ಕನ್ನಾಡ ಪ್ರೇಮದ ಜೋತಿ ಅಂಪವ್ವ ಪೂಜಾರಿ

Date: 09-10-2020

Location: ಬೆಂಗಳೂರು


ಹೈದರಾಬಾದ್‌ ಕರ್ನಾಟಕ ಹೆಸರಾಂತ ಜಾನಪದ ಗಾಯಕಿ ಅಂಪವ್ವ ಪೂಜಾರಿ ಅವರ ಕುರಿತು ಸಂಶೋಧಕಿ-ಲೇಖಕಿ ರೇಣುಕಾ ಕೋಡಗುಂಟಿ ಅವರು ಹೈದರಾಬಾದ್‌ ಕರ್ನಾಟಕದ ವಿಭಿನ್ನ ಆಚರಣೆ-ನಂಬಿಕೆ ಕುರಿತು 'ವರ್‍ತಿ ನೀರು ಕರಿಕಿ ಬೇರು’ ಅಂಕಣದಲ್ಲಿ ಬರೆಯುತ್ತಾರೆ.

ಜನಪದ ಸಾಹಿತ್ಯ ಒಂದು ಪ್ರದೇಶದ ಸಂಸ್ಕೃತಿಯ ಹಲವಾರು ಆಯಾಮಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯಕವಾಗಿರುತ್ತದೆ. ಹೈದರಾಬಾದ್‌ ಕರ್ನಾಟಕ ಪ್ರದೇಶದ ಬಹುದೊಡ್ಡ ಜನಪದ ಗಾಯಕರಾದ ಅಂಪವ್ವ ಪೂಜಾರಿ ಕಸಬಾ ಲಿಂಗಸೂಗೂರು ಅವರು, ಮುದ್ರಣದಲ್ಲಿ ಸುಮಾರು 500 ಪುಟಗಳಷ್ಟು ವ್ಯಾಪ್ತಿಯ ಹಾಡುಗಳನ್ನು ಒಬ್ಬರೇ ಹಾಡಿದ್ದಾರೆ. ಇವು ಎರಡು ಸಂಪುಟಗಳಾಗಿ ಪ್ರಕಟವಾಗಿವೆ. ನಮ್ಮ ಕನ್ನಾಡ ಪ್ರೇಮದ ಜೋತಿ (2011) 132 ಹಾಡುಗಳನ್ನು ಒಳಗೊಂಡಿದೆ. ಇಜಬೂಪನ ಪದ (2019 – ಖಂಡ ಕಾವ್ಯ) ಪ್ರಕಟವಾದ ಪುಸ್ತಕಗಳು. ಇವು ಕನ್ನಡ ಜನಪದ ಸಾಹಿತ್ಯದ ಬಹು ಮಹತ್ವದ ಕಾವ್ಯಗಳ ಸಾಲಿಗೆ ಸೇರುತ್ತವೆ. ಹೈದರಾಬಾದ್ ಕರ್ನಾಟಕ ಪರಿಸರದ ಭಾಷೆ, ಸಮಾಜ, ಧಾರ್ಮಿಕತೆ ಒಳಗೊಂಡು ಇಡೀ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಇವು ಸಹಾಯಕವಾಗುತ್ತವೆ. ಈ ಬರವಣಿಗೆಯಲ್ಲಿ ಅಂಪವ್ವ ಪೂಜಾರಿ ಅವರ ಹಾಡುಗಳನ್ನು ಪರಿಚಯಿಸುವ ಮತ್ತು ಈ ಹಾಡುಗಳು ಈ ಭಾಗದ ಸಮಾಜ-ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೇಗೆ ಸಹಾಯಕವಾಗುತ್ತವೆ ಎಂಬುದನ್ನು ನೋಡಲಾಗಿದೆ.

