರ್ಜಿಯಿಂದ ಪಾಲಿಸಿ, ಪೋಷಿಸಿಕೊಂಡು ಬರುತ್ತಿದ್ದಾರೆ. ಪ್ರಭಾಕರ್ ಅವರ ಈ ಶಕ್ತಿ ಸಾಮರ್ಥ್ಯಗಳೇ ಅವರನ್ನು ಒಬ್ಬ ಪುನರುಜ್ಜೀವಕ ವ್ಯಕ್ತಿಯನ್ನಾಗಿ ಮಾರ್ಪಡಿಸಿವೆ.

ಪ್ರಭಾಕರ್ ಅವರ ಅನೇಕ ಲೇಖನಗಳಲ್ಲಿ ಧಾರಾಕಾರವಾಗಿ ಹರಿದು ಬರುವ ಒಂದು ಮಹತ್ವದ ಸಂಗತಿಯೆಂದರೆ, ಅಗಣಿತ ರಾಜಕೀಯ ನಾಯಕರ ನಡೆ ಮತ್ತು ನುಡಿಯ ನಡುವಿನ ಕಂದರ ಅವರ ಆಶ್ವಾಸನೆ ಹಾಗೂ ಆಚರಣೆಯ ನಡುವಿನ ಘೋರ ಬಿರುಕು. ಈ ಮಾತಿಗೆ ಅತ್ಯಂತ ಪ್ರಮುಖವಾದ ಉದಾಹರಣೆಯೆಂದರೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಅವರ ವಚನಗಳಿಗೆ ಎರಡು ಆಯಾಮಗಳಿದ್ದುದ್ದನ್ನು ಕಾಣುತ್ತೇವೆ : ಮೊದಲನೆಯದಾಗಿ, ಭಾರತ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳ ಪೈಕಿ ಒಂದಾಗಿರುವ ಗುಜರಾತಿನ ಬಹುದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ಅವರು ಅಭಿವೃದ್ಧಿಗೆ ಮತ್ತೊಂದು ಹೆಸರು ಎಂಬಂತೆ ಬಿಂಬಿಸಲ್ಪಟ್ಟಿದ್ದರು. ಅದೇ ವೇಳೆಗೆ, ಎರಡು ಮತಧರ್ಮಗಳ ನಡುವಿನ ಕೋಮು ಹಿಂಸೆ ಅವರ ರಾಜ್ಯದ ಉದ್ದಗಲಕ್ಕೂ ಕಾಣಿಸಿಕೊಂಡಾಗ, ಅದನ್ನು ನಿರ್ಬಂಧಿಸಿ ನಿವಾರಿಸುವಲ್ಲಿ ಅವರು ತೋರಿದ ಅಸಮರ್ಥತೆ ಇವತ್ತಿಗೂ ಅವರ ಚರಿತ್ರೆಯ ಮೇಲೆ ಕುಖ್ಯಾತಿನ ಕಳಂಕವಾಗಿಯೇ ಉಳದಿದೆ. ಇವತ್ತಿಗೂ ಅವರು ಗುಜರಾತಿನ ಮುಖ್ಯಮಂತ್ರಿಗಳಾಗಿ ದಾಖಲಿಸಿದ್ದ ಸಾಧನೆಯ ಮೇಲೆ ಒಂದು ಕರಾಳ ನೆರಳಾಗಿ ಆಚ್ಛಾದಿಸಿದೆ. 2014ರಲ್ಲಿ ರಾಷ್ಟ್ರೀಯ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ, ಅವರು ಸತತ ಒತ್ತುಕೊಟ್ಟು ಮಾತನಾಡಿದ್ದು ಅಭಿವೃದ್ಧಿಯ ಬಗ್ಗೆಯೇ. ಅವರ ಆ ಧೋರಣೆ ರಾಷ್ಟ್ರದ ಉದ್ದಗಲಕ್ಕೂ ಅವರಿಗೆ ಅಭೂತಪೂರ್ವ ಬೆಂಬಲ ದೊರಕಿಸಿಕೊಟ್ಟಿತು.

