ಹೊಸ ದೃಷ್ಟಿ, ಹೊಸ ಸೃಷ್ಟಿಯ ಹಾಯಿಕುಗಳು


'ಶಂಭುಲಿಂಗ ವಾಲ್ದೊಡ್ಡಿಯವರ ಹಾಯಿಕುಗಳು ವಿಶೇಷತೆಯಿಂದ ಕೂಡಿದ್ದು, ಪಾರಂಪರಿಕ ಛಂದದೊಂದಿಗೆ ಕನ್ನಡ ಛಂದ ಪ್ರಯೋಗ ಮತ್ತು ಅಂತ್ಯ ಪ್ರಾಸಕ್ಕೆ ಪ್ರಾಮುಖ್ಯತೆ ಗಮನಿಸುವಂತಹದ್ದು' ಎನ್ನುತ್ತಾರೆ ಹಿರಿಯ ಸಾಹಿತಿ ಡಾ. ಕೆ. ಬಿ. ಬ್ಯಾಳಿ. ಅವರು ಶಂಭುಲಿಂಗ ವಾಲ್ದೊಡ್ಡಿ ಅವರ ವೈಶಾಖದ ಹಾಯಿಕುಗಳು ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ 

ಶ್ರೀಯುತ ಶಂಭುಲಿಂಗ ವಾಲ್ದೊಡ್ಡಿಯವರು ಬಹುದೂರ ಬೀದರದವರು.ಇಂದು ದೂರ ಎನ್ನುವ ಪ್ರಶ್ನೆಯೇ ಇಲ್ಲ, ಏಕೆಂದರೆ ತಂತ್ರಜ್ಞಾನ ನಮ್ಮನ್ನು ದೂರಲ್ಲ ಎನ್ನುತ್ತದೆ. ವಾಲೊಡ್ಡಿಯವರು ಫೋನ್ ಕರೆ ಮಾಡಿ ನಾನು ಹಾಯಿಕು ಬರೆದಿರುವೆ, ಅವುಗಳ ವಿಶೇಷತೆ– ಹೇಳಿಕೊಳ್ಳುತ್ತಾ, ಡಾ. ಗವಿಸಿದ್ದತ ಪಾಟೀಲರು ತಮ್ಮ ಹೆಸರು ಹೇಳಿದ್ರು ನನ್ನ ಹಾಯಿಕು ಕೃತಿ- ಕಳಿಸುವೆ ಸಾರ್ ಎಂದರು. ಕಳಿಸಿ ಎಂದೆ, ಕಳಿಸಿದ್ರು, ನೋಡಿದೆ. 'ಹೊಸ ದಿಗಂತದ ಹಾಯಿಕುಗಳು' ಅವರಷ್ಟೇ ಅಚ್ಚುಕಟ್ಟಾದ ಮಾಟದಿಂದ ಮುದ್ರಿತ ಕೃತಿ. ಹೊಸತನ, ಹೊಸ ಪಯೋಗದಿಂದ ಕೂಡಿದ್ದು, ಕನ್ನಡ ಛಂದಗಳನ್ನು ಅಳವಡಿಸಿದ, ಅಂತ್ಯ ಪ್ರಾಸದ, ಚಿತ್ರ ಸಹಿತ ಹಾಯಿಕುಗಳ ಈ ಹೊಸ ಸೃಷ್ಟಿ ವಾಲೊಡ್ಡಿಯವರ ಹೊಸ ದೃಷ್ಟಿಯ ಸಾಹಸ ನನಗೆ ಕಂಡಿತು.

