ಜೀವನದಲ್ಲಿ ಒಮ್ಮೆಯಾದರೂ ಈ ನಂಬರ್‍ಗೆ ಕರೆ ಮಾಡಿ

Date: 16-05-2022

Location: ಬೆಂಗಳೂರು


'ಚೈಲ್ಡ್ ಲೈನ್-1098 ಭಾರತ ದೇಶದ 41% ಇರುವ ಕೋಟ್ಯಾಂತರ ಮಕ್ಕಳಿಗೆ ಭರವಸೆಯನ್ನು ನೀಡುವ ಒಂದು ದೂರವಾಣಿ ಸಂಖ್ಯೆಯಾಗಿದೆ' ಎನ್ನುತ್ತಾರೆ ಮಕ್ಕಳ ಹಕ್ಕು ಮತ್ತು ಮಕ್ಕಳ ಸಂರಕ್ಷಣೆಯ ತಜ್ಞರಾದ ಕೆ. ರಾಘವೇಂದ್ರ ಭಟ್. ಅವರು ತಮ್ಮ ಮಕ್ಕಳ ಹಕ್ಕುಗಳು ಮತ್ತು ನಾವು ಅಂಕಣದಲ್ಲಿ ಚೈಲ್ಡ್ ಲೈನ್ ಕುರಿತು ವಿಶ್ಲೇಷಿಸಿದ್ದಾರೆ.

ಜಿಲ್ಲೆಯೊಂದರ ಕಾರ್ಯಕ್ರಮ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ಸಂರಕ್ಷಣೆಯ ವಿವಿಧ ಹಂತದ ವ್ಯವಸ್ಥೆಯ ಬಗ್ಗೆ ಸಂವಾದ ಕಾರ್ಯಕ್ರಮ ಇತ್ತು. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ವಿವಿಧ ಹಂತದಲ್ಲಿ, ಇಲಾಖೆಗಳಲ್ಲಿ, ವ್ಯವಸ್ಥೆಗಳಲ್ಲಿ ಮತ್ತು ಸಮಾಜದಲ್ಲಿ ಮಕ್ಕಳಿಗಾಗಿ ಇರುವ ವ್ಯವಸ್ಥೆಗಳ ಪರಿಚಯ ನೀಡಿದೆ. ಮಕ್ಕಳ ಸಂರಕ್ಷಣೆಯಲ್ಲಿ ಮುಖ್ಯ ಪಾಲುದಾರರೂ, ಕೊಡುಗೆದಾರರೂ ಆದ ಮಕ್ಕಳ ಸಹಾಯವಾಣಿ “ಚೈಲ್ಡ್ ಲೈನ್” ಬಗ್ಗೆ ಕೇಳಬೇಕು ಅನ್ನಿಸಿತು. ಮಕ್ಕಳು ಸಂಕಷ್ಟಕ್ಕೆ ಒಳಗಾದ ಸಾರ್ವಜನಿಕರಿಗೆ, ಮಕ್ಕಳಿಗೆ ಕರೆ ಮಾಡಲು ಒಂದು ಸಂಖ್ಯೆ ಇದೆ, ಆ ಸಂಖ್ಯೆ ಯಾವುದು ಎಂದು ಕೇಳಿದೆ. ಕೆಲವೇ ಕೈಗಳು ಮಾತ್ರ ಮೇಲೆ ಬಂದವು, ಅವರು “ಚೈಲ್ಡ್ ಲೈನ್” ಮತ್ತು ಆ ಇಲಾಖೆಗಳಿಗೆ ಸಂಬಂಧಿಸಿದ ಸಿಬ್ಬಂದಿಗಳು ಆಗಿದ್ದರು. ಉಳಿದಂತೆ ಎಲ್ಲಾ ಅಧಿಕಾರಿಗಳು ಯಾವುದೋ ದೊಡ್ಡ ಸಾಧನೆ ಮಾಡಿದವರಂತೆ ಮೌನದಿಂದ ಗಂಭೀರವಾಗಿಯೇ ಈ ಪ್ರಶ್ನೆ ತಮಗೆ ಸಂಬಂಧವಿಲ್ಲವೇನೂ ಎಂಬಂತೆ ಸುಮ್ಮನೆ ಕುಳಿತ್ತಿದ್ದರು.

ನಂತರ “ಚೈಲ್ಡ್ ಲೈನ್” ಕುರಿತು ಒಂದಷ್ಟು ಹೇಳಿ ಮಾತು ಮುಗಿಸಿದೆ. ಅಲ್ಲಿಯೇ ಕುಳಿತಿದ್ದ “ಚೈಲ್ಡ್ ಲೈನ್”ನ ಒಬ್ಬರು ಸಿಬ್ಬಂದಿಗೆ ಮಾತನಾಡಲು ಕೋರಿದೆ. ಅವರು ಎದ್ದು ನಿಂತು ಮಾತು ಆರಂಭಿಸಿ “ಚೈಲ್ಡ್ ಲೈನ್”ನ ಬಗ್ಗೆ ವಿವರಿಸುತ್ತಾ, 18 ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ರೀತಿಯ ಸಂಕಷ್ಟಕ್ಕೆ, ತೊಂದರೆಗೆ, ದೌರ್ಜನ್ಯಕ್ಕೆ, ಹಿಂಸೆಗೆ ಮತ್ತು ಶೋಷಣೆಗೆ ಒಳಗಾದಾಗ ನೀವೆಲ್ಲ “ಚೈಲ್ಡ್ ಲೈನ್” ಗೆ ಕರೆ ಮಾಡಬಹುದು ಎಂದರು, ಮುಂದುವರಿಸುತ್ತಾ ನೀವು ಜೀವನದಲ್ಲಿ ಒಮ್ಮೆಯಾದರೂ ಈ ನಂಬರ್‍ಗೆ ಕರೆ ಮಾಡಿ ನೋಡಿ, ಈಗ ಹೊರಗೆ ಹೋಗಿ ಮಾಡಿ, ಅದರ ವೇಗ, ಸಾಮರ್ಥ್ಯ ಮತ್ತು ಶಕ್ತಿ ಏನು ಎಂದು ನೋಡಿ ಅಂತ ಅಂದರು. ಮಕ್ಕಳಿಗೆ ಹಾಗೂ ಒಲಂಪಿಕ್ಸ್ನಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರೆಡೀ 1. 2. 3 ಅನ್ನುವ ಅಷ್ಟರಲ್ಲಿ ಮಕ್ಕಳು/ಆಟಗಾರರು ಹೇಗೆ ಓಡುತ್ತಾರೆಯೇ ಹಾಗೆ ಅಷ್ಟೇ ವೇಗದಲ್ಲಿ ಆ ಕರೆ ನಮ್ಮನ್ನು ತಲುಪುತ್ತದೆ. ನಾವು ಆ ಸಂಕಷ್ಟದಲ್ಲಿರುವ “ಮಗು” ವನ್ನು ತಲುಪುತ್ತೇವೆ. ಎಷ್ಟು ವೇಗ ಅಂದರೆ “ಕಣ್ಣು ರೆಪ್ಪೆ” ಮುಚ್ಚಿ ತೆರೆಯಲಿಕ್ಕೆ ಏಷ್ಟು ಸಮಯ ಬೇಕೋ ಅಷ್ಟೇ ವೇಗದಲ್ಲಿ ಆ ಕರೆ ನಮ್ಮನ್ನು ತಲುಪುತ್ತೆ ಎಂದು ತಿಳಿಸಿದರು. ನಾವು ನಿಮ್ಮ ಯಾವುದೇ ಗುರುತು ಬಹಿರಂಗಪಡಿಸದೇ, ಕರೆ ಮಾಡಿದವರ ಹೆಸರು, ಸಂಖ್ಯೆ ಎಲ್ಲಾ ವಿವರಗಳ ಗೌಪ್ಯತೆಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ಹೇಳುತ್ತಾ ಅವರಲ್ಲಿ ಧೈರ್ಯ ತುಂಬಿದರು. ಒಮ್ಮೆ ಕರೆ ಮಾಡಿ ನೋಡಿ. ನಾವು ಹೇಗೆ ಕೆಲಸ ಮಾಡುತ್ತೇವೆ ಎಂದು ಗಟ್ಟಿಯಾಗಿ ಹೆಮ್ಮೆಯಿಂದ ಹೇಳಿದರು.

