ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು


'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್ತಿರುವವರಿಗೆ ಹಾಗೂ ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು' ಎನ್ನುತ್ತಾರೆ ಲೇಖಕ, ಅನುವಾದಕ ಹಸನ್‌ ನಯೀಂ ಸುರಕೋಡ. ಅವರು ಅನುವಾದಿಸಿದ ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ ಕೃತಿಗೆ ಬರೆದ ಅನುವಾದಕನ ಮಾತು ನಿಮ್ಮ ಓದಿಗಾಗಿ.

ಸಾಮ್ರಾಜ್ಯಶಾಹಿಯ ಪಾಶದಿಂದ ವಿಮೋಚನೆಗೊಂಡ ಭಾರತ ಪ್ರಜಾತಂತ್ರ ವ್ಯವಸ್ಥೆಯನ್ನು ಅಂಗೀಕರಿಸಿತು. ಅತ್ತ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡಿದರೆ ಇತ್ತ ಕಾಂಗ್ರೆಸ್ಸಿಗರು ಗಾಂಧೀಜಿಯ ಕನಸುಗಳನ್ನು ನುಚ್ಚುನೂರು ಮಾಡತೊಡಗಿದರು. ಪ್ರಜಾತಂತ್ರ ವ್ಯವಸ್ಥೆ ಅರ್ಥಹೀನವಾಗತೊಡಗಿತು. ಅಧಿಕಾರ ಸೂತ್ರ ಕಬಳಿಸಿಕೊಂಡ ಒಂದು ವಿಶಿಷ್ಟ ಆಳುವ ವರ್ಗ ತನ್ನ ಪ್ರಭುತ್ವವನ್ನು ಸ್ಥಾಪಿಸಿಬಿಟ್ಟಿತು. ನಾಲ್ಕು ಮಿಲಿಯನ್ ಜನ ನಲವತ್ತು ಕೋಟಿ ಜನರನ್ನು ನಿರ್ದಯವಾಗಿ ಹಾಗೂ ನಿರಂಕುಶವಾಗಿ ಆಳುವುದನ್ನು ಕಂಡು ರೋಸಿ ಹೋದ ರಾಮಮನೋಹರ ಲೋಹಿಯಾ ಕಾಂಗ್ರೆಸ್ ವಿರೋಧವಾದದ ಮೂಲಕವೇ ದೇಶದಲ್ಲಿ ಜನತಂತ್ರವನ್ನು ನೆಲೆಗೊಳಿಸುವುದು ಸಾಧ್ಯವೆಂದು ಮನಗಂಡರು. ಅದಕ್ಕಾಗಿ ಅವರು ವಿರೋಧಪಕ್ಷಗಳ ಏಕತೆಗಾಗಿ ನಿರಂತರ ಶ್ರಮಿಸಿದರು. ಅವರ ಕನಸು ಕೊನೆಗೂ 1967ರಲ್ಲಿ ನನಸಾಗುವ ಸೂಚನೆಗಳು ಕಂಡುಬಂದವು. ಹೀಗೆ ಕಾಂಗ್ರೆಸ್‌ನ ಏಕಚಕ್ರಾಧಿಪತ್ಯ ಕೊನೆಗೊಂಡಂತಾಯಿತು.

