ಹೆಣ್ಣಿನ ಬಾಳುವೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಕೃತಿ ‘ಹೆಣ್ಣಿನ ತಾಳ್ಮೆ’


‘ಹೆಂಡತಿಯ ಸಹಜ ಪ್ರೀತಿಯನ್ನು ಅರಿಯದ ಗೀತಾಳ ಗಂಡ ಶಶಿಧರ, ಕೇವಲ ತಾಯಿಯ ಮಾತನ್ನೇ ವೇದವಾಕ್ಯವೆಂದು ನಂಬಿ, ತಾನೇ ಮೆಚ್ಚಿ ಮದುವೆಯಾದ ಗೀತಾಳಿಗೆ ಬಂದ ಸಂಕಟ ಮತ್ತು ವೇದನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲನಾಗುವುದು, ಮಕ್ಕಳು ದೊಡ್ಡವಾಗಿ ಅವರು ಮದುವೆಯ ವಯಸ್ಸಿಗೆ ಬರುವವರೆಗೂ ಗೀತಾಳ ಸಂಕಷ್ಟ ಸುದೀರ್ಘವಾಗಿ ಮುಂದುವರೆಯುತ್ತದೆ’ ಎನ್ನುತ್ತಾರೆ, ಡಾ. ನಿಷ್ಠಿ ರುದ್ರಪ್ಪ. ಅವರು ಲೇಖಕಿ ಶ್ರೀಮತಿ ಜಿ.ಎಂ. ರಾಜೇಶ್ವರಿ ಅವರ ‘ಹೆಣ್ಣಿನ ತಾಳ್ಮೆ’ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಸಾಹಿತ್ಯವು ಒಂದು ಪ್ರಕಾರವಾಗಿದ್ದು, ಕನ್ನಡದಲ್ಲಿ ಅನೇಕ ಕಾದಂಬರಿಗಳು ಲೋಕಾರ್ಪಣೆಗೊಂಡಿವೆ. ಬಳ್ಳಾರಿಯ ಶ್ರೀಮತಿ ಜಿ.ಎಂ. ರಾಜೇಶ್ವರಿಯವರು ರಚಿಸಿರುವ 'ಹೆಣ್ಣಿನ ತಾಳ್ಮೆ' ಈ ಕಾದಂಬರಿಯು ಅವರ ಪ್ರಥಮ ಪ್ರಯತ್ನವಾಗಿದೆ. ಕಾದಂಬರಿಯ ಕಥಾ ನಾಯಕಿ ಗೀತಾಳ ಕೌಟುಂಬಿಕ ಜೀವನದ ದಟ್ಟವಾದ ಅನುಭವಗಳನ್ನು ಕುರಿತದ್ದು ಆಗಿದೆ. ವಿಶೇಷವಾಗಿ ಈ ಕಾದಂಬರಿಯು ಪ್ರಾದೇಶಿಕ ಬಳ್ಳಾರಿಯ ಭಾಷೆಯನ್ನು ಸಮರ್ಥವಾಗಿ ರಾಜೇಶ್ವರಿಯವರು ಬಳಸಿಕೊಳ್ಳುವ ಮೂಲಕ ಆಧುನಿಕ ವಿದ್ಯುನ್ಮಾನ ಮಾಧ್ಯಮದ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಅನೇಕ ಶಬ್ದಗಳನ್ನು ನೆನಪಿಗೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.