ಇದನ್ನು ಕೇಳುತ್ತಾ ಇದ್ದ ನನಗೆ ಒಮ್ಮೆ ಮೈ ಝುಂ! ಎಂದಿತು. ಅವರಿಗೆ, ಅವರು ಮಾಡುವ ಕೆಲಸ, ವಿಷಯ ಮತ್ತು ಸಂಸ್ಥೆಯ ಬಗ್ಗೆ ಇರುವ ಪ್ರೀತಿ, ಗೌರವ, ಹೆಮ್ಮೆ ನೋಡಿ ಬಹಳ ಸಂತೋಷವಾಯಿತು. ಇದು ಇಂದು ಎಲ್ಲರಿಗೂ ಬೇಕಾಗುತ್ತದೆ. ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಾವು ಹೆಮ್ಮೆ ಪಡುವುದು, ಹೇಳಿಕೊಳ್ಳುವುದು, ಪ್ರೀತಿಸುವುದು ಬಹಳ ಮುಖ್ಯ. ಅದು ನಮ್ಮಲ್ಲಿ ಆತ್ಮ ಸಾಕ್ಷಿ, ಆತ್ಮ ಸ್ಥೆರ್ಯ, ವೃತ್ತಿ ತೃಪ್ತಿಯನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ.

ನಾವು ಇಷ್ಟು ಹೊತ್ತು ಹೇಳಿದ ಆ ಸಂಸ್ಥೆ ಅಥವಾ ನಂಬರ್ ಯಾವುದು ಎಂದು ನಿಮಗೆ ಈಗ ಗೊತ್ತಾಗಿರಬಹುದು. ಅದು ಬೇರೆ ಯಾವುದೂ ಅಲ್ಲ ‘ಹತ್ತು, ಒಂಬತ್ತು ಎಂಟು’ 1098. ಇದನ್ನು ಕನ್ನಡದಲ್ಲಿ ನಮಗೆ ಅರ್ಥ ಅಗಲು ಮಕ್ಕಳ ಸಹಾಯವಾಣಿ ಎಂದು ಬಳಸುತ್ತೇವೆ. ಆದರೆ ಅದರ ಚಂದ “ಚೈಲ್ಡ್ ಲೈನ್-1098” ಅಂದರೇನೆ. “ಒನ್ ಜೀರೊ ನೈನ್ ಎಯಿಟ್” ಅಂತಲೂ ಕರೆಯುತ್ತಾರೆ. ಆದರೆ ಹಾಗೆ ಕರೆದರೆ ಅದಕ್ಕೆ ಖುಷಿ ಆಗಲ್ಲ. ಅದರ ಮರ್ಯಾದೆ, ಗತ್ತು ಮತ್ತು ಕ್ರಮ ಇರುವುದು ಹತ್ತು, ಒಂಬತ್ತು. ಎಂಟು ಅಂದರೇನೆ. ಅದಕ್ಕೆ ಒಂದು ಮನೋ ಸಾಮಾಜಿಕ ರೀತಿಯ ನೆನಪಿನ ಶಕ್ತಿಯ ಕ್ರಮ ಇದೆ. ಹಾಗಾಗಿ ಸಂಖ್ಯೆಗಳನ್ನು ಹಿಮ್ಮುಖವಾಗಿ ಹೇಳುವುದರ ಮುಖಾಂತರ ನೆನಪು ಉಳಿಯತ್ತದೆ ಎಂಬ ಕಾರಣಕ್ಕೆ ಅಂಕಿಗಳ ಹಿಮ್ಮುಖ ಹೇಳುವ ಕ್ರಮ ಇದರಲ್ಲಿ ಇದೆ. ಅದಕ್ಕಾಗಿ ಅದನ್ನು “ಚೈಲ್ಡ್ ಲೈನ್- ಹತ್ತು, ಒಂಬತ್ತು ಎಂಟು” ಎಂದು ಕರೆಯುತ್ತಾರೆ.

ನಿಮಗೆಲ್ಲರಿಗೂ ಈ ನಂಬರ್‍ಗೆ ಕರೆ ಮಾಡುವ ಅವಕಾಶ ಖಂಡಿತಾ ಸಿಕ್ಕಿತ್ತು, ಸಿಕ್ಕಿದೆ, ಸಿಕ್ಕಿರುತ್ತದೆ, ಮುಂದೆಯೂ ಸಿಗುತ್ತದೆ. ಆದರೆ ನೀವು ಆ ಅವಕಾಶ ಕಳೆದುಕೊಂಡಿದ್ದೀರಿ. ಛೇ! ಆ ಅವಕಾಶ ಕಳೆದುಕೊಳ್ಳಬಾರದಿತ್ತು ನೀವು? ಮನೆಯಲ್ಲಿ ನಡೆಯುವ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಭಾಗವಹಿಸುವ ಅವಕಾಶ ತಪ್ಪಿಸಿಕೊಂಡರೂ ಪರವಾಗಿಲ್ಲ ಏನೂ ನಷ್ಟವಿಲ್ಲ. ಮುಂದಿನ ಹಬ್ಬ, ಜಾತ್ರೆ, ಹರಿದಿನಗಳಲ್ಲಿ ಭಾಗವಹಿಸಬಹುದು. ಆದರೆ 1098ಕ್ಕೆ ಕರೆ ಮಾಡುವ ಅವಕಾಶ ನಿಮಗೆ ನಮಗೆ ಸಿಕ್ಕಿದಾಗ ತಪ್ಪಿದರೆ, ಕಳೆದುಕೊಂಡರೆ, ಕರೆ ಮಾಡದಿದ್ದರೆ ಮತ್ತು ನಿರ್ಲಕ್ಷ್ಯ ಮಾಡಿದರೆ ಅತ್ಯಂತ ದೊಡ್ಡ ನಷ್ಟ, ಅವಘಡ, ಅಪಘಾತಗಳ ಸಂಭಾವ್ಯತೆಯೇ ಹೆಚ್ಚು. ಸುಮ್ಮನಿರುವುದು ನಮ್ಮ ಸ್ವಾಭಾವಿಕ ನಾಗರಿಕತೆಯ ಲಕ್ಷಣಕ್ಕೆ ವಿರುದ್ಧವಾದದ್ದು. ಕರೆ ಮಾಡದಿದ್ದಲ್ಲಿ ಈ ರಾಷ್ಟ್ರ ನಿಮಗೆ ನೀಡಿದ ನಾಗರಿಕರ ಕರ್ತವ್ಯಕ್ಕೆ ಚ್ಯುತಿ ತಂದಂತೆ. ಅಲ್ಲದೇ ಕಾನೂನು ಮತ್ತು ಸಂವಿಧಾನ ವಿರೋಧಿ ನಡವಳಿಕೆಗೆ ಸೇರುತ್ತದೆ. ಕರೆ ಮಾಡುವುದು ಪ್ರಜ್ಞಾವಂತರ, ಸ್ವಾಸ್ಥ್ಯ ಸಮಾಜದ ನಾಗರಿಕರ ಲಕ್ಷಣ. ಮಕ್ಕಳು ಸಂಕಷ್ಟದಲ್ಲಿದ್ದಾಗ ಕನಿಷ್ಠ 1098 ಒಂದು ಕರೆ ಮಾಹಿತಿ ತಿಳಿಸದಿದ್ದರೆ ದೇವರೂ ಕ್ಷಮಿಸಲಾರ ಯಾಕೆಂದರೆ ಈ ರಾಷ್ಟ್ರ ಮತ್ತು ಮಣ್ಣು ಮಕ್ಕಳು ಎಂದರೆ ದೇವರಿಗೆ ಸಮಾನ ಎಂದು ನಂಬಿದೆ. ಹಾಗಾಗಿ ಒಮ್ಮೆಯಾದರೂ ಜೀವನದಲ್ಲಿ ಅವಕಾಶ ಸಿಕ್ಕಿದಾಗ ಕರೆ ಮಾಡಿ ಮಕ್ಕಳ ಸಂರಕ್ಷಣೆಗೆ ಮುಂದಾಗಿ.