ತ್ರಿಪದಿ ಹಾಯಿಕುವಿನಲ್ಲಿ ಸಹ ಹೊಸ ದೃಷ್ಟಿ ಇದ್ದರೆ, ಹೊಸ ಸೃಷ್ಟಿ ಸಾಧ್ಯ. ಜಪಾನಿ ಪಾರಂಪರದಿಂದ ಹೊಸ ಹಾದಿಯತ್ತ ತಿರುಗಿದ್ದು ನೋಡುತ್ತೇವೆ. ಕನ್ನಡದಲ್ಲೂ ಪಾರಂಪರಿಕ ತ್ರಿಪದಿ(ಜಾನಪದ - ಮೂಲ), ಶರಣರ, ಸರ್ವಜ್ಞನ ತ್ರಿಪದಿಗಳಲ್ಲಿ ಬದಲಾವಣೆ ಕಾಣುತ್ತೇವೆ. ಅಕ್ಕನ ಯೋಗಾಂಗ ತ್ರಿವಿಧಿ, ತ್ರಿಪದಿ, ಸರ್ವಜ್ಞನ ತ್ರಿಪದಿಗಳಲ್ಲಿ ಬದಲಾವಣೆ ಬಂದಿದೆ. ಹಾಗೆಯೇ ವಾಲೊಡ್ಡಿಯವರ ಈ ಮಾತ್ರಾಗಣಗಳ ಕನ್ನಡಿಕರಣ ಪ್ರಯೋಗ ಎನ್ನಬಹುದು. ವಾಲೊಡ್ಡಿಯವರಿಂದ ಮತ್ತೊಂದು ಫೋನ್ ಕರೆ, ಸಾರ್ ನನ್ನ ಮೂರನೇಯ ವೈಶಾಖದ ಹಾಯಿಕುಗಳು' ಎಂಬ ಕೃತಿಗೆ ಮುನ್ನುಡಿ ಬರೆಯಬೇಕೆಂದು ಕೃತಿಯ ಹಸ್ತಪ್ರತಿ ಕಳಿಸಿದರು, ಈ ಬೆಸುಗೆಗೆ ನನ್ನೀ ಮುನ್ನುಡಿ ಪೀಠಿಕೆ ಎನ್ನಬಹುದು. ಶಂಭುಲಿಂಗ ಅವರು, ಉತ್ತಮ ಶಿಕ್ಷಕರು, ಪ್ರಸಿದ್ದ ಜಾನಪದ ಹಾಡುಗಾರರು, ದೇಶ, ವಿದೇಶ ಸುತ್ತಿ ತಮ್ಮ ಸಂಗೀತ ಸವಿ ಉಣಿಸಿದ್ದಾರೆ, ತಣಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಹೊಸ ಛಾಪು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಕಲ್ಯಾಣ(ಹೈದ್ರಾಬಾದ) ಕರ್ನಾಟಕ ಭಾಗದಲ್ಲಿ ನನ್ನ, ನಂತರ ಅನೇಕರು ಹಾಯಿಕು ಕೃತಿ ಹೊರತಂದಿದ್ದಾರೆ. ಕರ್ನಾಟಕದಲ್ಲೇ ಎಂದರೆ ತಪ್ಪಾಗಲಿಕ್ಕಿಲ್ಲ ನನ್ನ ಗುರುಗಳಾದ ಹಿಂದಿ, ಕನ್ನಡ ನವ್ಯಕವಿ ಚಂದ್ರಕಾಂತ ಕುಸನೂರ ಅವರು ಹಿಂದಿಯಿಂದ ಹಾಯಿಕುಗಳು ಕನ್ನಡಕ್ಕೆ ತಂದರು. ಬೆಂಗಳೂರಿನ ಡಾ. ಫಕೃದ್ದಿನ ಅವರು ಪ್ರತಿ ವರ್ಷ ಸಂಘಟಿಸುತ್ತಿದ್ದ ಒಂದು ದಿನದ ಹಾಯಿಕು ಕಾರ್ಯಾಗಾರಕ್ಕೆ ನಾನು 2-3 ಬಾರಿ ಹಾಜರಾದೆ. ಆ ಕಾರ್ಯಾಗಾರದಲ್ಲಿ, ಅಮೇರಿಕ, ಥಾಯಿಲೆಂಡ್, ಜಪಾನ್, ಚೀನಗಳಿಂದ ಹಾಯಿಕು ಕವಿಗಳು ಭಾಗವಹಿಸುತ್ತಿದ್ದರು. 2004ರಲ್ಲಿ ನನ್ನ ಮೊದಲ ಹಾಯಿಕು ಸಂಕಲನ ಹೊರಬಂದಿತು. ಇದರಲ್ಲಿ ನಾಲ್ಕು ಭಾಷೆಗಳ ಹಾಯಿಕುಗಳ ಅನುವಾದ ನೋಡಬಹುದು. ಇದಕ್ಕೆ ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪುರಸ್ಕಾರ ಸಹ ಬಂದಿತು. ಈಗ ಅನೇಕರು ಹಾಯಿಕು ಕೃತಿ ಹೊರ ತರುತ್ತಿದ್ದಾರೆ. ಇದು ಸಂತೋಷದ ವಿಷಯ. ಇವರಲ್ಲಿ ವಾಲೊಡ್ಡಿಯವರೂ ಒಬ್ಬರಾಗಿದ್ದಾರೆ. ಆದರೆ ಇವರ ಹಾಯಿಕುಗಳು ವಿಶೇಷತೆಯಿಂದ ಕೂಡಿದ್ದು, ಪಾರಂಪರಿಕ ಛಂದದೊಂದಿಗೆ ಕನ್ನಡ ಛಂದ ಪ್ರಯೋಗ ಮತ್ತು ಅಂತ್ಯ ಪ್ರಾಸಕ್ಕೆ ಪ್ರಾಮುಖ್ಯತೆ ಗಮನಿಸುವಂತಹದ್ದು. ಈ ಕೃತಿಯಲ್ಲಿಯ ಎಲ್ಲ ಹಾಯಿಕುಗಳು ಜಾಪಾನಿ ಛಂದಸ್ಸು 5-7-5ರ ಬಂಧವನ್ನು ಮುರಿದಿಲ್ಲ, ಅನೇಕರು ಇದು ಸಾಧಿಸಿಲ್ಲ.

