“ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು”

Date: 19-12-2021

Location: ಬೆಂಗಳೂರು


‘ಯಾವ ಜಿಲ್ಲೆಯಲ್ಲಿ ಅಥವಾ ಯಾವ ರಾಜ್ಯದಲ್ಲಿ ಬಾಲ್ಯ ವಿವಾಹ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಇದೆಯೋ ಆ ಜಿಲ್ಲೆ, ರಾಜ್ಯ ಮಾನವ ಅಬಿವೃದ್ಧಿಯಲ್ಲಿ ಹಿಂದುಳಿದಿದೆ’ ಎನ್ನುತ್ತಾರೆ ಮಕ್ಕಳ ಹಕ್ಕು ಮತ್ತು ಮಕ್ಕಳ ಸಂರಕ್ಷಣೆಯ ತಜ್ಞರಾದ ಕೆ. ರಾಘವೇಂದ್ರ ಭಟ್. ಅವರು ತಮ್ಮ  ಮಕ್ಕಳ ಹಕ್ಕುಗಳು ಮತ್ತು ನಾವು ಅಂಕಣದಲ್ಲಿ ಮಕ್ಕಳ ಹಕ್ಕಿನ ಕುರಿತು ಸರ್ಕಾರದ ನಿಲುವು ಹಾಗೂ ವಿಶ್ವಸಂಸ್ಥೆಯ ಕಾನೂನುಗಳ ಕುರಿತು ವಿಶ್ಲೇಷಿಸಿದ್ದಾರೆ. 

“ಮಕ್ಕಳ ಹಕ್ಕುಗಳ” ಬಗ್ಗೆ ಮಾತನಾಡಲು ಒಂದು ಅವಕಾಶ. ಸರಕಾರಿ ಪ್ರೌಢ ಶಾಲೆ, ಕಾರ್ಯಕ್ರಮಕ್ಕೆಂದೇ ಎಲ್ಲಾ ತರಗತಿಯ ಮಕ್ಕಳನ್ನು ಒಂದೇ ಸಭಾಂಗಣದಲ್ಲಿ ಸೇರಿಸಲಾಗಿತ್ತು. ಶಾಲೆಗೆ ಭೇಟಿ ನೀಡಿದ್ದ ನನಗೆ ಮುಖ್ಯ ಶಿಕ್ಷಕರು ಮಕ್ಕಳ ಹಕ್ಕುಗಳ ಬಗ್ಗೆ ಸ್ವಲ್ಪ ಹೇಳಿ ಸರ್ ಎಂದು ಆಹ್ವಾನಿಸಿ ಸ್ವಾಗತಿಸಿ ವೇದಿಕೆ ಬಿಟ್ಟರು. ಸುಮಾರು 80 ರಿಂದ 120 ಮಕ್ಕಳು. ಮಾತು ಪ್ರಾರಂಭಿಸಲು ಕೆಲವು ಪ್ರಶ್ನೆಗಳನ್ನು ಕೇಳಿದೆ. ಮಕ್ಕಳೇ ನಮಸ್ತೆ! ಆ ಕಡೆಯಿಂದ ಅದ್ಭುತವಾದ ನಮಸ್ತೆ... ಸಾರ್ ಎಂಬ ಉತ್ತರ. ಎಲ್ಲರೂ ಚೆನ್ನಾಗಿ ಇದ್ದೀರಾ? ಚೆನ್ನಾಗಿದ್ದೇವೆ ಸಾರ್! ನೀವು? ಎಂಬ ಮರು ಪ್ರಶ್ನೆ. ಹಾಂ! ನಾನು ಚೆನ್ನಾಗಿ ಇದ್ದೇನೆ ಎಂದು ಉತ್ತರಿಸುತ್ತಾ, ಈಗ ನೀವು ಚೆನ್ನಾಗಿ ಇದ್ದೀರಿ, ನಾನು ಚೆನ್ನಾಗಿ ಇದ್ದೇನೆ, ನಿಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಇದ್ದಾರಾ? ಎಂದು ಮರು ಪ್ರಶ್ನೆ ಕೇಳಿದೆ! ಹೌದು ಸಾರ್! ಎಂಬ ಉತ್ತರ.

“ಮಕ್ಕಳ ಹಕ್ಕುಗಳನ್ನು” ಪರಿಚಯಿಸಲು ಇದೇ ಉತ್ತಮ ಅವಕಾಶ ಎಂದು, ಮಕ್ಕಳೊಂದಿಗೆ ಚರ್ಚೆ ಪ್ರಾರಂಭಿಸಿದೆ. ನೀವು ಚೆನ್ನಾಗಿರಬೇಕಾದರೆ, ಚೆನ್ನಾಗಿ ಬದುಕಬೇಕಾದರೆ, ಮುಂದೆ ನೀವು ನಿಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಿಮಗೆ ಅತ್ಯಂತ ಅಗತ್ಯವಾಗಿ, ಬೇಕೇಬೇಕಾದ ಮತ್ತು ಕಡ್ಡಾಯವಾಗಿ ಬೇಕಾದ ಅಂಶಗಳು ಹಾಗೂ ಸೌಲಭ್ಯಗಳ ಪಟ್ಟಿ ಮಾಡಿ ಎಂದು ಹೇಳಿದೆ. ಮಕ್ಕಳು ವಿವಿಧ ಗುಂಪುಗಳಲ್ಲಿ ಚರ್ಚಿಸಿ ಒಂದಷ್ಟು ಅಂಶಗಳನ್ನು ತಯಾರಿಸಿದರು, ಪ್ರತಿ ಗುಂಪು ಅವರವರ ಗುಂಪಿನಲ್ಲಿ ಚರ್ಚಿಸಿದ ಅಂಶಗಳನ್ನು ಮಂಡಿಸಿದರು. ಬಾಲಕಿಯೊಬ್ಬಳು ಅದನ್ನು ಬೋರ್ಡ್‍ನಲ್ಲಿ ಬರೆದಳು. ಅವರು ಓದಿದ ಮತ್ತು ಪಟ್ಟಿ ಮಾಡಿದ, ಅವರಿಗೆ ಅತ್ಯಂತ ಅಗತ್ಯವಾಗಿ, ಬೇಕೇಬೇಕಾದ ಹಾಗೂ ಅದು ಇಲ್ಲದೇ ಬದುಕು ಸಂಕಷ್ಟಕ್ಕೆ ಹೋಗಬಹುದು ಎಂದು ಖಾತ್ರಿಯುಳ್ಳ ಅಂಶಗಳನ್ನು ಹೇಳಿದರು. ಆ ಅಂಶಗಳು ಈ ಕೆಳಗಿನಂತಿದ್ದವು. 

ಊಟ (ಆಹಾರ-ಪೌಷ್ಠಿಕ ಆಹಾರ), ಮನೆ (ವಸತಿ), ಆಟದ ಸಾಮಾನುಗಳು, ಆಟ-ಪಾಠ, ದೂರದರ್ಶನ (ಟಿ.ವಿ), ಪುಸ್ತಕ, ಪೆನ್ನು, ಪಾಟಿ-ಪುಸ್ತಕ. ಶಾಲಾ ಬ್ಯಾಗ್, ಶೂ, ಚಪ್ಪಲಿ, ಕುಟುಂಬದ ಪ್ರೀತಿ, ಶಿಕ್ಷಣ, ಆರೋಗ್ಯ. ಔಷದೋಪಚಾರ, ಪ್ರೀತಿ, ವಿಶ್ವಾಸ, ಗೌರವ, ವಾತ್ಸಲ್ಯ, ಶುದ್ಧವಾದ ಗಾಳಿ, ಬೆಳಕು, ನೀರು, ಬಾಲ್ಯತನ, ರಕ್ಷಣೆ, ಪೋಷಣೆ, ಅವಕಾಶ, ಎಲ್ಲ ಕಡೆ ಭಾಗವಹಿಸುವಿಕೆ, ಅಭಿಪ್ರಾಯ ಹೇಳಲು ಅವಕಾಶ, ಮೆಚ್ಚುಗೆ, ಬಹುಮಾನ, ಸಂತೋಷ, ಸ್ನೇಹ, (ಗೆಳೆಯರು), ಬರೆಯಲು ಬೆಂಚು, ಕುರ್ಚಿ, ಬೈಕ್, ಸೈಕಲ್, ಪ್ರತ್ಯೇಕ ಕೋಣೆ, ಮಲಗುವ ಮಂಚ, ಬೆಡ್‍ಶೀಟ್, ವಾಯುವಿಹಾರ, ಯೋಗ, ವ್ಯಾಯಾಮ ಕಲಿಯಲು ಅವಕಾಶ, ಹಾಸ್ಟೆಲ್‍ಗಳಲ್ಲಿ ಕಲಿಕೆಗೆ ಅವಕಾಶ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ವಿವಿಧ ಗುರುತಿನ ಚೀಟಿಗಳು, ವಿವಿಧ ವಿದ್ಯಾರ್ಥಿ ವೇತನಗಳು, ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ, ಬಸ್ ಪಾಸ್. ಇತ್ಯಾದಿ.