ಹಾಗಾದರೆ ಚೈಲ್ಡ್ ಲೈನ್-1098ರ ಕಿರು ಪರಿಚಯ ನೋಡೋಣ:- ಚೈಲ್ಡ್ ಲೈನ್-1098 ಭಾರತ ದೇಶದ 41% ಇರುವ ಕೋಟ್ಯಾಂತರ ಮಕ್ಕಳಿಗೆ ಭರವಸೆಯನ್ನು ನೀಡುವ ಒಂದು ದೂರವಾಣಿ ಸಂಖ್ಯೆಯಾಗಿದೆ. ದಿನದ 24 ಘಂಟೆ, ವಾರದ 07 ಏಳು ದಿನವೂ, ವರ್ಷದ 365/66ದಿನವೂ ಕಾರ್ಯನಿರ್ವಹಿಸುವ, ಮಕ್ಕಳಿಗೆ ಸೇವೆಯನ್ನು ಒದಗಿಸುವ ಮತ್ತು ಸಹಾಯದ ಅವಶ್ಯಕತೆಗಾಗಿ ವಿವಿಧ ಸಂಪರ್ಕಗಳನ್ನು ನೀಡುವ ಒಂದು ವ್ಯವಸ್ಥೆಯಾಗಿದೆ. ಕೇವಲ ತುರ್ತು ಅಗತ್ಯ ಅಷ್ಟೇ ಅಲ್ಲ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಅಗತ್ಯತೆಯ ಸಂದರ್ಭದಲ್ಲಿ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಸೂಕ್ತ ಪುನರ್ವಸತಿ ಸಂಬಂಧಿತ ಸೇವೆಗಳಿಗೆ ಕ್ರಮಬದ್ಧ ಸೇವೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಈ ಚೈಲ್ಡ್ ಲೈನ್-1098 ಮಾಡುತ್ತದೆ. ದೇಶದಾಧ್ಯಂತ ಇದುವರೆಗೆ ಅಂದಾಜು ಮೂರು ಮಿಲಿಯನ್ ಮಕ್ಕಳೊಂದಿಗೆ ಈ ಸಂಖ್ಯೆ ಸಂಪರ್ಕ ಕಲ್ಪಿಸಿದೆ ಮತ್ತು ಸಹಾಯ ಹಸ್ತ ಚಾಚಿದೆ.

ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ (CIF- Childline India Foundation) ಚೈಲ್ಡ್ ಲೈನ್ 1098 ಸೇವೆಯನ್ನು ಎಲ್ಲಾ ಕಡೆ ಸ್ಥಾಪಿಸುವ, ಸೇವೆಯನ್ನು ನಿರ್ವಹಿಸುವ ಮತ್ತು ಮೇಲ್ವಿಚಾರಣೆಯ ಕಾರ್ಯವನ್ನು ನಡೆಸುತ್ತಿದೆ. ಇದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಮುಖಾಂತರ 1098 ನ ನೋಡಲ್ ಸಂಸ್ಥೆಯಾಗಿದೆ. ಈ ಫೌಂಡೇಷನ್ ಚೈಲ್ಡ್ ಲೈನ್ ಸೇವೆಯನ್ನು, ಸ್ಥಾಪಿಸುವ ಏಕೈಕ ಸಂಸ್ಥೆಯಾಗಿದ್ದು ಸೇವೆ, ಹಣಕಾಸು, ತರಬೇತಿ, ಸಂಶೋದನೆ ಮತ್ತು ದಾಖಲಾತಿಗಳ ನಿರ್ವಹಣೆ, ಅರಿವು, ಜಾಗೃತಿ, ಶಿಕ್ಷಣ, ಮಕ್ಕಳ ಪರವಾಗಿ ವಕಾಲತ್ತು ವಹಿಸುವ ಹಾಗೂ ಚೈಲ್ಡ್ ಲೈನ್ ಸೇವೆಯನ್ನು ದೇಶದಾದ್ಯಂತ ಒದಗಿಸಲು ಸಂಪನ್ಮೂಲಗಳ ಸಂಗ್ರಹ ಮತ್ತು ಕ್ರೂಡೀಕರಣದ ಕೆಲಸವನ್ನು ನಿರ್ವಹಿಸುತ್ತಿದೆ.