ಮೂಲಭೂತವಾಗಿ ಅಂಪವ್ವನ ಹಾಡುಗಳು ಸುಂದರ ಕಾವ್ಯಗಳಂತಿವೆ. ಮುಖ್ಯವಾಗಿ ಇಜಬೂಪನ ಪದ ಸುಂದರವಾದ ಉಪಮೆ, ರೂಪಕಗಳೊಂದಿಗೆ ಕೂಡಿದ ಸಂವೇದನಾಶೀಲ ಭಾಷೆಯನ್ನೊಳಗೊಂಡು ಅದ್ಭುತವಾಗಿದೆ. ಇದೊಂದು ಖಂಡಕಾವ್ಯ. ಕಾವ್ಯ ಕಟ್ಟುವ, ಕಾವ್ಯವನ್ನು ತಲೆಮಾರುಗಳಿಂದ ತಲೆಮಾರುಗಳಿಗೆ ದಾಟಿಸುವ ಪ್ರಕ್ರಿಯೆಯನ್ನು ಹೇಳುವಂತಾ ಸಾಲುಗಳನ್ನು ಈ ಕಾವ್ಯ ಆರಂಭದಲ್ಲಿ ಒಳಗೊಂಡಿದೆ. ಇದು ಕನ್ನಡ ಜನಪದ ಕಾವ್ಯಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುವ ವಿಚಾರ.

ಯಾವ ದೇವಿ ನಾಡ
ಬಿಂದಿಗಿ ತುಂಬಿಸ್ಯಾಳ
ಈಗ್ಯಾವ ಜಾಣಿ ತಗಸ್ಯಾಳೆ
ಈಗಿನ್ನ ರೇಣಮ್ಮ ಜಾಣಿ ತಗಸ್ಯಾಳ
ಹಾಡನ್ನು ಕೇಳಲು ಕುಳಿತವರನ್ನು ಹಾಡಿನಲ್ಲಿ ಈ ರೀತಿ ನೆನೆಯುವರು.
ಈಗ್ಯಾವ ಜಾಣಿ ಕಲಸ್ಯಾಳ ಉಮಲೂಟಿ
ಬಡಿಗೇರ ಬಸ್ಸಮ್ಮ ಕಲಸ್ಯಾಳ ಶರಣೆ
ಬಡಿಗೇರ ಬಸ್ಸಮ್ಮ ಕಲಸಿದ ಈ ಪದ
ಬಾಲನ ಸಂತಾನ ಜಯವಾಗಲಿ ಶರಣೆ
ಹಾಡನ್ನು ಕಲಿಸಿದವರನ್ನು ಸ್ಮರಿಸಿ, ಅವರಿಗೆ ಒಳಿತಾಗಲೆಂದು ಹರಸುವರು.
ಅತ್ತ ಮಾರಾ ಉದ್ದ
ಕಾಗದ ತಗಂಡ
ಎತ್ತಿದೆನವ್ವ ಮದಲಿಂದ
ಸರಸತಿ ಬಾರದ ನುಡಿಯ ಬರಾಕೊಡೆ

ಆರು ಮಾರ ಉದ್ದ
ಕಾಗದ ತಗಂಡ
ಓದಿದೆನವ್ವ ಮದಲಿಂದ
ಸರಸತಿ ತೆಪ್ಪಿದ ನುಡಿಯ ಬರಾಕೊಡೆ

ಇವು ಹಾಡಿನ ಆರಂಭದಲ್ಲಿ ಬರುವ ಸಾಲುಗಳು, ಜನಪದ ಹಾಡುಗಳಲ್ಲಿ ಈ ರೀತಿಯ ಕಾಗದ, ಓದು ಎನ್ನುವ ಪದಗಳನ್ನು ಗಮನಿಸಿದರೆ, ಆ ಸಮಯದಲ್ಲಿ ಅಂದಿನ ಸಮಾಜದಲ್ಲಿ ಇವುಗಳ ಪರಿಚಯ ಜನರಿಗೆ ಇತ್ತು ಎಂಬುದು ಗಮನಕ್ಕೆ ಬರುತ್ತದೆ. ಮತ್ತು ಸರಸ್ವತಿಯನ್ನು ನೆನೆಯುವುದನ್ನು ಕೂಡ ಇಲ್ಲಿ ಗಮನಿಸಬಹುದಾಗಿದೆ.