1967ರಲ್ಲಿ 16ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಎಂಟು ರಾಜ್ಯಗಳಲ್ಲಿ ಬಹುಮತ ಬರಲಿಲ್ಲ. ಬಿಹಾರ್‌ದಲ್ಲಿ ಕರ್ಪೂರಿ ಠಾಕೂರ್ ಅವರ ಸಂಯುಕ್ತ ಸಮಾಜವಾದಿ ಪಕ್ಷದ 69 ಜನ ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ವಿಧಾನಸಭೆಯಲ್ಲಿ ಅವರದು ಅತಿ ದೊಡ್ಡ ಪಕ್ಷವಾಗಿತ್ತು. ಅವರ ಪಕ್ಷದ ನೇತೃತ್ವದಲ್ಲಿ ಸರಕಾರ ರಚನೆಗೊಂಡು ಕರ್ಪೂರಿ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ವಿರೋಧಪಕ್ಷಗಳ ಗೊಣಗಾಟ ಕಂಡು ಅವರು ವಿಧಾನಸಭೆಯ ಅತಿ ಸಣ್ಣ ಪಕ್ಷದ ಮಹಾಮಾಯಾ ಪ್ರಸಾದ್ ಸಿಂಗ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ಸೂಕ್ತವೆಂದು ಭಾವಿಸಿದರು. ಲೋಹಿಯಾ ಕೂಡ ಕರ್ಪೂರಿ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು. ಆದರೆ ಕರ್ಪೂರಿ ಅವರಿಗೆ ವಿರೋಧಪಕ್ಷಗಳ ಏಕತೆ ಮುಖ್ಯವಾಯಿತೆ ವಿನಾ ಮುಖ್ಯಮಂತ್ರಿಯಾಗುವುದಲ್ಲ.

ಕರ್ಪೂರಿ ಠಾಕೂರ್ ಮುಂದೆ ಎರಡು ಬಾರಿ ಬಿಹಾರ್‌ದ ಮುಖ್ಯಮಂತ್ರಿಯಾದರು. ವಿರೋಧ ಪಕ್ಷಗಳು ಹಾಗೂ ತಮ್ಮ ಪಕ್ಷದವರ ಬಲವಾದ ವಿರೋಧವನ್ನು ಲೆಕ್ಕಿಸದೇ ಲೋಹಿಯಾರ ಸಿದ್ಧಾಂತಗಳನ್ನು ಜಾರಿಗೆ ತರಲು ದೃಢ ಸಂಕಲ್ಪ ಮಾಡಿದರು. ಆ ಮೂಲಕ ಸಮಾಜವಾದಿ ಆಂದೋಲನಕ್ಕೆ ಹೊಸ ನೆಲೆಗಳು ಸಿಕ್ಕಂತಾಯಿತು. ಇನ್ನು ಕಾಂಗ್ರೆಸ್ ಬಿಹಾರದಲ್ಲಿ ಮರಳಿ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂದು ಕರ್ಪೂರಿ ಅವರ ಆತ್ಮೀಯ ಸ್ನೇಹಿತ ಲಾಡಲಿ ಮೋಹನ್ ನಿಗಂ ಅಭಿಪ್ರಾಯಪಟ್ಟರು. ಪ್ರತಿಯೊಂದು ರಾಜ್ಯದಲ್ಲಿ ಕರ್ಪೂರಿ ಅವರಂಥ ಒಬ್ಬ ನಿಷ್ಠಾವಂತ ಕಾರ್ಯಕರ್ತ ಸಿಕ್ಕರೆ ಸಮಾಜವಾದಿ ಆಂದೋಲನ ಇಡೀ ದೇಶದಲ್ಲಿ ಜಯಭೇರಿ ಬಾರಿಸಬಲ್ಲದು ಹಾಗೂ ದೆಹಲಿಯನ್ನು ಕೂಡ ವಶಪಡಿಸಿಕೊಳ್ಳಬಹುದು ಎಂದು ಲೋಹಿಯಾ ಪದೇ ಪದೇ ಹೇಳತೊಡಗಿದ್ದರು.

ಅಷ್ಟಕ್ಕೂ ತಮ್ಮ 36 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕರ್ಪೂರಿ ಅಧಿಕಾರದಲ್ಲಿದ್ದದ್ದು ಕೇವಲ 37 ತಿಂಗಳು ಕಾಲ ಮಾತ್ರ. ಅವರು ವಿರೋಧಪಕ್ಷದ ನಾಯಕರಾಗಿ ಅಷ್ಟೇ ಅಲ್ಲ ಬಿಹಾರ್‌ದಲ್ಲೇ ನೆಲೆಯೂರಿದ್ದರೂ ರಾಷ್ಟ್ರರಾಜಕಾರಣದಲ್ಲಿ ಅವರು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದರು. ಹಿಂದುಳಿದವರು, ದಲಿತರು ಹಾಗೂ ನಿರ್ಗತಿಕರಿಗೆ ಅವರು ಆಶಾಕಿರಣವಾದರು. ಈ ಅವಕಾಶವಂಚಿತ ವರ್ಗದವರೂ ಅಧಿಕಾರದ ಏಣಿ ಹತ್ತಲು ಸಮರ್ಥರಾದರು.