ಹಿನ್ನೆಲೆ: 1996ರಲ್ಲಿ ಮುಂಬಯಿಯ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ಸ್ ಕುಟುಂಬ ಮತ್ತು ಮಕ್ಕಳ ಕಲ್ಯಾಣ ಕ್ರಿಯಾ ಯೋಜನೆ ವಿಭಾಗದ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಜೆರೋ ಬಿಲ್ಲಿಮೋರಿಯಾ ಅವರು ಮೊತ್ತ ಮೊದಲಿಗೆ ಚೈಲ್ಡ್ ಲೈನ್ನನ್ನು ಪ್ರಾರಂಭಿಸಿದರು. ಜೆರೋ ಬಿಲ್ಲಿಮೋರಿಯಾ ಅವರು ಮುಂಬಯಿಯ ರೈಲ್ವೇ ನಿಲ್ದಾಣಗಳಲ್ಲಿರೂ ಮಕ್ಕಳೊಂದಿಗೆ ಮಾತನಾಡುತ್ತಾ ಅವರ ತೊಂದರೆ, ಸಂಕಷ್ಟಕ್ಕೆ ಈಡಾದಾಗ ಕರೆ ಮಾಡಲು ತಿಳಿಸಿದರು. ಆದರೆ ದಿನದಿಂದ ದಿನಕ್ಕೆ ಮಕ್ಕಳ ಸಮಸ್ಯೆ, ಅವರಿಗೆ ಆಗುವ ತೊಂದರೆಗಳನ್ನು, ಕರೆಗಳನ್ನು ನಿರ್ವಹಿಸಲು, ಪರಿಹರಿಸಲು ಸಾಧ್ಯವಿಲ್ಲ ಎಂಬ ಅರಿವು ಅವರಿಗೆ ಆಯಿತು. ಮಕ್ಕಳ ವಿವಿಧ ರೀತಿಯ ತೊಂದರೆ, ಸಂಕಷ್ಟ, ಹಿಂಸೆ, ಶೋಷಣೆ, ಅದರ ದಾಖಲಾತಿ, ಸಂಪರ್ಕ ಸಹಯೋಗ ಮಾಡುವುದು ಕಷ್ಟ ಎಂಬುದು ಗೊತ್ತಾದಾಗ, ಮಕ್ಕಳಿಗೆ ವಿವಿಧ ಹಂತದ, ವಿಭಾಗವನ್ನು ಸಂಪರ್ಕಿಸಲು ಸೇವೆ ಒದಗಿಸಲು ಒಂದು ರಾಷ್ಟ್ರ ಮಟ್ಟದ ಉಚಿತ ದೂರವಾಣಿ ಸಂಪರ್ಕದ ಅವಶ್ಯಕತೆ ಇದೆ ಎಂಬುದರ ಅರಿವಾಯಿತು. ಮಕ್ಕಳಿಗೆ ಕರೆ ಮಾಡಿದ ತಕ್ಷಣ ಸಹಾಯ ಮತ್ತು ಸೇವೆಯನ್ನು ನೀಡುವ ಅವಶ್ಯಕತೆ ಇದೆ ಹಾಗೂ ಮಕ್ಕಳು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತು ಬೀದಿಗಳಲ್ಲಿ ಹಲವಾರು ರೀತಿಯ ಖಾಯಿಲೆ, ಗಾಯ, ಹಿಂಸೆ, ದೌರ್ಜನ್ಯ, ಶೋಷಣೆಗಳಿಗೆ ಒಳಗಾದ ತಕ್ಷಣ ಸೇವೆಯ ಅಗತ್ಯವಿರುತ್ತದೆ ಹಾಗೂ ತಕ್ಷಣ ಸಂಪರ್ಕದ ಅವಶ್ಯಕತೆ ಇದೆ ಎಂಬುದನ್ನು ಅರಿತರು. ಅದಕ್ಕೆ ಕೇಂದ್ರ ಆಧಾರಿತ ಸಂಪರ್ಕ ಜಾಲತಾಣ ಇರುವ ವ್ಯವಸ್ಥೆ ಬೇಕಾಗಿದೆ ಎಂಬುದನ್ನು ತೀರ್ಮಾನಿಸಿದರು.

ನಂತರ ನಿರಂತರ ಸಂಪರ್ಕಕ್ಕೆ ಬಂದ ಮಕ್ಕಳಿಗೆ ಸೂಕ್ತ ದೂರವಾಣಿ ಸಂಖ್ಯೆಯ ಬಗ್ಗೆ ಮಕ್ಕಳೊಂದಿಗೆ ಚರ್ಚೆ ನಡೆಸಿದಾಗ, ಮಕ್ಕಳು ನಿಜವಾಗಲೂ ಅವರ ಕಾಳಜಿಯನ್ನು ವ್ಯಕ್ತಪಡಿಸಿದರು. 10, 8 ಅಥವಾ 6 ಸಂಖ್ಯೆಯ ನಂಬರ್ ನಮಗೆ ಬೇಡ ನೆನಪು ಇರುವುದಿಲ್ಲ, ಹಾಗೂ ಅದು ಉಚಿತ ಆಗಬೇಕು ಯಾಕೆಂದರೆ ನಮಲ್ಲಿ ಕರೆ ಮಾಡಲು ದುಡ್ಡು ಇರಲ್ಲ ಎಂಬ ಅಭಿಪ್ರಾಯ ಮಕ್ಕಳಿಂದ ಬಂತು. ನಾವು ಬೇರೆ ಬೇರೆ ಪಟ್ಟಣಗಳನ್ನು ಸುತ್ತುವವರು. 4 ಅಂಕಿಗಳ ನಂಬರ್‍ನ 1098 ಆಗಬಹುದು ಎಂಬುದು ವ್ಯಕ್ತವಾಯಿತು. ಅಂದರೆ ಹತ್ತು ಒಂಬತ್ತು ಎಂಟು ಕರೆದರೆ ಹೇಗೆ? ಹಿಮ್ಮುಖ ಉಚ್ಛಾರ ಎಂಬ ಅಂಶ ಮಕ್ಕಳಿಂದಲೇ ಬಂತು. ಹೀಗೆ ಮಕ್ಕಳಿಂದಲೇ ಆಯ್ಕೆಯಾದ ಹತ್ತು ಒಂಬತ್ತು ಎಂಟು ಸಂಖ್ಯೆ “ಚೈಲ್ಡ್ ಲೈನ್” ಸಂಖ್ಯೆಯಾಗಿ ಅಂಗೀಕಾರವಾಯಿತು. ಆದರೆ ಎಲ್ಲಾ ಇಲಾಖೆಗಳ ಸಹಭಾಗಿತ್ವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಉಚಿತವಾಗಿ ನಿರ್ವಹಿಸುವುದು ಹೇಗೆ ಎಂಬ ಚರ್ಚೆ ಬಂದಾಗ ಸರಕಾರಕ್ಕೆ ಹಕ್ಕೊತ್ತಾಯ ಮಂಡನೆ ಮಾಡಲು ತೀರ್ಮಾನವಾಯಿತು. 1098ನ್ನು ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆಯಾಗಿ ಸ್ಥಾಪಿಸಲು ಮೂರು ವರ್ಷಗಳ ಹೋರಾಟ ನಡೆಯಿತು. ಅದರಲ್ಲಿ ಮಕ್ಕಳಿಂದಲೂ 2 ಪ್ರಮುಖ ಧರಣಿ, ಸತ್ಯಾಗ್ರಹ ನಡೆದವು, ಎಷ್ಟರಮಟ್ಟಿಗೆ ಎಂದರೆ ಮಕ್ಕಳು ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆಯ ಕರೆಯನ್ನು ಸರಕಾರಕ್ಕೆ ನೀಡಿದರು. ನಂತರ 1999ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಸಂರಕ್ಷಣೆಯನ್ನು ಖಾತರಿಪಡಿಸುವ ಮಕ್ಕಳ ಸ್ನೇಹಿ ರಾಷ್ಟ್ರದ ಕಲ್ಪನೆಯಲ್ಲಿ “ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್” ಸ್ಥಾಪಿತವಾಯಿತು. ಈ ಸಂಸ್ಥೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಯಿತು. 1997 ರಿಂದ 1999ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಷ್ಟ್ರೀಯ ಮಟ್ಟದಲ್ಲಿ “ಚೈಲ್ಡ್ ಲೈನ್” ನಿಧಿಯನ್ನು ನೀಡಲು ಒಪ್ಪಿತು. 2002ರಲ್ಲಿ ದೇಶದ 10 ಮಿಲಿಯನ್ ಜನಸಂಖ್ಯೆ ಇರುವ ಪ್ರತಿ ಪಟ್ಟಣಕ್ಕೂ “ಚೈಲ್ಡ್ ಲೈನ್” ಸ್ಥಾಪಿಸಲು ಸರಕಾರ ಬದ್ಧವಾಯಿತು.