ತವರು ಮನೆಯಲ್ಲಿ ತಂದೆ-ತಾಯಿ, ಅಣ್ಣ ತಮ್ಮಂದಿರು, ಅಕ್ಕ- ತಂಗಿಯರೊಂದಿಗೆ ಸುಖ-ಸಂತೋಷದಲ್ಲಿ ಬೆಳೆಯುವ ಹೆಣ್ಣು ಮಗಳು ಮದುವೆಯಾದ ನಂತರ ತನ್ನದಲ್ಲದ ಮನೆಯನ್ನು ತನ್ನದೆಂದು ಭಾವಿಸಿ, ನಂಬಿ ಕೈ ಹಿಡಿದ ಗಂಡನನ್ನೇ ತನ್ನ ಜೀವನದ ಸರ್ವಸ್ವವೆಂದು ಭಾವಿಸಿ ಆ ಮನೆಯ ಶ್ರೇಯೋಭಿವೃದ್ಧಿಗಾಗಿ ತನ್ನನ್ನು ತಾನು ಗಂಧದ ಕೊರಡಿನಂತೆ ತೇಯ್ದುಕೊಂಡು, ಮೆಟ್ಟಿದ ಮನೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಬೇಕಾಗುತ್ತದೆ. ಅದರಲ್ಲಿಯೇ ಆಕೆಗೆ ಸುಖವಿದೆ ಮತ್ತು ಆದರ್ಶವಿದೆಯೆಂದು ಸ್ತ್ರೀ ಬಾಳುತ್ತಾಳೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು 'ಸ್ತ್ರೀ' ಎನ್ನುವ ಕವನದಲ್ಲಿ ಹೇಳುವಂತೆ, 'ಮನೆಮನೆಯಲಿ ದೀಪ ಮುಡಿಸಿ, ಹೊತ್ತು, ಹೊತ್ತಿಗೆ ಅನ್ನವುಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ' ಎನ್ನುವಂತೆ ಸ್ತ್ರೀಯರು ಗಂಡನ ಮನೆಯ ಏಳಿಗೆಯನ್ನೇ ತನ್ನ ಜೀವನದ ಪರಮ ಧೈಯವೆಂದು ಬಾಳುತ್ತಾರೆ.

ಈ ಕಾದಂಬರಿಯಲ್ಲಿ ತವರು ಮನೆ ತೊರೆದು ಗೀತಾ ಅತ್ತೆಯ ಮನೆಯಲ್ಲಿ ಅನುಭವಿಸುವ ಅನೇಕ ಸಂಕಷ್ಟಗಳನ್ನು ರಾಜೇಶ್ವರಿಯವರು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ತಾನು ಒಬ್ಬ ಹೆಣ್ಣಾಗಿ, ಸೊಸೆಯಾಗಿ ಗಂಡನ ಮನೆಗೆ ಬಂದ ಅತ್ತೆ ತನ್ನ ಸೊಸೆಗೆ ಕೊಡುವ ಪರಿಪರಿಯ ಕಷ್ಟಗಳನ್ನು ಓದುತ್ತಾ ಹೋದಾಗ ಆಕೆಯ ಕಷ್ಟಗಳಲ್ಲಿ ನಾವು ಕೂಡ ಭಾಗಿಯಾಗಿದ್ದೇವೆನೋ ಎನ್ನುವ ಭಾವನೆ ಓದುಗರಿಗೆ ಸಹಜವಾಗಿ ಮೂಡುವಂತೆ, ನಮ್ಮ ಮನೆಯಲ್ಲಿಯೂ ಈ ಸಂಕಷ್ಟಗಳ ಸರಮಾಲೆಯನ್ನು ಕಾದಂಬರಿಕಾರರು ಚಿತ್ರಿಸುವ ಮೂಲಕ ಹೆಣ್ಣಿನ ಬಾಳುವೆಯ ವಿವಿಧ ಮಜಲುಗಳನ್ನು ಚಿತ್ರಿಸಿದ್ದಾರೆ.

ಹೆಂಡತಿಯ ಸಹಜ ಪ್ರೀತಿಯನ್ನು ಅರಿಯದ ಗೀತಾಳ ಗಂಡ ಶಶಿಧರ, ಕೇವಲ ತಾಯಿಯ ಮಾತನ್ನೇ ವೇದವಾಕ್ಯವೆಂದು ನಂಬಿ, ತಾನೇ ಮೆಚ್ಚಿ ಮದುವೆಯಾದ ಗೀತಾಳಿಗೆ ಬಂದ ಸಂಕಟ ಮತ್ತು ವೇದನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲನಾಗುವುದು, ಮಕ್ಕಳು ದೊಡ್ಡವಾಗಿ ಅವರು ಮದುವೆಯ ವಯಸ್ಸಿಗೆ ಬರುವವರೆಗೂ ಗೀತಾಳ ಸಂಕಷ್ಟ ಸುದೀರ್ಘವಾಗಿ ಮುಂದುವರೆಯುತ್ತದೆ.