ಕೋಮಲವಾದ ಭಾವನೆಗಳು, ಕುಟುಂಬ-ಸಮಾಜ ರಚನೆ ಇವೆಲ್ಲವನ್ನು ಒಳಗೊಂಡ ಒಂದು ಸಂಕೀರ್ಣ ಪ್ರೇಮ ಕಥಾನಕವಾಗಿರುವುದು ಈ ಇಜಬೂಪನ ಪದ. ಇದು ಸ್ತ್ರೀ-ಕೇಂದ್ರಿತ ಕುಟುಂಬ ವ್ಯವಸ್ಥೆ ಪುರುಷ ಕೇಂದ್ರಿತವಾಗಿ ಪಲ್ಲಟಗೊಳ್ಳುವ ಸಾಮಾಜಿಕ ಸ್ಥಿತ್ಯಂತರಗಳನ್ನೂ ಇದು ಒಳಗೊಂಡಿರುವಂತಿದೆ. ಈ ಪದದಲ್ಲಿ ಸುಂದರವಾದ ಕಾವ್ಯಮಯ ಭಾಷೆ ಬಳಕೆಯಾಗಿದೆ. ಇದು ನಾಲ್ಕು (ಸಂದು)ಧಾಟಿಯನ್ನು ಅಂದರೆ ನಾಲ್ಕು ಶೈಲಿಯಲ್ಲಿ ಈ ಹಾಡು ಇದೆ. ಒಂದೆರಡು ಸಾಲುಗಳನ್ನು ಇಲ್ಲಿ ನೋಡಬಹುದು.

ಬಡಿಗೇರ ಓಣ್ಯಾಗ ಕುಡಿ ಇರಿದ ಮಲ್ಲಿಗಿ
ಇಡದಾ ಕೊಯ್ಯೊಳ ನಡಾಸಣ್ಣೆ

ಅಗಲೆಲ್ಲ ಚತ್ತರಿಕಿ
ಮುಗಿಲು ಮುಟ್ಟುವ ಕಳಸ
ಜಗದೇವನೆಂಬ ಮರಿಯಾ ತೇಜಿ
ರಾಮಾ ನೀ ಚನ್ನ ರಾಮಾನೆ

ನಾನನ್ನ ಓಗುವಾಗ
ಬಾಳಿಯ ಎಸಳಾವಿತ್ತು
ಬಾಳಿ ವನ ಚಿಗತ ಬಾಳಿ ವನವಾತ
ಎನ್ನ ಗೆಳೆದವರ
ಪುರುಶರಿಲ್ಲದ ಪಲಗೋಳ
ಕೋಲೆನ್ನ ಕೋಲ

ಇಂತಾ ಕಾವ್ಯಗುಣವನ್ನು ಇನ್ನೂ ಹಲವಾರು ಈ ಹಾಡಿನಲ್ಲಿ ಕಾಣಬಹುದು. ಜನಪದ ಹಾಡುಗಳ ವಿಶಿಷ್ಟತೆ ಇರುವುದು ಅವುಗಳ ಭಾಷೆಯಲ್ಲಿ. ಅಂಪವ್ವನವರ ಹಾಡುಗಳಲ್ಲಿ ಲಿಂಗಸೂಗೂರು ಪರಿಸರದ ಭಾಷೆ ತುಂಬಾ ನೈಜವಾಗಿ ಬಳಕೆಯಾಗಿದೆ. ಈ ಪರಿಸರದ ಭಾಷೆಯ ಪದಗಳು, ಶೈಲಿ, ಸೊಗಡು, ನುಡಿಗಟ್ಟು ಮೊದಲಾದವನ್ನು ಇದರಲ್ಲಿ ಕಾಣಬಹುದು.
ಕೆಲವು ಸಾಲುಗಳು:

ಬೇಲಿ ಮ್ಯಾಲಿರುವ ಬೇಲಿಕರಿಕಿ
ಜಗಳಕ ನಿಂತಾವ ಮೂಳರಿಕಿ (ಗಂಗಿ ಗೌರಿ ಜಗಳದ ಪದ)

ಸಣ್ಣ ಬಯಲಾಗ ಎಣ್ಣಿ ಆಲಯಾಡಿ
ಮುತ್ತಿನ ಲಾಡಿ ನೋಡ ಕೊರಳಲ್ಲವರಿಗೆ
ಮುತ್ತಿನ ಲಾಡಿ ನೋಡ ಕೊರಳಲ್ಲವರಿಗೆ(ಅಲಯ್ ದೇವರ ಪದ)

ಒಂದ ಸಿಂಗಾಣಿ ಕಲ್ಲ ವಂದ್ಯಾವ ತಾಯವ್ವನ ಗುಡಿಗೆ
ವಂದಿಸ್ದೆರೆಂತ ಶರಣರವ್ವ
ಊ ಬಂದಾವ ಬಾರೆ(ಗದ್ಯಮ್ಮನ ಪದ)

ಕನ್ನಡ-ಉರ್ದು ಭಾಷೆಗಳು ಈ ಪರಿಸರದಲ್ಲಿ ಪರಸ್ಪರ ಕೂಡಿ ಬದುಕುತ್ತಿವೆ. ಹಾಗಾಗಿ ಈ ಭಾಗದಲ್ಲಿ ಎರಡೂ ಭಾಷೆಗಳನ್ನು ಒಂದೇ ಹಾಡಿನಲ್ಲಿ ಬಳಸುವುದು ಕಾಣಿಸುತ್ತದೆ. ಅಂಪವ್ವನವರೂ ಇಂತದೊಂದು ಅಪರೂಪದ ಹಾಡನ್ನು ಹಾಡಿದ್ದಾರೆ. ಇದರಲ್ಲಿ ಹೇಗೆ ಎರಡು ಭಾಷೆಗಳು ಮಾತ್ರವಲ್ಲದೇ ಎರಡು ಸಂಸ್ಕೃತಿಗಳೂ ಹೀಗೆ ಕೂಡಿ ಬದುಕುತ್ತಿರುವುದನ್ನು ಕಾಣಬಹುದು.
ಅಳದಿ ಲಗತಿ ಜಾತಿಕತೆ
ಅರಶಿಣ ಅಚ್ಚಾಕೊಗ್ತಾರಂತೆ
ಯಾವ ದೇಶದ ಮುಸಲಮಾನ್ರು
ಏನ ಗಮಾತಾಡುವವರು
ಯಾವ ದೇಶದ ಮುಸಲಮಾನ್ರು
ಏನ ಮಜೆ ಆಡುವವರು

ಪಾನಿ ಲಗತಿ ಜಾತಿಕತೆ
ನೀರ ಮಿನ್ಯಾಕೊಗ್ತಾರಂತೆ
.(ಮುಸಲ್ಮಾನರ ಪದ), ಅಂಪವ್ವನವರ ಹಾಡುಗಳಲ್ಲಿ ಈ ಪರಿಸರದಲ್ಲಿ ಕಂಡುಬರುವ ವಿವಿಧ ಧರ್ಮಗಳು, ದೇವರುಗಳು, ಗುಡಿಗಳು, ಧಾರ್ಮಿಕ ಆಚರಣೆ, ಸಂಪ್ರದಾಯಗಳು ಇವೆ. ಮುಖ್ಯವಾಗಿ ವ್ಯಾಸರಾಯರು ಪ್ರತಿಷ್ಠಾಪಿಸಿರುವ ಕುಪ್ಪಿಭೀಮ ದೇವರು ಕಸಬಾ ಲಿಂಗಸೂಗೂರಿನ ಪ್ರಧಾನ ದೇವರು. ಅಂಪವ್ವನವರು ಕುಪ್ಪಿಭೀಮನಿಗೆ ಸಂಬಂಧಿಸಿದ ಹಲವಾರು ಹಾಡುಗಳನ್ನು ಹಾಡಿದ್ದಾರೆ.

