ಜೆನ್ ದಾರ್ಶನಿಕತೆಯ ಸಿನಿಮಾ: ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’

Date: 12-10-2020

Location: ಬೆಂಗಳೂರು


`‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’ ಸಿನಿಮಾದಲ್ಲಿ ನಡೆಯುವ ಕತೆಯ ಘಟನೆಗಳಿಗೆಲ್ಲ ಕಾಡು ಬೆಟ್ಟ ಪರ್ವತಗಳಿಂದ ಸುತ್ತುವರೆದಿರುವ ಸುಂದರ ಸರೋವರ ಹಾಗೂ ಅದರಲ್ಲಿ ತೇಲುವ ಬೌದ್ಧ ವಿಹಾರ ಸಾಕ್ಷಿಯಾಗಿ ನಿಲ್ಲುತ್ತದೆ. ಇಡೀ ಸಿನಿಮಾದ ಕಥನವು ಈ ಜಾಗದಲ್ಲಿಯೇ ನಡೆಯುತ್ತದೆ. ಅಲ್ಲಿ ಹಿರಿಯ ಬೌದ್ಧ ಗುರುವೊಬ್ಬ ವಾಸವಾಗಿದ್ದಾನೆ. ಸನ್ಯಾಸಿಯಾಗಲು ತರಬೇತಿ ಪಡೆಯುತ್ತಿರುವ ಒಬ್ಬ ಬಾಲಕ ಅಲ್ಲಿದ್ದಾನೆ. ಈ ಕತೆಯನ್ನು ನಿಸರ್ಗದ ನಾಲ್ಕು ಋತುಗಳಿಗೆ ಅನುಗುಣವಾಗಿ ನಿರೂಪಿಸಲಾಗಿದೆ.' ಜಾಗತಿಕ ಸಿನಿಮಾ ಲೋಕದಲ್ಲಿ ಚಿರಪರಿಚಿತರಾಗಿರುವ ದಕ್ಷಿಣ ಕೊರಿಯಾದ ನಿದೇರ್ಶಕ ಕಿಮ್‌ ಕಿ-ಡುಕ್‌ ಅವರ ‘ಸ್ಪ್ರಿಂಗ್‌ ಸಮ್ಮರ್‌ ಫಾಲ್‌ ವಿಂಟರ್‌ ಅಂಡ್‌... ಸ್ಪ್ರಿಂಗ್‌’ ಸಿನಿಮಾದ ಕುರಿತು ನವಿಲನೋಟ ಅಂಕಣದಲ್ಲಿ ಪ್ರಾಧ್ಯಾಪಕ -ಲೇಖಕ ಡಾ. ಸುಭಾಷ್ ರಾಜಮಾನೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಜಾಗತಿಕ ಸಿನಿಮಾಲೋಕದಲ್ಲಿ ದಕ್ಷಿಣ ಕೋರಿಯಾದ ಕಿಮ್ ಕಿ-ಡುಕ್‍ನ ಹೆಸರು ಚಿರಪರಿತವಾಗಿದೆ. ಕಿ-ಡುಕ್ ತನ್ನ ದೇಶದ ಸಮಕಾಲೀನ ನಿರ್ದೇಶಕರಾದ ಹೊಂಗ್ ಸಂಗ್-ಸೂ ಹಾಗೂ ಲೀ ಚಾಂಗ್ ಡೊಂಗ್ ಅವರಂತಹ ಬುದ್ಧಿಶಾಲಿ ನಿರ್ದೇಶಕರಿಗಿಂತ ಬೇರೆ ಶೈಲಿಯಲ್ಲಿ ಸಿನಿಮಾಗಳನ್ನು ತಯಾರಿಸಿದವನು. ಮೇಲ್ನೋಟಕ್ಕೆ ಅತಿ ಸರಳವೆನ್ನಿಸುವ ಕತೆಗಳನ್ನು ಸಿದ್ಧಪಡಿಸಿಕೊಂಡು ಅವುಗಳಿಗೆ ಮಾಂತ್ರಿಕ ಸ್ಪರ್ಶವನ್ನು ನೀಡಿ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಹೆಚ್ಚು ಸಫಲನಾಗಿದ್ದಾನೆ. ಆದರೆ ಕಿ-ಡುಕ್‍ನ ಸಿನಿಮಾಗಳಲ್ಲಿ ಹಿಂಸೆ ಮತ್ತು ಕ್ರೌರ್ಯದ ಅತಿಯಾದ ವಿಜೃಂಭನೆಯೂ ಇರುವುದರಿಂದ ಆತ ಅಷ್ಟೇ ವಿವಾದಾತ್ಮಕ ನಿದೇಶಕನೆನಿಸಿದ್ದಾನೆ.

ಪರ್ವತಗಳಿಂದ ಆವೃತ್ತವಾದ ಸಣ್ಣ ಹಳ್ಳಿಯಲ್ಲೆ ಜನಿಸಿದ ಕಿ-ಡುಕ್ ಬಡತನದ ಕಾರಣಕ್ಕೆ ಉನ್ನತ ಶಿಕ್ಷಣದಿಂದ ವಂಚಿತನಾಗಬೇಕಾಯಿತು. ಶಾಲೆಯನ್ನು ತೊರೆದು ಕಾರ್ಖಾನೆಯಲ್ಲಿ ದುಡಿಯಬೇಕಾಯಿತು. ನಂತರ ಐದು ವರ್ಷಗಳ ಕಾಲ ಕೋರಿಯಾದ ಮಿಲಿಟರಿ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಅಭಿರುಚಿ ಹೊಂದಿದ್ದ ಕಿ-ಡುಕ್ 1990ರ ದಶಕದಲ್ಲಿ ಪ್ಯಾರಿಸ್‍ಗೆ ತೆರಳಿದ. ಹೊಟ್ಟೆಪಾಡಿಗಾಗಿ ಪ್ಯಾರಿಸ್‍ನ ಬೀದಿಗಳಲ್ಲಿ ತನ್ನ ಪೇಂಟಿಂಗ್‍ಗಳನ್ನು ಮಾರಾಟ ಮಾಡಿದ ಹಣದಲ್ಲಿ ಶುಲ್ಕವನ್ನು ಕಟ್ಟಿ ‘ಲಲಿತ ಕಲೆ’ಯನ್ನು (Fine Arts) ವ್ಯಾಸಂಗ ಮಾಡಿದ. ಕಿ-ಡುಕ್ ಅನುಭವಿಸಿದ ಇಂತಹ ವೈಯಕ್ತಿಕ ಕಷ್ಟಕಾರ್ಪಣ್ಯಗಳೇ ಆತನ ಸಿನಿಮಾಗಳಲ್ಲಿ ಬಡ ಮಧ್ಯಮ ವರ್ಗದ ಜನಸಾಮಾನ್ಯರು ಪಾತ್ರಗಳಾಗಿ ಬರಲು ಪ್ರೇರಣೆಯಾಗಿರಬಹುದು.

ಕಿ-ಡುಕ್ ಸಿನಿಮಾಗಳಿಗೆ ಚಿತ್ರಕತೆಗಳನ್ನು ಬರೆಯುವ ಮೂಲಕ ದೃಶ್ಯ ಮಾಧ್ಯಮದ ಜಗತ್ತಿಗೆ ಕಾಲಿಟ್ಟ. ಚಿತ್ರಕತೆ ಬರವಣಿಗೆಯ ಸ್ಪರ್ಧೆಯಲ್ಲಿ ವಿಜೇತನಾಗಿದ್ದರಿಂದ ಆತನಲ್ಲಿ ಸಿನಿಮಾ ನಿರ್ದೇಶಿಸುವ ಹಂಬಲ ಮೊಳೆಯಿತು. ಮೊದಲ ಸಿನಿಮಾ ‘ಎ ಕ್ರೊಕೊಡೈಲ್’ನ್ನು (1996) ನಿರ್ದೇಶಿಸಿದ. ಸರೋವರದ ನಡುವೆ ದೋಣಿ ನಡೆಸುವ ಬೆಸ್ತನಿಗೆ ಹುಡುಗಿಯೊಬ್ಬಳು ಸೂಳೆಯಾಗಿ ಅರ್ಪಿಸಿಕೊಂಡಿರುವ ಕತೆಯನ್ನು ‘ದಿ ಇಸ್ಲೆ’ದಲ್ಲಿ (2000) ನಿರೂಪಿಸಿದ. ಬಹುತೇಕವಾಗಿ ಮೌನದಲ್ಲಿಯೇ ಸಾಗುವ ಈ ಸಿನಿಮಾ ಕಿ-ಡುಕ್‍ನ ಸಿನಿಮಾ ಬದುಕಿಗೆ ತಿರುವನ್ನು ನೀಡಿತು. ಹಲವು ಸಿನಿಮಾಗಳನ್ನು ಮಾಡಿರುವ ಕಿ-ಡುಕ್‍ನಿಗೆ 2003ರಲ್ಲಿ ಬಿಡುಗಡೆಯಾದ ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’ ಎನ್ನುವ ಚಲನಚಿತ್ರವು ಜಾಗತಿಕವಾಗಿ ಗಮನ ಸೆಳೆಯಿತು. ಇದೊಂದು ಗಹನವಾದ ಬೌದ್ಧ ದಾರ್ಶನಿಕತೆಯನ್ನು ಹಾಗೂ ಸಾಂಕೇತಿಕತೆಯನ್ನು ಒಳಗೊಂಡಿರುವ ಅದ್ಭುತ ಸಿನಿಮಾ ಎಂದೇ ಹೆಸರಾಗಿದೆ.

‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’ ಸಿನಿಮಾದಲ್ಲಿ ನಡೆಯುವ ಕತೆಯ ಘಟನೆಗಳಿಗೆಲ್ಲ ಕಾಡು ಬೆಟ್ಟ ಪರ್ವತಗಳಿಂದ ಸುತ್ತುವರೆದಿರುವ ಸುಂದರ ಸರೋವರ ಹಾಗೂ ಅದರಲ್ಲಿ ತೇಲುವ ಬೌದ್ಧ ವಿಹಾರ ಸಾಕ್ಷಿಯಾಗಿ ನಿಲ್ಲುತ್ತದೆ. ಇಡೀ ಸಿನಿಮಾದ ಕಥನವು ಈ ಜಾಗದಲ್ಲಿಯೇ ನಡೆಯುತ್ತದೆ. ಅಲ್ಲಿ ಹಿರಿಯ ಬೌದ್ಧ ಗುರುವೊಬ್ಬ ವಾಸವಾಗಿದ್ದಾನೆ. ಸನ್ಯಾಸಿಯಾಗಲು ತರಬೇತಿ ಪಡೆಯುತ್ತಿರುವ ಒಬ್ಬ ಬಾಲಕ ಅಲ್ಲಿದ್ದಾನೆ. ಈ ಕತೆಯನ್ನು ನಿಸರ್ಗದ ನಾಲ್ಕು ಋತುಗಳಿಗೆ ಅನುಗುಣವಾಗಿ ನಿರೂಪಿಸಲಾಗಿದೆ. ಬೌದ್ಧ ಸಂನ್ಯಾಸಿಯಾಗುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಈ ನಾಲ್ಕು ಋತುಗಳಿಗೆ ಸಮೀಕರಿಸಿಕೊಂಡು ಈ ಚಿತ್ರಕತೆಯನ್ನು ಹೆಣೆಯಲಾಗಿದೆ. ಸರೋವರದಿಂದ ಆಚೆಗೆ ಹೋಗಲು ಮತ್ತು ಬರಲು ಒಂದು ಕಟ್ಟಿಗೆಯ ಹಲಗೆಯಿಂದ ನಿರ್ಮಿಸಲಾದ ಒಂದು ಬಾಗಿಲಿದೆ. ಹೊರ ಜಗತ್ತಿಗೆ ಈ ಬಾಗಿಲು ಮಾತ್ರವೇ ಸಂಪರ್ಕವನ್ನು ಕಲ್ಪಿಸುವ ಏಕೈಕ ದಾರಿಯಾಗಿದೆ. ಈ ಬಾಗಿಲು ತೆರೆದುಕೊಳ್ಳುವುದರೊಂದಿಗೆ ಪ್ರತಿಯೊಂದು ಋತುವಿನಲ್ಲಿ ನಡೆಯುವ, ಸಂನ್ಯಾಸಿಯ ಬದುಕಿನ ಬೇರೆಬೇರೆ ಘಟ್ಟಗಳ ಕತೆಯು ಕೂಡ ಬಿಚ್ಚಿಕೊಳ್ಳುತ್ತ ಹೋಗುವ ತಂತ್ರವು ಈ ಸಿನಿಮಾದಲ್ಲಿದೆ.

‘ಸ್ಪ್ರಿಂಗ್’ ಎಂಬ ಮೊದಲ ಋತುವಿನಲ್ಲಿ ನಡೆಯುವ ಘಟನೆಗಳಿಗೆ ಸಿನಿಮಾದಲ್ಲಿ ತುಂಬ ಮಹತ್ವದ ಸ್ಥಾನವಿದೆ. ವಸಂತ ಕಾಲದಲ್ಲಿ ಎಲ್ಲೆಲ್ಲೂ ಹಸಿರಾಗಿ ಕಾಣುವ ಗಿಡ ಬಳ್ಳಿಗಳು ಹಾಗೂ ಹೂಗಳಿಂದ ಕಂಗೊಳಿಸುವ ಸರೋವರದ ವಾತಾವರಣವು ನಯನ ಮನೋವರವಾಗಿದೆ. ಸಹಜವಾಗಿಯೇ ಎಳೆಯ ಹುಡುಗನ ಕಣ್ಣಲ್ಲಿ ಮುಗ್ಧತೆ, ಉತ್ಸಾಹ, ಕುತೂಹಲವನ್ನು ಕಾಣುತ್ತೇವೆ. ಒಂದು ದಿನ ಹಿರಿಯ ಬೌದ್ಧ ಗುರು ಹಾಗೂ ಹುಡುಗ ಔಷಧಿ ತಯಾರಿಸಲು ಸಸ್ಯದ ಎಲೆಗಳನ್ನು ತರಲು ಹೊರಡುತ್ತಾರೆ. ಇನ್ನೊಂದು ದಿನ ಆ ಹುಡುಗ ಒಬ್ಬಂಟಿಗನಾಗಿಯೇ ಹೋಗುತ್ತಾನೆ ನೀರಲ್ಲಿರುವ ಜೀವಿಗಳೊಂದಿಗೆ ಆಟವಾಡಿ ಸಂತಸಪಡುಸುತ್ತಾನೆ. ಒಂದು ಮೀನನ್ನು ಎತ್ತಿಕೊಂಡು ಅದಕ್ಕೆ ದಾರದಿಂದ ಕಲ್ಲನ್ನು ಕಟ್ಟಿ ನೀರಿಗೆ ಬೀಡುತ್ತಾನೆ; ಒಂದು ಕಪ್ಪೆಯ ಕಾಲುಗಳಿಗೆ ದಾರದಿಂದ ಕಲ್ಲನ್ನು ಬಿಗಿಯುತ್ತಾನೆ. ಅವು ಈಜಲಾಗದೇ ಒದ್ದಾಡುವುದನ್ನು ಕಂಡು ಹುಡುಗ ಕೇಕೆಹಾಕಿ ನಗುತ್ತಾನೆ. ಅಲ್ಲೇ ತನ್ನ ಪಾಡಿಗಿದ್ದ ಹಾವನ್ನು ಎತ್ತಿಕೊಂಡು ದಾರದಿಂದ ಅದಕ್ಕೂ ಒಂದು ಕಲ್ಲನ್ನು ಕಟ್ಟುತ್ತಾನೆ. ಅದು ಚಲಿಸಲು ಕಷ್ಟ ಪಡುವುದನ್ನು ಕಂಡು ಮತ್ತೇ ಸಂತಸದಿಂದ ನಲಿದಾಡುತ್ತಾನೆ. ಇದನ್ನೆಲ್ಲ ಆತನ ಹಿರಿಯ ಬೌದ್ಧ ಗುರು ಒಂದು ಬಂಡೆಯ ಮರೆಯಲ್ಲಿ ಇಣುಕಿ ನೋಡುತ್ತಿರುತ್ತಾನೆ.

ಹುಡುಗ ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಏಳಲಾಗದೆ ಒದ್ದಾಡುತ್ತಾನೆ. ಯಾಕೆಂದರೆ ಹುಡುಗ ರಾತ್ರಿ ಮಲಗಿದ್ದಾಗ, ಬೌದ್ಧ ಗುರು ಆತನ ಬೆನ್ನಿಗೆ ದೊಡ್ಡ ಕಲ್ಲಿನ ಗುಂಡನ್ನು ಕಟ್ಟಿರುತ್ತಾನೆ. ಹುಡುಗ ಸಾವರಿಸಿಕೊಂಡು ಭಾರವಾದ ಹೆಜ್ಜೆಗಳನ್ನು ಹಾಕುತ್ತ ತನ್ನ ಗುರುವಿನ ಬಳಿ ಬಂದು ನಡೆದಾಡಲು ಕಷ್ಟವಾಗುತ್ತಿದೆ ಎನ್ನುತ್ತಾನೆ. ಆಗ ಬೌದ್ಧ ಗುರು ಆ ಮೂರು ಜೀವಿಗಳಿಗೆ ಕಲ್ಲನ್ನು ಕಟ್ಟಿದೆಯಲ್ಲ, ಅವು ಹೇಗೆ ಬದುಕಬೇಕು? ಅವು ನಿನಗೆ ಏನಾದರು ತೊಂದರೆಯನ್ನು ನೀಡಿದ್ದವೇ? ಎಂದು ಪ್ರಶ್ನಿಸುತ್ತಾನೆ. ಈಗಲೇ ಹೋಗಿ ಆ ಕಲ್ಲುಗಳನ್ನು ಬಿಚ್ಚಿಹಾಕಬೇಕು; ಒಂದು ವೇಳೆ ಅವು ಬದುಕಿರದಿದ್ದರೆ ನಿನ್ನ ಬೆನ್ನಿನ ಗುಂಡನ್ನು ಬಿಚ್ಚುವುದಿಲ್ಲ ಎಂದು ಹೇಳುತ್ತಾನೆ. ಹುಡುಗ ತನ್ನ ಭಾರವಾದ ಬೆನ್ನಿನೊಂದಿಗೆ ಹೇಗೋ ನಿಧಾನವಾಗಿ ಅವುಗಳಲ್ಲಿಗೆ ಹೋಗುತ್ತಾನೆ. ಬದುಕಲಾಗದೆ ಸಾಯಲಾಗದೆ ಮಿಸುಕಾಡುತ್ತಿದ್ದ ಮೀನು ಹಾಗೂ ಕಪ್ಪೆಗಳಿಗೆ ಕಟ್ಟಿರುವ ಕಲ್ಲನ್ನು ಬಿಚ್ಚುತ್ತಾನೆ; ಅವು ಪ್ರಾಣಾಪಾಯದಿಂದ ಪಾರಾಗುತ್ತವೆ. ಆದರೆ ಹಾವು ಮಾತ್ರ ವಿಲವಿಲ ಒದ್ದಾಡಿ ನೆತ್ತರಲ್ಲಿ ಬಿದ್ದಿರುತ್ತದೆ. ಅದು ಚಲಿಸದೆ ಬಿದ್ದುಕೊಂಡಿರುವುದನ್ನು ಕಂಡ ಹುಡುಗ ಗೋಳೋ ಎಂದು ಬಿಕ್ಕಿಬಿಕ್ಕಿ ಅಳುತ್ತಾನೆ. ಹುಡುಗನ ಅಂತರಂಗದಿಂದ ಹೊಮ್ಮುವ ದುಃಖವನ್ನು ಬೌದ್ಧ ಗುರು ಬಂಡೆಯ ಮರೆಯಲ್ಲಿ ನಿಂತು ನೋಡುತ್ತಾನೆ.

ಈ ಸಿನಿಮಾ ಮನುಷ್ಯನಲ್ಲಿ ಹುಟ್ಟಿನಿಂದಲೇ ಅಂತರ್ಗತವಾಗಿರುವ ಹಿಂಸೆ ಹಾಗೂ ಕ್ರೌರ್ಯವನ್ನು ನಿರಾಕರಿಸುತ್ತದೆ. ತಮ್ಮ ಪಾಡಿಗೆ ತಾವು ಬದುಕುವ ಜೀವಿಗಳಿಗೆ ಹಿಂಸೆಯನ್ನು ನೀಡಿ ಸಂತೋಷಿಸುವುದು ಮನುಷ್ಯನ ಮೂಲಭೂತ ಪ್ರವೃತ್ತಿಯೇ? ಮುಗ್ಧತೆಯಲ್ಲೇ ಅಡಗಿರುವ ತಣ್ಣನೆಯ ಕ್ರೌರ್ಯವನ್ನು ಸಿನಿಮಾ ಸರಳವಾದ ಘಟನೆಗಳ ಮೂಲಕ ಚಿತ್ರಿಸುತ್ತದೆ. ಈ ಹುಡುಗನ ಪ್ರಜ್ಞೆ ನಿಜವಾಗಿಯೂ ಬದಲಾಗಿ ಆತ ಜೀವಪರ ಮತ್ತು ಮಾನವೀಯ ಮೌಲ್ಯಗಳನ್ನು ಪಡೆಯುತ್ತಾನೆಯೇ? ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತದೆ. ನಿಸರ್ಗದ ಚರಾಚರಗಳೆಲ್ಲವೂ ನಿರಂತರವಾದ ಬದಲಾವಣೆಗೆ ಒಳಪಡುತ್ತಲೇ ಇರುತ್ತವೆ. ಈ ಹುಡುಗನ ದೇಹ ಹಾಗೂ ಮನಸ್ಸು ಕೂಡ ಬೆಳೆಯುತ್ತ ನಿಸರ್ಗದಂತೆಯೇ ಬದಲಾಗುತ್ತಲೇ ಸಾಗುತ್ತದೆ. ಬೌದ್ಧ ಧರ್ಮವು ಮತ್ತೊಂದು ಜೀವಿಗೆ ಹಿಂಸೆ ನಿಡುವುದನ್ನೇ ಒಪ್ಪುವುದಿಲ್ಲ. ಬೌದ್ಧ ಜೆನ್ ಗುರುಗಳ ಬೋಧನೆ ಯಾವುದೇ ಕೃತಿಗಳನ್ನು ಆಧರಿಸಿರುವುದಿಲ್ಲ. ಅವರ ಬೋಧನೆ ಪಕ್ಕಾ ಪ್ರ್ಯಾಕ್ಟಿಕಲ್ ಆಗಿರುತ್ತದೆ. ಝೆನ್ ಕತೆಗಳಂತು ಬೌದ್ಧ ಧರ್ಮದ ತಾತ್ವಿಕ ತಿರುಳನ್ನು ಅದ್ಭುತವಾಗಿ ಮನವರಿಕೆ ಮಾಡಿಕೊಡುತ್ತವೆ. ಇದರ ಪ್ರತಿಫಲನದಂತೆ ಕಾಣುವ ಈ ಸಿನಿಮಾ ಝೆನ್ ಕತೆಗಳನ್ನು ಓದಿದ ಅನುಭವವನ್ನು ನೀಡುತ್ತದೆ.

ಸಿನಿಮಾದ ಎರಡನೆಯ ಹಂತವಾದ ‘ಸಮ್ಮರ್’ ಋತುವಿನಲ್ಲಿ ಹದಿಹರೆಯಕ್ಕೆ ಕಾಲಿಡುವ ಈ ಹುಡುಗ ಅಲ್ಲಿಯ ಬೌದ್ಧ ವಿಹಾರಕ್ಕೆ ಚಿಕಿತ್ಸೆಗೆಂದು ಬರುವ ಸುಂದರವಾದ ಹುಡುಗಿಯಿಂದ ಆಕರ್ಷಿತನಾಗಿ ಆಕೆಯಿಂದ ಲೈಂಗಿಕ ಅನುಭವವನ್ನೂ ಪಡೆಯುತ್ತಾನೆ. ಇದನ್ನು ಗಮನಿಸಿದ ಗುರು ಆ ಹುಡುಗನಿಗೆ “ಕಾಮಾಸಕ್ತಿಯು ಭೋಗಲಾಲಸೆಗೆ ದೂಡುತ್ತದೆ ಮತ್ತು ಅದು ಎಲ್ಲ ಬಗೆಯ ತಾಪತ್ರಯ ಹಾಗೂ ಮಾನಸಿಕ ನೆಮ್ಮದಿಯನ್ನು ಕದಡಲು ಕಾರಣವಾಗುತ್ತದೆ” ಎಂಬ ಎಚ್ಚರಿಕೆಯನ್ನು ನೀಡುತ್ತಾನೆ. ಆದರೆ ಹುಡುಗನಲ್ಲಿರುವ ಕಾಮಾಸಕ್ತಿಯ ಮೂಲಭೂತ ಪ್ರವೃತ್ತಿ ಇಂತಹ ಬೋಧನೆಯನ್ನು ಕೇಳಿಸಿಕೊಳ್ಳುವುದಿಲ್ಲ. ಹುಡುಗ ಅಲ್ಲಿಯ ಬುದ್ಧನ ವಿಗ್ರಹವನ್ನು ಎತ್ತಿಕೊಂಡು ಆ ವಿಹಾರವನ್ನು ತೊರೆಯುತ್ತಾನೆ. ಆ ಹುಡುಗಿಯನ್ನು ಅರಸಿಕೊಂಡು ಹೊರಟು ಹೋಗುತ್ತಾನೆ.

ಸಿನಿಮಾ ನಿರೂಪನೆಯ ಮೂರನೆಯ ಹಂತವಾದ ‘ಫಾಲ್’ ಎಂದರೆ ಶರತ್ಕಾಲದ ಋತುವಿನಲ್ಲಿ ಆ ಹುಡುಗ ಬೆಳೆದು ದೊಡ್ಡವನಾಗಿ, ಸಿಟ್ಟು, ಸೇಡು, ಅಸಹನೆಗಳಿಂದ ಕುದಿಯುವ ಯುವಕನಾಗಿ ಆ ಸರೋವದ ವಿಹಾರಕ್ಕೆ ಪುನಃ ಮರಳುತ್ತಾನೆ. ಗುರು ಆತನಿಗೆ ಏನನ್ನೂ ಕೇಳುವುದಿಲ್ಲ. ಅವನನ್ನು ಸುಡುತ್ತಿರುವ ಬೆಂಕಿಯಂತಹ ಕ್ರೋಧವು ತಣ್ಣಗಾಗಲು ಗುರು ಬೌದ್ಧ ಶ್ಲೋಕಗಳನ್ನು ಮರದ ಹಲಗೆಯ ಮೇಲೆ ಚಾಕುವಿನಿಂದ ಕೆತ್ತಲು ಸೂಚಿಸುತ್ತಾನೆ. ಪೊಲೀಸರು ಅಲ್ಲಿಗೆ ಬಂದಾಗ ಗುರು ಆತನ ಕೆಲಸ ಮುಗಿಯುವವರೆಗೆ ಕಾಯಲು ಹೇಳುತ್ತಾನೆ. ಯುವಕನ ಸಿಟ್ಟೆಲ್ಲ ಮಾಯವಾಗುತ್ತದೆ. ಆ ಕೆತ್ತನೆಗಳ ಮೇಲೆ ಶಾಂತಿಯನ್ನು ಸಂಕೇತಿಸುವ ಕಿತ್ತಳೆ, ಹಸಿರು, ನೀಲಿ ಮತ್ತು ಕಂದು ಬಣ್ಣಗಳನ್ನು ಬಳಿಯಲಾಗುತ್ತದೆ. ಪೊಲೀಸರು ಯುವಕನನ್ನು ಬಂಧಿಸಿ ಒಯ್ಯುತ್ತಾರೆ. ಹಿರಿಯ ಬೌದ್ಧ ಗುರು ಪಶ್ಚಾತ್ತಾಪದಿಂದ ದೇಹವನ್ನು ದಂಡಿಸಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಾನೆ. ಈಗ ಆ ವಿಹಾರದಲ್ಲಿ ಹಾವು ಆತನ ಸ್ಥಾನದಲ್ಲಿ ವಾಸವಾಗುತ್ತದೆ.

ನಾಲ್ಕನೆಯ ಹಂತವಾದ ‘ವಿಂಟರ್’ ಋತುವಿನಲ್ಲಿ ಹಲವು ವರ್ಷಗಳ ನಂತರ ಅದೇ ಯುವಕ ಈಗ ಮಧ್ಯೆ ವಯಸ್ಕನಾಗಿ ಮತ್ತೇ ಅದೇ ವಿಹಾರಕ್ಕೆ ವಾಪಸ್ಸಾತ್ತಾನೆ. ಈತ ಹೆಚ್ಚು ಪ್ರಬುದ್ಧ ಮತ್ತು ಶಾಂತಿಯೇ ಮೈತಳೆದಂತೆ ಕಾಣುತ್ತಾನೆ. ಈಗ ಸರೋವರದ ನೀರೆಲ್ಲ ಹಿಮಗಟ್ಟಿ ಹೋಗಿರುತ್ತದೆ. ಒಬ್ಬ ಮಹಿಳೆ ತನ್ನ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಒಂದು ಪುಟ್ಟ ಮಗುವಿನೊಂದಿಗೆ ವಿಹಾರಕ್ಕೆ ಬರುತ್ತಾಳೆ. ಮಗುವನ್ನು ಅಲ್ಲೆ ಬಿಟ್ಟು ಹೊರಡುವಾಗ ಹಿಮಗಡ್ಡೆಯಲ್ಲಿ ಕಾಲು ಜಾರಿ ಜೀವಂತವಾಗಿ ಮುಳುಗಿ ಹೋಗುತ್ತಾಳೆ. ಈ ಮಗುವಿಗೆ ಈತನೇ ಈಗ ಬೌದ್ಧ ಗುರುವಾಗುತ್ತಾನೆ. ಗುರುವಿನ ಸ್ಥಾನದಲ್ಲಿರುವ ವ್ಯಕ್ತಿಯು ಬಾಲ್ಯದಲ್ಲಿ ಬೆನ್ನಿಗೆ ಕಟ್ಟಲಾಗಿದ್ದ ಕಲ್ಲಿನ ಗುಂಡನ್ನು ಈಗ ಮತ್ತೆ ತನ್ನ ಸೊಂಟಕ್ಕೆ ಹಗ್ಗದಿಂದ ಕಟ್ಟಿಕೊಂಡು ಕೈಯಲ್ಲಿ ಬುದ್ಧನ ವಿಗ್ರಹವನ್ನು ಎತ್ತಿಕೊಂಡು ಬೆಟ್ಟವನ್ನು ಹತ್ತುತ್ತಾನೆ. ಬೌದ್ಧ ದಾರ್ಶನಿಕತೆಯನ್ನು ಸಾರುವ ಹಿನ್ನೆಲೆ ಹಾಡೊಂದು ಇಂಪಾಗಿ ಕೇಳಿ ಬರುತ್ತದೆ. ಬಾಲ್ಯದಲ್ಲಿ ಕಪ್ಪೆ, ಹಾವು, ಮೀನುಗಳಿಗೆ ದಾರದಿಂದ ಕಲ್ಲುಗಳನ್ನು ಕಟ್ಟಿದ್ದವನು, ಈಗ ತನ್ನೆಲ್ಲ ಪಾಪ ಕೃತ್ಯೆಗಳಿಗೆ ಪ್ರಾಯಶ್ಚಿತವೆಂಬಂತೆ ದೊಡ್ಡ ಕಲ್ಲಿನ ಗುಂಡನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು, ಅದನ್ನು ಎಳೆಯುತ್ತಲೇ ಬೆಟ್ಟವನ್ನು ಹತ್ತುತ್ತಾನೆ. ಬೆಟ್ಟ ಹತ್ತುವಾಗ ಮತ್ತೇ ಮತ್ತೇ ಮುಗ್ಗರಿಸುತ್ತಾನೆ. ಅಂತಿಮವಾಗಿ ಬೆಟ್ಟದ ತುದಿಯನ್ನು ತಲುಪಿ, ಅಲ್ಲಿ ಬುದ್ಧನಂತೆ ಧ್ಯಾನದ ಭಂಗಿಯಲ್ಲಿ ಕೂರುತ್ತಾನೆ. ಈಗ ಗುರು ಎಲ್ಲ ಬಗೆಯ ಮಾನಸಿಕ ಕ್ಲೇಶಗಳಿಂದ ಹಾಗೂ ಬಂಧನಗಳಿಂದ ಬಿಡುಗಡೆಯಾಗಿರುವಂತೆ ಕಾಣುತ್ತಾನೆ. ಸಿನಿಮಾದ ಈ ಅಂತಿಮ ದೃಶ್ಯವಂತು ಎಂತಹ ಮನಸ್ಸನ್ನು ಕೂಡ ಕಲಕಿಬಿಡುತ್ತದೆ.

ಕಿಮ್ ಕಿ-ಡುಕ್ ಈ ಸಿನಿಮಾದಲ್ಲಿ ತನ್ನ ಅತ್ಯುನ್ನತವಾದ ಕಲಾತ್ಮಕತೆಯನ್ನು ಮೆರೆದಿದ್ದಾನೆ. ಸಿನಿಮಾದ ಪ್ರತಿಯೊಂದು ಫ್ರೇಮುಗಳು ಸಹ ಪೇಂಟಿಂಗ್‍ಗಳಾಗಿ ಗೋಚರಿಸುತ್ತವೆ. ಈ ಸಿನಿಮಾದಲ್ಲಿ ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಹಾಗೂ ಅವುಗಳ ಪರಿಣಾಮಗಳನ್ನು ನಿಧಾನ ಗತಿಯಲ್ಲಿ ತೋರಿಸಲಾಗಿದೆ. ಒಬ್ಬನೇ ವ್ಯಕ್ತಿಯ ಬದುಕಿನ ನಾಲ್ಕು ಹಂತಗಳನ್ನು ಚಿತ್ರಿಸಲು ನಾಲ್ಕು ಜನ ಬೇರೆ ಬೇರೆ ಕಲಾವಿದರನ್ನೇ ಬಳಸಲಾಗಿದೆ. ಅಂತಿಮ ಘಟ್ಟದ ಹಂತದಲ್ಲಿ ಸ್ವತಃ ಕಿಮ ಕಿ-ಡುಕ್‍ನೇ ಪಾತ್ರವನ್ನು ನಿರ್ವಹಿಸಿದ್ದಾನೆ. ಇದರ ನಾಲ್ಕು ಘಟ್ಟಗಳಲ್ಲಿ ನಾಯಿ, ಬೆಕ್ಕು, ಆಮೆ, ಹಾವು ಮೊದಲಾದ ಜೀವಿಗಳನ್ನು ಬದುಕಿನ ಹಲವು ಹಂತಗಳನ್ನು ಸಂಕೇತಿಸಲು ಬಳಸಲಾಗಿದೆ. ಇದೊಂದು ಪೂರ್ಣ ಪ್ರಮಾಣದ ಬೌದ್ಧ ಚಿಂತನೆಯನ್ನು ಒಳಗೊಂಡಿರುವ ಸಿನಿಮಾ. ಜೀವನವನ್ನು ಹಲವು ಆಯಾಮಗಳಿಂದ ಬಗೆದು ನೋಡುವ ಈ ಸಿನಿಮಾ ಅತ್ಯಂತ ಸರಳವಾದ ನಿರೂಪಣೆಯಿಂದ ಮನಸ್ಸನ್ನು ಪೂರ್ಣವಾಗಿ ಆವರಿಸಿಕೊಳ್ಳುತ್ತದೆ.

ಬೌದ್ಧ ಧರ್ಮ ಹಾಗೂ ಝೆನ್ ಕುರಿತು ಅನೇಕ ಚಲನಚಿತ್ರಗಳು ತಯಾರಾಗಿವೆ. ಕೋರಿಯಾದವನೇ ಆದ ಬೈ ಯಂಗ್ ಕ್ಯೂನ್ ಎಂಬ ನಿರ್ದೇಶಕನ ‘ವೈ ಹ್ಯಾಸ್ ಬೋಧಿ ಧರ್ಮ ಲೆಪ್ಟ್ ಫಾರ್ ದಿ ಈಸ್ಟ್?’ (1989) ಚಲನಚಿತ್ರವು ಬೌದ್ಧ ಧರ್ಮದ ಆಶಯವನ್ನು ಅನೇಕ ಸಂಕೇತ ಮತ್ತು ರೂಪಕಗಳನ್ನು ಬಳಸಿಕೊಂಡು ನಿರೂಪಿತವಾಗಿರುವ ಮಹತ್ವದ ಸಿನಿಮಾ. 2001ರಲ್ಲಿ ಬಿಡುಗಡೆಯಾದ ಪಾನ್ ನಳಿನ್ ಅವರ ‘ಸಂಸಾರ್’ ಎನ್ನುವ ಟಿಬೇಟಿಯನ್ ಭಾಷೆಯ ಚಲನಚಿತ್ರವು ಲಢಾಕ್‍ನಲ್ಲಿ ನಡೆಯುವ ಯುವ ಬೌದ್ಧ ಸನ್ಯಾಸಿಯ ಕತೆಯಾಗಿದೆ. ಇಡೀ ಕತೆ ಲಢಾಕನ ಎತ್ತರದ ಹಾಗೂ ಸುಂದರ ಬೆಟ್ಟ ಕಣಿವೆ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಕಿ-ಡುಕ್‍ನ ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’ ಚಿತ್ರದಲ್ಲಿನ ಹದಿಹರೆಯದ ಯುವಕನಂತೆ ‘ಸಂಸಾರ್’ದಲ್ಲಿನ ಬೌದ್ಧ ಸಂನ್ಯಾಸಿ ಕೂಡ ಹುಡುಗಿಯ ಮೋಹಕ್ಕೆ ಬೀಳುತ್ತಾನೆ. ಅಂತಿಮ ದೃಶ್ಯದಲ್ಲಿ ಸಿದ್ಧಾರ್ಥನಂತೆ ಈತನು ತನ್ನ ಹೆಂಡತಿ ಮತ್ತು ಮಗುವನ್ನು ತೊರೆದು ಸಂನ್ಯಾಸಿಯಾಗಲು ನಡೆದುಕೊಂಡು ಹೋಗುತ್ತಿರುತ್ತಾನೆ. ಆತನ ಹೆಂಡತಿ ಅವನ ದಾರಿಗೆ ಹಲವು ಪ್ರಶ್ನೆಗಳೊಂದಿಗೆ ಎದುರುಗೊಳ್ಳುತ್ತಾಳೆ. ಹೀಗೆ ಕೊನೆಯಾಗುವ ‘ಸಂಸಾರ್’ ಚಲನಚಿತ್ರವು ಬುದ್ಧನ ಜೀವನವನ್ನು ಪುನರ್ ಕಟ್ಟಿಕೊಡುತ್ತದೆ. ಕಿಮ್ ಕಿ-ಡುಕ್‍ನ ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’ ಸಿನಿಮಾದಂತೆ ‘ಸಂಸಾರ್’ ಕೂಡ ಬೌದ್ಧ ಹಿನ್ನೆಲೆಯಲ್ಲಿ ಬದುಕಿನ ಉದ್ದೇಶ ಮತ್ತು ಅರ್ಥಗಳನ್ನು ಶೋಧಿಸುವ ಪ್ರಮುಖ ಚಿತ್ರವಾಗಿದೆ. ಆದರೆ ಕಿ-ಡುಕ್‍ನ ಸಿನಿಮಾ ಎಷ್ಟೋ ದಿನಗಳ ನಂತರದಲ್ಲಿಯು ನೆನಪಾಗಿ ಕಾಡದೇ ಇರುವುದಿಲ್ಲ.

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...