ಹೀಗೆ ಪಟ್ಟಿ ಬೆಳೆಯುತ್ತಾ ಹೋಯಿತು, ಸಾಕು ಎಂದೆ. ಮಕ್ಕಳು ಅವರಿಗೆ ಅತ್ಯಂತ ಅಗತ್ಯವಾಗಿ ಮತ್ತು ಅಭಿವೃದ್ಧಿಗೆ ಬೇಕಾದ ಅಂಶಗಳನ್ನು ಹೇಳಿದ ಮಕ್ಕಳು ಸಂತೋಷದಲ್ಲಿ ಪಟ್ಟಿಯನ್ನು ಮೆಲುಕು ಹಾಕುತ್ತಿದ್ದರು. ಮತ್ತೆ ಮತ್ತೆ ಇನ್ನೊಂದಿಷ್ಟು ಅಂಶಗಳನ್ನು ಹೇಳಲು ಪ್ರಯತ್ನಿಸುತ್ತಿದ್ದರು. ಅದನ್ನೆಲ್ಲಾ ಗೌರವಿಸುತ್ತಾ, ನಿಮ್ಮ ಈ ಪಟ್ಟಿಯನ್ನು ಸರಕಾರಕ್ಕೆ ಅಂದರೆ ಮುಖ್ಯಮಂತ್ರಿಗಳಿಗೆ ನಾನು ತಲುಪಿಸುತ್ತೇನೆ ಎಂದು ಅಭಿನಯಿಸುತ್ತಾ, ಮುಖ್ಯ ಮಂತ್ರಿಗಳು ಏನು ಹೇಳುತ್ತಾರೆ ನೋಡೋಣ ಎಂದು, ಒಂದು ನಿಮಿಷ ಹೊರ ಹೋಗಿ, ಒಳ ಬಂದೆ. ಮಕ್ಕಳೇ! ಮುಖ್ಯ ಮಂತ್ರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳು, ನಿಮ್ಮ ಪಟ್ಟಿಯನ್ನು ನೋಡಿ ಖುಷಿಪಟ್ಟು ನಿಮಗೆಲ್ಲಾ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಹೌದು, ಮಕ್ಕಳ ಅಭಿವೃದ್ಧಿಗೆ ಈ ಎಲ್ಲಾ ಅಂಶಗಳನ್ನು ಬೇಕೆಂಬುದನ್ನು ಒಪ್ಪಿರುತ್ತಾರೆ. ಆದರೆ ರಾಜ್ಯಕ್ಕೆ ಕೊರೋನಾ ಬಂದಿರುವ ಕಾರಣ ಆರ್ಥಿಕ ಹೊರೆ ತುಂಬಾ ಆಗಿರುವ ಕಾರಣ, ನೀವು ಹೇಳಿದ ಎಲ್ಲಾ ಅಂಶಗಳನ್ನು ಕೊಡಲು ಸಾಧ್ಯವಿಲ್ಲ, ಆದ್ದರಿಂದ ಈ ಪಟ್ಟಿಯಿಂದ ಯಾವುದಾದರು 04 ಅಂಶಗಳನ್ನು ತಗೆಯಲು ಹೇಳಿದ್ದಾರೆಂದು ಚರ್ಚೆ ಮುಂದುವರಿಸಿದೆ. ಆಗ ಮಕ್ಕಳು ಗುಸು-ಗುಸು ಮಾತನಾಡುತ್ತಾ, ಗಲಾಟೆ ಮಾಡುತ್ತಾ, ಇಲ್ಲ, ಇಲ್ಲ ಸಾಧ್ಯ ಇಲ್ಲ ಎಂದರು, ನಾನು ಮಕ್ಕಳಲ್ಲಿ ಸ್ವಲ್ಪ ಚರ್ಚೆ ಮಾಡುತ್ತಾ, ಪಾಪ ಸರಕಾರದ ಹತ್ತಿರ ದುಡ್ಡಿಲ್ವಂತೆ, ಯಾವುದಾದರೂ 04 ತೆಗೆಯಿರಿ, ಉಳಿದದ್ದು ಎಲ್ಲಾ ಸಿಗುತ್ತೆ ಅಲ್ವಾ ಅಂದೆ. ಮಕ್ಕಳು ಒಪ್ಪಿ, ಗುಂಪು ಚರ್ಚೆ ನಡೆಸಿ, 04 ಅಂಶಗಳನ್ನು ಪಟ್ಟಿಯಿಂದ ತೆಗೆಯಲು  ಒಪ್ಪಿದರು. ಅವರ 04 ಅಂಶಗಳು ಯಾವುವು ಎಂದರೆ, ಪ್ರತ್ಯೇಕ ಕೋಣೆ, ಮಲಗುವ ಮಂಚ, (ನೆಲದಲ್ಲಿ ಮಲಗುತ್ತೇವೆ) ವಾರಕ್ಕೊಮ್ಮೆ ಹೊರಗಡೆ ತಿರುಗಾಟ ಮತ್ತು ಬೈಕ್. 

ಈಗ ಹೂಸ ಪಟ್ಟಿಯನ್ನು ಮುಖ್ಯ ಮಂತ್ರಿಗಳ ಹತ್ತಿರ ಕೊಟ್ಟು ಬರುತ್ತೇನೆಂದು ಸಭಾಂಗಣದಿಂದ ಮತ್ತೆ ಹೊರ ಹೋಗಿ ಒಳ ಬಂದೆ. ಈಗ ಮಕ್ಕಳ ಕಾತುರ ಜಾಸ್ತಿಯಾಗಿತ್ತು. ನನ್ನ ಉತ್ತರಕ್ಕಾಗಿ ಕಾಯುತ್ತಿದ್ದರು. ನಾನು ಮತ್ತೆ ಮುಖ್ಯ ಮಂತ್ರಿಗಳು ನಿಮ್ಮ ಹೊಸ ಪಟ್ಟಿಯನ್ನು ನೋಡಿ, ನಿಮ್ಮನ್ನು ಶ್ಲಾಘಿಸಿದ್ದಾರೆ ಎನ್ನುತ್ತಾ, ಆದರೆ ಈ ವರ್ಷವು ಮಳೆ, ಬೆಳೆ ನಾಶವಾಗಿರುವ ಕಾರಣ ರೈತರಿಗೆ ಹೆಚ್ಚು ದುಡ್ಡು ಖರ್ಚು ಮಾಡಿರುವ ಕಾರಣ, ಇನ್ನೂ 03 ಅಂಶಗಳನ್ನು ತೆಗೆಯಲು ಕೇಳಿಕೊಂಡಿದ್ದಾರೆ ಎನ್ನುತ್ತಾ, ನಾನು ನಿಮ್ಮ ಪರವಾಗಿ ಆಗುವುದಿಲ್ಲ, ಇದು ಮಕ್ಕಳಿಗೆ ಬೇಕೇಬೇಕಾದದ್ದು ಎಂದು ಚರ್ಚಿಸಿ, ವಿನಂತಿಸಿಕೊಂಡಿದ್ದಾಗಿಯೂ, ಮುಖ್ಯ ಮಂತ್ರಿಗಳು ಒಪ್ಪಲಿಲ್ಲ, ಇನ್ನೂ 03 ಅಂಶಗಳನ್ನು ತೆಗೆಯಲು ಹೇಳಿದ್ದಾರೆ. ಆದ್ದರಿಂದ ಈ ಪಟ್ಟಿಯಲ್ಲಿ ಇನ್ನೂ 03 ಅಂಶಗಳನ್ನು ತೆಗೆಯಿರಿ ಎಂದು ಹೇಳಿದ ತಕ್ಷಣವೇ, ಮಕ್ಕಳ ಗಲಾಟೆ ಇನ್ನೂ ಜೋರಾಯಿತು. ನಾವು ಒಪ್ಪಲ್ಲ, ನಾವು ತೆಗೆಯಲ್ಲ, ಈ ಎಲ್ಲಾ ಅಂಶಗಳು ಬೇಕೇಬೇಕಾದದ್ದು. ನಮ್ಮ ಬದುಕು ಮತ್ತು ಅಭಿವೃದ್ಧಿಗೆ ಅತ್ಯಂತ ಅಗತ್ಯವಾದದ್ದು, ಯಾಕೆಂದರೆ ಇವುಗಳೆಲ್ಲ ನಮ್ಮ ಹಕ್ಕುಗಳು ಸಾರ್ ಎಂಬ ಶಬ್ದ ಮಕ್ಕಳ ಬಾಯಿಂದ ಬಂತು. ಈ ಶಬ್ದಕ್ಕಾಗಿಯೇ ಕಾಯುತ್ತಿದ್ದ ನನಗೆ ಒಂದು ರೀತಿಯಲ್ಲಿ ಚರ್ಚೆಯ ಫಲಿತಾಂಶ ಸಿಗುವುದರ ಬಗ್ಗೆ ಖುಷಿಯೆನ್ನಿಸಿತು. ಮಕ್ಕಳನ್ನು ಮತ್ತೆ ಚರ್ಚೆಗೆ ಒರೆ ಹಚ್ಚಲು ಮತ್ತು ಸ್ಪಷ್ಟತೆಗಾಗಿ ನಾನೇ ಚರ್ಚೆಯನ್ನು ಮುಂದುವರಿಸುತ್ತಾ, ಮುಖ್ಯಮಂತ್ರಿಗಳು ವಿನಂತಿಸಿದ್ದಾರೆ. ಹೇಗಾದರೂ ಮಾಡಿ ಇನ್ನೂ 03 ಅಂಶಗಳನ್ನು ತೆಗೆಯಿರಿ ಎಂದು ಕೋರಿಕೊಂಡೆ. ಮತ್ತೆ ಮಕ್ಕಳು ಚರ್ಚೆಗೆ ಕೂತರು. ಓದುಗರಾದ ನೀವು ಹೇಳಿ, ಇನ್ನೂ ಯಾವ 03 ಅಂಶಗಳನ್ನು ತಗೆಯಬಹುದು ನೀವೇ ಹೇಳಿ?.  ಮಕ್ಕಳು ಚರ್ಚಿಸಿ 03 ಅಂಶಗಳನ್ನು ಬಹಳ ಕಷ್ಟದಿಂದ, ನೋವಿನಿಂದ ಒಂದು ತರಹದ ಬೇಜಾರಿನಿಂದಲೇ ಪಟ್ಟಿ ತಂದರು. ಆ ಅಂಶಗಳು ಯಾವುದೆಂದರೆ, ಟಿ.ವಿ, ಆಟದ ಸಾಮೂನುಗಳು ಮತ್ತು ಎಲ್ಲಾ ಕಡೆ ಅವಕಾಶ. ಈ ಅಂಶಗಳೊಂದಿಗೆ ಮಕ್ಕಳು ಇದು ಸಧ್ಯಕಷ್ಟೇ ತೆಗೆದದ್ದು, ಮುಂದೆ ನಮಗೆ ಇದು ಬೇಕೇ ಬೇಕು ಎಂಬ ಷರತ್ತಿನೊಂದಿಗೆ ಒಪ್ಪಿಕೊಂಡರು. ಮಕ್ಕಳ ಚರ್ಚೆ ಮತ್ತು ಮಕ್ಕಳಿಗೆ ಹಕ್ಕಿನ ಪರಿಭಾಷೆ ಮತ್ತು ಮಹತ್ವ ಅರ್ಥವಾಗುತ್ತಿರುವುದನ್ನು ನೋಡಿ ಹೆಮ್ಮೆಯಾಯಿತು. 