2006-07ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವಾಲಯವು “ಚೈಲ್ಡ್ ಇಂಡಿಯಾ ಫೌಂಡೇಷನ್” ಗೆ ಅನುದಾನ ನೀಡುತ್ತಾ ದೇಶದ ಎಲ್ಲಾ ರಾಜ್ಯ, ಜಿಲ್ಲೆ, ನಗರಗಳಲ್ಲಿ “ಚೈಲ್ಡ್ ಲೈನ್” ಸ್ಥಾಪಿಸಲು ತೀರ್ಮಾನ ಕೈಗೊಂಡಿತು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಕಲಂ 2 (25)ರ ಮೂಲಕ ಸರಕಾರದ ಜೊತೆಗಿನ ಸಹಭಾಗಿತ್ವವನ್ನು ಕಾನೂನ್ಮಾಕವಗಿ ಖಚಿತಪಡಿಸಲಾಯಿತು. ಇದೀಗ (15 ನವೆಂಬರ್ 2021ರ) ದೇಶದ 602 ಜಿಲ್ಲೆಗಳಲ್ಲಿ “ಚೈಲ್ಡ್ ಲೈನ್” ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ದೇಶದ 81% ಭೂ ಭಾಗದ ವ್ಯಾಪ್ತಿಯನ್ನು ಆವರಿಸಿದೆ. ಇದು ಎಲ್ಲಾ ಸಾಧ್ಯವಾಗಿದ್ದು 1080 ಸಹಯೋಗ ಸಂಸ್ಥೆಗಳ ಮುಖಾಂತರ. ಇದರೊಂದಿಗೆ 144 ಮಕ್ಕಳ ಸಹಾಯ ಕೇಂದ್ರಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ಸ್ಥಾಪಿಸಲಾಯಿತು. 09 ಪ್ರಮುಖ ಬಸ್ ನಿಲ್ದಾಣಗಳಲ್ಲಿ “ಚೈಲ್ಡ್ ಲೈನ್” ಕೇಂದ್ರ ಸ್ಥಾಪನೆಯಾಗಿ, ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯಹಸ್ತ ನೀಡುತ್ತಿದೆ. “ಚೈಲ್ಡ್ ಲೈನ್” ಕೇವಲ ಮಕ್ಕಳನ್ನು ಆಲಿಸುವ, ಸಹಾಯ ಹಸ್ತ ನೀಡುವ ಕೆಲಸವಷ್ಟೇ ಅಲ್ಲ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾರ್ಯವಿಧಾನಗಳನ್ನು ಬಲಪಡಿಸುವಲ್ಲಿ, ರೂಪಿಸುವಲ್ಲಿ ಕೂಡ ಹಲವಾರು ಭಾಗಿದಾರರುಗಳಲ್ಲಿ ಬಹಳ ಮುಖ್ಯ ಭಾಗೀದಾರರೂ ಆಗಿ ಕೂಡುಗೆದಾರರಾಗಿಯು “ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್” ಕಾರ್ಯನಿರ್ವಹಿಸುತ್ತಿದೆ.

“ಚೈಲ್ಡ್ ಲೈನ್-1098” ಏನು ಮಾಡುತ್ತದೆ: ಸಂಕಷ್ಟದಲ್ಲಿರುವ ಯಾವುದೇ ಮಗುವಿನ ಸಂರಕ್ಷಣೆಗಾಗಿ ಯಾರು ಬೇಕಾದರೂ ಫೋನ್ ಮಾಡಿದರೆ, ಅದನ್ನು ಸ್ವೀಕರಿಸುವ ಮುಖಾಂತರ ಆ ಮಗುವಿನ ಸಂಪೂರ್ಣ ರಕ್ಷಣೆ, ಬಿಡುಗಡೆ, ಪುನರ್ವಸತಿ ಹಾಗೂ ಸೂಕ್ತ ಪೋಷಣೆ ಮತ್ತು ರಕ್ಷಣೆ ದೊರಕಿಸುವವರೆಗೂ ವಿವಿಧ ಹಂತದ ಭಾಗೀದಾರರು ಮತ್ತು ಇಲಾಖೆಗಳೊಂದಿಗೆ ತನ್ನ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಕೊನೆಯ ತನಕ ತನ್ನ ಅನುಸರಣೆಯನ್ನು “ಚೈಲ್ಡ್ ಲೈನ್” ಮಾಡುತ್ತದೆ.

ಚೈಲ್ಡ್ ಲೈನ್-1098 ನ ಗುರಿ:- ಮಕ್ಕಳ ಹಕ್ಕುಗಳನ್ನು ಮತ್ತು ಮಕ್ಕಳ ಸಂರಕ್ಷಣೆಯನ್ನು ಕಾಪಾಡುವ ಮತ್ತು ಖಾತರಿಪಡಿಸುವ ಮಕ್ಕಳ ಸ್ನೇಹಿ ರಾಷ್ಟ್ರ.
ಚೈಲ್ಡ್ ಲೈನ್-1098”ರ ಧ್ಯೇಯ ಏನು? ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು/ಮಗುವನ್ನು ತಲುಪಿ ಅವರ ಹಕ್ಕುಗಳು ಮತ್ತು ಸಂರಕ್ಷಣೆಯನ್ನು ಖಚಿತಪಡಿಸುವುದಾಗಿದೆ.
ಚೈಲ್ಡ್ ಲೈನ್ “4 ಸಿ”, ಸಂಪರ್ಕ(Connect),, ವೇಗವರ್ಧನೆ
(Catalyze), ಸಹಯೋಗ (Collaborate) ಮತ್ತು ಸಂವಹನ (Communicate)ಮುಖಾಂತರ ಪ್ರತಿ ವರ್ಷ ಹೆಚ್ಚು ಹೆಚ್ಚು ಮಕ್ಕಳನ್ನು ತಲುಪಲು ಸಹಾಯವಾಗುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ.

ಸಂಪರ್ಕ (Connect): ಮಕ್ಕಳನ್ನು ತಲುಪಲು ವಿವಿಧ ವಿಭಾಗ ಮತ್ತು ಹಂತದ ತಂತ್ರಜ್ಞಾನವನ್ನು ಬಳಸುವುದು.
ವೇಗವರ್ಧನೆ
(Catalyze): ಸಕ್ರಿಯ ವಕಾಲತ್ತು ಮೂಲಕ ವ್ಯವಸ್ಥೆಗಳನ್ನು ಕ್ರಿಯಾಶೀಲಗೊಳಿಸುವುದು ಮತ್ತು ಚಾಲನೆಗೆ ತರುವುದು.
ಸಹಯೋಗ
(Collaborate): ಮಕ್ಕಳಸ್ನೇಹಿ ಸಮಾಜ ನಿರ್ಮಿಸಲು ಮಕ್ಕಳು, ಪೋಷಕರು, ಕುಟುಂಬ, ನಾಗರಿಕರು, ಇಲಾಖೆಗಳು, ರಾಜ್ಯ, ಸಮುದಾಯ ನಾಗರಿಕ ಸಮಾಜ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಸಂಬಂಧ ಬಲಪಡಿಸುವುದು.
ಸಂವಹನ
(Communicate): ಪರಿಣಾಮಕಾರಿ ಸಂವಹನ ಮುಖಾಂತರ “ಮಕ್ಕಳ ಸಂರಕ್ಷಣೆ” ಮಾಡುವುದನ್ನು ಪ್ರತಿಯೊಬ್ಬರ ಪ್ರಥಮ ಆಧ್ಯತೆಯನ್ನಾಗಿ ಮಾಡಿಸುವುದು.