'ಹಾಯಿಕು' ಇದು ಜಾಪಾನಿನ ಅತ್ಯಂತ ಜನಪ್ರಿಯ ಪ್ರಸಿದ್ದ ಪ್ರಕಾರ, ಜಗತ್ತಿನಾದ್ಯಂತ ಅನೇಕ ಸಾಹಿತ್ಯ ಕ್ಷೇತ್ರಗಳಲ್ಲಿ ಕಾಲುಚಾಚಿದೆ. ಇದು ಸಣ್ಣ ದೇಶದ ಸಣ್ಣ ಕಾವ್ಯ, ಜಪಾನದಲ್ಲಿ ನಮ್ಮಲ್ಲಿಯಂತೆ ಮಹಾಕಾವ್ಯಳಿಲ್ಲ, ಗಹನ ವಿಚಾರಗಳು (Miny, Tiny, Little) ಚಿಕ್ಕ, ಚೊಕ್ಕ ಸಾಗರವನ್ನೊಳಗೊಂಡ ಬಿಂದಿಗೆ, ಸಾಗರ ಸೃಷ್ಟಿ, ಒಳದೃಷಿ, ಹೀಗೆ ಇದು ದೃಷ್ಟಿ ಸೃಷ್ಟಿಯ ಸಂವಾದ. ನಿಸರ್ಗ ಮತ್ತು ಪ್ರಕೃತಿ ಇದರ ಮೂಲ ಧಾತು, ಪಾರಂಪರಿಕ ಹಾಯಿಕುಗಳು ವರ್ಷಕ್ಕೆ ಮತ್ತು ಋತುಗಳಿಗೆ ಹೊಂದಿರುತ್ತವೆ. ಒಂದು ಕಾಲಕ್ಕೆ ಭಾಷೆ ಸಾಹಿತ್ಯಕ್ಕೆ ಚೀನವನ್ನು ಅವಲಿಂಬಿಸಿದರೂ, ತನ್ನತನ ಉಳಿಸಿಕೊಂಡು ಬೆಳೆಯಹತ್ತಿದೆ. 16ನೇ ಶತಮಾನದಲ್ಲಿ ಚೀನಿ ಸೆರೆಯಿಂದ ಬಿಡುಗಡೆ ಹೊಂದಿ ಹೊಸ ಭಾಷೆ ವಿಚಾರ, ಸಾಹಿತ್ಯವನ್ನು ಜಪಾನಿಯರಿಗೆ ಕೊಟ್ಟದ್ದು ಈ ಕಾವ್ಯ. ಇದು ರೆಂಗಿ(31 ವರ್ಣಗಳ ಪದ್ದಯ-ತಾಂಕಾ)ದಿಂದ ಬಿಡುಗಡೆಯಾದ ಹೊಸ ರೂಪವೇ ಹಾಯಿಕು, ಬಾಶೋ ಹಾಯಿಕುವಿನ ಮೂಲ ಕವಿ, ಹಾಯಿಕುವಿಗೆ ಹೊಸ ರೂಪ ಕೊಟ್ಟ ಮೊದಲಿಗ. ಇವನ ಪ್ರಕಾರ ಹಾಯಿಕು ದೈನಂದಿನ ಜೀವನದ ಅನುಭೂತಿಯಾಗಿದೆ. ಶಬ್ದ ಸಂಯಮ ಮತ್ತು ಭಾವ ಸಂಯಮ ಇವೆರಡು ಹಾಯಿಕುವಿನ ಅನಿವಾರ್ಯತೆಗಳು, ಹಾಯಿಕು ಕವಿ ನಿಷ್ಕರ್ಷೆ' ಕೊಡುವುದಿಲ್ಲ, ಅವನು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಹೇಳದೆ ಬಿಡುತ್ತಾನೆ. ಹೇಳಲಾರದ ಬಗ್ಗೆ ಓದುಗ ಚಿಂತನೆ ಮಾಡಬೇಕಾಗುತ್ತದೆ. ಇವನು ನಿರ್ಣಾಯಕನಲ್ಲ, ಹಾಯಿಕುಗಳಲ್ಲಿ ಮೇಲ್ಭಾಗಕ್ಕಿಂತ, ಕೆಳಗೇನಿದೆ ಎನ್ನವದು ಮುಖ್ಯ. ಮೇಲೆ ತೇಲುವ ಶಬ್ದಗಳಿಗಿಂತ ಅದರ ಕೆಳಗಿರುವ ಭಾವ ಬಹುಮುಖ್ಯ ಎಂದು ಬಾಶೋ ಹೇಳುತ್ತಾನೆ. ಯಾರು ಜೀವನದಲ್ಲಿ ಮೂರರಿಂದ ಐದು ಹಾಯಿಕು ಬರೆಯುತ್ತಾರೋ ಅವರು ಹಾಯಿಕು ಕವಿಯಾಗುತ್ತಾರೆ, ಯಾರು ಹತ್ತು ಹಾಯಿಕು ಬರೆಯುತ್ತಾರೋ ಅವರು ಮಹಾಕವಿ, ಅಂದರೆ ಹಾಯಿಕುಗಳನ್ನು ನಿಯಮಬದ್ದವಾಗಿ ಬರೆಯುವುದು ಅಷ್ಟು ಸುಲಭದ ಮಾತಲ್ಲ.

ಇತ್ತೀಚಿಗೆ ಸಾಂಪ್ರದಾಯಿಕ ಪದ್ಧತಿ ಮುರಿದು ಹಾಯಿಕು ಬರೆಯುವುದು ಕಂಡುಬರುತ್ತದೆ. ಹೊಸ ವಿಚಾರ, ಸಾಂದರ್ಭಿಕ ವಿಚಾಗಳ ಹಾಯಿಕುಗಳು ಇಂದಿನ ದಿನಮಾನಗಳಲ್ಲಿ ಬರಹತ್ತಿವೆ. 17 ಸಿಲೆಬಲ್‌ಗಳಿಗಿಂತ ಹೆಚ್ಚು ಕಡಿಮೆ ಸ್ವರಾಕ್ಷರಗಳಲ್ಲಿ ಹಾಯಿಕು ಬರೆಯಲಾಗುತ್ತದೆ, ಇಂಗ್ಲೀಷ, ಜಪಾನಿ ಭಾಷೆಗಳಲ್ಲೂ ಪರಂಪರೆ ಮುರಿದು ಮುಕ್ತ ಛಂದದಂತೆ ಬರೆಯುವದನ್ನು ಕಾಣುತ್ತೇವೆ. ಹೀಗೆ ಹಾಯಿಕು ಹೊಸ ಸಹಸ್ರಮಾನದ ಕಾವ್ಯ ಹೊರ ಹೊಮ್ಮುತ್ತಿರುವದು ಹೊಸತಿಗೆ ಮಾರ್ಗ ಎನ್ನಬಹುದು. ಈ ಹೊಸ ವಿಚಾರಗಳ ಸೃಷ್ಟಿಯಲ್ಲಿ ವಾಲೊಡ್ಡಿಯವರ ಹಾಯಿಕುಗಳನ್ನು ನಾವು ಗಣಿಸಬಹುದು. ಕೆಲವೊಂದು ಉದಾಹರಣೆ ನೋಡೋಣ -