ಆಯಿತು ಒಟ್ಟು 07 ಅಂಶ ತೆಗೆದ ಹೊಸ ಪಟ್ಟಿಯನ್ನು ಕೊಟ್ಟು ಬರುತ್ತೇನೆಂದು ಸಭಾಂಗಣದಿಂದ ಮತ್ತೆ ಹೊರ ಹೋಗಿ ಮತ್ತೆ ಒಳ ಬಂದು ಮಕ್ಕಳೇ ನಿಮ್ಮ ಎಲ್ಲಾ ಅಭಿವೃದ್ಧಿ ಪೂರಕ ಅಂಶಗಳನ್ನು ಪೂರೈಸಲು ಸರಕಾರ ಒಪ್ಪಿಕೊಂಡಿದೆ. ಆದರೆ! ಎಂದು ಸ್ವಲ್ಪ ಉಧ್ಘಾರ ತೆಗೆದೆ ಅಷ್ಟೇ. ಅಷ್ಟರಲ್ಲಿ ಮಕ್ಕಳೆಲ್ಲರೂ ಒಟ್ಟಾಗಿ ಇನ್ನು ಯಾವುದೇ ಅಂಶಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಜೋರಾಗಿ ಕೂಗಿಕೊಂಡರು. ಮತ್ತೆ ನಾನು ಮಕ್ಕಳನ್ನು ಶಾಂತವಾಗಿ ಕೇಳಿ. . ಕೇಳಿ. . ಎಂದು ತಿಳಿಸಿದೆ. ಕೊನೆ ಪಟ್ಟಿಯನ್ನು ಅಂತಿಮಗೊಳಿಸಿ ನಿಯಮಾನುಸಾರ ಸಲ್ಲಿಸಲು ಸರಕಾರ ಕೇಳಿಕೊಂಡಿದೆ. ಹಾಗಾಗಿ ಇನ್ನು ನೀವು ಕೊನೆಯ ಪಟ್ಟಿ ಸಲ್ಲಿಸುವಾಗ ಇನ್ನೂ ಎರಡೇ ಎರಡು ಅಂಶಗಳನ್ನು ತೆಗೆದರೆ 100% ಅನುಮತಿ ದೊರೆಯುತ್ತದೆಂದು ಸರಕಾರ ಹೇಳಿದೆ, ಆದ್ದರಿಂದ ನೀವು ಈ ಪಟ್ಟಿಯಲ್ಲಿ ಇನ್ನೂ ಯಾವುದಾದರು 02 ಅಂಶವನ್ನು ತೆಗೆಯಬೇಕು ಎಂದು ತಿಳಿಸಿದೆ. ಅಷ್ಟರಲ್ಲಿ ಮಕ್ಕಳೆಲ್ಲರೂ ಎದ್ದು ನಿಂತು, ಸಾಧ್ಯವಿಲ್ಲ! ಸಾಧ್ಯವಿಲ್ಲ!! ಸಾಧ್ಯವಿಲ್ಲ!!! ಎಂದು ಕೂಗಿಕೊಂಡರು. ನಾವು ಕೂಡಾ ಈ ದೇಶದ ಪ್ರಜೆಗಳೇ ನಮಗೂ ಹಕ್ಕು ಇದೆ. ಚೆನ್ನಾಗಿ ಬದುಕಬೇಕಾದರೆ, ಮುಂದೆ ಉತ್ತಮ ನಾಗರಿಕನಾಗಬೇಕಾದರೆ, ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಇವುಗಳೆಲ್ಲವೂ ಬೇಕೇ ಬೇಕು. ಇನ್ನೂ ಯಾವುದೇ ಅಂಶಗಳನ್ನು ತೆಗೆಯಲು ಸಾಧ್ಯವಿಲ್ಲ, ನಾವು ತೆಗೆಯಲ್ಲ ಎಂದು ಹೋರಾಟಕ್ಕೆ ನಿಂತಂತೆ ನಿಂತುಬಿಟ್ಟರು. ಅಬ್ಬಾ! ಮಕ್ಕಳ ಸಂಘಟನಾ ಶಕ್ತಿ, ಯೋಚನೆ, ಯೋಜನೆ, ಚಿಂತನೆ ಮತ್ತು ಹಕ್ಕಿನ ಪರಿಕಲ್ಪನೆಯ ಅರ್ಥೈಸುವಿಕೆಯ ಹಾಗೂ ಒಗ್ಗಟ್ಟನ್ನು ನೋಡಿ ಮನಸಿನಲ್ಲಿ ಖುಷಿಪಟ್ಟುಕೊಂಡೆ. 

ಮಕ್ಕಳ ಗುಂಪು ಸ್ವಲ್ಪ ಸಮಾಧಾನವಾದ ಮೇಲೆ ಆಯಿತು ಮಕ್ಕಳೇ, ನೋಡೋಣ, ನಿಮ್ಮೊಂದಿಗೆ ನಾನು ಸೇರಿಕೊಳ್ಳುತ್ತೇನೆ. ಇನ್ನು ಯಾವುದೇ ಅಂಶಗಳನ್ನು ತೆಗೆಯಲು ಒಪ್ಪಿಕೊಳ್ಳುವುದು ಬೇಡ, ನಾನು ನಿಮ್ಮೊಂದಿಗೆ ಕೈಜೋಡಿಸುತ್ತೇನೆಂದು ಹೇಳಿ ಮಕ್ಕಳನ್ನು ಚರ್ಚೆಗೆ ಕುಳ್ಳಿರಿಸಿದೆ. ಈಗ ಹೇಳಿ ಇನ್ನೂ 02 ಅಂಶಗಳನ್ನು ತೆಗೆಯಲು ಯಾಕೆ ಸಾಧ್ಯವಿಲ್ಲ? ಪ್ರಶ್ನಿಸಿದೆ. ಕೆಲವು ಮಕ್ಕಳು, ಈಗಾಗಲೇ 07 ಅಂಶಗಳನ್ನು ತೆಗೆದು ಆಯಿತಲ್ವಾ?, ಇನ್ನೂ ಯಾಕೆ? ಎಂಬ ಪ್ರಶ್ನೆ. ಮತ್ತೆ ಕೆಲವರು, ನೀವು ನಮಗೆ ಕೇಳಿದ್ದು ಚೆನ್ನಾಗಿ ಬದುಕಲು, ಮುಂದೆ ಅಭಿವೃದ್ಧಿ ಹೊಂದಲು, ಅತ್ಯಂತ ಅಗತ್ಯವಾಗಿ ಬೇಕೇಬೇಕಾಗಿರುವ ಅಂಶಗಳು ಯಾವುದು ಅಂತಾ. ನಾವು ಪಟ್ಟಿ ಮಾಡಿದ್ದು ಕೂಡಾ ಅದನ್ನೇ! ಬದುಕಲು ಮತ್ತು ಅಭಿವೃದ್ಧಿ ಹೊಂದಲು ಇರುವ ಬೇಕೇಬೇಕಾಗಿರುವ ಅಂಶಗಳನ್ನು ಹೇಗೆ ತೆಗೆಯಲು ಸಾಧ್ಯ? ಎಂದು ಕೇಳಿದರು. ಇನ್ನು ಕೆಲವು ಮಕ್ಕಳು, ಇವುಗಳನ್ನು ತೆಗೆದರೆ ನಮ್ಮ ಬದುಕು ಚೆನ್ನಾಗಿರಲು ಮತ್ತು ಮುಂದೆ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ? ಎಂದು ಮರು ಪ್ರಶ್ನೆ ಕೇಳಿದರು. ಕೆಲವೊಂದು ಮಕ್ಕಳು ಸ್ವಲ್ಪ ಯೋಚಿಸುತ್ತಾ, ಇವುಗಳೆಲ್ಲವೂ ಕೂಡಾ ನಮ್ಮ ಹಕ್ಕುಗಳು ಸಾರ್! ಇದನ್ನು ಈಗ ನಾವು, ಅಂದರೆ ಮಕ್ಕಳಾಗಿದ್ದಾಗಲೇ ಅನುಭವಿಸಿದಲ್ಲಿ ಮಾತ್ರ ಮುಂದೆ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಯಾಕೆಂದರೆ ಇವುಗಳು ಮಕ್ಕಳ ಹಕ್ಕುಗಳು. ನಾವು ಅಭಿವೃದ್ಧಿಯಾಗದಿದ್ದಲ್ಲಿ, ಚೆನ್ನಾಗಿ ಬದುಕದಿದ್ದಲ್ಲಿ ನಮ್ಮ ಬದುಕು ಸಂಕಷ್ಟಕ್ಕೆ ಈಡಾಗುತ್ತದೆ, ಹೀಗಾದರೆ ದೇಶ, ರಾಜ್ಯ, ಕುಟುಂಬಗಳು ಹೇಗೆ ಅಭಿವೃದ್ಧಿ ಹೊಂದಲು ಸಾಧ್ಯ? ಎಂಬ ಮರು ಪ್ರಶ್ನೆ ಮಕ್ಕಳಿಂದ. ಈ ಎಲ್ಲಾ ಹಕ್ಕುಗಳನ್ನು ನಾವು ಅನುಭವಿಸುವಂತಾಗಲು ಸೂಕ್ತ ಸೌಲಭ್ಯ, ವ್ಯವಸ್ಥೆ ಮತ್ತು ಅವಕಾಶಗಳನ್ನು ಒದಗಿಸುವುದು ಸರಕಾರದ ಮತ್ತು ಈ ಸಮಾಜದ ಕರ್ತವ್ಯ ಅಲ್ಲವೇ? ಇದು ಸರಕಾರದ ಜವಬ್ದಾರಿ ಮತ್ತು ಹೊಣೆ ಅಲ್ಲವೇ? ಎಂದು ಜೋರಾಗಿ ಕೂಗುತ್ತಾ ಇವು ನಮ್ಮ ಹಕ್ಕುಗಳು ಎಂದರು. ನನ್ನ ಮಕ್ಕಳೊಂದಿಗಿನ ಚರ್ಚೆಯ ಗುರಿ ತಲುಪಿತು ಎಂದುಕೊಂಡು, ತದನಂತರ ಮಕ್ಕಳ ಹಕ್ಕುಗಳು ಮತ್ತು ಅದರ ಹಿನ್ನೆಲೆ ಕುರಿತು ಮಕ್ಕಳಿಗೆ ವಿವರಿಸಿದೆ. ಮಕ್ಕಳಿಗೆ ಅರ್ಥವಾಗಿದೆ ಎಂಬ ಗರ್ವದಿಂದ ಚರ್ಚೆಯನ್ನು ನಿಲ್ಲಿಸಿದೆ.  ಇರಲಿ, ಈಗ ನೀವು ಹೇಳಿ, ಮೇಲೆ ವಿವರಿಸಿದ ಪಟ್ಟಿಯಲ್ಲಿ ಮಕ್ಕಳಿಗೆ ಬೇಡವೇ ಬೇಡ ಎಂದು ಯವುದಾದರೂ ಒಂದು ಅಂಶ ತೆಗೆಯಲು ಪ್ರಯತ್ನಿಸಿ. ಪ್ರಯತ್ನಿಸಿದ್ದೀರಾ! ತೆಗೆಯಲು ಸಾಧ್ಯವೇ ಯೋಚಿಸಿ. ಕೆಲವು ದೊಡ್ಡವರು, ತಿಳಿದವರು, ಬುದ್ದಿಜೀವಿಗಳು ಅವರವರ ಬದುಕಿನ ಅನುಭವಕ್ಕೆ ಸರಿಯಾಗಿ ತೆಗೆಯಬಹುದು ಎಂದು, ಹೇಳಿದರೂ ಹೇಳಬಹುದು. ಆದರೆ ಮಕ್ಕಳು ತೆಗೆಯಬಹುದು ಎಂದು ಹೇಳಲು ಸಾಧ್ಯವೇ? ಯಾಕೆಂದರೆ ಅವು ಹಕ್ಕು ಆಧಾರಿತ ಅಭಿವೃದ್ಧಿಯ ಮೂಲ ಅಂಶಗಳು. ಮಕ್ಕಳ ಹಕ್ಕುಗಳು ಅನುಷ್ಠಾನವಾಗದ ಹೊರತು, ಅಂದರೆ ಮಕ್ಕಳು ಅವುಗಳನ್ನು ಬಾಲ್ಯದಲ್ಲಿ ಅನುಭವಿಸದ ಹೊರತು ಒಂದು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಪಟ್ಟಣ, ಗ್ರಾಮ ಮತ್ತು ಕುಟುಂಬಗಳ ಸರ್ವತೋಮುಖ ಅಭಿವೃದ್ಧಿ  ಸಾಧ್ಯವೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಿದರೆ ಈ ಚರ್ಚೆ ಸಾರ್ಥಕ.