ಸಮಾಜವಾದಿ ಆಂದೋಲನದ ಈ ಅಲೆಮಾರಿ ಕರ್ಪೂರಿ ಅವರಿಗೆ ಬಹುಕಾಲದ ಆಸೆಯೊಂದಿತ್ತು. ಬಿಹಾರ್‌ದ ಕುಗ್ರಾಮವೊಂದರ ಗುಡಿಸಲಲ್ಲಿ ಅವರು ಹುಟ್ಟಿ ಬೆಳೆದಿದ್ದರು. ಅವರು ಆ ಗುಡಿಸಲಿಗೆ ಬದಲಾಗಿ ಒಂದು ಪಕ್ಕಾ ಮನೆ ಕಟ್ಟಿಸಬೇಕೆಂದಿದ್ದರು. ತಮ್ಮ ಆತ್ಮೀಯ ಸ್ನೇಹಿತ ಕಪಿಲದೇವಸಿಂಗ್ ಎದುರು ಅವರು ಈ ಆಸೆಯನ್ನು ವ್ಯಕ್ತಪಡಿಸಿದರು. ಸ್ವಂತಕ್ಕಾಗಿ ಎಂದೂ ಏನನ್ನೂ ಬಯಸದ ಕರ್ಪೂರಿ ಅವರ ಆಸೆಯನ್ನು ಈಡೇರಿಸಲೇಬೇಕೆಂದು ಅವರು ತೀರ್ಮಾನಿಸಿದರು. "ಇಗೋ ತೆಗೆದುಕೊಳ್ಳಿ ನನ್ನ ಜೀವಮಾನದ ಗಳಿಕೆಯನ್ನು" ಎಂದ ಕರ್ಪೂರಿ ತಮ್ಮ ಬಳಿ ಇದ್ದ ಹಣವನ್ನು ಅವರ ಕೈಗಿತ್ತರು. ಆ ಸ್ನೇಹಿತನಿಗೆ ದಿಕ್ಕು ತೋಚದಂತಾಯಿತು. ಮನೆಯೊತ್ತಟ್ಟಿಗಿರಲಿ ಎರಡು ಕೋಣೆಗಳನ್ನೂ ಆ ಹಣದಲ್ಲಿ ಕಟ್ಟಿಸುವುದು ಸಾಧ್ಯವಿಲ್ಲ. ಆದರೂ ವಂತಿಗೆ ಗಿಂತಿಗೆ ಮೂಲಕ ಹಣ ಹೊಂದಿಸಿ ಕರ್ಪೂರಿಯವರಿಗೊಂದು ಮನೆ ಕಟ್ಟಿಸಿದರಾಯಿತು ಎಂದುಕೊಂಡರು. ಮುಂದೆ ಕೆಲವೇ ತಿಂಗಳಲ್ಲಿ ಕರ್ಪೂರಿ ಕಾಲವಶವಾದರು. ಕರ್ಪೂರಿ ತಮಗೆ ನೀಡಿದ್ದ ಹಣವನ್ನು ಅವರ ಮಕ್ಕಳಿಗೆ ಮರಳಿಸಿ ಕಪಿಲದೇವಸಿಂಗ್ ಕೈತೊಳೆದುಕೊಂಡರಂತೆ.