“ಚೈಲ್ಡ್ ಲೈನ್”ನ ಮಹತ್ವ ಏನೆಂದರೆ ಪ್ರತಿಯೊಂದು ಹಾಗೂ ಪ್ರತಿಯೊಬ್ಬರ ಕರೆಯನ್ನು ಕೂಡ ಬಹಳ ಮಹತ್ವವಾಗಿ ಪರಿಗಣಿಸುತ್ತದೆ. ಪ್ರತಿ ಕರೆಯಲ್ಲಿ ಒಂದೊಂದು ಮಗುವಿನ ಬದುಕು ಮತ್ತು ಭವಿಷ್ಯ ಅಡಗಿದೆ. ಸಾಧ್ಯವಾದ ಕಡೆ ಎಲ್ಲಾ ಮಗುವಿನ ಅಭಿಪ್ರಾಯ, ಒಪ್ಪಿಗೆ, ಅನುಮತಿ, ಸಲಹೆ ಮತ್ತು ಅವರ ಭಾಗವಹಿಸುವಿಕೆಯ ಮುಖಾಂತರ ಅವರನ್ನು ತೊಡಗಿಸುವ ಪ್ರಕ್ರಿಯೆಗೆ ಹೆಚ್ಚು ಆಧ್ಯತೆ ನೀಡುತ್ತದೆ. ಆದರೆ “ಚೈಲ್ಡ್ ಲೈನ್” ಏಕಾಂಗಿಯಾಗಿ ಎಂದೂ ಕೆಲಸ ಮಾಡಲು ಸಾಧ್ಯವಿಲ್ಲ ಮಡುವುದಿಲ್ಲ, ಅದು ಸರಕಾರದ ವಿವಿಧ ಇಲಾಖೆಗಳು, ಮಕ್ಕಳು, ಪೋಷಕರು, ಕುಟುಂಬ, ನಾಗರಿಕ ಸಮಾಜ. ನಾಗರಿಕ ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಮುದಾಯ, ಪೊಲೀಸ್, ಶಿಕ್ಷಣ, ಆರೋಗ್ಯ, ಸಂಸ್ಥೆಗಳ ಜೊತೆ ಸಹಯೋಗ, ಸಹಕಾರ, ಸಂಯೋಜನೆ, ಸಹಭಾಗಿತ್ವದ ಮೂಲಕ ಕಾರ್ಯನಿರ್ವಹಿಸುತ್ತದೆ. ಎಲ್ಲಾ ರೀತಿಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು “ಚೈಲ್ಡ್ ಲೈನ್” ಸದಾ ಎತ್ತಿ ಹಿಡಿಯುತ್ತದೆ. ಆ ನಿಟ್ಟಿನಲ್ಲಿ ನಡೆಯುತ್ತದೆ.

ಯಾರು ಕರೆ ಮಾಡಬಹುದು: ಮಕ್ಕಳು ಸೇರಿದಂತೆ ಎಲ್ಲಾ ದೊಡ್ಡವರೂ ಮತ್ತು ನಾಗರಿಕರು.

ಯಾವ ಕಾರಣಕ್ಕೆಲ್ಲಾ ಕರೆ ಮಾಡಬಹುದು: ಪ್ರಾರಂಭದ ಹಂತದಲ್ಲಿ 18 ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾದಾಗ, ತೊಂದರೆಗೊಳಗಾದಾಗ ಮತ್ತು ಮಕ್ಕಳು ಕಾಣೆಯಾದ ಸಂದರ್ಭಗಳಲ್ಲಿ ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಇತ್ತು. ಆದರೆ ಈಗ ಇದು ಕೇವಲ ಇಷ್ಟಕ್ಕೆ ಸೀಮಿತವಾಗಿಲ್ಲ. 18 ವರ್ಷದೊಳಗಿನ ಮಕ್ಕಳು ಯಾವುದೇ ರೀತಿಯ ನಿರ್ಲಕ್ಷ್ಯ, ಹಿಂಸೆ, ಶೋಷಣೆಗೆ ಒಳಗಾದಾಗ, ಬಲಿಯಾಗುವ, ಬಲಿಯಾಗಬಹುದಾದ ಸಂದರ್ಭ ಹಾಗೂ ಯಾವುದೇ ಮಕ್ಕಳು ಅಪಾಯದಲ್ಲಿ, ಅಪಾಯದ ಅಂಚಿನಲ್ಲಿ, ಅಪಾಯಕ್ಕೆ ಹೋಗಬಹುದಾದ ಸಂದರ್ಭ ಇದ್ದಾಗ 1098ಕ್ಕೆ ಯಾರು ಬೇಕಾದರೂ ಕರೆ ಮಾಡಬಹುದು. ಕರೆ ಮಾಡಿ ಮಕ್ಕಳ ರಕ್ಷಣೆಗೆ ಮುಂದಾಗಬಹುದು, ಮುಂದಾಗಬೇಕು. ಉದಾಹರಣೆಗೆ ಯಾವುದೇ ಮಕ್ಕಳು ಬಾಲ್ಯವಿವಾಹಕ್ಕೆ, ಬಾಲಕಾರ್ಮಿಕತೆಯಲ್ಲಿ ಇದ್ದಾಗ ಅಥವಾ ಭಿಕ್ಷಾಟನೆ, ಬೀದಿ ಬದಿಯಲ್ಲಿ, ಲೈಂಗಿಕ ಶೋಷಣೆ, ತಂದೆ-ತಾಯಿಯನ್ನು ಕಳೆದುಕೊಂಡಾಗ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇದ್ದಾಗ 1098ನ ಸಹಾಯ ಪಡೆಯಬಹುದು. ಇಷ್ಟು ಹೇಳುವಾಗ ಇನ್ನೊಂದು ಸಂದರ್ಭ ನೆನಪಾಯಿತು.