ಇನ್ನೂಂದು ಸಂದರ್ಭ 2015ರಲ್ಲಿ ಕರ್ನಾಟಕ ರಾಜ್ಯವು ರಾಜ್ಯದ 30 ಜಿಲ್ಲೆಗಳ ಮಾನವ ಅಭಿವೃದ್ಧಿ ವರದಿಗಳನ್ನು ತಯಾರಿಸಿ ಹೊರತಂದ ರಾಜ್ಯ. ಹಾಗೂ 2015-16ರಲ್ಲಿ ರಾಜ್ಯದ 5898 ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿಯ ಕಾರ್ಯಕ್ಷಮತೆ ವರದಿಯನ್ನು ತಯಾರಿಸಿ ಹೊರತಂದಿದೆ. ಇದು ಒಂದು ಉತ್ತಮ ಹೆಜ್ಜೆಯೂ ಹೌದು. (ಗ್ರಾಮ ಪಂಚಾಯತ್‍ಗಳ ಕಾರ್ಯಕ್ಷಮತೆ ವರದಿಯು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ಜಾಲತಾಣದಲ್ಲಿ ಲಭ್ಯವಿದೆ.)

ಈ ವರದಿಗಳಲ್ಲಿ ಕೆಲವು ಜಿಲ್ಲೆ ‘ಮಾನವ ಅಭಿವೃದ್ಧಿ’ಯಲ್ಲಿ ಉತ್ತಮ ಸಾಧನೆ ಮಾಡಿದ ಅಂಶಗಳು ಇವೆ. ಆದರೆ ಹೆಚ್ಚಿನ ಗ್ರಾಮ ಪಂಚಾಯತ್‍ಗಳು ಮತ್ತು 30 ಜಿಲ್ಲೆಯ ಮಾನವ ಅಭಿವೃದ್ಧಿ ವರದಿಗಳು ಸೀಮಿತ ಮಾನದಂಡವನ್ನು ಮುಟ್ಟಿಲ್ಲವೆಂಬುದು ವರದಿಯಲ್ಲಿ ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈ ವರದಿಯಲ್ಲಿ ಮಾನವ ಅಭಿವೃದ್ಧಿ ಸಾಧಿಸಲು ಒಂದು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆ ಸಭೆಯಲ್ಲಿ ಜಿಲ್ಲೆಯ ಆಡಳಿತ ವರ್ಗದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸುಮಾರು 22 ಇಲಾಖೆಗಳ ಮುಖ್ಯಸ್ಥರುಗಳು ಭಾಗಿಯಾಗಿದ್ದರು. ಅವರ ಆತಂಕ ಜಿಲ್ಲೆಯ ಪ್ರತಿ ಇಲಾಖೆಗಳೂ ನೂರಾರು ಕೋಟಿ ಖರ್ಚು ಮಾಡಿದ್ದರೂ ಈ ‘ಮಾನವ ಅಭಿವೃದ್ಧಿ’ ಯಾಕೆ ಸಾಧ್ಯವಾಗಿಲ್ಲ? ಎಂಬ ಪ್ರಶ್ನೆ. ಪ್ರತಿ ಇಲಾಖೆಗಳೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ 90% ಮೇಲೆ ವರದಿ ಕೊಡುತ್ತಿದ್ದರೂ ಒಟ್ಟಾರೆ ಮಾನವ ಅಭಿವೃದ್ಧಿ ಸೀಮಿತ ಮಾನದಂಡ ತಲುಪುವಲ್ಲಿ ಸಾಧನೆ ಕಾಣುತ್ತಿಲ್ಲ, ಸೀಮಿತ ಕನಿಷ್ಠ ಪ್ರಗತಿಯೂ ಕಾಣುತ್ತಿಲ್ಲ ಯಾಕೆ? ಎಂಬುದು ಅವರ ಪ್ರಮುಖ ಚರ್ಚೆಯ ಅಂಶವಾಗಿತ್ತು. ಚರ್ಚೆಯಲ್ಲಿ ಬಂದಿರುವ ಅಂಶಗಳಲ್ಲಿ ಯಾವ ಕಾರಣದಿಂದ ನಮ್ಮ ಜಿಲ್ಲೆಯ ವರದಿ ಕುಸಿದಿದೆ. ಯಾವ ಯಾವ ಅಂಶಗಳಲ್ಲಿ ಹಿಂದೆ ಇರುವುದರಿಂದ ‘ಮಾನವ ಅಭಿವೃದ್ಧಿ’ ಕುಸಿದಿದೆ ಎಂದು ನೋಡೋಣ, ಎಂದು ಪಟ್ಟಿ ತಯಾರಿಸಲಾರಂಭಿಸಿದರು ಆಗ ಬಂದ ಅಂಶಗಳು ಇವು:

ಜನನ ಪ್ರಮಾಣ ಪತ್ರದ ನೊಂದಣೆ/ವಿತರಣೆ, ಚುಚ್ಚುಮದ್ದು, ಕಬ್ಬಿಣಾಂಶದ ಕೊರತೆಯುಳ್ಳ ಮಕ್ಕಳ ಸಂಖ್ಯೆ, ಗರ್ಭಿಣಿ ತಾಯಂದಿರ 100% ಕಬ್ಬಿಣಾಂಶದ ಮಾತ್ರೆ ಸೇವನೆ, ಗರ್ಭಿಣಿ ತಾಯಂದಿರ ಆರೈಕೆ, ಸಾಂಸ್ಥಿಕ ಹೆರಿಗೆ, 1000 ದಿನ ಶಿಶು ಆರೈಕೆ, ಮಕ್ಕಳ ಆರೋಗ್ಯ, ಮಕ್ಕಳು ವಿವಿಧ ಮಾರಕ ರೋಗಗಳಿಗೆ ಬಲಿಯಾದದ್ದು, ಅಂಗನವಾಡಿ ದಾಖಲಾತಿ/ ಹಾಜರಾತಿ, ಅಪೌಷ್ಠಿಕ ಮಕ್ಕಳು, ವಿಶೇಷ ಸಾಮರ್ಥ್ಯದ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ, ಶಾಲೆ ಬಿಟ್ಟ ಮಕ್ಕಳು, ಬಾಲ/ಕಿಶೋರ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ, ಭಿಕ್ಷಾಟನೆಯಲ್ಲಿ ಮಕ್ಕಳು, ಬೀದಿ ಮಕ್ಕಳು, ಭಿಕ್ಷಾಟನೆಗೆ ತಳಲ್ಪಟ್ಟ ಮಕ್ಕಳು, ಲೈಂಗಿಕ ಅಪರಾದಕ್ಕೊಳಗಾದ ಮಕ್ಕಳು, ವೇಶ್ಯಾವಾಟಿಕೆಗೆ ತಳಲ್ಪಟ್ಟ ಮಕ್ಕಳು, ಹಿಂಸೆ, ಶೋಷಣೆ, ದೌರ್ಜನ್ಯಕ್ಕೊಳಗಾದ ಮಕ್ಕಳು, ಮಾದಕ ವ್ಯಸನಕ್ಕೆ ಒಳಗಾದ ಮಕ್ಕಳು, ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯವುಳ್ಳ ಮಕ್ಕಳು, ಶಿಕ್ಷಣ ವಂಚಿತ ಮಕ್ಕಳು, ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳು, ಏಕ ಪೋಷಕರಿರುವ ಮಕ್ಕಳು, ಕಾನೂನುಬಾಹಿರ ದತ್ತುವಿಗೆ ಒಳಗಾದ ಮಕ್ಕಳು, ಪೋಷಕರೇ ಇಲ್ಲದ ಮಕ್ಕಳು, ವಿವಿಧ ಅವಘಡ/ಅಪಘಾತಕ್ಕೆ ಒಳಗಾದ ಮಕ್ಕಳು, ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಮಕ್ಕಳು, ಸೌಲಭ್ಯವಂಚಿತ ಮಕ್ಕಳು, ಚಿಂದಿ ಆಯುವ ಮಕ್ಕಳು, ಕೌಟುಂಬಿಕ ಕಲಹಕ್ಕೆ ಓಳಗಾಗಿ ಸಂಕಷ್ಠಕ್ಕೆ ಒಳಗಾದ ಮಕ್ಕಳು, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಶೋಷಣೆ ಮತ್ತು ತಾರತಮ್ಯಕ್ಕೆ ಒಳಗಾದ ಮಕ್ಕಳು, ‘ಶಿಕ್ಷಣ’ದ ಒತ್ತಡದಿಂದ ಸಂಕಷ್ಠಕ್ಕೆ ಒಳಗಾದ ಮಕ್ಕಳು, ಭ್ರೂಣ ಹತ್ಯೆ, ಶಿಶು ಮರಣ, 05 ವರ್ಷದೊಳಗಿನ ಮಕ್ಕಳ ಸಾವು, ತಾಯಂದಿರ ಮರಣ, ಆಯೋಡಿನ್ ಉಪ್ಪು ಬಳಕೆ (ಮಕ್ಕಳಲ್ಲಿ), ಮಕ್ಕಳಿಗೆ 06 ತಿಂಗಳು ತಾಯಿ ಹಾಲು ನೀಡಿರುವ ಪ್ರಮಾಣ, ಮಕ್ಕಳಿಗೆ ಶಾಲೆಗೆ ಹೋಗುವ ಸಾರಿಗೆ ವ್ಯವಸ್ಥೆ, ಗರ್ಭಿಣಿಯರಿಗೆ/ಬಾಣಂತಿಯರಿಗೆ ಆರೋಗ್ಯ ಸೇವೆ ಪಡೆಯಲು ಆರೋಗ್ಯ ಕೇಂದ್ರಗಳ ಲಭ್ಯತೆ, ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ಕೊರತೆ ಅನುಭವಿಸಿದ ಮಕ್ಕಳು, ಜೀತ ಪದ್ಧತಿ/ದುಡಿಮೆಗಳಿಗೆ ಬಲಿಯಾದ ಮಕ್ಕಳು, ಕಲಿಕೆ ಸಾರ್ಮಥ್ಯ ಕಡಿಮೆಯುಳ್ಳ ಮಕ್ಕಳು, ಶಾಲೆ/ ಕಾಲೇಜುಗಳಲ್ಲಿ ರ್ಯಾಗಿಂಗ್‍ಗೆ ಒಳಗಾದ ಮಕ್ಕಳು, ವಿವಿಧ ಮಾನಸಿಕ ಅಘಾತಕ್ಕೊಳಗಾದ ಮಕ್ಕಳು, ಆಕಸ್ಮಿಕ ಅವಘಡಗಳಿಗೆ ಒಳಗಾದ ಮಕ್ಕಳು, ವಿಟಮಿನ್ ‘ಎ’ ‘ಸಿ’ ಕೊರತೆಯುಳ್ಳ ಮಕ್ಕಳು, ವಿವಿಧ ಅವಕಾಶವಂಚಿತ ಮಕ್ಕಳು, ಪೋಷಕರ ನಿರ್ಲಕ್ಷ್ಯ, ತಾರತಮ್ಯ, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಮಕ್ಕಳ ಸ್ನೇಹಿ ವ್ಯವಸ್ಥೆಯ ಕೊರತೆ,  ಆನ್‍ಲೈನ್ ಸುರಕ್ಷತೆ (ಜಾಲತಾಣ), ಟಿ.ವಿ. ಮೊಬೈಲ್, ಗಣಕಯಂತ್ರದ ಚಟಕ್ಕೆ ಬಲಿಯಾದ ಮಕ್ಕಳು, ಶಾಲೆ/ಮನೆ/ಅಂಗನವಾಡಿ/ಸಮಾಜದಲ್ಲಿ ಅಸುರಕ್ಷತಗೆ ಒಳಗಾದ ಮಕ್ಕಳು, ದುರುಪಯೋಗಕ್ಕೆ ಒಳಗಾದ ಮಕ್ಕಳು, ಹದಿಹರೆಯದ ಮಕ್ಕಳ ಸಬಲೀಕರಣ, ಹದಿಹರೆಯದ ಹೆಣ್ಣು ಮಕ್ಕಳ ಮಾಸಿಕ ಋತುಸ್ರಾವದ ತೊಂದರೆ ಮತ್ತು ಶುಚಿತ್ವದ ಕ್ರಮ, ಶಾಲೆ/ಅಂಗನವಾಡಿಗಳಲ್ಲಿ ಶೌಚಾಲಯ, ಶಾಲೆ/ಅಂಗನವಾಡಿಗಳಲ್ಲಿ ಗ್ರಂಥಾಲಯ/ಕ್ರೀಡಾ ಸಾಮಗ್ರಿ/ ಶೈಕ್ಷಣಿಕ ಸಾಮಗ್ರಿ/ ಪ್ರಯೋಗಾಲಯ, ಶಾಲೆ ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯ, ಮನೆ ಬಿಟ್ಟು ಓಡಿ ಹೋಗುವ ಮಕ್ಕಳು, ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣ, ತಾಯಿ ಕಾರ್ಡ್ (ಗರ್ಭಿಣಿಯರಿಗೆ/ಬಾಣಂತಿಯರಿಗೆ), ಶಾಲೆ/ ಅಂಗನವಾಡಿಗಳಲ್ಲಿ ಶಿಕ್ಷಕರ ಮತ್ತು ವಿಷಯವಾರು ಶಿಕ್ಷಕರ ಕೊರತೆ, ವಸತಿ ಶಾಲೆಗಳ ಕೊರತೆ/ ಮಕ್ಕಳ ವಸತಿ ಶಾಲೆಗಳ ಕೊರತೆ, ವಸತಿ ಶಾಲೆಗಳಲ್ಲಿ/ ವಸತಿ ನಿಲಯಗಳಲ್ಲಿ ಮೂಲಭೂತ ಶೈಕ್ಷಣಿಕ ಸೌಲಭ್ಯಗಳ ಕೊರತೆ. ಇತ್ಯಾದಿ.         

ಹೀಗೆ ಪಟ್ಟಿ ಬೆಳೆಯುತ್ತಾ ಹೋಯಿತು. ಈ ಎಲ್ಲಾ ಅಂಶಗಳು ‘ಮಾನವ ಅಭಿವೃದ್ಧಿ’ಯ ವರದಿಯಲ್ಲಿ ಕಂಡವುಗಳು. ಇದರಲ್ಲಿ ಕೆಲವು ಸಾಧಿಸಬೇಕಾದ ಅಂಶಗಳು, ಇನ್ನು ಕೆಲವು ಸಮಸ್ಯೆಗಳನ್ನು ಪರಿಹರಿಸಲೇಬೇಕಾದ ಅಂಶಗಳು. ಮತ್ತೆ ಕೆಲವು ನಿಯಂತ್ರಿಸಿ ಸಂಪೂರ್ಣ ತಡೆಗಟ್ಟಿ ನಿರ್ಮೂಲನೆ ಮಾಡಬೇಕಾದ ಅಂಶಗಳು ಕಂಡು ಬಂದವು. ಜಿಲ್ಲೆಯಲ್ಲಿ ಈ ಅಂಶಗಳ ಸಾಧನೆ, ಪ್ರಗತಿ ಮತ್ತು ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ಧಿ ಮಾರಕ ಸಮಸೈಗಳ ನಿರ್ಮೂಲನೆಯ ಪ್ರಗತಿ ತುಂಬಾ ಕ್ಷೀಣವಾದ ಕಾರಣ ಬೇರೆ ಬೇರೆ ಅಂಶಗಳಿಗೆ ಕೋಟಿ ಕೋಟಿ ಸುರಿದರೂ ‘ಮಾನವ ಅಭಿವೃದ್ಧಿ’ ಮೇಲೆ ಏಳಲೇ ಇಲ್ಲ.

ಈಗ ಅರ್ಥವಾಯಿತು ಅವರಿಗೆ ‘ಮಾನವ ಅಭಿವೃದ್ಧಿ’ ಕೇವಲ ಆರ್ಥಿಕ ಸುರಿಯುವಿಕೆಯಿಂದ ಆಗುವುದಿಲ್ಲ ಎಂದು. ಹಾಗಾದರೆ ಮಾನವ ಅಭಿವೃದ್ಧಿ ಅಂದರೆ ಏನು? ಮಾನವ ಅಭಿವೃದ್ಧಿಯಲ್ಲಿ ಪ್ರಮುಖ ಸೂಚ್ಯಂಕಗಳು ಯಾವುವು? ಯಾವುದು ಹೆಚ್ಚಿನ ಮಹತ್ವ ಪಡೆದಿದೆ ಎಂದು ಆಲೋಚಿಸುವ ಅಗತ್ಯವಿದೆ ಎಂಬ ಅಂಶಗಳ ಬಗ್ಗೆ ಚರ್ಚೆ ಶುರು ಮಾಡಿದರು. ಮಾನವ ಅಭಿವೃದ್ಧಿಗೆ ಇದೇ ಇಂದು ಆಗಬೇಕಾದದ್ದು. 