ಯಾವ ಗುಡಿಸಲಲ್ಲಿ ಕರ್ಪೂರಿ ಹುಟ್ಟಿದ್ದರೊ ಅದು ಇಂದಿಗೂ ಸೂರಿಲ್ಲದ ಅಸಂಖ್ಯಾತ ಜನರಿಗೆ ಸಂಕೇತವಾಗಿ ಉಳಿದುಕೊಂಡುಬಿಟ್ಟಿತು. ಕರ್ಪೂರಿ ಅವರ ಜೀವಮಾನದ ಗಳಿಕೆ ಎಷ್ಟಿತ್ತು ಗೊತ್ತೆ? ಕೇವಲ 33 ಸಾವಿರ ರೂಪಾಯಿಗಳು.

ಕಳೆದ ಶತಮಾನದ ಅರವತ್ತರ ದಶಕದ ಅಂತ್ಯದಲ್ಲೇ ಹಣಬಲ ತೋಳ್ಬಲದ ರಾಜಕೀಯ, ಪಕ್ಷಾಂತರದ ಪಿಡುಗು ಹಾಗೂ ಜಾತೀಯತೆಯ ಅನಿಷ್ಟಗಳಿಂದಾಗಿ ಸ್ವತಂತ್ರ ಭಾರತ ಅವನತಿಯ ಹಾದಿ ಹಿಡಿದಿತ್ತು. ಕಳೆದ ನಾಲ್ಕು ದಶಕಗಳಲ್ಲಿ ರಾಜಕೀಯ ಅದೆಷ್ಟು ಗಬ್ಬೆದ್ದು ಹೋಗಿದೆಯೆಂದರೆ 'ರಾಜಕೀಯ' ಎನ್ನುವ ಶಬ್ದ ಕಿವಿಯ ಮೇಲೆ ಬೀಳುತ್ತಲೇ ಹೇಸಿಕೆ ತುಳಿದ ಅನುಭವವಾಗುತ್ತದೆ.

ಇಂಥ ಶೋಚನೀಯ ಸಂದರ್ಭದಲ್ಲಿ ಕರ್ಪೂರಿ ಕುರಿತ ಈ ಕೃತಿಯತ್ತ ನಮ್ಮ ರಾಜಕಾರಣಿಗಳು ವಾರೆನೋಟ ಕೂಡ ಬೀರಲಾರರು. ಆದರೆ ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್ತಿರುವವರಿಗೆ ಹಾಗೂ ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು.

ಕರ್ನಾಟಕದಲ್ಲಿ ಸಮಾಜವಾದಿ ಆಂದೋಲನದುದ್ದಕ್ಕೂ ಸಕ್ರಿಯವಾಗಿದ್ದು ಹೆಬ್ಬಳ್ಳಿ ರೈತ ಹೋರಾಟ ಮೊದಲು ಮಾಡಿ ಅನೇಕ ಹೋರಾಟಗಳನ್ನು ಮಾಡುತ್ತಲೇ ಬಂದಿರುವ ಹಿರಿಯ ಸಮಾಜವಾದಿ ಹೋರಾಟಗಾರ ನೀಲಗಂಗಯ್ಯ ಪೂಜಾರ್ ಮೊದಲ ವಿಧಾನಸಭೆಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಸಮಾಜವಾದಿ ಆಂದೋಲನದ ಇತಿಹಾಸದಲ್ಲಿ ಪೂಜಾರ್ ಮರೆಯಲಾಗದ ವ್ಯಕ್ತಿ. ಕಾಗೋಡು ರೈತ ಹೋರಾಟಕ್ಕಿಂತ ಹೆಬ್ಬಳ್ಳಿ ರೈತ ಹೋರಾಟ ಕಡಿಮೆ ಮಹತ್ವದ್ದಲ್ಲ. ಆದರೆ ಈ ರೈತ ಹೋರಾಟದ ಫಲಾನುಭವಿಗಳೇ ಅವರನ್ನು ಮರೆತುಬಿಟ್ಟಿದ್ದಾರೆ.