ರಾಜ್ಯಮಟ್ಟದಲ್ಲಿ ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಸಂವಾದ, ರಾಜ್ಯದ 30 ಜಿಲ್ಲೆಯ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದ್ದರು, ಗಣ್ಯರಾಗಿ ಆಸೀನರಾಗಿದ್ದವರು ನನಗೆ ಒಂದಷ್ಟು ಕ್ಷೇತ್ರ ಅನುಭವ ಹಂಚಲು ಕೆಲವು ನಿಮಿಷದ ಸಮಯ ನೀಡಿದರು. ನಾನು ಸುಮ್ಮನೆ ಅನುಭವ ಅಷ್ಟೇ ಹೇಳಬೇಕಿತ್ತೇನೊ ಗೊತ್ತಿಲ್ಲ. ಒಂದು ಅಧಿಕ ಪ್ರಸಂಗ ಪ್ರಶ್ನೆ ಅಧಿಕಾರಿಗಳಿಗೆ ಕೇಳಿಯೇ ಬಿಟ್ಟೆ. ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ತೊಂದರೆಗೆ ಸಿಲುಕುವ ಸಾಧ್ಯತೆ ಇರುವಾಗ ಕರೆ ಮಾಡಬಹುದಾದ ಒಂದು ಸಂಖ್ಯೆ ಇದೆ ಅದು ಯಾವುದು ಎಂದು ಕೇಳಿದೆ. ಕೆಲವು ಸೆಕೆಂಡು ಮೌನ, ಕೆಲವು ಅಧಿಕಾರಿಗಳು ಇದು ನಮಗೆ ಸಂಬಂಧಿಸಿದ್ದು ಅಲ್ಲ ಎಂಬಂತೆ ಅವರು ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಅಧಿಕಾರಿಯ ಗತ್ತಿನಲ್ಲಿಯೇ ಕುಳಿತ್ತಿದ್ದರು. ಯಾವುದು ಸಂಖ್ಯೆ ಎಂದು ಕೇಳಿದಾಗ ಕೆಲವರು ಮಾತ್ರ 1098 ಎಂದು ಹೇಳಿದರು. ಈಗಲಾದರೂ ನಾನು ಸುಮ್ಮನಿರಬಹುದಿತ್ತು, ನಾನು ಪ್ರಶ್ನೆ ಮುಂದುವರಿಸಿ ಈ ಗುಂಪಿನಲ್ಲಿ ಎಷ್ಟು ಜನ ಇದುವರೆಗೆ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ 1098ಕ್ಕೆ ಕರೆ ಮಾಡಿದ್ದೀರಾ? ಎಂದು ಕೇಳಿಯೇ ಬಿಟ್ಟೆ. ಇಡೀ ಸಭೆ ಮೌನ, ಎಲ್ಲರೂ ಹಿಂದೆ, ಮುಂದೆ, ಎಡ, ಬಲ ನೋಡಿಕೊಂಡರು ಯಾರೂ ಕೈ ಎತ್ತಲೇ ಇಲ್ಲ. ನಾನು, ಮುಂದೆ ಕುಳಿತಿದ್ದ ರಾಜ್ಯ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಸರ್/ಮೇಡಂ ಸ್ವಲ್ಪ ಹಿಂದೆ ಸಭೆ ನೋಡಿ ಎಂದೆ. ಒಂದು ಕೈ ಕೂಡ ಮೇಲೆರಲಿಲ್ಲ, ಸಭೆಯಲ್ಲಿ ಮೌನ, ಇನ್ನೇನು ಮಾತು ಮುಂದುವರಿಸೋಣ ಎಂದು ಆಲೋಚಿಸುತ್ತಿದ್ದಂತೆಯೇ, ಸಭೆಯಲ್ಲಿ ಒಬ್ಬ ಹಿರಿಯ ಅಧಿಕಾರಿಗಳು ಎದ್ದು ನಿಂತು, ತಮ್ಮ ಪ್ಯಾಂಟ್‍ನ್ನು ಮೇಲೆತ್ತಿ ಸರಿಪಡಿಸಿಕೊಳ್ಳುತ್ತಾ, ಸರ್! ನಿಮ್ಮ ಹೆಸರೇನು ಎಂದು ಕೇಳಿದರು. ನನಗೆ ಆತಂಕ ಶುರುವಾಯಿತು.

ನನ್ನ ಪ್ರಶ್ನೆ ಅವರಿಗೆ ಮುಜುಗುರ ಉಂಟುಮಾಡಿದೆ ಎಂಬ ಅರಿವು ನನಗಾಯಿತು. ನಾನು ಒಳಗಿನಿಂದಲೇ ಧೈರ್ಯ ಮಾಡುತ್ತಾ ‘ರಾಘವೇಂದ್ರ’ ಎಂದು ಹೇಳಿದೆ. ನೀವು “ಚೈಲ್ಡ್ ಲೈನ್” ಲೋಗೋ ನೋಡಿದ್ದೀರಾ ಎಂದು ಕೇಳಿದರು. ಹೌದು, ನೋಡಿದ್ದೇನೆ ಎಂದೆ. ಅಲ್ಲಿಯೇ ಬ್ಯಾನರ್‍ನಲ್ಲಿದೆ ಎಂದು ತಿಳಿಸಿದೆ. ಏನು ಲೋಗೋ ಅದು? ಎಂದು ಮರು ಪ್ರಶ್ನೆ ಹಾಕಿದರು. ಸರ್ “ಒಂದು ಮಗು ಪೋನ್ ರಿಸೀವರ್ ಹಿಡಿದು ಪೋನ್ ಮಾಡುತ್ತಿರುವ ಚಿತ್ರ ಇದೆ” ಎಂದೆ. ತಕ್ಷಣ ಅವರು ನೋಡಿ! ಮಕ್ಕಳಿಗೆ ಪೋನ್ ಮಾಡಲು ಇರುವ ಸಂಖ್ಯೆ ನಮಗೆ ಯಾಕೆ ಕೇಳುತ್ತೀರಿ? ನಾವ್ಯಾಕೆ ಪೋನ್ ಮಾಡಬೇಕು? ಮಕ್ಕಳು ತೊಂದರೆಗೆ ಒಳಗಾದಾಗ ಅವರು ಮಾಡುತ್ತಾರೆ ಬಿಡಿ? ನಮಗೆ ಯಾಕೆ ಕೇಳುತ್ತೀರಿ? ನಾವ್ಯಾಕೆ ಪೋನ್ ಮಾಡಬೇಕು? ಎಂದು ಹೇಳಿಯೇ ಬಿಟ್ಟರು. ಇದನ್ನು ಕೇಳಿ ಕೆಲವೇ ಜನರು ಬಿಟ್ಟರೆ ಹೆಚ್ಚಿನವರು ತಲೆ ತಗ್ಗಿಸಿ, ತಲೆ ಮೇಲೆ ಕೈ ಇಟ್ಟರು. ಮುಂದೆ ಕುಳಿತ್ತಿದ್ದ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಎದ್ದು ನಿಂತು, ಅವರಿಗೆ ಸುಮ್ಮನೆ ಕೂತ್ಕೊಳ್ರಿ ಬಾಯಿಗೆ ಬಂದ ಹಾಂಗೆ ಮಾತನಾಡಬೇಡಿ ಎಂದು ಅವರಿಗೆ ಬೇಕಾದ ಸಂದೇಶ ನೀಡಿದರು. ರಾಘವೇಂದ್ರ ನೀವು ಮುಂದುವರೆಸಿ ಇಂತವರು ಇರುವುದರಿಂದಲೇ ಮತ್ತು ಇಂತಹ ಮನಸ್ಥಿತಿಯವರು ಇರುವುದರಿಂದಲೇ ನಮ್ಮ ಮಕ್ಕಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಛೇ! ಓ ಗಾಡ್ ಎಂದು ಹೇಳಿದರು. ನಂತರ ನನ್ನ ವಿಷಯ ಏನು ಹೇಳಬೇಕಿತ್ತೋ ಅದನ್ನು ಹೇಳಿ ಮುಗಿಸಿದೆ.

