ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ‘ಚಾರು ವಸಂತ’ದ ಪಾತ್ರ ಪ್ರಮುಖ: ರಾಜೇಂದ್ರ ಚೆನ್ನಿ

Date: 25-11-2021

Location: ಬೆಂಗಳೂರು


ಆಧುನಿಕ ಸಾಹಿತ್ಯದಲ್ಲಿ ಅಷ್ಟೇನೂ ಜನಪ್ರಿಯವಾಗಿರದ ಮಹಾಕಾವ್ಯ ಪ್ರಕಾರದಲ್ಲಿ ಒಂದು ಕೃತಿ ಬರೆದಾಗ ಭಾರತೀಯ ಹದಿನೈದು ಭಾಷೆಗಳಲ್ಲಿ ಆ ಕೃತಿಯನ್ನು ಆತ್ಮೀಯವಾಗಿ ಸ್ವೀಕರಿಸಿರುವುದು ನಮ್ಮ ಸಾಂಸ್ಕೃತಿಕ ಆರೋಗ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂಬುದಾಗಿ ಸಾಹಿತಿ, ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು.

ಸ್ವಪ್ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಂಪನಾ ವಿರಚಿತ ಮಹಾಕಾವ್ಯ ‘ಚಾರು ವಸಂತ’ದ ಇಂಗ್ಲಿಷ್ ಆವೃತ್ತಿ ‘CHARU VASANTHA’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡಮಿ ಸೇರಿದಂತೆ ಹಲವು ಸಂಸ್ಥೆಗಳು ಭಾರತೀಯ ಭಾಷೆಗಳಲ್ಲಿ ಕೃತಿಗಳ ಅನುವಾದವನ್ನು ಮಾಡುವುದು ಸಾಂಸ್ಥಿಕವಾಗಿ ನಡೆಯುವ ಕೆಲಸ. ಆದರೆ ಸಾಂಸ್ಕೃತಿಕವಾಗಿ ಭಾಷೆಗಳ ಹಾಗೂ ಸಂಸ್ಕೃತಿಗಳ ಮಧ್ಯೆ ಅರ್ಥಪೂರ್ಣವಾದ ವಿನಿಮಯ ನಡೆದಾಗ ಅದು ಸಾಹಿತ್ಯದ ಬೆಳವಣಿಗೆಯನ್ನು ಸೂಚಿಸುತ್ತದೆ. ಕನ್ನಡ ಪರಂಪರೆಯ ಸುದೀರ್ಘ ಕಾಲದ ಮೌಲ್ಯಗಳನ್ನು ಹಂಪನಾ ಅವರು ‘ಚಾರು ವಸಂತ’ದ ಕಥಾನಕದ ಮೂಲಕ ಹೇಳಿರುವುದೇ ಎಲ್ಲ ಭಾಷೆಗಳೂ ಈ ಕೃತಿಯನ್ನು ಸ್ವೀಕಾರ ಮಾಡಲು ಕಾರಣ ಎಂದು ಅವರು ಹೇಳಿದರು.

ಅಲ್ಲದೆ ಇಂಗ್ಲಿಷ್ ಅನುವಾದ ಬರಿ ಆಂಗ್ಲ ಭಾಷಿಗರಿಗಾಗಿ ಇರುವುದಲ್ಲ. ಭಾರತೀಯ ಎಲ್ಲ ಭಾಷಿಕರಿಗೂ ಇಂಗ್ಲಿಷ್ ಭಾಷೆಯ ಮೂಲಕವೇ ಈ ಕೃತಿ ತಲುಪಬೇಕಾಗುತ್ತದೆ. .ಇಂತಹ ಶೈಲಿಯ ಕಾವ್ಯವನ್ನು ಅನುವಾದ ಮಾಡುವುದು ಸುಲಭವಲ್ಲ. ಲೇಖಕ ಗಿರಿಧರ್ ಅವರು ಆ ಕೆಲಸ ಮಾಡಿದ್ದಾರೆ. ಆದರೆ ಕನ್ನಡದ ಹಲವು ಮಹಾನ್ ಲೇಖಕರ ಕೃತಿಗಳ ಅನುವಾದಲ್ಲಿಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಕೃತಿಗಳ ಅನುವಾದಕ್ಕೆ ಹಕ್ಕು ನೀಡುವ ಬಗ್ಗೆ ಸರ್ಕಾರವೇ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಮಲ್ಲೇಪುರಂ ಜಿ.ವೆಂಕಟೇಶ್ ಅವರು ಮಾತನಾಡಿ, ಕನ್ನಡದಿಂದ ಪ್ರಾಕೃತಕ್ಕೆ ಅನುವಾದಗೊಂಡ ಮೊದಲ ಗ್ರಂಥ ಇದಾಗಿದ್ದು, ಕನ್ನಡದ ಹೆಮ್ಮೆಯೆನಿಸಿಕೊಂಡಿದೆ. ಇಂತಹ ಮೇರು ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸುವ ಮೂಲಕ ಭಾರತದಲ್ಲಿ ಕನ್ನಡದ ಹಿರಿಮೆಯನ್ನು ತೋರುವ ಅವಕಾಶ ಲಭ್ಯವಾದಂತಾಗಿದೆ ಎಂದು ನುಡಿದರು.