ಎರಡನೆಯದಾಗಿ, ಅವರು ಜನತೆಗೆ ಆಶ್ವಾಸನೆ ನೀಡಿದ್ದುದು ಉತ್ತಮ ಆಡಳಿತದ ಕುರಿತು. ಇಂಡಿಯಾ ಅಗೇನೆಸ್ಟ್ ಕರಪ್ಶ್‌ನ್ ಎಂಬ ವಿಶಾಲ ಜನಾಂದೋಲನದ ಅಲೆಯ ಮೇಲೆಯೇ ತೇಲಿಬಂದ ಮೋದಿಯವರು ದೆಹಲಿ ಗದ್ದುಗೆಯ ಮೇಲೆ ಆಸೀನರಾದರು. ಬಾಯಿ ತೆರೆದರೆ, ಉತ್ತಮ ಆಡಳಿತ ಹಾಗೂ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಗಳಪುತ್ತಲೇ ಪ್ರಧಾನಿಯ ಗದ್ದುಗೆ ಏರಿದರು. ಉತ್ತಮ ಆಡಳಿತ ಅಪಾರ ಅಭಿವೃದ್ಧಿಯ ಮಾತುಗಳನ್ನು ಹಿಂದುತ್ವದ ರಾಜಕಾರಣದಲ್ಲಿ ಮಿಶ್ರಿಸಿ, ಮಿದ್ದು, ನಾದಿ ಮಾಡಿದ ಸಮ್ಮೋಹಕ ಪ್ರಸಾದ ಸೇವಿಸಿ ಮೈಮರೆತ ಭಾರತೀಯ ಮತದಾರರು ಸಹಜವಾಗಿಯೇ ಅವರ ಮಾತಿಗೆ ಮರುಳಾದರು. ಅವರ ಮಾತೆಂದರೆ, ಆಕರ್ಷಕ ಆಶ್ವಾಸನೆ, ಅಚ್ಯುತ ವಚನ! ವಿಷಾದನೀಯ ಸಂಗತಿಯೆಂದರೆ, ಮೋದಿಯವರ ನಡೆ, ಅವರ ನುಡಿಗೆ ಸಂವಾದಿಯಾಗಿ ಹೊರ ಹೊಮ್ಮಲಿಲ್ಲ, ನುಡಿ-ನಡೆಗಳ ನಡುವೆ ಭೂಮಿ ಆಕಾಶದಷ್ಟು ಅಂತರದ ಬಿರುಕು ಕಾಣಿಸಿಕೊಂಡಿತು. ಅನೇಕ ರಾಜಕೀಯ ವಿಶ್ಲೇಷಕರು ಹಾಗೂ ವಿಮರ್ಶಕರು ಇದು ಹೀಗೆಯೇ ಅಗುವುದೆಂದು ಮುಂಗಂಡಿದ್ದರು! ನಮ್ಮ ರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಾಗಲೀ, ಉತ್ತಮ ಆಡಳಿತವನ್ನು ನೀಡುವುದರಲ್ಲಾಗಲಿ, ಮೋದಿಯವರು ತಮ್ಮ ವಚನವನ್ನು ಉಳಿಸಿಕೊಳ್ಳಲಿಲ್ಲ. ಅವರ ವಾಗಾಡಂಬರದ ನುಡಿಗಳು ಜನರೊಳಗೆ ವಿಶ್ವಾಸ ಕುದುರಿಸಲಿಲ್ಲ. ನೋಟ್‌ಬಂದಿಯ ಮೂಲಕ ಅವರು ಇಟ್ಟ ಮೊದಲ ಹೆಜ್ಜೆಯಲ್ಲಿಯೇ ಎಡವಿದ್ದುದು ಈಗ ಎಲ್ಲರ ಅಂಗೈ ಹುಣ್ಣು. ಅದನ್ನು ನೋಡಿಕೊಳ್ಳಲು ಕನ್ನಡಿ ಬೇಕಿಲ್ಲ. 500 ಮತ್ತು 1000 ಮೌಲ್ಯದ ನೋಟುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ, ರಾತ್ರೋ ರಾತ್ರಿ, ನಿಂತ ನಿಲುವಿನಲ್ಲಿಯೇ, ಅಮಾನ್ಯವೆಂದು ಘೋಷಿಸಿದ್ದೇ ತಡ, ಇಡೀ ದೇಶದ ಅರ್ಥವ್ಯವಸ್ಥೆ ಅಸ್ಥಿರಗೊಂಡು ಹಳ್ಳ ಹಿಡಿಯಿತು. ದೇಶ ರಕ್ಷಣೆಗೆಂದು ಖರೀದಿಸಲಾದ ಶಸ್ತ್ರಾಸ್ತ್ರಗಳ ವ್ಯವಹಾರದಲ್ಲಿ ಬುದುಂಗನೆ ಮೇಲೆದ್ದು ಬಂದ ಭ್ರಷ್ಟಾಚಾರದ ಆಪಾದನೆಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ನೆಗ್ಗಿಸಿ ವಿರೂಪಗೊಳಿಸಿದವು.