ಹೌದು ಇಂತಹ ಮನಸ್ಥಿತಿ ಬದಲಾಗಬೇಕಿದೆ. “ಚೈಲ್ಡ್ ಲೈನ್” ಮಕ್ಕಳಿಗೆ ಮಾತ್ರ ಪೋನ್ ಮಾಡಲು ಇರುವ ವ್ಯವಸ್ಥೆ ಅಲ್ಲ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ, ಸಂಕಷ್ಟ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆಯ ಅಗತ್ಯ ಕಂಡಾಗ, ಇದ್ದಾಗ ಯಾರು ಬೇಕಾದರೂ, ಮುಖ್ಯವಾಗಿ ದೊಡ್ಡವರೇ ಮಕ್ಕಳ ರಕ್ಷಣೆಗೆ, ಸುರಕ್ಷಿತ ಜಾಗಕ್ಕೆ ತರಲು, ಬಿಡುಗಡೆ ಮತ್ತು ಪುನರ್ವಸತಿಗಾಗಿ ತಕ್ಷಣ (ಯಾವುದೇ ತಡ ಮಾಡದೆ) ಕರೆ ಮಾಡಬಹುದಾದ ಸಂಖ್ಯೆ 1098. ಇದು ಪ್ರಜ್ಞಾವಂತ ನಾಗರಿಕರ ಲಕ್ಷಣ. “ಚೈಲ್ಡ್ ಲೈನ್” ನ ವಿಶೇಷ ಎಂದರೆ ಪೋನ್ ಮಾಡಿದವರ ಗುರುತು, ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿ ಇಡುತ್ತಾರೆ. ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವುದಿಲ್ಲ. 100% ಗೌಪ್ಯತೆ ಕಾಪಾಡುತ್ತಾರೆ. ಇನ್ನು ಆರೋಪಿಗಳು ಕೂಡ ಯಾರು ನಿಮಗೆ ಪೋನ್ ಮಾಡಿದ್ದು ಎಂದು ಕೇಳುವಂತಿಲ್ಲ.

ಇನ್ನು ಏನು ಬೇಕು ನಿಮಗೆ. ಇನ್ನೇನು ತಡ! ಕರ್ನಾಟಕದ ಎಲ್ಲಾ ನಗರ ಮತ್ತು 30 ಜಿಲ್ಲೆಗಳಲ್ಲಿಯೂ “ಚೈಲ್ಡ್ ಲೈನ್-1098” ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ಸುತ್ತ-ಮುತ್ತ, ಕೆಲಸದ ಸ್ಥಳ, ದಾರಿಯಲ್ಲಿ ಹೋಗುವಾಗ, ಪ್ರವಾಸ ಹೋಗುವಾಗ, ಬಾಲಕಾರ್ಮಿಕರು, ಚಿಕ್ಕ ಮಕ್ಕಳ ಮದುವೆ ನಿಶ್ಚಿತಾರ್ಥ, ಬಾಲ್ಯವಿವಾಹ, ಭಿಕ್ಷೆ ಬೇಡುವ ಮಕ್ಕಳು, ಬೀದಿ ಮಕ್ಕಳು, ಏಕ ಪೋಷಕ ಮಕ್ಕಳು, ಪೋಷಕರಿಲ್ಲದ ಮಕ್ಕಳು, ನಿರ್ಲಕ್ಷ್ಯ, ಹಿಂಸೆ, ಶೋಷಣೆಗೆ ಬಲಿಯಾದ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಒಳಗಾಗಬಹುದಾದ ಸಾಧ್ಯತೆಯಿರುವ ಮಕ್ಕಳು, ಅಂಗವಿಕಲ ಮಕ್ಕಳು, ಸೌಲಭ್ಯವಂಚಿತ ಮಕ್ಕಳು, ಎಲ್ಲಿ ಕಂಡರೂ ತಕ್ಷಣ ಕರೆ ಮಾಡಿ. 1098ನವರು ಕೆಲಸ ಮಾಡುತ್ತಾರೋ? ಬಿಡುಗಡೆ ಮಾಡುತ್ತಾರೋ? ಎಂಬ ಚಿಂತೆ ನಿಮಗೆ/ನಮಗೆ ಬೇಡ ನೀವು ಮಾಡಿ ಅಷ್ಟೇ, ಒಂದು ಸೆಕೆಂಡು ಕಾಯಬೇಡಿ. ಯಾಕೆಂದರೆ ಅವರು ಮಕ್ಕಳು! ದೇವರಿಗೆ ಸಮಾನ! ಈ ದೇಶದ ಪ್ರಜೆಗಳು! ನಮ್ಮ ದೇಶದ ಆಸ್ತಿ! ತೊಂದರೆಗೆ ಒಳಗಾಗಿರುವ ಸಂದರ್ಭದಲ್ಲಿ ನೀವು ಸ್ಪಂದಿಸದೆ ಇದ್ದರೆ ನಾಗರಿಕತೆಗೆ ಹಾಗೂ ಪ್ರಜ್ಞಾವಂತ ನಾಗರಿಕರಿಗೆ ಅವಮಾನ ಮತ್ತು ನಾಚಿಕೆ ಅಲ್ವಾ?

ಸರಿ! ಇನ್ನು ಮುಂದೆಯಾದರು ಜೀವನದಲ್ಲಿ ಒಮ್ಮೆಯಾದರೂ (ಅವಕಾಶ ಅಂತೂ ಖಂಡಿತ ಸಿಗುತ್ತೆ) 1098ಕ್ಕೆ ಕರೆ ಮಾಡಿ ಅದರ ವೇಗ, ಸಾಮರ್ಥ್ಯ ಮತ್ತು ಶಕ್ತಿ ಏನು ಎಂದು ನೋಡಿ! ಅದೇ ನಿಜವಾದ ದೇವರ ಸೇವೆ, ಪುಣ್ಯದ ಕಾರ್ಯ, ಮಣ್ಣಿನ ಕ್ರಮ, ದೇಶದ ಕೆಲಸ, ಈ ನೆಲದ ನಿಯಮ ಮತ್ತು ಅದೇ ನಿಜವಾದ ರಾಷ್ಟ್ರ ಸೇವೆ.

ಕೆ. ರಾಘವೇಂದ್ರ ಭಟ್, ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯ ತಜ್ಞರು,
9845699735

ಈ ಅಂಕಣದ ಹಿಂದಿನ ಬರೆಹಗಳು:
ಬಾಲಾಪರಾಧಿ ಶಬ್ದ ಬಳಕೆ ಸಲ್ಲ, ರಿಮಾಂಡ್ ಹೋಂ ನಮ್ಮಲಿಲ್ಲ..
“ಮಕ್ಕಳ ಸಂರಕ್ಷಣೆ”ಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು
“ಮಕ್ಕಳ ಹಕ್ಕುಗಳ ಗ್ರಾಮಸಭೆ” ಸಾಗುತ್ತಿರುವ ದಾರಿಯನ್ನೊಮ್ಮೆ ತಿರುಗಿ ನೋಡೋಣ
ಏನಿದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ?
“ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು”
“ಹಕ್ಕಿನ” ಪರಿಭಾಷೆ ಮತ್ತು ಮಕ್ಕಳು
ಇಂದಿನ ಮಕ್ಕಳು: ಇಂದಿನ ಪ್ರಜೆಗಳು:

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...