ಮೇಲೆ ತಿಳಿಸಿದ ಪಟ್ಟಿಯಲ್ಲಿ ಹೆಚ್ಚಿನ ಅಂಶಗಳು ಮಕ್ಕಳಿಗೆನೇ ಸಂಬಂಧಿಸಿದ್ದು ಆಗಿದೆ, ಅಂದರೆ ಮಾನವ ಅಭಿವೃದ್ಧಿಗಾಗಿ ಮಕ್ಕಳಿಗೆ ಸಂಬಂಧಿಸಿದ ಈ ಸೂಚ್ಯಂಕಗಳನ್ನು ಉತ್ತಮ ಸ್ಥಿತಿಗೆ ತಾರದ ಹೊರತು ಮಾನವ ಅಭಿವೃದ್ಧಿ ಅಸಾಧ್ಯ ಎಂಬ ಸ್ಪಷ್ಟತೆ ಬಂದ ಹಾಗೆ ಆಯಿತು. ಸುಮಾರು 50% ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮಕ್ಕಳಿಗೆ ಸಂಬಂಧಿಸಿದವುಗಳು ಇವೆ. ಹಾಗಾದರೆ ‘ಮಾನವ ಅಭಿವೃದ್ಧಿ’ಯ ಮೂಲ ಅಡಿಪಾಯ ಮಕ್ಕಳ ಅಭಿವೃದ್ಧಿಯೇ ಆಗಿದೆ ಎಂಬುದನ್ನು ಇನ್ನೂ ನಾವು ಅರಿಯದಿದ್ದರೆ ‘ಮಾನವ ಅಭಿವೃದ್ಧಿ’ಯನ್ನು ಸಾಧಿಸುವುದು ಕನಸಿನ ಮಾತೇ ಸರಿ. ಈಗ ನಾವು ‘ಮಾನವ ಅಭಿವೃದ್ಧಿ’ ಎಂದರೇನು? ಎಂದು ಸ್ವಲ್ಪ ಮೆಲುಕು ಹಾಕುವ ಪ್ರಯತ್ನ ಮಾಡೋಣ. ಆರ್ಥಿಕ ಅಭಿವೃದ್ಧಿಯನ್ನು ಪ್ರಧಾನವಾಗಿರಿಸಿ ‘ಮಾನವ ಅಭಿವೃದ್ಧಿ’ಯನ್ನು ಸಾಧಿಸಲು ಹೊರಟು, ಆ ದಾರಿಯಲ್ಲಿ ವಿಫಲತೆಯನ್ನು ಕಂಡ ರಾಷ್ಟ್ರ ಭಾರತ. ಅಂದರೆ ‘ಮಾನವ ಅಭಿವೃದ್ಧಿ’ಯಲ್ಲಿ ಆರ್ಥಿಕ ಅಭಿವೃದ್ಧಿ ಒಂದು ಅಂಶ ಅಷ್ಟೇ ಹೊರತು ಅದೇ ಪ್ರಧಾನ ಅಲ್ಲ. ಅದಕ್ಕೆ ಸಾಕ್ಷಿಯಾಗಿ ಅನೇಕ ಆರ್ಥಿಕ ಅಭಿವೃದ್ಧಿ ಕೇಂದ್ರೀಕರಣದ ಸಿದ್ದಾಂತಗಳು ನಮ್ಮ ದೇಶದಲ್ಲಿ ವಿಫಲವಾಯಿತು. ಉದಾ: ಟ್ರಿಕಲ್ ಡೌನ್ ಸಿದ್ಧಾಂತ ಅಂದರೆ ಮೇಲಿಂದ ದುಡ್ಡು ಸುರಿದರೆ ಅದು ತ್ರಿಕೋನಾಕಾರದಲ್ಲಿ ಕೆಳಮಟ್ಟಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಲ್ಪಡುತ್ತದೆ ಎಂದು ನಂಬಿದ್ದೆವು. ಅದು 90ರ ದಶಕದಲ್ಲಿಯೇ ವಿಫಲವಾಯಿತು. ಅದರಿಂದ ಮಾನವ ಅಭಿವೃದ್ಧಿ ಸಾಧ್ಯವಾಗಲಿಲ್ಲ. ನಂತರ “ಬಿಗ್ ಪುಶ್” ಸಿದ್ಧಾಂತವನ್ನು ನಂಬಿದ್ದೆವು ಅಂದರೆ ದೊಡ್ಡ, ದೊಡ್ಡ ಕಾರ್ಖಾನೆಗಳನ್ನು, ಕಂಪನಿಗಳನ್ನು ದೇಶದಲ್ಲಿ ತೆರೆಯುವುದರ ಮೂಲಕ ಜನರಿಗೆ ಉದ್ಯೋಗ ದೊರಕಿ ಅಭಿವೃದ್ಧಿ ಆಗಬಹುದು ಎಂದು ನಂಬಿದ್ದೆವು, ಅದು ಕೂಡಾ ವಿಫಲವಾಯಿತು. ಜನರಿಗೆ ಕೇವಲ ಉದ್ಯೋಗ, ಹಣಕಾಸು ಸಿಕ್ಕಿದರೆ ಅಭಿವೃದ್ಧಿ ಆಗುತ್ತೆ ಎಂಬುದು ಕೊನೆಗೂ ಸಾಭೀತು ಆಗಲೇ ಇಲ್ಲ. ಹಾಗಾದರೆ  “ಅಭಿವೃದ್ಧಿ” ‘ಮಾನವ ಅಭಿವೃದ್ಧಿ’ ಎಂದರೇನು? ಮೇಲೆ ಹೇಳಿದ ಸಿದ್ಧಾಂತಗಳ ಬಗ್ಗೆ ಅನೇಕ ಅರ್ಥ ಶಾಸ್ತ್ರಜ್ಞರು ಹೇಳಿದ್ದರು, ಈ ಸಿದ್ಧಾಂತಗಳಿಂದ ರಾಷ್ಟ್ರ ಅಥವಾ ‘ಮಾನವ ಅಭಿವೃದ್ಧಿ’ ಸಾಧ್ಯವಿಲ್ಲ ಎಂದು. (ಉದಾ: ಅಮರ್ಥ್ಯ ಸೇನ್, ಮೆಹೆಬೂಬ್-ಉಲ್-ಹಕ್ ಮುಂತಾದವರುಗಳು) ಕೊನೆಗೂ ಅದು ನಿಜವಾಯಿತು. “ಅಭಿವೃದ್ಧಿ”ಯ ಪರಿಭಾಷೆಯನ್ನು ಅರ್ಥೈಸಿಕೊಳ್ಳದೇ ಏನೇನೋ ಅನುಷ್ಠಾನ ಮಾಡಿದರೆ ಸೋತು ಹೋಗುವುದು ಖಂಡಿತ. ತಲಾದಾಯವೇ ಅಭಿವೃದ್ಧಿಯ ಏಕೈಕ ಸೂಚ್ಯಂಕ ಅಥವಾ ಅಳತೆಗೋಲು ಎಂಬುದನ್ನು ನಂಬಿದ್ದು ತದನಂತರ ಆದಾಯ ಅಸಮರ್ಥ ಸೂಚ್ಯಂಕವೆಂದು ಅರ್ಥವಾಯಿತು. ಮಾನವ ಅಭಿವೃದ್ಧಿ ಬಹಳ ಸರಳವಾಗಿದ್ದು ಜನರ ನಾಗರಿಕರ ಶಿಕ್ಷಣ, ಆರೋಗ್ಯ, ನೆಮ್ಮದಿ ಮತ್ತು ಧಾರಣಾ ಸಾಮರ್ಥ್ಯದ ಗಳಿಕೆಯ ಅಥವಾ ಸೂಚ್ಯಂಕದ (ಮಾನದಂಡ) ಆಧಾರದ ಮೇಲೆ ಮಾನವ ಅಭಿವೃದ್ಧಿ ನಿಂತಿದೆ ಎಂಬುದನ್ನು ಸಮಾಜ ವಿಜ್ಞಾನಿಗಳು ಹೇಳುತ್ತಾರೆ. ಅಮರ್ಥ್ಯಸೇನ್  ಅವರು “ಸಾಕ್ಷರತೆಯೇ ಅಭಿವೃದ್ಧಿ” ಎಂದು ಹೇಳುತ್ತಾರೆ ಧಾರಣಾ ಸಾಮರ್ಥ್ಯ(ಪಡೆದು ಕೊಳ್ಳುವ ಶಕ್ತಿ) ಮತ್ತು ಶಕ್ತಿಯನ್ನು ಒದಗಿಸುವ ಗುಣ-ಶಕ್ತಿ ಸಾಕ್ಷರತೆಗೆ ಇದೆ. ಧಾರಣಾ ಶಕ್ತಿಯೆಂದರೆ ಬದುಕುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಅಗತ್ಯವಾದ ಸಾಮರ್ಥ್ಯ ಹಾಗೂ ಸಮಾಜದಲ್ಲಿನ ಅವಕಾಶಗಳನ್ನು ಅಥವಾ ಹರಿದು ಬರುವ ಅವಕಾಶಗಳನ್ನು ತನಗೆ ಅಥವಾ ತಮಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಈ ಧಾರಣಾ ಶಕ್ತಿಯು ಇಲ್ಲದಿರುವ ಸ್ಥಿತಿಯನ್ನೇ ಅಮರ್ಥ್ಯಸೇನ್ ಬಡತನ ಎಂದು ಕರೆದಿದ್ದಾರೆ. ಸಾಕ್ಷರತೆಗೆ (ಶಿಕ್ಷಣ) ಧಾರಣಾ ಶಕ್ತಿಯನ್ನು ಸುಧಾರಿಸುವ ಶಕ್ತಿಯಿದೆ. ಅದಕ್ಕೆ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಒದಗಿಸುವ ಶಕ್ತಿಯಿದೆ.