ಹಂಚಿತಿನ್ನುವ 
ಕಾಗೆಯ ಶುದ್ದಭಾವ
ಎಷ್ಟು ವೈಭವ 

ಈ ಹಾಯಿಕು ಥಟ್ಟನೆ ನೆನಪಿಸುವದು ಬಸವಣ್ಣನವರ ವಚನ, “ಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವ” ಈ ಭಾವ ಮನಸ್ಸು ಮಾನವನಿಗೆ ಬರುವದೆಂದು; ಒಳಾರ್ಥ ಆನಂದ ಹಂಚಿಕೊಳ್ಳಲಾಗಿದೆ. ಈ ಭಾವ ಬೆಳಸಿಕೊಳ್ಳದಿದ್ದರೆ, ಕಾಗೆಗಳಿಗಿಂತ ಕರಕಷ್ಟ ನರನ ಬಾಳುವೆ.

ಪ್ರಾಣಿ-ಪಕ್ಷಿಗಳ, ಗಿಡ-ಮರ, ಬಳ್ಳಿಗಳ ಒಳ್ಳೊಳ್ಳೆ ಪ್ರತಿಮೆ ಪ್ರತೀಕಗಳ ಬಳಕೆ ಆಕರ್ಷಕ ಸಾಹಿತ್ಯದಲ್ಲಿ ವಿಶೇಷವಾಗಿ ಕಾವ್ಯದಲ್ಲಿ ಪ್ರಾಣಿ, ಪಕ್ಷಿಗಳ ಉದಾಹರಣೆ ನೋಡುತ್ತೇವೆ. ಹಾಯಿಕು ಕಾವ್ಯ ಪ್ರಕೃತಿಕಾವ್ಯ, ಅನೇಕ ವಿಚಾರಗಳನ್ನೊಳಗೊಂಡದ್ದು (ಬೌದ್ದ, ಝೆನ್) ಚೀನಿ, ಶಿಂಕೊ) ವಾಲೊಡ್ಡಿಯವರ ಧರ್ಮದ ಹಾಯಿಕು ನೋಡಿ:

ಅಧರ್ಮವೆಂಬ 
ಹಾಳು ಜಾತ್ರೆಯ ತುಂಬ
ಮೂರ್ಖರ ಜಂಬ 

ಅಧರ್ಮ, ಹಾಳು ಜಾತ್ರೆ, ಅಲ್ಲಿ ಮೂರ್ಖರ ಧರ್ಬಾರು. ಈಗಿನ ಸ್ಥಿತಿಗತಿ-ಚಿತ್ರಿಸುವ ಹಾಯಿಕು. ಧರ್ಮ, ನ್ಯಾಯ, ನೀತಿಗಳಿಲ್ಲದ ಸಮಾಜ, ಮೂರ್ಖರ ರಾಜ್ಯ.
ಯಾರೋ ಮಾಡಿದ

ಕಲ್ಲು ಬಂಡೆಯ ಮುಂದೆ
ಬೇಡಲು ನಿಂದೆ 

ಮತ್ತೆ ಬಸವೇಶ್ವರನ ನೆನಪು, 'ಕಲ್ಲು ನಾಗರ ಕಂಡರೆ' ಎನ್ನುವ ವಚನ, ಎದುರಿಗೆ ಬಂದ ತನ್ನ ಗುರುವಿಗೆ ಕೈಮುಗಿದು ನಮ್ರತೆ ತೋರದ ಶಿಷ್ಯ ಕಲ್ಲುದೇವರ ಕಂಡರೆ ಕೈಮುಗಿದು ಅಡ್ಡ ಉದ್ದ ಬಿದ್ದು ಭಕ್ತನಾಗುವ ಮೌಲ್ಯಗಳು ಮಾಯವಾಗುತ್ತಿರುವಾಗ, ಪ್ರಜಾತಂತ್ರ ಅತಂತ್ರವಾಗುವಾಗ, ಆವಾಂತರದ ಅವತಾರ, ರಾಕ್ಷಸವತಾರ.