ರಾಮದುರ್ಗ ಸಂಸ್ಥಾನ ವಿಮೋಚನಾ ಹೋರಾಟದ ಮುಂಚೂಣಿಯ ನಾಯಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಮಹಾದೇವಪ್ಪ ಪಟ್ಟಣ ತಮ್ಮ ಬಾಳಸಂಜೆಯಲ್ಲಿ ಗುಲಾಮ ಭಾರತದ ಸ್ವಾತಂತ್ರ್ಯ ಕುರಿತ ತುಡಿತ, ರೊಚ್ಚು ಕೆಚ್ಚನ್ನು ಮೆಲುಕು ಹಾಕುತ್ತಲೇ ಸ್ವತಂತ್ರ ಭಾರತದ ರಾಜಕೀಯ ರಂಗದ ನೈತಿಕ ಅವಸಾನಕ್ಕೆ ಮೂಕಸಾಕ್ಷಿಯಾಗಿದ್ದಾರೆ.

ಈ ಎರಡೂ ಹಿರಿಯ ಜೀವಗಳಿಗೆ ನನ್ನ ಈ ಕೃತಿಯನ್ನು ಗೌರವಾದರಗಳೊಂದಿಗೆ ಅರ್ಪಿಸಿದ್ದೇನೆ.

ನನ್ನ 'ರಸೀದಿ ಟಿಕೀಟು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಮೇಲೆ ಅನೇಕ ಸಂಘ ಸಂಸ್ಥೆಗಳು ಹಾಗೂ ಆತ್ಮೀಯರು ನನ್ನನ್ನು ಸನ್ಮಾನಿಸಿದ್ದಾರೆ. ಅದರಲ್ಲೂ ಗದಗಿನ ತೋಂಟದಾರ್ಯ ಮಠದಲ್ಲಿ ನನ್ನನ್ನು ಸನ್ಮಾನಿಸಿದ್ದನ್ನು ನಾನೆಂದೂ ಮರೆಯಲಾರೆ. ಮಠದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ನಾನು ನನ್ನ ಅಂತರಾಳದ ಅನಿಸಿಕೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಭಿಕರೆದುರು ವ್ಯಕ್ತಪಡಿಸಿದ್ದೆ. ನನ್ನಂಥ ಅಡನಾಡಿಯ ಮಾತುಗಳನ್ನು ಚಿತ್ತವಿಟ್ಟು ಆಲಿಸಿದ ಡಾ. ಸಿದ್ದಲಿಂಗಸ್ವಾಮಿಜಿ ಅವರು ನನ್ನ ಒಲವು ನಿಲುವುಗಳನ್ನು ಮೆಚ್ಚಿಕೊಂಡರು. ಇದು ಮಠದ ಬಗೆಗಿನ ಹಾಗೂ ಸ್ವಾಮೀಜಿಯವರ ಬಗೆಗಿನ ನನ್ನ ಅಭಿಪ್ರಾಯಕ್ಕೆ ಪುಷ್ಟಿ ನೀಡಿತು. ನಾನು ಸ್ವಾಮೀಜಿ ಅವರಿಗೆ ಕೃತಜ್ಞನಾಗಿದ್ದೇನೆ.