ಇದನ್ನು ಗಮನಿಸಿದಾಗ ಸಾಕ್ಷರತೆ, ಶಿಕ್ಷಣ, ಆರೋಗ್ಯ, ನೆಮ್ಮದಿ ಧಾರಣಾ ಸಾಮರ್ಥ್ಯದ ಗಳಿಕೆ ಆಗುವುದು ಅಥವಾ ಅತ್ಯಂತ ಅಗತ್ಯವಾಗಿ ಬೇಕಾದದ್ದು, ಒಬ್ಬ ಮನುಷ್ಯನಿಗೆ ಯಾವಾಗ? ಯೋಚಿಸಿ. ಬಾಲ್ಯವಸ್ಥೆಯಲ್ಲಿಯೇ? ಅಥವಾ 18 ವರ್ಷ ದಾಟಿದ ಮೇಲೆಯೇ? ನನಗೆ ಗೊತ್ತಿದೆ, ನಿಮ್ಮ ಉತ್ತರ 18 ವರ್ಷದೊಳಗೆನೇ ಎಂದು. ಈ ಎಲ್ಲಾ ಅಂಶಗಳು (ಹಕ್ಕು) ಬೇಕು, ಲಭ್ಯವಾಗಬೇಕು. ಆಗ ಮಾತ್ರ 18 ದಾಟಿದ ನಂತರ ಅದರ ಬೆಳವಣಿಗೆ, ಉನ್ನತಿ, ಸಬಲೀಕರಣ, ಬಲವರ್ಧನೆ ಮಾಡಲು ಸಾಧ್ಯ. ಮೂಲ ಅಡಿಪಾಯದಲ್ಲಿಯೇ ಗಟ್ಟಿ ಇಲ್ಲಾ ಅಂದರೆ ನಂತರ ಬೆಳವಣಿಗೆ, ಸಬಲೀಕರಣ, ಬಲವರ್ಧನೆ ಸಾಧ್ಯನೇ ಇಲ್ಲ ತಾನೆ? ಅಂದರೆ ‘ಮಕ್ಕಳ ಅಭಿವೃದ್ಧಿ’ ಅಥವಾ ಮಕ್ಕಳ ಹಕ್ಕುಗಳ ಅನುಷ್ಠಾನ ಮತ್ತು ಮಕ್ಕಳು ಅದನ್ನು ಅನುಭವಿಸುವಂತಹ ವಾತಾವರಣ, ಸ್ಥಿತಿ, ವ್ಯವಸ್ಥೆ ಬೇಕು. ಆಗ ಮಾತ್ರ ಮಕ್ಕಳ ಅಭಿವೃದ್ಧಿ ಸಾಧ್ಯ, ಎಲ್ಲಾ 18 ವರ್ಷದೊಳಗಿನ ಮಕ್ಕಳು ಉತ್ತಮ ಆರೋಗ್ಯ, ಚುಚ್ಚುಮದ್ದು, ಶಿಕ್ಷಣ, ವಸತಿ, ಪೌಷ್ಠಿಕ ಆಹಾರ, ನೆಮ್ಮದಿ, ಶೋಷಣೆ ಮುಕ್ತರಾಗಿ ಬೆಳೆದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಾರೆ. ತನ್ಮೂಲಕ ಅವರ ಪಡೆದುಕೊಳ್ಳುವ, ಕೊಂಡುಕೊಳ್ಳುವ ‘ಧಾರಣಾ ಶಕ್ತಿ’ ಹೆಚ್ಚುತ್ತದೆ. ಆಗ ಮಕ್ಕಳ ಅಭಿವೃದ್ಧಿ ಸಾಧ್ಯ. ದೇಶದ 40% ಜನಸಂಖ್ಯೆ ಮಕ್ಕಳೇ ಇರುವ ಈ ದೇಶದಲ್ಲಿ, ಮಕ್ಕಳು ಅಭಿವೃದ್ಧಿ ಆದರೆ 60% ಮಾನವ ಅಭಿವೃದ್ಧಿ ಅಂಶಗಳು ಮತ್ತು ಸೂಚ್ಯಂಕಗಳ ಗುರಿ ತಲುಪಿದಂತೆ.  ಅಭಿವೃದ್ಧಿಯಲ್ಲಿ ಮಕ್ಕಳ ಕೊಡುಗೆ ಎಷ್ಟಿದೆ ಎಂಬುದು ಈಗ ಅರ್ಥ ಆಗಿದೆ ಎಂದು ಭಾವಿಸುತ್ತೇನೆ. ಇನ್ನೂ ಸಮಾಜ ವಿಜ್ಞಾನಿಗಳ ಪ್ರಕಾರ ಇನ್ನೊಂದು ಪರಿಭಾಷೆ ಏನೆಂದರೆ ‘ಅಭಿವೃದ್ಧಿ’ ಏನೆಂದರೆ ಶ್ರೀಮಂತಿಕೆಯನ್ನು ಹಾಗೂ ಪಟ್ಟಣದಲ್ಲಿರುವ ಎಲ್ಲಾ ಸೌಲಭ್ಯಗಳು ಹಳ್ಳಿಗಳಿಗೆ ತಲುಪಿದರೆ ಅದು ಅಭಿವೃದ್ಧಿ ಎಂದು ನಂಬಿದರೆ ತುಂಬಾ ಕಷ್ಟ. ಅಭಿವೃದ್ಧಿ ಎಂದರೆ ಜನರ, ನಾಗರಿಕರ ಸಾಮರ್ಥ್ಯವನ್ನು ಹೆಚ್ಚಿಸುವುದು, ಅವರನ್ನು ಸಬಲರನ್ನಾಗಿ ಮಾಡುವುದು. ಅವರಲ್ಲಿರುವ ಕೊಂಡುಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸಿದರೆ, ಆ ಸಾಮರ್ಥ್ಯದಿಂದ ಉಳಿದ ಎಲ್ಲಾ ಅಂಶಗಳನ್ನು ಅವರು ಪಡೆಯುತ್ತಾರೆ. ಆದ್ದರಿಂದ ಪಡೆಯುವ ಮೂಲ ‘ಹಕ್ಕಿ’ನ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೆಚ್ಚಿಸುವುದೇ ನಿಜವಾದ ಅಭಿವೃದ್ಧಿ.  

ಮೂಲ “ಸಾಮರ್ಥ್ಯ” ಶಕ್ತಿ ಹೆಚ್ಚಿಸುವುದು ಯಾವ ವಯಸ್ಸಿನಲ್ಲಿ ಆಗಬೇಕು ಅದು ಶಿಕ್ಷಣ, ಆರೋಗ್ಯ, ನೆಮ್ಮದಿ ಪಡೆದುಕೊಳ್ಳುವ ಸಾಮರ್ಥ್ಯ, ತಿಳುವಳಿಕೆ, ಜ್ಞಾನ, ಸಂಪರ್ಕ ಇತ್ಯಾದಿ. ಇದು 18 ದಾಟಿದ ಮೇಲೆ ನೀಡಿದರೆ, ಪಡೆದರೆ ಸಾಕೆ? ಸಾಧ್ಯವೇ ಇಲ್ಲ ಅವೆಲ್ಲವೂ ಮಕ್ಕಳಿದ್ದಾಗಲೇ ಬೇಕು. ಹಾಗಾದರೆ ಈಗ ಹೇಳಿ ‘ಅಭಿವೃದ್ಧಿ’ಯಲ್ಲಿ ಮಕ್ಕಳ ಹಕ್ಕುಗಳು ಎಷ್ಟು ಮಹತ್ವ ಪಡೆದಿವೆ. ಮಕ್ಕಳಿದ್ದಾಗ ಮಕ್ಕಳ ಹಕ್ಕುಗಳನ್ನು ಅನುಭವಿಸದೇ, ಸಿಗದೇ ಸಂಕಷ್ಠಕ್ಕೆ ಒಳಪಡಿಸಿ ದೊಡ್ಡವರಾದ ಮೇಲೆ ‘ಮಾನವ ಹಕ್ಕುಗಳು’ ‘ಮಹಿಳೆಯರ ಹಕ್ಕುಗಳು’ ‘ರೈತರ ಹಕ್ಕುಗಳು’ ‘ಕಾರ್ಮಿಕರ ಹಕ್ಕುಗಳು’ ‘ನಾಗರಿಕರ ಹಕ್ಕುಗಳು’ ‘ಉದ್ಯೋಗದಾತರ ಹಕ್ಕುಗಳು’ ಹೀಗೆ ಮಾತನಾಡುತ್ತಾ ಹೋದರೆ ಅಭಿವೃದ್ಧಿ ಸಾಧ್ಯವೇ? ಮಕ್ಕಳ ಹಕ್ಕುಗಳು ‘ಮಾನವ ಹಕ್ಕುಗಳೇ’ ಆಗಿವೆ. ಈಗ ನಾವು ಕಾರ್ಮಿಕರ, ಮಹಿಳೆಯರ ಹಕ್ಕುಗಳ ಬಗ್ಗೆ ಯಾಕೆ ಹೆಚ್ಚು ಮಾತನಾಡುವ ಸ್ಥಿತಿ ಬಂದಿದೆ. ಅವರು ಮಕ್ಕಳು ಆಗಿದ್ದಾಗ ಅವರ (ಮಕ್ಕಳ) ಹಕ್ಕುಗಳನ್ನು ಸರಿಯಾಗಿ ಅನುಭವಿಸದೆ ಸಂಕಷ್ಠಕ್ಕೆ, ದುರ್ಬಲತೆಗೆ, ತೊಂದರೆಗೆ ಒಳಗಾಗಿ ಬಾಲ್ಯಾವಸ್ಥೆ ಕಳೆದಿದ್ದಾರೆ. ಈಗ ಅವರಿಗೆಲ್ಲಾ ಮಾನವ ಹಕ್ಕು, ಮಹಿಳೆಯರ, ಕಾರ್ಮಿಕರ ಹಕ್ಕು ಎಂದು ಹೇಳುವ ದುರಂತದ ಸ್ಥಿತಿ ಬಂದಿದೆ.  ‘ಹಳ್ಳಿಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ’ ಮಾಡುತ್ತಾರೆ. ಯಾಕೆಂದರೆ ಅವರು ಚಿಕ್ಕವರಿದ್ದಾಗ ನಾವು ಅವರಿಗೆ ಶಿಕ್ಷಣ, ಹಕ್ಕುಗಳನ್ನು ನೀಡದೇ ಇದ್ದಿದ್ದಕ್ಕೆ ಈ ಸ್ಥಿತಿ ಬಂದಿದೆ. ಅದೇ ವಿದ್ಯಾವಂತರಿಗೆ ಕಾನೂನು ಕಾರ್ಯಾಗಾರ, ಸಂವಾದ, ಬಡವರಿಗೆ ಕಾನೂನು ಅರಿವು!, ಎಂತಹ ಸ್ಥಿತಿ ಅಲ್ವೇ? ಇದಕ್ಕೆಲ್ಲ ಪೂರಕವಾಗಿ 2015ರಲ್ಲಿ ಭಾರತ ಒಪ್ಪಿ ಸಹಿ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿಗಳಾದ 17 ಗುರಿಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ನೋಡಿದರೆ 9 ಗುರಿಗಳು ಮಕ್ಕಳಿಗೆ ಸಂಬಂಧಿಸಿದ್ದೇ ಆಗಿವೆ. ಅಂದರೆ ಜಗತ್ತು ತೀರ್ಮಾನಿಸಿದೆ ಮಕ್ಕಳ ಅಭಿವೃದ್ಧಿ ಆಗದ ಹೊರತು ಯಾವುದೇ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಕುಟುಂಬ ಮತ್ತು ಮನೆಯು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೂಡ ಮಕ್ಕಳಿಗೆ ಸಂಬಂದಿಸಿದ ಅಂಶಗಳೇ ಹೆಚ್ಚು ಕಾಣುತ್ತದೆ. ಅದಕ್ಕಾಗಿ 2000ದ ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ನಾವು ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಕಾರಣ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಗುರಿ, ಸೂಚ್ಯಂಕಗಳ ಸಾಧನೆಯಲ್ಲಿ ನಾವು ಸಾಧಿಸಿದ್ದು ಬಹಳ ಕಡಿಮೆ.   

ಯಾವ ಜಿಲ್ಲೆಯಲ್ಲಿ ಅಥವಾ ಯಾವ ರಾಜ್ಯದಲ್ಲಿ ಬಾಲ್ಯ ವಿವಾಹ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಇದೆಯೋ ಆ ಜಿಲ್ಲೆ, ರಾಜ್ಯ ಮಾನವ ಅಬಿವೃದ್ಧಿಯಲ್ಲಿ ಹಿಂದುಳಿದಿದೆ. ಉದಾಹರಣೆಗೆ ಜಿಡಿಪಿ ಜಾಸ್ತಿ ಇರುವ ರಾಜ್ಯ ಮಾನವ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜಿಡಿಪಿ ಕಡಿಮೆ ಇರುವ ರಾಜ್ಯ ಮಾನವ ಅಭಿವೃದ್ಧಿಯಲ್ಲಿ ಮುಂದಿದೆ. ಯಾಕೆಂದರೆ ಆ ರಾಜ್ಯದಲ್ಲಿ ಬಾಲ್ಯ ವಿವಾಹ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಕಡಿಮೆ ಇದೆ. (ಕರ್ನಾಟಕ ಮತ್ತು ಕೇರಳ).   

ಇವೆಲ್ಲಾ ಹೇಳುವಾಗ ನನಗೆ ಅರಿವಿದೆ, ಮಾನವ ಅಭಿವೃದ್ಧಿ ಕೇವಲ ಮಕ್ಕಳ ಅಭಿವೃದ್ಧಿ, ಮಕ್ಕಳ ಹಕ್ಕುಗಳಿಂದಲೇ ಅಂತ ಅಲ್ಲ. ಮಾನವ ಅಭಿವೃದ್ಧಿಗೆ ಇತರ ಹಲವಾರು ಅಂಶಗಳೂ ಕಾರಣ ಮತ್ತು ಕೊಡುಗೆ ಇದೆ. ಅವೆಲ್ಲ ಬೇಕು. ಆದರೆ ಮಕ್ಕಳ ಹಕ್ಕುಗಳ ನಿರ್ಲಕ್ಷ್ಯ ಮಾಡಿ ಆ ಅಂಶಗಳಿಗೆ ಪ್ರಾಧಾನ್ಯತೆ ನೀಡದೆ ಹೋದರೆ ಬೇರೆ ಇತರೆ ಯಾವುದೇ ಅಂಶಗಳ ಗುರಿ ತಲುಪಿದರೂ ಒಟ್ಟಾರೆಯಾಗಿ ಮಾನವ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳಿಗೆ ಆಧ್ಯತೆ ನೀಡಿ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡುವುದಷ್ಟೇ ನನ್ನ ಪ್ರಯತ್ನ. ಇತರ ಅನೇಕ ಅಂಶಗಳೂ ಅಷ್ಟೇ ಪ್ರಮುಖ ಎಂಬುದರ ಅರಿವು ನನಗಿದೆ. 

ಈ ಹಿನ್ನೆಲೆ ಮತ್ತು ಕಾರಣಕ್ಕಾಗಿ 1989ರಲ್ಲಿ ‘ವಿಶ್ವಸಂಸ್ಥೆ’ಯು ನವೆಂಬರ್ 20 ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಅಂಗೀಕಾರ ಮಾಡಿದೆ. 1992 ಡಿಸೆಂಬರ್ 11 ರಂದು ಭಾರತ ದೇಶವು ಕೂಡಾ  ಇದನ್ನು ಒಪ್ಪಿ ಸಹಿಮಾಡಿದೆ. 1992ರ ನಂತರ ನಮ್ಮ ದೇಶದ ಅನೇಕ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು “ಮಕ್ಕಳ ಹಕ್ಕುಗಳ” ಪರವಾಗಿ ತಿದ್ದುಪಡಿಗೊಂಡವು. ಮಕ್ಕಳ ಹಕ್ಕುಗಳು ದೇಶದ ಮತ್ತು ಮಾನವ ಅಭಿವವೃದ್ಧಿಗೆ ಹೆಚ್ಚಿನ ಕೂಡುಗೆ ನೀಡುತ್ತಿದೆ ಎನ್ನುವ ಕಾರಣಕ್ಕಾಗಿಯೇ ಅದರ ಪ್ರಾಮುಖ್ಯತೆಯನ್ನು ಅರಿತು ಈ “ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆ”ಗೆ 197 ರಾಷ್ಟ್ರಗಳು ಸಹಿ ಮಾಡಿವೆ. ಇದು ಜಗತ್ತಿನ ಅತ್ಯಂತ ಹೆಚ್ಚಿನ ರಾಷ್ಟ್ರಗಳು ಸಹಿ ಮಾಡಿದ ಅಂತರ್‍ರಾಷ್ಟ್ರೀಯ ಒಡಂಬಡಿಕೆ.

“ನಿಮ್ಮ ಮಕ್ಕಳನ್ನು ಬೇರೆಯವರು ಗೆಳೆಯರನ್ನಾಗಿಸಿಕೊಳ್ಳುವ ಮೊದಲು, ನೀವು ನಿಮ್ಮ ಮಕ್ಕಳಿಗೆ ಗೆಳೆಯರಾಗಿ” ಎಂಬ ಮಾತು, ಮಕ್ಕಳು ಕುಟುಂಬಕ್ಕೆ ಎಷ್ಟು ಮುಖ್ಯ ಎಂಬುದು ಎಷ್ಟು ಸತ್ಯವೋ,  ಅಷ್ಟೇ ಸತ್ಯ ಒಂದು ದೇಶದ ಅಭಿವೃದ್ಧಿಗೆ ಮಕ್ಕಳು, ಮಕ್ಕಳ ಅಭಿವೃದ್ಧಿ ಹಾಗೂ ಮಕ್ಕಳ ಹಕ್ಕುಗಳು ಅಷ್ಟೇ ಪ್ರಮುಖ ಮತ್ತು ಪ್ರಾಧಾನ್ಯ.

ಹಾಗಾದರೆ ಇಷ್ಟು ಪ್ರಮುಖ ಸ್ಥಾನ ಪಡೆದ ‘ಮಕ್ಕಳ ಹಕ್ಕುಗಳ’ ಬಗ್ಗೆ ನಮ್ಮ ಸಂವಿಧಾನ ಮತ್ತು 1992 ರ ಡಿಸೆಂಬರ್ 11 ರಂದು ಭಾರತ ಸಹಿ ಮಾಡಿದ, 1989 ನವೆಂಬರ್ 20 ರಂದು ವಿಶ್ವ ಸಂಸ್ಥೆಯಲ್ಲಿ ಅಂಗೀಕಾರವಾದ  “ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ” ಯಲ್ಲಿ ಏನೆಲ್ಲಾ ಹೇಳಿದೆ? ಆ ಪ್ರಮುಖ ಮಕ್ಕಳ ಹಕ್ಕುಗಳು ಯಾವುವು? ಎಂಬುದನ್ನು ಮುಂದಿನ ಲೇಖನದಲ್ಲಿ ನೋಡೋಣ.

ಈ ಅಂಕಣದ ಹಿಂದಿನ ಬರೆಹಗಳು: 
“ಹಕ್ಕಿನ” ಪರಿಭಾಷೆ ಮತ್ತು ಮಕ್ಕಳು
ಇಂದಿನ ಮಕ್ಕಳು: ಇಂದಿನ ಪ್ರಜೆಗಳು:

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...