ತತ್‌ಪರಿಣಾಮವಾಗಿ, ಮೋದಿಜಿಯವರ ಪ್ರಥಮ ಅಧಿಕಾರಾವಧಿ ಕೊನೆಗೊಳ್ಳುವ ಸಮಯ ಸಮೀಪಿಸುತ್ತಿದ್ದಂತೆಯೇ ಅವರ ಪುನರ್ ಗೆಲುವಿನ ಸಾಧ್ಯತೆಗಳು ಮಂಕಾಗತೊಡಗಿದವು. ಆಗ ಮೋದಿಯವರು ಕೂಡಲೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮಾತುಗಳನ್ನು ಮೂಲೆಗೊತ್ತಿದರು. ಹೊಸದೊಂದು ರಾಷ್ಟ್ರೀಯ ವೇದಿಕೆಯೇರಿ ನಿಂತು ಪಾಕಿಸ್ತಾನದ ವಿರೋಧಿ ಮಾತುಗಳನ್ನು ಉಗ್ಗಡಿಸತೊಡಗಿದರು. ದೇಶದಲ್ಲಿಯ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಮತಾಂಧತೆ ಹಾಗೂ ಕೋಮು ಅಮಲಿನ ಮಾತುಗಳನ್ನು ಬಿತ್ತರಿಸಲಾರಂಭಿಸಿದರು. ಮೋದಿಯವರ ಮಾತು ಮತ್ತು ಕೃತಿಯ ನಡುವಿನ ಇಂಥ ಕಂದರಗಳ ಕುರಿತು ಪ್ರಭಾಕರರ ಲೇಖನಗಳು ವ್ಯಥೆ ವ್ಯಂಜಿಸಿ, ವಿಷಾದ ವ್ಯಕ್ತಪಡಿಸುತ್ತವೆ. ಈ ಘೋರ ಕಂದರದ ಪರಿಣಾಮವಾಗಿ, ರಾಜಕೀಯ ವ್ಯವಸ್ಥೆಯ ಮೇಲುಂಟಾದ ದುಷ್ಪರಿಣಾಮಗಳ ಕುರಿತು ದುಃಖಿಸುತ್ತವೆ.

ಪ್ರಭಾಕರ್ ಅವರು ಎಲ್ಲಿಯೋ ದಂತಗೋಪುರವೊಂದರಲ್ಲಿ ಕುಳಿತು, ನಮಗೆ ಸದ್ಬೋಧೆ ಮಾಡುವವರಲ್ಲ-ಎಂಬುವುದನ್ನು ಇಲ್ಲಿಯ ಅನೇಕ ಲೇಖನಗಳು ಸ್ಪಷ್ಟವಾಗಿ ಸಾಬೀತುಗೊಳಿಸುತ್ತವೆ. ಅವರು ವಾಸ್ತವ ಪ್ರಪಂಚದ ನೆಲೆಯ ಮೇಲೆ ನಿಂತು, ಮೈಯೆಲ್ಲ ಕಣ್ಣಾಗಿ ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಾರೆ-ಎಂಬುವುದಕ್ಕೆ ಇಲ್ಲಿ ಹಲವಾರು ಪುರಾವೆಗಳು ದೊರಕುತ್ತವೆ. ಅವರದು, ಅತ್ಯಂತ ತೀಕ್ಷ್ಣವಾದ ದೃಷ್ಟಿ ಎಂಬುವುದಕ್ಕೆ ವಿವಿಧ ಲೇಖನಗಳು ಜ್ವಲಂತ ನಿದರ್ಶನಗಳಾಗಿವೆ. ಪಂಜಾಬಿನ ರಾಜ್ಯ ಶಾಸನಸಭೆಗೆ ನಡೆದ ಇತ್ತೀಚಿನ ಚುನಾವಣೆಗಳ ಮುಂಚೆ ಅಲ್ಲಿಯ ಪರಿಸ್ಥಿತಿಯನ್ನು ನಿಖರವಾಗಿ ಗುರುತಿಸಿದವರಲ್ಲಿ ಪ್ರಭಾಕರ್ ಅವರು ಪ್ರಮುಖರಷ್ಟೇ ಅಲ್ಲ, ಪ್ರಥಮರು ಕೂಡ. ಅಲ್ಲಿಯ ಜನತೆಯ ಮನದಲ್ಲಿ ಮಡುವುಗಟ್ಟಿದ್ದ ದುಗುಡ, ಪ್ರಖರಗೊಂಡ ಪರಕೀಯ ಭಾವ-ಮುಂತಾದವುಗಳ ಕಡೆಗೆ ಗಮನ ಸೆಳೆದವರಲ್ಲಿ ಅವರೇ ಮೊದಲಿಗರಾಗಿದ್ದರು. ಜನತೆಯ ಅಸಮಾಧಾನದ ಸಿಟ್ಟು ಸೆಡವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ಆಮ್ ಆದ್ಮಿ ಪಕ್ಷವು, ಅನನ್ಯ ಜಾಣತನದಿಂದ ಜನಮಾನಸಕ್ಕೆ ಲಗ್ಗೆ ಇಟ್ಟಿತು. ಪರಿಣಾಮವಾಗಿ, ಎಲ್ಲ ಪ್ರಮುಖ ಪಕ್ಷಗಳನ್ನು ಹಿಂದೆ ಹಾಕಿ, ಗಮನಾರ್ಹವಾದ ಯಶಸ್ಸು ಸಾಧಿಸಿಕೊಂಡಿತು.

ತಮ್ಮ ಅಭಿಪ್ರಾಯ, ದೃಷ್ಟಿ ಧೋರಣೆಗಳನ್ನು ಸಮರ್ಥಿಸಲು ಪ್ರಭಾಕರ್ ಅವರು ಅನೇಕ ಸತ್ಯ-ತಥ್ಯಗಳನ್ನು ಸಂಚಯಿಸಿ ಸಾದರಪಡಿಸುತ್ತಾರೆ. ಅವುಗಳೇ ಅವರ ಲೇಖನಿ ಮತ್ತು ಲೇಖನಗಳಿಗೆ ವಿಪುಲ ಶಕ್ತಿ ಪೂರೈಸುತ್ತವೆ. ಅವರು ಕೇವಲ ವಾಗ್ವಾದಕ್ಕೆ ಜೋತು ಬೀಳುವವರಲ್ಲ. ಅನೇಕ ರಾಜಕೀಯ ವಿಶ್ಲೇಷಕರು ಹಾಗೂ ವ್ಯಾಖ್ಯಾನಕಾರರಂತೆ ಊಹಾಪೋಹಗಳನ್ನು ಆಧರಿಸಿ, ಅಂತಿಮ ನಿರ್ಣಯಕ್ಕೆ ಬರುವವರೂ ಅಲ್ಲ. ಭಾರತೀಯ ಮಾಧ್ಯಮಗಳಲ್ಲಿಯ ರಾಜಕೀಯ ವಿಶ್ಲೇಷಣೆಯ ಬಹುಭಾಗ, ಕಲ್ಪಿತ ಸಂಗತಿ ಹಾಗೂ ವಿಸ್ತೃತ ವದಂತಿಗಳನ್ನೇ ಆಶ್ರಯಿಸಿರುವುದನ್ನು ಕಾಣುತ್ತೇವೆ. ನಿರಾಧಾರವಾದ ಊಹೆ ನಮ್ಮ ಮಾಧ್ಯಮಗಳ ವಿಶ್ಲೇಷಣೆಯ ಜೀವಜೀವಾಳವಾಗಿರುವುದು ನಿಚ್ಚಳ. ಪ್ರಭಾಕರ್ ಅವರು