ನೂರ ಲಿಂಬೆಣ್ಣು ತೇಲಿಸಿ ಬಿಟ್ಟವರ್ಯಾರು
ಜಾಣ ಲಿಂಗಸೂರ ಕುಪ್ಪೆರಾಯ ಸುಯ್
ಜಾಣ ಲಿಂಗಸೂರ ಕುಪ್ಪೆರಾಯ ಸುಯ್
(ಕುಪ್ಪೆರಾಯನ ಪದ)

ಇದರೊಂದಿಗೆ, ಈ ಭಾಗದ ಇನ್ನೂ ಹಲವು ದೇವರುಗಳ ಬಗೆಗೆ ಹಾಡುಗಳು ಇವೆ. ಹನುಮಂತ, ಮಲ್ಲಯ್ಯ, ಮೋನಪ್ಪಯ್ಯ, ಅಂಬಮ್ಮ, ಬಂದೇನವಾಜ, ಯಮನೂರ ಮೊದಲಾದವು. ಇದನ್ನು ಗಮನಿಸಿದಾಗ ಈ ಭಾಗದ ಧಾರ್ಮಿಕ ವಾತಾವರಣವನ್ನು ತಿಳಿದುಕೊಳ್ಳಬಹುದು. ಇಲ್ಲಿ ಹಲವಾರು ಧರ್ಮಗಳು ಇವೆ ಮತ್ತು ಅವೆಲ್ಲ ಪರಸ್ಪರ ಕೂಡಿ ಬದುಕುತ್ತಿರುವುದನ್ನು ಕಾಣಬಹುದು. ಇದು ಈ ಭಾಗದ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿದಂತಿದೆ.

ಎಂಟ ಎಂಟ ದಿನಕ ಬರುವುದು ಬ್ರೇಸ್ತಾರ
ಸಕ್ಕರಿ ನಿನಗ ಕಳುವೇನ ಪೀರ
ದೀನ ದೀನಂಬರೆ
(ಯಮನೂರಪ್ಪನ ಪದ)

ಅಂಪವ್ವನವರ ಹಾಡುಗಳಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಹಲವು ಹಾಡುಗಳಿರುವುದು ಮಹತ್ವದ ವಿಚಾರ. ಸ್ಥಳೀಯ ಇತಿಹಾಸ ಬರೆಯುವವರಿಗೆ ಇವು ಹೆಚ್ಚು ಅನುಕೂಲವಾಗುವಂತವು. ಇದರಲ್ಲಿ ಮುಖ್ಯವಾಗಿ ಸ್ಥಳೀಯ ಸಾಮಂತನಾದ ಭಿಲ್ಲಮರಾಯ, ಈ ಪರಿಸರದ ಪ್ರಮುಖ ಮನೆತನದ ಕಥೆ ಮೊದಲಾದವು ಹಾಡುಗಳಾಗಿ ಬಂದಿವೆ.

ಪಿತಾಂಬರಿ ಸೀರಿ ಉಟ್ಟಾಳ
ಜರತಾರ ಕುಪ್ಪಸ ತೊಟ್ಟಾಳ
ಮೂರುಸಾವಿರದಿಮುತ್ತ ಮೂಗಿನ್ಯಾಗ ಇಟ್ಟಾಳ
ಕರ್ನಾಟಕ ದೇವಿ ಆದಳಲ್ಲ
’ (ಬಿಲ್ಲಮ ಅರಸನ ಪದ)