ತತ್ವಗಳೆಲ್ಲ 
ಬೀದಿ ಬೀದಗೆ ಚೆಲ್ಲಿ
ನಿಂತಿಹರೆಲ್ಲ 

ಆಯ್ದುಕೊಳ್ಳುವವರಿಲ್ಲ, ಆಯ್ದುಕೊಂಡರೆ, ತತ್ವಾಧಾರಿತವಾಗಬೇಕು. ತತ್ವವಿಲ್ಲದ ನಿಸ್ಸತ್ವರಾಗುತ್ತಿದ್ದೇವೆ. ಕಾವ್ಯದಿಂದ, ಕವಿಯಿಂದ ಸಮಾಜಕ್ಕೆ ವ್ಯಕ್ತಿಗೆ ಶಕ್ತಿ ತುಂಬಲು, ಬದಲಿಸಲು ಸಾಧ್ಯವಿದೆ. ಈ ಹೊಸ ಕಾಲಮಾನಕ್ಕೆ ಹೊಸ ವಿಚಾರಗಳ ಹೊಸ ಕಾವ್ಯ ಬೇಕು, ಅಂಥ ಹೊಸತನ್ನು ಕೊಡ ಹೊರಟಿರುವ ವಾಲ್ದೊಡ್ಡಿಯವರು ಅಭಿನಂದನಾರ್ಹರು. ಜಪಾನಿ ಛಂದದೊಂದಿಗೆ ಅಂತ್ಯಪ್ರಾಸ, ಕನ್ನಡ ಛಂದ. ಗಣ, ಮಾತ್ರೆಗಳು, ಪ್ರಯೋಗ ಮಾಡುವತ್ತ ವಾಲಿರುವದು ಹೊಸ ಪ್ರಯತ್ನ. ಇದು ಕಷ್ಟದ ಕೆಲಸವಾದರೂ ಆ ದಿಶೆಯಲ್ಲಿ ದೊಡ್ಡ ಸಾಧನೆ ಎನ್ನಬಹುದು.

ಎಷ್ಟೋ ಮಿತ್ರರ  ಹಾಯಿಕು ನಾನು ನೋಡಿರುವೆ ಹೆಸರು 'ಹಾಯಿಕು' ಒಳಗೆ ನೋಡಿದರೆ 5-7-5 ಇಲ್ಲ, 3 ಸಾಲು ಇಲ್ಲ, ನಾಲ್ಕೈದು ನೂರರಲ್ಲಿ ನಾಲ್ಕೈದು ಈ ನಿಯಮಕ್ಕೆ ಒಳಪಡುವ ಹಾಯಿಕುಗಳು.

ವಾಲ್ದೊಡ್ಡಿಯವರ ಹಾಯಿಕುಗಳು ತೃಪ್ತಿಕೊಡುವಂಥವು, ಮೌಲ್ಯ, ಧರ್ಮ, ಹುಟ್ಟು, ಸಾವು, ಜಾತಿ-ಮುಂತಾದ ಅನೇಕ ವಿಷಯಗಳನ್ನೊಳಗೊಂಡ ವೈಶಾಖದ ಈ ಹಾಯಿಕುಗಳು ಜೀವನವನ್ನು ಬೆಳಕಿನತ್ತ ಒಯ್ಯಲು ಪ್ರಯತ್ನಿಸುತ್ತವೆ. ಇಂಥ ಹೊಸ ಹೊಸ ವಿಚಾರ, ಪ್ರಯೋಗಗಳ ಹಾಯಿಕುಗಳು ನಿಮ್ಮಿಂದ ಹೊರ ಬಂದು, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಂತಾಗಲಿ, ಎಂದು ಆಶಿಸುವೆ. ಬರುವಾಗ ಇನ್ನಷ್ಟು ಬಂಧುರವಾಗಿ, ಗಟ್ಟಿಕಾಳುಗಳಿಂದ ಚಿಂತನೆಗೆ ಒಳಪಡಿಸುವಂಥ ಶಕ್ತಿ ಇರಲಿ. ನಾವೇ ಅರ್ಥ ಹೇಳಿದರೆ ಹೇಗೆ ಓದುಗರನ್ನು ಚಿಂತನೆಗೆ ಒಳಪಡಿಸೋಣ.

ಶುಭಂ ಭುಯಾತ್

-ಡಾ. ಕೆ. ಬಿ. ಬ್ಯಾಳಿ
ಹಿರಿಯ ಸಾಹಿತಿ ಕುಕನೂರ, ಕೊಪ್ಪಳ ಜಿಲ್ಲೆ

 

MORE FEATURES

ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’

27-04-2024 ಬೆಂಗಳೂರು

'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ...

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...