ಅತ್ತೆ ಶಿವಮ್ಮ ತಾನೂ ಒಂದು ಹೆಣ್ಣೆಂಬುದನ್ನು ಮರೆತು, ತನಗೂ ವೀಣಾಳೆಂಬ ಮಗಳು ಗಂಡನ ಮನೆಯಲ್ಲಿ ಬಾಳುವೆ ಮಾಡುವ ಹೆಣ್ಣಿದ್ದಾಳೆಂಬುದನ್ನು ಮರೆತು ಗೀತಾಳಿಗೆ ತಂದೊಡ್ಡುವ ಕಷ್ಟಗಳನ್ನು ನೆನೆದಾಗ 'ಹೆಣ್ಣಿಗೆ ಹೆಣ್ಣೆ ಶತೃ' ಎನ್ನುವ ಮಾತು ನಿಜವೆನಿಸುತ್ತದೆ. ಗಂಡನ ಮನೆಯಲ್ಲಿ ಸುಖವಾಗಿದ್ದರೂ ತವರು ಮನೆಗೆ ಆಗಾಗ ಬರುವ ವೀಣಾ ತಾನೊಂದು ಹೆಣ್ಣಾಗಿ ಅತ್ತಿಗೆ ಗೀತಾಳಿಗೆ ಕೊಡುವ ನೋವು ಹಿಂಸೆಗಳು ಇಂದಿನ ಕಿರುತೆರೆಯ ಧಾರವಾಹಿಯಲ್ಲಿ ಬರುವ ಘಟನೆಗಳಂತೆ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವಲ್ಲಿ ರಾಜೇಶ್ವರಿಯವರು ಸಫಲರಾಗಿದ್ದಾರೆ.

'ಅತ್ತೆಯ ಮನೆಯಲ್ಲಿ ತ್ತೊತ್ತಾಗಿ ಇರಬೇಕು, ಹೊತ್ತಾಗಿ ನೀಡಿದರೆ ಉಣಬೇಕು, ನನ ಮಗಳೆ ತವರು ಮನೆಗೆ ಹೆಸರು ತರಬೇಕು' ಎನ್ನುವ ಜನಪದ ಹಾಡು ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆದರೆ ಇಂದು ಕಾಲ ಬದಲಾಗಿದೆ. ಹೆಣ್ಣು ಗಂಡು ಇಬ್ಬರೂ ಸರಿ ಸಮನಾಗಿ ದುಡಿಯುವ ಸಂದರ್ಭದಲ್ಲಿ ಅತ್ತೆಯ ಕಾಟವನ್ನು ಸಹಿಸಿಕೊಳ್ಳುವ ಸೊಸೆಯಂದಿರು ಇಂದಿನ ಕಾಲದಲ್ಲಿ ವಿರಳ.

ಮನೆಯಲ್ಲಿ ಅತ್ತೆ-ಸೊಸೆಯರು ಜಗಳವಾಡುವ ಮೂಲಕ ಮನೆಯ ನೆಮ್ಮದಿಯನ್ನೇ ಹಾಳುಮಾಡುತ್ತಾರೆ. ಅವರ್ರೀರು ತಾವು ಈ ಮನೆಗೆ ಸೊಸೆಯಾಗಿ ಬಂದೆವೆಂಬುದನ್ನೇ ಅರಿತು ಬಾಳದೆ ಆಜನ್ಮ ಶತೃಗಳಂತೆ ವರ್ತಿಸುವ ಮೂಲಕ

ಮನೆಯ ಸುಖ-ಶಾಂತಿಯನ್ನು ಕದಡುತ್ತಾರೆ. ನಿತ್ಯವೂ ಹೊರಗೆ ದುಡಿಯುವ ಗಂಡಸರಿಗೆ ಇವರನ್ನು ಸಮಾಧಾನ ಮಾಡಲಾಗದೆ ಆಶಾಂತ ಮನೆಯ ವಾತವಾರಣದಿಂದ ಜಿಗುಪ್ಪೆಗೊಂಡು ಕೆಟ್ಟ ಚಟಗಳಿಗೆ ಬಲಿಯಾಗುವ ಸಂದರ್ಭಗಳು ෂ වූධි වූ.