ಇದು ‘ಬಿಲ್ಲಮ ಅರಸ’ ಎಂಬ ಹಾಡಲ್ಲಿ ಬರುವ ಸಾಲುಗಳಾಗಿವೆ. ಬಿಲ್ಲಮ ಅರಸ ಗುಡ್ಡಗಾಡಿನ ಡೊಂಬರ ಹುಡುಗಿಯನ್ನ ಪ್ರೀತಿಸಿ ಕಾಡಿ ಬೇಡಿ ಮದುವೆಗೆ ಒಪ್ಪಿಸುತ್ತಾನೆ. ಹಾಗಾಗಿ ಬಿಲ್ಲಮ ಅರಸನನ್ನು ಮದುವೆಯಾದ ಆ ಗುಡ್ಡಗಾಡಿನ ಹುಡುಗಿ ಕೊನೆಗೆ ಕರ್ನಾಟಕ ದೇವಿಯಾಗಿಬಿಟ್ಟಳು ಎಂದು ಹೇಳಲಾಗಿದೆ. ಹಾಗೆ ಈ ಭಾಗದಲ್ಲಿ ನಡೆದ ಐತಿಹಾಸಿಕ ಘಟನೆಯೊಂದು ಈ ಭಾಗದ ಜನಪದ ಹಾಡಿನಲ್ಲಿ ಉಳಿದಿದೆ. ಉದ್ಭಾಳ ಗ್ರಾಮದ, ಉದ್ಭಾಳ ದಣೇರ ಮನೆತನದಲ್ಲಿ ನಡೆದ ಒಂದು ಘಟನೆ ಇದಾಗಿದೆ.

ಮಣ್ಣಾಗ ಉಟ್ಟುವುದು ಸಣ್ಣ ಗೂಳಿಪಲ್ಯ
ಅನ್ಯಾಯದೂರ ಉದ್ಬಾಳ
ಅನ್ಯಾಯದೂರ ಉದ್ಬಾಳ
ತಂದಿ ಮಗನ ಕಡದಾರೊ

ಹೀಗೆ ಇನ್ನು ಹಲವು ಇತಿಹಾಸದ ಅಂಶಗಳುಳ್ಳ ಪದಗಳು ಇಲ್ಲಿ ಇವೆ. ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಗಾಂಧೀಜಿ, ಹೇಮರೆಡ್ಡಿ ಮಲ್ಲಮ್ಮ, ಕಡ್ಲಿಮಟ್ಟಿ ಕಾಶಿಬಾಯಿ ಇವರೆಲ್ಲರ ಕುರಿತ ಪದಗಳಿವೆ. ಗಾಂಧಿಜಿಯ ಮೇಲೆ ಹಾಡೊಂದು ಇರುವುದು ತುಂಬ ಮಹತ್ವದ ವಿಚಾರ. ಗಾಂಧಿಜಿ ಹೀಗೆ ಸಾಮಾನ್ಯರನ್ನೂ ತಲುಪಿರುವುದು ತುಂಬಾ ಮಹತ್ವದ ವಿಚಾರ. ಇದು ಅಂಪವ್ವನವರು ಹಾಗೆಯೆ ಜನಪದ ಹೇಗೆ ತನ್ನಷ್ಟಕ್ಕೆ ಸಮಕಾಲೀನವಾಗುವುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕ.

ಸಾವಿರ ಇನಾಮ ಸಾವಿರ ಮೋಟಾರ
ನಾಡದ ಮ್ಯಾಲ ಜನರ ಬರುವರ
ಗಾಂದಿ ಮಾರಾಜ ನಿರಾರ

ನಾಡದ ಈ ಮ್ಯಾಲೆ ಬರುತಾರ ಗಾಂದಿಯ ಮುತ್ಯಾ
ಊವಿನಾರವ ತರತಾರ
ಗಾಂದಿ ಮಾರಾಜ ನಿರಾರ

ಸತ್ತಾನ ಗಾಂದಿಯ ಮುತ್ಯ
ವತ್ತಾರ ಬಳಿಯರ ಬುಕ್ಕಿಟ್ಟಿನ ಚೀಟ ಎಡಬಲ
ಗಾಂದಿ ಮಾರಾಜ ನಿರಾರ
(ಗಾಂದಿಜಿ ಪದ)

ಈ ಪರಿಸರದ ಸಾಮಾಜಿಕ ಅಧ್ಯಯನಕ್ಕೆ ಅಂಪವ್ವನವರ ಹಾಡುಗಳು ಅತ್ಯಂತ ಮುಖ್ಯವಾದ ಆಕರಗಳಾಗುತ್ತವೆ. ಈ ಹಾಡುಗಳಲ್ಲಿ ಕುಟುಂಬ, ಕುಟುಂಬದಲ್ಲಿನ ಸಂಬಂಧಗಳು, ಮದುವೆ, ಗಂಡ-ಹೆಂಡತಿ, ಅಣ್ಣತಮ್ಮಂದಿರು, ಮನೆ ಸಮಸ್ಯೆಗಳು, ಮೊದಲಾದ ವಿಷಯಗಳ ಹಾಡುಗಳು ಇವೆ.

ಬುಟ ಬುದವಾರ ದಿನ ಬುದ್ದಿವಂತಿ ಮೈನೆರತು
ಬರತಾರಿಲ್ಲ ಕೇಳ ದಿರದಂಡಿ ಏಳ
ದಂಡಿಗಚ್ಚ್ಯಾರ ರತ್ನದರಳ ಸೋಬಾನವೆ(ಉವ್ವ ಮುಡಸ ಪದ)

ಒಂದ ತಿಂಗಳಿಗೆ ಒಂದೆನ ಬಗಸ್ಯಾಳ
ಒಂದೆಲ್ಯಾಗರದ ಎಳಿ ಉಣಸಿಕಾಯಿ
ಈಗ ಮನಬಂದ ಕಾಯಿಗಳ ಮನ ಬೇಡತಾವ ಜೋಜೋ(ಬಯಕಿ ಪದ)

ಆಶ್ಟ ದಿಕ್ಕಿನ ಪರಿಮಳ ಗಂದ ಪರಿಮಳ ತರವೆ
ರಾಮ ಸೀತ ಬಲಕ ಬಂದರ ನಾವು ನೋಡಿದವೆ

ಅಂದನುಳ್ಳ ಒರಳ ಮ್ಯಾಲೆ ಚಂದನುಳ್ಳ ಒನಕಿ ಪಿಡಿದು
ಎಳ್ಳು ಬೆಲ್ಲ ಒರಳಿಗಾಕಿ ಸುವ್ವೆನಂದೆವೆ (ಒಳಕಲ್ಲ ಪೂಜಿ ಪದ)

ಜಾಡರಣ್ಣ ಜಾಡರತಮ್ಮ
ನನಗ ಒಂದು ಸೀರಿ ನೆಯ್ಯಿರಿ
ಕೋಲ ಮುತ್ತಿನ ಕೋಲ
(ಸೀರಿ ಪದ)

ಅಂಪವ್ವನವರ ಹಾಡುಗಳು ಹಲವಾರು ಕಾರಣಗಳಿಗೆ ಗಮನವನ್ನು ಸೆಳೆಯುತ್ತವೆ. ಕೆಲವು ವಿಶಿಷ್ಟವಾದ ಅಂಶಗಳನ್ನು ಈ ಕೆಳಗಿನ ಸಾಲುಗಳಲ್ಲಿ ಗಮನಿಸಿ,

ಕುಪ್ಪಿ ಸ್ವಾಮಿಯ ಗುಡಿಯ
ಸುತ್ತಾಲ ಪವಳಿ ಕಮಲವೆ
ನಮ್ಮ ಕನ್ನಾಡ ಪ್ರೇಮದ ಜೋತಿ
ಸುತ್ತಾಲ ಪವಳಿ ಕಮಲವೆ
ನಮ್ಮ ಕನ್ನಾಡ ಪ್ರೇಮದ ಜೋತಿ
(ಕುಪ್ಪೆರಾಯನ ಪದ)

ಕನ್ನಡ ಎನ್ನುವುದು ಯಾವುದೆ ಧರ್ಮಕ್ಕೆ ಸೀಮಿತವಾದುದಲ್ಲ. ಊರಿನ ಅಧಿದೇವರಾದ ಕುಪ್ಪೆರಾಯನ ಪದದಲ್ಲಿ ಕನ್ನಡ ಎಂಬ ಪದ ಬರುತ್ತದೆ. ಇದರಂತೆ ಸಿಂಧನೂರಿನ ಅಂಬಾಮಟದ ಅಂಬಮ್ಮನ ಪದದಲ್ಲಿಯೂ ಈ ಪದ ಬರುವುದನ್ನು ಕಾಣಬಹುದು. ಇಂತಾ ಬಳಕೆ ಜನಪದದಲ್ಲಿ ಬಂದಿರುವುದು ಬಹು ವಿಶೇಷ. ಕನ್ನಡತನವನ್ನು ಜನಪದರು ಹೇಗೆ ಬದುಕಿನಲ್ಲಿ ತುಂಬಿಕೊಂಡಿದ್ದರು, ಎಂಬುದನ್ನು ಅರಿಯಬಹುದು.

ಓಗಿ ನೋಡನ ನಡಿಯ
ತಾಯಿ ಅಂಬನ ಗುಡಿಯ
ಸುತ್ತಾಲ ಪವಳಿ ಕಮಲಾವ
ನಮ್ಮ ಕನ್ನಾಡ ಪ್ರೇಮದ ಜೋತಿ
(ಅಂಬಮ್ಮನ ಪದ)

ಇಷ್ಟೊಂದು ಪ್ರಮಾಣದ ಜನಪದಸಂಪತ್ತನ್ನು ತಮ್ಮ ನೆನಪಿನ ಸಾಗರದಲ್ಲಿ ಇಟ್ಟುಕೊಂಡು ಅಷ್ಟೆ ಉತ್ಸಾಹದಿಂದ ಹಾಡುತ್ತಿದ್ದ ಅಂಪವ್ವನರು ನಮ್ಮ ಭಾಗದ ಅಸಾಧಾರಣ ಪ್ರತಿಭೆ. ಕೇವಲ ಜನಪದ ಹಾಡುಗಳನ್ನು ಮಾತ್ರವಲ್ಲದೇ ಜನಪದ ಕಥೆ, ಗಾದೆ, ಒಗಟುಗಳನ್ನೂ ಕೂಡ ಹೇಳುತ್ತಿದ್ದರು. ಇವರ ಜನಪದ ಶ್ರೀಮಂತಿಕೆಯನ್ನು ಎಂತವರೆ ಆದರೂ ಮೆಚ್ಚುವಂತದ್ದಾಗಿದೆ. ಬಡತನ, ಅಂಗವಿಕಲತೆ ಈ ಎಲ್ಲವುಗಳೊಂದಿಗೆ ಬದುಕಿದ ಅಂಪವ್ವ ಒಂದು ದಿವ್ಯ ಚೇತನದಂತೆ ಬದುಕಿ 2008 ರಲ್ಲಿ ನಮ್ಮನ್ನು ಅಗಲಿದರು. ಹಾಡನ್ನು ಹಾಡುವಾಗ ಕೆಲವೊಮ್ಮೆ ಹಾಡುಗಳು ನೆನಪಾಗದಿದ್ದರೆ ‘ಇವತ್ಯಾಕ ನೆನಪಾಗವಲ್ವು, ನೆನಪ ಮಾಡಿಕೆಂಡು ನಾಳಿಗೆ ಆಡ್ತೀನಿ, ನಾವು ಸಣ್ಣೋರಿದ್ದಾಗ ಜಗ್ಗ ಪದ ಆಡ್ತಿದ್ವಿಬೆ ಈಗ ಮರ್ತುಬುಟ್ಟೀನಿ, ಆಡಿಕೆಂತ ಇದ್ರ ಬರ್ತಾವ’ ಎಂದು ಹೇಳುತ್ತಿದ್ದರು. ಆದರೆ ಹಾಡಲು ಎಂದೂ ಬೇಸರಿಸಿಕೊಳ್ಳುತ್ತಿರಲಿಲ್ಲ.ಇಂದು ಅವರು ಇಲ್ಲ . ಆದರೆ ಜನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮಹತ್ವದ್ದಾಗಿದೆ.

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...