ಹಾವೇರಿಯಲ್ಲಿ ಗೆಳೆಯರ ಬಳಗ, ವಾರಂಬಳ್ಳಿ ಪ್ರತಿಷ್ಠಾನ ಹಾಗೂ ಲೋಹಿಯಾ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಲೋಹಿಯಾ ಪ್ರಕಾಶನದ ಪುಸ್ತಕಗಳ ಲೋಕಾರ್ಪಣೆ ಹಾಗೂ ನನ್ನ ಅಭಿನಂದನಾ ಕಾರ್ಯಕ್ರಮ ನನ್ನ ಜೀವನದಲ್ಲೇ ಮರೆಯಲಾರದ ಇನ್ನೊಂದು ಘಟನೆಯಾಗಿತ್ತು. ನನ್ನ ಕುರಿತು ಹಾಗೂ ನನ್ನ ಕೃತಿಗಳ ಕುರಿತು ಮಾತಾಡಿದ ಆತ್ಮೀಯ ರಹಮತ್‌ ತರೀಕೆರೆ ಅವರು ನನ್ನನ್ನು ಹೊನ್ನಶೂಲಕ್ಕೇರಿಸಲು ತೀರ್ಮಾನಿಸಿದಂತಿತ್ತು. ಅವರ ಹೊಗಳಿಕೆಯ ಮಾತುಗಳನ್ನು ಕೇಳುತ್ತಾ ನನ್ನೊಂದಿಗೆ ನಾನು ಮುಖಾಮುಖಿಯಾದೆ. ಗೆಳೆಯ ಸತೀಶ್ ಕುಲಕರ್ಣಿ, "ಕೇಂದ್ರ ಸಾಹಿತ್ಯ ಅಕಾಡೆಮಿ ಸುರಕೋಡ ಅವರಿಗೆ ನೀಡಲಿರುವ ಪ್ರಶಸ್ತಿ ಹಣ ಇಪ್ಪತ್ತು ಸಾವಿರ ರೂಪಾಯಿ. ಆದರೆ ಅಣ್ಣ ಚೆನ್ನಬಸವಣ್ಣ ಇಂದು ಅವರಿಗೆ ಐವತ್ತು ಸಾವಿರ ರೂಪಾಯಿ ಗೌರವ ನಿಧಿ ನೀಡಿ ಅಭಿನಂದಿಸಲಿದ್ದಾರೆ” ಎಂದು ಮೈಕಿನಲ್ಲಿ ಘೋಷಿಸಿದಾಗ ನನ್ನ ಕಿವಿಗಳನ್ನು ನಾನೇ ನಂಬದಾದೆ. ಅತ್ತ ಸಭಿಕರೆಲ್ಲ ಈ ಬ್ಯಾಂಕ್ ಅಧಿಕಾರಿಯ ಹೃದಯಶ್ರೀಮಂತಿಕೆ ಕಂಡು ಬೆಕ್ಕಸಬೆರಗಾದರು.

ನಾನು ದೊಡ್ಡ ಲೇಖಕನೂ ಅಲ್ಲ, ವಿದ್ವಾಂಸನೂ ಅಲ್ಲ. ಆದಾಗ್ಯೂ ಸಮಾಜ ನನಗೆ ತೋರುತ್ತಿರುವ ಅಪಾರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ.

ಅಣ್ಣ ಚೆನ್ನಬಸವಣ್ಣ ಅವರ ಬಗ್ಗೆ ನಾನು ಒಂದು ಮಾತೂ ಆಡದಿದ್ದರೂ ಅವರು ನನ್ನ ಹೃದಯದ ಮಾತುಗಳನ್ನಾಲಿಸಿರುತ್ತಾರೆ. ನನ್ನ ಈ ಕೃತಿಯನ್ನು ಎಂದಿನಂತೆ ಪ್ರೀತಿಯಿಂದ ಪ್ರಕಟಿಸಲು ಮುಂದಾದ ಲೋಹಿಯಾ ಪ್ರಕಾಶನಕ್ಕೆ ಹಾಗೂ ಈ ಕೃತಿಯ ಅನುವಾದಕ್ಕೆ ಅನುಮತಿ ನೀಡಿದ ಡಾ. ನರೇಂದ್ರ ಪಾಠಕ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

149, ಮಡ್ಡಿಗಲ್ಲಿ
ಹಸನ್‌ ನಯೀಂ ಸುರಕೋಡ
ರಾಮದುರ್ಗ- 591123
ಜಿಲ್ಲೆ: ಬೆಳಗಾವಿ

 

MORE FEATURES

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...

ಓದು-ಬರಹ ನನಗೆಂದಿಗೂ ವ್ಯಸನವೇ: ಮೇಘನಾ ಕಾನೇಟ್ಕರ್ 

27-04-2024 ಬೆಂಗಳೂರು

‘ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿ...