ಕನ್ನಡ ಭಾಷೆಯ ರಚನೆ ಮತ್ತು ಬಳಕೆಯನ್ನು ಕುರಿತ ಪರಿಚಯಾತ್ಮಕ ಕೃತಿ...


ಭಾಷೆ ಎಂದರೇನು? ವ್ಯಾಕರಣ ಎಂದರೇನು? ಪ್ರಾಚೀನ ಕನ್ನಡ ವ್ಯಾಕರಣಗಳು ಮತ್ತು ಅವುಗಳ ವಿಧಾನಗಳು ಯಾವವು? ಕನ್ನಡದ ಧ್ವನಿ ವ್ಯವಸ್ಥೆ ಮತ್ತು ಕನ್ನಡ ಪದರಚನೆಯ ವಿಶೇಷತೆಗಳೇನು? ವಾಕ್ಯರಚನೆಯ ವಿಧಾನಗಳು ಯಾವವು? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಲೇಖಕ ಕೃಷ್ಣ ಪರಮೇಶ್ವರ ಭಟ್ (ಕೆ.ಪಿ.ಭಟ್) ಅವರು ಬರೆದಿರುವ ಕನ್ನಡ ಭಾಷೆ : ರಚನೆ ಮತ್ತು ಬಳಕೆ ಕೃತಿಯಲ್ಲಿನ ಲೇಖಕರ ಮಾತು ಹಾಗೂ ಆಯ್ದ ಭಾಗ ನಿಮ್ಮ ಓದಿಗಾಗಿ..

ಪದವಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಕನ್ನಡ ಭಾಷೆಯ ರಚನೆ ಮತ್ತು ಬಳಕೆಯನ್ನು ಕುರಿತಂತೆ ಪರಿಚಯಾತ್ಮಕವಾಗಿ ನಿರೂಪಿಸುವ ಕೃತಿಯೊಂದನ್ನು ರಚಿಸಿಕೊಡುವಂತೆ ಬೆಂಗಳೂರು ವಿಶ್ವವಿದ್ಯಾನಿಲಯವು ಕೋರಿತ್ತು. ಪರಿಣಾಮ : ವಹಿಸಿಕೊಂಡ ಕಾರ್ಯವನ್ನು ಒಪ್ಪಿಕೊಂಡು ಸೀಮಿತ ಅವಧಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಕನ್ನಡ: ರಚನೆ ಮತ್ತು ಬಳಕೆ ಎಂಬ ಕೃತಿಯನ್ನು ಹೊರತರಲಾಯಿತು. ಕೃತಿಯ ಉದ್ದೇಶ ಸೀಮಿತವಾದುದು ಎಂದು ಬೇರೆ ಹೇಳಬೇಕಿಲ್ಲ. ಇದರಲ್ಲಿ ಕನ್ನಡ ವ್ಯಾಕರಣ ಪರಂಪರೆಯ ಹಿನ್ನೆಲೆ, ಪ್ರಾದೇಶಿಕ ವೈವಿಧ್ಯಗಳ ಪರಿಚಯಗಳನ್ನು ಸೇರಿಸಲಾಗಿತ್ತು. ಬಳಕೆಗೆ ಸಂಬಂಧಿಸಿದಂತೆ ಸಮೂಹ ಮಾಧ್ಯಮದ ಭಾಷೆ, ಆಡಳಿತ ಭಾಷೆ ಇವುಗಳಿಗೆ ಸಂಬಂಧಿಸಿದಂತೆಯೂ ಒಂದಿಷ್ಟು ಪ್ರಾಥಮಿಕ ಮಾಹಿತಿಯನ್ನು ಒದಗಿಸಲಾಗಿತ್ತು. ಒಟ್ಟಿನಲ್ಲಿ ಹೇಳುವುದಾದರೆ ವಿಷಯಮಿಶ್ರಿತ ಕೃತಿಯಾಗಿತ್ತು.

ಅಲ್ಲಿಯ ಕೆಲವು ಭಾಗಗಳನ್ನು ತೆಗೆದುಹಾಕಿ, ಲಿಪಿ-ಬರೆಹಗಳನ್ನು ಕುರಿತ ಒಂದಿಷ್ಟು ಮಾಹಿತಿಗಳನ್ನು ಸೇರಿಸಿ ಉಳಿದ ಭಾಗಗಳನ್ನು ಪುನಾರಚಿಸಿ ಈಗಿರುವ ರೂಪದಲ್ಲಿ ನೀಡುತ್ತಿದ್ದೇನೆ. ಇದರಲ್ಲಿಯ ವ್ಯಾಕರಣ ಭಾಗವನ್ನು ಇನ್ನಷ್ಟು ವಿವರವಾದ ವಿವೇಚನೆಗೆ ಒಳಪಡಿಸಬೇಕೆಂಬ ಬಯಕೆ ಇತ್ತಾದರೂ ಆ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನಿಸಿದೆನಾದರೂ, ಅದು ಒಂದು ಸುಸಂಗತವಾದ ರೂಪಕ್ಕೆ ಬರದೆ ವಿಷಯವು ಚೆದುರಿದ ಅನುಭವವಾಗಿ ಆ ಪ್ರಯತ್ನವನ್ನು ಕೈಬಿಟ್ಟೆ.

ಈ ಕೃತಿಯಲ್ಲಿಯ ಬರೆಹಕ್ಕೆ ನೇರವಾಗಿ ಸಂಬಂಧಿಸಿದ ಕೊನೆಯ ಭಾಗವು ವ್ಯಾಕರಣಕ್ಕೆ ಸಂಬಂಧಿಸದ್ದರಿಂದ ಅನುಬಂಧದ ರೂಪದಲ್ಲಿ ಸೇರಿಸಿದೆ. ಈ ಭಾಗದಲ್ಲಿಯೂ ಲಿಪಿಗಳ ಸಾಮಾನ್ಯ ಪರಿಚಯ ಹಾಗೂ ಕನ್ನಡದ ಸಂದರ್ಭದಲ್ಲಿ ಆ ಕುರಿತ ವಿವೇಚನೆಗಳನ್ನು ಪರಸ್ಪರ ಪೂರಕವಾದ ಎರಡು ಪ್ರತ್ಯೇಕ ಭಾಗಗಳೆಂಬಂತೆ ಓದುವುದು ಉತ್ತಮ. ಈಗಲೂ ಇದು ವಿದ್ಯಾರ್ಥಿ-ಅಧ್ಯಾಪಕ ವರ್ಗವನ್ನೇ ಪ್ರಧಾನವಾಗಿ ಗಮನದಲ್ಲಿರಿಸಿಕೊಂಡುದು ಎಂಬುದನ್ನು ಪುನರುಚ್ಚರಿಸುತ್ತಿದ್ದೇನೆ.

- ಕೃಷ್ಣ ಪರಮೇಶ್ವರ ಭಟ್

****

ಆಯ್ದ ಬರಹಗಳು

ಅಧ್ಯಾಯ-1
ಭಾಷೆ ಎಂದರೇನು?

ಭಾಷೆಯನ್ನು ಮನುಷ್ಯ ಜಾತಿಯ ವಿಶಿಷ್ಟ ಲಕ್ಷಣವನ್ನಾಗಿ ಗುರುತಿಸಲಾಗುತ್ತದೆ. ಮನುಷ್ಯನೆಂದರೆ 'ಮಾತನಾಡುವ ಪ್ರಾಣಿ' ಎಂದು ಹೇಳುವ ಮೂಲಕ ಈ ಪ್ರತ್ಯೇಕತೆಯನ್ನು ಹೇಳುವುದು ರೂಢಿಯಾಗಿದೆ. ಮನುಷ್ಯರಂತೆ ಇತರ ಜೀವಿಗಳೂ ಒಂದಿಲ್ಲೊಂದು ಬಗೆಯ ಸಂವಹನ ವ್ಯವಸ್ಥೆಯನ್ನು ಹೊಂದಿದ್ದರೂ ಭಾಷೆ ಅವೆಲ್ಲವುಗಳಿಗಿಂತ ಭಿನ್ನವಾದ ಸ್ವರೂಪದ್ದಾಗಿದ್ದು ಅದ್ಭುತವಾದ ಸಾಮರ್ಥ್ಯವುಳ್ಳದ್ದಾಗಿದೆ.

ಭಾಷೆಯೊಂದು ಬಳಕೆಯಲ್ಲಿದೆ ಎಂದರೆ ಅದನ್ನು ಮಾತನ್ನಾಡುವವರು ಕೆಲವರಾದರೂ ಸಮಾಜದಲ್ಲಿದ್ದಾರೆ ಎಂದೇ ಅರ್ಥ. ವಾಸ್ತವದಲ್ಲಿ ಈ ಸಂಖ್ಯೆ ಸುಮಾರು ನೂರರಿಂದ ಕೆಲವು ಕೋಟಿಗಳವರೆಗೂ ಇದೆ. ಇರುಳ, ಕೊಡಗು, ಕನ್ನಡ, ಇಂಗ್ಲಿಷ್ ಮೊದಲಾದ ಬೇರೆ ಬೇರೆ ವ್ಯಾಪ್ತಿಯ ಭಾಷೆಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಭಾಷೆಗೆ ಮಾತನಾಡುವ ರೂಪದ ಜೊತೆಗೆ ಲಿಪಿರೂಪವೂ ಇರಬಹುದು. ವಿದ್ಯಾವಂತರಲ್ಲಿ ಭಾಷೆಯ ಬಳಕೆಯ ಗಮನಾರ್ಹ ಭಾಗ ಲಿಪಿ ರೂಪದಲ್ಲಿಯೇ ಇರುತ್ತದೆ. ಆದರೆ ಲಿಪಿ ರೂಪದ ಬಳಕೆ ಭಾಷೆಯ ಸಹಜವಾದ ಹಾಗೂ ಪ್ರಧಾನವಾದ ರೂಪವಲ್ಲವೆಂದು ಭಾಷಾ ವಿದ್ವಾಂಸರು ಸಾಮಾನ್ಯವಾಗಿ ಭಾವಿಸುತ್ತಾರೆ. ಲಿಪಿ ರೂಪದಲ್ಲಿರುವ ಭಾಷೆಗಳೆಲ್ಲ ಆಡುಮಾತಿನ ರೂಪದಲ್ಲಿಯೂ ಇರುತ್ತವೆ. (ಸಂಸ್ಕೃತ, ಲ್ಯಾಟಿನ್‌ಗಳನ್ನು ಮಾತ್ರ ಇದಕ್ಕೆ ಅಪವಾದವಾಗಿ ಹೆಸರಿಸಲಾಗುತ್ತದೆ. ಆದರೆ ಈಚೆಗೆ ಸಂಸ್ಕೃತವೂ ಕೆಲವರಿಗಾದರೂ ಬಾಲ್ಯದಿಂದಲೇ ಕಲಿಯುವ, ದೈನಂದಿನ ವ್ಯವಹಾರದಲ್ಲಿ ಬಳಸುವ ಭಾಷೆಯಾಗಿದೆ). ಆದರೆ ಇದಕ್ಕೆ ವಿರುದ್ಧವಾಗಿ ಆಡು ಮಾತಿನ ರೂಪದಲ್ಲಿರುವ ಭಾಷೆಗಳಿಗೆಲ್ಲ ಲಿಪಿಯ ಸೌಲಭ್ಯ ಇರುತ್ತದೆ ಎಂದು ಹೇಳುವಂತಿಲ್ಲ. ಮೇಲೆ ಹೆಸರಿಸಿದ ಕೊಡಗು, ಇರುಳ ಭಾಷೆಗಳು ತಮ್ಮದೇ ಆದ ಲಿಪಿಯಿಲ್ಲದ ಭಾಷೆಗಳು. ಜಗತ್ತಿನಲ್ಲಿ ಹೀಗೆ ಕೇವಲ ಆಡುಭಾಷೆಗಳಾಗಿ ಇರುವ (ಲಿಪಿಯಿಲ್ಲದ) ಭಾಷೆಗಳ ಸಂಖ್ಯೆ ಕೆಲವು ಸಾವಿರವಿರಬಹುದು. ಇದಕ್ಕೆ ಹೋಲಿಸಿದಲ್ಲಿ ಲಿಪಿಯುಕ್ತವಾದ ಭಾಷೆಗಳ ಸಂಖ್ಯೆ ಬಹಳ ಕಡಿಮೆ.

(ದೈನಂದಿನ ವ್ಯವಹಾರಗಳಿಗಾಗಿ ಆಡುಮಾತಿನ ರೂಪದಲ್ಲಿ ಬಳಕೆಯಾಗುವ ಮನೆಯ ಅಥವಾ ಹೊರಗಿನ ಪರಿಸರದಿಂದ ಸಹಜವಾಗಿ, ವಿಶೇಷ ಪ್ರಯತ್ನವಿಲ್ಲದೆ ಕಲಿಯುವ ಭಾಷೆಗಳಿಗೆ ಜೀವಂತ ಭಾಷೆಗಳೆಂದೂ ಹಾಗಿಲ್ಲದ ಭಾಷೆಗಳನ್ನು ಮೃತಭಾಷೆಗಳೆಂದೂ ಕರೆಯುವುದು ರೂಢಿಯಾಗಿದೆ ಹಾಗೂ ಸಂಸ್ಕೃತ, ಲ್ಯಾಟಿನ್‌ಗಳನ್ನು ಮೃತಭಾಷೆಗೆ ಉದಾಹರಣೆಯಾಗಿ ನೀಡಲಾಗುತ್ತದೆ. ಆದರೆ ಇದು ಭಾಷೇತರ ಕಾರಣದಿಂದ ಮಾಡಲಾದ, ಭಾಷಾವಿಜ್ಞಾನದ ದೃಷ್ಟಿಯಿಂದ ಸಮರ್ಥಿಸಲಾಗದ, ಅನುಚಿತವಾದ ವಿಭಜನೆ). ಆಡುಭಾಷೆಯಲ್ಲಿ ಕಾಣಿಸಿಕೊಳ್ಳುವ ಅನೇಕ ವೈಚಿತ್ರ್ಯಗಳು ಲಿಪಿರೂಪದಲ್ಲಿ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲವೆಂಬ ಅಭಿಪ್ರಾಯವೂ ಇದೆ. ಆಡುಮಾತಿನ ರೂಪಕ್ಕೆ ಹೆಚ್ಚಿನ ಮಹತ್ವ ನೀಡಲು ಇದೂ ಒಂದು ಕಾರಣ, ಭಾಷೆಯ ಬಳಕೆಗೆ ಆಡುಮಾತು, ಲಿಪಿರೂಪ ಇವೆರಡೂ ಅಲ್ಲದೆ ಬೇರೊಂದು ರೂಪವೂ ಇದೆ. ಭಾಷೆಯನ್ನು ಕಲಿತ ಮೇಲೆ ಅದನ್ನು ಆಲೋಚನೆಗಾಗಿಯೂ ಬಳಸಿಕೊಳ್ಳುತ್ತೇವೆ. ಇಲ್ಲಿ ಭಾಷೆಯನ್ನು ಬಳಸುವಾತನೇ ಅದನ್ನು ಕೇಳಿಸಿಕೊಳ್ಳುವವನೂ ಆಗಿರುತ್ತಾನೆ. ಮಾತನಾಡುವಾಗಿನ ಧ್ವನಿರೂಪವಾಗಲೀ, ಬರಹದಲ್ಲಿಯ ಲಿಪಿರೂಪವಾಗಲೀ ಇಲ್ಲಿ ಬಳಕೆಯಾಗದು. ಆದರೆ ಲಿಪಿರೂಪದಂತೆಯೇ ಇದೂ ಗೌಣವಾದ ರೂಪವೇ. ಕಾರಣ ಈ ಎರಡೂ ರೂಪಗಳು ಸಾಧ್ಯವಾಗಬೇಕಾದರೆ ಅದಕ್ಕೆ ಮೊದಲು ಆಡುಮಾತಿನ ರೂಪದಲ್ಲಿ ಭಾಷೆ ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿರಬೇಕು. ಆಡುಭಾಷೆ ಎಂದರೆ ಧ್ವನಿ ರೂಪದಲ್ಲಿ ಬಳಕೆಯಾಗುವ ಭಾಷೆ. ಆದ್ದರಿಂದ ಭಾಷೆ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸುವಾಗ ಆಧುನಿಕ ವರ್ಣನಾತ್ಮಕ ಭಾಷಾವಿಜ್ಞಾನಿಗಳು ಆಡುಭಾಷೆಯ ಧ್ವನಿರೂಪವನ್ನು ಲಕ್ಷದಲ್ಲಿರಿಸಿಕೊಂಡು ನಿರ್ವಚನವನ್ನು ನೀಡುವುದು ರೂಢಿಯಾಯಿತು.

****

ಕನ್ನಡ ಭಾಷೆ : ರಚನೆ ಮತ್ತು ಬಳಕೆ ಕೃತಿ ಪರಿಚಯ..
ಕೃಷ್ಣ ಪರಮೇಶ್ವರ ಭಟ್ (ಕೆ.ಪಿ. ಭಟ್) ಲೇಖಕ ಪರಿಚಯ..

 

MORE FEATURES

ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎನ್...

12-08-2022 ಬೆಂಗಳೂರು

ಸುಬ್ಣಣ್ಣನವರ ಮೊದಲ ಧ್ವನಿ ಸುರಳಿ `ನಿತ್ಯೋತ್ಸವ' 1978ರಲ್ಲಿ ಹೊರ ಬಂದಿತು.ಬಾನುಲಿಯಲ್ಲಿ ಈ ವೇಳೆಗಾಗಲೇ ಮಲೆನಾಡಿನ ...

ಶಿವಮೊಗ್ಗ ಸುಬ್ಬಣ್ಣ "ರಜತಕಮಲ" ಪುರ...

12-08-2022 ಬೆಂಗಳೂರು

ವೃತ್ತಿಯಲ್ಲಿ ವಕೀಲರು, ನೋಟರಿಯೂ ಆಗಿ, ನಾಡಿನ ಖ್ಯಾತ ಗಾಯಕರಾಗಿ ಮನೆ ಮಾತಾಗಿದ್ದ ಶಿವಮೊಗ್ಗ ಸುಬ್ಬಣ್ಣ ರಾಷ್ಟ್ರೀಯ ಪ್ರಶ...

ಘನವಾದ್ದನ್ನು ಉಳಿಸಿಕೊಂಡು ಓದದೇ ಹೋ...

12-08-2022 ಬೆಂಗಳೂರು

"Life is too short to read Ulysses" ಎಂಬ ತಮಾಷೆ ಮಾತೇ ಇದೆ ಈ ಕೃತಿ ಬಗ್ಗೆ. ಆದರೆ ಬಹುಶಃ ನಾವೇ ನಮ್ಮ ...