‘ಚಾರು ವಸಂತ’ ಗ್ರಂಥದ ಇಂಗ್ಲಿಷ್ ಅನುವಾದದ ಬಗ್ಗೆ ಮಾತನಾಡಿದ ಸಾಹಿತಿ ಹಂಪ ನಾಗರಾಜಯ್ಯ ಅವರು, ಲೇಖಕನಿಗೆ ತಾನು ಬರೆದ ಕೃತಿ ದೇಶದ ಅನೇಕ ಭಾಷೆಗಳಲ್ಲಿ ಅನುವಾದಗೊಳ್ಳವುದು ಹೆಮ್ಮೆಯ ವಿಚಾರ. ಅದರಲ್ಲೂ ಇಂಗ್ಲಿಷ್ ಅನುವಾದದ ಮೂಲಕ ಕನ್ನಡದ ಕಂಪನ್ನು ಆಂಗ್ಲ ಭಾಷೆಗೆ ಹಂಚಿದ ಐತಿಹಾಸಿಕ ಸಂದರ್ಭ ಇದು. ಕನ್ನಡಿಗರಿಗೆ, ಕರ್ನಾಟಕ ಸರ್ಕಾರಕ್ಕೂ ಹಿರಿಮೆಯ ವಿಚಾರವಿದು ಎಂಬುದಾಗಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಕನ್ನಡದ ಕಂಪನ್ನು ಬೇರೆ ಭಾಷೆಗಳಲ್ಲಿ ಹಂಚುವ, ಪಸರಿಸುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡುವ ಅನುವಾದಕರಿಗೆ ಸರ್ಕಾರ ಪ್ರೋತ್ಸಾಹ ಕೊಡುತ್ತದೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಎಲ್ಲ ವ್ಯವಹಾರ, ಶಿಕ್ಷಣ ನಡೆಯುವಂತೆ ಕನ್ನಡಿಗರಾದ ನಾವು ಹೋರಾಡಬೇಕಿದೆ ಎಂದು ಕರೆ ನೀಡಿದರು. ಅಲ್ಲದೆ, ಪುಸ್ತಕದ ಅನುವಾದದ ಹಕ್ಕುಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆಯನ್ನು ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಅವರ ಅನುಪಸ್ಥಿತಿಯಲ್ಲಿ ಅವರ ಪತ್ರ ಸಂದೇಶವನ್ನು ಕಾರ್ಯಕ್ರಮವನ್ನು ಓದಲಾಯ್ತು. ಸಾಹಿತಿ ಕಮಲಾ ಹಂಪನಾ, ಕವಿ ಹೆಚ್.ಎಸ್.ವಿ, ಲೇಖಕಿ ಆರತಿ ಎಚ್.ಎನ್, ಕೃತಿಯ ಭಾಷಾಂತರಕಾರ ಪ್ರೊ. ಪಿ. ಪಿ. ಗಿರಿಧರ, ಸಂಸದರಾದ ಉಮೇಶ್ ಜಾದವ್ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ ಕಾರ್ಯಕ್ರಮದಲ್ಲಿತ್ತು.

MORE NEWS

ಸೃಜನಶೀಲ ಬರಹಗಾರರಿಗಾಗಿ ಸಂಕ್ರಾಂತಿ...

03-12-2021 ಬೆಂಗಳೂರು

ಕನ್ನಡ ಪ್ರಾದೇಶಿಕ ಪತ್ರಿಕೆಯಾದ ‘ಜನಮಿತ್ರ’, ಸೃಜನಶೀಲ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2022...

ಮೆಹಬೂಬ ಮಠದ ಅವರಿಗೆ ಜನ್ನಾ ಸನದಿ ಸ...

03-12-2021 ಬೆಂಗಳೂರು

ಕೊಪ್ಪಳದ ಯುವ ಕವಿ ಮೆಹಬೂಬ ಮಠದ ಅವರ ಚೊಚ್ಚಲ‌ ಕವನ ಸಂಕಲನ "ಬಿಸಿಲು ಕಾಡುವ ಪರಿ" ಯು ಬೆಳಗಾವಿಯ ಬಿ. ಎ...

ಗಾಂಧಿ ಶಾಂತಿ ಪ್ರತಿಷ್ಠಾನ- ರಾಜ್ಯ ...

03-12-2021 ಬೆಂಗಳೂರು

ಗಾಂಧಿ ಶಾಂತಿ ಪ್ರತಿಷ್ಠಾನವು ಮುಂಬರುವ 2022 ಜನವರಿ 30 ಸರ್ವೋದಯ ದಿನದ ಸಂದರ್ಭದಲ್ಲಿ ರಾಜ್ಯ ಮಟ್ಟದ ಲೇಖನ ಸ್ಪರ್ಧ...