ಸುಸಂಬದ್ಧವಾಗಿ ತರಬೇತಿ ಪಡೆದ ಅರ್ಥಶಾಸ್ತ್ರಜ್ಞರು. ಆ ಕಾರಣದಿಂದಾಗಿಯೇ ಅವರ ಅಭಿಪ್ರಾಯಗಳೆಲ್ಲ ಗಟ್ಟಿಯಾದ ನಿಜಸಂಗತಿಯ ನೆಲೆಯ ಮೇಲೆ ನಿಂತಿರುತ್ತವೆ. ಅವರು ನಿಯಮಿತವಾಗಿ ಬರೆದು ಪ್ರಕಟಿಸಿದ ಈ ಅಂಕಣಗಳೆಲ್ಲ, ಅವರೊಬ್ಬ ಸೂಕ್ಷ್ಮದೃಷ್ಟಿಯ ಮೊನಚು ಮತಿಯ ಸಂಶೋಧಕರು ಎಂಬುವುದನ್ನು ಢಾಳಾಗಿ ಎತ್ತಿ ತೋರಿಸುತ್ತದೆ. ತಮ್ಮ ವಾದಗಳನ್ನು ಸಶಕ್ತಗೊಳಿಸಿ, ಸಾದರಪಡಿಸುವ ಉದ್ದೇಶದಿಂದ ಅವರು ಸತತವಾಗಿ, ಅಷ್ಟೇ ಸುಸಂಬದ್ಧವಾಗಿ ಸಾಕ್ಷಿ ಪುರಾವೆಗಳನ್ನು ಶೋಧಿಸಿ, ಸಂಗ್ರಹಿಸುತ್ತಲೇ ಇರುತ್ತಾರೆ.

ಪ್ರಭಾಕರ್ ಅವರ ರಾಜಕೀಯ ವಿಮರ್ಶೆ, ಟೀಕೆ ಟಿಪ್ಪಣಿಗಳಿಗೆ ಸತ್ಯ ತಥ್ಯಗಳ ಸದೃಢವಾದ ನೆಲೆಗಟ್ಟಿರುತ್ತದೆ. ಆದ್ದರಿಂದಲೇ ಅವರ ಅಭಿಪ್ರಾಯಗಳು ಅಜೇಯ-ವಾಗಿರುತ್ತವೆ. ಭಾರತವು ಮುಂದಿನ ಮಹಾಚುನಾವಣೆಗಳ ಕಡೆಗೆ ಭರದಿಂದ ಸಾಗುತ್ತಿರುವಂತೆಯೇ ಹರಿದು ಬರುತ್ತಿರುವ ಅನೇಕ ಸತ್ಯ ಸಂಗತಿಗಳು, ದರಿದ್ರ ದಾಖಲೆಗಳು ಮುಖಕ್ಕೆ ರಾಚುತ್ತಿವೆ. ಅಭಿವೃದ್ಧಿ ಹಾಗೂ ಉತ್ತಮ ಆಡಳಿತ-ಎರಡೂ ದೃಷ್ಟಿಯಿಂದಲೂ ಅದರ ವಿಫಲತೆ ಎದ್ದುಕಾಣುತ್ತಿವೆ. ಆದ್ದರಿಂದ ಈ ಮುಂಬರುವ ಚುನಾವಣೆಯಲ್ಲಿ ಸದ್ಯದ ಅಧಿಕಾರಸ್ಥ ಸರ್ಕಾರವು, ತನ್ನ ಮೇಲ್ಮೆ, ಮುನ್ನಡೆಯ ಆಧಾರದ ಮೇಲೆ ಚುನಾವಣೆಯ ಪ್ರಚಾರಕ್ಕೆ ಇಳಿಯಲಾರದು. ಯಾಕೆಂದರೆ, ಜನರ ಮುಂದೆ ಹೇಳಿಕೊಳ್ಳಲು ಯಾವುದೇ ಅದ್ಭುತ ಸಾಧನೆಯ ಬಾಣಗಳು ಅದರ ಬತ್ತಳಿಕೆಯಲ್ಲಿಲ್ಲ. ಹಾಗಾಗಿ, ಅದು ಜನರ ಮುಂದೆ ಸತ್ಯ ಸಂಗತಿಗಳನ್ನು ಮಂಡಿಸಿ, ತನ್ನ ತರ್ಕಬದ್ಧವಾದ ನೆಲೆಯ ಮೇಲೆ ನಿಂತು, ಜನರ ಮತ ಯಾಚಿಸಲಾರದು. ಬದಲಾಗಿ ಅದು ಹಲವಾರು ಭ್ರಮೆ ವಿಭ್ರಮೆಗಳನ್ನು ಬಳಸಿ, ಜನರನ್ನು ಸಮ್ಮೋಹಗೊಳಿಸುವ ಭ್ರಾಮಕ ಬಲೆಯನ್ನು ಬೀಸಲಿದೆ. ಅಮೃತಕಾಲ ಎಂಬ ಉದ್‌ಭ್ರಮೆಯಲ್ಲಿ ಜನರನ್ನು ಓಲಾಡಿಸುವ, ತೇಲಾಡಿಸುವ ಖೋಟಾ ಕೆಲಸಕ್ಕೆ ಈಗಾಗಲೇ ಕೈಹಾಕಿದೆ. ಅದು ಮುಂದಿನ ಚುನಾವಣೆಗೆ ಮತಯಾಚಿಸುವ ಹೊತ್ತಿನಲ್ಲಿ ಅಪೂರ್ವ ಸುವರ್ಣ ಯುಗವೊಂದನ್ನು ಅನತಿ ಕಾಲದಲ್ಲಿಯೇ ಸೃಷ್ಟಿಸುವ ಭಾರೀ ಆಶ್ವಾಸನೆ ನೀಡಲಿದೆ. ಯಾಕೆಂದರೆ, ಅದು ನಡೆದುಬಂದಿರುವ ದರಿದ್ರ ದಾಖಲೆ ಈಗಾಗಲೇ ಸತ್ತು, ಅಡ್ಡಾದಿಡ್ಡಿಯಾಗಿ ಸೆಟೆದು, ಅಷ್ಟಾವಕ್ರವಾಗಿ ವಿಕಾರಗೊಂಡಿದೆ. ಅದರ ಪೊಳ್ಳು ಭರವಸೆ, ಸುಳ್ಳು ಸಾಧನೆಗಳ ನೆಲೆಯ ಮೇಲೆ ಮತ್ತೊಮ್ಮೆ ಮತ ಯಾಚಿಸುವಷ್ಟು ಮೂರ್ಖ ಸರ್ಕಾರ ಮೋದಿಯವರದ್ದಲ್ಲ. ಭಾವುಕ, ಭಾವನಾತ್ಮಕ ಸಂಗತಿಗಳ ಬಲೆ ಬೀಸಿ, ಜನಮಾನಸವನ್ನು ಸೆರೆಹಿಡಿಯುವ ಕಲೆ ಅದಕ್ಕೆ ಕರಗತವಾಗಿದೆ. ಅದು ಹೊಸ ಆಮಿಷದ ಪರಿಭಾಷೆಯೊಂದಿಗೆ ಜನತೆಯ ಮುಂದೆ ಬರಲಿದೆ!

ಪ್ರಭಾಕರ್ ಅವರ ಗದ್ಯದ ಮೂಲ ಹೈದ್ರಾಬಾದು. ಅಲ್ಲಿಂದ ಅಂಕುರಿಸಿ ಸಿಡಿದು ಹೊರಬರುವ ಅದು, ದೇಶದ ಸಮಸ್ತ ಜನತೆ, ಅಷ್ಟೇ ಅಲ್ಲ, ಇಡೀ ಪ್ರಪಂಚದ ಜನತೆಯ ವಾಚನಕ್ಕೆ ಲಾಯಕ್ಕಾಗಿದೆ. ಭಾರತದ ವರ್ತಮಾನ ಹಾಗೂ ಭವಿಷ್ಯತ್ತಿನ ಬಗ್ಗೆ ಕಿಂಚಿತ್ ಕಾಳಜಿಯಿರುವ ಎಲ್ಲರೂ ಓದಲೇಬೇಕಾದ, ಅದ್ಭುತ ಸತ್ಯಸಂಧ, ಸಬಲ ಗದ್ಯ ಅವರದು.

- ಸಂಜಯ್ ಬಾರು

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...