ಅತ್ತೆ-ಸೊಸೆಯರು ಜಗಳವಾಡುವುದು ಪರಸ್ಪರ ಅಪನಂಬಿಕೆಯಿಂದ ಮಾತ್ರ. ಅತ್ತೆ ತನ್ನ ಮನೆಯ ಯಜಮಾನಿಕೆ ಹೋಗುತ್ತದೆ ಎಂದು, ಸೊಸೆ ನಾನೇಕೆ ಅತ್ತೆಯ ಮಾತು ಕೇಳಬೇಕೆಂದು ಪರಸ್ಪರ ಜಿದ್ದು ಸಾಧಿಸುತ್ತಾ ಹೋಗುತ್ತಾರೆ. ಇಂತಹ ಸನ್ನಿವೇಶಗಳನ್ನು ಇಂದಿನ ದಿನಮಾನಗಳಲ್ಲಿ ನಾವು ಕಾಣದಿಲ್ಲ.

ತನ್ನ ಗಂಡನಿಗೆ ಜನ್ಮ ಕೊಟ್ಟ ತಾಯಿ(ಅತ್ತೆ)ಯನ್ನು ತನ್ನ ತಾಯಿಯೆಂದು ಭಾವಿಸುವ ಮತ್ತು ತನ್ನ ಮನೆ ಬೆಳಗಲು ಬಂದ ಮಗನ ಹೆಂಡತಿ(ಸೊಸೆ) ತನ್ನ ಮಗಳೆಂದು ಅತ್ತೆ ಭಾವಿಸಿದರೆ ಮನೆಯಲ್ಲಿ ಶಾಂತ ವಾತಾವರಣವನ್ನು ನಿರ್ಮಾಣ ಮಾಡಬಹುದು. 'ಗೋಕುಲದಂತಾ ಮಾವಾ, ಆಕಳದಂತಾ ಅತ್ತೆ, ಶ್ರೀಕೃಷ್ಣನಂತಾ ನನ ರಾಯಾ ಇರುವಾಗ ಸ್ವರ್ಗ ನನಗೇಕೆ' ಎನ್ನುವ ಜನಪದ ಹಾಡೊಂದಿದೆ.

ನಾವಿರುವ ತಾಣವನ್ನು ರಣರಂಗವಾಗಿಸದೆ. ಮನೆಯನ್ನು ನಂದನ ವನವನ್ನಾಗಿ ಮಾಡುವುದು ಮನೆಯ ಸ್ತ್ರೀಯರ ಕೈಯ್ಯಲ್ಲಿದೆ. ಆದ್ದರಿಂದ ಅರಿತು ಬಾಳಿದರೆ ಸ್ವರ್ಗ ಸುಖವಿದೆ. ಮನೆಯೆಂದ ಮೇಲೆ ವಿವಿಧ ಮನೋಸ್ಥಿತಿಯ ಜನರು ಇರುತ್ತಾರೆ. ಅವರೆಲ್ಲರನ್ನು ಪರಸ್ಪರ ಅರಿತು ಬಾಳಿದಾಗ ಮಾತ್ರ ನಾವು ಇದ್ದಲ್ಲಿಯೇ ಸ್ವರ್ಗವನ್ನು ನಿರ್ಮಾಣ ಮಾಡಬಹುದು.

ರಾಜೇಶ್ವರಿಯವರ ಈ ಪ್ರಥಮ ಕಾದಂಬರಿಯಲ್ಲಿ ಓದುಗರನ್ನು ಕಾಯ್ದಿಟ್ಟುಕೊಳ್ಳುವ ಗುಣವಿದೆ. ಅವರ ಈ ಪ್ರಥಮ ಪ್ರಯತ್ನ ಮುಂದಿನ ಸಾಹಿತ್ಯ ರಚನೆಗೆ ಪ್ರೇರಣೆಯಾಗಲೆಂದು ಶುಭ ಹಾರೈಸುತ್ತೇನೆ.

-ಡಾ. ನಿಷ್ಠಿ ರುದ್ರಪ್ಪ,
ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು., ಬಳ್ಳಾರಿ.

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...